ಇಂದಿನ ಇತಿಹಾಸ
ಮೇ 08
ಇಂದು ವಿಶ್ವ ರೆಡ್ ಕ್ರಾಸ್ ದಿನ. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣನಾದ ಸ್ವಿಸ್ ವ್ಯಾಪಾರಿ ಹೆನ್ರಿ ಡ್ಯೂನಾಟ್ ಅವರ ಜನ್ಮದಿನ. 1859ರಲ್ಲಿ ಸೆಲ್ಫೋರಿನೋ ಎಂಬಲ್ಲಿ ಬರುತ್ತಿದ್ದಾಗ ಯುದ್ಧದಲ್ಲಿ ಸಹಸ್ರಾರು ಜನ ಸತ್ತು ಹಲವಾರು ಗಾಯಗೊಂಡು ನರಳುತ್ತಿದ್ದುದನ್ನು ಡ್ಯೂನಾಟ್ ನೋಡಿದರು. ತತ್ ಕ್ಷಣವೇ ತಮ್ಮ ಕೆಲಸ ಬದಿಗಿಟ್ಟು ಸ್ಥಳೀಯರ ನೆರವು ಪಡೆದು ಗಾಯಾಳುಗಳಿಗೆ ಸಹಾಯ ಮಾಡಿದರು. ಇದರೊಂದಿಗೆ ಹುಟ್ಟಿದ ರೆಡ್ ಕ್ರಾಸ್ ಸಂಸ್ಥೆ ಈಗ ವಿಶ್ವವ್ಯಾಪಿ. ಜಾತಿ, ಧರ್ಮ, ಪ್ರದೇಶ, ರಾಜಕೀಯ ಇತ್ಯಾದಿ ಯಾವುದರ ಆಧಾರದ ಮೇಲೆ ತಾರತಮ್ಯ ಮಾಡದೆ ತೊಂದರೆಯಲ್ಲಿ ಇರುವ ಜನರಿಗೆ ನೆರವಾಗುತ್ತದೆ.
2009: ರಾಗಿಂಗ್ ಘಟನೆಗಳ ಪರಿಶೀಲನೆಗಾಗಿ ಸಮಿತಿಗಳನ್ನು ರಚಿಸಿ ರಾಗಿಂಗ್ ಹಾವಳಿಯನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಿಂದ ರಾಗಿಂಗ್ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು ಹಲವಾರು ನಿರ್ದೇಶನಗಳನ್ನು ನೀಡಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ಪೀಠವು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆಗಾಗಿ ಪ್ರತಿಯೊಂದು ಕಾಲೇಜು ಕೂಡಾ ಮನಃಶಾಸ್ತ್ರಜ್ಞರನ್ನು ಹೊಂದಿರಬೇಕು ಎಂದು ಹೇಳಿತು. ಮದ್ಯಪಾನ ಸಮಸ್ಯೆಯ ಪ್ರಕರಣಗಳ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಚಟ ಬಿಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು.
2009: ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡವು (ಸಿಟ್) 2002ರ ಗೋಧ್ರಾ ಘಟನೆ ನಂತರದ ದಂಗೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳಿಗೆ ಒಂಭತ್ತು ನ್ಯಾಯಾಧೀಶರನ್ನು ಗುಜರಾತ್ ಹೈಕೋರ್ಟ್ ನಿಯೋಜಿಸಿತು. ಈ ನಿಟ್ಟಿನಲ್ಲಿ ಈ ತಿಂಗಳ ಆದಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ಆದೇಶ ಹೊರಡಿಸಿದ ಹೈಕೋರ್ಟ್ ಪ್ರತಿಯೊಂದು ವಿಶೇಷ ನ್ಯಾಯಾಲಯಕ್ಕೂ ಒಬ್ಬೊಬ್ಬರಂತೆ ನ್ಯಾಯಾಧೀಶರನ್ನು ನಿಯೋಜಿಸಿತು. ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಸತ್ರ ನ್ಯಾಯಾಧೀಶ ಪಿ.ಆರ್. ಪಟೇಲ್ ಅವರು ಗೋಧ್ರಾ ರೈಲು ಹತ್ಯಾಕಾಂಡ ಘಟನೆಯ ತನಿಖೆಗೆಗಾಗಿ ನಿಯೋಜಿತರಾದರು.
2009: ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವುದು, ಅಪರಾಧ ಮಾಡಿದ್ದಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸುವುದು ಸೇರಿದಂತೆ ಕರ್ನಾಟಕ ವ್ಯವಸ್ಥಿತ ಅಪರಾಧ ನಿಯಂತ್ರಣ ಮಸೂದೆ- 2009ಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಸಲುವಾಗಿ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
2009: ಜಗತ್ತಿನ ನಿದ್ದೆಗೆಡಿಸಿದ ಎಚ್1ಎನ್1 ರೋಗಾಣುವಿನ (ವೈರಸ್) ತಳಿಸೂತ್ರ ಭೇದಿಸುವಲ್ಲಿ ತಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಕೆನಡಾ ಪ್ರತಿಪಾದಿಸಿತು. ಕೆನಡಾ ವಿಜ್ಞಾನಿಗಳ ತಂಡವ ರೋಗಾಣು ಹೇಗೆ ಹರಡುತ್ತದೆ, ಅದು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನು ಆವಿಷ್ಕರಿಸಿದೆ. ಈ ರೋಗಾಣುವಿನ ತಳಿ ಸೂತ್ರದ ರಹಸ್ಯ ಪತ್ತೆಹಚ್ಚಿದ ಹೆಗ್ಗಳಿಕೆ ನಮ್ಮದಾಗಿದೆ. ಇನ್ನು ಮುಂದೆ ಹಂದಿ ಜ್ವರ ನಿಯಂತ್ರಣ, ಲಸಿಕೆ ಹಾಗೂ ಪರಿಣಾಮಕಾರಿ ಔಷಧಗಳ ತಯಾರಿಕೆಗಳ ಹೊಸ ಬಾಗಿಲುಗಳನ್ನು ಇದು ತೆರೆಯಲಿದೆ ಎಂದು ತಜ್ಞರು ಟೊರಾಂಟೊದಲ್ಲಿ ಅಭಿಪ್ರಾಯಪಟ್ಟರು.
2009: 'ಅಜ್ಮಲ್ ಅಮೀರ್ ಕಸಾಬ್ ಎ.ಕೆ. 47 ರೈಫಲ್‌ನಿಂದ ಎಎಸ್‌ಐ ತುಕಾರಾಂ ಓಂಬ್ಳೆ ಅವರತ್ತ ಗುಂಡು ಹಾರಿಸಿದ್ದನ್ನು ನಾನು ನೋಡಿದೆ' ಎಂದು ಮುಂಬೈ ದಾಳಿಯ ಮೊದಲ ಪ್ರತ್ಯಕ್ಷ ಸಾಕ್ಷಿ ಸಬ್ ಇನ್ಸ್‌ಪೆಕ್ಟರ್ ಭಾಸ್ಕರ್ ಕದಂ ಅವರು, ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ಇತ್ತೀಚೆಗೆ ಆರಂಭವಾದ ಪ್ರಕರಣದ ವಿಚಾರಣೆ ವೇಗ ಪಡೆದುಕೊಂಡಿತು. ದಾಳಿಯಂದು ಕಸಾಬ್ ಜತೆ ಸ್ಕೋಡಾ ಕಾರಿನಲ್ಲಿ ಇದ್ದ ಅಬು ಇಸ್ಮಾಯಿಲ್‌ನತ್ತ ಗುಂಡು ಹಾರಿಸಿದ ಅಧಿಕಾರಿಗಳ ತಂಡದಲ್ಲಿ ತಾವೂ ಒಬ್ಬರಾಗಿದ್ದುದಾಗಿ ಕದಂ ಹೇಳಿದರು. 2008ರ ನವೆಂಬರ್ 26ರಂದು ಗಿರ್‌ಗಾವ್ ಚೌಪಾಟಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಓಂಬ್ಳೆ ಮೃತರಾಗಿದ್ದರು.
2008: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಪಿ. ವೇಣು ಗೋಪಾಲ್ ಅವರು ತಮ್ಮ ಎತ್ತಂಗಡಿ ಮಾಡುವ `ಏಮ್ಸ್' ಕಾಯ್ದೆ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. ಏಮ್ಸ್ ಕಾಯ್ದೆಗೆ ತಿದ್ದುಪಡಿಯು ಅಸಂವಿಧಾನಾತ್ಮಕವಾದುದು ಹಾಗಾಗಿ ಅದನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ವೇಣುಗೋಪಾಲ್ ವಿರುದ್ಧ `ಸಮರ'ವನ್ನೇ ಸಾರಿದಂತಿದ್ದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರಿಗೆ ಈ ತೀರ್ಪಿನಿಂದ ತೀವ್ರ ಮುಖಭಂಗವಾದರೆ, ಕೇಂದ್ರ ಸರ್ಕಾರಕ್ಕೆ ಕೂಡಾ ಮುಜುಗರ ಉಂಟಾಯಿತು. ಏಮ್ಸ್ ನಿರ್ದೇಶಕ ಸ್ಥಾನದಲ್ಲಿ ಇರುವವವರು 65 ವರ್ಷಕ್ಕೆ ನಿವೃತ್ತಿ ಹೊಂದಬೇಕು ಮತ್ತು ಅವರ ಅಧಿಕಾರದ ಅವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲೂಬಹುದು ಎಂದು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಹರ್ಜಿತ್ ಸಿಂಗ್ ಬೇಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.
2008: ಜಮ್ಮುವಿನ ಕಿಸ್ತ್ವಾರ್ ಪ್ರದೇಶದಲ್ಲಿ ಚಿನಾಬ್ ನದಿಗೆ ಬಸ್ ಉರುಳಿ ಬಿದ್ದ ಕಾರಣ 28 ಮಂದಿ ಪ್ರಯಾಣಿಕರು ಅಸು ನೀಗಿದರು.
2008: ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಕುರಿತು ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಕಾರ್ಯಕಾರಿ ಸಮಿತಿ ಕಳೆದ ಏಪ್ರಿಲಿನಲ್ಲಿ ತೆಗೆದುಕೊಂಡ ನಿರ್ಣಯವನ್ನು ಆಕ್ಷೇಪಿಸಿದ ಚುನಾವಣಾ ಆಯೋಗ ಮೇ 28 ರತನಕ ಇದನ್ನು ತಡೆಹಿಡಿಯಲು ಸೂಚಿಸಿತು. ಬಿಎಂಐಸಿ ಯೋಜನೆಯಿಂದ `ನೈಸ್'ನ್ನು ಬೇರ್ಪಡಿಸಲು ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ಮಾರ್ಪಾಡು ಮಾಡಿ ಕಳೆದ ಏಪ್ರಿಲ್ 25 ರಂದು ರಾಜ್ಯಪಾಲರು ನಿರ್ಣಯ ತೆಗೆದುಕೊಂಡಿದ್ದರು. ರಾಜ್ಯಪಾಲರ ನಿರ್ಣಯದಲ್ಲಿ ನೈಸ್ ಮೇಲೆ ಹಿಂದಿನ ಸರ್ಕಾರ ವಿಧಿಸಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಈ ನಿರ್ಣಯವನ್ನು ರಾಜ್ಯಪಾಲರು ಚುನಾವಣೆ ಮುಗಿಯುವ ತನಕ ಅಂದರೆ ಮೇ 28ರತನಕ ಕೈಗೊಳ್ಳುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ತಿಳಿಸಿದರು.
2008: ಸುನಿಲ್ ಗಾವಸ್ಕರ್ ಅವರು ಐಸಿಸಿ ಕ್ರಿಕೆಟ್ ಸಮಿತಿಯ ಹುದ್ದೆಗೆ ರಾಜೀನಾಮೆ ನೀಡಿದರು. ಭಾರತ ತಂಡದ ಮಾಜಿ ಆಟಗಾರ ಈದಿನ ತಮ್ಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ತಿಳಿಸಿದರು. ಇದರೊಂದಿಗೆ ಗಾವಸ್ಕರ್ ಅವರ ಎಂಟು ವರ್ಷಗಳ ಸುದೀರ್ಘ ಅವಧಿಯ ಆಡಳಿತ ಅನಿರೀಕ್ಷಿತವಾಗಿ ಅಂತ್ಯಗೊಂಡಿತು. ಗಾವಸ್ಕರ್ ಈ ಅವಧಿಯಲ್ಲಿ ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರಲ್ಲದೆ ವಿವಾದಗಳಲ್ಲೂ ಸಿಲುಕಿದ್ದರು. ಐಸಿಸಿ ಹುದ್ದೆಯಲ್ಲಿದ್ದುಕೊಂಡು ಅವರು ಮಾಧ್ಯಮಗಳಿಗೆ ಅಂಕಣ ಬರೆಯುತ್ತಿದ್ದುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್ ಸಮಿತಿ ಹುದ್ದೆ ಅಥವಾ ಮಾಧ್ಯಮ ಹುದ್ದೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಐಸಿಸಿ ಇತ್ತೀಚೆಗೆ ಅವರಲ್ಲಿ ಕೇಳಿಕೊಂಡಿತ್ತು.
2008: ಒಲಿಂಪಿಕ್ ಜ್ಯೋತಿಯ ಮೌಂಟ್ ಎವರೆಸ್ಟ್ ಪಯಣ ಈದಿನ ಯಶಸ್ವಿಯಾಗಿ ನಡೆಯಿತು. ಬೀಜಿಂಗ್ ಕೂಟದ ಜ್ಯೋತಿಯ ಪಯಣದ `ಹೈಲೈಟ್' ಎಂದೇ ಬಣ್ಣಿಸಲಾದ ಈ ಸಾಹಸ ಯಾತ್ರೆ ಯಶಸ್ವಿಯಾಗಿ ಕೊನೆಗೊಂಡಿತು. 26 ಸದಸ್ಯರ ಪರ್ವತಾರೋಹಿಗಳ ತಂಡದವರು ಬೆಳಗಿನ ಜಾವ 3.00 ಗಂಟೆಗೆ ತಮ್ಮ ಯಾತ್ರೆಯನ್ನು ಆರಂಭಿಸಿ, 9.18ಕ್ಕೆ ಸರಿಯಾಗಿ 8,844 ಮೀ. ಎತ್ತರದ ಶಿಖರದ ತುತ್ತತುದಿ ತಲುಪುವಲ್ಲಿ ಯಶಸ್ವಿಯಾದರು. ಚೀನಾದ ಧ್ವಜ ಮತ್ತು ಒಲಿಂಪಿಕ್ ಧ್ವಜಗಳನ್ನು ಬೀಸುವ ಮೂಲಕ ಪರ್ವತಾರೋಹಿಗಳು ಸಂಭ್ರಮಿಸಿದರು. ಆ ಕ್ಷಣವು ಒಲಿಂಪಿಕ್ ಜ್ಯೋತಿಯ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಎನಿಸಿತು. ಪರ್ವತಾರೋಹಿಗಳು ಸಾಹಸ ಯಾತ್ರೆ ಆರಂಭಕ್ಕೆ ಮುನ್ನ ಶಿಖರದ ತಳಭಾಗದಲ್ಲಿ 30 ಮೀ. ದೂರದ ರಿಲೇ ನಡೆಸಿದ್ದರು. ತಂಡದಲ್ಲಿರುವ ಮಹಿಳಾ ಸದಸ್ಯೆ ರಿಲೇಗೆ ಚಾಲನೆ ನೀಡಿದರು. ಬೇಸ್ ಕ್ಯಾಂಪಿನಲ್ಲಿ ತಂಗಿದ್ದ ಪರ್ವತಾರೋಹಿಗಳು ಮಧ್ಯರಾತ್ರಿ 1.30ಕ್ಕೆ ಎದ್ದು ಪ್ರಾರ್ಥನೆ ಮಾಡಿದರು. ಆ ಬಳಿಕ ತಮ್ಮ ಯಾತ್ರೆ ಆರಂಭಿಸಿದರು. ಎವರೆಸ್ಟ್ ಯಾತ್ರೆಗೆ ಪರ್ವತಾರೋಹಿಗಳು ಒಂದು ವಾರದಿಂದ ಪ್ರಯತ್ನ ನಡೆಸಿದ್ದರು. ಹಿಂದಿನ ವಾರ ಯಾತ್ರೆ ಆರಂಭಿಸಿದ್ದರೂ, ಹಿಮಪಾತ ಉಂಟಾದ ಕಾರಣ ಬೇಸ್ ಕ್ಯಾಂಪಿಗೆ ವಾಪಸಾಗಿದ್ದರು. ಎರಡು ದಿನಗಳ ಕಾಲ ಹಿಮಪಾತವಾದುದರಿಂದ ಜ್ಯೋತಿಯ ಯಾತ್ರೆಯ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಆದರೆ ಸಂಘಟಕರು ಈ ಸಾಹಸದಿಂದ ಹಿಂದೆ ಸರಿಯಲಿಲ್ಲ.
2008: ಭಾರತವು ಅಗ್ನಿ-3 ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಪಾಕಿಸ್ಥಾನವು ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ `ಹತ್ಫ್-8 ರಾದ್' ಕ್ಷಿಪಣಿಯ ಪರೀಕ್ಷೆ ನಡೆಸಿತು. `ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ' ಎಂದು ಹೇಳಿಕೊಳ್ಳಲಾಗಿರುವ ಈ ಕ್ಷಿಪಣಿಗೆ 350 ಕಿ.ಮೀ. ದೂರಕ್ಕೆ ಚಲಿಸಿ ಗುರಿ ತಲುಪುವ ಸಾಮರ್ಥ್ಯ ಇದೆ ಎಂದು ಜಿಯೊ ಟಿವಿ ವರದಿ ಮಾಡಿತು.
2008: ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸುವ ಮೂಲಕ ಒಂದು ಕೋಮಿನ ಭಾವನೆಗಳನ್ನು ಕೆರಳಿಸಿದ್ದಾರೆಂದು ಆರೋಪಿಸಿ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ಅವರ ಮೇಲಿನ ಆರೋಪ ಹುರುಳಿಲ್ಲದ್ದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಹೇಳಿದರು. ಹುಸೇನ್ ಮೇಲಿನ ಆರೋಪದ ದೂರನ್ನು ವಿವಿಧ ರಾಜ್ಯಗಳಿಂದ ದಾಖಲಿಸಿದ್ದು ಅದನ್ನು ನ್ಯಾಯಾಲಯ ವಜಾ ಮಾಡಿತು. ಈ ಮುನ್ನ ಈ ದೂರುಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
2008: ಮಾಹಿತಿ ಶೋಧನೆಯ ಅಂತರ್ಜಾಲ ಸೇವಾ ತಾಣ ಯಾಹೂ ವೆಬ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಒಂದು ಪುಟದ ಪರಿಹಾರ ನೀಡುವ `ಗ್ಲೂ ಪೇಜ್' ವಿಶೇಷ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಆನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಯಾಹೂ ಇಂಡಿಯಾ ಮುಖ್ಯಸ್ಥ ಗೋಪಾಲ್ ಕೃಷ್ಣ, `ಬಳಕೆದಾರರು ಸರ್ಚಿನಲ್ಲಿ ಕೇಳುವ ಪ್ರಶ್ನೆಗೆ ನೇರ ಉತ್ತರವನ್ನು ದೊರಕಿಸುವ ಉದ್ದೇಶದಿಂದ ಗ್ಲೂ ಪೇಜ್ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ. ಪ್ರಸ್ತುತ ಪರೀಕ್ಷಾರ್ಥವಾಗಿ ಬಳಕೆಗೆ ಬಿಡಲಾಗಿತ್ತು. ಪ್ರತಿಕ್ರಿಯೆ ಕೂಡಾ ಅದ್ಭುತವಾಗಿ ಬಂದಿದೆ' ಎಂದು ಹೇಳಿದರು.
2007: ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿಯಿತು. ಕೊನೆಯ ಪಕ್ಷ ನಾಲ್ಕು ವಾರಗಳ ಮಟ್ಟಿಗಾದರೂ ಈ ತೀರ್ಪಿಗೆ ತಡೆ ನೀಡಿ ಲಾಟರಿ ಮುಂದುವರೆಸಲು ಅವಕಾಶ ನೀಡುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ವಿ. ಜಗನ್ನಾಥ ತಿರಸ್ಕರಿಸಿದರು.
2007: ಎಂಟು ವರ್ಷಗಳ ಹಿಂದೆ ಸಿಪಿಐ- ಎಂ.ಎಲ್. ಕಾರ್ಯಕರ್ತ ಛೋಟೆಲಾಲ್ ಗುಪ್ತ ಅವರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಾನ್ ವಿಶೇಷ ನ್ಯಾಯಾಲಯವು ಆರ್ ಜೆ ಡಿ ಸಂಸತ್ ಸದಸ್ಯ ಮೊಹಮ್ಮದ್ ಶಹಾಬ್ದುದ್ದೀನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿತು. ಸಿವಾನಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗ್ಯಾನೇಶ್ವರ ಪ್ರಸಾದ್ ಅವರು ಶಹಾಬುದ್ದೀನ್ ಅವರಿಗೆ 10,000 ರೂಪಾಯಿಗಳ ದಂಡವನ್ನೂ ವಿಧಿಸಿದರು. 1999ರ ಫೆಬ್ರುವರಿ 7ರಂದು ಸಿಪಿಐ-ಎಂ.ಎಲ್ ಕಾರ್ಯಕರ್ತ ಛೋಟೆಲಾಲ್ ಅವರನ್ನು ಕೊಲ್ಲುವ ಸಲುವಾಗಿ ಅಪಹರಿಸಿದ ಪ್ರಕರಣದಲ್ಲಿ ಶಹಾಬ್ದುದೀನ್ ತಪ್ಪಿತಸ್ಥರು ಎಂದು ನ್ಯಾಯಾಲಯ ಮೇ 5ರಂದು ತೀರ್ಪು ನೀಡಿತ್ತು.
2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.
2007: ಹಿಂದೆಂದೂ ಕಂಡು ಕೇಳರಿಯದಂತಹ ಅತ್ಯಂತ ಪ್ರಖರ ಮತ್ತು ಭಾರಿ ನಕ್ಷತ್ರಪುಂಜದ ಸ್ಫೋಟ (ಸೂಪರ್ ನೋವಾ) ತಾರಾಮಂಡಲದಲ್ಲಿ ಇತ್ತೀಚೆಗೆ ನಡೆದುದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಸೂಪರ್ ನೋವಾ ಎಂದು ಕರೆಯಲಾಗುವ ಪ್ರಕ್ರಿಯೆಯನ್ನು ನಾಸಾದ ಚಂದ್ರ ಎಕ್ಸ್ ರೇ ದೂರದರ್ಶಕ ಮತ್ತು ವೀಕ್ಷಣಾಲಯ ದಾಖಲಿಸಿದೆ. ಸೂಪರ್ ನೋವಾ ಸರಣಿಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದ್ದು ಸೂರ್ಯ ಒಂದು ಕೋಟಿ ವರ್ಷಕಾಲ ನೀಡುವಷ್ಟು ಓಜಸ್ಸು (ಶಕ್ತಿ) ಈ ಸ್ಫೋಟವೊಂದರಲ್ಲೇ ಬಿಡುಗಡೆಯಾಗಿದೆ. ಸ್ಫೋಟದ ಅಲೆಗಳು ಇಡೀ ನಕ್ಷತ್ರ ಸಮೂಹದ ಅನಿಲವನ್ನೇ ಅಲುಗಾಡಿಸಿದೆ. ಸೌರಮಂಡಲ ಸೃಷ್ಟಿಯಾದ ಆರಂಭದಲ್ಲಿದ್ದ ನಕ್ಷತ್ರಗಳ ಅವನತಿಗೆ ಕಾರಣವೇನು ಎಂಬುದಕ್ಕೆ ಈ ಸೂಪರ್ ನೋವಾ ಉತ್ತರ ಒದಗಿಸಿದೆ. ಭೂಮಿಯಿಂದ 2.4 ಕೋಟಿ ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ಆಕಾಶ ಗಂಗೆ ಎನ್ ಜಿ ಸಿ 1260ರಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಬರ್ಕಲಿಯದಲ್ಲಿನ ಕ್ಯಾಲಿಫೋರ್ನಿಯಾ ವಿ.ವಿ. ವಿಜ್ಞಾನಿ ನಾಥನ್ ಸ್ಮಿತ್ ವಿವರಿಸಿದರು. ಭಾರಿ ನಕ್ಷತ್ರಗಳು ಶಕ್ತಿ ಅಥವಾ ಇಂಧನ ಕಳೆದುಕೊಂಡು ತಮ್ಮ ಸ್ವಂತ ಗುರುತ್ವಾಕರ್ಷಣದಲ್ಲೇ ಕುಸಿದು ಬಿದ್ದಾಗ ಇಂತಹ ಸ್ಫೋಟಗಳು ಸಂಭವಿಸುತ್ತವೆ.
2007: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಶ್ರೇಷ್ಠ ಕವಿ ರಬೀಂದ್ರನಾಥ ಟ್ಯಾಗೋರ್ ಅವರ 146ನೇ ಜಯಂತಿ ಆಚರಿಸಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು.
2006: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಕಾರಣಕ್ಕೆ ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಜಯಾ ಬಚ್ಚನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಜಯಾ ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಆಪಾದಿಸಿ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅನುಸರಿಸಿ ರಾಷ್ಟ್ರಪತಿ ಜಯಾ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
2006: ಟೈಟಾನಿಕ್ ಹಡಗು ದುರಂತದ ಐತಿಹಾಸಿಕ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳ ಪೈಕಿ ಜೀವಿಸಿದ್ದ ಕೊನೆಯ ವ್ಯಕ್ತಿ ಲಿಲಿಯೆನ್ ಜೆರ್ ಟ್ರೂಡ್ ಆಸ್ಟ್ಲೆಂಡ್ ಈದಿನ ನಿಧನರಾದರು. 1912ರಲ್ಲಿ ರಾತ್ರಿ ವೇಳೆಯಲ್ಲಿ ದುರಂತ ಸಂಭವಿಸಿದಾಗ ಆಸ್ಟ್ಲೆಂಡ್ ಕೇವಲ ಐದರ ಹರೆಯದ ಬಾಲಕಿ. ಈ ಮಹಾನ್ ದುರಂತದಲ್ಲಿ ಆಕೆ ತನ್ನ ತಂದೆ ಹಾಗೂ ಚಿಕ್ಕಪ್ಪನ ಅವಳಿ ಮಕ್ಕಳೂ ಸೇರಿದಂತೆ ಮೂವರು ಸಹೋದರರನ್ನು ಕಳೆದುಕೊಂಡಿದ್ದರು. ದುರಂತದಲ್ಲಿ ಬದುಕಿ ಉಳಿದ ಬಾರ್ಬರಾ ಜಾಯ್ಸ್ ವೆಸ್ಟ್ ಡೇಂಟೆನ್ ಹಾಗೂ ಎಲಿಜಬೆತ್ ಗ್ಲಾಡಿಸ್ ಅವರಿಗೆ ಆಗ ಕ್ರಮವಾಗಿ ಕೇವಲ 10 ತಿಂಗಳು ಮತ್ತು ಎರಡು ತಿಂಗಳ ವಯಸ್ಸಾಗಿದ್ದದ್ದರಿಂದ ಇಬ್ಬರಿಗೂ ಘಟನೆಯ ಬಗ್ಗೆ ಯಾವುದೇ ನೆನಪೂ ಉಳಿದಿಲ್ಲ.
2006: ಆಂಡ್ರ್ಯೂ ಫ್ಲಿಂಟಾಫ್ ಹಾಗೂ ಕ್ಯಾಥರೀನ್ ಬ್ರಂಟ್ ಅವರು ಕ್ರಮವಾಗಿ ಇಂಗ್ಲೆಂಡಿನ ವರ್ಷದ ಕ್ರಿಕೆಟ್ ಆಟಗಾರ ಮತ್ತು ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಈ ದಿನ ರಾತ್ರಿ ಲಂಡನ್ನಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
2006: ಏಪ್ರಿಲ್ ತಿಂಗಳಲ್ಲಿ ನಡೆದ ಥಾಯ್ಲೆಂಡ್ ಮಹಾ ಚುನಾವಣೆಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿತು. ಮಹಾಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಲಿಲ್ಲ. ಆದರೂ ಸಂಸತ್ತಿನ 400 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಉಸ್ತುವಾರಿ ಪ್ರಧಾನಿ ತಕ್ ಸಿನ್ ಶಿನವರ್ತ ನೇತೃತ್ವದ ಥಾಯ್ ರಾಕ್ ಥಾಯ್ ಪಕ್ಷ ಮಾತ್ರವೇ ಭಾಗವಹಿಸಿದ್ದರೂ ಪ್ರಧಾನಿ ಸರ್ಕಾರ ರಚಿಸಲು ವಿಫಲವಾದರು. ಚುನಾವಣೆಗೆ ಸಿದ್ಧತೆ ನಡೆಸಲು ಸಮಯ ಸಿಗಲಿಲ್ಲ ಎಂದು ವಿರೋಧ ಪಕ್ಷಗಳು ಆಪಾದಿಸಿದ ಹಿನ್ನೆಲೆ ಹಾಗೂ ಚುನಾವಣೆಯ ಬಗ್ಗೆ ಪರಿಶೀಲನೆ ನಡೆಸುವಂತೆ ದೇಶದಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ದೊರೆ ಭುಮಿಬೋಲ್ ಅಡುಲ್ ಯಾದೇಜ್ ನ್ಯಾಯಾಲಯವನ್ನು ಕೋರಿದ್ದರು.
1971: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27-10-1906- 8-5-1971) ಮೃತರಾದರು. ಸಂಶೋಧನೆ, ವಿಮರ್ಶಾ ಕ್ಷೇತದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳ ಮೂಲಕ ಖ್ಯಾತರು.
1971: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28-10-1881ರಿಂದ 8-5-1971) ನಿಧನರಾದರು. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
1928: ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷಾ ವಿದ್ವಾಂಸ, ಸಂಗೀತ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಹುಟ್ಟಿದ ದಿನ. ಧಾರವಾಡದಲ್ಲಿ ರಾವಜಿ ರಾವ್- ಸುಂದರಾಬಾಯಿ ದಂಪತಿಯ ಪುತ್ರನಾಗಿ 1928ರಲ್ಲಿ ಈದಿನ ಜನಿಸಿದ ಮೊಕಾಶಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
1917: ಅಮೆರಿಕದ ಚಾರ್ಲ್ಸ್ `ಸೋನ್ನಿ' ಲಿಸ್ಟನ್ (1917-70) ಹುಟ್ಟಿದ ದಿನ. 1962ರಿಂದ 1964ರವರೆಗೆ ಈತ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ. 1964ರಲ್ಲಿ ಮೊಹಮ್ಮದಾಲಿ ಈತನನ್ನು ಸೋಲಿಸಿದ.
1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದೇ ಖ್ಯಾತರಾದ ಬಾಲಕೃಷ್ಣ ಮೆನನ್ (1916-93) ಜನ್ಮದಿನ. ಚಿನ್ಮಯ ಮಿಷನನ್ನು ಸ್ಥಾಪಿಸಿದ ಇವರು 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ಮೇಡಂ ಹೆಲೆನಾ ಬ್ಲಾವಟ್ ಸ್ಕಿ ನಿಧನರಾದರು.
1884: ಹ್ಯಾರಿ ಎಸ್. ಟ್ರೂಮನ್ (1884-1972) ಜನ್ಮದಿನ. ಅಮೆರಿಕದ 33ನೇ ಅಧ್ಯಕ್ಷನಾಗಿದ್ದ ಈತ ಸೋವಿಯತ್ ಮತ್ತು ಚೀನೀ ಕಮ್ಯೂನಿಸಂ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದತ್ತ ತನ್ನ ರಾಷ್ಟ್ರವನ್ನು ಮುನ್ನಡೆಸಿದ.
1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹನೆಂದೇ ಖ್ಯಾತನಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸೀರನನ್ನು ಗಿಲೋಟಿನ್ಗೆ ಗುರಿಪಡಿಸಿ ಕೊಲ್ಲಲಾಯಿತು. `ಆ ತಲೆ ಕಡಿಯಲು ಕ್ಷಣ ಸಾಕಾಯಿತು. ಆದರೆ ಇನ್ನೂ ನೂರು ವರ್ಷ ಕಳೆದರೂ ಅಂತಹ ಇನ್ನೊಂದು ತಲೆ ಉತ್ಪಾದಿಸಲು ಸಾಧ್ಯವಾಗಲಾರದು' ಎಂದು ಗಣಿತ ತಜ್ಞ ಜೋಸೆಫ್ ಲೂಯಿ ಉದ್ಗರಿಸಿದ.
No comments:
Post a Comment