Friday, December 25, 2009

ಇಂದಿನ ಇತಿಹಾಸ History Today ನವೆಂಬರ್ 29

ಇಂದಿನ ಇತಿಹಾಸ

ನವೆಂಬರ್ 29

ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು.

2014: ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ವಿುಸಿರುವ ಡಾ. ರಾಜ್ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಈದಿನ ಲೋಕಾರ್ಪಣೆ ಮಾಡಿದರು. ಸಮಾಧಿಯಿಂದ ತುಸು ದೂರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಡಾ. ರಾಜ್ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ಡಾ. ರಾಜ್​ಕುಮಾರ್ ನಡೆದು ಬಂದ ಹಾದಿ ಚಿತ್ರ ಸಂಪುಟ ಪುಸ್ತಕವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದರು ಮತ್ತು ರಾಜ್​ಕುಮಾರ್ ಕುರಿತ ಸಾಕ್ಷ್ಯಚಿತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಚಿತ್ರರಂಗದ ಗಣ್ಯರು ಹಾಜರಿದ್ದರು.

2014: ಕೈರೋ: ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್‌ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ವೇಳೆ ನೂರಾರು ಪ್ರತಿಭಟನಕಾರರನ್ನು ಹತ್ಯೆಗೈದ ಆರೋಪವನ್ನು ಮುಬಾರಕ್‌ ವಿರುದ್ಧ ಹೊರಿಸಲಾಗಿತ್ತು. ಈ ಹಿಂದೆ ನ್ಯಾಯಾಲಯ ಮುಬಾರಕ್‌ ವಿರುದ್ಧದ ಆರೋಪವನ್ನು ಎತ್ತಿ ಹಿಡಿದು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೇ ವೇಳೆ ಮುಬಾರಕ್‌ ಅವರ
ಕಮಾಂಡರ್‌ಗಳನ್ನೂ ದೋಷಮುಕ್ತಿಗೊಳಿಸಿರುವ ನ್ಯಾಯಾಧೀಶ ಕಾಮೆಲ್‌ ಅಲ್‌-ರಶೀದ್ ಅವರು ಇಸ್ರೇಲಿಗೆ ಗ್ಯಾಸ್‌ನ್ನು ರಫ್ತು ಮಾಡಿದ ಹಿನ್ನೆಲೆಯಲ್ಲಿ ಹೊರಿಸಲಾಗಿದ್ದ ಭಷ್ಟಾಚಾರ ಪ್ರಕರಣದಲ್ಲಿಯೂ ಮುಬಾರಕ್‌ ಅವರನ್ನು ನಿರ್ದೋಷಿ ಎಂದು ಸಾರಿದರು. ಹೋಸ್ನಿ ಮುಬಾರಕ್‌ ಅವರ ಸಂಪುಟದಲ್ಲಿ ಒಳಾಡಳಿತ ಖಾತೆಯ ಸಚಿವರಾಗಿದ್ದ ಹಬೀಬ್‌ ಅಲ್‌-ಅಡ್ಲಿà ಸೇರಿದಂತೆ ಮುಬಾರಕ್‌ ಅವರ ಏಳು ಮಂದಿ ಮಾಜಿ ಕಮಾಂಡರ್‌ಗಳ ವಿರುದ್ಧ ದಾಖಲಿಸಲಾಗಿದ್ದ ಸರಕಾರ ವಿರೋಧಿ ಪ್ರತಿಭಟನಕಾರರ ಹತ್ಯೆ ಪ್ರಕರಣದಲ್ಲಿ ಅಮಾಯಕರಾಗಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿತ್ತರು. ಮುಬಾರಕ್‌ ಅವರ ಈರ್ವರು ಪುತ್ರರ ವಿರುದ್ಧ ದಾಖಲಾಗಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಂದಲೂ ನ್ಯಾಯಾಲಯ ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ರಾಂತಿಯ ವೇಳೆ ಸರಕಾರ ವಿರೋಧಿ ಪ್ರತಿಭಟನಕಾರರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಜೂನ್‌ನಲ್ಲಿ ಮುಬಾರಕ್‌ ಮತ್ತವರ ಸಹಚರರನ್ನು ದೋಷಿಗಳೆಂದು ಸಾರಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಮುಬಾರಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದೇ ಅಲ್ಲದೆ ದೋಷಮುಕ್ತಗೊಳಿಸಿತು. ಆದರೆ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಮುಬಾರಕ್‌ ಇದೀಗ ದಕ್ಷಿಣ ಕೈರೋದ ಹೊರಭಾಗದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

2014: ರಾಯ್ಸೆನ್: ಮಧ್ಯಪ್ರದೇಶದ ಭೋಪಾಲ್​ನ ರಾಯ್ಸೆನ್ ಕೈಗಾರಿಕಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 39 ಕಾರ್ವಿುಕರು ಅಸ್ವಸ್ಥಗೊಂಡ ಘಟನೆ ಈದಿನ ಮಧ್ಯಾಹ್ನ ಘಟಿಸಿತು. ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೃಷ್ಟಿಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಯಿತು. ಅನಿಲ ಸೋರಿಕೆಯಾಗಿ ಕೆಲ ಗಂಟೆಗಳಲ್ಲೇ ಕಣ್ಣು ಉರಿ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಕಾರ್ವಿುಕರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

2014: ಬೀಜಿಂಗ್: ಕ್ಸಿನ್​ಜಿಯಾಂಗ್​ನ ವಾಯವ್ಯ ಭಾಗದಲ್ಲಿರುವ ಸಾಕೆ ಕೌಂಟಿಯಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಯಲ್ಲಿ ದಾಳಿಕೋರರು ಸೇರಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ  ಗಾಯಗೊಂಡರು. ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ದಾಳಿಕೋರರು ಜನಸೇರುವ ಸಮಯ ನೋಡಿ ಈ ಕೃತ್ಯವೆಸಗಿದರು. ದಾಳಿಯಲ್ಲಿ ಸಾವನ್ನಪ್ಪಿರುವವರಲ್ಲಿ 10ಕ್ಕೂ ಹೆಚ್ಚು ಮಂದಿ ದಾಳಿಕೋರರು ಸೇರಿದ್ದಾರೆ ಎನ್ನಲಾಯಿತು. ಉಯಿಗರ್ ಮುಸ್ಲಿಮ ಸಮೂದಾಯದವರೇ ಹೆಚ್ಚಿರುವ ಈ ಭಾಗದಲ್ಲಿ ವಲಸಿಗರಾದ ಹಾನ್ ಚೀನಿಸ್ ಮತ್ತು ಸ್ಥಳೀಯರ ನಡುವೆ ಸಂಘರ್ಷವಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಯಿತು. ಈಸ್ಟ್ ಟರ್ಕಿಸ್ಥಾನ್ ಇಸ್ಲಾಮಿಕ್ ಕೂಡ ಹಿಂಸಾತ್ಮಕ ದಾಳಿ ನಡೆಸಿದ ಉದಾಹರಣೆಗಳಿದ್ದು, ಈಗ ಈ ಸಂಘಟನೆ ಕೂಡ ನಡೆಸಿರಬಹುದಾದ ಸಾಧ್ಯತೆ ಇದೆ ಎಂದು ಶಂಕಿಸಲಾಯಿತು.

2014:ನವದೆಹಲಿ: ಹಾಡಹಗಲೇ ಖಾಸಗಿ ಬ್ಯಾಂಕ್​ನ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ವಿುಗಳು 1.5 ಕೋಟಿಯಷ್ಟು ಹಣವನ್ನು ದೋಚಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ದೆಹಲಿಯ ಪ್ರಮುಖ ನಗರಗಳಲ್ಲಿ ನಾಕಾಬಂದಿ ಹಾಕಲಾಯಿತು. ಘಟನೆ ಜನತೆಯಲ್ಲಿ ಸಾಕಷ್ಟು ಭಯ ಹುಟ್ಟಿಸಿತು. ಎಟಿಎಂಗೆ ಹಣ ಭರ್ತಿ ಮಾಡಲೇಂದು ಬಂದಿದ್ದ ವಾಹನದ ಮೇಲೆ ದಾಳಿ ನಡೆಸಿದ ದರೋಡೆಕೋರರು ತಡೆಯಲು ಬಂದ ಬ್ಯಾಂಕ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಆದರೂ ಜೀವದ ಹಂಗಿಲ್ಲದೇ ಅವರನ್ನು ತಡೆಯಲು ಮುಂದಾದಾಗ ಹಠಾತ್ ಗುಂಡಿನ ದಾಳಿ ನಡೆಸಿ ಅಂದಾಜು ಒಂದುವರೆ ಕೋಟಿ ರೂ. ದೋಚಿ ಪರಾರಿಯಾದರು


2014: ಹುಬ್ಬಳ್ಳಿ:  ಹುಬ್ಬಳ್ಳಿ ನಗರದ ಚುಕ್​ಬುಕ್ ಸಂಸ್ಥೆಯಿಂದ ಜೂ.28ರಂದು ಆಯೋಜಿಸಿದ್ದ ದೇಶದ ಅತೀ ಉದ್ದನೆಯ ಮಕ್ಕಳ ರೈಲು ಬಂಡಿಯು 2015ರ ಲಿಮ್ಕಾ ರಾಷ್ಟ್ರೀಯ ದಾಖಲೆ ಪುಸ್ತಕದ ಪ್ರಶಂಸೆಗೆ ಪಾತ್ರವಾಯಿತು. ನಗರದ ವಿವಿಧ ಶಾಲೆಗಳ 6ರಿಂದ 12 ವರ್ಷದ 1,600 ಮಕ್ಕಳು ಗೋಕುಲ ರಸ್ತೆಯಲ್ಲಿ 700 ಮೀ. ಉದ್ದದ ರೈಲಿನಂತೆ ಸಂಚರಿಸಿ ಈ ಸಾಧನೆಗೆ ಕಾರಣರಾಗಿದ್ದಾರೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಅರುಣ ಚಿಕ್ಕೊಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಮಕ್ಕಳ ಒಳ ಉಡುಪುಗಳ ತಯಾರಿಕೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಚುಕ್​ಬುಕ್ ಸಂಸ್ಥೆ ಈ ವಿಶಿಷ್ಟ ಕಾರ್ಯಕ್ರಮ ಮೂಲಕ ಹುಬ್ಬಳ್ಳಿಗೆ ಕೀರ್ತಿ ತಂದಿದ್ದು, ಇನ್ನು ಮುಂದೆ ಸಂಸ್ಥೆಯ ಲಾಭಾಂಶದಲ್ಲಿ ಶೇ.10 ಹಣವನ್ನು ಸಮಾಜ ಸೇವೆಗೆ ಮೀಸಲಿಡಲಾಗುವುದು ಎಂದು ಚಿಕ್ಕೊಪ್ಪ ಹೇಳಿದರು.

2014: ಬೆಂಗಳೂರು: ಬೆಲ್ಜಿಯಂನ ವೆಂಡಿ ಜಾನ್ಸ್ ಐಬಿಎಸ್​ಎಫ್ ವಿಶ್ವ ಸ್ನೂಕರ್ ಚಾಂಪಿಯನ್​ಷಿಪ್​ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದ ವೆಂಡಿ ಜಾನ್ಸ್ 3ನೇ ಬಾರಿಗೆ ವಿಶ್ವ ಸ್ನೂಕರ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಕ್ಕಿದರು. ಈ ಮೊದಲು 2006 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಈದಿನ ನಡೆದ 7 ಫ್ರೇಮ್ಳ ಫೈನಲ್ ಪಂದ್ಯದಲ್ಲಿ ವೆಂಡಿ ಜಾನ್ಸ್ 5-2 (31-76, 72-2, 25-65, 74-35, 72-32, 82-23, 60-31)ರಿಂದ ರಷ್ಯಾದ ಅನಾಸ್ತೇಷಿಯಾ ನೆಚಾವೆಯಾ ವಿರುದ್ಧ ಜಯ ಸಾಧಿಸಿದರು. 1998ರಿಂದಲೂ ಬೆಲ್ಜಿಯಂನ ಸ್ನೂಕರ್​ನಲ್ಲಿ ಪಾರಮ್ಯ ಮೆರೆಯುತ್ತಿರುವ ವೆಂಡಿ ಜಾನ್ಸ್, ಅಲ್ಲಿನ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ಸತತವಾಗಿ 4 ಬಾರಿಗೆ ಸೇರಿದಂತೆ ಒಟ್ಟು 12 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ.

2014: ಇಸ್ಲಾಮಾಬಾದ್‌: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನಿ ವಾಯುಪಡೆಯ ಸಮರ ವಿಮಾನಗಳು ನಡೆಸಿದ ವಾಯು ದಾಳಿಗಳಿಗೆ ಕನಿಷ್ಠ 11 ಉಗ್ರರು ಬಲಿಯಾದರು. ಖೈಬರ್‌ ಬುಡಕಟ್ಟು ಜಿಲ್ಲೆಯ ತಿರಾಹ್‌ ಕಣಿವೆ ಪ್ರದೇಶದಲ್ಲಿನ ತಾಲಿಬಾನಿಗಳೊಂದಿಗೆ ನಂಟು ಹೊಂದಿರುವ ಉಗ್ರರ ಹಲವು ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನ ಸೇನೆಯ ಸಮರ ವಿಮಾನಗಳು ದಾಳಿ ನಡೆಸಿದುವು. ತಾರಿಕ್‌ ಅಫ್ರಿದಿ ಉಗ್ರಗಾಮಿ ಗುಂಪಿಗೆ ಸೇರಿದ ಎಂಟು ಮಂದಿ ಉಗ್ರರು ಮತ್ತು ಲಷ್ಕರೆ ಇಸ್ಲಾಮ್‌ಗೆ ಸೇರಿದ ಮೂವರು ಉಗ್ರರು ಈ ದಾಳಿಯಲ್ಲಿ ಹತರಾದರು. ಈ ಪ್ರದೇಶದಲ್ಲಿನ ಉಗ್ರರ ಹಲವಾರು ಅಡಗುದಾಣಗಳನ್ನು ಸಂಪೂರ್ಣವಾಗಿ ನಾಶ ಪಡಿಸಲಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದರು.

2008: ಎರಡೂವರೆ ದಿನಗಳ ಕಾಲ ಮುಂಬೈ ಮಹಾನಗರವನ್ನು ಭಯದ ನೆರಳಿಗೆ ತಳ್ಳಿದ್ದ ಭಯೋತ್ಪಾದಕರನ್ನು ಸತತ ಕಾರ್ಯಾಚರಣೆ ಬಳಿಕ ಈದಿನ ಬೆಳಿಗ್ಗೆ 8ರ ಹೊತ್ತಿಗೆ ಸಂಪೂರ್ಣ ಸದೆ ಬಡಿಯುವಲ್ಲಿ ಕಮಾಂಡೋಗಳು ಯಶಸ್ವಿಯಾದರು. ಅಮೆರಿಕದ ಅವಳಿ ಕಟ್ಟಡ ನಾಶದ ರೀತಿಯಲ್ಲಿ ತಾಜ್ ಹೋಟೆಲನ್ನೇ ಸಂಪೂರ್ಣ ಧ್ವಂಸಗೊಳಿಸುವ ಮತ್ತು ಕನಿಷ್ಠ 5 ಸಾವಿರ ಜನರನ್ನು ಕೊಲ್ಲುವ ಹುನ್ನಾರವನ್ನು ಉಗ್ರರು ರೂಪಿಸಿದ್ದು ಇದರೊಂದಿಗೇ ಬಯಲಿಗೆ ಬಂತು. ತಾಜ್ ಹೋಟೆಲಿನಲ್ಲಿ ಕೇವಲ ಒಬ್ಬ ಉಗ್ರ ಮಾತ್ರ ಇದ್ದಾನೆ ಎಂಬ ನಂಬಿಕೆಯನ್ನು ಹುಸಿಗೊಳಿಸಿ, ಮೂವರು ಉಗ್ರರನ್ನು ಅತ್ಯಂತ ಯೋಜನಾ ಬದ್ಧವಾಗಿ ಮುಗಿಸುತ್ತ ಬಂದ ಎನ್‌ಎಸ್‌ಜಿ ಕಮಾಂಡೋಗಳು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ವಿಜಯದ ನಗೆ ಬೀರಿದರು. ಉಗ್ರರ ಅಟ್ಟಹಾಸಕ್ಕೆ ಸಿಲುಕಿ 22 ಮಂದಿ ವಿದೇಶಿಯರು, 15 ಮಂದಿ ಮಹಾರಾಷ್ಟ್ರ ಪೊಲೀಸರು, ಇಬ್ಬರು ಎನ್‌ಎಸ್‌ಜಿ ಕಮಾಂಡೋಗಳು, 141 ಮಂದಿ ನಾಗರಿಕರ ಸಹಿತ ಒಟ್ಟು 183 ಮಂದಿ ಪ್ರಾಣ ಕಳೆದುಕೊಂಡು 327 ಮಂದಿ ಗಾಯಗೊಂಡರು.

2008: ಮುಂಬೈ ನಗರದಲ್ಲಿ ನಡೆದ 60 ಗಂಟೆಗಳ ಕಾಲದ ಭಯೋತ್ಪಾದನಾ ದಾಳಿಯಿಂದಾಗಿ, ದೇಶದ ಈ ವಾಣಿಜ್ಯ ರಾಜಧಾನಿಗೆ ರೂ 4000 ಕೋಟಿ ಯಷ್ಟು ನಷ್ಟದ ಹೊಡೆತ ಬಿದ್ದಿದೆ ಎಂದು  ಉದ್ಯಮ ಪರಿಣತರು ತಿಳಿಸಿದರು.

2008: ಕರ್ನಾಟಕ ರಾಜ್ಯವನ್ನು ತಲ್ಲಣಗೊಳಿಸಿದ್ದ 2000ನೇ ಇಸವಿಯ ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿ 11 ಆರೋಪಿಗಳಿಗೆ ಮರಣದಂಡನೆ ವಿಧಿಸಿತು. ಉಳಿದ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್.ಎಂ.ಶಿವನಗೌಡರ್ ತೀರ್ಪು ನೀಡಿದರು. ಭಯೋತ್ಪಾದನೆ ಪ್ರಕರಣದಲ್ಲಿ 11 ಮಂದಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು. ದೀನದಾರ್ ಅಂಜುಮನ್ ಸಂಘಟನೆಯ ಸದಸ್ಯರಾದ ಆರೋಪಿಗಳು ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿಯ ಇಗರ್ಜಿಗಳಲ್ಲಿ (ಚರ್ಚ್) ಸ್ಫೋಟ ನಡೆಸಿದ್ದರು. ಶಿಕ್ಷೆಗೆ ಒಳಗಾದವರ ವಿರುದ್ಧ ಭಾರತೀಯ ದಂಡ ಸಂಹಿತೆಯ 121 (ದೇಶದ ವಿರುದ್ಧ ಸಮರ) ಮತ್ತು ಇತರ ಕಲಮುಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. 'ಇದೊಂದು ಐತಿಹಾಸಿಕ ತೀರ್ಪು. ಇದರ ಮೂಲಕ ಸಮಾಜಘಾತುಕರಿಗೆ ನ್ಯಾಯಾಧೀಶರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಮುಂಬೈ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವದ್ದು' ಎಂದು ವಿಶೇಷ ಪಬಿಕ್ಲ್ ಪ್ರಾಸೆಕ್ಯೂಟರ್ ಎಚ್.ಎನ್. ನಿಲೋಗಲ್ ಹೇಳಿದರು. ಸರಣಿ ಇಗರ್ಜಿ (ಚರ್ಚ್) ಸ್ಪೋಟ ಪ್ರಕರಣದ ತನಿಖಾ ತಂಡಕ್ಕೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದೂ ಅವರು ಹೇಳಿದರು. ಹಾಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಶ್ರೀಕುಮಾರ್, ಗುಪ್ತಚರದಳ ಎಡಿಜಿಪಿ ಜ್ಯೋತಿ ಪ್ರಕಾಶ್ ಮಿರ್ಜಿ, ಸಿಓಡಿ ಐಜಿಪಿ ಎಚ್.ಸಿ.ಕಿಶೋರಚಂದ್ರ, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್.ಪೂಜಾರ್, ಮೈಸೂರು ನಗರ (ಕಾನೂನು ಮತ್ತು ಸುವ್ಯವಸ್ಥೆ) ಡಿಸಿಪಿ ವಿ.ಎಸ್.ಡಿಸೋಜ, ಗುಪ್ತದಳ ಮಂಗಳೂರು ಎಸ್ಪಿ ಮಹಂತೇಶ್, ನಿವೃತ್ತ ಡಿವೈಎಸ್ಪಿ ಹಿರೇಮಠ್, ನಿವೃತ್ತ ಎಸ್ಪಿ ಅಪ್ಪಣ್ಣ ಅವರ ತಂಡ ಪ್ರಕರಣದ ತನಿಖೆ ನಡೆಸಿತ್ತು. ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಮರಣದಂಡನೆಗೆ ಗುರಿಯಾದವರು: ಬೆಂಗಳೂರಿನ ಮಹಮ್ಮದ್ ಇಬ್ರಾಹಿಂ (40), ಅಮಾನತ್ ಹುಸೇನ್ ಮುಲ್ಲಾ (58), ಚಿಕ್ಕಬಳ್ಳಾಪುರದ ಅಬ್ದುಲ್ ರಹಮಾನ್ ಸೇಠ್ (50), ಹುಬ್ಬಳ್ಳಿಯ ಸೈಯದ್ ಮುನಿರುದ್ದೀನ್ ಮುಲ್ಲಾ (40), ಆಂಧ್ರಪ್ರದೇಶದವರಾದ ಹಸ್ನುಜಾಮಾ (55), ಶೇಖ್ ಹಷಂ ಅಲಿ (30), ಮಹಮ್ಮದ್ ಶಫುದ್ದೀನ್ (37), ಮಹಮ್ಮದ್ ಅಖಿಲ್ ಅಹಮ್ಮದ್ (29), ಇಜಹಾರ್ ಬೇಗ್ (32), ಸೈಯದ್ ಅಬ್ಬಾಸ್ ಅಲಿ (28), ಮಹಮ್ಮದ್ ಖಾಲಿದ್ ಚೌದರಿ (32). ಜೀವಾವಧಿ ಶಿಕ್ಷೆಗೆ ಗುರಿಯಾದವರು: ಚಿಕ್ಕಬಳ್ಳಾಪುರದ ಮಹಮ್ಮದ್ ಸಿದ್ದಿಕಿ (45), ಆಂಧ್ರಪ್ರದೇಶದ ಮಹಮ್ಮದ್ ಡಿ ಫಾರೂಕ್ ಅಲಿ (30), ಅಬ್ದುಲ್ ಹಬೀಬ್ (48), ಷಂಷುಜಮಾ (49), ಶೇಖ್ ಫರ್ದೀನ್ ವಲಿ (45), ಸೈಯದ್ ಅಬ್ದುಲ್ ಖಾದರ್ ಜಿಲಾನಿ (36), ಮಹಮ್ಮದ್ ಜಿಯಾಸುದ್ದೀನ್ (35), ಹುಬ್ಬಳ್ಳಿಯ ರಿಷ್ ಹಿರೇಮಠ್ (40), ಕೊಕಟನೂರಿನ ಬಷೀರ್ ಅಹಮ್ಮದ್ (52), ಮಹಾರಾಷ್ಟ್ರದ ಮಹಮ್ಮದ್ ಹುಸೇನ್ (45), ಭಟಕುರ್ಕಿಯ ಸಾಂಗಿ ಬಲಬಾಷಾ (45) ಮತ್ತು ಮೀರಾಸಾಬ್ ಕೌಜಲಗಿ (49). ತಲೆಮರೆಸಿಕೊಂಡ ಭಯೋತ್ಪಾದಕರು: ಜಿಯಾವುಲ್ ಹಸನ್ ಮತ್ತು ಆತನ ಮಕ್ಕಳಾದ ಸೈಯದ್ ಖಾಲಿದ್ ಪಾಷಾ, ಜಯೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಲೀಲ್ ಪಾಷಾ ಇವರು ಪಾಕಿಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ನಂಬಲಾಯಿತು. ಶೇಖ್ ಅಮಿರ್ ಮತ್ತು ಚಾಹಬ್ ಸಹ ನಾಪತ್ತೆಯಾದವರಲ್ಲಿ ಒಬ್ಬ.

2008: ನಿಶಾ ಚಂಡ ಮಾರುತದ ಪರಿಣಾಮವಾಗಿ  ತಮಿಳುನಾಡಿನಲ್ಲಿ ಐದು ದಿನಗಳಿಂದ ಸುರಿದ ಭಾರಿ  ಮಳೆಗೆ ಈವರೆಗೆ  ಒಟ್ಟು 103 ಜೀವಗಳು ಬಲಿಯಾಗಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿದರು. ಭಾರಿ ಮಳೆಗೆ 450ಕ್ಕೂ ಹೆಚ್ಚು ಜಾನುವಾರುಗಳೂ ಪಾಣ ಕಳೆದುಕೊಂಡಿದ್ದು, 50,890 ಮನೆಗಳು ಹಾನಿಗೊಂಡಿವೆ ಎಂದು ಅವರು ನುಡಿದರು.

2008: ಬ್ರೆಜಿಲ್ ದೇಶಾದ್ಯಂತ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 100ಕ್ಕೆ ಏರಿತು.

2008:  ದಕ್ಷಿಣ ಆಫ್ಘಾನಿಸ್ಥಾನದಲ್ಲಿ ಆಫ್ಘನ್ ಯೋಧರು ಹಾಗೂ ಅಮೆರಿಕ ನೇತೃತ್ವದ ಜಂಟಿ ಪಡೆಗಳು ನಡೆಸಿದ ವಾಯು ಮತ್ತು ಭೂಮಿಯ ಮೇಲಿನ ದಾಳಿಗಳಲ್ಲಿ  ಒಬ್ಬ ಕಮಾಂಡರ್ ಸೇರಿದಂತೆ 53 ತಾಲಿಬಾನ್ ಉಗ್ರರು ಮೃತರಾದರು.

2007: ಪಾಕಿಸ್ಥಾನದ ಅಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅವರು ಸತತ ಎರಡನೇ ಅವಧಿಗಾಗಿ ಇಸ್ಲಾಮಾಬಾದಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವಾನ್- ಎ -  ಅಧ್ಯಕ್ಷರ ಅರಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗರ್ ಅವರು ಮುಷರಫ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಷರಫ್ ಅವರು ಇದಕ್ಕೆ ಒಂದು ದಿನ ಮೊದಲು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದರು.

2007: ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು. ಬ್ರಿಟಿಷರಂತೆ ಇಂಗ್ಲಿಷಿನಲ್ಲಿ ಮಾತನಾಡದ ಕಾರಣವೊಡ್ಡಿ ಕಂಪೆನಿಯ ಮುಖ್ಯಸ್ಥರು ತನ್ನನ್ನು ಕೆಲಸದಿಂದ ಕಿತ್ತುಹಾಕಿರುವುದಾಗಿ ಚೇತನ್ ಕುಮಾರ್ ಮೆಶ್ರಾಮ್ ಅವರು ಮಂಡಳಿಗೆ ದೂರು ಸಲ್ಲಿಸಿದ್ದರು.

2007: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ಸಾಕ್ಷ್ಯ ಹೇಳುವುದಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಜಸ್ಬೀರ್ ಸಿಂಗ್ ಪ್ರಕಟಿಸಿದರು. ಇದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಸಿಖ್ಖರ ವಿರುದ್ಧ ದೌರ್ಜನ್ಯ, ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಟೈಟ್ಲರ್ ಮೇಲಿದ್ದು, ಅಕ್ಟೋಬರ್  ತಿಂಗಳಲ್ಲಷ್ಟೇ ಸಿಬಿಐ ಅವರ ವಿರುದ್ಧ ತನಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಿತ್ತು.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಪಿ.ವೇಣುಗೋಪಾಲ್ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ ಆರಂಭಿಸಿದ್ದ ತಮ್ಮ ಮುಷ್ಕರವನ್ನು ಏಮ್ಸ್ ವೈದ್ಯರು ಹೈಕೋರ್ಟ್ ಆದೇಶದ ಮೇರೆಗೆ ಹಿಂತೆಗೆದುಕೊಂಡರು.

2007:  ಮಿತ `ವೈನ್' ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ಮಾತಿದೆ. ಆದರೆ ಈ ತೆರನಾದ `ವೈನ್' ಸೇವನೆಯು ಮಹಿಳೆಯರ ರಕ್ತನಾಳದ ಉರಿಯನ್ನು ತಂಪಾಗಿ ಇಡುತ್ತದಂತೆ..! ಸ್ಪೇನ್ ದೇಶದ ಸಂಶೋಧಕರು ಒಂದು ತಿಂಗಳ ಕಾಲ ನಡೆಸಿದ ಪ್ರಯೋಗವೊಂದರಲ್ಲಿ ಕಂಡುಬಂದ ಸತ್ಯಾಂಶವಿದು. ಕೆಲವು ಮಹಿಳೆಯರಿಗೆ ನಿತ್ಯವೂ ಎರಡು ಲೋಟಗಳಷ್ಟು `ಕೆಂಪು ವೈನ್' ಅನ್ನು ನಾಲ್ಕು ವಾರಗಳ ಕಾಲ ನೀಡಲಾಯಿತು. ಆ ಒಂದು ತಿಂಗಳ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಉರಿ ಉಂಟು ಮಾಡುವ ಅಂಶದಲ್ಲಿ ಗಣನೀಯ ಇಳಿತ  ಕಂಡುಬಂದಿತು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ `ಪುಸ್ತಕ ಸೊಗಸು' ಬಹುಮಾನಕ್ಕೆ ಆಯ್ಕೆಯಾದ 4 ಕೃತಿಗಳ ಪೈಕಿ ಮೊದಲ ಬಹುಮಾನವು ಬೆಂಗಳೂರಿನ ಅಸೀಮ ಪ್ರತಿಷ್ಠಾನ ಪ್ರಕಾಶಿಸಿದ ಹರೀಶ್ ಆರ್. ಭಟ್ ಮತ್ತು ಪ್ರಮೋದ್ ಸುಬ್ಬರಾವ್ ಅವರ `ಪಕ್ಷಿ ಪ್ರಪಂಚ' ಪುಸ್ತಕದ ಪಾಲಾಯಿತು. ಬೆಂಗಳೂರಿನ ಚಾರ್ವಾಕ ಪ್ರಕಾಶನ ಹೊರತಂದ ಈರಪ್ಪ ಎಂ. ಕಂಬಳಿ ಅವರ `ಚಾಚಾ ನೆಹರು ಮತ್ತು ಈಚಲು ಮರ' ಕೃತಿಗೆ 2ನೇ ಬಹುಮಾನ, ಅಂಕಿತ ಪುಸ್ತಕ ಹೊರತಂದ ಜಯಂತ ಕಾಯ್ಕಿಣಿ ಅವರ `ಶಬ್ದತೀರ' ಕೃತಿಗೆ 3ನೇ ಬಹುಮಾನ ಹಾಗೂ ಅಭಿನವ ಪ್ರಕಾಶನ ಹೊರತಂದ ಭಾಗೀರಥಿ ಹೆಗಡೆ ಅವರ `ಗುಬ್ಬಿಯ ಸ್ವರ್ಗ' ಕೃತಿಗೆ ಮಕ್ಕಳ ಪುಸ್ತಕ ಬಹುಮಾನ ಲಭಿಸಿತು.

2007: ಸರ್ಕಾರಕ್ಕೆ ಪಾವತಿ ಮಾಡಬೇಕಾದ ಸುಮಾರು 20.3 ಕೋಟಿ ರೂಪಾಯಿಯ ವಾಣಿಜ್ಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ನಿರ್ದೇಶಕ ಸಂಜಯ್ ಖಾನ್ ಅವರು ನಿರ್ದೇಶಕರಾಗಿರುವ ನಗರದಲ್ಲಿನ `ವರ್ಲ್ಡ್ ರೆಸಾರ್ಟ್' ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.

2007: ವಿದೇಶ ಯಾತ್ರೆ ಹಾಗೂ ವಿದೇಶ ವಾಸಕ್ಕೆ ಶಾಸ್ತ್ರ ಹಾಗೂ ಸಂಪ್ರದಾಯಗಳಲ್ಲಿ ವಿರೋಧವಿರುವುದರಿಂದ ಯಾವುದೇ ಕಾರಣಕ್ಕೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ವೇಳೆ ಕೃಷ್ಣನ ಪೂಜೆ ಮಾಡುವಂತಿಲ್ಲ ಎಂದು ಉಡುಪಿ ಅಷ್ಟಮಠಗಳ ಯತಿಗಳು ತಾಕೀತು ಮಾಡಿದರು. ಕೃಷ್ಣಮಠದಲ್ಲಿ ತುರ್ತುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ವಿದೇಶ ಯಾತ್ರೆ ಮಾಡಿದವರಿಗೆ ಕೃಷ್ಣನ ಪೂಜೆಗೆ ಈ ತನಕ ಅವಕಾಶ ನೀಡಲಾಗಿಲ್ಲ. ಆ ನಿಯಮವನ್ನು ಪುತ್ತಿಗೆ ಶ್ರೀಗಳೂ ಪಾಲಿಸಬೇಕಾಗಿದೆ ಎಂದು ಹೇಳಿದರು.

2007: ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ. ವಿ. ಕಾಮತ್ ಅವರನ್ನು  ಫೋಬ್ಸ್  ಏಷ್ಯಾ `ವರ್ಷದ ಉದ್ಯಮಿ' ಎಂಬುದಾಗಿ ಗುರುತಿಸಿತು.

2006: ಇಂಡೋನೇಷ್ಯದ ಮೊಲುಕಾಸ್ ದ್ವೀಪದ ಸಾಗರ ತಳದಲ್ಲಿ ಬೆಳಗ್ಗೆ 7 ಗಂಟೆ ವೇಳೆಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು.

2006: ತಮಿಳುನಾಡಿನ ಮದುರೈಯಲ್ಲಿ ಜನಿಸಿದ ಚಿತ್ರಾ ಭರೂಚ ಅವರು ಬಿಬಿಸಿಯ ಪ್ರಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ನೇಮಕಗೊಂಡರು. ಬಿಬಿಸಿ ಅಧ್ಯಕ್ಷ ಮೈಕೆಲ್ ಗ್ರೇಡ್ ರಾಜೀನಾಮೆ ಕಾರಣ ಭರೂಚ ಅವರು ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.

2006: ಭಾರತೀಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ (67) ಮುಂಬೈಯಲ್ಲಿ ನಿಧನರಾದರು.

2006: ವೈಜ್ಞಾನಿಕ ಸಂಶೋಧನೆಗಳಿಗಾಗಿ ಪ್ರತಿವರ್ಷ ನೀಡಲಾಗುವ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರ ವಿಜ್ಞಾನಿ ಪ್ರೋ. ಶ್ರೀರಾಮ್ ರಾಮಸ್ವಾಮಿ ಆಯ್ಕೆಯಾದರು.

2006: ಮಣಿಪಾಲ ಕೆ.ಎಂ.ಸಿ.ಯ ಪ್ರಾಕ್ತನ ವಿದ್ಯಾರ್ಥಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ರಾಧಾಕೃಷ್ಣ ಸುಧಾಕರ ಶಾನಭಾಗ ಅವರು ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡರು. ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಅವರು ಈ ನೇಮಕ ಮಾಡಿದ್ದು, ಇಂಗ್ಲೆಂಡಿನಲ್ಲಿ ಈ ಹ್ದುದೆಗೆ ನೇಮಕ ಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಶಾನಭೋಗ ಪಾತ್ರರಾದರು.

2006: ಕೇರಳದ ನಿಲಕ್ಕಲ್ ಎಕ್ಯುಮಾನಿಕಲ್ ಟ್ರಸ್ಟ್ ಸ್ಥಾಪಿಸಿದ ಧಾರ್ಮಿಕ ಸದ್ಭಾವನಾ ಪ್ರಶಸ್ತಿಗೆ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ಆಯ್ಕೆಯಾದರು.

2005: ಕುದುರೆಮುಖ ಕಬ್ಬಿಣದ ಅದಿರು ಗಣಿಯನ್ನು 2005ರ ಡಿಸೆಂಬರ್ 31ರ ಒಳಗೆ ಕಾಯಂ ಆಗಿ ಮುಚ್ಚುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಕೋರಿ ಕುದುರೆಮುಖ ಶ್ರಮಶಕ್ತಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.

2005: ಬೆಂಗಳೂರು ಕಾನೂನು ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಪಾದ್ ಗಣಪ ಭಟ್ ಅವರು ಕೇರಳದ ಎರ್ನಾಕುಳಂನಲ್ಲಿ ಸ್ಥಾಪನೆಗೊಂಡಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನ ಪ್ರಥಮ ಕುಲಪತಿಯಾಗಿ ನೇಮಕಗೊಂಡರು.

2005: ದೂರದರ್ಶಿತ್ವ, ವೈಯಕ್ತಿಕ ಪ್ರತಿಭೆ ಹಾಗೂ 21ನೇ ಶತಮಾನದಲ್ಲಿ ವಿಶ್ವಶಾಂತಿಯೆಡೆಗೆ ತೋರಿದ ಆಸಕ್ತಿಗಾಗಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ 2005ರ ಸಾಲಿನ `ವಿಶ್ವ ಸಹಿಷ್ಣುತೆ ಪ್ರಶಸ್ತಿ'ಯನ್ನು ಜರ್ಮನಿಯ ಬರ್ಲಿನ್ನಿನಲ್ಲಿ ಪ್ರದಾನ ಮಾಡಲಾಯಿತು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಪ್ರಶಸ್ತಿ ಪ್ರದಾನ ಮಾಡಿದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕೇಂದ್ರ ಸಚಿವ ಶರದ್ ಪವಾರ್ ಆಯ್ಕೆಯಾದರು. ಹಾಲಿ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಬಣದ ರಣಬೀರ್ ಸಿಂಗ್ ಮಹೇಂದ್ರ ಅವರು ಪವಾರ್ ಕೈಯಲ್ಲಿ ಸೋಲು ಅನುಭವಿಸಿದರು.

2005: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ (65) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.

2001: ಖ್ಯಾತ ಗಾಯಕ ಜಾರ್ಜ್ ಹ್ಯಾರಿಸನ್ ತಮ್ಮ 58ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಲ್ಲಿ ಗಂಟಲ ಕ್ಯಾನ್ಸರ್ ಪರಿಣಾಮವಾಗಿ ನಿಧನರಾದರು.

1993: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ (http://en.wikipedia.org/wiki/J._R._D._Tata) ಅವರು ಜಿನೇವಾದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಲ್ಜಾಕ್, ಪಿಸ್ಸಾರೊ, ಚೋಪಿನ್ ಮತ್ತು ಸರಾಹ ಬೆರ್ನಾರ್ಡ್ ಅವರ ಸಾಲಿನಲ್ಲೇ ಟಾಟಾ ಸಮಾಧಿಯನ್ನೂ ನಿರ್ಮಿಸಲಾಯಿತು.

1988: ಪ್ರಧಾನಿ ಸ್ಥಾನಕ್ಕೆ ರಾಜೀವಗಾಂಧಿ ರಾಜೀನಾಮೆ ನೀಡಿದರು.

1977: ಭಾರತದ ಮೈಕೆಲ್ ಫರೀರಾ ಅವರು ತಮ್ಮ ಮೂರು ವಿಶ್ವ ಬಿಲಿಯರ್ಡ್ಸ್ ಅಮೆಚೂರ್ ಚಾಂಪಿಯನ್ ಶಿಪ್ ಗಳ ಪೈಕಿ ಮೊದಲನೆಯದನ್ನು ಮೆಲ್ಬೋರ್ನಿನಲ್ಲಿ ಗೆದ್ದುಕೊಂಡರು. 1981ರಲ್ಲಿ ನವದೆಹಲಿಯಲ್ಲಿ ಹಾಗೂ 1983ರಲ್ಲಿ ಮಾಲ್ಟಾದಲ್ಲೂ ಅವರು ವಿಶ್ವ ಬಿಲಿಯರ್ಡ್ಸ್ ಹವ್ಯಾಸಿ ಚಾಂಪಿಯನ್ ಶಿಪ್ ಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು.

1977: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಸಾಮರಸ್ಯ ದಿನವಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನ ಪ್ಯಾಲೆಸ್ಟೈನ್ ವಿಭಜನೆ ಕರಡನ್ನು ಸಭೆ ಅಂಗೀಕರಿಸಿತು. ಸ್ವತಂತ್ರ ಯಹೂದ್ಯ ಮತ್ತು ಅರಬ್ ರಾಜ್ಯವಾಗಿ ಪ್ಯಾಲೆಸ್ಟೈನನ್ನು  ವಿಭಜಿಸಲಾಯಿತು. ಪ್ಯಾಲೆಸ್ಟೈನ್ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸಿತು.

1960: ಸಾಹಿತಿ ಚಂದ್ರಿಕಾ ಪುರಾಣಿಕ ಜನನ.

1951: ಭಾಷಾಶಾಸ್ತ್ರ, ಕನ್ನಡ ಶೈಲಿ ಶಾಸ್ತ್ರದಲ್ಲಿ ವಿದ್ವಾಂಸರಾದ ಡಾ. ಬಿ. ಮಲ್ಲಿಕಾರ್ಜುನ ಅವರು ಆರ್. ಭದ್ರಣ್ಣ- ತಾಯಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು.

1947: ಪ್ಯಾಲೆಸ್ಟೈನನ್ನು ಅರಬರು ಮತ್ತು ಯಹೂದ್ಯರ ಮಧ್ಯೆ ವಿಭಜನೆ ಮಾಡಲು ಕರೆ ನೀಡುವ ಗೊತ್ತುವಳಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಅಂಗೀಕರಿಸಿತು.

1945: ಯುಗೋಸ್ಲಾವಿಯಾವು ಗಣರಾಜ್ಯವಾಯಿತು.

1924: ಇಟಲಿಯ ಖ್ಯಾತ ಒಪೇರಾ ಗಾಯಕ ಗಿಯಾಕೊಮೊ ಪುಸ್ಸಿನಿ ಗಂಟಲ್ ಕ್ಯಾನ್ಸರ್ ಪರಿಣಾಮವಾಗಿ ಬ್ರಸ್ಸೆಲ್ಸಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ಲಾ ಬೊಹೇಮ್ ಮತ್ತು ಮ್ಯಾಡೇಮ್ ಬಟರ್ ಫ್ಲೈ ಹಾಡುಗಳು ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement