Monday, May 3, 2010

ಇಂದಿನ ಇತಿಹಾಸ History Today ಮೇ 03

ಇಂದಿನ ಇತಿಹಾಸ

ಮೇ 03

ಪ್ಲಾಸ್ಟಿಕ್ ಆಧಾರಿತ ಪರಿಣಾಮಕಾರಿ ವಿದ್ಯುತ್ ಕೋಶವನ್ನು ಕಂಡು ಹಿಡಿಯುವ ಮೂಲಕ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೌರಶಕ್ತಿಯ ವಾಣಿಜ್ಯ ಬಳಕೆಯ ವೇಗವನ್ನು ಹೆಚ್ಚಿಸುವ ಮಹತ್ವದ ವಿದ್ಯಮಾನವೊಂದಕ್ಕೆ ಮುನ್ನುಡಿ ಬರೆದರು. ಈ ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ, ಸಸ್ಯಗಳಲ್ಲಿರುವ ಫೋಟೋ ವೋಲ್ಟಾಯಿಕ್ ಕೋಶದ ಕಾರ್ಯವೈಖರಿಯನ್ನು ಹೋಲುತ್ತದೆ. ದಕ್ಷಿಣ ಕೊರಿಯಾದ ಗ್ವಾಂಗ್ಜು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಲೀ ಕ್ವಾಂಗ್ ಹೀ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿದ್ಯುತ್ ಕೋಶವನ್ನು ಅಭಿವೃದ್ಧಿ ಪಡಿಸಿದರು.

2009: ನೇಪಾಳೀ ಸರ್ಕಾರದ ಆಜ್ಞೆಯನ್ನು ಪಾಲಿಸದ ಆರೋಪದ ಮೇಲೆ ಸೇನಾ ಪಡೆಯ ಮುಖ್ಯಸ್ಥ ಜನರಲ್ ರುಕ್ಮಾಂಗದ ಕಟ್ವಾಲ್ ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ಮಾವೋವಾದಿಗಳ ನಿಷ್ಠಾವಂತ ಎನ್ನಲಾದ ಲೆಫ್ಟಿನೆಂಟ್ ಜನರಲ್ ಕೌಲ್ ಬಹದ್ದೂರ್ ಖಾಡ್ಕಾ ಅವರನ್ನು ನೇಮಿಸಲಾಯಿತು. ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲು ಪ್ರಧಾನಿ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಸರ್ಕಾರದ ಪ್ರಮುಖ ಅಂಗಪಕ್ಷಗಳಾದ ನೇಪಾಳ ಕಮ್ಯುನಿಸ್ಟ್ ಪಕ್ಷ ಯುಎಂಎಲ್, ಮಾದೇಶಿ ಪೀಪಲ್ಸ್ ರೈಟ್ಸ್ ಒಕ್ಕೂಟ, ಸದ್ಭಾವನಾ ಪಕ್ಷ ಹಾಗೂ ಸಿಪಿಎನ್-ಯುನೈಟೆಡ್‌ನ ನಾಲ್ಕು ಪ್ರಮುಖ ನಾಯಕರು ಬಹಿಷ್ಕರಿಸಿದ್ದರು. ಅವರ ಬಹಿಷ್ಕಾರದ ನಡುವೆಯೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು. ಸೇನಾ ಮುಖ್ಯಸ್ಥರ ವಜಾ ಕ್ರಮವನ್ನು ನೇಪಾಳದ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಸೇರಿದಂತೆ 16 ಪಕ್ಷಗಳು ವಿರೋಧಿಸಿದ್ದವು.

2009: ಪ್ಲಾಸ್ಟಿಕ್ ಆಧಾರಿತ ಪರಿಣಾಮಕಾರಿ ವಿದ್ಯುತ್ ಕೋಶವನ್ನು ಕಂಡು ಹಿಡಿಯುವ ಮೂಲಕ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೌರಶಕ್ತಿಯ ವಾಣಿಜ್ಯ ಬಳಕೆಯ ವೇಗವನ್ನು ಹೆಚ್ಚಿಸುವ ಮಹತ್ವದ ವಿದ್ಯಮಾನವೊಂದಕ್ಕೆ ಮುನ್ನುಡಿ ಬರೆದರು. ಈ ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ, ಸಸ್ಯಗಳಲ್ಲಿರುವ ಫೋಟೋ ವೋಲ್ಟಾಯಿಕ್ ಕೋಶದ ಕಾರ್ಯವೈಖರಿಯನ್ನು ಹೋಲುತ್ತದೆ. ದಕ್ಷಿಣ ಕೊರಿಯಾದ ಗ್ವಾಂಗ್ಜು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಲೀ ಕ್ವಾಂಗ್ ಹೀ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿದ್ಯುತ್ ಕೋಶವನ್ನು ಅಭಿವೃದ್ಧಿ ಪಡಿಸಿದರು. ಸಸ್ಯಗಳು ದ್ಯುತಿಸಂಶ್ಲೇಷಣಾ ಕ್ರಿಯೆ ಮೂಲಕ ಆಹಾರ ತಯಾರಿಸಿಕೊಳ್ಳುವ ಹಾಗೆ ಈ ವಿದ್ಯುತ್ ಕೋಶದ ತಯಾರಿಕೆಗೆ ಬಳಸಿರುವ ಪ್ಲಾಸ್ಟಿಕ್ ಹಾಳೆ ಕೂಡ ಸೌರ ಶಕ್ತಿಯನ್ನು ಹೀರಿಕೊಂಡು ವಿದ್ಯುತ್ ತಯಾರಿಸುತ್ತದೆ ಎಂಬುದು ವಿಜ್ಞಾನಿಗಳ ವಿವರಣೆ. ಈ ವಿದ್ಯುತ್ ಕೋಶದ 'ಉತ್ಪಾದನಾ' ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಈ ಪ್ಲಾಸ್ಟಿಕ್ ಹಾಳೆಗೆ ಟಿಟಾನಿಯಮ್ ಆಕ್ಸೈಡ್ ಬಳಸಲಾಗಿತ್ತು. ಪಾಸ್ಲ್ಟಿಕ್ ಆಧಾರಿತ ವಿದ್ಯುತ್ ಕೋಶ ಸಂಪೂರ್ಣ ಅಭಿವೃದ್ಧಿಗೊಂಡರೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು. ಬೇಕಾದ ಹಾಗೆ ಬಾಗಿಸಬಹುದು. ಕೋಟ್, ಬ್ಯಾಗ್ ಅಷ್ಟೇ ಏಕೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ, ಕಟ್ಟಡಗಳ ಕಿಟಕಿಗಳ ಮೇಲೂ ಈ ಕೋಶಗಳನ್ನು ಸಿಕ್ಕಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ವಿಜ್ಞಾನಿ ಲೀ ಪ್ರಕಾರ, ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ ಶೇ 17 ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದು. ಪ್ರಸ್ತುತ ಗೃಹ ಬಳಕೆಯಲ್ಲಿರುವ ಸಾಂಪ್ರದಾಯಿಕ ಅಜೈವಿಕ ಸಿಲಿಕಾನ್ ಆಧಾರಿತ ಸೋಲಾರ್ ವಿದ್ಯುತ್ ಕೋಶದ ತಟ್ಟೆಗಳು ಶೇ 7ರಿಂದ 8 ರಷ್ಟು ವಿದ್ಯುತ್ ಉತ್ಪಾದಿಸುತ್ತಿವೆ. ಇವು ತುಂಬಾ ದುಬಾರಿ ಎನಿಸಿವೆ. ಹೀಗಾಗಿ ಪ್ಲಾಸ್ಟಿಕ್ ಆಧಾರಿತ ವಿದ್ಯುತ್‌ಕೋಶಗಳು ವಾಣಿಜ್ಯಾಧಾರಿತ ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಮಹತ್ವದ ವಿದ್ಯಮಾನವನ್ನು ಅಮೆರಿಕದ ರಾಷ್ಟ್ರೀಯ ಪುನರ್ಬಳಕೆ ಇಂಧನ ಪ್ರಯೋಗಾಲಯ ದೃಢಪಡಿಸಿ, ತನ್ನ ಆನ್-ಲೈನ್‌ಪತ್ರಿಕೆ 'ನೇಚರ್ ಫೋಟೊನಿಕ್ಸ್'ನಲ್ಲೂ ಪ್ರಕಟಿಸಿತು.

2009: ಎಲ್‌ಟಿಟಿಇ ಉಗ್ರರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಂತಿಮ ಹಣಾಹಣಿಯಲ್ಲಿ 21 ಎಲ್‌ಟಿಟಿಇ ಉಗ್ರರು ಸಾವನ್ನಪ್ಪಿದರು. ಮುಲೈತೀವುವಿನ ವಳಯಾನ್‌ಮಠಂ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಎಲ್‌ಟಿಟಿಇ ಎರಡೂ ಪಾಳೆಯಗಳಲ್ಲಿ ಸಾವು ನೋವು ಸಂಭವಿಸಿತು.

2009: ಪಾಕಿಸ್ಥಾನದ ಬುನೆರ್ ಜಿಲ್ಲೆಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ 80 ಮಂದಿ ತಾಲಿಬಾನಿಗಳು ಹತರಾದರು. ಪಾಕ್ ಕಮಾಂಡರ್ ಬ್ರಿಗೇಡಿಯರ್ ಫಯಾಜ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಜಿಯೋ ಟಿವಿ ಈ ಮಾಹಿತಿ ನೀಡಿತು.

2008: ಪಾಕಿಸ್ಥಾನದಲ್ಲಿ ಆಡಳಿತತಾರೂಢ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮುಖಂಡರ ಜತೆ ಹಲವು ಸುತ್ತಿನ ಗೌಪ್ಯ ಮಾತುಕತೆಯ ನಂತರ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಂಸತ್ತನ್ನು ವಿಸರ್ಜಿಸುವ ಹಾಗೂ ಪ್ರಧಾನಿಯನ್ನು ವಜಾ ಮಾಡುವ ಅಧಿಕಾರವನ್ನು ಬಿಟ್ಟುಕೊಡಲು ನಿರ್ಧರಿಸಿದರು. ಸಂವಿಧಾನದ ಅನುಚ್ಛೇದ 58 (2ಬಿ) ಅಡಿಯಲ್ಲಿ ಇರುವ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಗೆ ಸಹಿ ಹಾಕಲು ತಮ್ಮ ಒಪ್ಪಿಗೆ ಇದೆ ಎಂದು ಮುಷರಫ್ ಅವರು ತಮ್ಮ ಸಹಾಯಕನ ಮೂಲಕ ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ತಿಳಿಸಿದರು ಎಂದು ಡಾನ್ ಸುದ್ದಿ ಚಾನೆಲ್ ವರದಿ ಮಾಡಿತು.

2008: ಅನುಪಾತ ಪದ್ಧತಿ ಅಡಿಯಲ್ಲಿ ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಸಂವಿಧಾನ ರಚನೆ ಸಭೆಗೆ ಆಯ್ಕೆಯಾದರು. ಈ ಪದ್ಧತಿಯಲ್ಲಿ ಮಾವೋವಾದಿಗಳು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಗಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 25 ಪಕ್ಷಗಳು ತಾವು ಗಳಿಸಿದ ಸ್ಥಾನಗಳ ಆಧಾರದ ಮೇಲೆ ದೊರಕುವ ಅನುಪಾತ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ಅನುಪಾತ ಪದ್ಧತಿಯಲ್ಲಿ 335 ಅಭ್ಯರ್ಥಿಗಳು, ಚುನಾವಣೆಯ ಮೂಲಕ 240 ಅಭ್ಯರ್ಥಿಗಳು ಆಯ್ಕೆಯಾಗಿದ್ದು 26 ಮಂದಿಯನ್ನು ಪ್ರಧಾನಿ ಅವರು ನಾಮಕರಣ ಮಾಡುವರು.

2008: ಕೊಂಕಣಿ ಲೇಖಕಿ ಗೋದೂಬಾಯಿ ಕೇಳ್ಕರ್ (83) ಅವರು ಪಣಜಿಯಲ್ಲಿ ಹಿಂದಿನ ದಿನ ರಾತ್ರಿ ನಿಧನರಾದರು. ಗೋದೂಬಾಯಿ ಅವರು ಪತಿ ಹೆಸರಾಂತ ಸಾಹಿತಿ, ಪದ್ಮಭೂಷಣ ಪುರಸ್ಕೃತ ರವೀಂದ್ರ ಕೇಳ್ಕರ್ ಮತ್ತು ಪುತ್ರನನ್ನು ಅಗಲಿದರು.

2008: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಗುಂಟೂರಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಫಸಲು ಸುಟ್ಟು ಭಸ್ಮವಾಯಿತು. ಮಾರುಕಟ್ಟೆಯಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳು, ಒಂದೂವರೆ ಲಕ್ಷ ಮೆಣಸಿನಕಾಯಿ ಚೀಲಗಳು ಭಸ್ಮವಾದವು. ಬೆಂಕಿ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯನ್ನು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ತುತ್ತತುದಿಗೆ ಕೊಂಡೊಯ್ಯುವ ಚೀನಾದ ಪ್ರಯತ್ನಕ್ಕೆ ಹಿಮಪಾತ ಅಡ್ಡಿಯಾಗಿ ಪರಿಣಮಿಸಿತು. ವಿಶೇಷ ಜ್ಯೋತಿಯನ್ನು ಹಿಡಿದ ಚೀನಾದ ಪರ್ವತಾರೋಹಿಗಳ ತಂಡದ ಸದಸ್ಯರು ಹಿಂದಿನ ದಿನ ತಮ್ಮ ಸಾಹಸ ಯಾತ್ರೆಗೆ ಚಾಲನೆ ನೀಡಿದರಾದರೂ ಯಶ ಕಾಣಲಿಲ್ಲ. ಹಿಮಾಲಯ ಪರ್ವತ ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿ, ಹಿಮಮಪಾತ ಉಂಟಾದ ಕಾರಣ ಪರ್ವತಾರೋಹಿಗಳು ಸುಮಾರು 6,500 ಮೀ. ಕ್ರಮಿಸಿದ ಬಳಿಕ ಯಾತ್ರೆಯನ್ನು ಮೊಟಕುಗೊಳಿಸಲಾಯಿತು.

2008: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ಲಾಲಾ ತೆಲಗಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ ಆದೇಶ ನೀಡಿತು. ಪುಣೆ ಕಾರಾಗೃಹದಲ್ಲಿದ್ದ ತೆಲಗಿ ವಿರುದ್ಧ ಬೆಂಗಳೂರಿನಲ್ಲಿ ದಾಖಲಾದ ದೂರುಗಳ ವಿಚಾರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನ್ಯಾಯಾಲಯ ಈ ಆದೇಶ ನೀಡಿತು.

2007: ಖ್ಯಾತ ಶಹನಾಯಿ ವಾದಕ ದಿವಂಗತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸಮಾಧಿ ನಿರ್ಮಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದನ್ನು ಪ್ರತಿಭಟಿಸಿ ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದರು. ವಾರಣಾಸಿ ಪಟ್ಟಣದ ದಕ್ಷಿಣ ಭಾಗದ ವಿಧಾನಸಭೆ ಕ್ಷೇತ್ರದ ಸಾರೈ ಹರ್ಹಾ ಪ್ರದೇಶದಲ್ಲಿ ವಾಸಿಸುತ್ತಿರುವ ಬಿಸ್ಮಿಲ್ಲಾ ಖಾನ್ ಕುಟುಂಬದಲ್ಲಿನ ಮತದಾರರ ಸಂಖ್ಯೆ 60. ಇವರ ಪೈಕಿ ಯಾರೊಬ್ಬರೂ ಮತದಾನ ಮಾಡಲು ಬರಲಿಲ್ಲ.

2007: ತಮಿಳುನಾಡಿಗೆ ವರ್ಷಕ್ಕೆ 192 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಾದರೆ ಅಂತಾರಾಜ್ಯ ಗಡಿಯಲ್ಲಿ ಜಲಾಶಯ ನಿರ್ಮಿಸಬೇಕಾಗುತ್ತದೆ ಎಂದು ಕರ್ನಾಟಕವು ಕಾವೇರಿ ನದಿನೀರು ವಿವಾದ ನ್ಯಾಯಮಂಡಳಿಗೆ ತಿಳಿಸಿತು.

2006: ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಮುಂಬೈಯ ಹಿಂದೂಜಾ ಆಸ್ಪತೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ (56) ಈ ದಿನ ಸಂಜೆ 4.10ಕ್ಕೆ ಕೊನೆ ಉಸಿರೆಳೆದರು. ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ 1949ರ ಅಕ್ಟೋಬರ್ 30ರಂದು ಜನಿಸಿದ ಮಹಾಜನ್ 1974ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾದರು. 1979ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದ ಅವರು 1983ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 1986ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. 1990ರಲ್ಲಿ ಎಲ್. ಕೆ. ಆಡ್ವಾಣಿ ಅವರ ರಥಯಾತ್ರೆಯ ಹೊಣೆ ಹೊತ್ತಿದ್ದರು. 1996ರಲ್ಲಿ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. 2001ರಲ್ಲಿ ದೂರಸಂಪರ್ಕ ಸಚಿವರಾದರು. 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಜಾಹೀರಾತಿನ ರೂವಾರಿ. 2005ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ `ಲಕ್ಷ್ಮಣ' ಬಿರುದು. 2006ರ ಏಪ್ರಿಲ್ 22ರಂದು ಮುಂಬೈಯ ವರ್ಲಿಯ ಸ್ವಂತ ಮನೆಯಲ್ಲಿ ಕಿರಿಯ ಸಹೋದರ ಪ್ರವೀಣ್ ಮಹಾಜನ್ ರಿಂದ ಗುಂಡೇಟು.

2006: ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ನೀಡಲಾಗುವ ಕೀರಿಕ್ಕಾಡು ಮಾಸ್ಟರ್ ವಿಷ್ಣುಭಟ್ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರಿಗೆ ಘೋಷಿಸಲಾಯಿತು.

2006: ರಷ್ಯದ ಕಪ್ಪು ಸಮುದ್ರ ತೀರದಲ್ಲಿ ಈದಿನ ನಸುಕಿನ ವೇಳೆಯಲ್ಲಿ ಆರ್ಮೇನಿಯಾದ ನಾಗರಿಕ ವಿಮಾನವೊಂದು ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 113 ಮಂದಿ ಪ್ರಯಾಣಿಕರು ಅಸು ನೀಗಿದರು. ಅರ್ಮೇನಿಯಾ ಏರ್ ಲೈನ್ಸ್ ಅರ್ಮೇನಿಯಾಕ್ಕ್ಕೆ ಸೇರಿದ ಏರ್ ಬಸ್-320 ಯೆರವಾನಿನಿಂದ ದಕ್ಷಿಣ ರಷ್ಯದ ಕಪ್ಪು ಸಮುದ್ರದ ಪ್ರವಾಸಿ ನಗರ ಸೋಚಿಗೆ ತೆರಳುತ್ತಿದ್ದಾಗ ಮುಂಜಾನೆ 7ರ ವೇಳೆಗೆ (ಭಾರತೀಯ ಕಾಲಮಾನ 8.30) ಈ ದುರಂತ ಸಂಭವಿಸಿತು.

2006: ಸಾಹಿತ್ಯ ಕೃತಿ ಚೌರ್ಯ ಆರೋಪ ಹೊತ್ತಿರುವ ಭಾರತೀಯ ಮೂಲದ ಕಾವ್ಯಾ ವಿಶ್ವನಾಥನ್ ಅವರ ವಿವಾದಿಕ ಕೃತಿಯನ್ನು ಶಾಶ್ವತವಾಗಿ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಕಾವ್ಯಾ ಅವರು ಬರೆದಿರುವ ಇತರ ಎರಡು ಪುಸ್ತಕಗಳ ಪ್ರಕಟಣೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನೂ ಪ್ರಕಾಶನ ಸಂಸ್ಥೆ `ಲಿಟಲ್ , ಬ್ರೌನ್ ಅಂಡ್ ಕಂಪೆನಿ' ರದ್ದು ಪಡಿಸಿತು.

2006: ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಸ್ಥಾಪಕ ಅಧ್ಯಕ್ಷ ಡಾ. ಸ್ಯಾಮ್ಯುಯೆಲ್ ಪೌಲ್ ಅವರಿಗೆ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿತು.

1915: ಬೆಂಗಳೂರಿನ ಶಂಕರಪುರಂನ ಪುಟ್ಟ ಬಾಡಿಗೆ ಕೋಣೆಯೊಂದರಲ್ಲಿ ಕನ್ನಡಿಗರ ಬಹುದಿನಗಳ ಆಶಯದ `ಕರ್ನಾಟಕ ಸಾಹಿತ್ಯ ಪರಿಷತ್ತು' (ಈಗಿನ ಕನ್ನಡ ಸಾಹಿತ್ಯ ಪರಿಷತ್ತು) ಆರಂಭಗೊಂಡಿತು. ನಂತರ 1933ರಲ್ಲಿ ಪರಿಷತ್ತು ಚಾಮರಾಜಪೇಟೆಯ ಈಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಕಡೆಗಳಲ್ಲಿಯೂ ಪರಿಷತ್ತು ತನ್ನ ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಗೂ ಪ್ರತ್ಯೇಕ ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಕಾಂಗ್ರೆಸ್ ಪಕ್ಷದಲ್ಲೇ ಹೊಸ ವಿಭಾಗವೊಂದರ ರಚನೆಯನ್ನು ಕಲಕತ್ತಾದಲ್ಲಿ (ಈಗಿನ ಕೋಲ್ಕತ) ಪ್ರಕಟಿಸಿದರು. ಅದನ್ನು `ಫಾರ್ವರ್ಡ್ ಬ್ಲಾಕ್' ಎಂದು ಅವರು ಕರೆದರು. ರಾಷ್ಟ್ರದಲ್ಲಿನ ಎಲ್ಲ ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಪ್ರಗತಿಪರ ಶಕ್ತಿಗಳನ್ನು ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಒಗ್ಗೂಡಿಸುವ ಉದ್ದೇಶ ಇದರದ್ದಾಗಿತ್ತು.

1916: ಐರಿಷ್ ರಾಷ್ಟ್ರೀಯವಾದಿ, ಕವಿ, ಶಿಕ್ಷಣತಜ್ಞ ಪ್ಯಾಟ್ರಿಕ್ ಹೆನ್ರಿ ಪಿಯರ್ಸ್ ಮತ್ತು ಇತರ ಇಬ್ಬರನ್ನು ಬ್ರಿಟಿಷ್ ಸರ್ಕಾರ ಈಸ್ಟರ್ ದಂಗೆಯಲ್ಲಿ ವಹಿಸಿದ ಪಾತ್ರಕ್ಕಾಗಿ ಗಲ್ಲಿಗೇರಿಸಿತು. 1916ರ ಏಪ್ರಿಲ್ 24ರಂದು ಆರಂಭವಾದ ಬ್ರಿಟಿಷ್ ವಿರೋಧಿ ದಂಗೆಯಲ್ಲಿ ಪಿಯರ್ಸ್ ಐರಿಷ್ ಪಡೆಗಳ ಮಹಾದಂಡನಾಯಕನಾಗಿದ್ದ.

1898: ಗೋಲ್ಡಾ ಮೀಯರ್ (1898-1978) ಹುಟ್ಟಿದ ದಿನ. ಈಕೆ ಇಸ್ರೇಲಿನ ನಾಲ್ಕನೇ ಪ್ರಧಾನಿ ಹಾಗೂ ಅಲ್ಲಿನ ಪ್ರಥಮ ಮಹಿಳಾ ಪ್ರಧಾನಿ.

1897: ವಿ.ಕೆ. ಕೃಷ್ಣ ಮೆನನ್ (1897-1974) ಜನ್ಮದಿನ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 1962ರಲ್ಲಿ ಭಾರತದ ಮೇಲೆ ಚೀನ ದಾಳಿ ನಡೆಸಿದಾಗ ಭಾರತದ ರಕ್ಷಣಾ ಸಚಿವರಾಗಿದ್ದರು.

No comments:

Advertisement