Saturday, October 17, 2009

ಇಂದಿನ ಇತಿಹಾಸ History Today ಅಕ್ಟೋಬರ್ 16

ಇಂದಿನ ಇತಿಹಾಸ

ಅಕ್ಟೋಬರ್ 16


ಭಾರತದ ವೀರ್ ಧವಳ್ ಖಾಡೆ ಅವರು ಪುಣೆಯಲ್ಲಿ ನಡೆದ ಮೂರನೇ ಕಾಮನ್ವೆಲ್ತ್ ಯುವ ಕ್ರೀಡಾಕೂಟದ ಪುರುಷರ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಶಿವಛತ್ರಪತಿ ಕ್ರೀಡಾನಗರದ ಈಜುಗೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ವೀರ್ ಧವಳ್ ಖಾಡೆ ಅವರು 49.47ಸೆ.ಗಳಲ್ಲಿ ಗುರಿ ಮುಟ್ಟಿ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು.


2014: ಇಸ್ಲಾಮಾಬಾದ್: ಪ್ರವಾದಿ ಮಹಮ್ಮದ್ ನಿಂದನೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದಲ್ಲಿನ ಪಂಜಾಬಿನ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಈದಿನ ಎತ್ತಿ ಹಿಡಿಯಿತು. 2010ರಲ್ಲಿ ಆಸಿಯಾ ಮತ್ತು ಸಹೋದ್ಯೋಗಿಗಳ ನಡುವೆ ನೀರು ಕುಡಿಯುವ ವಿಚಾರಕ್ಕೆ ಜಗಳ ನಡೆದಿತ್ತು. ಆಸಿಯಾಳ ಸಹೋದ್ಯೋಗಿಗಳು ಆಕೆ ಮುಸ್ಲಿಂ ಮಹಿಳೆಯಲ್ಲದ ಕಾರಣಕ್ಕೆ ಒಂದೇ ಬಾವಿಯಿಂದ ಮತ್ತು ಒಂದೇ ಲೋಟದಲ್ಲಿ ನೀರು ಕುಡಿಯುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಆಸಿಯಾ ವಿರೋಧಿಸಿದ್ದಳು. ಇದೇ ಕಾರಣಕ್ಕೆ ಆಕೆಯ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ನ್ಯಾಯಾಲಯ ಆಕೆಗೆ ಗಲ್ಲುಶಿಕ್ಷೆ ವಿಧಿಸಿತ್ತು. ಆಸಿಯಾ ಧರ್ಮನಿಂದನೆ ಆರೋಪದಲ್ಲಿ ಗಲ್ಲುಶಿಕ್ಷೆಗೊಳಗಾದ ಮೊದಲ ಮಹಿಳೆ.

2008: ಅಮೆರಿಕದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ದಿನದ ಸೂಚ್ಯಂಕ ಕುಸಿತ ದಾಖಲಾಯಿತು. ಇದು ಅಮೆರಿಕವು ಆರ್ಥಿಕ ಹಿಂಜರಿಕೆಯತ್ತ ಜಾರುತ್ತಿರುವುದರ ಸ್ಪಷ್ಟ ಸಂಕೇತವನ್ನು ನೀಡಿತು. ಇದರಿಂದ ಮುಂಬೈ ಸೇರಿದಂತೆ ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ಭಾರಿ ತಲ್ಲಣ ಕಂಡು ಬಂದಿತು. ಅಮೆರಿಕದ ವಾಲ್ ಸ್ಟ್ರೀಟಿನಲ್ಲಿನ ಈ ಭಾರಿ ಕುಸಿತವು ಕಳೆದ ಎರಡು ದಶಕಗಳಲ್ಲಿಯ ಗರಿಷ್ಠ ಹಿನ್ನಡೆಯಾಗಿದ್ದು, ಭಾರತ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ತೀವ್ರ ಬಿಸಿ ಮುಟ್ಟಿಸಿತು. ಮುಂಬೈ ಷೇರುಪೇಟೆಯಲ್ಲಿ ಬೆಳಗ್ಗೆ 790 ಅಂಕಗಳಷ್ಟು ಕುಸಿತದಿಂದಲೇ ವಹಿವಾಟು ಆರಂಭವಾಗಿತ್ತು. ಅಮೆರಿಕ ಮತ್ತು ಐರೋಪ್ಯ ಮಾರುಕಟ್ಟೆಗಳ ಪರಿಣಾಮ ಆಗಲೇ ಗೋಚರಿಸಿ, ಪೇಟೆಯಲ್ಲಿ ತೀವ್ರ ಕಳವಳ ನೆಲೆಸಿತು. ಆದರೆ ಹೊತ್ತೇರಿದಂತೆ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದರೂ ಕೊನೆಗೆ 227.63ರಷ್ಟು (ಶೇ 2.11) ಕುಸಿತವನ್ನೇ ದಾಖಲಿಸಿತು.

2008: ಕೆನಡಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಒಂಬತ್ತು ಮಂದಿ ಪಂಜಾಬಿ ಮೂಲದ ಭಾರತೀಯ-ಕೆನಡಿಯನ್ನರು ಆಯ್ಕೆಯಾದರು. ಕೆನಡಾ ಸಂಸತ್ತಿನ ಒಟ್ಟು ಸದಸ್ಯ ಬಲ 308. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಟಿಮ್ ಉಪ್ಪಲ್ (ಎಡ್ಮಂಟನ್ ಶೆರ್ವೂಡ್ ಪಾರ್ಕ್ ಕ್ಷೇತ್ರ) ಹಾಗೂ ದೇವಿಂದರ್ ಶೋರೆ (ಕಲ್ಗರೆ ವಾಯವ್ಯ ಕ್ಷೇತ್ರ) ಅವರು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. 1993ರಲ್ಲಿ ಕೆನಡಾ ಸಂಸತ್ತಿಗೆ ಮೊದಲು ಪ್ರವೇಶ ಪಡೆದ ಪೇಟಾಧಾರಿ ಗುರ್ಬಕ್ಷ್ ಮಲ್ಲಿಎದಬಕ್ಷ್ ಮಲ್ಹಿ ಅವರು ಸಹ ಲಿಬರಲ್ ಪಕ್ಷದಿಂದ ಜಯಗಳಿಸಿದರು. ಈ ಮೂಲಕ ಅವರು ಆರನೇ ಬಾರಿ ಸಂಸತ್ ಪ್ರವೇಶಿಸಿದ ವಿಶಿಷ್ಟ ಸಾಧನೆ ಮಾಡಿದರು.

2008: ಹಿಂದೂ ಹಕ್ಕುಗಳ ಕ್ರಿಯಾ ಸಮಿತಿ (ಹಿಂದೂ ರೈಟ್ಸ್ ಆ್ಯಕ್ಷನ್ ಫೋರ್ಸ್)- ಹಿಂಡ್ರಾಫ್ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ಮಲೇಷ್ಯ ಸರ್ಕಾರ ನಿಷೇಧಿಸಿತು. ಈ ಸಂಘಟನೆಯಿಂದ ದೇಶದ ಭದ್ರತೆಗೆ ಧಕ್ಕೆಯಿದೆ ಎಂಬ ಬೆದರಿಕೆಯ ಹಿನ್ನೆಲೆಯಲ್ಲಿ ಸಂಘಟನೆಯ ಮೇಲೆ ನಿಷೇಧ ಜಾರಿಗೊಳಿಸಲಾಗಿದೆ ಎಂದು ಗೃಹ ಮಂತ್ರಿ ಸೈಯ್ಯದ್ ಹಮೀದ್ ಅಲ್ಬರ್ ತಿಳಿಸಿದರು.

2008: ಕರ್ನಾಟಕ ರಾಜ್ಯದಲ್ಲಿ ಸೂಕ್ತ ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವ ಎಲ್ಲ ನಗರ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಅಂದಾಜು 53,877 ಕೋಟಿ ರೂಪಾಯಿ ವೆಚ್ಚದ `ಮಾಸ್ಟರ್ ಪ್ಲಾನ್' ಸಿದ್ಧಪಡಿಸಲು ಸರ್ಕಾರ ಒಪ್ಪಿಗೆ ನೀಡಿತು. ರಾಜ್ಯದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳ ಕುರಿತಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ `ಕೃಷ್ಣಾ'ದಲ್ಲಿ ನಡೆದ ಪ್ರಾತ್ಯಕ್ಷಿಕೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

2008: ಭಾರತದ ವೀರ್ ಧವಳ್ ಖಾಡೆ ಅವರು ಪುಣೆಯಲ್ಲಿ ನಡೆದ ಮೂರನೇ ಕಾಮನ್ವೆಲ್ತ್ ಯುವ ಕ್ರೀಡಾಕೂಟದ ಪುರುಷರ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಶಿವಛತ್ರಪತಿ ಕ್ರೀಡಾನಗರದ ಈಜುಗೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ವೀರ್ ಧವಳ್ ಖಾಡೆ ಅವರು 49.47ಸೆ.ಗಳಲ್ಲಿ ಗುರಿ ಮುಟ್ಟಿ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು. ಅವರು ಈ ಹಾದಿಯಲ್ಲಿ ಎಂಟು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ರೇಮಂಡ್ ಮೆಕ್ಡೋನಾಲ್ಡ್ ಅವರು 52.10ಸೆ.ನೊಂದಿಗೆ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಬಳಿಕ ನಡೆದ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ವೀರ್ ಧವಳ್ ಖಾಡೆ ಅವರು 54.01ಸೆ.ನೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು.

2007: ಪ್ರಸ್ತತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಯನ್ನು ಪಟಿಯಾಲಾದ ಯಶಪಾಲ್ ಮಿತ್ತಲ್ (ರಚನಾತ್ಮಕ ಸೇವೆ), ಪುಣೆಯ ಆನಂದ ಕರ್ವೆ (ಗ್ರಾಮೀಣ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ) ಮತ್ತು ಕ್ಯಾಲಿಫೋರ್ನಿಯಾದ ಮೈಕೆಲ್ ನಗ್ಲರ್ (ಭಾರತದ ಹೊರಗೆ ಗಾಂಧಿ ತತ್ವ ಪ್ರಚಾರ) ಅವರಿಗೆ ಘೋಷಿಸಲಾಯಿತು. ಜಾನಕಿದೇವಿ ಬಜಾಜ್ ಪ್ರಶಸ್ತಿಗೆ ಕೋಲ್ಕತ್ತದ ಅಶೋಕ್ ಗುಪ್ತಾ (ಮಹಿಳೆ ಮತ್ತು ಮಕ್ಕಳ ಕಲ್ಯಾಣ) ಆಯ್ಕೆಯಾದರು ಎಂದು ಮುಂಬೈಯಲ್ಲಿ ಪ್ರಕಟಿಸಲಾಯಿತು.

2007: ಒಟ್ಟು 80 ಲಕ್ಷ ರೂಪಾಯಿ ಕೊಟ್ಟರೆ ಬಾಹ್ಯಾಕಾಶಕ್ಕೆ ಹೋಗಿ ಬರುವ, ಗಗನಯಾನಿಯಾಗಿ ಭೂಮಿ ಸುತ್ತುವ ಅವಕಾಶ ಕಲ್ಪಿಸಿರುವುದಾಗಿ ಬ್ರಿಟಿಷ್ ಕಂಪೆನಿ ವರ್ಜಿನ್ ಗ್ಯಾಲಕ್ಟಿಕ್ ಪ್ರಕಟಿಸಿತು. ನಾಲ್ವರು ಅನಿವಾಸಿ ಭಾರತೀಯರೂ ಸೇರಿ ಸುಮಾರು 470 ಜನ ಈ ಬಾಹ್ಯಾಕಾಶ ಪ್ರವಾಸಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ ಎಂದೂ ಸಂಸ್ಥೆ ಹೇಳಿತು.

2007: ಉದ್ಯೋಗಿಯೊಬ್ಬ ಮಾತೃ ಸಂಸ್ಥೆಯಲ್ಲಿ ಹೊಂದಿರುವ ಸೇವಾ ಹಿರಿತನವೇ ಎರವಲು ಸೇವೆಗೆ ಹೋದ ಸಂಸ್ಥೆಯಲ್ಲಿಯೂ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.

2007: ಕೇಂದ್ರದ ಯುಪಿಎ ಸರ್ಕಾರದಲ್ಲಿನ ಬಿಹಾರದ ಲಾಲು ಪ್ರಸಾದ್ ಅವರ ಆರ್ ಜೆ ಡಿ ಗೆ ಸೇರಿದ ಮಾನವ ಸಂಪನ್ಮೂಲ ಖಾತೆಯ ಸಹಾಯಕ ಸಚಿವ ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ ಅವರು ಜೆಡಿ (ಯು) ಬೆಂಬಲಿತ ದರ್ಭಾಂಗದ ಉಪ ಮೇಯರ್ ಬಾಬ್ಬಿ ಖಾನ್ ಅವರನ್ನು ಈದ್-ಉಲ್- ಫಿತರ್ ಹಬ್ಬದ ದಿನವೇ ಹತ್ಯೆ ಮಾಡುವಂತೆ ಈ ಮಂತ್ರಿ ತನ್ನ ಪರಮಾಪ್ತ ಶಿಷ್ಯ, ಬಾಡಿಗೆ ಹಂತಕ ಅಲ್ಲಾ ಮಿಯಾ ಅಲಿಯಾಸ್ ಅಲ್ಲಾ ಖಾನ್ ಗೆ 5 ಲಕ್ಷ ರೂಪಾಯಿ `ಸುಪಾರಿ' ನೀಡಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದರು.

2007: `ನರಭಕ್ಷಣೆಗೆ ಪ್ರೇರಣೆಗಳು' ಎಂಬ ಪುಸ್ತಕ ಬರೆಯುತ್ತಿದ್ದ ಮೆಕ್ಸಿಕೊ ಲೇಖಕ ಜೋಸ್ ಲೂಯಿಸ್ ಕಾಲ್ವಾ ತನ್ನ ಮಾಜಿ ಪ್ರೇಯಸಿಯನ್ನೇ ಕೊಂದು ತಿಂದು ಪೊಲೀಸರ ಅತಿಥಿಯಾದ. 'ನನ್ನ ಮಗಳು ಕಾಣೆಯಾಗಿದ್ದಾಳೆ. ನಮಗೆ ಅವಳ ಪ್ರಿಯಕರ ಜೋಸ್ ಮೇಲೆ ಅನುಮಾನವಿದೆ' ಎಂದು ಅಲೆಜಾಡ್ರಾ ಗಾಲಿಯಾನಳ (32) ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ತನಿಖೆಗೆಂದು ಬಂದ ಪೊಲೀಸರು ಜೋಸ್ ಮನೆ ಬಾಗಿಲು ತಟ್ಟಿದರೆ ಆಸಾಮಿ ಹಿಂಬಾಗಿಲಿನಿಂದ ಓಡಲು ಹೋಗಿ ಕೆಳಗೆ ಬಿದ್ದು ಕಾಲು ಮುರಿದುಕೊಂಡ. ಪೊಲೀಸರಿಗೆ ಊಟದ ಮೇಜಿನ ಮೇಲೆ ನರಮಾಂಸದ ತುಣುಕುಗಳು ಸಿಕ್ಕಿದವು. ಫ್ರಿಜ್ಜಿನಲ್ಲಿಯೂ ಡಬ್ಬಿಗಟ್ಟಲೆ ಮಾಂಸವಾಗಿ ಗಾಲಿಯಾನ ತಣ್ಣಗಾಗಿದ್ದಳು. ಮತ್ತಷ್ಟು ತಡಕಾಡಿದಾಗ ಮಲಗುವ ಕೋಣೆ ಬದಿಯಲ್ಲೇ ಅವಳ ಅಳಿದುಳಿದ ಶರೀರ ಸಿಕ್ಕಿತು. ಎರಡು ವರ್ಷಗಳಿಂದ ಇವನು ಇನ್ನೂ ಇಬ್ಬರು ಹೆಂಗಳೆಯರನ್ನು ಕೊಂದು ತಿಂದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಸಂಪುಟಗಟ್ಟಲೇ ಪದ್ಯ ಬರೆದಿರುವ ಜೋಸ್ ಮೆಕ್ಸಿಕೊದಲ್ಲಿ ಜನಪ್ರಿಯ ಕವಿ. ಮಾಟದ ಬಗ್ಗೆ ಅಪಾರ ಒಲವು ಹೊಂದಿದ್ದ ಅವನು ಹೊಟ್ಟೆಕಿಚ್ಚಿನ ಅನುಮಾನದ ಪಿಶಾಚಿ ಎಂದು ಅವನ ಇನ್ನೊಬ್ಬ ಮಾಜಿ ಪ್ರಿಯತಮೆ ಸಾರ್ವಜನಿಕ ಹೇಳಿಕೆ ನೀಡಿದಳು.

2007: ತಮಿಳುನಾಡಿನಾದ್ಯಂತ ಶಾಲಾ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತು. ಇದಕ್ಕೆ ಮೊದಲು ಕರ್ನಾಟಕ ಸರ್ಕಾರ ಕೂಡಾ ರಾಜ್ಯದಲ್ಲಿ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಮತ್ತು ಪಿಯು ವರೆಗಿನ ಶಿಕ್ಷಕರು ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದರ ಮೇಲೆ ಎರಡು ವಾರಗಳ ಹಿಂದೆ ನಿಷೇಧವನ್ನು ಹೇರಿತ್ತು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಜಾರಿಗೊಳಿಸುವ ಬಗ್ಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರತಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವಂತೆ ಮಂಡಲ್ ಪ್ರಕರಣದ ಇಂದ್ರ ಸಾಹ್ನಿ ತೀರ್ಪಿನಲ್ಲಿ ಸೂಚಿಸಿದ್ದುದು ಸೇರಿದಂತೆ ನ್ಯಾಯಾಲಯವು ಹಿಂದೆ ನೀಡಿದ್ದ ತೀರ್ಪುಗಳನ್ನೂ ಸರ್ಕಾರ ಲಕ್ಷಿಸಿಲ್ಲ ಎಂದೂ ನ್ಯಾಯಾಲಯ ಅಸಮಾಧಾನ ಸೂಚಿಸಿತು. ಐಐಟಿ, ಐಐಎಂ, ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಗೆ ಒಬಿಸಿ ಮೀಸಲಾತಿ ವಿಸ್ತರಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

2006: ಉದ್ದೀಪನ ಮದ್ದು ಸೇವನೆ ಪರೀಕೆಯಲ್ಲಿ ಸಿಕ್ಕಿ ಬಿದ್ದ ಕಾರಣಕ್ಕಾಗಿ ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಖ್ಯಾತ ಬೌಲರ್ ಶೋಯಬ್ ಅಖ್ತರ್ ಮತ್ತು ಬಲಗೈ ವೇಗಿ ಮೊಹಮ್ಮದ್ ಅಸಿಫ್ ಅವರನ್ನು ಪಾಕ್ ತಂಡದಿಂದ ವಜಾ ಮಾಡಲಾಯಿತು. ಕೆಲವೇ ದಿನಗಳ ಹಿಂದೆ ನಾಯಕ ಇಂಜಮಾಮ್ ಉಲ್ ಹಕ್ ನಾಲ್ಕು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೆ ಒಳಗಾದ ಬೆನ್ನ್ಲಲೇ ಶೋಯಬ್ ಅಖ್ತರ್ ಪ್ರಕರಣ ಘಟಿಸಿತು.

2006: ಕರ್ನಾಟಕದ ವೈಣಿಕ ವಿದ್ವಾನ್ ಎನ್ ಕಾರ್ತಿಕ್ ಅವರು ಸತತ 24 ಗಂಟೆಗಳಲ್ಲಿ 50 ಸಂಗೀತ ಕಛೇರಿ ನೀಡುವ ಮೂಲಕ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಈವರೆಗೆ ದಕ್ಷಿಣ ಆಫ್ರಿಕದ ಆ್ಯಡಮ್ ಟಾಸ್ ನೇತೃತ್ವದ ತಂಡವೊಂದು 24 ಗಂಟೆಗಳಲ್ಲಿ 41 ಕಛೇರಿಗಳನ್ನು ನೀಡಿದ ದಾಖಲೆ ಹೊಂದಿತ್ತು. 2005ರ ನವೆಂಬರ್ 29 ಮತ್ತು 30ರಂದು ಬೆಂಗಳೂರಿನ ಸುತ್ತಮುತ್ತ 50 ವೀಣಾ ಕಛೇರಿಗಳನ್ನು ಅವರು ನೀಡಿದ್ದರು.

1999: ಖ್ಯಾತ ಪತ್ರಕರ್ತ ವೈ ಎನ್ ಕೆ ನಿಧನರಾದರು.

1999: ಸಾಹಿತಿ ಉ.ಕಾ. ಸುಬ್ಬರಾಯಾಚಾರ್ ಜನನ.

1998: ಚಿಲಿಯ ಮಾಜಿ ಸರ್ವಾಧಿಕಾರಿ ಆಗಸ್ಟೋ ಪಿನೋಕ್ಷಿ ಅವರನ್ನು ಬ್ರಿಟಿಷ್ ಪೊಲೀಸರು ಲಂಡನ್ನಿನಲ್ಲಿ ಬಂಧಿಸಿದರು. ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸ್ಪೇನಿನ ನಾಗರಿಕರನ್ನು ಹತ್ಯೆಗೈದರೆಂಬುದಾಗಿ ಪಿನೋಕ್ಷಿ ವಿರುದ್ಧ ಬಂದ ಆಪಾದನೆಗಳ ಸಂಬಂಧ ಪ್ರಶ್ನಿಸುವ ಸಲುವಾಗಿ ಬ್ರಿಟಿಷ್ ಪೊಲೀಸರು ಈ ಕ್ರಮ ಕೈಗೊಂಡರು.

1992: ಆಜಾದ್ ಹಿಂದ್ ಫೌಜಿನ ಕ್ಯಾಪ್ಟನ್ ಆಗಿದ್ದ ಪಿ.ಕೆ. ಸೆಹಗಲ್ ನಿಧನ.

1978: ರೋಮನ್ ಕ್ಯಾಥೋಲಿಕ್ ಇಗರ್ಜಿಯ (ಚರ್ಚ್) ಕಾಲೇಜ್ ಆಫ್ ಕಾರ್ಡಿನಲ್ಸ್ ನೂತನ ಪೋಪ್ ಆಗಿ ಕಾರ್ಡಿನಲ್ ಕರೋಲ್ ವೊಜೆಯಾಲ ಅವರನ್ನು ಆಯ್ಕೆ ಮಾಡಿತು. ಅವರು ಎರಡನೇ ಜಾನ್ ಪಾಲ್ ಎಂಬ ಹೆಸರನ್ನು ಇಟ್ಟುಕೊಂಡರು. 1522ರಿಂದ ಇಟಲಿಯೇತರ ವ್ಯಕ್ತಿಯೊಬ್ಬರು ಪೋಪ್ ಹುದ್ದೆಗೆ ಏರಿದ್ದು ಇದೇ ಮೊದಲು.

1972: ತಮಿಳುನಾಡಿನ ಜನಪ್ರಿಯ ಚಿತ್ರ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು `ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ' (ಎಐಎಡಿಎಂಕೆ) ಸ್ಥಾಪನೆ ಮಾಡಿದರು. ಅಣ್ಣಾದುರೈ ಅವರು ಸ್ಥಾಪಿಸಿದ್ದ `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷದಿಂದ ಹೊರಬಂದು ಅವರು ಈ ಪಕ್ಷವನ್ನು ಕಟ್ಟಿದರು.

1950: ಸಾಹಿತಿ ಜ್ಯೋತಿ ಶಶಿಕುಮಾರ್ ಜನನ.

1949: ಸಾಹಿತಿ ಡಾ. ಜೆ.ಕೆ. ರಮೇಶ್ ಜನನ.

1948: ಚಿತ್ರ ನಟಿ ಹೇಮಮಾಲಿನಿ ಜನ್ಮದಿನ.

1945: ಅಮೆರಿಕದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು (ಎಫ್ಎಓ) ಈದಿನ ಅಸ್ತಿತ್ವಕ್ಕೆ ತರಲಾಯಿತು. ಅದರ ಸ್ಮರಣೆಗಾಗಿ ಈದಿನವನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. 1981ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು.

1941: ಸಾಹಿತ್ಯ ಮತ್ತು ಆಡಳಿತ ಎರಡನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋದ ಖ್ಯಾತ ಸಾಹಿತಿ ಪಿ.ಎಸ್. ರಾಮಾನುಜಂ ಅವರು ಸಂಪತ್ ಕುಮಾರ್ ಆಚಾರ್ಯ- ಇಂದಿರಮ್ಮ ದಂಪತಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಬೇಡಮೂಡಲುನಲ್ಲಿ ಜನಿಸಿದರು.

1931: ಸಾಹಿತಿ ಕ.ಮ.ಶಿ. ಚಂದ್ರಶೇಖರಯ್ಯ ಜನನ.

1916: ಮಾರ್ಗರೆಟ್ ಸ್ಯಾಂಗರ್ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನಿನಲ್ಲ್ಲಿ `ಜನನ ನಿಯಂತ್ರಣ ಕ್ಲಿನಿಕ್' ತೆರೆದರು. ಅವರನ್ನು ಒಂಬತ್ತು ದಿನಗಳ ಬಳಿಕ ಬಂಧಿಸಿ ಒಂದು ತಿಂಗಳ ಕಾಲ ಸೆರೆಮನೆಯಲ್ಲಿ ಇಡಲಾಯಿತು. ಜನನ ನಿಯಂತ್ರಣ ಚಳವಳಿಯ ಸ್ಥಾಪಕಿ ಎಂದೇ ಈಕೆಯನ್ನು ಪರಿಗಣಿಸಲಾಗಿದೆ.

1905: ಬಂಗಾಳದಲ್ಲಿ ವ್ಯಾಪಕವಾಗಿದ್ದ ರಾಷ್ಟ್ರೀಯತೆಯ ಭಾವನೆಯ ಪ್ರಭಾವ ಭಾರತದ ಇತರ ಭಾಗಗಳ ಮೇಲೆ ಆಗದಂತೆ ತಡೆಯಲು ಲಾರ್ಡ್ ಕರ್ಝನ್ ಬಂಗಾಳವನ್ನು ವಿಭಜಿಸಿದ. ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಗೆ ಇದು ಪರಿಹಾರ ಆಗಬಹುದು ಎಂದು ಆತ ಭಾವಿಸಿದ್ದ. ಬಂಗಾಳದ ಏಳು ಪೂರ್ವ ಜಿಲ್ಲೆಗಳು ಮತ್ತು ನಾಲ್ಕು ಗುಡ್ಡಗಾಡು ಜಿಲ್ಲೆಗಳನ್ನು `ಪೂರ್ವ ಬಂಗಾಳ' ಎಂಬ ಹೊಸ ಪ್ರಾಂತ ರಚಿಸಿ ಅದಕ್ಕೆ ವರ್ಗಾಯಿಸಲಾಯಿತು.

No comments:

Advertisement