Wednesday, October 7, 2009

ಇಂದಿನ ಇತಿಹಾಸ History Today ಅಕ್ಟೋಬರ್ 05

ಇಂದಿನ ಇತಿಹಾಸ
ಅಕ್ಟೋಬರ್ 05


ಮೀರಾ ಸಾಹಿಬ್ ಫಾತಿಮಾ ಬೀವಿ ಅವರು ಭಾರತದ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾದರು.

2014: ನವದೆಹಲಿ: ಮಾವೋವಾದಿ ಗೆರಿಲ್ಲಾಗಳ ಜೊತೆ ಸಂಪರ್ಕ ಇಟ್ಟುಕೊಂಡ ಆರೋಪದಲ್ಲಿ ಜಾರ್ಖಂಡ್​ನ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯೋಗೇಂದ್ರ ಸಾವೋ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಲ್ಲಿ ತಿಳಿಸಿದರು. 'ಸಿಐಡಿ ತಂಡವು ದೆಹಲಿ ಪೊಲೀಸರ ನೆರವಿನೊಂದಿಗೆ ಸುಭಾಶ್ ನಗರದ ಮನೆಯೊಂದರಿಂದ ಸಾವೋ ಅವರನ್ನು ಹಿಂದಿನ ರಾತ್ರಿ ಬಂಧಿಸಿತು. ಅವರನ್ನು ರಾಂಚಿಗೆ ಕರೆತರಲಾಗುವುದು ಎಂದು ಪೊಲೀಸ್ ವಕ್ತಾರ ಅನುರಾಗ್ ಗುಪ್ತ ದೆಹಲಿಯಲ್ಲಿ ವರದಿಗಾರರಿಗೆ ವಿವರಿಸಿದರು.. ಬಂಡುಕೋರರೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕಾಗಿ ಹಜಾರಿಬಾಗ್ ನ್ಯಾಯಾಲಯ ಕಳೆದ ತಿಂಗಳು ಸಾವೋ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು. 50ರ ಹರೆಯದ ಸಾವೋ ಅವರು ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು

2014: ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಪ್​ಒ) ಸುಮಾರು 4 ಕೋಟಿಗೂ ಹೆಚ್ಚಿನ ಚಂದಾದಾರರಿಗೆ ತಮ್ಮ ಖಾತೆಯ ವಿವರಗಳನ್ನು ಅಂತರ್ಜಾಲದ ಮೂಲಕವೇ ಪಡೆದುಕೊಳ್ಳಲು ಸಾಧ್ಯವಾಗುವಂತಹ 'ಅನ್​ಲೈನ್ ಆನ್ ರಿಯಲ್ ಟೈಮ್ ಆಧಾರದಲ್ಲಿ ಸದಸ್ಯರಿಗೇ ಮೀಸಲಾದ ವೆಬ್ ಪೋರ್ಟಲ್ ಅಕ್ಟೋಬರ್ 16ರಿಂದ ಕಾರ್ಯ ನಿರ್ವಹಿಸಲಿದೆ. ಸಾರ್ವತ್ರಿಕ ಖಾತಾ ಸಂಖ್ಯೆ (ಯುನಿವರ್ಸಲ್ ಅಕೌಂಟ್ ನಂಬರ್- ಯುಎಎನ್) ಸದಸ್ಯರ ಪೋರ್ಟಲ್ ನೌಕರರ ಭವಿಷ್ಯನಿಧಿ ಸಂಘಟನೆಗೆ ತಮ್ಮ ಮಾಲೀಕರು ಪಿಫ್ ಕೊಡುಗೆಗಳನ್ನು ಪಾವತಿ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೆರವಾಗುವುದು. ಯುಎ ಎನ್ ಸದಸ್ಯರ ಪೋರ್ಟಲ್ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಕ್ಟೋಬರ್ 16ರಂದು ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2014: ನವದೆಹಲಿ: ವಯಸ್ಸಿನ ನಕಲಿ ದಾಖಲೆಗಳನ್ನು ನೀಡಿ ಕಡಿಮೆ ವಯಸ್ಸಿನ ಗುಂಪುಗಳ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಆಪಾದನೆ ಹಿನ್ನೆಲೆಯಲ್ಲಿ ಸಿಬಿಐ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಟೇಬಲ್ ಟೆನಿಸ್ ಆಟಗಾರರ ಮೇಲೆ ಕಣ್ಣಿಟ್ಟಿತು. ಹೊಸದಾಗಿ ರಚಿಸಲಾದ ಸಿಬಿಐನ ಕ್ರೀಡಾ ಋಜುತ್ವ ಘಟಕವು ಹಿರಿಯ ಅಧಿಕಾರಿಯೊಬ್ಬರು ತಮ್ಮ ಪುತ್ರಿಗೆ ಅನ್ಯಾಯವಾಗಿದೆ ಎಂದು ನೀಡಿದ ದೂರಿನ ವಿಚಾರವನ್ನು ತನ್ನ ಪರಿಶೀಲನೆಗೆ ಎತ್ತಿಕೊಂಡಿತು.. ಹೆಚ್ಚು ವಯಸ್ಸಿನ ವ್ಯಕ್ತಿಗಳು ಸ್ಪರ್ಧಾಕಣದಲ್ಲಿ ಇದ್ದುದರಿಂದ ತಮ್ಮ ಪುತ್ರಿ ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ಈ ಹಿರಿಯ ಅಧಿಕಾರಿ ದೂರು ನೀಡಿದ್ದರು. ಸಂಸ್ಥೆಯು ಪ್ರಾಥಮಿಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿ, ಪಶ್ಚಿಮ ಬಂಗಾಳದ ಆಟಗಾರರಿಗೆ ನೋಟಿಸ್​ಗಳನ್ನು ಜಾರಿ ಮಾಡಿತು ಎಂದು ಮೂಲಗಳು ಹೇಳಿದವು. ಶಿಷ್ಯವೇತನ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದು ಇಂತಹ ಚಟುವಟಿಕೆಯ ಗುರಿ ಎಂದು ಹೇಳಲಾಯಿತು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಟೇಬಲ್ ಟೆನಿಸ್ ಆಟಗಾರರು ಕಡಿಮೆ ವಯಸ್ಸಿನ ದಾಖಲೆಗಳನ್ನು ತೋರಿಸಿ ಕ್ರೀಡಾ ಕೂಟಗಳಲ್ಲಿ ಕಡಿಮೆ ವಯಸ್ಸಿನ ಗುಂಪುಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆಯ ನೇತೃತ್ವ ವಹಿಸಿರುವ ಸಿಬಿಐ ಅಧಿಕಾರಿಯೊಬ್ಬರು ಹೇಳಿದರು.

2014: ಜಕಾರ್ತಾ (ಇಂಡೋನೇಷ್ಯ): ಇಂಡೋನೇಷ್ಯಾದ ಉತ್ತರ ಸುಮಾತ್ರದಲ್ಲಿನ ಸಿನಾಬಂಗ್ ಪರ್ವತದ ಜ್ವಾಲಾಮುಖಿ ಈದಿನ ಸಕ್ರಿಯಗೊಂಡು ಬಾಯ್ದೆರೆಯಿತು. ಜ್ವಾಲಾಮುಖಿಯಿಂದ ಚಿಮ್ಮಿದ ಬೂದಿ ಆಕಾಶದಲ್ಲಿ ಸುಮಾರು 3,000 ಮೀಟರ್ ಎತ್ತರಕ್ಕೆ ವ್ಯಾಪಿಸಿತು. ನಸುಕಿನಿಂದ ಸಂಜೆಯವರೆಗೆ ಜ್ವಾಲಾಮುಖಿ ನಾಲ್ಕು ಬಾರಿ ಸ್ಪೋಟಗೊಂಡಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುತೊಪೊ ಪೂರ್ಣೇ ಅವರು ದೂರವಾಣಿ ಮೂಲಕ ಕ್ಷಿನ್​ಹುವಾಕ್ಕೆ ತಿಳಿಸಿದರು. ಜ್ವಾಲಾಮುಖಿಯಿಂದ ಎದ್ದ ಹೊಗೆ ಮತ್ತು ಬೂದಿ ದಕ್ಷಿಣದ ಕಡೆಗೆ ಸಾಗಿತು ಎಂದು ಸುತೊಪೊ ಹೇಳಿದರು. ಸಿನಾಬಂಗ್ ಜ್ವಾಲಾಮುಖಿ ಪರ್ವತ ಕಳೆದ ಜೂನ್ ಮತ್ತು ಸೆಪ್ಟೆಂಬರಿನಲ್ಲಿ ಬಾಯ್ದೆರೆದಿದಿತ್ತು. ಅದಕ್ಕೆ ಮೊದಲು 2013ರ ಸೆಪ್ಟೆಂಬರ್​ನಿಂದ 2014ರ ಫೆಬ್ರುವರಿವರೆಗೆ ಜ್ವಾಲಾಮುಖಿ ಬಾಯ್ದೆರೆದು ಲಾವಾರಸ ಹಾಗೂ ಬೂದಿಯನ್ನು ಹೊರಚೆಲ್ಲಿತ್ತು. ಈ ಸಂದರ್ಭದಲ್ಲಿ 15 ಜನ ಮೃತರಾಗಿ, 30,000ಕ್ಕೂ ಹೆಚ್ಚು ಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾಗಿ ಬಂದಿತ್ತು.


2014: ವಾಷಿಂಗ್ಟನ್: ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೆರಿಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ ವಿಜ್ಞಾನಿ ಥಾಮಸ್ ಕೈಲಾಥ್(79) ಪಾತ್ರರಾದರು. ಒಟ್ಟು 10 ಮಂದಿ ವಿಜ್ಞಾನಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಅಧ್ಯಕ್ಷ ಬರಾಕ್ ಒಬಾಮ ಘೋಷಿಸಿದರು. ಕೇರಳದಲ್ಲಿ ಜನಿಸಿದ್ದ ಥಾಮಸ್ 1956ರಲ್ಲಿ ಪುಣೆ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದರು. ಇವರು ಪದ್ಮಭೂಷಣಕ್ಕೂ ಪಾತ್ರರಾಗಿದ್ದರು.

2014: ಮಾಲ್ದೀವ್ಸ್: ರಾಜಸ್ಥಾನದ ಮಾಜಿ ಬ್ಯಾಟ್ಸ್​ಮನ್ ರಾಜೇಶ ಸಂಘಿ ಅವರು ಮಾಲ್ದೀವ್ಸ್​ನಲ್ಲಿ ನಿಧನರಾದರು. ರಜಾ ಕಾಲದ ಪ್ರವಾಸದಲ್ಲಿದ್ದ ರಾಜೇಶ ಸಂಘಿ (42) ಹೃದಯಾಘಾತದಿಂದ ನಿಧನರಾದರು. ಸಂಘಿ ಅವರು ರಾಜಸ್ಥಾನ ಪರವಾಗಿ ಆಡಲು ಹೋಗುವ ಮುನ್ನ ಮುಂಬೈಯಲ್ಲಿ ಬಿಸಿಸಿಐ ನಡೆಸಿದ್ದ 15 ವಯಸ್ಸಿಗಿಂತ ಕೆಳಗಿನವರ ಟೂರ್ನಮೆಂಟ್​ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಮೊದಲ ಕ್ಯಾಪ್ಟನ್ ಆಗಿದ್ದರು. ಓಪನಿಂಗ್ ಬ್ಯಾಟ್ಸ್​ಮನ್ ಮತ್ತು ಲೆಗ್​ಸ್ಪಿನ್ನರ್ ಆಗಿದ್ದ ಸಂಘಿ ನಾಲ್ಕು ಫಸ್ಟ್ ಕ್ಲಾಸ್ ಹಾಗೂ ಹಲವಾರು ಲಿಸ್ಟ್ ಎ ಪಂದ್ಯಗಳನ್ನು 1993-94ರ ಅವಧಿಯಲ್ಲಿ ಆಡಿದ್ದರು. ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ ಅವರು ಒಂದು ಶತಕ ಸೇರಿ 218 ರನ್ ಗಳಿಸಿದ್ದರೆ, ಲಿಸ್ಟ್ ಎ ಪಂದ್ಯದಲ್ಲಿ 72 ರನ್ ಗಳಿಸಿದ್ದರು.
2014: ಡಮಾಸ್ಕಸ್: ಅಮೆರಿಕ ನೇತೃತ್ವದ ಭಯೋತ್ಪಾದಕ ವಿರೋಧಿ ಮೈತ್ರಿಕೂಟವು ಉತ್ತರ ಕೊರಿಯಾದಲ್ಲಿ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳ ಗುಂಪಿನ ಕನಿಷ್ಠ 35 ಮಂದಿ ಸದಸ್ಯರು ಹತರಾದರು. ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾಲಯವನ್ನು ಉಲ್ಲೇಖಿಸಿ ಮಾಡಿರುವ ವರದಿಯಲ್ಲಿ ಪಾನ್-ಅರಬ್ ಅಲ್-ಮಯಾದೀನ್ ಟಿವಿ ಈ ದಾಳಿಗಳ ಬಗ್ಗೆ ತಿಳಿಸಿತು. ಅಮೆರಿಕದ ಡ್ರೋನ್​ಗಳು ಜೋರ್ಡಾನ ಸಮರ ವಿಮಾನಗಳ ಜೊತೆಗೂಡಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಸಿರಿಯಾದ ಉತ್ತರ ಪ್ರಾಂತ ಹಸಾಕಾ ಮತ್ತು ಕುರ್ದಿಶ್ ನಗರ ಕೊಬಾನೆಯ ಆಸುಪಾಸಿನ ಇಸ್ಲಾಮಿಕ್ ಸ್ಟೇಟ್ ನೆಲೆಗಳನ್ನು ಪ್ರಮುಖ ಗುರಿಯಾಗಿ ಇಟ್ಟುಕೊಳ್ಳಲಾಗಿತ್ತು. ಈ ಮಧ್ಯೆ 24 ಗಂಟೆಗಳ ಅವಧಿಯಲ್ಲಿ 67 ಮಂದಿ ಉಗ್ರಗಾಮಿಗಳನ್ನು ಕೊಲ್ಲುವ ಮೂಲಕ ಕೊಬಾನೆ ಕಡೆಗೆ ಅವರು ಮುಂದೊತ್ತಿ ಬರದಂತೆ ತಡೆಯಲಾಗಿದೆ ಎಂದು ಕುರ್ದಿಶ್ ಪೀಪಲ್ಸ್ ಪ್ರೊಟೆಕ್ಷನ್ ಯುನೈಟ್ಸ್/ ವೈಪಿಜಿ ಹೇಳಿಕೆಯಲ್ಲಿ ತಿಳಿಸಿತು. 

2008: ಮೂರು ದಿನಗಳಿಂದ ಅಸ್ಸಾಂನ ಉದಲ್ಗುರಿ ಮತ್ತು ಡರ್ರಾಂಗ್ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿತು. ಉದಲ್ಗುರಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಲು ಯತ್ನಿಸಿದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ನಾಲ್ಕು ಮಂದಿ ಸಾವನ್ನಪ್ಪಿದರು. ಮೃತಪಟ್ಟವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸರೊಬ್ಬರು ತಿಳಿಸಿದರು. ಮೂರು ದಿನಗಳಿಂದ ಈ ಎರಡು ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು.. 250ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾದವು. 10 ಸಾವಿರ ಮಂದಿ ಭಯಭೀತರಾಗಿ ತಮ್ಮ ಹಳ್ಳಿಗಳನ್ನು ತೊರೆದು ಸರ್ಕಾರ ನಿರ್ಮಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದರು.

2008: ಮೆಕ್ಕೆ ಜೋಳದಂತಹ ಧಾನ್ಯ ಆಧಾರಿತ ಜೈವಿಕ ಇಂಧನಕ್ಕಿಂತ ಹುಲ್ಲು ಬೆಳೆಯ ತ್ಯಾಜ್ಯ ಮತ್ತು ಗಿಡಗಳ ತಿನ್ನಲನರ್ಹ ಭಾಗಗಳಿಂದ ಉತ್ಪಾದಿಸುವ ಜೈವಿಕ ಇಂಧನವೇ ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ತಜ್ಞರ ತಂಡವೊಂದು ವಾಷಿಂಗ್ಟನ್ನಿನಲ್ಲಿ ಪ್ರಕಟಿಸಿತು.. ಈ ಬಗ್ಗೆ ಪರಸ್ಪರ ಸಹಕಾರದಡಿ ಸಮಗ್ರ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇದರಿಂದ ಪೌಷ್ಟಿಕಾಂಶದ ನಷ್ಟ ಮತ್ತು ಆಹಾರ ಉತ್ಪಾದನೆಗಾಗಿ ಹೊಸ ಭೂಮಿಯನ್ನು ಸಜ್ಜುಗೊಳಿಸಿ ಮುಂದಿನ ಪೀಳಿಗೆ ಧಾನ್ಯ ಆಧಾರಿತ ಜೈವಿಕ ಇಂಧನದಿಂದ ಅನುಭವಿಸಬೇಕಾದ ಹೊರೆಯನ್ನು ತಪ್ಪಿಸಿದಂತಾಗುತ್ತದೆ ಎಂದು ಪುರ್ಡ್ಯೂ ಕೃಷಿ ವಿಶ್ವವಿದ್ಯಾಲಯದ ತಜ್ಞ ಒಟ್ಟೊ ಡೋರಿಂಗ್ ಮತ್ತು 22 ವಿಜ್ಞಾನಿಗಳ ತಂಡ ಸಲ್ಲಿಸಿದ ವರದಿ ಅಭಿಪ್ರಾಯಪಟ್ಟಿತು. ಗಿಡಮರಗಳ ಜೀವಕೋಶ ದ್ರವ್ಯಗಳಲ್ಲಿನ ಜೈವಿಕ ಇಂಧನಕ್ಕೆ ಉತ್ತಮ ಭವಿಷ್ಯವಿದೆ ಎಂದು ಹಿಂದಿನ ವರ್ಷದ ಇಂಧನ ಮಸೂದೆ ಸ್ಪಷ್ಟಪಡಿಸಿದೆ.. ಅಮೆರಿಕದ ಕಂಪೆನಿಗಳು 2022ರ ಹೊತ್ತಿಗೆ ಇಂತಹ 21 ಶತಕೋಟಿ ಗ್ಯಾಲನ್ ಇಂಧನ ಖರೀದಿಸುವುದಾಗಿ ಹೇಳಿವೆ. ಆದರೆ ಇದಕ್ಕಾಗಿ ಬಳಸಬೇಕಾದ ನೀರಿನ ಪ್ರಮಾಣ, ಪೌಷ್ಟಿಕಾಂಶಗಳ ನಷ್ಟ, ಹಸಿರುಮನೆ ಅನಿಲ ತ್ಯಾಜ್ಯದ ಜೊತೆಗೆ ಮಣ್ಣಿನ ಮೇಲಾಗುವ ಪರಿಣಾಮಗಳನ್ನೂ ನಾವು ಪರಿಗಣಿಸಬೇಕಾಗುತ್ತದೆ ಎಂದು ತಂಡ ಹೇಳಿತು..

2007: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಮೂಲಕ ಜೆಡಿಎಸ್ ನೇತೃತ್ವದ ಸರ್ಕಾರ ಸೇಡಿನ ರಾಜಕೀಯ ಆರಂಭಿಸಿತು. ಬಿಜೆಪಿಯು ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಒಂದೆರಡು ದಿನದಲ್ಲಿ ಹಿಂದೆಗೆದುಕೊಳ್ಳುವ ಸೂಚನೆ ಲಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯಿತು. ಬಿಜೆಪಿಗೆ ಅಂಕುಶ ಹಾಕುವ ಪ್ರಯತ್ನವಾಗಿ ಇದು ನಡೆದಿದ್ದು, ಜೆಡಿಎಸ್ ನ ಮಹಮ್ಮದ್ ಆಸಿಫ್ ನಿಗಮದ ನೂತನ ಅಧ್ಯಕ್ಷರಾದರು.

2007: ಭಾರತದ ಮೊದಲ ಮಧ್ಯಗಾಮಿ ಕ್ಷಿಪಣಿ `ಅಗ್ನಿ-1'ನ್ನು ಒರಿಸ್ಸಾದ ಬಾಲಸೋರ್ ಬಳಿ ಕಡಲ ತೀರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಕ್ಷಿಪಣಿಗೆ 1000 ಕೆಜಿ ಭಾರದ ಸಿಡಿತಲೆಯನ್ನು ಸೆಕೆಂಡಿಗೆ 2.5 ಕಿಮೀ ವೇಗದಲ್ಲಿ 700 ಕಿಮೀ ದೂರ ಹೊತ್ತೊಯ್ಯುವ ಸಾಮರ್ಥ್ಯವಿದೆ. ಇದು 15 ಮೀಟರ್ ಉದ್ದವಿದ್ದು, 12 ಟನ್ ಭಾರವಿದೆ. ಇದು ಈ ಕ್ಷಿಪಣಿಯ ನಾಲ್ಕನೇ ಪರಿಕ್ಷಾ ಉಡಾವಣೆ. 25 ಜನವರಿ 2002, 9 ಜನವರಿ 2003 ಮತ್ತು 4 ಜುಲೈ 2004ರಲ್ಲಿ ಈ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು.

2007: ಸ್ಥಳೀಯರಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ ಹೊಸಕೋಟೆಯ ನಂದಗುಡಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಮುಂದಾಗಿರುವ `ಸ್ಕಿಲ್' ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಪ್ರಥಮ ಹೆಜ್ಜೆ ಇರಿಸಿತು. ಸಚಿವ ಸಂಪುಟ ನಿರ್ಧಾರ ಹಾಗೂ ಉನ್ನತ ಅನುಮೋದನಾ ಸಮಿತಿಯ ತೀರ್ಮಾನದಂತೆ ಒಪ್ಪಂದ ಪರಿಶೀಲನೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸಚಿವ ಸಂಪುಟ ನಿರ್ಧರಿಸಿತು. ಬಿಜೆಪಿ ಸಚಿವರ ಅನುಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಜತೆ ಅಧಿಕಾರ ಹಂಚಿಕೆಗೆ ಅನುವು ಮಾಡಿಕೊಳ್ಳುವ ಉದ್ದೇಶದಿಂದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು `ರಾಷ್ಟ್ರೀಯ ರಾಜಿ' ಸುಗ್ರೀವಾಜ್ಞೆಗೆ ಸಹಿ ಹಾಕಿದರು. ಈ ಆಜ್ಞೆಯ ಪ್ರಕಾರ ಬೆನಜಿರ್ ಭುಟ್ಟೊ ಮತ್ತಿತರ ರಾಜಕೀಯ ಧುರೀಣರಿಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರ ಮತ್ತಿತರ ಪ್ರಕರಣಗಳಲ್ಲಿ ಕ್ಷಮಾದಾನ ದೊರೆಯಲಿದೆ. ಮತ್ತೊಬ್ಬ ಮಾಜಿ, ಮುಷರಫ್ ಕಡುವಿರೋಧಿ ಪ್ರಧಾನಿ ನವಾಜ್ ಷರೀಫ್ ಹೊರತುಪಡಿಸಿ ಉಳಿದ ರಾಜಕೀಯ ಧುರೀಣರಿಗೆ ಈ ಸುಗ್ರೀವಾಜ್ಞೆ ಅನ್ವಯವಾಗುತ್ತದೆ.

2007: ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐದು ಪದಕ ಗೆದ್ದ ಸಂದರ್ಭದಲ್ಲಿಯೇ ವಿಶ್ವ ಖ್ಯಾತ ಮಹಿಳಾ ಅಥ್ಲೆಟ್ ಮೇರಿಯನ್ ಜೋನ್ಸ್ ಉದ್ದೀಪನ ಮದ್ದು ಸೇವಿಸಿದ್ದರೆಂಬುದು ಖಚಿತಗೊಂಡಿತು. ದೀರ್ಘ ಕಾಲದ ವಿಚಾರಣೆಯ ನಂತರ ಆರೋಪ ಸಾಬೀತಾಗಿ, ಇಷ್ಟೊಂದು ಸಮಯ ಸತ್ಯವನ್ನು ಮುಚ್ಚಿಟ್ಟ ಅಥ್ಲೆಟ್ ವರ್ತನೆಯನ್ನೂ ವಿಚಾರಣಾ ಸಮಿತಿಯು ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ಅವರು ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಿದವು.

2007: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಲಾಹೋರಿನಲ್ಲಿ ನಡೆಯುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ಥಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕರಾಚಿಯಲ್ಲಿ ಪ್ರಕಟಿಸಿದರು. ಲಾಹೋರಿನಲ್ಲಿ ನಡೆವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ಮುಲ್ತಾನಿನ 37ರ ಹರೆಯದ ಈ ಬ್ಯಾಟಿಗನ ಕೊನೆಯ ಪಂದ್ಯವಾಗಲಿದೆ. ಇಂಜಿ ಅವರು ಕೆರಿಬಿಯನ್ನಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಇದೀಗ ಟೆಸ್ಟ್ನಿಂದಲೂ ಅವರು ವಿರಮಿಸುವುದರೊಂದಿಗೆ ಪಾಕಿಸ್ಥಾನ ಕ್ರಿಕೆಟಿನ ಒಂದು ಯುಗ ಅಂತ್ಯವಾಗುವುದು. ಇಂಜಮಾಮ್ ಅವರು ಇದುವರೆಗೆ ಒಟ್ಟು 119 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ಥಾನ ತಂಡವನ್ನು ಪ್ರತಿನಿಧಿಸಿದ್ದಾರೆ.

2006: ಭಜರಂಗದಳವು ಕರೆ ನೀಡಿದ್ದ ಮಂಗಳೂರು ಬಂದ್ ಕಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಮಂಗಳೂರು, ಬಿ.ಸಿ.ರೋಡ್, ಸುರತ್ಕಲ್ಲಿನಲ್ಲಿ 3 ದಿನ ಕರ್ಫ್ಯೂ ಜಾರಿಗೊಳಿಸಲಾಯಿತು. ದನಗಳನ್ನು ಸಾಗಿಸುತ್ತ್ದಿದ ವಾಹನವೊಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಾರಿಯಾದಾಗ ಅದನ್ನು ಬೆನ್ನತ್ತಿದವರ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದ್ದು, ಭಜರಂಗದಳ ಮಂಗಳೂರು ಬಂದ್ ಗೆ ಕರೆ ನೀಡಿತ್ತು.

1991: ಪತ್ರಕರ್ತ, ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪಿನ ಸಂಸ್ಥಾಪಕ ಅಧ್ಯಕ್ಷ ರಾಮನಾಥ ಗೋಯೆಂಕಾ (87) ನಿಧನ.

1989: ಮೀರಾ ಸಾಹಿಬ್ ಫಾತಿಮಾ ಬೀವಿ ಅವರು ಭಾರತದ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾದರು.

1957: ಸಾಹಿತಿ ಭಾರತಿ ಪಾಟೀಲ ಜನನ.

1951: ಭಾರತದ ಮೊದಲ ಮಹಾ ಚುನಾವಣೆ ಆರಂಭವಾಯಿತು. ಅದು 1952ರ ಫೆಬ್ರುವರಿ 21ರಂದು ಅದು ಅಂತ್ಯಗೊಂಡಿತು.

1949: ಸಮಾಜ ಸುಧಾರಕ, ರಾಜಕಾರಣಿ ಎ.ಕೆ. ಪಿಳ್ಳೈ ನಿಧನ.

1935: ಸಾಹಿತಿ ಎನ್.ಎಸ್. ಸೋಮಪ್ಪ ಜನನ.

1932: ಕ್ರಿಕೆಟಿಗ ಮಾಧವರಾವ್ ಲಕ್ಷ್ಮಣ ರಾವ್ ಆಪ್ಟೆ ಜನನ.

1930: ಸಾಹಿತಿ ಎಚ್. ಆರ್. ಭಸ್ಮೆ ಜನನ.

1919: ಖ್ಯಾತ ಸಾಹಿತಿ ಬಸವರಾಜ ಕಟ್ಟೀಮನಿ (5-10-1919ರಿಂದ 23-10-1989ರವರೆಗೆ) ಅವರು ಅಪ್ಪಯ್ಯ- ಬಾಳವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಾಲಮರಡಿಯಲ್ಲಿ ಜನಿಸಿದರು.

1919: ಸಾಹಿತಿ ಎಲ್. ಬಸವರಾಜು ಜನನ.

1882: ರಾಬರ್ಟ್ ಹಚಿಂಗ್ಸ್ ಗೊಡ್ಡಾರ್ಡ್ (1882-1945) ಜನ್ಮದಿನ. ಅಮೆರಿಕನ್ ಪ್ರೊಫೆಸರ್ ಹಾಗೂ ಸಂಶೋಧಕನಾಗಿದ್ದ ಈತ `ಆಧುನಿಕ ರಾಕೆಟ್ ತಂತ್ರಜ್ಞಾನದ ಜನಕ' ಎಂದೇ ಖ್ಯಾತ.

1864: ಫ್ರೆಂಚ್ ಸಂಶೋಧಕ ಆಗಸ್ಟ್ ಲ್ಯುಮಿರೆ (1864-1948) ಜನ್ಮದಿನ. ತಮ್ಮ ಸಹೋದರ ಲೂಯಿ ಜೊತೆ ಸೇರಿ ಪ್ರಾರಂಭದ ದಿನಗಳ ಚಲನಚಿತ್ರ ಕ್ಯಾಮರಾ ಹಾಗೂ `ಸಿನಿಮಾಟೋಗ್ರಾಫ್' ಹೆಸರಿನ ಪ್ರೊಜೆಕ್ಟರ್ ಉಪಕರಣವನ್ನು ಇವರು ನಿರ್ಮಿಸಿದ್ದರು. ಇವರು ಸಂಶೋಧಿಸಿದ ಈ ಫೊಟೋಗ್ರಾಫಿಕ್ ಉಪಕರಣದಿಂದಾಗಿಯೇ `ಸಿನಿಮಾ' ಶಬ್ದ ಹುಟ್ಟಿತು.

1864: ಭಾರತದ ಕಲ್ಕತ್ತ (ಈಗಿನ ಕೋಲ್ಕತ್ತ್ತ) ನಗರ ಭೀಕರ ಚಂಡಮಾರುತದ ಪರಿಣಾಮವಾಗಿ ಬಹುತೇಕ ನಾಶಗೊಂಡಿತು. 60,000 ಜನ ಅಸು ನೀಗಿದರು.

1805: ಚಾರ್ಲ್ಸ್ ಕಾರ್ನವಾಲಿಸ್ ತನ್ನ 66ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಘಾಜಿಪುರದಲ್ಲಿ ಮೃತನಾದ. ಬ್ರಿಟಿಷ್ ಸೈನಿಕ ಹಾಗೂ ರಾಜಕಾರಣಿಯಾಗಿದ್ದ ಈತ 1786-1793ರ ಅವಧಿಯಲ್ಲಿ ಭಾರತದ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ.

1713: `ಎನ್ ಸೈಕ್ಲೋಪೀಡೀ' ಮುಖ್ಯ ಸಂಪಾದಕ, ಫ್ರೆಂಚ್ ವಿದ್ವಾಂಸ ಹಾಗೂ ತತ್ವಜ್ಞಾನಿ ಡೇನಿಸ್ ಡಿಡೆರೊಟ್ (1713-1784) ಜನ್ಮದಿನ. 1745ರಿಂದ 1772ರವರೆಗೆ `ಎನ್ ಸೈಕ್ಲೋಪೀಡೀ' ಮುಖ್ಯಸಂಪಾದಕನಾಗಿ ಆತ ಸೇವೆ ಸಲ್ಲಿಸಿದ್ದ.

1676: ಬಾಂಬಯಲ್ಲಿ (ಈಗಿನ ಮುಂಬೈ) ರೂಪಾಯಿ ಮತ್ತು ಪೈಸೆ ಹೆಸರಿನ ನಾಣ್ಯಗಳನ್ನು ಟಂಕಿಸಲು ಈಸ್ಟ್ ಇಂಡಿಯಾ ಕಂಪೆನಿಗೆ ಇಂಗ್ಲೆಂಡಿನ ದೊರೆ ಅಧಿಕಾರ ನೀಡಿದ.

No comments:

Advertisement