Thursday, December 24, 2009

ಇಂದಿನ ಇತಿಹಾಸ History Today ನವೆಂಬರ್ 28

ಇಂದಿನ ಇತಿಹಾಸ

ನವೆಂಬರ್ 28

2014:  ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ ನುಸುಳುಕೋರರ ಮಧ್ಯೆ ಈದಿನ ಪುನರಾರಂಭವಾದ ಗುಂಡಿನ ಘರ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಪ್ರವಾಸಕ್ಕೆ ಮುನ್ನವೇ ಮುಕ್ತಾಯಗೊಂಡಿದ್ದು, ಎರಡು ದಿನಗಳ ಘರ್ಷಣೆಯಲ್ಲಿ ಒಟ್ಟು 11 ಜನ ಅಸು ನೀಗಿದರು. ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಗಡಿಯೊಳಕ್ಕೆ ಪಾಕಿಸ್ತಾನದಿಂದ ನುಗ್ಗಲು ಭಯೋತ್ಪಾದಕರ ಗುಂಪು ನಡೆಸಿದ್ದ ಯತ್ನ ಕಡೆಗೂ ವಿಫಲಗೊಂಡಿದೆ. ಜಮ್ಮು ಜಿಲ್ಲೆಯ ಅರ್ನಿಯಾದಲ್ಲಿ ಈದಿನ ಬೆಳಗ್ಗೆ ಗುಂಡಿನ ಕಾಳಗ ಪುನರಾರಂಭಗೊಂಡಿತ್ತು. ಗುಂಡಿನ ಘರ್ಷಣೆ ಕಾರಣ ಪ್ರದೇಶದಲ್ಲಿ ಬೆಳಗ್ಗೆ ಆರಂಭಿಸಲಾಗಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 27.11.2014ರ  ಗುರುವಾರದ ಭೀಕರ ಗುಂಡಿನ ಕಾಳಗದ ವೇಳೆ 10 ಮಂದಿ ಹತರಾಗಿದ್ದರು. ಈದಿನ ಗುಂಡಿನ ಘರ್ಷಣೆ ಮುಕ್ತಾಯದ ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಇನ್ನೊಂದು ಶವ ಪತ್ತೆಯಾಯಿತು. ಇದರೊಂದಿಗೆ ಎರಡು ದಿನಗಳ ಗುಂಡಿನ ಕಾಳಗ ವೇಳೆ ಮೃತರಾದವರ ಸಂಖ್ಯೆ 11ಕ್ಕೆ ಏರಿತು. 11 ಮಂದಿಯ ಪೈಕಿ ನಾಲ್ವರು ನಾಗರೀಕರು, ಮೂವರು ಸೈನಿಕರು ಮತ್ತು ನಾಲ್ವರು ಉಗ್ರಗಾಮಿಗಳು ಎಂದು ಅಧಿಕಾರಿಗಳು ತಿಳಿಸಿದರು.  ಇದಕ್ಕೆ ಮೊದಲು ಊಧಮ್ ಪುರದಿಂದ ಬಂದ ವರದಿಯಂತೆ ಜಮ್ಮು ಜಿಲ್ಲೆಯ ಅರ್ನಿಯಾ ಗಡಿ ವಿಭಾಗದಲ್ಲಿ ಗುಂಡಿನ ಕಾಳಗದ ವೇಳೆ ಹತರಾಗಿದ್ದ ನಾಗರಿಕರ ಶವಗಳನ್ನು ವಶಕ್ಕೆ ಪಡೆಯಲು ಮತ್ತು ಬಂಕರ್ ಒಳಗೆ ಅವಿತಿದ್ದ ಉಗ್ರಗಾಮಿಯನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದಾಗ ಈದಿನ ಮತ್ತೆ ಹೊಸದಾಗಿ ಗುಂಡಿನ ಸದ್ದುಗಳು ಮೊಳಗಿದವು. ಭಾರತ - ಪಾಕ್ ಗಡಿಗೆ ಸಮೀಪ ಎರಡು ಸೇನಾ ಬಂಕರ್​ಗಳ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದ ವೇಳೆಯಲ್ಲಿ ಮೂವರು ನಾಗರೀಕರು ಮತ್ತು ಹಲವಾರು ಮಂದಿ ಸೇನಾ ಸಿಬ್ಬಂದಿ ಮೃತರಾದ ಒಂದು ದಿನದ ಬಳಿಕ ಅಲ್ಲೇ ಅವಿತುಕೊಂಡ ಉಗ್ರಗಾಮಿಗಳ ಪತ್ತೆಗಾಗಿ ಸಶಸ್ತ್ರ ಪಡೆಗಳು ಈದಿನ ಶೋಧ ಆರಂಭಿಸಿದ್ದವು. ಕಾಳಗ ಕಾಲದಲ್ಲಿ ಮೃತರಾದ ನಾಗರೀಕರ ಶವಗಳನ್ನು ಪಡೆಯಲು ಅರ್ನಿಯಾದ ಕಾಳಗ ಸ್ಥಳದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದಾಗ ಅವರ ಮೇಲೆ ಉಗ್ರಗಾಮಿಗಳು ಅವಿತುಕೊಂಡಿದ್ದ ಬಂಕರ್ ಒಂದರಿಂದ ಗುಂಡುಗಳು ಹಾರಲಾರಂಭಿಸಿದವು. ಬೆನ್ನಲ್ಲೇ ಭದ್ರತಾ ಪಡೆಗಳು ಗುಂಡು ಹಾರಿಸಿದವು. ಗುಂಡಿನ ಘರ್ಷಣೆ ನಡೆಯುತ್ತಿದ್ದ ಕಾರಣ ಹತರಾಗ ನಾಗರೀಕರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
          



2014: ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಸೂಚಿಸುವುದರೊಂದಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಬದಲು ಮೂರನೆಯ ಭಾಷೆಯಾಗಿ ಸಂಸ್ಕೃತ ಕಡ್ಡಾಯಗೊಳಿಸಬೇಕು ಎಂಬ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾಯಿತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು ಜರ್ಮನಿಸಂಸ್ಕೃತ  ವಿವಾದಲ್ಲಿ ವಿದ್ಯಾರ್ಥಿಗಳನ್ನು ಯಾಕೆ ಬಲಿಪಶು ಮಾಡುತ್ತೀರಿ? ನಿಮ್ಮ ಕೈಯಿಂದ ಆದ ತಪ್ಪಿಗೆ ಅವರು ಏಕೆ ಶಿಕ್ಷೆ ಅನುಭವಿ­ಸಬೇಕು ಎಂದು ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು.  ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್ ಬೋಧಿಸಬೇಕು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಗೊಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ್ ನಡುವೆ ಒಪ್ಪಂದ ಆಗಿದೆ. ಆದರೆ, ಇದು ಅಕ್ರಮ ಎಂದು ಅಟಾರ್ನಿ ಜನರಲ್ ಮುಕುಲ್ ರಸ್ತೋಗಿ ಕೋರ್ಟ್ಗೆ ಹೇಳಿದರುಆದರೆ, ವಾದವನ್ನು ಒಪ್ಪದ ಕೋರ್ಟ್, ನೀವು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ. ಮುಖ್ಯ ಪರೀಕ್ಷೆಗೆ ಇನ್ನು ಕಲವೇ ತಿಂಗಳುಗಳು ಮಾತ್ರ ಬಾಕಿ ಇದೆ. ಹಂತದಲ್ಲಿ ರೀತಿಯ ಬದಲಾವಣೆಗಳನ್ನು ಮಾಡುವುದು ಸರಿಯಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ  ಯಥಾಸ್ಥಿತಿಯೇ ಮುಂದುವರಿಯಲಿ ಎಂದು ಸೂಚಿಸಿತು. ಕೋರ್ಟ್ ತೀರ್ಪಿನಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ 70,000 ವಿದ್ಯಾರ್ಥಿಗಳು ಮತ್ತು ಜರ್ಮನ್ ಭಾಷೆ ಕಲಿಯುತ್ತಿದ್ದ 700 ಶಿಕ್ಷಕರು ನಿಟ್ಟುಸಿರು ಬಿಟ್ಟರು.


2014: ನವದೆಹಲಿ: ಇರಾಕ್​ನಲ್ಲಿ ಐಎಸ್​ಐಎಸ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ 39 ಮಂದಿ ಭಾರತೀಯರು ಇನ್ನೂ ಜೀವಂತವಾಗಿದ್ದಾರೆ ಎಂದು ಭಾರತ
ಸರ್ಕಾರ ನಂಬಿದೆ. ಅವರನ್ನು ಕೊಲ್ಲಲಾಗಿದೆ ಎಂಬ ವರದಿಗಳು ದೃಢಪಟ್ಟಿಲ್ಲ ಎಂದು ಸಂಸತ್ತಿಗೆ ತಿಳಿಸಲಾಯಿತು. ಉಗ್ರಗಾಮಿಗಳು ಸೆರೆ ಹಿಡಿದು ಇಟ್ಟಿರುವ ಭಾರತೀಯರ ಬಗ್ಗೆ ಸದಸ್ಯರು ತೀವ್ರ ಕಳವಳ ವ್ಯಕ್ತ ಪಡಿಸಿದ ಸಂದರ್ಭದಲ್ಲಿ ಸರ್ಕಾರ ಈ ವಿಚಾರವನ್ನು ಸ್ಪಷ್ಟ ಪಡಿಸಿತು. ಒತ್ತೆಯಾಳಾಗಿ ಇಟ್ಟುಕೊಂಡ 39 ಮಂದಿ ಭಾರತೀಯರನ್ನು ಉಗ್ರಗಾಮಿಗಳು ಐದು ತಿಂಗಳ ಹಿಂದೆ ಗುಂಡಿಟ್ಟು ಕೊಂದು ಹಾಕಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದರು. ತಪ್ಪಿಸಿಕೊಂಡವರು ಎಂದು ಹೇಳಲಾದ ಇಬ್ಬರು ಬಾಂಗ್ಲಾದೇಶೀಯರ ಪೈಕಿ ಹರಜೀತ್ ಎಂಬವರನ್ನು ಉಲ್ಲೇಖಿಸಿ ಮಾಧ್ಯಮಗಳು ಈ ವರದಿ ಮಾಡಿವೆ. ಅವರು ಭಾರತೀಯರನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಅದನ್ನು ದೃಢ ಪಡಿಸುವಂತಹ ಯಾವುದೇ ಸಾಕ್ಷ್ಯಾರವೂ ಇಲ್ಲ ಎಂದು ಸುಷ್ಮಾ ಹೇಳಿದರು. 'ಒಂದು ಮೂಲ ದೃಢಪಡದೇ ಇರುವ ಈ ಸುದ್ದಿಯನ್ನು ನೀಡಿದೆ. ಆದರೆ ಉಳಿದ 6 ವಿವಿಧ ಮೂಲಗಳು ಅವರನ್ನು ಕೊಲ್ಲಲಾಗಿಲ್ಲ ಎಂದು ಸರ್ಕಾರಕ್ಕೆ ತಿಳಿಸಿವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ನುಡಿದರು. ಕಾಂಗ್ರೆಸ್ ಉಪನಾಯಕ ಆನಂದ ಶರ್ಮ ಅವರು ರಾಜ್ಯಸಭೆಯಲ್ಲಿ ಮತ್ತು ಪಕ್ಷ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಿಗೂ ಸುಷ್ಮಾ ಒಂದೇ ಮಾದರಿಯ ಹೇಳಿಕೆ ನೀಡಿದರು. ಸರ್ಕಾರವು ಒಬ್ಬ ವ್ಯಕ್ತಿ ಹೇಳಿದ್ದನ್ನು ನಂಬಬೇಕೇ ಅಥವಾ ಇತರ ಆರು ಮೂಲಗಳನ್ನು ನಂಬಬೇಕೇ ಎಂದು ಸದನವನ್ನು ಪ್ರಶ್ನಿಸಿದ ಸುಷ್ಮಾ, ಜವಾಬ್ದಾರಿಯುತ ಸರ್ಕಾರವಾಗಿ ಸ್ಪಷ್ಟವಾದ ಸಾಕ್ಷ್ಯಲಭಿಸುವವರೆಗೂ ಈ ಬಗ್ಗೆ ಶೋಧಿಸುವುದನ್ನು ಬಿಟ್ಟುಕೊಡಲು ತಾನು ತಯಾರಿಲ್ಲ ಎಂದು ಹೇಳಿದರು. 'ಅವರ ಹೇಳಿಕೆಯನ್ನು ನಾವು ಅಂಗೀಕರಿಸುವುದಿಲ್ಲ. ನಮ್ಮ ಪ್ರಾರ್ಥನೆಗಳು ಮತ್ತು ಭರವಸೆಗಳು ಜೀವಂತವಾಗಿವೆ. ಸುರಕ್ಷಿತ ಬಿಡುಗಡೆಗಾಗಿ ನಮ್ಮ ಶೋಧ ಮುಂದುವರೆಯುತ್ತದೆ. ಅವರನ್ನು ಜೀವಂತವಾಗಿ ಶೋಧಿಸಿ, ಸುರಕ್ಷಿತವಾಗಿ ಮನೆಗಳಿಗೆ ಮುಟ್ಟಿಸುವ ಆಶಯ ಇಟ್ಟುಕೊಳ್ಳುವುದು ನನ್ನ ಕರ್ತವ್ಯ' ಎಂದು ಸ್ವರಾಜ್ ನುಡಿದರು.

2014: ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್​ಡಿಒ 2001ರಿಂದ 2,776 ವಿಜ್ಞಾನಿಗಳ ಕೊರತೆ ಎದುರಿಸುತ್ತಿದೆ ಎಂದು ಸರ್ಕಾರ ಹೇಳಿತು. ಈ ಕುರಿತು ಲೋಕಸಭೆಗೆ ಪತ್ರ ಮುಖೇನ ಮಾಹಿತಿ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ ಸಾಕಷ್ಟು ಕೊರತೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಬೇಕಾದ ಜನಬಲದ ಕೊರತೆ ನೀಗಿಸಿಕೊಳ್ಳಬೇಕಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಒಟ್ಟು 4966 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅನಿವಾರ್ಯತೆಯ ಬಗ್ಗೆ ತಿಳಿಸಲಾಗಿದೆ. 2,776 ವಿಜ್ಞಾನಿಗಳ ನೇಮಕ ಕೂಡ ಇದರಲ್ಲೊಳಗೊಂಡಿರುತ್ತದೆ  ಎಂದು ತಿಳಿಸಿದರು. ಹೊಸ ನೇಮಕಾತಿಗೆ ಒಪ್ಪಿಗೆ ಸಿಕ್ಕ ಬಳಿಕ ಐದು ಹಂತಗಳಲ್ಲಿ 2,776 ವಿಜ್ಞಾನಿಗಳ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ಹಂತದಲ್ಲಿ 555 ವಿಜ್ಞಾನಿಗಳಂತೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

2014: ಊಧಮ್​ ಪುರ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಳೆದ 30 ವರ್ಷಗಳಿಂದ ನಿಂತಲ್ಲಿಯೇ ನಿಂತುಕೊಂಡಿದೆ. ಇಲ್ಲಿನ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್​ ಮೇಲ್ ಮಾಡುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಚುನಾವಣೆಗೆ ಮುಂಚಿತವಾಗಿ ಊಧಮ್ ಪುರದಲ್ಲಿ ಬಿಜೆಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ 'ಭಾರತದಲ್ಲಿ ಒಂದು ಡಜನ್ 
ಪ್ರಧಾನಿಗಳಿದ್ದರು,  ಆದರೆ ಯಾರಿಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ನನಗೆ ಲಭಿಸಿದಷ್ಟು ಅವಕಾಶವೇ ಸಿಗಲಿಲ್ಲ. ನಾನು ದೀಪಾವಳಿಯ ದಿನಗಳನ್ನು ಇಲ್ಲಿನ ಪ್ರವಾಹ ಸಂತ್ರಸ್ಥರ ಜೊತೆಗೆ ಕಳೆದೆ. ನನ್ನ ನಿರ್ಧಾರ ರಾಜಕೀಯ ಸಲುವಾಗಿ ಅಥವಾ ಓಟುಗಳನ್ನು ಗಳಿಸುವುದಕ್ಕಾಗಿ ಮಾಡಿದ್ದಲ್ಲ' ಎಂದು ಅವರು ನುಡಿದರು. '30 ವರ್ಷಗಳಲ್ಲಿ ಏನು ಆಗಿಲ್ಲವೋ ಅದನ್ನು ನಾನು ಮುಂದಿನ ಐದು ವರ್ಷಗಳಲ್ಲಿ ಮಾಡದಿದ್ದರೆ ನೀವು ನನ್ನನ್ನು ಜವಾಬ್ದಾರಿಯನ್ನಾಗಿ ಮಾಡಬಹುದು ಮತ್ತು ಪ್ರಶ್ನಿಸಲೂ ಬಹುದು. 30 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಥಿ ಸ್ಥಗಿತಗೊಂಡಿದೆ. ಆಳುವ ಮತ್ತು ವಿರೋಧ ಪಕ್ಷಗಳ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್​ವೆುೕಲ್ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ' ಎಂದು ಮೋದಿ ಹೇಳಿದರು. 'ನಾವು ಕಣಿವೆಯ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಅದಕ್ಕಾಗಿ ನನಗೆ ನಿಮ್ಮ ನೆರವು ಬೇಕು' ಎಂದು ಪ್ರಧಾನಿ ನುಡಿದರು.

2014: ಕಠ್ಮಂಡು: ನೇಪಾಳದ ರಾಜಧಾನಿಯ ಮೂರು ದಿನಗಳ ಯಶಸ್ವೀ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಸಾದರು. ಮೂರು ದಿನಗಳ ಪ್ರವಾಸದ ಅವಧಿಯಲ್ಲಿ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಆರು ಸದಸ್ಯರ ಸಾರ್ಕ್ ರಾಷ್ಟ್ರಗಳ ನಾಯಕರ ಜೊತೆಗೆ ನೆರೆಹೊರೆ ಬಾಂಧವ್ಯ ವೃದ್ಧಿ ಹಾಗೂ ಅಭಿವೃದ್ಧಿಗೆ ಆದ್ಯತೆ ಮೇರೆಗೆ ದ್ವಿಪಕ್ಷೀಯ
ಮಾತುಕತೆಗಳನ್ನು ನಡೆಸಿದರು. ನಿರೀಕ್ಷೆಯಂತೆಯೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಜೊತೆಗೆ ಪ್ರತ್ಯೇಕ ಮಾತುಕತೆಯನ್ನು ಅವರು ನಡೆಸಲಿಲ್ಲ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೇಪಾಳಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ ಪ್ರಧಾನಿ ಟ್ವಿಟ್ಟರ್​ನಲ್ಲಿ ನೇಪಾಳಕ್ಕೆ ಸಂಬಂಧಿಸಿದಂತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. 'ನೇಪಾಳಕ್ಕೆ ಮತ್ತೊಮ್ಮೆ ಬಂದಿರುವುದು ಅದ್ಭುತ. ಇಲ್ಲಿ ಲಭಿಸಿದ ಆತ್ಮೀಯ ಸ್ವಾಗತವನ್ನು ಎಂದಿಗೂ ಮರೆಯಲಾರೆ' ಎಂದು ನೇಪಾಳದ ರಾಜಧಾನಿಯಲ್ಲಿ ಬಂದಿಳಿದೊಡನೆಯೇ ಅವರು ಟ್ವೀಟ್ ಮಾಡಿದ್ದರು. ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಜೊತೆಗಿನ ಮಾತುಕತೆ ಕಾಲದಲ್ಲಿ ಪ್ರವಾಸೋದ್ಯಮ ಮತ್ತು ಯುವ ವಿನಿಮಯ ಹಾಗೂ ಮೋಟಾರು ವಾಹನ ಒಪ್ಪಂದ ಸೇರಿದಂತೆ ಉಭಯ ರಾಷ್ಟ್ರಗಳ ನಡುವಣ ಬಾಂಧ್ಯವ ವೃದ್ಧಿಗೆ ನೆರವಾಗುವ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಯೋಧ್ಯಾ-ಜನಕಪುರ, ಕಠ್ಮಂಡು- ವಾರಾಣಸಿ ಹಾಗೂ ಲುಂಬಿನಿ-ಬುದ್ಧ ಗಯಾ ಮಧ್ಯೆ ಪರಸ್ಪರ ಸಹಕಾರ ಅಭಿವೃದ್ಧಿಯ ಮೂರು ಅವಳಿನಗರ ಒಪ್ಪಮದಗಳಿಗೆ ಸಹಿಹಾಕಲಾಯಿತು. ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್) ಮಾರ್ಕ್ 3ನ್ನು ಪ್ರಧಾನಿ ಮೋದಿ ನೇಪಾಳಿ ಸೇನೆಗೆ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು 150 ಕೋಟಿ ರೂಪಾಯಿ ವೆಚ್ಚದ ಆಘಾತ ಕೇಂದ್ರ (ಟ್ರೂಮಾ ಸೆಂಟರ್)ವನ್ನೂ ನೇಪಾಳದಲ್ಲಿ ಉದ್ಘಾಟಿಸಿದರು. ಕಠ್ಮಂಡುವಿನಿಂದ ನವದೆಹಲಿಗೆ ಬಸ್ ಸೇವೆಯನ್ನೂ ಉದ್ಘಾಟಿಸಲಾಯಿತು.

2014: ನವದೆಹಲಿ: ಎಬೋಲ ಬಾಧಿತ ದೇಶಗಳಿಂದ ಬರುವವರು ಎಬೋಲ ಇಲ್ಲ ಎಂಬುದನ್ನು ದೃಢಪಡಿಸುವ ಪ್ರಮಾಣಪತ್ರ ತರಬೇಕೆಂದು ಭಾರತ ಹೇಳಿತು. ಎಬೋಲ ಗುಣಮುಖನಾಗಿ ಬಂದ ವ್ಯಕ್ತಿಯೊಬ್ಬನ ವೀರ್ಯದಲ್ಲಿ ಎಬೋಲ ವೈರಾಣು ಪತ್ತೆಯಾದ ಬಳಿಕ ರೋಗದ ಹಾವಳಿಯಿರುವ ದೇಶದಿಂದ ಬರುವವರು ತಮ್ಮ ದೇಹದ ಸ್ರಾವಗಳಲ್ಲಿ ಎಬೋಲ ವೈರಾಣು ಇಲ್ಲ ಎನ್ನುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿತು. ಎಬೋಲದಿಂದ ಗುಣಮುಖರಾಗಿದ್ದರೂ ಸಂಬಂಧಿಸಿದ ದೇಶ ಅವರಿಗೆ ನೋ ಎಬೋಲ ಪ್ರಮಾಣಪತ್ರ ನೀಡಿರದಿದ್ದರೆ ಅಂತವರು ಆಸ್ಪತ್ರೆಯಿಂದ ಬಿಡುಗಡೆಯಾದ  90 ದಿನಗಳ ನಂತರವೇ ಭಾರತಕ್ಕೆ ಬರಬೇಕು ಎಂದು ಆರೋಗ್ಯ ಸಚಿವ ಜೆ. ಪಿ. ನಡ್ಡ ಲೋಕಸಭೆಗೆ ತಿಳಿಸಿದರು. ನೋ ಎಬೋಲ ಪ್ರಮಾಣಪತ್ರದ ಬಗ್ಗೆ ಭಾರತ ಐವರಿ ಕೋಸ್ಟ್‌, ಸೆನೆಗಲ್‌, ನೈಜೀರಿಯ, ಘಾನಾ ಮತ್ತು ನೈಗರ್ದೇಶಗಳಲ್ಲಿರುವ ತನ್ನ ದೂತವಾಸಕ್ಕೆ ಮಾಹಿತಿ ನೀಡಿದೆ.

2014: ತಿರುಚಿನಾಪಲ್ಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಮಾಜಿ ಕೇಂದ್ರ ಸಚಿವ ಜಿ.ಕೆ.ವಾಸನ್  ಹೊಸ ಪಕ್ಷದ ಹೆಸರು ಬಿಡುಗಡೆ ಮಾಡಿದರು. ತಂದೆ ಜಿ.ಕೆ. ಮೂಪ್ಪನಾರ್ ಕಟ್ಟಿ ಬೆಳೆಸಿದ್ದ ತಮಿಳು ಮಾನಿಲ ಕಾಂಗ್ರೆಸ್ ಪಕ್ಷವನ್ನೇ ಮತ್ತೆ ಬೆಳೆಸಲು ಮುಂದಾದ ವಾಸನ್, ತಂದೆಯ ಹೆಸರನ್ನು ಸೇರ್ಪಡೆ ಮಾಡಿ 'ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್' ಎಂದು ಪಕ್ಷಕ್ಕೆ ಮರು ನಾಮಕರಣ ಮಾಡಿದರು. ಈದಿನ ನಡೆದ ಸಮಾರಂಭದಲ್ಲಿ ಪಕ್ಷದ ಹೊಸ ಹೆಸರು ಪ್ರಕಟಿಸಲಾಯಿತು. ಸಮಾರಂಭದಲ್ಲಿ 50,000ಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು.

2014: ನವದೆಹಲಿ/ಕೋಲ್ಕತ: ಭಾರತೀಯ ಸೇನಾ ಪಡೆಯ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್(ಜಿಆರ್ಎಸ್) ಇದೇ ಮೊದಲ ಬಾರಿ ಸಮರನೌಕೆಯನ್ನು ಮಾರಿಷಸ್ಗೆ ರಫ್ತು ಮಾಡಲು ಮುಂದಾಯಿತು. 'ಸಿಜಿಎಸ್ ಬರಾಕುಡಾ' ಸಮರನೌಕೆಯನ್ನು ಮುಂದಿನ ಡಿಸೆಂಬರ್ನಲ್ಲಿ ರಫ್ತು ಮಾಡಲಾಗುತ್ತಿದೆ ಎಂದು ರೇರ್ ಅಡ್ಮಿರಲ್ .ಕೆ. ವರ್ವ ಮಾಹಿತಿ ನೀಡಿದರು. 300 ಕೋಟಿ ರೂ. ಮೌಲ್ಯದ ಸಮರನೌಕೆ ರಫ್ತು ರಕ್ಷಣಾ ಕ್ಷೇತ್ರದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಯಾಗಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕಕ್ಕೂ ರಕ್ಷಣಾ ಸಾಮಗ್ರಿ ರಫ್ತು ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. 2011ರಿಂದ  ಭಾರತ 1800 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ.  
ಎಚ್ಎಎಲ್ ಜತೆ ಒಪ್ಪಂದ: ಅಂತೆಯೇ ಎಚ್ಎಎಲ್ ಜತೆ ಅಂದಾಜು 100 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೂ ಮಾರಿಷಸ್ ಸರ್ಕಾರ ಸಹಿ ಮಾಡಿತು. ಎಚ್ಎಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಬ್ರಹ್ಮಣ್ಯನ್ ಮತ್ತು ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿ ಒಪ್ಪಂದ ಏರ್ಪಟ್ಟಿತು. ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಕನ್ ಓಯಿ ಫಾಂಗ್ ವೆಂಗ್ ಪೂರುನ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ಎಚ್ಎಎಲ್ ಚೇರ್ಮನ್ ಆರ್ಕೆ ತ್ಯಾಗಿ ತಿಳಿಸಿದರು.

2014: ಬೆಂಗಳೂರು: 12 ಬಾರಿ ವಿಶ್ವ ಚಾಂಪಿಯನ್ ಆದ ಪಂಕಜ್ ಆಡ್ವಾಣಿ ಅವರನ್ನು ಚೀನಾದ 14 ವರ್ಷ ವಯಸ್ಸಿನ ಯಾನ್ ಬಿಂಗ್ಟೋ ಮಣಿಸುವ ಮೂಲಕ ಅಚ್ಚರಿಯ ಗೆಲುವು ಸಾಧಿಸಿದರು. ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಟೂರ್ನಿಯಲ್ಲಿ ಈದಿನ ನಡೆದ ಪಂದ್ಯದಲ್ಲಿ ಯಾನ್ 6-4 ಅಂತರದಿಂದ ಪಂಕಜ್ ಆಡ್ವಾಣಿ ಅವರನ್ನು ಮಣಿಸಿದರು. ಟೂರ್ನಿಯ ಆರಂಭದಿಂದ ಉತ್ತಮ ಪ್ರದರ್ಶನ ನೀಡುತ್ತ ಬಂದ ಪಂಕಜ್ ಆಡ್ವಾಣಿ ಚೀನಾದ ಬಾಲಕನ ವಿರುದ್ಧ ಆಡುವಾಗ ಏಕಚಿತ್ತದ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮೊದಲ ಫ್ರೇಮ್ ಸ್ಪರ್ಧೆಯಲ್ಲಿ 38-63ರಿಂದ ಸೋಲನುಭವಿಸಿದರು. ನಂತರದ ಫ್ರೇಮ್ಲ್ಲಿ 47-75 ಅಂತರದಿಂದ ಪರಾಭವಗೊಂಡರು. ನಂತರದ ಮೂರು ಫ್ರೇಮ್ಲ್ಲಿ ಪಂಕಜ್ 107-0, 68-10 ಮತ್ತು 60-16 ಅಂತರದಿಂದ ಗೆಲುವು ಸಾಧಿಸಿ 3-2ರಿಂದ ಮುನ್ನಡೆ ಕಂಡುಕೊಂಡರು. ಆದರೆ 6ನೇ ಫ್ರೇಮ್ಲ್ಲಿ ಪಂಕಜ್ ನಿರೀಕ್ಷೆಯ ಆಟ ಪ್ರದರ್ಶಿಸದೆ ಎದುರಾಳಿಯ ಜಯಕ್ಕೆ ಕಾರಣರಾದರು. ಯಾನ್ 83-4ರಿಂದ ಜಯಿಸಿ 3-3 ಸಮಬಲ ಸಾಧಿಸಿದರು. ರೋಚಕ ಘಟ್ಟಕ್ಕೆ ತಲುಪಿದ್ದ ಸೆಣಸಾಟದ 7ನೇ ಫ್ರೇಮ್ಲ್ಲಿ ಪಂಕಜ್ ಹಿಡಿತ ಸಾಧಿಸಿ 89-40ರಿಂದ ಗೆದ್ದು ಮುನ್ನಡೆ ಕಂಡುಕೊಂಡರು. ಯಾನ್ ಹೋರಾಟ ಅಷ್ಟಕ್ಕೇ ನಿಂತಿರಲಿಲ್ಲ. ಅಂತಿಮ ಮೂರೂ ಫ್ರೇಮ್ಲ್ಲಿ 40-67, 26-71 ಮತ್ತು 40-59 ಅಂತರದಿಂದ ಯಾನ್ ಬಲಿಷ್ಠ ಎದುರಾಳಿಯನ್ನು ಮಣಿಸಿ ಜಯಭೇರಿ ಬಾರಿಸಿ ಕೇಕೆ ಹಾಕಿದರು. ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕರ್ನಾಟಕದ ಶ್ರೇಷ್ಠ ಆಟಗಾರ ಪಂಕಜ್, ಏಕಾಗ್ರತೆಗೆ ಪ್ರೇಕ್ಷಕರಿಂದ ವಿಪರೀತವಾದ ಅಡಚಣೆ ಉಂಟಾಯಿತು. ಇದರಿಂದಾಗಿ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಯಾನ್ ಶ್ರೇಷ್ಠ ಆಟ ಪ್ರದರ್ಶಿಸಿದ್ದಾನೆಂದು ಹೇಳಲು ಸಾಧ್ಯವಿಲ್ಲ. ಅವರ ಪ್ರದರ್ಶನದಿಂದ ನಾನು ಕಲಿಯಬೇಕಾಗಿದ್ದಿಲ್ಲ ಎಂದು ಹೇಳಿದ್ದಾರೆ.

2008: ಮುಂಬೈಯಲ್ಲಿ ನಡೆದ ಎರಡು ದಿನಗಳ ಸತತ ಭಾರಿ ಹೋರಾಟದ ಬಳಿಕ ಈದಿನ ರಾತ್ರಿ ಉಗ್ರರ ದನಿಯನ್ನು ಉಡುಗಿಸುವಲ್ಲಿ ಕಮಾಂಡೋಗಳು ಯಶಸ್ಸು ಸಾಧಿಸಿದರು. ದೇಶದಲ್ಲಿ ಇದೇ ಪ್ರಥಮ ಬಾರಿಗೆ ಮಹಾನಗರವೊಂದರಲ್ಲಿ ಸತತ 48 ಗಂಟೆಗಳ ಕಾಲ ಉಗ್ರರೊಂದಿಗೆ ನಡೆದ ಕಾಳಗ ಇದೆನಿಸಿತು. ನಾರಿಮನ್ ಹೌಸಿನಲ್ಲಿ 5 ಮಂದಿ ಒತ್ತೆಯಾಳುಗಳು ಮತ್ತು ಇಬ್ಬರು ಉಗ್ರರು ಮೃತಪಟ್ಟಿರುವುದು ಸಂಜೆ ಹೊತ್ತಿಗೆ ದೃಢಪಟ್ಟಿತು. ಇದೇ ಪ್ರಥಮ ಬಾರಿಗೆ ಜನನಿಬಿಡ ನಗರ ಪ್ರದೇಶದಲ್ಲಿ ಉಗ್ರರ ಬಂದೂಕಿನ ಬೆದರಿಕೆಯ ನಡುವೆಯೂ ವಾಯುಪಡೆ ಹೆಲಿಕಾಪ್ಟರ್ ಮೂಲಕ ಎನ್‌ಎಸ್‌ಜಿ ಕಮಾಂಡೋಗಳನ್ನು ನಾರಿಮನ್ ಹೌಸ್ ಕಟ್ಟಡದ ಮೇಲ್ಭಾಗಕ್ಕೆ ಇಳಿಸಿ ಅತ್ಯಂತ ಯೋಜನಾಬದ್ಧವಾಗಿ ನಡೆದ ಕಾರ್ಯಾಚರಣೆಗೆ ಇಡೀ ದೇಶವೇ ಸಾಕ್ಷಿಯಾಯಿತು. ಈ ಕಾರ್ಯಾಚರಣೆಗೆ 'ಆಪರೇಷನ್ ಬ್ಲಾಕ್ ಟಾರ್ನೆಡೊ' ಎಂಬ ಹೆಸರು ಇಡಲಾಗಿತ್ತು. ಹಗಲು ವೇಳೆ ಇಂಥ ಕಾರ್ಯಾಚರಣೆಯನ್ನು ಈ ಹಿಂದೆ ದೇಶದಲ್ಲಿ ಎಲ್ಲೂ ಕೂಡ ನಡೆಸಿರಲಿಲ್ಲ. ಎನ್‌ಎಸ್‌ಜಿ ಕಮಾಂಡೋಗಳು ನಾರಿಮನ್  ಭವನದ ಮೇಲ್ತುದಿ ಮಾತ್ರವಲ್ಲ; ಕೆಳಗಿನಿಂದಲೂ ಉಗ್ರರ ವಿರುದ್ಧ  ಕಾರ್ಯಾಚರಣೆ ನಡೆಸಿದರು. ಆದರೆ ನಾರಿಮನ್ ಹೌಸ್ ಸೆಣಸಾಟದ ವೇಳೆ ಬೆಂಗಳೂರು ಮೂಲದ ಎನ್‌ಎಸ್‌ಜಿ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್ (31) ಮತ್ತು ಇನ್ನೊಬ್ಬ ಎನ್‌ಎಸ್‌ಜಿ ಕಮಾಂಡೊ ವೀರ ಮರಣ ಅಪ್ಪಿದರು. ಒಬೆರಾಯ್ ಹೋಟೆಲಿನಲ್ಲಿ ಇನ್ನೂ 24 ಮೃತದೇಹಗಳು ಪತ್ತೆಯಾಗುವುದರೊಂದಿಗೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಮೃತರಾದವರ ಸಂಖ್ಯೆ 8 ಮಂದಿ ವಿದೇಶಿಯರ ಸಹಿತ 200ಕ್ಕೆ ಏರಿದಂತಾಯಿತು. ಕನಿಷ್ಠ 11 ಮಂದಿ ಉಗ್ರರು ಹತರಾದರು. ಒಬ್ಬನನ್ನು ಜೀವಂತವಾಗಿ ಬಂಧಿಸಲಾಯಿತು. ಈ ಬಂಧಿತ ಉಗ್ರ ಪಾಕಿಸ್ಥಾನಿ ಪ್ರಜೆ ಎಂಬುದನ್ನು ಮಹಾರಾಷ್ಟ್ರದ ಗೃಹ ಸಚಿವ ಆರ್. ಆರ್. ಪಾಟೀಲ್ ದೃಢಪಡಿಸಿದರು.

2008: 2007ರಲ್ಲಿ ವಿಶ್ವದ ಹಿರಿಯ ಅಜ್ಜಿ ಎನ್ನುವ ಖ್ಯಾತಿಗೆ ಪಾತ್ರರಾದ ಈಡನ್ ಪಾರ್ಕರ್ ಅವರು 115 ವರ್ಷ ವಯಸ್ಸಿನಲ್ಲಿ ಈದಿನ ಶೆಲ್‌ಬೈವಿಲ್ಲೆಯಲ್ಲಿ ನಿಧನರಾದರು. ಇಂಡಿಯಾನಾ ಪ್ರದೇಶದ ಶೆಲ್‌ಬೈವಿಲ್ಲೆಯಲ್ಲಿ ಇರುವ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಾಗ ಅವರ ಆಯಸ್ಸು ಬರೋಬ್ಬರಿ 115 ವರ್ಷ 220 ದಿನಗಳಾಗಿದ್ದವು ಎಂದು ಗಿನ್ನೆಸ್ ವಿಶ್ವ ದಾಖಲೆಯ ಸಲಹೆಗಾರ ರಾಬರ್ಟ್ ಯಂಗ್ ತಿಳಿಸಿದರು. ಪಾರ್ಕರ್ ಅವರು 1893ರ ಏಪ್ರಿಲ್ 20ರಂದು ಮಧ್ಯೆ ಇಂಡಿಯಾನಾದಲ್ಲಿ       ಜನಿಸಿದ್ದರು. 2007ರಲ್ಲಿ ಜಪಾನಿನ ಯೊನ್ ಮಿನಗವಾ ಅವರು ಮೃತರಾದ ನಂತರ ಪಾರ್ಕರ್ ಅವರು ವಿಶ್ವದ ಹಿರಿಯ ವ್ಯಕ್ತಿಯಾಗಿ ದಾಖಲೆಯ ಪುಟಗಳಲ್ಲಿ ಸೇರಿದರು. ಮಿನಗವಾ ಅವರು ಪಾರ್ಕರ್ ಅವರಿಗಿಂತ ನಾಲ್ಕು ತಿಂಗಳು ಹಿರಿಯರಾಗಿದ್ದರು. ಈಡನ್ ಪಾರ್ಕರ್ ಅವರ ಪತಿ ಇರ್ಲ್ ಪಾರ್ಕರ್ 1939ರಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. 100 ವರ್ಷ ವಯಸ್ಸಿನವರೆಗೂ ಈಡನ್ ಏಕಾಂಗಿಯಾಗಿಯೇ ಬದುಕಿದರು. ನಂತರ ಮಗನ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು ಆ ಬಳಿಕ ವೃದ್ಧಾಶ್ರಮ ಸೇರಿದ್ದರು. ಈಡನ್ ಪಾರ್ಕರ್ ಅವರಿಗೆ ಇಬ್ಬರು ಮಕ್ಕಳು, ಐವರು ಮೊಮ್ಮಕ್ಕಳು, 13 ಜನ ಮರಿಮಕ್ಕಳು ಹಾಗೂ 13 ಜನ ಮರಿಮಕ್ಕಳ ಮಕ್ಕಳು.  ಅವರು ಯಾವತ್ತೂ ಮದ್ಯ ಸೇವನೆಯಾಗಲಿ ಅಥವಾ ಧೂಮಪಾನ ಮಾಡುವುದಾಗಲಿ ಮಾಡಿರಲಿಲ್ಲ.

2008: ಸೋಮಾಲಿಯಾ ಕಡಲ್ಗಳ್ಳರ ಅಟ್ಟಹಾಸ ಮತ್ತೆ ಮುಂದುವರಿಯಿತು. ರಾಸಾಯನಿಕ ವಸ್ತು ಸಾಗಿಸುತ್ತಿದ್ದ ಲೆಬನಾನ್ ದೇಶಕ್ಕೆ ಸೇರಿದ ಹಡಗನ್ನು ಕಡಲ್ಗಳ್ಳರು ಅಪಹರಿಸಿದರು. ಅಪಹೃತರಲ್ಲಿ 25 ಜನ ಭಾರತೀಯ ಸಿಬ್ಬಂದಿ. ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದ ಬ್ರಿಟಿಷ್ ಸುರಕ್ಷಾ ಪಡೆಯ ಮೂವರು ಯೋಧರನ್ನು ಹೆಲಿಕಾಪ್ಟರ್ ಬಳಸಿ ಪಾರು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಸೋಮಾಲಿಯಾ ಪ್ರದೇಶದಲ್ಲಿ ಈ ವರ್ಷ ಅಪಹರಣಕ್ಕೀಡಾದ 97ನೇ ಹಡಗು ಇದು.

2008: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ನಾಡು- ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ- 2008' ಈದಿನ ಮೂಡುಬಿದಿರೆ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆರಂಭಗೊಂಡಿತು. 'ಕನ್ನಡ ಮನಸ್ಸು- ಶಕ್ತಿ ಮತ್ತು ವ್ಯಾಪ್ತಿ' ಎಂಬ ಪರಿಕಲ್ಪನೆಯಲ್ಲಿ 'ಸಾಹಿತ್ಯ- ಸಂಸ್ಕೃತಿ'ಗೆ ಸಂಬಂಧಿಸಿದ ಈ ಕನ್ನಡ ಉತ್ಸವವನ್ನು  ಕವಿ ಡಾ. ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ಡಾ.ಕೆ.ಎಸ್. ನಿಸಾರ್ ಅಹಮ್ಮದ್ ಉದ್ಘಾಟಿಸಿದರು.

 2007: ಕರ್ನಾಟಕ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆದೇಶ ಹೊರಡಿಸಿದರು. ಇದರೊಂದಿಗೆ ಎರಡು ತಿಂಗಳಿನಿಂದ ರಾಜ್ಯದಲ್ಲಿ ತಲೆದೋರಿದ್ದ ರಾಜಕೀಯ ಗೊಂದಲಗಳಿಗೆ ತೆರೆ ಬಿತ್ತು.

2007: ಚೆಲುವು, ಅನುಭವ, ಚಿಂತನೆ ಇವೆಲ್ಲದರ ಖಣಿಯಾದ ಸೂಸಾನ್ ಪೋಲ್ಗಾರ್ (http://in.youtube.com/watch?v=4VlGGM5WYZo) ಅವರು ಈದಿನ ಬೆಂಗಳೂರಿನಲ್ಲಿ ನಡೆದ `ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್'ನ `ಮೈ ಬ್ರಿಲಿಯಂಟ್ ಬ್ರೈನ್' ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಪ್ಪತ್ತೊಂದು ಮಂದಿ ಆಟಗಾರರೊಂದಿಗೆ ಸ್ನೇಹ ಪರ ಚೆಸ್ ಆಡಿ, ಅತ್ಯುತ್ತಮ ಚಿಂತನಾ ಶಕ್ತಿಯ ಜೊತೆಯಲ್ಲಿ ಎದುರಾಳಿಯ ಮನಸ್ಸನ್ನು ಅರಿತು `ಕಾಯಿ'ಗಳನ್ನು ನಡೆಸುವ ಸಾಮರ್ಥ್ಯ ಇದ್ದರೆ ಎಷ್ಟೇ ಸಂಖ್ಯೆಯ ಸ್ಪರ್ಧಿಗಳಿದ್ದರೂ ಅವರನ್ನು ಸೋಲಿಸಬಹುದು ಎಂದು ತೋರಿಸಿದರು.

2007: ದಿನ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸುವ ಮೂಲಕ ಕೇರಳದ ಕೊಚ್ಚಿಯ ವಯೋವೃದ್ಧ, ಮಾಜಿ ಕಾಂಗ್ರೆಸ್ ಧುರೀಣ 78 ರ ಹರೆಯದ ಅಬ್ರಹಾಂ ಪುತುಸ್ಸೆರಿ ಲಿಮ್ಕಾ ದಾಖಲೆ ಸ್ಥಾಪಿಸಿದರು. 60 ವರ್ಷಗಳ  ಸಾರ್ವಜನಿಕ ಬದುಕಿನಲ್ಲಿ ತಮ್ಮ ಕುರಿತು  ವಿವಿಧ ದಿನಪತ್ರಿಕೆಗಳಲ್ಲಿ ಬಂದ 2000 ಕ್ಕೂ ಹೆಚ್ಚು ವರದಿಗಳು ಹಾಗೂ ಛಾಯಾಚಿತ್ರಗಳನ್ನು ಇವರು ಸಂಗ್ರಹಿಸಿದ್ದಾರೆ. 1948ರಿಂದ ಸಂಗ್ರಹಿಸಿದ ವರದಿಗಳು ಹಾಗೂ ಛಾಯಾಚಿತ್ರಗಳ 480 ಪುಟುಗಳ ಆಲ್ಬಂ ತಯಾರಿಸಿದ್ದಾರೆ. ಇದರ ತೂಕ 4.5 ಕೆಜಿ.

2007: ಗುಜರಾತಿನಲ್ಲಿ ವಿಧಾನಸಭೆ ಚುನಾವಣಾ ಸಿದ್ಧತೆಗಳು ಆರಂಭವಾದವು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಣಿನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆ ನಡೆದ ನಂತರ ಚುನಾವಣೆ ನಡೆದಿತ್ತು. ಆಗ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಅಲೆ ಜೋರಾಗಿತ್ತು. ಹಿಂದೂಗಳೇ ಬಹುಸಂಖ್ಯಾತರಾದ ಮಣಿನಗರ ಕ್ಷೇತ್ರದಿಂದ ಮೋದಿ ಜಯಭೇರಿ ಬಾರಿಸಿದ್ದರು.

2007:  1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ನಟ ಸಂಜಯ್ ದತ್ ಹಾಗೂ ಇತರ 16 ಅಪರಾಧಿಗಳ ಬಿಡುಗಡೆಗೆ ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜಯ್ ದತ್ ಅವರಿಗೆ ಟಾಡಾ ಕೋರ್ಟ್ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 22ರಿಂದ ಅವರು ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಇತರ ಆರೋಪಿಗಳನ್ನು ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು.ಸಂಜಯ್ ಹಾಗೂ ಇತರ 16 ಮಂದಿಗೆ ನವೆಂಬರ್ 27ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತು. 1995 ರಲ್ಲಿ ಮೊದಲ ಬಾರಿ ಸುಪ್ರೀಂಕೋರ್ಟ್ ಜಾಮೀನು ನೀಡಿದಾಗ ಸಂಜಯ್ ದತ್ 5 ಲಕ್ಷ ರೂ ಭದ್ರತಾ ಮುಚ್ಚಳಿಕೆ ನೀಡಿದ್ದರು. ಈಗಲೂ ಅಷ್ಟೇ ಮೊತ್ತದ ಹಣ ನೀಡಬೇಕು ಎಂದು ನ್ಯಾಯಾಧೀಶ ಕೋಡೆ ಸೂಚಿಸಿದರು.

2007: ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆ ಕುರಿತಂತೆ ಸ್ಥಗಿತವಾಗಿದ್ದ ದೀರ್ಘಕಾಲೀನ ಮಾತುಕತೆಯನ್ನು ಪುನರಾರಂಭಿಸಲು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರು ಒಪ್ಪಿಕೊಂಡರು. ಮುಂದಿನ ವರ್ಷದ ಅಂತ್ಯದೊಳಗಾಗಿ ಸ್ವತಂತ್ರ ಪ್ಯಾಲೆಸ್ಟೈನಿ ರಾಜ್ಯ ಸ್ಥಾಪಿಸಲು ಇಸ್ರೇಲ್ ಪ್ರಧಾನಿ ಎಹುದ್ ಓಲ್ಮರ್ಟ್ ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಪರಸ್ಪರ ಒಪ್ಪಿಗೆ ನೀಡಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮೇರಿ ಲ್ಯಾಂಡಿನ ಅನ್ನಾಪೊಲಿಸ್ನಲ್ಲಿ ಹೇಳಿದರು.

 2007: ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಕೊನೆಗೂ ತ್ಯಜಿಸಿದರು. ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಒಂದು ದಿನ ಮುಂಚಿತವಾಗಿ  ಮುಷರಫ್ ಅವರು ಸೇನಾ ಮುಖ್ಯಸ್ಥನ ಸ್ಥಾನವನ್ನು ಇಸ್ಲಾಮಾಬಾದಿನಲ್ಲಿ ಜನರಲ್ ಅಷ್ಫಾಕ್ ಪರ್ವೇಜ್ ಕಿಯಾನಿ ಅವರಿಗೆ ವಹಿಸಿಕೊಟ್ಟರು.

2007: ಕಿರ್ಗಿಜ್ ಸ್ಥಾನದ ಪ್ರಧಾನಿ ಅಲ್ಮಜ್ ಬೆಕ್ ಅತಾಂಬೆಯೆವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ರಾಜೀನಾಮೆಯನ್ನು ಅಧ್ಯಕ್ಷ ಕುರ್ಮನ್ ಬೆಕ್ ಬಕಿಯೆವ್ ಅಂಗೀಕರಿಸಿದರು.

2007: 2001ರಲ್ಲಿ ಬಹು ಚರ್ಚೆಗೆ ಗ್ರಾಸವಾಗಿದ್ದ `ಬಿಲ್ಡರ್' ಶ್ರೀನಿವಾಸ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಕ್ಕೆ ಒಳಗಾಗಿದ್ದ ಮುತ್ತಪ್ಪ ರೈ ಅವರನ್ನು ಆರೋಪ ಮುಕ್ತಗೊಳಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿತು.

2007: ತರಗತಿ ಬೋಧನೆಯಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ನೆರವಾಗುವ, ಬೋಧನೆ ಮತ್ತು ಕಲಿಕೆಯನ್ನು ಹೆಚ್ಚು ಸುಲಲಿತಗೊಳಿಸುವ ಸಾಫ್ಟ್ಟವೇರನ್ನು ಬೆಂಗಳೂರಿನಲ್ಲಿ ಪ್ರೊಮೆಥಿಯಾನ್ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ವಿಭಿನ್ನ ಬಗೆಯ ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನದ ಮೂಲಕ ಮಕ್ಕಳ ಗಮನ ಕೇಂದ್ರಿಕರಿಸುತ್ತಲೇ ಪರಿಣಾಮಕಾರಿ ಕಲಿಕೆಗೆ ಈ ಶ್ವೇತ ಹಲಗೆ (ವ್ಹೈಟ್ ಬೋರ್ಡ್) ಶ್ರೇಣಿಯ ಉತ್ಪನ್ನಗಳು ಶಿಕ್ಷಣ ರಂಗದಲ್ಲಿ ಹೊಸ ಅಲೆ ಮೂಡಿಸಲಿವೆ ಎಂಬುದು ಕಂಪೆನಿಯ ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ಪೀಟರ್ ಆರ್ಮೆರೋಡ್ ವಿಶ್ವಾಸ. ಈ ಶ್ವೇತ ಹಲಗೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಬಿಳಿ ಹಲಗೆ ಜೊತೆಗೆ ನೀಡಲಾಗುವ ಈ ಸಾಫ್ಟ್ಟವೇರ್ ವರ್ಣರಂಜಿತ ಕಲಿಕೆಯ ಅನುಭವ ನೀಡುತ್ತದೆ. ಬೋಧನೆಗೆ ಅಗತ್ಯವಾದ ಪಠ್ಯಕ್ರಮ, ಚಿತ್ರ, ನಕ್ಷೆ ಮತ್ತಿತರ ಪೂರಕ ಮಾಹಿತಿಯೂ ಈ ಸಾಫ್ಟವೇರಿನಲ್ಲಿ ಅಡಕವಾಗಿರುತ್ತದೆ.  ಸದ್ಯಕ್ಕೆ ಈ ತಂತ್ರಜ್ಞಾನವು 25 ಭಾಷೆಗಳಲ್ಲಿ ಲಭ್ಯ. ಮುಂದೆ ಶೀಘ್ರದಲ್ಲೇ 40 ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಬೆಥನಿ ಹೈಸ್ಕೂಲ್ ಈ ತಂತ್ರಜ್ಞಾನ ಅಳವಡಿಸಿಕೊಂಡಿದೆ.

2006: ತಮ್ಮ ಆಪ್ತ ಸಹಾಯಕ ಶಶಿನಾಥ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶಿಬು ಸೊರೇನ್ ತಪ್ಪಿತಸ್ಥ ಎಂಬುದಾಗಿ ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ಕೆದಿಯಾ ಅವರ ನ್ಯಾಯಾಲಯ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಶಿಬು ಸೊರೇನ್  ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಕತಾಳೀಯವಾಗಿ 12 ವರ್ಷಗಳ ಬಳಿಕ ಕೊಲೆ ನಡೆದ ದಿನಾಂಕದಂದೇ ತಪ್ಪಿತಸ್ಥರೆಂದು ಘೋಷಿತರಾಗಿರುವ ಸೊರೇನ್ ಸ್ವಾತಂತ್ರ್ಯಾನಂತರ ಕೊಲೆ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾದ ಮೊದಲ ಕೇಂದ್ರ ಸಂಪುಟ ಸಚಿವ ಎಂಬ ಕುಖ್ಯಾತಿಗೂ ಪಾತ್ರರಾದರು. 1994ರ ನವೆಂಬರ್ 28ರಂದು ಝಾ ಅವರನ್ನು ಕೊಂದ ಪ್ರಕರಣದಲ್ಲಿ ಇತರ ನಾಲ್ಕು ಮಂದಿಯನ್ನು ಕೂಡಾ ತಪ್ಪಿತಸ್ಥರು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ತೀರ್ಪು ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ 62 ವರ್ಷದ ಸೊರೇನ್ ಅವರನ್ನು ಬಂಧಿಸಲಾಯಿತು. ಸೊರೇನ್ ಅವರು ಕ್ರಿಮಿನಲ್ ಸಂಚು, ಕೊಲೆ ಮತ್ತು ಅಪಹರಣದ ಅಪರಾಧಗಳಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಸೊರೇನ್ ಅವರು ಸಂಪುಟ ತ್ಯಜಿಸಬೇಕಾಗಿ ಬಂದದ್ದು ಇದು ಎರಡನೇ ಸಲ. ಈ ಮೊದಲು 1980ರ ಆದಿಯ ಪ್ರತಿಭಟನಾ ಪ್ರದರ್ಶನ ಕಾಲದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯವೊಂದು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದಾಗ ಸೊರೇನ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನಂತರ ಜಾಮೀನು ಪಡೆದಿದ್ದ ಸೊರೇನ್ ಅವರನ್ನು ಈ ವರ್ಷ ಜನವರಿಯಲ್ಲಿ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಝಾ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಝಾ ಅವರನ್ನು 1994ರ ಮೇ 22ರಂದು ದೆಹಲಿಯಿಂದ ಅಪಹರಿಸಿ ರಾಂಚಿ ಸಮೀಪದ ಪಿಸ್ಕಾ ನಗರಿ ಗ್ರಾಮಕ್ಕೆ ಒಯ್ದು ಅಲ್ಲಿ ಕೊಲ್ಲಲಾಯಿತು ಎಂದು 1998ರ ನವೆಂಬರ್ 10ರಂದು ಸಲ್ಲಿಸಿದ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಝಾ ಅವರಿಗೆ 1993ರ ಜುಲೈ ತಿಂಗಳಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸಿದ ಸಂದರ್ಭದಲ್ಲಿ ರಾವ್ ಸರ್ಕಾರ ಉಳಿಕೆಗಾಗಿ ನಡೆದ ಜೆಎಂಎಂ - ಕಾಂಗ್ರೆಸ್ ಒಪ್ಪಂದದ ವಿವರ ಗೊತ್ತಿತ್ತು. ಅವರು ಈ ಹಣದಲ್ಲಿ ತಮ್ಮ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಯಿತು. ಝಾ ಅವರು ಹೆಚ್ಚು ಹಣ ನೀಡುವಂತೆ ಸೊರೇನ್ ಅವರನ್ನು ಒತ್ತಾಯಿಸುತ್ತಿದ್ದರು. ಹೀಗೆ ಒತ್ತಾಯಿಸಲು ಸೊರೇನ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಹಾಗೂ ಅವರ ಹಲವಾರು ರಹಸ್ಯಗಳು ಗೊತ್ತಿದ್ದುದು ಕಾರಣವಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತಿಳಿಸಿತ್ತು. 1998ರ ಆಗಸ್ಟ್ 13ರಂದು ಸಿಬಿಐ ಝಾ ಅವರ ಅಸ್ಥಿಪಂಜರವನ್ನು ರಾಂಚಿ ಸಮೀಪದ ಪಿಸ್ಕಾನಗರಿ ಗ್ರಾಮದ ಸಮೀಪ ಪತ್ತೆ ಹಚ್ಚಲಾಯಿತು ಎಂದು ಹೇಳಿತ್ತು. ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಅಸ್ಥಿಪಂಜರದ ಪರಿಶೀಲನೆಯ ಬಳಿಕ ತಲೆ ಬುರುಡೆ ಝಾ ಅವರದ್ದು ಎಂದು ತಮ್ಮ ವರದಿಯಲ್ಲಿ ದೃಢಪಡಿಸಿದ್ದರು. ಸೊರೇನ್ ಅವರು ಮೊದಲಿಗೆ ಝಾ ಅವರಿಗೆ ದಕ್ಷಿಣ ದೆಹಲಿಯಲ್ಲಿ ಜವಳಿ ಗಿರಣಿ ಒಂದರ ಸ್ಥಾಪನೆಗಾಗಿ 15 ಲಕ್ಷ ರೂಪಾಯಿ ನೀಡಿದ್ದರು. ಈ ವಹಿವಾಟಿನಲ್ಲಿ ನಷ್ಟವಾದಾಗ ಝಾ ಮತ್ತೆ ಹಣ ನೀಡುವಂತೆ ಸೊರೇನ್ ಅವರನ್ನು ಕಾಡತೊಡಗಿದರು. ಇದು ಅಂತಿಮವಾಗಿ ಅವರ ಕೊಲೆಯಲ್ಲಿ ಪರ್ಯವಸಾನಗೊಂಡಿತು ಎಂದೂ ಸಿಬಿಐ ತಿಳಿಸಿತ್ತು.

2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ಡಿನ ಜನಪ್ರಿಯ ನಟ ಸಂಜಯದತ್ (47) ಅವರು ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು ಆತ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಸಂಜಯದತ್ ಭಯೋತ್ಪಾದಕ ಅಲ್ಲ, ಅವರ ಮೇಲಿನ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪ ಕೈಬಿಡಲಾಗಿದೆ ಎಂದು ನ್ಯಾಯಮೂರ್ತಿ ಪಿ.ಡಿ. ಖೋಡೆ ತೀರ್ಪು ನೀಡಿದರು.

2005: ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.

1990: ಬ್ರಿಟನ್ನಿನ ಮೊತ್ತ ಮೊದಲ ಮಹಿಳಾ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ರಾಣಿ ಎರಡನೇ ಎಲಿಜಬೆತ್ ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತಿ ಪಡೆದಿದ್ದ ಇವರು  ಮೂರು ಚುನಾವಣೆಗಳನ್ನು ಸತತವಾಗಿ ಜಯಿಸಿ ಬ್ರಿಟನನ್ನು 11 ವರ್ಷಗಳಷ್ಟು ದೀರ್ಘಕಾಲ ಆಳಿದ (1979-1990) ಪ್ರಧಾನಿ.

1964: ಮೆರೈನರ್ -4 ಬಾಹ್ಯಾಕಾಶ ಸಂಶೋಧನಾ ನೌಕೆಯನ್ನು  ಅಮೆರಿಕವು ಮಂಗಳ ಗ್ರಹದತ್ತ ಹಾರಿಸಿತು.

1957: ಸಾಹಿತಿ ಹಾ.ವಿ. ಮಂಜುಳಾ ಶಿವಾನಂದ ಜನನ.

1954: ಸಾಹಿತಿ ನಂದಿನಿ ಕಾಪಡಿ ಜನನ.

1946: ಸಾಹಿತಿ ಎಸ್. ದಿವಾಕರ್ ಜನನ.

1944: ಸಾಹಿತಿ ಕ.ರಾ. ಮೋಹನ್ ಜನನ.

1943: ದ್ವಿತೀಯ ವಿಶ್ವ ಸಮರ ಕಾಲದಲ್ಲಿ ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹಾಗೂ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಮೂವರೂ ಟೆಹರಾನಿನಲ್ಲಿ ಸಭೆ ಸೇರಿದರು. `ಎರಡನೇ ರಂಗ' ಸ್ಥಾಪನೆ ಈ ಮಾತುಕತೆಯ ಗುರಿಯಾಗಿತ್ತು. ಜರ್ಮನ್ ಆಕ್ರಮಿತ ಫ್ರಾನ್ಸಿನಲ್ಲಿ ದಾಳಿ ನಡೆಯುವ ಕಾಲಕ್ಕೇ ಪೂರ್ವದಿಂದ ದಾಳಿ ನಡೆಸಲು ಸ್ಟಾಲಿನ್ ಒಪ್ಪಿಗೆ ನೀಡಿದರು.

1942: ಸಾಹಿತಿಗಳಾದ ಎಂ.ಎಂ. ಕಲಬುರ್ಗಿ, ಚಿ. ಶ್ರೀನಿವಾಸ ರಾಜು ಜನನ.

1940: ಸಾಹಿತಿ ಎಸ್. ರಾಜಗೋಪಾಲಾಚಾರಿ ಜನನ.

1934: ಸಾಹಿತಿ ಗೌರು ಭಟ್ ಜನನ.

1925: ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಡಾ. ಬಿ.ಸಿ. ರಾಮಚಂದ್ರ ಶರ್ಮ (28-11-1925ರಿಂದ 18-4-2005) ಅವರು ಚಂದ್ರಶೇಖರ ಶರ್ಮ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಮುಂಬೈಯಲ್ಲಿ ಜನಿಸಿದರು. ಇವರ ಪೂರ್ವೀಕರು ನಾಗಮಂಗಲ ತಾಲ್ಲೂಕಿನವರು.

1864: ಬಾಂಬೆ-ಬರೋಡಾ ಅಂಡ್ ಸೆಂಟ್ರಲ್ ಇಂಡಿಯಾ ರೈಲ್ವೇಸ್ (ಬಿಬಿ ಅಂಡ್ ಸಿಐ) ಮಾರ್ಗವನ್ನು ಸೂರತ್ ಸಮೀಪದ ಉಟ್ರಾನಿನಲ್ಲಿ  ಉದ್ಘಾಟಿಸಲಾಯಿತು. ಈ ರೈಲು ಮಾರ್ಗವು ಸೂರತ್ತಿನ ಉಟ್ರಾನಿನಿಂದ ಬಾಂಬೆಯ (ಈಗಿನ ಮುಂಬೈ) ಗ್ರಾಂಟ್ ರೋಡ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿತು. 1866ರಲ್ಲಿ ಗ್ರಾಂಟ್ ರೋಡ್ ಲೈನನ್ನು ಬ್ಯಾಕ್ ಬೇವರೆಗೆ ವಿಸ್ತರಿಸಲಾಯಿತು. 1973ರಲ್ಲಿ ಕೊಲಾಬಾದಲ್ಲಿ ನೂತನ ಟರ್ಮಿನಲ್ ಸ್ಥಾಪನೆ ಸಲುವಾಗಿ ಇನ್ನಷ್ಟು ವಿಸ್ತರಿಸಲಾಯಿತು.

1520: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗೆಲ್ಲನ್ ದಕ್ಷಿಣ ಅಮೆರಿಕನ್ ಜಲಸಂಧಿಯ ಮೂಲಕವಾಗಿ ಫೆಸಿಫಿಕ್ ಸಾಗರವನ್ನು ತಲುಪಿದ. ಈ ಜಲಸಂಧಿಗೆ ಈಗ ಆತನ ಹೆಸರನ್ನೇ ಇಡಲಾಗಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement