Thursday, May 6, 2010

ಇಂದಿನ ಇತಿಹಾಸ History Today ಮೇ 07

ಇಂದಿನ ಇತಿಹಾಸ

ಮೇ 07

ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ಈದಿನ ನಡೆಸಿತು. ಮಧ್ಯಂತರಗಾಮೀ ಖಂಡಾಂತರ ಕ್ಷಿಪಣಿಯನ್ನು (ಐ ಆರ್ ಬಿ ಎಂ) ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಮುಚ್ಚಯದ ಸಂಚಾರಿ ಉಡಾವಣಾ ವಾಹನದಿಂದ ಬೆಳಗ್ಗೆ 9.56ರ ವೇಳೆಗೆ ಉಡಾಯಿಸಲಾಯಿತು.

2009: ಎಂಟು ರಾಜ್ಯಗಳ 85 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಒಟ್ಟಾರೆ ಶೇ 57ರಷ್ಟು ಮತದಾನವಾಯಿತು. ಪಶ್ಚಿಮ ಬಂಗಾಳದಲ್ಲಿ ಮೂವರು, ರಾಜಸ್ಥಾನದಲ್ಲಿ ಒಬ್ಬ ಸೇರಿ ಒಟ್ಟು ನಾಲ್ವರು ಹಿಂಸಾಚಾರದಲ್ಲಿ ಮೃತರಾದರು. ಉಳಿದಂತೆ ಬಹುತೇಕ ಶಾಂತಿಯುತ ಚುನಾವಣೆ ನಡೆಯಿತು.

2009: ಎಲ್‌ಟಿಟಿಇ ವಿರುದ್ಧ ಕಾದಾಟವನ್ನು ತೀವ್ರಗೊಳಿಸಿದ ಶ್ರೀಲಂಕಾ ಸೇನಾ ಪಡೆಗಳು ಅದರ ನಾಯಕ ವಿ.ಪ್ರಭಾಕರನ್ ಅಡಗಿರುವ ಸ್ಥಳದಿಂದ ಕೇವಲ 800 ಮೀಟರ್‌ಗಳಷ್ಟು ದೂರ ತಲುಪಿದವು. ದಾಳಿಯಲ್ಲಿ ಹತ್ತಾರು ಬಂಡುಕೋರರು ಹತರಾದರು. ಮೂವರ ಶವಗಳು ಲಭಿಸಿದವು. ಸಂಘರ್ಷ ವಲಯದಲ್ಲಿ 10ರಿಂದ 15 ಸಾವಿರ ನಾಗರಿಕರು ಸಿಲುಕಿ ಅತಂತ್ರರಾದರು.

2009: ನಮಕ್ಕಲ್ ಜಿಲ್ಲೆಯ ಖಾದ್ಯ ತೈಲ ಗಿರಣಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಬಾಲ ಕಾರ್ಮಿಕರೂ ಸೇರಿದಂತೆ 14 ಮಂದಿ ಕಾರ್ಮಿಕರು ಸಜೀವ ದಹನಗೊಂಡ ದಾರುಣ ಘಟನೆ ಸಂಭವಿಸಿತು. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡರು. ವಲಯಪಟ್ಟಿಯಲ್ಲಿ ಭತ್ತದ ತೌಡಿನಿಂದ ಖಾದ್ಯತೈಲ ತಯಾರಿಸುತ್ತಿದ್ದ ಗೋದಾಮಿನಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿತು.

2009: ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ನೀಡುವ 'ಚಿದಾನಂದ ಪ್ರಶಸ್ತಿ'ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಆಯ್ಕೆಯಾದರು.

2009: ಧಾರವಾಡದ ವ್ಯಂಗ್ಯಚಿತ್ರ ಕಲಾವಿದ ಪ್ರಭಾಕರ ರಾವ್ ಬೈಲ್ ಅವರಿಗೆ ಬೆಂಗಳೂರಿನ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತು. ದೇಶದ ಏಳು ಪ್ರಸಿದ್ಧ ವ್ಯಂಗ್ಯಚಿತ್ರಕಾರರಿಗೆ ಈ ಪ್ರಶಸ್ತಿ ದೊರೆತಿದ್ದು, ರಾಜ್ಯದಿಂದ ರಾವ್ ಬೈಲ್ ಒಬ್ಬರು ಈ ಪ್ರಶಸ್ತಿಗೆ ಪಾತ್ರರಾದರು. ಮೂಲತಃ ಕೇರಳದವರಾದ ರಾವ್ ಬೈಲ್, ಭಾರತೀಯ ಜೀವ ವಿಮಾ ನಿಗಮದ ಮುಂಬೈಯ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿ, ನಂತರ 1989ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಧಾರವಾಡಕ್ಕೆ ಬಂದು ನೆಲೆಸಿದ್ದರು. 'ಪ್ರಜಾವಾಣಿ', 'ಮಯೂರ' ಸೇರಿದಂತೆ ರಾಷ್ಟ್ರದ ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ.

2009: ವಿಪ್ರೊ ಟೆಕ್ನಾಲಾಜಿಸ್‌ನ ನೂತನ 'ತರಂಗ್' ಪ್ರಯೋಗಾಲಯವನ್ನು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು.

2008: ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ಈದಿನ ನಡೆಸಿತು. ಮಧ್ಯಂತರಗಾಮೀ ಖಂಡಾಂತರ ಕ್ಷಿಪಣಿಯನ್ನು (ಐ ಆರ್ ಬಿ ಎಂ) ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಮುಚ್ಚಯದ ಸಂಚಾರಿ ಉಡಾವಣಾ ವಾಹನದಿಂದ ಬೆಳಗ್ಗೆ 9.56ರ ವೇಳೆಗೆ ಉಡಾಯಿಸಲಾಯಿತು. 16 ಮೀಟರ್ ಉದ್ದ, 1.8 ಮೀಟರ್ ಅಗಲದ ಕ್ಷಿಪಣಿಯು ಲಂಬವಾಗಿ ಮೇಲಕ್ಕೇರಿ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ದಟ್ಟವಾದ ಕಿತ್ತಳೆ ಹಾಗೂ ಬಿಳಿ ಬಣ್ಣದ ಧೂಮದ ಕಂಭವನ್ನು ಹಿಂದಿನಿಂದ ಸೃಷ್ಟಿಸುತ್ತಾ ಗಗನಕ್ಕೆ ಚಿಮ್ಮಿತು. ಕೆಲವೇ ಸೆಕೆಂಡುಗಳಲ್ಲಿ ಬರಿಗಣ್ಣಿಗೆ ಕಾಣದಷ್ಟು ದೂರಕ್ಕೆ ಅದು ಚಲಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಅಗ್ನಿ-3 ಕ್ಷಿಪಣಿಯ ಒಳಗೆ ಅದರ ಮಾರ್ಗದರ್ಶನಕ್ಕಾಗಿ ಕಂಪ್ಯೂಟರ್ ಒಂದನ್ನು ಇರಿಸಲಾಗಿತ್ತು. ಮುಖ್ಯ ಉಡಾವಣಾ ಸ್ಥಳವಲ್ಲದೆ, ನೌಕಾಪಡೆಯ ಇತರ ಎರಡು ಸಮರ ನೌಕೆಗಳು ಅತ್ಯಾಧುನಿಕ ಬ್ಯಾಟರಿ ಚಾಲಿತ ರೇಡಾರ್, ಎಲೆಕ್ಟ್ರೋ- ಆಪ್ಟಿಕ್ ಪತ್ತೆ ವ್ಯವಸ್ಥೆಗಳು, ಟೆಲಿಮೆಟ್ರಿಕ್ ಮಾಹಿತಿ ಕೇಂದ್ರಗಳೊಂದಿಗೆ ಕ್ಷಿಪಣಿಯ ಚಲನೆಯನ್ನು ಗಮನಿಸುತ್ತವೆ. ಹಾರಾಟದ ಮಾಹಿತಿ ಲಭಿಸಿದ ಬಳಿಕ ಪರೀಕ್ಷಾ ಫಲಿತಾಂಶ ತಿಳಿಯುತ್ತದೆ ಎಂದು ರಕ್ಷಣಾ ಮೂಲಗಳು ಹೇಳಿದವು. 48 ಟನ್ ತೂಕದ ಅಗ್ನಿ-3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು 2006ರ ಜುಲೈ 9ರಂದು ಮೊದಲ ಬಾರಿಗೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣ ಅದು ವಿಫಲಗೊಂಡಿತ್ತು. 2007ರ ಏಪ್ರಿಲ್ 12ರಂದು ನಡೆಸಲಾದ ಎರಡನೇ ಪರೀಕ್ಷಾ ಹಾರಾಟವು ಯಶಸ್ವಿಯಾಗಿ ಉದ್ದೇಶವನ್ನು ಈಡೇರಿಸಿತ್ತು. ಅಗ್ನಿ-3 ರಾಷ್ಟ್ರದ ಮೊತ್ತ ಮೊದಲ ಘನ ಇಂಧನ ಕ್ಷಿಪಣಿಯಾಗಿದ್ದು, ಸುಲಲಿತವಾಗಿ ಬಳಸಲು ಸಾಧ್ಯವಿರುವಂತಹ ಕ್ಷಿಪಣಿ. ಈ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಭಾರತ ಇದೀಗ ದೇಶಾಂತರ್ಗಾಮಿ ಕ್ಷಿಪಣಿಗಳನ್ನು (ಐ ಆರ್ ಬಿ ಎಂ) ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದಂತಾಯಿತು. 3,500ಕಿ.ಮೀ. ವ್ಯಾಪ್ತಿಯುಳ್ಳ ಈ ಕ್ಷಿಪಣಿ ಭಾರತದಿಂದ ಚೀನಾದ ಬೀಜಿಂಗ್ ಅಥವಾ ಶಾಂಘೈ ನಗರಕ್ಕೆ ಕೆಲವೇ ಕ್ಷಣಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿರುವುದು ವಿಶೇಷ.

2008: ಬಾಂಗ್ಲಾದೇಶದ ಭ್ರಷ್ಟಾಚಾರ ವಿರೋಧಿ ಸಮಿತಿಯು ವರ್ಷದ ಹಿಂದೆ ಬಂಧಿಸಲಾದ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್ ವಿರುದ್ಧ, ಕೊಲೆ ಪ್ರಕರಣವೊಂದನ್ನು ಮುಚ್ಚಿಹಾಕಲು 12.6 ಕೋಟಿ ರೂಪಾಯಿ ಲಂಚ ಪಡೆದಿರುವುದಾಗಿ ಆಪಾದಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ರಹಮಾನ್, ಮಾಜಿ ಬಿ ಎನ್ ಪಿ ಸಚಿವ ಲುಫ್ತುಜಾಮನ್ ಬಾಬರ್ ಮತ್ತು ಇತರ ಆರು ಮಂದಿ ವಿರುದ್ಧ 2006ರಲ್ಲಿ ನಡೆದ ಬಶುಂಧರಾ ಬಿಸಿನೆಸ್ ಗ್ರೂಪಿನ ನಿರ್ದೇಶಕ ಹುಮಾಯೂನ್ ಕಬೀರ ಸಬ್ಬೀರ್ ಕೊಲೆ ಪ್ರಕರಣದ ತನಿಖೆಗೆ ಅಡ್ಡಿ ಒಡ್ಡಲು ಅಧಿಕಾರ ದುರುಪಯೋಗಿಸಿದ ಆಪಾದನೆ ಹೊರಿಸಲಾಯಿತು. ಆರೋಪಿಗಳು 21 ಕೋಟಿ ಟಾಕಾವನ್ನು ಕಂಪೆನಿ ಅಧ್ಯಕ್ಷ ಅಹ್ಮದ್ ಅಕ್ಬರ್ ಸೋಭನ್ ಅವರಿಂದ ಲಂಚ ಪಡೆದಿದ್ದರು. ಸಬ್ಬೀರನನ್ನು ಕೊಲೆಗೈದ ಆರೋಪಕ್ಕೆ ಒಳಗಾಗಿರುವ ಸೋಭನ್ ಪುತ್ರ ಷಫಿಯತ್ ಸೋಭನ್ ಸನ್ವೀರನ ಹೆಸರನ್ನು ಪ್ರಕರಣದಿಂದ ಕೈಬಿಡಲು ಈ ಲಂಚ ಸ್ವೀಕರಿಸಲಾಗಿತ್ತು ಎಂದು ಸಮಿತಿ ಹೇಳಿತು.

2008: ರಷ್ಯಾದ ನೂತನ ಅಧ್ಯಕ್ಷರಾಗಿ ದಿಮಿತ್ರಿ ಮೆಡ್ವೆಡೆವ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಮೆಡ್ವೆಡೆವ್, ವ್ಲಾದಿಮೀರ್ ಪುಟಿನ್ ಅವರನ್ನು ಮತ್ತೆ ರಷ್ಯ ಪ್ರಧಾನಿಯಾಗಿ ನೇಮಿಸಿದರು. ಮಾಸ್ಕೊ ನಗರದ ದಿ ಗ್ರಾಂಡ್ ಕ್ರೆಮ್ಲಿನ್ ಅರಮನೆಯಲ್ಲಿ ನಡೆದ ಅಭೂತಪೂರ್ವ ಸಮಾರಂಭದಲ್ಲಿ ಎರಡು ಸಾವಿರ ಆಹ್ವಾನಿತ ಪ್ರತಿನಿಧಿಗಳು ಹಾಜರಿದ್ದರು. ಮಾಜಿ ಕಾರ್ಪೊರೇಟ್, ವಕೀಲರಾಗಿದ್ದ ಮೆಡ್ವೆಡೆವ್, ಪುಟಿನ್ ಅವರ ಬಹಳ ಹಳೆಯ ಒಡನಾಡಿ. ಪ್ರಧಾನಿ ವಿಕ್ಟೋರ್ ಝುಬ್ಕೊವ್ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ಅವರ ಸ್ಥಾನಕ್ಕೆ ಮೆಡ್ವೆಡೆವ್ ಅವರು ಪುಟಿನ್ ಅವರನ್ನು ನೇಮಕ ಮಾಡಿದರು.

2008: ಮ್ಯಾನ್ಮಾರಿನಲ್ಲಿ ನರ್ಗೀಸ್ ಚಂಡಮಾರುತದ ಹಾವಳಿಯಲ್ಲಿ ಬದುಕುಳಿದವರ ನೆರವಿಗಾಗಿ ಭಾರತ `ಸಹಾಯ ಕಾರ್ಯಾಚರಣೆ' ಆರಂಭಿಸಿತು. ಈ ಚಂಡಮಾರುತದಿಂದ ಮ್ಯಾನ್ಮಾರಿನಲ್ಲಿ ಸುಮಾರು 22.500 ಜನರು ಸತ್ತಿದ್ದು ಇತರ 41 ಸಾವಿರ ಜನರು ನಾಪತ್ತೆಯಾದರು. ಮೇ 2 ಮತ್ತು 3ರಂದು ಮ್ಯಾನ್ಮಾರ್ ಕಡಲ ತೀರವನ್ನು ಅಪ್ಪಳಿಸಿದ್ದ ಈ ಚಂಡಮಾರುತವು ಅನೇಕ ಹಳ್ಳಿಗಳನ್ನು ನೆಲಸಮ ಮಾಡಿತ್ತು. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾದರು.

2008: ಫಾರ್ವರ್ಡ್ ಬ್ಲಾಕ್ ಸದಸ್ಯ ಬರುನ್ ಮುಖರ್ಜಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಧ್ಯಕ್ಷ ಹಮೀದ್ ಅನ್ಸಾರಿ ಮಾನ್ಯ ಮಾಡಿದರು. ಎಡರಂಗವು ರಾಜ್ಯಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಪಿಐಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2008: ದಶಕದ ಬಳಿಕ ಚೀನಾ ಹಾಗೂ ಜಪಾನ್ ದೇಶಗಳ ನಡುವೆ ಮೊದಲ ಶೃಂಗ ಸಭೆ ಟೋಕಿಯೋದಲ್ಲಿ ಆರಂಭವಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ `ವಿಶ್ವ ಆರ್ಥಿಕ ಪ್ರಶಸ್ತಿ'ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ತಿನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ `ಯಾತ್ರೆ'ಗೆ ಮೀರತ್ತಿನಲ್ಲಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮಣಿ ಶಂಕರ ಅಯ್ಯರ್ ಚಾಲನೆ ನೀಡಿದರು.

2007: ಕಾವೇರಿ ನ್ಯಾಯಮಂಡಳಿ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಕೇರಳ, ಮತ್ತು ತಮಿಳುನಾಡು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ಅಂಗೀಕರಿಸಿ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸುವ ಮೂಲಕ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಹಸಿರು ನಿಶಾನೆ ತೋರಿತು.

2007: ಢಾಕ್ಕಾಕ್ಕೆ ಮರಳುವುದಕ್ಕೆ ಕೊನೆ ಕ್ಷಣದಲ್ಲಿ ವಿಮಾನ ಏರಲು ಅವಕಾಶ ನಿರಾಕರಿಸಲಾದ 15 ದಿನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (60) ಅವರು ಲಂಡನ್ನಿನಿಂದ ಸ್ವದೇಶಕ್ಕೆ ಪ್ರಯಾಣ ಬೆಳೆಸಿದರು.

2007: ತೀವ್ರ ಹಣಾಹಣಿಯಿಂದ ಕೂಡಿದ್ದ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ಅಭ್ಯರ್ಥಿ ನಿಕೋಲಾಸ್ ಸರ್ಕೋಜಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.

2006: ಇರಾನಿನ ದಕ್ಷಿಣಕ್ಕಿರುವ ಜರಾಂದ್ ಪಟ್ಟಣ ಹಾಗೂ ತೈವಾನಿನ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.2ರಷ್ಟು ಪ್ರಮಾಣದ ಭಾರಿ ಭೂಕಂಪ ಸಂಭವಿಸಿತು. 74 ಮಂದಿ ಗಾಯಗೊಂಡು, ಬಹುತೇಕ ಮನೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಂಡವು.

2006: ಗ್ರಾಮೀಣ ಉನ್ನತೀಕರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ `ಅಸ್ತ್ರ' ಸಂಸ್ಥೆಯ ಸ್ಥಾಪಕ ಎಕೆಎನ್ ಎಂದೇ ಖ್ಯಾತರಾಗಿದ್ದ ಪ್ರೊ. ಅಮೂಲ್ಯ ಕುಮಾರ ನಾರಾಯಣ ರೆಡ್ಡಿ (75) ಮೂತ್ರಪಿಂಡದ ವೈಫಲ್ಯದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಸು ನೀಗಿದರು. ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರೀಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಸಂಶೋಧನಾ ಅಧಿಕಾರಿಯಾಗಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರೆಡ್ಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ `ಅಸ್ತ್ರ' ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎನರ್ಜಿ ಫಾರ್ ಸಸ್ಟೈನೇಬಲ್ ವರ್ಲ್ಡ್ಡ್ ಸಂಸ್ಥೆಯು ಇವರಿಗೆ 2000ದಲ್ಲಿ ವೋಲ್ವೊ ಪ್ರಶಸ್ತಿ ನೀಡಿ ಗೌರವಿಸಿತ್ತು. 2002ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಕೂಡಾ ಇವರಿಗೆ ಲಭಿಸಿತ್ತು.

2006: ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯು ಲಘು ಸಂಗೀತದಲ್ಲಿ ಮಾಡಿದ ಸಾಧನೆಗೆ ನೀಡುವ ಲತಾ ಮಂಗೇಶ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

1978: ಇಟಲಿಯ ರೀನ್ ಹೋಲ್ಡ್ ಮೆಸ್ನರ್ ಮತ್ತು ಆಸ್ಟ್ರಿಯಾದ ಪೀಟರ್ ಹಬ್ಲೆರರ್ ಆಮ್ಲಜನಕ ಇಲ್ಲದೆಯೇ ಮೊತ್ತ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದರು.

1956: ಕಲಾವಿದ ವಲ್ಲೀಶ್ ವಿ. ಜನನ.

1955: ಕಲಾವಿದ ರಮೇಶ ಟಿ.ಎನ್. ಜನನ.

1949: ಸಂಗೀತ ಹಾಗೂ ಶಿಕ್ಷಣ ತಜ್ಞ ಡಾ. ಎಸ್.ವಿ. ರಮಣಕುಮಾರ್ ಅವರು ಜಿ.ಎಲ್. ಸೂರಪ್ಪ- ಕಮಲಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದರು.

1945: ಕಲಾವಿದ ಶೆಲ್ವ ನಾರಾಯಣ ಜನನ.

1915: ಜರ್ಮನಿಯ ಯು-139 ಜಲಾಂತರ್ಗಾಮಿ ಮೂಲಕ ಸಿಡಿಸಿದ ಜಲಕ್ಷಿಪಣಿ (ಟಾರ್ಪೆಡೊ) ಐರಿಷ್ ಕರಾವಳಿಯ ಬಳಿ ಇದ್ದ ಬ್ರಿಟಿಷ್ ನೌಕೆ ಲುಸಿಟಾನಿಯಾವನ್ನು ಮುಳುಗಿಸಿತು. ಅದರಲ್ಲಿದ್ದ ಸುಮಾರು 1200 ಜನ ಮೃತರಾದರು.

1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದ. `ನೀವು ಬಟನ್ ಒತ್ತಿರಿ, ಉಳಿದದ್ದನ್ನೆಲ್ಲ ನಾವು ಮಾಡುತ್ತೇವೆ' ಎಂಬ ಘೋಷಣೆಯೊಂದಿಗೆ ಆತ ಈ ಕ್ಯಾಮರಾವನ್ನು ಮಾರುಕಟ್ಟೆಗೆ ಬಿಟ್ಟ. ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಸರಳ ಬಾಕ್ಸ್ ಕ್ಯಾಮರಾದಿಂದ 100 ಫ್ರೇಮುಗಳ ರೋಲ್ ಹಾಕಿ ಫೋಟೋ ತೆಗೆಯಬಹುದಿತ್ತು. ಫಿಲ್ಮ್ ಮುಗಿದ ಬಳಿಕ ಡೆವಲಪ್ಪಿಂಗ್, ಪ್ರಿಂಟಿಂಗ್, ರಿಲೋಡಿಂಗಿಗೆ ಕ್ಯಾಮರಾವನ್ನೇ ಉತ್ಪಾದಕರಿಗೆ ಕಳುಹಿಸಬಹುದಾಗಿತ್ತು.

1861: ರಬೀಂದ್ರನಾಥ್ ಟ್ಯಾಗೋರ್ (1861-1941) ಜನ್ಮದಿನ. ಬಂಗಾಳಿ ಕವಿ, ಸಾಹಿತಿಯಾದ ಇವರು 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷಿಯನ್ನರೆಂಬ ಹೆಗ್ಗಳಿಕೆ ಪಡೆದವರು. ಗಾಂಧೀಜಿಯವರನ್ನು ಮೊತ್ತ ಮೊದಲ ಬಾರಿಗೆ `ಮಹಾತ್ಮ' ಎಂಬುದಾಗಿ ಕರೆದದ್ದು ರಬೀಂದ್ರನಾಥ್ ಟ್ಯಾಗೋರ್ ಅವರೇ.

No comments:

Advertisement