My Blog List

Wednesday, June 16, 2010

ಇಂದಿನ ಇತಿಹಾಸ History Today ಜೂನ್ 11

ಇಂದಿನ ಇತಿಹಾಸ

ಜೂನ್ 11


ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಮ್ ಅವರನ್ನು ಉತ್ತರ ಐರ್ಲೆಂಡಿನ ಬೆಲ್‌ಪಾಸ್ಟ್‌ನಲ್ಲಿರುವ ಪ್ರತಿಷ್ಠಿತ ಕ್ವೀನ್ಸ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಪೀಟರ್ ಗ್ರೆಗ್ಸನ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ 'ಕಲಾಮ್  ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಗುರುತಿಸಿ ಗೌರವಿಸಲಾಗುತ್ತಿದೆ' ಎಂದು ಹೇಳಿದರು.

2009: ತಿರುಪತಿ ತಿಮ್ಮಪ್ಪನಿಗೆ ಬಳ್ಳಾರಿ ಗಣಿ ಧಣಿಗಳು 45 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸುವ ಮೂಲಕ ಅತ್ಯಂತ ದುಬಾರಿ ಹರಕೆಯನ್ನು ತೀರಿಸಿ ಕೊಂಡರು. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲೆಯಲ್ಲಿ ಈದಿನ ಸಂಜೆ ಈ ಬೆಲೆ ಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಲಾಯಿತು. ಪ್ರವಾಸೋದ್ಯಮ  ಸಚಿವ ಜಿ. ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕ ಟಿ.ಎಚ್. ಸುರೇಶ ಬಾಬು ಮತ್ತು ಅವರ ಕುಟುಂಬ ವರ್ಗದವರು ಹಾಜರಿದ್ದರು. ವಜ್ರ ಖಚಿತ ಕಿರೀಟವವನ್ನು ಇಡಲಾದ ಪಲ್ಲಕ್ಕಿಗೆ ಹೆಗಲು ಕೊಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದ ಗಣಿ ಧಣಿಗಳು 1 ವರ್ಷದ ಹಿಂದಿನ ಹರಕೆಯನ್ನು ಈಡೇರಿಸಿಕೊಂಡರು. ಈ ವಿಶೇಷ ಕಿರೀಟವನ್ನು ಕೊಯಮತ್ತೂರಿನಲ್ಲಿ ತಯಾರಿಸಲಾಗಿದ್ದು ಅದನ್ನು ಸಿದ್ಧಪಡಿಸಲು 9 ತಿಂಗಳು ಬೇಕಾಯಿತು.

2009: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿ ಆಕೆಯ ಪತಿಯ ಸಾವಿಗೆ ಕಾರಣಕರ್ತರಾಗುವ ವ್ಯಕ್ತಿಗಳು ಶಿಕ್ಷಾರ್ಹರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿ ಮುಕುಂದಕಮ್ ಶರ್ಮಾ ಮತ್ತು ನ್ಯಾಯಮೂರ್ತಿ ಬಿ.ಎಸ್.ಚವಾಣ್ ನೇತೃತ್ವದ ರಜಾಕಾಲದ ಪೀಠವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುವ ಮೂಲಕ ಅಕ್ರಮ ಸಂಬಂಧಗಳ ಮೂಲಕ ಅನಾಹುತಗಳ ಸೃಷ್ಟಿಗೆ ಕಾರಣವಾಗುವ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸುವುದು ಸರಿ ಎಂಬ ತೀರ್ಮಾನವನ್ನು ಪ್ರಕಟಿಸಿತು. ಗುಂಟೂರಿನ ನಿವಾಸಿ ದಮ್ಮು ಸ್ರೀನು ಎಂಬಾತ ತನ್ನ ನೆರೆಮನೆಯ ನಿವಾಸಿ ಬಿತ್ರಾ ನಾಗಾರ್ಜುನ ರಾವ್ ಎಂಬುವರ ಹೆಂಡತಿಯೊಂದಿಗೆ ಅಕ್ರಮ  ಸಂಬಂಧ ಹೊಂದಿದ್ದ. ಈ ಸಂಬಂಧದ ವಾಸನೆ ಬಡಿಯುತ್ತಿದ್ದಂತೆಯೇ ರಾವ್ ತಮ್ಮ ಪತ್ನಿಯನ್ನು ಪ್ರಶ್ನಿಸಿದರು. ಆಗ ದಂಪತಿ ನಡುವೆ ದೊಡ್ಡ ಜಗಳವೇ ನಡೆಯಿತು. ಕೂಡಲೇ ರಾವ್ ಆಕೆಯ ತಂದೆ (ಮಾವ)ಯನ್ನು ಕರೆಸಿ ಬುದ್ಧಿ ಹೇಳಿಸಿದರು. ಏತನ್ಮಧ್ಯೆ 1996ರ ಜನವರಿ 1ರಂದು ಸ್ರೀನು, ರಾವ್ ಮನೆಗೆ ಬಂದು ಅವರ ಪತ್ನಿಯೊಂದಿಗೆ ತಾನು ಅಕ್ರಮ ಸಂಬಂಧ ಹೊಂದಿರುವುದನ್ನು ಘಂಟಾಘೋಷವಾಗಿ ಸಾರಿದ. ನಿಮ್ಮ ಹೆಂಡತಿ ಸ್ವತಃ ನನ್ನನ್ನು ತೊರೆಯದ ಹೊರತು ನಾನು ಈ ಸಂಬಂಧವನ್ನು ಮುರಿಯುವುದಿಲ್ಲ ಎಂದೂ ದಾರ್ಷ್ಟ್ಯ ಮೆರೆದ. ತಮ್ಮ ಪತ್ನಿ ಅಕ್ರಮ ಸಂಬಂಧ ಹೊಂದಿರುವುದು ಖಾತ್ರಿಯಾದ ಬಳಿಕ ರಾವ್ ಅವಮಾನ, ತೊಳಲಾಟಗಳಲ್ಲಿ ಜೀವನ ಕಳೆಯುವುದಕ್ಕಿಂತಲೂ ಸಾಯುವುದೇ ಲೇಸು ಎಂಬ ತೀರ್ಮಾನಕ್ಕೆ ತಾವು ಬಂದಿರುವುದಾಗಿ ತಿಳಿಸಿ 1996 ಜನವರಿ 8ರಂದು ಆತ್ಮಹತ್ಯೆ ಮಾಡಿಕೊಂಡರು. ರಾವ್ ಆತ್ಮಹತ್ಯೆ ಸಂಬಂಧ ಪೊಲೀಸರು ರಾವ್ ಅವರ ಪತ್ನಿ ಮತ್ತು ಸ್ರೀನು ಇಬ್ಬರನ್ನೂ ಬಂಧಿಸಿದರು. ವಿಚಾರಣೆ ನಡೆಸಿದ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಇಬ್ಬರೂ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಸೆಷನ್ಸ್ ಕೋರ್ಟ್‌ನಲ್ಲಿ ಈ ಶಿಕ್ಷೆ ಐದರಿಂದ ಮೂರು ವರ್ಷಕ್ಕೆ ಇಳಿಯಿತು. ನಂತರ ಪ್ರಕರಣವು ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿ ರಾವ್ ಅವರ ಪತ್ನಿಯ ಶಿಕ್ಷೆಯನ್ನು ಒಂದು ವರ್ಷಕ್ಕೂ ಹಾಗೂ ಸ್ರೀನು ಶಿಕ್ಷೆಯನ್ನು ಮೂರು ವರ್ಷಕ್ಕೂ ಇಳಿಸಲಾಯಿತು. ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಹೈಕೋರ್ಟ್‌ನ ಈ ತೀರ್ಪನ್ನು ಎತ್ತಿಹಿಡಿಯಿತು.

2009: ಸಯನೈಡ್ ಧರಿಸುವಂತೆ ತನ್ನ ಸಹಚರರೆಲ್ಲರಿಗೂ ಕಟ್ಟಾಜ್ಞೆ ಮಾಡಿದ್ದ ಎಲ್‌ಟಿಟಿಇ ನಾಯಕ ಪ್ರಭಾಕರನ್, ತಾನು  ರಕ್ಷಣಾಪಡೆಯವರಿಗೆ ಸೆರೆಸಿಕ್ಕಾಗ ಸಯನೈಡ್ ಇರಿಸಿಕೊಂಡಿರಲಿಲ್ಲ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ತಿಳಿಸಿದವು. ಎಲ್‌ಟಿಟಿಇ-ಲಂಕಾಪಡೆಗಳ ನಡುವೆ ನಡೆದ ಅಂತಿಮ ಕಾಳಗದಲ್ಲಿ ಪ್ರಭಾಕರನ್ ಹಾಗೂ ಆತನ ಸಹಚರರನ್ನು ಕೊಂದ ನಂತರ ಬಹುತೇಕ ಉಗ್ರರಿಂದ ಸಯನೈಡ್ ವಶಪಡಿಸಿಕೊಳ್ಳಲಾಯಿತು. ಆದರೆ ಪ್ರಭಾಕರನ್ ಬಳಿ ಸಯನೈಡ್ ಇರಲಿಲ್ಲ ಎಂದು ಮೂಲಗಳ ಉನ್ನತ ಮೂಲಗಳು ಬಹಿರಂಗ ಪಡಿಸಿದವು. ಕುತೂಹಲದ ವಿಷಯವೆಂದರೆ ಪ್ರಭಾಕರನ್ ಜೇಬಿನಲ್ಲಿ ಐಡೆಂಟಿಟಿ ಕಾರ್ಟ್ ಮತ್ತು ಇನ್ನಿತರೆ ಗುರುತಿನ ವಸ್ತುಗಳು ಪತ್ತೆಯಾದವು., ರಕ್ಷಣಾ ಪಡೆಗಳು ಅವನ್ನು ವಶಕ್ಕೆ ತೆಗೆದುಕೊಂಡವು. ಪ್ರಭಾಕರನ್ ಸಾಮಾನ್ಯವಾಗಿ ತನ್ನ ಕುತ್ತಿಗೆಯ ದಾರಕ್ಕೆ ಸಯನೈಡ್ ಕ್ಯಾಪ್ಸೂಲ್ ಅನ್ನು ಸಿಕ್ಕಿಸಿಕೊಂಡಿರುತ್ತಿದ್ದ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾಗ ಕೂಡ ಪ್ರಭಾಕರನ್ ಬಳಿ ಸಯನೈಡ್ ಇತ್ತು. ರಾಜೀವ್ ಭೇಟಿಗೆ ಮುನ್ನ ಸಯನೈಡ್ ತೆಗೆದಿಡುವಂತೆ ರಕ್ಷಣಾ ತಂಡದವರು ಒತ್ತಾಯಿಸಿದರೂ ಅವರು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

2009: ನೀವು ತಡ ರಾತ್ರಿವರೆಗೂ ನಿದ್ದೆಗೆಟ್ಟು ಕೆಲಸ ಮಾಡುತ್ತೀರಾ ? ನಿಮಗೆ  'ನಿದ್ರಾದೇವಿ' ಆವರಿಸಿಕೊಳ್ಳುವುದಕ್ಕೆ ಮೀನಾ-ಮೇಷ ಎಣಿಸುತ್ತಿದ್ದಾಳೆಯೇ? ಹಾಸಿಗೆಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಬರುವುದಿಲ್ಲವೇ ? ನೀವು ನಿದ್ರಿಸುವ ಸಮಯ ಕಡಿಮೆಯೇ ...? ಇದಕ್ಕೆಲ್ಲ ನೀವು 'ಹೌದಪ್ಪ ಹೌದು' ಅಂತ ಗೋಣು ಹಾಕುವುದಾದರೆ, ಖಂಡಿತವಾಗಿಯೂ ನೀವು ಸಾವಿನ ಅಪಾಯವನ್ನು ತಂದುಕೊಳ್ಳುತ್ತ್ದಿದೀರಿ ಎಂದು ಅರ್ಥ ! ನಿಜ, ಕಳೆದ ಎಂಟು ವರ್ಷಗಳಿಂದ ನಡೆಸಿರುವ ಅಧ್ಯಯನದ ಪ್ರಕಾರ ನಿದ್ರಾ ಹೀನತೆಯಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ. ಅಧ್ಯಯನದಲ್ಲಿ ಭಾಗವಹಿಸಿದ 5,614 ಮಂದಿಯಲ್ಲಿ 854 ಮಂದಿ ನಿದ್ರಾ ಸಮಸ್ಯೆಯಿಂದಲೇ ಮೃತಪಟ್ಟಿದ್ದಾರೆ. ಜೊತೆಗೆ ಹೃದಯ ಕಾಯಿಲೆಗಳು ವೃದ್ಧಿಸುತ್ತವೆ ಎಂಬ ವಿಚಾರವೂ ಬೆಳಕಿಗೆ ಬಂದಿತು. ಕ್ಯಾಲಿಫೋರ್ನಿಯಾ ಪೆಸಿಫಿಕ್ ಮೆಡಿಕಲ್ ಸೆಂಟರಿನ ಹಿರಿಯ ಲೇಖಕ ಅಲಿಸನ್ ಲಫಾನ್ ಪ್ರಕಾರ 'ನಿದ್ರಾ ಸಮಸ್ಯೆ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಅಲ್ಲದೇ ಸಾವಿನ ಅಪಾಯವನ್ನು ತಂದೊಡ್ಡುತ್ತದೆ ಎಂದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ.  ಹಾಗಾಗಿ ಜನರು  ಪ್ರತಿ ದಿನ ಒಂದೇ ಸಮಯದಲ್ಲಿ ಮಲಗಿ-ಏಳುವುದನ್ನು ಹಾಗೂ ನಿದ್ರಾ ಸಮಯವನ್ನು ಸ್ಥಿರಗೊಳಿಸಿಕೊಳ್ಳಬೇಕು. ನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು' ಎಂಬುದು ಲಫಾನ್ ಸಲಹೆ.

2009: ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಮ್ ಅವರನ್ನು ಉತ್ತರ ಐರ್ಲೆಂಡಿನ ಬೆಲ್‌ಪಾಸ್ಟ್‌ನಲ್ಲಿರುವ ಪ್ರತಿಷ್ಠಿತ ಕ್ವೀನ್ಸ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಪೀಟರ್ ಗ್ರೆಗ್ಸನ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ 'ಕಲಾಮ್  ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಗುರುತಿಸಿ ಗೌರವಿಸಲಾಗುತ್ತಿದೆ' ಎಂದು ಹೇಳಿದರು.

2009: ಮಾನವನ ಉದ್ದೇಶಗಳನ್ನು ಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ಇಳಿಸಬಲ್ಲ ರೋಬೋಟನ್ನು ಸೃಷ್ಟಿಸಿರುವುದಾಗಿ ಯೂರೋಪಿನ ವಿಜ್ಞಾನಿಗಳು ಪ್ರಕಟಿಸಿದರು. ಐರೋಪ್ಯ ಒಕ್ಕೂಟದಿಂದ ಹಣಕಾಸು ನೆರವು ಪಡೆದ ಈ ಯೋಜನೆ ಮನುಷ್ಯ ಮತ್ತು ರೋಬೋಟ್ ತಮ್ಮ ಕೆಲಸದಲ್ಲಿ ಪರಸ್ಪರ ಸಹಕರಿಸುವಂತೆ ಮಾಡುವುದು ಮತ್ತು ರೋಬೋಟ್ ಮುಂದೇನು ಮಾಡಬೇಕು ಎಂಬ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳದೆ, ಮಾಲೀಕನ ನಡವಳಿಕೆಯನ್ನು ಗ್ರಹಿಸುವುದರಿಂದಲೇ ಆತನಿಗೆ ಅಗತ್ಯವಾದ ಕಾರ್ಯದಲ್ಲಿ ತನ್ನಷ್ಟಕ್ಕೆ ತಾನು ಮಗ್ನವಾಗುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಜೊತೆಗೆ ಈ ರೋಬೋಟುಗಳನ್ನು ನೌಕರರಿಗಿಂತ ಹೆಚ್ಚಾಗಿ ಒಡನಾಡಿಯಂತೆ ರೂಪಿಸುವುದರತ್ತ ಸಂಶೋಧಕರು ಗಮನ ಕೇಂದ್ರೀಕರಿಸಿದ್ದರು. 'ನಮ್ಮ ರೋಬೋಟ್‌ಗಳು ಕೆಲಸವನ್ನು ಹೊಸದಾಗಿ ಕಲಿಯುವುದಿಲ್ಲ. ಅದಾಗಲೇ ಕೆಲಸ ಅರಿತಿರುವ ಅವು ಮನುಷ್ಯರ ನಡವಳಿಕೆಯನ್ನು ಪರಿಶೀಲಿಸುತ್ತವೆ. ಅವರ ಕ್ರಿಯೆಗಾಗಿ ಎದುರು ನೋಡುವುದನ್ನು ಶೀಘ್ರ ಕಲಿಯುತ್ತವೆ ಅಥವಾ ಆವರು ಸರಿಯಾದ ಕ್ರಮ ಪಾಲಿಸದಿದ್ದಾಗ ತಪ್ಪನ್ನು ಎತ್ತಿ ತೋರಿಸುತ್ತವೆ' ಎಂದು ಯೋಜನೆಯ ಸಂಶೋಧಕರಲ್ಲಿ ಒಬ್ಬರಾದ ಪೋರ್ಚುಗಲ್‌ನ ಮಿನ್ಹೊ ವಿಶ್ವವಿದ್ಯಾನಿಲಯದ ವೋಲ್‌ಫ್ರಾಮ್ ಅರ್ಲ್‌ಹೇಗನ್ ಮಾಹಿತಿ ನೀಡಿದರು. ಒಂದು ವೇಳೆ ತನ್ನ ಮಾಲೀಕನ ಉದ್ದೇಶಗಳನ್ನು ರೋಬೋಟ್ ತಪ್ಪಾಗಿ ಗ್ರಹಿಸಿರುವ ಶಂಕೆ ಬಂದರೆ ಆ ಬಗ್ಗೆ ಸ್ಪಷ್ಟನೆ ಕೇಳುವ ಯಂತ್ರವೊಂದನ್ನು ಸಹ ಇದೇ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

2009: ವೇಗದ ರಾಜ ಉಸೇನ್ ಬೋಲ್ಟ್ ಅವರು 2009ರ ಪ್ರತಿಷ್ಠಿತ ಲಾರೆಸ್ ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಪಡೆದರು. 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ 22 ವರ್ಷ ವಯಸ್ಸಿನ ಬೋಲ್ಟ್ 100, 200 ಹಾಗೂ 4್ಡ100 ಮೀಟರ್ ರಿಲೆ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಮೈಕಾದ ಸ್ಪ್ರಿಂಟರ್ ಬೋಲ್ಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿಯ ಚೇರ್‌ಮನ್ ಎಡ್ವಿನ್ ಮೋಸಸ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

2009: ಕೇರಳದ ಮೂರು ಜಲವಿದ್ಯುತ್ ಯೋಜನೆಗಳ ನವೀಕರಣಕ್ಕಾಗಿ ಕೆನಡಾದ ಕಂಪೆನಿಯೊಂದಕ್ಕೆ 300 ಕೋಟಿ ರೂಪಾಯಿ ಕಾಮಗಾರಿಯ ಗುತ್ತಿಗೆಯನ್ನು ನೀಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಮತ್ತು ಇತರ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. 1998ರಲ್ಲಿ ವಿದ್ಯುತ್ ಸಚಿವರಾಗಿದ್ದ ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 13 (1) ಮತ್ತು 13(2) ಸೆಕ್ಷನ್ ನಂತೆ ಆರೋಪಪಟ್ಟಿ ಸಲ್ಲಿಸಲಾಯಿತು.

2008: ಕೊಳದ ಮಠ ಸಂಸ್ಥಾನ ನೀಡುವ ಪ್ರತಿಷ್ಠಿತ `ಅಲ್ಲಮಶ್ರೀ' ಪ್ರಶಸ್ತಿಗೆ ಈ ಬಾರಿ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಆಯ್ಕೆ ಆಗಿದ್ದಾರೆ ಎಂದು ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ 77 ಮಂದಿ ಜೀವಂತ ಸಮಾಧಿಯಾದರು. ದೇಶಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಈ ದುರಂತ ಸಂಭವಿಸಿತು. ಮೃತರಲ್ಲಿ 12 ಮಂದಿ ಬಾಲಕರು.

2007: ಅಮೆರಿಕದ ನಾಸಾ ಕಳುಹಿಸಿದ `ರೋವರ್' ಬಾಹ್ಯಾಕಾಶ ಶೋಧ ನೌಕೆಯು ತೆಗೆದಿರುವ ಮಂಗಳ ಗ್ರಹದ ಚಿತ್ರಗಳಲ್ಲಿ `ನೀರಿನ ಹೊಂಡಗಳು' ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಬಹಿರಂಗಪಡಿಸಿದರು. ಎರಡು ವರ್ಷಗಳ ಹಿಂದೆ ಈ ಹೊಂಡಗಳಲ್ಲಿ ನೀರು ಇತ್ತು ಎಂಬುದು ಅವರ ಹೇಳಿಕೆ.

2007: ಮಣಿಕಟ್ಟಿನ ಗಾಯಗಳು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಕೊಂಡದ್ದಲ್ಲ ಎಂದು ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್ ಪೊಲೀಸರಿಗೆ ಸ್ಪಷ್ಟ ಪಡಿಸಿದರು.

2006: ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಇದ್ದ ವ್ಹೀಟೊ ಚಲಾವಣೆ ಅಧಿಕಾರ ಮೊಟಕುಗೊಳಿಸುವ ಕಾನೂನನ್ನು ನೇಪಾಳಿ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು.

2005: ಮಾಜಿ ಪೋರ್ಚುಗೀಸ್ ಪ್ರಧಾನಿ ಜನರಲ್ ವಾಸ್ಕೊ ಗೋನ್ಸಾಲ್ವೆಸ್ (83) ನಿಧನರಾದರು. 1974ರಲ್ಲಿ ನಡೆದ ಎಡಪಂಥೀಯ ಕ್ರಾಂತಿಯ ಬಳಿಕ ನಾಲ್ಕು ಪ್ರಾಂತೀಯ ಸರ್ಕಾರಗಳ ನೇತೃತ್ವವನ್ನು ಅವರು ವಹಿಸಿದ್ದರು.

2001: ಓಕ್ಲಾಹಾಮಾ ಬಾಂಬರ್ ತಿಮೋತಿ ಮೆಕ್ ವೀಗ್ ನನ್ನು ವಿಷದ ಇಂಜೆಕ್ಷನ್ ನೀಡಿ ಮರಣದಂಡನೆಗೆ ಗುರಿಪಡಿಸಲಾಯಿತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಯುವವರೆಗೆ 168 ಜನರನ್ನು ಬಲಿ ತೆಗೆದುಕೊಂಡ ಓಕ್ಲಾಹಾಮಾ ಬಾಂಬ್ ದಾಳಿ ಘಟನೆಯನ್ನೇ ಅಮೆರಿಕ ನೆಲದಲ್ಲಿ ನಡೆದ ಅತಿ ಭೀಕರ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿತ್ತು.

2000: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ನಿಧನರಾದರು.

1999: ಭಾರತೀಯ ಸೇನೆಯು ಕಾರ್ಗಿಲ್ ಪ್ರದೇಶದಲ್ಲಿ ಒಳನುಸುಳುತ್ತಿದ್ದ 23 ಜನರನ್ನು ಕೊಂದು ಹಾಕಿತು.

1996: ಜೆ.ಎಂ.ಎಂ. ಹಗರಣದ ಹೊಸ ತನಿಖಾ ವರದಿಯ ಪ್ರಕಾರ ನರಸಿಂಹರಾವ್ ಅವರ ಹೆಸರು ಪ್ರಕರಣದಲ್ಲಿ ಸೇರ್ಪಡೆಯಾಯಿತು.

1987: ಇಂಗ್ಲೆಂಡಿನ 160 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆದ್ದ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮಾರ್ಗರೆಟ್ ಥ್ಯಾಚರ್ ಪಾತ್ರರಾದರು.

1983: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಘನಶ್ಯಾಮದಾಸ್ ಬಿರ್ಲಾ ತಮ್ಮ 89ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಮೃತರಾದರು.

1970: ರಷ್ಯದ ರಾಜಕೀಯ ನಾಯಕ ಅಲೆಗ್ಸಾಂಡರ್ ಕೆರೆನ್ ಸ್ಕಿ ನ್ಯೂಯಾರ್ಕ್ ನಗರದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಮೃತರಾದರು. 1917ರಲ್ಲಿ ಬೋಲ್ಷೆವಿಕ್ ಗಳು ಅವರನ್ನು ಧುರೀಣತ್ವದಿಂದ ಪದಚ್ಯುತಿಗೊಳಿಸಿದ್ದರು.

1964: ಪಂಡಿತ್ ಜವಾಹರಲಾಲ್ ನೆಹರೂ ಅವರ ಚಿತಾಭಸ್ಮವನ್ನು ಅವರ ಆಶಯದಂತೆ ದೇಶದಾದ್ಯಂತ ಚೆಲ್ಲಲಾಯಿತು.

1932: ಹಿಂದುಸ್ಥಾನಿ ಸಂಗೀತಗಾರ ಸುರೇಂದ್ರ ಸಾ ನಾಕೋಡ್ ಅವರು ವೆಂಕೂ ಸಾ ನಾಕೋಡ್- ನಾಗೂಬಾಯಿ ದಂಪತಿಯ ಮಗನಾಗಿ ಗದಗ ಬೆಟಗೇರಿಯಲ್ಲಿ ಜನಿಸಿದರು.

1907: ಖ್ಯಾತ ಹಿಂದಿ ಕವಿ ಶಾಂತಿಲಾಲ್ ಜೀವನಲಾಲ್ ಜನನ.

1903: ಸರ್ಬಿಯಾದ ದೊರೆ ಮೊದಲನೆಯ ಅಲೆಗ್ಸಾಂಡರ್ ಮತ್ತು ರಾಣಿ ಡ್ರ್ಯಾಗಾ ಅವರನು ದಂಗೆಯೊಂದರಲ್ಲಿ ಹತ್ಯೆಗೈಯಲಾಯಿತು.

1847: ಆರ್ಕ್ಟಿಕ್ ನ್ನು ಕಂಡು ಹಿಡಿದ ಸರ್ ಜಾನ್ ಫ್ರಾಂಕ್ಲಿನ್ ಅಮೆರಿಕ ಖಂಡದ ಉತ್ತರ ಭಾಗದಲ್ಲಿ ಪೂರ್ವದ ಕಡೆಗೆ ವಾಯುವ್ಯ ಕಣಿವೆ ಮಾರ್ಗ ಕಂಡು ಹಿಡಿಯುವ ಯತ್ನದಲ್ಲಿದ್ದಾಗ ಅಸುನೀಗಿದ.


(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement