ಗ್ರಾಹಕರ ಸುಖ-ದುಃಖ

My Blog List

Sunday, May 2, 2010

ಇಂದಿನ ಇತಿಹಾಸ History Today ಮೇ 02

ಇಂದಿನ ಇತಿಹಾಸ

ಮೇ 02

ಬೆಂಗಳೂರು ಮಹಾನಗರದ ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳಿಗೆ ಗಂಭೀರ ವೇದಿಕೆಯಾದ ಮಿಥಿಕ್ ಸೊಸೈಟಿಗೆ ಶತಮಾನದ ಸಂಭ್ರಮ. ಬೆಂಗಳೂರು ನೃಪತುಂಗ ರಸ್ತೆಯಲ್ಲಿರುವ ಈ ಪಾರಂಪರಿಕ ಕಟ್ಟಡ ಮೇ 5, 1909ರಂದು ಬೆಂಗಳೂರಿನ ಕಂಟೋನ್ಮೆಂಟ್ ಕಲೆಕ್ಟರ್ ಆಗಿದ್ದ ಎಫ್.ಜೆ.ರಿಚರ್ಡ್ಸ್ ಹಾಗೂ ರೆವರೆಂಡ್ ಫಾದರ್ ಎ.ಎಂ.ತಬಾರ್ಡ್ ಅವರಿಂದ ಪ್ರಾರಂಭಗೊಂಡಿತ್ತು.

2009: ಹಂದಿ ಜ್ವರದ ಹಿನ್ನೆಲೆಯಲ್ಲಿ ಈಜಿಪ್ಟ್ ಸುಮಾರು ಎರಡೂವರೆ ಲಕ್ಷ ಹಂದಿಗಳನ್ನು ಕೊಲ್ಲುವ ಕಾರ್ಯವನ್ನು ಆರಂಭಿಸಿತು. ಮನುಷ್ಯರನ್ನು ಕಾಡಿದ ಹಂದಿಜ್ವರ ಮತ್ತು ಹಂದಿಗಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯ ಹಂದಿ ನಾಶವನ್ನು ವಿರೋಧಿಸಿತು. ಮೊದಲ ಹಂತದಲ್ಲಿ ಈಜಿಪ್ಟಿನ ಕೊಳೆಗೇರಿಗಳಲ್ಲಿರುವ ಸುಮಾರು 60,000 ಹಂದಿಗಳನ್ನು ಕೊಲ್ಲಲಾಗುವುದು ಎಂದು ಕೈರೊ ರಾಜ್ಯಪಾಲ ಅಬ್ದಲ್ ಹಲೀಂ ವಾಜಿರ್ ಅವರು ತಿಳಿಸಿದ್ದರು.

2009: ವಯಸ್ಸನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ತೆಗೆಯಲಾದ ಹಲ್ಲು ಮತ್ತು ಮೂಳೆಗಳ ಎಕ್ಸ್‌ರೇಯನ್ನು ನೋಡಲು ಅವಕಾಶ ನೀಡಬೇಕು ಎಂಬ ಕಸಾಬ್ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ಎಕ್ಸ್‌ರೇ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಕಸಾಬ್‌ನ ವಯಸ್ಸು 20 ವರ್ಷಕ್ಕಿಂತ ಹೆಚ್ಚು ಎಂಬುದು ಬೆಳಕಿಗೆ ಬಂದಿತ್ತು. ಕಸಾಬ್‌ನ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಎಂ. ಎಲ್. ತಹಿಲ್ಯಾನಿ ಅವರು, ಕಸಾಬ್‌ನ ವಕೀಲರಾದ ಅಬ್ಬಾಸ್ ಕಜ್ಮಿ ಅವರು ಎಕ್ಸ್‌ರೇ ನೋಡಬಹುದು ಎಂದು ತಿಳಿಸಿದರು. ಆದರೆ ಕಜ್ಮಿ ಇದಕ್ಕೆ ಆಸಕ್ತಿ ತೋರಿಸಲಿಲ್ಲ. ತಜ್ಞರನ್ನು ಕರೆಸಿ ಎಕ್ಸ್‌ರೇಯನ್ನು ಪರೀಕ್ಷೆ ಮಾಡಿಸಿಕೊಳ್ಳಲು ನ್ಯಾಯಾಲಯ ಕಜ್ಮಿ ಅವರಿಗೆ ಅನುಮತಿ ನೀಡಿತ್ತು.

2009: ಬೆಂಗಳೂರು ಮಹಾನಗರದ ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳಿಗೆ ಗಂಭೀರ ವೇದಿಕೆಯಾದ ಮಿಥಿಕ್ ಸೊಸೈಟಿಗೆ ಶತಮಾನದ ಸಂಭ್ರಮ. ಬೆಂಗಳೂರು ನೃಪತುಂಗ ರಸ್ತೆಯಲ್ಲಿರುವ ಈ ಪಾರಂಪರಿಕ ಕಟ್ಟಡ ಮೇ 5, 1909ರಂದು ಬೆಂಗಳೂರಿನ ಕಂಟೋನ್ಮೆಂಟ್ ಕಲೆಕ್ಟರ್ ಆಗಿದ್ದ ಎಫ್.ಜೆ.ರಿಚರ್ಡ್ಸ್ ಹಾಗೂ ರೆವರೆಂಡ್ ಫಾದರ್ ಎ.ಎಂ.ತಬಾರ್ಡ್ ಅವರಿಂದ ಪ್ರಾರಂಭಗೊಂಡಿತ್ತು. 1917ರಲ್ಲಿ ಮೈಸೂರು ಸರ್ಕಾರದಿಂದ ನಿವೇಶನ ದೊರಕಿ ಡಾಲಿ ಸ್ಮಾರಕ ಸಭಾಂಗಣ ಉದ್ಘಾಟನೆಗೊಂಡಿತು. ಈ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಅಂದಿನ ಮೈಸೂರು ಸರ್ಕಾರದ ಪ್ರಧಾನ ಆರ್ಕಿಟೆಕ್ಟ್ ಆಗಿದ್ದ ಡಾ.ಜಿ.ಎಸ್.ಕ್ರುಂಬಿಗಲ್ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರಾಧ್ಯಾಪಕ ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಇದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೊದಲ ನಿರ್ದೇಶಕರಾಗಿದ್ದ ಡಾ. ಮಾರಿಸ್ ಟ್ರಾವರ್ಸ್ ಮಿಥಿಕ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದರು. ಈ ಸಂಸ್ಥೆಗೆ ಮೈಸೂರು ಮಹಾರಾಜರು, ಬರೋಡದ ಮಹಾರಾಜರು ಪೋಷಕರಾಗಿದ್ದರು.

2008: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಮಾರ್ಚ್ ತಿಂಗಳಿನಲ್ಲಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿದ್ದರು ಎನ್ನುವ ವಿಷಯವನ್ನು ಕಾರಾಗೃಹದ ಅಧಿಕಾರಿ ಅಲ್ಲಗಳೆದರು. ಪ್ರಿಯಾಂಕ-ನಳಿನಿ ಭೇಟಿ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಚೆನ್ನೈ ನಗರ ವಕೀಲ ಡಾ.ರಾಜಕುಮಾರ್ ಅವರು ವಿವರ ಕೇಳಿದ್ದರು. ಆದರೆ ಜೈಲು ಸೂಪರಿಂಟೆಂಡೆಂಟ್ ರಾಜಸುಂದರಿ ಅವರು ಪ್ರಿಯಾಂಕ-ನಳಿನಿ ಭೇಟಿಯನ್ನು ನಿರಾಕರಿಸಿದರು. 2008 ರ ಮಾರ್ಚ್ 14 ಹಾಗೂ 19 ರಂದು ವೆಲ್ಲೂರು ಕಾರಾಗೃಹಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ರಾಜಸುಂದರಿ ಅವರು ರಾಜಕುಮಾರ್ ಅವರಿಗೆ ಸ್ಪಷ್ಟನೆ ನೀಡಿದರು.

2008: ಚುನಾವಣಾ ಪ್ರಚಾರದಲ್ಲಿ ಮೊಬೈಲ್ ಮೂಲಕ ಕನ್ನಡವೂ ಸೇರಿದಂತೆ ಒಟ್ಟು 11 ಪ್ರಾದೇಶಿಕ ಭಾಷೆಗಳಲ್ಲಿ ಸಂಕ್ಷಿಪ್ತ ಸಂದೇಶ ಸೇವೆ (ಎಸ್ಎಂಎಸ್) ಹಾಗೂ ಮೊಬೈಲಿನಿಂದ ವಿವಿಧ ಬಗೆಯಲ್ಲಿ ಮತದಾರರನ್ನು ನೇರವಾಗಿ ತಲುಪುವಂತಹ ಸಾಫ್ಟ್ವೇರನ್ನು ಬೆಂಗಳೂರು ಮೂಲದ ಜಿನೆವಾ ಸಾಫ್ಟ್ವೇರ್ ಟೆಕ್ನಾಲಜೀಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ಬಗ್ಗೆ ವಿವರಗಳನ್ನು ನೀಡಿದ ಮಾರುಕಟ್ಟೆ ವಿಭಾಗದ ನಿರ್ದೇಶಕ ಆರ್. ಅಮರಸಿಂಗ್ ಅವರು ವಿಶಿಷ್ಟ ಬಗೆಯಲ್ಲಿ ಮತದಾರರನ್ನು ತಲುಪುವ ಈ ರೀತಿಯ ಪ್ರಚಾರ ಅಭಿಯಾನಕ್ಕೆ ಚುನಾವಣಾ ಆಯೋಗವು ಸಮ್ಮತಿ ನೀಡಿದೆ ಎಂದು ಹೇಳಿದರು.

2008: ಚೀನಾವು ಜಲಾಂತರ್ಗಾಮಿ ಪರಮಾಣು ಘಟಕವೊಂದನ್ನು ರಹಸ್ಯವಾಗಿ ಸ್ಥಾಪಿಸಿರುವುದು ಏಷ್ಯಾ ದೇಶಗಳಿಗೆ ಆತಂಕ ಉಂಟು ಮಾಡುವಂತಿದ್ದು, ಅಮೆರಿಕಾ ಶಕ್ತಿಗೆ ಸವಾಲು ಒಡ್ಡುವಂತಹುದೂ ಆಗಿದೆ ಎಂದು ಲಂಡನ್ನಿನ ಮಾಧ್ಯಮಗಳು ವರದಿ ಮಾಡಿದವು. ಉಪಗ್ರಹವೊಂದರಿಂದ ತೆಗೆಯಲಾದ ಅಸ್ಪಷ್ಟ ಚಿತ್ರಗಳನ್ನು `ದಿ ಡೈಲಿ ಟೆಲಿಗ್ರಾಫ್' ಮುದ್ರಿಸಿತು. ಅದರಲ್ಲಿ ಚೀನಾ ಕಡಲತೀರದಲ್ಲಿನ ಬಂದರಿನ ಚಿತ್ರವಿತ್ತು. ಈ ಬಂದರಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಇಂತಹ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿರುವ ಸಬ್ ಮೆರಿನುಗಳು, ಏರ್ ಕ್ರಾಫ್ಟ್ ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಯಿತು. ತನ್ನ ನೆರೆಯ ದೇಶಕ್ಕಿಂತ ಕೇವಲ ಕೆಲವೇ ನೂರು ಕಿ.ಮೀ. ದೂರದಲ್ಲಿ ಚೀನಾವು ಅತ್ಯಾಧುನಿಕ ಪರಮಾಣು ಶಸ್ತ್ರಾಸ್ತ್ರವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಕೂಡ ಈ ವರದಿಯಲ್ಲಿ ಛಾಯಾಚಿತ್ರ ಸಹಿತ ವಿವರ ನೀಡಲಾಯಿತು.

2008: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಗೆ ಸಿರ್ಸಾದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿತು. ಹರಿಯಾಣದ ಕಲನ್ವಾಲಿ ಪಟ್ಟಣದ ಬಿಲ್ಲೂ ಎಂಬಾತ ಶಾಲೆಯಿಂದ ಹಿಂದಿರುಗುತ್ತಿದ್ದ ಅದೇ ಪಟ್ಟಣದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಆಮೇಲೆ ಅತ್ಯಾಚಾರ ಎಸಗಿದ್ದ. ಪಟ್ಟಣದ ಪುರಸಭೆಯ ನೌಕರನಾದ ಬಿಲ್ಲೂ ಅತ್ಯಾಚಾರ ಎಸಗಿದ್ದು ವೈದ್ಯಕೀಯ ಪರೀಕ್ಷೆಯಲ್ಲೂ ಖಚಿತವಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಪಿ.ಸಿಂಗ್ ಅವರು 5 ವರ್ಷ ಕಠಿಣ ಶಿಕ್ಷೆ ಹಾಗೂ 1000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.

2008: ಬಿಎಸ್ಪಿ ನಾಯಕನೊಬ್ಬನನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಸೇರಿದಂತೆ ಏಳು ಮಂದಿಗೆ ಬಸ್ತಿಯ ತ್ವರಿತಗತಿಯ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು.

2008: ರಾಷ್ಟ್ರೀಯ ಸಲಹಾ ಮಂಡಳಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರು ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಂ.ವಿ.ಕಾಮತ್ ಅವರಿಂದ ತೆರವಾದ ಸ್ಥಾನಕ್ಕೆ 2 ತಿಂಗಳ ಬಳಿಕ ಅರುಣ್ ನೇಮಕಗೊಂಡರು.

2008: ಅಶಿಸ್ತು ತೋರಿದ ರಾಜಸ್ಥಾನ ರಾಯಲ್ಸ್ ನಾಯಕ ಶೇನ್ ವಾರ್ನ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ಮುಂದಾಳು ಸೌರವ್ ಗಂಗೂಲಿಗೆ ಪಂದ್ಯ ಸಂಭಾವನೆಯ ಶೇಕಡಾ ಹತ್ತರಷ್ಟು ಮೊತ್ತದ ದಂಡ ವಿಧಿಸಿ, ಛೀಮಾರಿ ಹಾಕಲಾಯಿತು.

2007: ರೈತರ ಬೆಳೆಸಾಲ ಮನ್ನಾ ಯೋಜನೆಗೆ ವಿಧಿಸಲಾಗಿದ್ದ 50,000 ರೂಪಾಯಿಗಳ ಮಿತಿಯನ್ನು ರಾಜ್ಯ ಸರ್ಕಾರವು ತೆಗೆದುಹಾಕಿತು. ಬೆಳೆಸಾಲ ಪಡೆದ ಎಲ್ಲ ರೈತರಿಗೂ ಸಾಲ ಮನ್ನಾ ಯೋಜನೆ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

2007: ಹಿರಿಯ ಸಾಹಿತಿ ಪಿ.ವಿ. ನಾರಾಯಣ ಅವರ `ಧರ್ಮಕಾರಣ' ಕೃತಿಯ ಮೇಲೆ ರಾಜ್ಯ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಬಸವಣ್ಣ, ಅಕ್ಕನಾಗಮ್ಮ ಮತ್ತು ಚನ್ನಬಸವಣ್ಣ ಅವರ ಜನ್ಮ ಕುರಿತು ಕೃತಿಯಲ್ಲಿ ಮಾಡಿದ್ದ ಉಲ್ಲೇಖವು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

2006: ಒರಿಸ್ಸಾದ ನಾಲ್ಕೂವರೆ ವರ್ಷದ ಪೋರ ಬುಧಿಯಾ ಸಿಂಗ್ 65 ಕಿ.ಮೀ. ದೂರವನ್ನು ಯಾವುದೇ ಅಡತಡೆ ರಹಿತವಾಗಿ ಕ್ರಮಿಸಿ ಮ್ಯಾರಾಥಾನ್ ಓಟದಲ್ಲಿ ಲಿಮ್ಕಾ ದಾಖಲೆ ನಿರ್ಮಿಸಿದ. ಪುರಿಯ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭುವನೇಶ್ವರದ ಲಯನ್ಸ್ ಗೇಟಿನಿಂದ ಓಟ ಆರಂಭಿಸಿದ ಬುಧಿಯಸಿಂಗ್ ಕೇವಲ 7 ಗಂಟೆ, 2 ನಿಮಿಷದಲ್ಲಿ 65 ಕಿ.ಮೀ. ಓಡಿ ಭುವನೇಶ್ವರದ ಡಿಎವಿ ಚೌಕವನ್ನು ತಲುಪಿದ.

1945: ಎರಡನೇ ವಿಶ್ವಸಮರದಲ್ಲಿ ಬರ್ಲಿನ್ ಪತನವನ್ನು ಸೋವಿಯತ್ ಒಕ್ಕೂಟ ಪ್ರಕಟಿಸಿತು. ಇದೇ ವೇಳೆಗೆ ಮಿತ್ರ ಪಡೆಗಳು ಇಟಲಿ ಮತ್ತು ಆಸ್ಟ್ರಿಯಾದ ಕೆಲವು ಭಾಗಗಳಲ್ಲಿ ನಾಝಿ ಪಡೆಗಳು ಶರಣಾಗತವಾದುದನ್ನು ಪ್ರಕಟಿಸಿದವು.

1922: ಭಾರತದ ಬಿಲಿಯರ್ಡ್ಸ್ ಆಟಗಾರ ವಿಲ್ಸನ್ ಜೋನ್ಸ್ ಹುಟ್ಟಿದ ದಿನ. ಇವರು 1958ರಲ್ಲ್ಲಿ ಮೊತ್ತ ಮೊದಲ ಬಾರಿಗೆ ವಿಶ್ವ ಪ್ರಶಸ್ತಿ ಪಡೆಯುವ ಮೂಲಕ ಭಾರತದ ಪ್ರಪ್ರಥಮ ವೈಯಕ್ತಿಕ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದರು. ಮೂರು ಅಮೆಚೂರ್ ಜಾಗತಿಕ ಪ್ರಶಸ್ತಿಗಳನ್ನು ಇವರು ಗೆದ್ದುಕೊಂಡರು.

1921: ಇಪ್ಪತ್ತನೇ ಶತಮಾನದ ಶ್ರೇಷ್ಠ ಚಿತ್ರ ನಿರ್ಮಾಪಕರಲ್ಲೊಬ್ಬರಾದ ಬಂಗಾಳಿ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ (1921-92) ಜನ್ಮದಿನ. ಇವರ `ಪಥೇರ್ ಪಾಂಚಾಲಿ' ಚಿತ್ರವು ಭಾರತೀಯ ಸಿನಿಮಾಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತು.

1913: ಹಳೆ ತಲೆಮಾರಿನ ಅಪರೂಪದ ಅನುವಾದಕಿ ಲೇಖಕಿ ಸಾವಿತ್ರಮ್ಮ ಹೆಬ್ಬಳಲು ವೆಲಪನೂರು ಸಾವಿತ್ರಮ್ಮ (ಎಚ್.ವಿ. ಸಾವಿತ್ರಮ್ಮ) ಅವರು ಎಂ.ರಾಮರಾವ್- ಮೀನಾಕ್ಷಮ್ಮ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.

1519: ಜಗತ್ತಿನ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾದ ಲಿಯೋನಾರ್ಡ್ ಡ ವಿಂಚಿ ತನ್ನ 67ನೇ ವಯಸ್ಸಿನಲ್ಲಿ ಫ್ರಾನ್ಸಿನ ಕ್ಲೌಕ್ಸಿನಲ್ಲಿ ಮೃತನಾದ. ಸೇಂಟ್ ಫ್ಲೋರೆಂಟಿನ್ನಿನ ಪ್ಯಾಲೇಸ್ ಚರ್ಚಿನಲ್ಲ್ಲಿ ಆತನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಈ ಪ್ಯಾಲೇಸ್ ಚರ್ಚ್ ವಿಂಚಿಯ ಗೋರಿ ಸಹಿತವಾಗಿ ಧ್ವಂಸಗೊಂಡಿತು.

No comments:

Advertisement