My Blog List

Wednesday, October 7, 2009

ಇಂದಿನ ಇತಿಹಾಸ History Today ಅಕ್ಟೋಬರ್ 04

ಇಂದಿನ ಇತಿಹಾಸ

ಅಕ್ಟೋಬರ್ 04


ಖ್ಯಾತ ಸಾಹಿತಿ ಹುಯಿಲಗೋಳ ನಾರಾಯಣರಾಯರು (4-10-1884ರಿಂದ 4-7-1971ರವರೆಗೆ) ಕೃಷ್ಣರಾಯರು- ಬಹೆಣಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಕನ್ನಡಿಗರ ಮೈ ನವಿರೇಳಿಸುವ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯ ಕತೃ ಇವರೇ. 1924ರಲ್ಲಿ ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖ್ಯಾತ ಗಾಯಕ ಸುಬ್ಬರಾಯರು ಈ ಗೀತೆಯನ್ನು ಹಾಡಿದಾಗ ಜನ ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.



2014: ಪಟ್ನಾ: ದಸರಾ ಸಂಭ್ರಮಾಚರಣೆ ಮುಗಿದ ಬಳಿಕ ಇಲ್ಲಿನ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 3ರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 33 ಮಂದಿ ಅಸು ನೀಗಿದರು. ಬಿಹಾರಿನ ರಾಜಧಾನಿ ನಗರದ ಗಾಂಧಿ ಮೈದಾನದಲ್ಲಿ ಮುಖ್ಯ ದಸರಾ ಉತ್ಸವದ ಅಂಗವಾಗಿ ನಡೆದ 'ರಾವಣ ವಧಾ' ಸಮಾರಂಭ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿತು. 'ರಾವಣ ವಧಾ' ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. 32 ಜನ ಮೃತರಾಗಿದ್ದಾರೆ ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮೀರ್ ಸುಭಾನಿ ಹೇಳಿದರು. ವರದಿಗಳ ಪ್ರಕಾರ ನಂತರ ಒಬ್ಬ ಗಾಯಾಳು ಆಸ್ಪತ್ರೆಯಲ್ಲಿ ಸಾವನ್ನಪ್ಪುವುದರೊಂದಿಗೆ ಮೃತರ ಸಂಖ್ಯೆ 33ಕ್ಕೆ ಏರಿತು. ಮೃತರಲ್ಲಿ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಮಕ್ಕಳು. ಬಿಹಾರಿನ ಮುಖ್ಯಮಂತ್ರಿ ಜೀತನ್ ರಾಮ್​ವಾಂಜಿ ಅವರೂ ಗಾಂಧಿ ನಗರದಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ 60 ಅಡಿ ಎತ್ತರದ 'ರಾವಣ ಪ್ರತಿಕೃತಿ'ಯನ್ನು ಸುಡುಮದ್ದಿನ ಬಾಣ ಬಿಡುವ ಮೂಲಕ ದಹಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮುಖ್ಯಮಂತ್ರಿಯನ್ನು ಸಂರ್ಪಸಿ ಕಾಲ್ತುಳಿತ ದುರಂತದ ಬಗ್ಗೆ ವಿಚಾರಿಸಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದರು. ಸಾವನ್ನಪ್ಪಿದವರಲ್ಲಿ 5-6 ಮಂದಿ ಮಕ್ಕಳಾಗಿದ್ದು, ಸುಮಾರು 20 ಮಂದಿ ಮಹಿಳೆಯರು ಎಂದು ಪಟ್ನಾ ಜಿಲ್ಲಾಧಿಕಾರಿ ಮನಿಶ್ ಕುಮಾರ್ ವರ್ಮಾ ಹೇಳಿದರು.

2014: ಪಟ್ನಾ: 'ಸಜೀವ ವಿದ್ಯುತ್ ತಂತಿ ಮೇಲೆ ಬೀಳುತ್ತಿದೆ, ಓಡಿ ಓಡಿ' ಒಂದಷ್ಟು ಯುವಕರು ಹೀಗೆ ಕೂಗಿದ್ದೇ ತಡ, ಜನ ಎದ್ದೆವೊ, ಬಿದ್ದೆವೋ ಎಂದು ಓಡತೊಡಗಿದರು. ಅಷ್ಟೇ ಕ್ಷಣಮಾತ್ರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದರು. ಬಿದ್ದವರನ್ನು ತುಳಿದುಕೊಂಡೇ ಉಳಿದವರು ಓಡಿದರು. ಕಾಲ್ತುಳಿತದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿದರು. ಬಿಹಾರಿನ ರಾಜಧಾನಿಯ ಗಾಂಧಿ ಮೈದಾನದಲ್ಲಿ ಹಿಂದಿನ ರಾತ್ರಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಕಾರಣವಾದದ್ದು ಒಂದಷ್ಟು ಯುವಕರು ಈ ರೀತಿ ಹಬ್ಬಿಸಿದ ಪುಕಾರು ಮತ್ತು ಮೈದಾನದಿಂದ ಹೊರಹೋಗುವ 11 ದ್ವಾರಗಳ ಪೈಕಿ 9 ದ್ವಾರಗಳನ್ನು ಮುಚ್ಚಿದ್ದುದು ಎನ್ನಲಾಯಿತು. ದುರಂತ ಸಂಭವಿಸಿದ ಗಾಂಧಿ ಮೈದಾನದ ಆಗ್ನೇಯ ಮೂಲೆಯಲ್ಲಿನ ರಸ್ತೆಯಲ್ಲಿ ಒಂದು ಕಿ.ಮೀ. ಉದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಾಚೆದರಾಗಿ ಬಿದ್ದ ಚಪ್ಪಲಿ, ಬೂಟು, ಕೈಚೀಲಗಳು, 33 ಮಂದಿಯನ್ನು ಬಲಿತೆಗೆದುಕೊಂಡ ಈ ದುರಂತಕ್ಕೆ ಮೂಕ ಸಾಕ್ಷ್ಯಹೇಳಿದವು. ಮೈದಾನದಿಂದ ಹೊರಹೋಗುವ ದ್ವಾರಗಳನ್ನು ಮುಚ್ಚಿದ್ದೇ ಈ ಕಾಲ್ತುಳಿತ ದುರಂತಕ್ಕೆ ಕಾರಣವಾಯಿತು ಎಂದು ಪಟ್ನಾ ನಿವಾಸಿಗಳು ಜಿಲ್ಲಾ ಪೊಲೀಸರನ್ನು ದೂರಿದರು. ಗಾಂಧಿ ಮೈದಾನದಿಂದ ಎಕ್ಸಿಬಿಷನ್ ರಸ್ತೆಗೆ ಹೋಗುವ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ಮತ್ತು ಕಾರ್ಗಿಲ್ ಚೌಕದ ಕಡೆಗೆ ಸಾಗುವ ರಸ್ತೆಯಲ್ಲಿ ಸುಮಾರು ಅಷ್ಟೇ ದೂರಕ್ಕೆ ಚಪ್ಪಲಿಗಳು, ಬೂಟುಗಳು ಮತ್ತು ಇತರ ವಸ್ತುಗಳು ಚೆಲ್ಲಾಬಿಲ್ಲಿಯಾಗಿ ಬಿದ್ದಿದ್ದವು. 'ಸಜೀವ ವಿದ್ಯುತ್ ತಂತಿ ಮೇಲೆ ಬೀಳುತ್ತಿದೆ ಎಂಬ ಪುಕಾರು ಹರಡಿದ್ದೇ ತಡ ನನ್ನ ಕಣ್ಣೆದುರಲ್ಲೇ ಜನ ಯದ್ವಾತದ್ವ ಓಡತೊಡಗಿದರು. ಕಣ್ಣೆದುರೇ ಸಂಭವಿಸಿದ ಈ ಘೊರ ದುರಂತ ಕಂಡ ಬಳಿಕ ನಾನು ಮೊದಲಿನ ವ್ಯಕ್ತಿಯಾಗಿ ಉಳಿದಿಲ್ಲ. ಈ ದುರಂತದ ಚಿತ್ರ ಮನದಿಂದ ಮಾಸುವುದು ಕಷ್ಟ' ಎಂದು ಪೂರ್ವ ಗಾಂಧಿ ಮೈದಾನದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿರುವ ಮನಿಷ್ ಕುಮಾರ್ ಹೇಳಿದರು. 'ಜನ ಭಯವಿಹ್ವಲರಾಗಿ ಒಬ್ಬರ ಮೇಲೊಬ್ಬರು ಬೀಳುತ್ತಾ ಹೊರ ಹೋಗಲು ದುಂಬಾಲು ಬೀಳುತ್ತಿದ್ದರು. ಆದರೆ ಜನ ಕಿಕ್ಕಿರಿದಿದ್ದ ಮೈದಾನದ 11 ದ್ವಾರಗಳ ಪೈಕಿ ಎರಡನ್ನು ಮಾತ್ರವೇ ತೆರೆಯಲಾಗಿತ್ತು' ಎಂದು ಕುಮಾರ್ ನುಡಿದರು. 'ಓಡಿ ಓಡಿ' ಎಂದು ಕೆಲವು ಯುವಕರು ಕೂಗಿದ್ದು ಜನರನ್ನು ಭಯವಿಹ್ವಲರನ್ನಾಗಿ ಮಾಡಿತು. ಜೀವ ಉಳಿಸಿಕೊಳ್ಳಲು ಜನ ಎಲ್ಲೆಂದರಲ್ಲಿ ಓಡತೊಡಗಿದರು. ಮಹಿಳೆಯರು ಮಕ್ಕಳು ಓಡುವವರ ಕಾಲುಗಳ ಅಡಿಗೆ ಬಿದ್ದರು. ಯಾರನ್ನೂ ರಕ್ಷಿಸಲು ಕೂಡಾ ನನಗೆ ಸಾಧ್ಯವಾಗದೇ ಹೋಯಿತು' ಎಂದು ಕುಮಾರ್ ನುಡಿದರು. ಪೊಲೀಸರು ಸರಿಯಾದ ಭದ್ರತಾ ವ್ಯವಸ್ಥೆ ಮಾಡಲಿಲ್ಲ ಎಂದು ದೂರಿದ 20ರ ಹರೆಯದ ಕುಮಾರ್, 'ರಾವಣ ವಧಾ' ಕಾರ್ಯಕ್ರಮದ ಬಳಿಕ ಗಾಂದಿ ಮೈದಾನದ ದಕ್ಷಿಣ ಭಾಗದಲ್ಲಿ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸಲು ಪೊಲೀಸರೇ ಇರಲಿಲ್ಲ, ಸಮರ್ಪಕ ಪೊಲೀಸ್ ನಿಗಾ ಇದ್ದಿದ್ದರೆ ಹಲವು ಜೀವಗಳನ್ನು ರಕ್ಷಿಸಬಹುದಾಗಿತ್ತು ಎಂದು ನುಡಿದರು. ಕುಮಾರ್ ಮಾತನ್ನೇ ಪ್ರತಿಧ್ವನಿಸಿದ ಕಾರ್ಮಿಕ ಉದಯಕುಮಾರ್, 'ರಾವಣ ವಧಾ'ದಂತಹ ಬೃಹತ್ ಕಾರ್ಯಕ್ರಮ ಸಂಘಟಿಸುವಾಗ ಸೇರಿದಂತಹ ಜನಸಮೂಹ ನಿರ್ವಹಣೆಗೆ ಅಗತ್ಯ ವ್ಯವಸ್ಥೆಯೇ ಇರಲಿಲ್ಲ ಎಂದು ಹೇಳಿದರು.

2014: ಭುವನೇಶ್ವರ: ಒಡಿಶಾದ ನವರಂಗಪುರ ಜಿಲ್ಲೆಯಲ್ಲಿ ನಸುಕಿನ ವೇಳೆಯಲ್ಲಿ ಮಿನಿ ಟ್ರಕ್ ಒಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿ ಪ್ರಯಾಣ ಮಾಡುತ್ತಿದ್ದವರ ಪೈಕಿ ಕನಿಷ್ಠ 11 ಜನ ದುರ್ಮಣಕ್ಕೆ ಈಡಾದರು. ರಾಜಧಾನಿ ಭುವನೇಶ್ವರದಿಂದ 700 ಕಿ.ಮೀ. ದೂರದ ಝಾರಿಗಾಂವ್ ಬಳಿಯ ದಟ್ಟಾರಣ್ಯವಿರುವ ಗುಡ್ಡಗಾಡು ಪ್ರದೇಶದಲ್ಲಿ ಹಿಂದಿನ ದಿನ ತಡರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 50 ಜನರಿದ್ದ ಈ ಈ ವಾಹನ ದಬುಗಾಂವ್​ನಿಂದ ಛಂದಾಹಂಡಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತು. ಮಿನಿ ಟ್ರಕ್​ನಲ್ಲಿದ್ದವರೆಲ್ಲಾ ನೃತ್ಯ ತಂಡವೊಂದರ ಸದಸ್ಯರು. ಛಂದಾಹಂಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಚಾಲಕನಿಗೆ ನಿಯಂತ್ರನ ತಪ್ಪಿದ್ದರಿಂದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಯಿತು.

2014: ಲಂಡನ್: ನೆರವು ಕಾರ್ಯಕರ್ತ ಆಲನ್ ಹೆನ್ನಿಂಗ್ ಅವರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಗುಂಪು ಹತ್ಯೆಗೈದಿರುವುದನ್ನು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮೆರೂನ್ ಅವರು ದೃಢಪಡಿಸಿದರು. ಅವರನ್ನು ಕೊಂದವರ ವಿರುದ್ಧ ಸೇಡು ತೀರಿಸುವುದಾಗಿ ಅವರು ಹೇಳಿದರು. 'ಆಲನ್ ಹೆನ್ನಿಂಗ್ ಅವರನ್ನು ಐಎಸ್​ಐಎಲ್ (ಇಸ್ಲಾಮಿಕ್ ಸ್ಟೇಟ್ ಜೆಹಾದಿಗಳ ಇನ್ನೊಂದು ತಂಡ) ಭೀಕರವಾಗಿ ಕೊಲೆಗೈದಿರುವುದು ಈ ಭಯೋತ್ಪಾದಕರು ಅದೆಷ್ಟು ಕ್ರೂರಿಗಳು ಎಂಬುದಾಗಿ ತೋರಿಸಿಕೊಟ್ಟಿದೆ' ಎಂದು ಕ್ಯಾಮೆರೂನ್ ಅವರು ತಮ್ಮ ಡೌನಿಂಗ್ ಸ್ಟ್ರೀಟ್ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದರು. 'ಈ ಕೊಲೆಗಡುಕರ ವಿರುದ್ಧ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ನಾವು ಮಾಡುತ್ತೇವೆ ಮತ್ತು ನ್ಯಾಯದ ಕಟಕಟೆಗೆ ಅವರನ್ನು ತರುತ್ತೇವೆ' ಎಂದು ಕ್ಯಾಮೆರೂನ್ ಹೇಳಿದರು. ಜೆಹಾದಿ ಉಗ್ರಗಾಮಿ ಸಂಘಟನೆ ಹಿಂದಿನ ದಿನ ಅಂತರ್ಜಾಲಕ್ಕೆ ಹರಿಯಬಿಟ್ಟ ವಿಡಿಯೋ ಒಂದು ಹೆನ್ನಿಂಗ್ ಅವರು ಜೆಹಾದಿ ಉಗ್ರರ ವಶದಲ್ಲಿರುವ ಕೈದಿಗಳು ಧರಿಸುವ ಕಿತ್ತಳೆ ಬಣ್ಣದ ನಿಲುವಂಗಿ ತೊಟ್ಟು ಮೊಣಕಾಲೂರಿ ಕುಳಿತಿದ್ದುದನ್ನು ಹಾಗೂ ಹಿಂಬದಿಯಲ್ಲಿ ಮುಸುಕುಧಾರಿ ಉಗ್ರಗಾಮಿ ತಲೆ ಕಡಿಯುವುದಕ್ಕೆ ಮುನ್ನ ಚಾಕು ಝುಳಪಿಸುತ್ತಾ ನಿಂತಿದ್ದುದನ್ನು ತೋರಿಸಿತ್ತು. ವಾಯವ್ಯ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಿವಾಸಿಯಾದ 47ರ ಹರೆಯದ ಹೆನ್ನಿಂಗ್​ ಸಿರಿಯಾ ಫಾರ್ ಮುಸ್ಲಿಮ್​ ಚಾರಿಟಿ ಏಡ್4ಸಿರಿಯಾ ಎಂಬ ನೆರವು ತಂಡವೊಂದರಲ್ಲಿ ಸ್ವಯಂಸೇವಕರಾಗಿ ಸೇರಿಕೊಂಡಿದ್ದರು. ಅವರನ್ನು ಉಗ್ರಗಾಮಿಗಳು 10 ತಿಂಗಳ ಹಿಂದೆ ಅಪಹರಿಸಿದ್ದರು. 'ವಾಸ್ತವವಾಗಿ ಬೇರೆಯವರಿಗೆ ನೆರವಾಗಲು ಯತ್ನಿಸುತ್ತಿದ್ದ ಹೆನ್ನಿಂಗ್ ಅವರನ್ನು ಅಪಹರಿಸಿ ಕೊಂದಿರುವುದು ಈ ಐಎಸ್​ಐಎಲ್ ಭಯೋತ್ಪಾದಕರ ಹಿಂಸಾಚಾರಕ್ಕೆ ಯಾವ ಮಿತಿಯೂ ಇಲ್ಲ ಎಂಬುದನ್ನು ತೋರಿಸಿದೆ' ಎಂದು ಹೇಳಿದ ಕ್ಯಾಮೆರೂನ್, 'ಹೆನ್ನಿಂಗ್ ಅವರ ಪತ್ನಿ, ಮಕ್ಕಳು ಮತ್ತು ಸ್ನೇಹಿತರ ಸಲುವಾಗಿ ನಾನೂ ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದರು.

2014: ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಜೊತೆಗೆ 'ವೋಟರ್ ವೆರಿಫಿಕೇಷನ್ ಪೇಪರ್ ಆಡಿಟ್ ಟ್ರಯಲ್' (ವಿವಿಪಿಎಟಿ) ಸಾಧನಗಳನ್ನೂ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಮುಂಬೈ ಹೈಕೋರ್ಟ್ ವಜಾ ಮಾಡಿತು. ಇಂತಹ ಉಪಕರಣಗಳನ್ನು ದೇಶಾದ್ಯಂತ ಹಂತ ಹಂತವಾಗಿ ಬಳಸಲಾಗುವುದು ಎಂಬುದಾಗಿ ಸರ್ಕಾರ ನೀಡಿದ ಹೇಳಿಕೆಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ನೇತೃತ್ವದ ಪೀಠವು ಸೆಪ್ಟೆಂಬರ್ 30ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಳ್ಳಿಹಾಕಿತು. ಎಲೆಕ್ಟ್ರಾನಿಕ್ ಮತಯಂತ್ರಗಳು ಅಂತಾರಾಷ್ಟ್ರೀಯ ಗುಣಮಟ್ಟಗಳಿಗೆ ಅನುಗುಣವಾಗಿಲ್ಲ ಮತ್ತು ಹ್ಯಾಕಿಂಗ್​ಗೆ ಮುಕ್ತವಾಗಿವೆ. ಆದ್ದರಿಂದ ತಾನು ನೀಡಿದ ಮತ ಸರಿಯಾದ ವ್ಯಕ್ತಿಗೆ ಬಿದ್ದಿದೆಯೇ ಎಂದು ಸ್ವತಃ ಪರಿಶೀಲಿಸಲು ಮತದಾರನಿಗೆ ಅನುಕೂಲವಾಗುವಂತೆ ವಿವಿಪಿಎಟಿ ಸಾಧನಗಳನ್ನೂ ಒದಗಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರಿದ್ದವು. ವಿವಿಪಿಎಟಿ ಸಾಧನಗಳನ್ನು ಎಲೆಕ್ಟ್ರಾನಿಕ್ ಮತಯಂತ್ರಗಳಿಗೇ ಜೋಡಿಸಲಾಗಿರುತ್ತದೆ ಮತ್ತು ಅವು ,ಮತದಾರನು ಗುರುತು ಹಾಕಿದ ಅಭ್ಯರ್ಥಿಯ ಹೆಸರು ಮತ್ತು ಲಾಂಛನ ಸಹಿತವಾದ ಚೀಟಿಯನ್ನು ಮುದ್ರಿಸಿ ಮತದಾರನಿಗೆ ಸಿಗುವಂತೆ ಮಾಡುತ್ತವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿವರಿಸಿದ್ದವು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಬದಲಿ ವ್ಯವಸ್ಥೆಗಾಗಿ ನಿಯೋಜಿಸಲಾಗಿದ್ದ ಏರ್​ಇಂಡಿಯಾದ ವಿಮಾನದಲ್ಲಿ ನಿಷ್ಕ್ರಿಯಗೊಂಡ ಗ್ರೆನೇಡ್ ಇದ್ದ ವಿಷಯ ತಡವಾಗಿ ಬೆಳಕಿಗೆ ಬಂದಿತು. ಆದರೆ ಭದ್ರತಾ ಲೋಪದ ಹೊಣೆ ಹೊರಬೇಕಿದ್ದ ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕರಣ ಸಂಬಂಧ ವಿಭಿನ್ನ ಹೇಳಿಕೆ ನೀಡಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟವು. ಏನಿದು ಘಟನೆ....? ಪ್ರಧಾನಿ ನರೇಂದ್ರ ಮೋದಿ ಐದು ದಿನಗಳ ಅಮೆರಿಕ ಪ್ರವಾಸಕ್ಕಾಗಿ ಹಿಂದಿನ ವಾರ ಜಂಬೋಜೆಟ್ ವಿಮಾನ ಏರಿದ್ದರು. ಜಂಬೋ ಜೆಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡರೆ ಪ್ರಯಾಣಿಸುವುದಕ್ಕೆಂದು ಏರ್ ಇಂಡಿಯಾದ ವಿಮಾನವೊಂದನ್ನು ಪರ್ಯಾಯವಾಗಿ ಸಜ್ಜುಗೊಳಿಸಲಾಗಿತ್ತು. ಮೋದಿ ಅಮೆರಿಕದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಈ ವಿಮಾನವನ್ನು ಸಾರ್ವಜನಿಕರ ಪ್ರಯಾಣಕ್ಕೆ ಬಳಸಲಾಗಿತ್ತು. ದೆಹಲಿ-ಮುಂಬೈ-ಹೈದರಾಬಾದ್ ಮಾರ್ಗವಾಗಿ ಸಾಗಿ ಜೆಡ್ಡಾದಲ್ಲಿ ಇಳಿದಿದ್ದ ವಿಮಾನದಲ್ಲಿ ಗ್ರೆನೇಡ್ ಎಂದು ಬರೆದಿದ್ದ ವಸ್ತುವೊಂದು ಕಾಣಿಸಿಕೊಂಡಿತು. ತಕ್ಷಣ ವಿಮಾನವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಸ್ಥಳೀಯ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅದು ನಿಷ್ಕ್ರಿಯಗೊಂಡ ಗ್ರೆನೇಡ್ ಎಂಬುದು ಖಚಿತವಾಯಿತು. ತೆರವು ಕಾರ್ಯಾಚರಣೆ ನಂತರ ವಿಮಾನ ದೆಹಲಿಗೆ ಹಿಂದಿರುಗಲು ಜೆಡ್ಡಾ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನೀಡಿದರು. ಪ್ಲಾಸ್ಟಿಕ್​ನಲ್ಲಿತ್ತು: ಏರ್ ಇಂಡಿಯಾ ಮೂಲಗಳ ಪ್ರಕಾರ ವಿಮಾನದ ಬ್ಯುಸಿನೆಸ್ ಕ್ಲಾಸ್ ಸೀಟಿನ ಕೆಳಭಾಗದಲ್ಲಿ ಪ್ಲಾಸ್ಟಿಕ್​ನಿಂದ ಸುತ್ತಿಡಲಾಗಿದ್ದ ವಸ್ತುವೊಂದು ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಉರುಳಿ ಹೊರಕ್ಕೆ ಬಂದಿತ್ತು. ಇದನ್ನು ಕಂಡ ಪ್ರಯಾಣಿಕರು ಬೆದರಿ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಭದ್ರತಾ ವಿಭಾಗದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಯಿತು. ಪ್ರಕರಣದ ಸಮಗ್ರ ತನಿಖೆ ನಡೆಸಲು ಏರ್ ಇಂಡಿಯಾದ ಜಂಟಿ ಎಂಡಿ ಸೈಯದ್ ನಾಸಿರ್ ಅನಿಲ್ ಮತ್ತು ವಿಮಾನಯಾನ ಭದ್ರತೆ ವಿಭಾಗದ ಕಮಿಷನರ್ ಬಿ.ಬಿ.ಡಾಶ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.

2014: ವಾಷಿಂಗ್ಟನ್: ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೆರಿಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ ವಿಜ್ಞಾನಿ ಥಾಮಸ್ ಕೈಲಾಥ್(79) ಪಾತ್ರರಾದರು. ಒಟ್ಟು 10 ಮಂದಿ ವಿಜ್ಞಾನಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಅಧ್ಯಕ್ಷ ಬರಾಕ್ ಒಬಾಮ ಘೋಷಿಸಿದರು. ಕೇರಳದಲ್ಲಿ ಜನಿಸಿದ್ದ ಥಾಮಸ್ 1956ರಲ್ಲಿ ಪುಣೆ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದರು. ಇವರು ಪದ್ಮಭೂಷಣಕ್ಕೂ ಪಾತ್ರರಾಗಿದ್ದರು.

2014: ಬೀಜಿಂಗ್: 10,000 ಕಿ.ಮೀ. ದೂರದ ಗುರಿಯಲ್ಲಿ ಪರಮಾಣು ಸಿಡಿತಲೆಗಳನ್ನು ಸಿಡಿಸಬಲ್ಲ ಅತ್ಯಾಧುನಿಕ ಕ್ಷಿಪಣಿಯನ್ನು ಚೀನಾದ ರಾಷ್ಟ್ರೀಯ ದಿನವಾದ ಅ.1ರಂದು ಶಾಂಕ್ಸಿ ಪ್ರಾಂತದ ತೈಯಾನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಯಿತು. 'ಡಿಎಫ್-31 ಬಿ' ಎಂಬ ಈ ಕ್ಷಿಪಣಿ ಸುಮಾರು 10,000 ಕಿ.ಮೀ. ದೂರದ ಗುರಿಗೆ ಪರಮಾಣು ಸಿಡಿತಲೆಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದ್ದು, ಅಮೆರಿಕ ಹಾಗೂ ಯೂರೋಪಿಯನ್ ರಾಷ್ಟ್ರಗಳಿಗೆ ಚೀನಾದಿಂದಲೇ ನೇರವಾಗಿ ದಾಳಿ ನಡೆಸಬಹುದು. 3 ತಿಂಗಳ ಹಿಂದೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು(ಪಿಎಲ್​ಎ) 'ಡಿಎಫ್-31 ಎ' ಎಂಬ ಪರಮಾಣು ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಇದರ ಮುಂದುವರಿದ ಭಾಗವೇ 'ಡಿಎಫ್-31 ಬಿ' ಎನ್ನಲಾಯಿತು.. ಈ ನಡುವೆ, ಅಮೆರಿಕವನ್ನು ಗುರಿಯಾಗಿಸಿ ಚೀನಾ ಕ್ಷಿಪಣಿ ಅಭಿವೃದ್ಧಿಪಡಿಸಿದೆ ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ, ಈ ವಿಚಾರವನ್ನು ಪಿಎಲ್​ಎನ ನಿವೃತ್ತ ಮೇಜರ್ ಕ್ಸು ಗ್ವಾಂಗ್ಯು ನಿರಾಕರಿಸಿದರು. ದೇಶದ ಸೇನಾ ಬಲ ವೃದ್ಧಿಸುವುದಷ್ಟೇ ನಮ್ಮ ಉದ್ದೇಶ. ಅಮೆರಿಕವನ್ನು ಗುರಿಯಾಗಿಸಿ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ ಎಂಬ ವಾದ ಆಧಾರರಹಿತ ಎಂದು ಅವರು ಹೇಳಿದರು.

2014: ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದರು. ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಯವರು ಅರಮನೆಯ ಒಳಾವರಣದಲ್ಲಿ ವಿಶೇಷ ವೇದಿಕೆಯ ಮೇಲೆ ನಿಂತು ಗಜರಾಜ ಅರ್ಜುನನ ಬೆನ್ನ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಯನ್ನು ಉದ್ಘಾಟಿಸಿದರು. ಜಂಬೂಸವಾರಿಗೆ ಚಾಲನೆ ನೀಡಿದ ಬಳಿಕ ಸಿದ್ಧರಾಮಯ್ಯ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಅವರೊಂದಿಗೆ ಸಚಿವರಾದ ಮಹದೇವ ಪ್ರಸಾದ್ ಮತ್ತಿತರ ಸಂಪುಟ ಸದಸ್ಯರೂ ಸೇರಿಕೊಂಡರು. 750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರ್ಜುನ ಮುಂದಕ್ಕೆ ಸಾಗುತ್ತಿದ್ದಂತೆಯೇ ಇತರ ಆನೆಗಳು, ವೀರಗಾಸೆ ತಂಡ, ವಾದ್ಯವೃಂದ, ಫಿರಂಗಿ ಗಾಡಿಗಳು, ಜಾನಪದ ಕಲಾ ತಂಡಗಳು, ಸ್ತಬ್ಧಚಿತ್ರಗಳು ಸಾಗಿದವು.
 2008: ಇನ್ನು ಮೇಲೆ ನೀವು ಯಾರ ಗಡಿಯಾರವನ್ನೂ ನೋಡಿ ಅದೇನು ಸಗಣಿ ಗಡಿಯಾರ ಎಂದು ಹೀಯಾಳಿಸುವಂತಿಲ್ಲ. ಯಾಕೆಂದರೆ ಸಗಣಿಯಿಂದಲೇ ನಡೆಯುವಂತಹ ಗಡಿಯಾರವನ್ನು ತಯಾರಿಸಲಾಗಿದೆ. ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ರೈತ ದಸರಾದಲ್ಲಿ ಈ ಗಂಜಳ ಗಡಿಯಾರ ಎಲ್ಲರ ಕುತೂಹಲದ ವಸ್ತುವಾಗಿ ಗಮನ ಸೆಳೆಯಿತು.. ಈ ಗಡಿಯಾರಕ್ಕೆ ಬ್ಯಾಟರಿಯೇ ಬೇಕಾಗಿಲ್ಲ. ಇದಕ್ಕೆ ಕೇವಲ ಗೋಮೂತ್ರ, ಹುಳಿ ಮಜ್ಜಿಗೆ ಇದ್ದರೆ ಸಾಕು. ನಾಲ್ಕಾರು ತಿಂಗಳು ಈ ಗಡಿಯಾರದಲ್ಲಿ ವೇಳೆ ನೋಡಿಕೊಳ್ಳಬಹುದು. ಈ ನವೀನ ಗಡಿಯಾರಗಳ ಹೆಸರು `ಗೋಮೂತ್ರ ಗಡಿಯಾರ'/ ಸಗಣಿ ಗಡಿಯಾರ/ ಮಜ್ಜಿಗೆ ಗಡಿಯಾರ. ಇದಷ್ಟೇ ಅಲ್ಲ, 1.5 ವೋಲ್ಟ್ ಬಲ್ಬುಗಳನೂ ಗೋಮೂತ್ರದಿಂದ ಉರಿಸಬಹುದು.. ಶ್ರೀ ರಾಮಚಂದ್ರಾಪುರ ಮಠದ ಸಹಯೋಗದಲ್ಲಿ ಈ ಗೋಮೂತ್ರಗಳ ಗಡಿಯಾರಗಳನ್ನು ತಯಾರಿಸಲಾಗಿತ್ತು. ಸಗಣಿಯೋ, ಗಂಜಲವೋ ಅಥವಾ ಮಜ್ಜಿಗೆ ತುಂಬಿದ ಬಾಟಲಿಗಳಲ್ಲಿ ವಿದ್ಯುತ್ ತಂತಿಯನ್ನು ಬಿಗಿದ ತೆಳುವಾದ ತಾಮ್ರ ಮತ್ತು ಜಿಂಕ್ ಶೀಟ್ ತುಂಡುಗಳನ್ನು ಅಕ್ಕಪಕ್ಕದಲ್ಲಿ ಇಳಿಬಿಟ್ಟು ವಯರಿನ ಮತ್ತೊಂದು ತುದಿಯಲ್ಲಿ ಸಾಮಾನ್ಯ ಗಡಿಯಾರಕ್ಕೆ ಜೋಡಿಸಬೇಕು. ತಾಮ್ರ ಹಾಗೂ ಜಿಂಕ್ಗಳು ಒಂದು ಪಾಸಿಟಿವ್ ಮತ್ತೊಂದು ನೆಗೆಟಿವ್ ವಿದ್ಯುತ್ ವಾಹಕಗಳಾಗಿ ಕೆಲಸ ಮಾಡುತ್ತವೆ. ನಾಲ್ಕೈದು ತಿಂಗಳು ಗಡಿಯಾರ ಚಲಿಸುತ್ತದೆ. ನಂತರ ಲೋಹದ ತುಂಡುಗಳು ಹಾಗೂ ಗೋಮೂತ್ರ ಹಾಗೂ ಸಗಣಿಯನ್ನು ಬದಲಾಯಿಸಬೇಕು. ಮಜ್ಜಿಗೆ ಗಡಿಯಾರದಲ್ಲಿ ಪ್ರತಿ ದಿವಸ ಮಜ್ಜಿಗೆ ಬದಲಾಯಿಸಬೇಕು. ಕೊಟ್ಟಿಗೆ ಬೆಳಗಲು ಗೋಮೂತ್ರದ ವಿದ್ಯುತ್ ದೀಪವನ್ನೇ ಬಳಸಬಹುದು ಎಂಬುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕ.ದಾ.ಕೃಷ್ಣರಾಜು ಅವರ ವಿವರಣೆ. ರೈತರು ಈ ಗಡಿಯಾರವನ್ನು ತಯಾರಿಸಿಕೊಂಡರೆ ವಿದ್ಯುತ್ ಉಳಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448073711 ಸಂಪರ್ಕಿಸಬಹುದು. ರೈತ ದಸರಾದಲ್ಲಿ ಇದೊಂದೇ ವಿಶೇಷವಲ್ಲ. ನಜರ್ ಬಾದಿನ ಕುಪ್ಪಣ್ಣ ಪಾರ್ಕಿನಲ್ಲಿ ರೈತರದ್ದೇ ಸಂತೆ. ರಾಜ್ಯದ ವಿವಿಧ ಭಾಗಗಳ ರೈತರು ತಾವು ಬೆಳೆದ ಸಾವಯವ ಉತ್ಪನ್ನಗಳು, ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಿ ನಗರದ ಜನರಲ್ಲಿಯೂ ಅಚ್ಚರಿ ಮೂಡಿಸಿದರು. ಈ ಸಾವಯವ ಲೋಕದೊಳಗೆ ರಾಮಚಂದ್ರಾಪುರ ಮಠದ 26 ದೇಸಿಯ ಗೋತಳಿಗಳ ಪ್ರದರ್ಶನ, ತುಮಕೂರಿನ ನಂದನ ತಾಜಾ ನೈಸರ್ಗಿಕ ತೆಂಗಿನ ಎಣ್ಣೆ, ಕೊಬ್ಬರಿ, ಹಪ್ಪಳ, ಹರಿಹರದ 55 ಬಗೆಯ ಬೀಜ ಬ್ಯಾಂಕ್, ಮಂಡ್ಯ ಜಿಲ್ಲೆಯ ಕೀಲಾರದ ಕೆಂಪಕ್ಕಿ, ಅವಲಕ್ಕಿ ಅಕ್ಕಿ ಹಿಟ್ಟು, ಬೆಲ್ಲ ಇತ್ಯಾದಿ ಉತ್ಪನ್ನಗಳು ಮಾರಾಟಕ್ಕೆ ಲಭಿಸಿದವು. ವಿವಿಧ ಕಂಪೆನಿಗಳು ತಯಾರಿಸಿದ ಕೃಷಿ ಸಲಕರಣೆ ಹಾಗೂ ಯಂತ್ರಗಳೂ ಮಾರಾಟಕಿದ್ದವು..

2008: ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ ಎರಡೇ ದಿನಗಳಲ್ಲಿ ದೆಹಲಿ ಸರ್ಕಾರವು ನಿಷೇಧ ಉಲ್ಲಂಘಿಸಿದ 141 ಜನರಿಗೆ ದಂಡ ವಿಧಿಸಿತು.. 56 ಸಾರ್ವಜನಿಕ ಸ್ಥಳಗಳು ಹಾಗೂ 388 ಬಸ್ಸುಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ 7080 ರೂಪಾಯಿ ದಂಡ ಸಂಗ್ರಹಿಸಿದರು. ಬಹುತೇಕ ರಾಜ್ಯಗಳು ಈ ನಿಷೇಧವನ್ನು ಜಾರಿಗೊಳಿಸಲು ಉತ್ಸಾಹದಿಂದ ಮುಂದೆ ಬಂದವು. ಆದರೆ ಮಹಾರಾಷ್ಟ್ರ ಮತ್ತು ಬಿಹಾರ ಮಾತ್ರ ನಿರಾಸಕ್ತಿ ತೋರಿಸಿದವು.

2008: ಗಣೇಶ ದೇವಸ್ಥಾನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಆನೆಯೊಂದು ಪೊಲೀಸರಿಗೆ ನೆರವಾದ ಘಟನೆ ಬೆಳಕಿಗೆ ಬಂತು.. ಹಜಾರಿಬಾಗ್ ಜಿಲ್ಲೆಯ ಮಹಿದಿ ಬೆಟ್ಟ ಪ್ರದೇಶದಲ್ಲಿನ ಗಣೇಶ ದೇವಾಲಯದ ಮೇಲೆ ದುಷ್ಕರ್ಮಿಗಳು ಆಗಸ್ಟ್ 16ರಂದು ದಾಳಿ ನಡೆಸಿದ್ದರು. ಆಶ್ಚರ್ಯಕರ ಸಂಗತಿ ಎಂದರೆ ಕಾಡಾನೆಯೊಂದು ದುಷ್ಕರ್ಮಿಗಳ ಮನೆಗಳ ಮೇಲೆ ಪ್ರತಿದಾಳಿ ನಡೆಸಿ ದೇವಸ್ಥಾನದ ದಾಳಿಗೆ ಆಕ್ರೋಶ ವ್ಯಕ್ತಪಡಿಸಿತು. ಮನೆಗಳ ಮೇಲೆ ದಾಳಿ ಮಾಡಿದ ಆನೆಯು ಯಾರನ್ನೂ ಗಾಯಗೊಳಿಸಲಿಲ್ಲ. ನಂತರ ಪೊಲೀಸರು ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಬಂಧಿಸಿದರು. ದಾಳಿ ನಡೆದ ಮಾರನೇ ದಿನ ಆನೆಯು ಭಕ್ತರಿಗೆ ದೇವಸ್ಥಾನದ ಬಳಿ ಸುಳಿಯಲೂ ಬಿಡಲಿಲ್ಲ.

2007: ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಗಮನಿಸಿ ದೆಹಲಿ ಮೂಲದ ಕೂಚಿಪುಡಿ ನೃತ್ಯ ಕಲಾವಿದೆ ಯಾಮಿನಿ ರೆಡ್ಡಿ ಅವರನ್ನು ಪ್ರಸಕ್ತ ಸಾಲಿನ `ದೇವದಾಸಿ ರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು.

2007: ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ವಿಶ್ವನಾಥನ್ ಆನಂದ್ ಅವರಿಗೆ ತಮಿಳುನಾಡು ಸರ್ಕಾರವು 25 ಲಕ್ಷ ರೂಪಾಯಿಯ ಬಹುಮಾನವನ್ನು ಪ್ರಕಟಿಸಿತು. ಆನಂದ್ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಕರುಣಾನಿಧಿ ಅವರು 25 ಲಕ್ಷ ರೂಪಾಯಿಯ ನಗದು ಬಹುಮಾನವನ್ನು ಪ್ರಕಟಿಸಿದರು. ಅಲ್ಲದೆ, ಇತರ 28 ಕ್ರೀಡಾಳುಗಳಿಗೆ 96.05 ಲಕ್ಷ ರೂಗಳ ಬಹುಮಾನವನ್ನೂ ಘೋಷಿಸಿದರು.

2006: ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಡಾ. ರಾಣಿ ಅಭಯ್ ಬಾಂಗ್ ಮತ್ತು ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ. ಎಸ್. ಎನ್. ಸುಬ್ಬರಾವ್ ಅವರು ಪ್ರಸ್ತುತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಗೆ ಆಯ್ಕೆಯಾದರು.

2006: ಮಾನವ ದೇಹದ ವಂಶವಾಹಿಯಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಪ್ರೊಟೀನುಗಳನ್ನು ಉತ್ಪತ್ತಿ ಮಾಡುವ ಜೀವಕೋಶಕ್ಕೆ ಕೂಡಾ ವರ್ಗಾಯಿಸಬಹುದು ಎಂಬ ಮಹತ್ವದ ಸಂಶೋಧನೆ ನಡೆಸಿದ್ದಕ್ಕಾಗಿ ಅಮೆರಿಕದ ರೋಜರ್ ಡಿ. ಕಾರ್ನ್ ಬರ್ಗ್ ಅವರು ರಸಾಯನಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗೆ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ರೋಜರ್ ಅವರ ತಂದೆ ಆರ್ಥರ್ ಕಾರ್ನ್ ಬರ್ಗ್ ಅವರು ಕೂಡಾ 1959ರಲ್ಲಿವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕನಸಿನ ಕೂಸಾದ `ಗರೀಬ್ ರಥ್' ಹವಾನಿಯಂತ್ರಿತ ರೈಲು ಬಿಹಾರಿನ ಸಹರ್ಸಾದಿಂದ ಅಮೃತಸರಕ್ಕೆ ಚೊಚ್ಚಲ ಪಯಣ ನಡೆಸಿತು. ಬಡವರು ಹಾಗೂ ಕೂಲಿ ಕಾರ್ಮಿಕರೂ ಹವಾ ನಿಯಂತ್ರಿತ ರೈಲಿನಲ್ಲಿ ಪಯಣಿಸುವಂತಾಗಬೇಕು ಎಂಬ ಆಶಯದಿಂದ ಲಾಲೂ ಅವರು ಆರಂಭಿಸಿದ ಈ ರೈಲಿನ ಚೊಚ್ಚಲ ಪಯಣದಲ್ಲಿ ಕೇವಲ 25 ಪಯಣಿಗರು ಇದ್ದರು. ರೈಲಿನಲ್ಲಿ 1500 ಆಸನಗಳಿವೆ. ದರ ಅರ್ಧಕ್ಕರ್ಧ ಕಡಿಮೆ.

2006: ಎಲ್ಲ ಉಳಿತಾಯ ಖಾತೆದಾರರಿಗೂ ಪಾಸ್ ಪುಸ್ತಕ ನೀಡಬೇಕಾದ್ದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ವಾಣಿಜ್ಯ ಬ್ಯಾಂಕುಗಳಿಗೆ ತಾಕೀತು ಮಾಡಿತು. ಹಲವಾರು ಬ್ಯಾಂಕುಗಳು ಪಾಸ್ ಪುಸ್ತಕ ನೀಡುವ ಬದಲು 4 ತಿಂಗಳಿಗೊಮ್ಮೆ ಖಾತೆಯ ಸ್ಟೇಟ್ ಮೆಂಟ್ ಮಾತ್ರ ನೀಡುವ ಕ್ರಮ ಕೈಬಿಡಬೇಕು ಎಂದು ಅದು ಸುತ್ತೋಲೆಯಲ್ಲಿ ತಿಳಿಸಿತು.

2006: ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ಕನ್ನಡಪರ ಸಂಘಟನೆಗಳು ನೀಡಿದ `ಕರ್ನಾಟಕ ಬಂದ್' ಕರೆಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ಲಭಿಸಿತು. ಇಡಿ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು.

1996: ಪಾಕಿಸ್ತಾನದ ಶಾಹಿದ್ ಆಫ್ರಿದಿ ಅವರು ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಕೇವಲ 37 ಬಾಲ್ ಗಳಿಗೆ ಶತಕ ಬಾರಿಸುವ ಮೂಲಕ ಒಂದು ದಿನದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಮಾಡಿದ್ದ `ಅತಿ ವೇಗದ ಶತಕ' ದಾಖಲೆಯನ್ನು ಮುರಿದರು. ಹಿಂದೆ ದಾಖಲೆ ಮಾಡಿದ್ದ ಜಯಸೂರ್ಯ ಅವರ ಬಾಲಿನಿಂದಲೇ 2 ಓವರುಗಳಲ್ಲಿ 43 ರನ್ನುಗಳನ್ನು ಆಫ್ರಿದಿ ಗಳಿಸಿದರು.

1986: ಭಾರತೀಯ ಹೆಲಿಕಾಪ್ಟರ್ ನಿಗಮ ಅಸ್ತಿತ್ವಕ್ಕೆ ಬಂದಿತು.

1977: ಭಾರತದ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರೆಂಬ ಖ್ಯಾತಿಗೆ ಪಾತ್ರರಾದರು.

1972: ಫುಟ್ ಬಾಲ್ ಆಟಗಾರ ರಾಮನ್ ವಿಜಯನ್ ಜನನ.

1970: ಅಮೆರಿಕದ ರಾಕ್ ಹಾಡುಗಾರ್ತಿ ಜಾನಿಸ್ ಜೋಪ್ಲಿನ್ ಅವರು ಹಾಲಿವುಡ್ ಹೊಟೇಲ್ ಒಂದರ ಕೊಠಡಿಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಹೆರಾಯಿನ್ ಅತಿ ಸೇವನೆಯಿಂದ ಈ ಸಾವು ಸಂಭವಿಸಿತ್ತು. ಆಗ ಆಕೆಯ ವಯಸ್ಸು ಕೇವಲ 27 ವರ್ಷ.

1957: ಸೋವಿಯತ್ ಒಕ್ಕೂಟವು ಮೊತ್ತ ಮೊದಲ ಮಾನವ ನಿರ್ಮಿತ ಉಪಗ್ರಹ `ಸ್ಪುಟ್ನಿಕ್ 1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ ಬಾಹ್ಯಾಕಾಶ ಯುಗ ಆರಂಭವಾಯಿತು. ಅದು ಕಕ್ಷೆಯಲ್ಲಿ ಭೂಮಿಗೆ 96 ನಿಮಿಷಗಳಿಗೆ ಒಂದರಂತೆ ಪ್ರದಕ್ಷಿಣೆ ಹಾಕಿತು. ಇದೇ ಸ್ಥಿತಿಯಲ್ಲಿ 1958ರ ಆದಿಯವರೆಗೂ ಅದು ಕಕ್ಷೆಯಲ್ಲಿ ಕಾರ್ಯಾಚರಿಸಿ, ನಂತರ ಉರಿದು ಬಿತ್ತು. `ಲಾಯಿಕಾ' ಎಂಬ ನಾಯಿಯನ್ನು ಹೊತ್ತೊಯ್ದ ಸ್ಪುಟ್ನಿಕ್ 2 ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾಗೂ ಭೂ ಕಕ್ಷೆಗೆ ಜೀವಂತ ಪ್ರಾಣಿಯನ್ನು ಮೊದಲಿಗೆ ಒಯ್ದ ಹೆಗ್ಗಳಿಕೆಗೆ ಪಾತ್ರವಾಯಿತು.

1948: ಸಾಹಿತಿ ಮೇಗರವಳ್ಳಿ ರಮೇಶ್ ಜನನ.

1940: ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೋಲಿನಿ ಅವರು ಆಲ್ಪ್ಸ್ ಪರ್ವತದ ಬ್ರೆನ್ನರ್ ಕಣಿವಯಲ್ಲಿ ಭೇಟಿಯಾದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಇಟಲಿಯ ನೆರವನ್ನು ಈ ಸಂದರ್ಭದಲ್ಲಿ ನಾಜಿ ನಾಯಕ ಯಾಚಿಸಿದ.

1916: ಸಾಹಿತಿ ರಾಜೇಶ್ವರಿ ನರಸಿಂಹಮೂರ್ತಿ ಜನನ.

1916: ಮಹಾ ಮಾನವತಾವಾದಿ, ಕಣ್ಣಿನ ವೈದ್ಯ ಡಾ. ಎಂ.ಸಿ. ಮೋದಿ (4-10-1916ರಿಂದ 11-11-2005) ವಿಜಾಪುರ ಜಿಲ್ಲೆಯಲ್ಲಿ ಜನಿಸಿದರು. ವೃದ್ಧರ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ದುಬಾರಿಯಾಗಿದ್ದ ಕಾಲದಲ್ಲಿ ಶಿಬಿರಗಳ ಮೂಲಕ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸಾ ಅಭಿಯಾನವನ್ನೇ ಕೈಗೊಂಡ ಮೋದಿ ಜನರ ನೆಚ್ಚಿನ `ನೇತ್ರದಾನಿ' ಆಗಿದ್ದರು.

1884: ಖ್ಯಾತ ಸಾಹಿತಿ ಹುಯಿಲಗೋಳ ನಾರಾಯಣರಾಯರು (4-10-1884ರಿಂದ 4-7-1971ರವರೆಗೆ) ಕೃಷ್ಣರಾಯರು- ಬಹೆಣಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಕನ್ನಡಿಗರ ಮೈ ನವಿರೇಳಿಸುವ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯ ಕತೃ ಇವರೇ. 1924ರಲ್ಲಿ ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖ್ಯಾತ ಗಾಯಕ ಸುಬ್ಬರಾಯರು ಈ ಗೀತೆಯನ್ನು ಹಾಡಿದಾಗ ಜನ ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.

1857: ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜಿ ಕೃಷ್ಣವರ್ಮ ಜನನ.

1847: ಮರಾಠ ದೊರೆ ಪ್ರತಾಪ್ ಸಿಂಗ್ ಬೋಸ್ಲೆ ನಿಧನ.

No comments:

Advertisement