ಕಾಂಗ್ರೆಸ್
ಹೀನಾಯ ಸೋಲು: ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ತಲೆದಂಡ
ಬೆಂಗಳೂರು: ಕರ್ನಾಟಕದಲ್ಲಿ ೧೫ ಸ್ಥಾನಗಳಿಗೆ ನಡೆದ
ಉಪಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿಗೆ ತತ್ತರಿಸಿ ಕೇವಲ ೨ ಸ್ಥಾನ ಗೆಲ್ಲುವ
ಮೂಲಕ ಹೀನಾಯ ಸೋಲು ಅನುಭವಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ದಿನೇಶ ಗುಂಡೂರಾವ್ 2019 ಡಿಸೆಂಬರ್ 09ರ ಸೋಮವಾರ ತಲೆದಂಡ ತೆತ್ತರು.
ಸೋಲಿನ
ನೈತಿಕ ಹೊಣೆ ಹೊತ್ತು, ಹಿರಿಯ
ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಪಕ್ಷದ ಶಾಸಕಾಂಗ ಪಕ್ಷ (ಸಿಎಲ್ಪಿ) ನಾಯಕತ್ವ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ
ಪ್ರಕಟಿಸಿದರೆ, ಇನ್ನೋರ್ವ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಕಳೆದ
ವಾರ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ೧೫ ಸ್ಥಾನಗಳ ಪೈಕಿ
೧೨ ಗೆದ್ದು ಭರ್ಜರಿ ಜಯಭೇರಿ ಭಾರಿಸಿದರೆ, ಕಾಂಗ್ರೆಸ್ ಕೇವಲ ೨ ಸ್ಥಾನಕ್ಕೆ ತೃಪ್ತಿ
ಪಡಬೇಕಾಯಿತು. ಇನ್ನುಳಿದ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾದರೆ ಜನತಾದಳ (ಎಸ್) ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.
‘ಪ್ರಜಾಪ್ರಭುತ್ವದಲ್ಲಿ
ನಾವು ಜನರ ತೀರ್ಪನ್ನು ಅಂಗೀಕರಿಸಬೇಕು. ಜನರು ತೀರ್ಪು ಕೊಟ್ಟಿದ್ದಾರೆ, ನಾವು ಅದನ್ನು ಗೌರವಿಸಬೇಕು. ಅನರ್ಹರಿಗೆ ಮತದಾರರು ಪಾಠ ಕಲಿಸುತ್ತಾರೆ ಎಂಬುದಾಗಿ ನಾವು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಯಿತು. ಆದ್ದರಿಂದ ನಾನು ಜನರ ತೀರ್ಪನ್ನು ಅಂಗೀಕರಿಸಿದ್ದೇನೆ’ ಎಂದು
ಫಲಿತಾಂಶಗಳು ಪ್ರಕಟವಾದ ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
‘ನಾನು
ನನ್ನ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅದರ ಪ್ರತಿಗಳನ್ನು ರಾಜ್ಯದಲ್ಲಿ ಎಐಸಿಸಿ ಉಸ್ತುವಾರಿ ಹೊಣೆ ಹೊತ್ತಿರುವ ಕೆಸಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕಳುಹಿಸಿದ್ದೇನೆ’ ಎಂದು ಸಿದ್ದರಾಮಯ್ಯ ನುಡಿದರು.
‘ಪ್ರಾಮಾಣಿಕ
ಶ್ರಮದ ಹೊರತಾಗಿಯೂ ರಾಜ್ಯದ ಉಪಚುನಾವಣೆಯಲ್ಲಿ ತೃಪ್ತಿಕರ ಫಲಿತಾಂಶ ನೀಡಲು ಸಾಧ್ಯವಾಗಿಲ್ಲ. ಜನಪರ ಯೋಜನೆಗಳನ್ನು ಘೋಷಿಸಿದರೂ ಕೂಡಾ ಜನರು ನಮ್ಮನ್ನು ತಿರಸ್ಕರಿಸಿದ್ದಾರೆ’ ಎಂದು
ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.
ಬಳಿಕ
ತಮ್ಮ ಟ್ವಿಟ್ಟರ್ ಖಾತೆಯಲ್ಲೂ ರಾಜೀನಾಮೆ ಪತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ ಸೋಲಿನ ನೈತಿಕ ಹೊಣೆ ಹೊತ್ತು ತಾವು ಶಾಸಕಾಂಗ ಪಕ್ಷದ ನಾಯಕತ್ವ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಬರೆದರು.
ಕೆಲವೇ
ನಿಮಿಷಗಳ ಬಳಿಕ, ದಿನೇಶ್ ಗುಂಡೂರಾವ್ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಕಾಂಗ್ರೆಸ್
ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಗುಂಡೂರಾವ್ ಅವರು ’ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೂ ಪಕ್ಷಕ್ಕಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇವೆ’ ಎಂದು
ಹೇಳಿದರು.
‘ಉಪಚುನಾವಣೆಲ್ಲಿ
ಪಕ್ಷದ ಗೆಲುವಿಗೆ ಸಾಕಷ್ಟು ಪ್ರುಯತ್ನ ಪಟ್ಟಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಜೀನಾಮೆ
ಸಲ್ಲಿಸುತ್ತಿದ್ದೇನೆ’ ಎಂದು
ಗುಂಡೂರಾವ್ ನುಡಿದರು.
ಈ
ಮಧ್ಯೆ, ಕಾಂಗ್ರೆಸ್ಸಿನ ಇನ್ನೊಬ್ಬ ಪ್ರಮುಖ ಹಿರಿಯ ನಾಯಕರಾದ ಡಿಕೆ. ಶಿವಕಮಾರ್ ಕೂಡಾ ’ಮತದಾರರ ಆದೇಶವನ್ನು ಒಪ್ಪಿರುವುದಾಗಿ’ ಹೇಳಿದರು.
‘ಈ
೧೫ ಕ್ಷೇತ್ರಗಳಲ್ಲಿ ಮತದಾರರು ನೀಡಿರುವ ಆದೇಶವನ್ನು ನಾವು ಒಪ್ಪಲೇಬೇಕು. ಜನರು ಪಕ್ಷಾಂತರಿಗಳನ್ನು ಅಂಗೀಕರಿಸಿದ್ದಾರೆ. ನಾವು ಸೋಲನ್ನು ಅಂಗೀಕರಿಸಿದ್ದೇವೆ. ನಾವು ಎದೆಗುಂದಬೇಕಾದ ಅಗತ್ಯವೇನೂ ಇಲ್ಲ ಎಂಬುದು ನನ್ನ ಭಾವನೆ’ ಎಂದು ಡಿಕೆ ಶಿವಕುಮಾರ್ ನುಡಿದರು.
ಮೂಲ-ವಲಸಿಗ ಕಿತ್ತಾಟ ಕೈಕೊಟ್ಟಿತೇ?
ರಾಜೀನಾಮೆಗೆ
ಉಪಚುನಾವಣಾ ಸೋಲಿನ ನೈತಿಕ ಹೊಣೆ ಕಾರಣ ಎಂದು ಹೇಳಿದರೂ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮೂಡಿದ ಭ್ರಮನಿರಸನ ಕೂಡಾ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಉಪಚುನಾವಣಾ ಸಂದರ್ಭದಲ್ಲಿ ಟಿಕೆಟ್ ನೀಡುವ ವಿಚಾರವಾಗಿಯೂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ವಿರುದ್ಧ ಪಕ್ಷದ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಉಪಚುನಾವಣಾ
ಪ್ರಚಾರಕ್ಕೂ ಹಿರಿಯ ಮುಖಂಡರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ನೀಡಿ ಉಪಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಕೂಡಾ
ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ.
ಸಿದ್ದರಾಮಯ್ಯ
ಏಕಾಂಗಿಯಾಗಿ ಚುನಾವಣಾ ಅಖಾಡದಲ್ಲಿ ಪ್ರಚಾರ ನಡೆಸಿದ್ದರು. ಪ್ರಚಾರ ಕಾಲದಲ್ಲಿ ಆತ್ಮವಿಶ್ವಾಸವಿದ್ದರೂ, ಫಲಿತಾಂಶ ಭಿನ್ನವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕಾಂಗ್ರೆಸ್
ಪಕ್ಷದಲ್ಲ್ಲಿ ನಡೆಯುತ್ತಿರುವ ಮೂಲ-ವಲಸಿಗ ಕಿತ್ತಾಟದ ಬಿಸಿ ಸಿದ್ದರಾಮಯ್ಯ ಅವರಿಗೆ
ಜೋರಾಗಿಯೇ ತಟ್ಟಿದೆ. ಉಪ ಚುನಾವಣೆಯಲ್ಲಿ ಟಿಕೆಟ್
ಹಂಚಿಕೆಯಿಂದ ಹಿಡಿದು ಪ್ರಚಾರದವರೆಗೂ ಈ ಕಿತ್ತಾಟವೇ ಪಾರಮ್ಯ
ಮೆರೆದಿತ್ತು. ಟಿಕೆಟ್ ಹಂಚಿಕೆ ವೇಳೆ ಸಿದ್ದರಾಮಯ್ಯ ತಮ್ಮ ಆಪ್ತ ವರ್ಗಕ್ಕೇ ಮಣೆ ಹಾಕುತ್ತಿದ್ದಾರೆ ಎಂಬುದು ಮೂಲ ಕಾಂಗ್ರೆಸ್ಸಿಗರ ಆಕ್ಷೇಪವಾಗಿತ್ತು. ಹೀಗಾಗಿ, ಟಿಕೆಟ್ ಹಂಚಿಕೆ ವೇಳೆಯಲ್ಲೂ ಮೂಲ ಕಾಂಗ್ರೆಸ್ಸಿಗರು ದೂರವೇ ಉಳಿದಿದ್ದರು. ಪರಿಶೀಲನಾ ಸಮಿತಿ ಸಭೆಯಿಂದ ಹಿಡಿದು ಎಲ್ಲ ಸಭೆಗಳಲ್ಲೂ ಮೂಲ ಕಾಂಗ್ರೆಸ್ಸಿಗರು ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ.
ಅಭ್ಯರ್ಥಿ
ಆಯ್ಕೆಯಿಂದ ಹಿಡಿದು ಚುನಾವಣೆಯ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗಿಯಾದರೆ, ಸೋಲಿನ ಹೊಣೆಯನ್ನು ತಮ್ಮ ತಲೆಗೆ ಕಟ್ಟಬಹುದು ಎಂಬುದು ಮೂಲ ಕಾಂಗ್ರೆಸ್ಸಿಗರ ಯೋಚನೆಯಾಗಿತ್ತು.
ಹೀಗಾಗಿ,
ಬೆಂಗಳೂರು ಭಾಗದ ರಾಮಲಿಂಗಾರೆಡ್ಡಿಯವರಂಥಾ ನಾಯಕರಿಂದ ಹಿಡಿದು, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಮಲ್ಲಿಕಾರ್ಜುನ ಖರ್ಗೆವರೆಗೂ ಯಾರೂ ಕೂಡಾ ಚುನಾವಣೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಿಲ್ಲ. ಅಲ್ಲಲ್ಲಿ ಆಗಾಗ ಪ್ರಚಾರ ಸಭೆಗಳಲ್ಲಿ ಕಾಣಸಿಕ್ಕಿದ್ದು ಬಿಟ್ಟರೆ, ಪ್ರಚಾರ ಕಣದಿಂದ ದೂರವೇ ಉಳಿದಿದ್ದರು.
ಉಪ
ಚುನಾವಣೆ ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಲ ೮೦ರಿಂದ ೬೮ಕ್ಕೆ
ಕುಸಿದಿದೆ. ಜೆಡಿಎಸ್ ಕೂಡಾ ತನ್ನ ಮೂವರು ಶಾಸಕರನ್ನು ಕಳೆದುಕೊಂಡಿದೆ. ಹೀಗಾಗಿ, ಮುಂದಿನ ಮೂರೂವರೆ ವರ್ಷಗಳ ಮಟ್ಟಿಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆ ಸಾಧ್ಯತೆ ಇಲ್ಲ. ಹೀಗಾಗಿ, ವಿಪಕ್ಷಗಳಿಗೆ ಇದು ಅತಿದೊಡ್ಡ ಮರ್ಮಾಘಾತವಾಗಿದ್ದು, ಸಿದ್ದರಾಮಯ್ಯ ಪಾಲಿಗೆ ಅರಗಿಸಿಕೊಳ್ಳಲಾಗದಂತಹ ಸೋಲಾಗಿ
ಪರಿಣಮಿಸಿದೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್
ಮತ್ತು ಜನತಾದಳದ (ಎಸ್) ೧೭ ಶಾಸಕರು ತಮ್ಮ
ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪರಿಣಾಮವಾಗಿ ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್- ಜನತಾದಳ (ಎಸ್) ಮೈತ್ರಿ ಸರ್ಕಾರ ಪತನಗೊಂಡ ಬಳಿಕ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ
ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರು. ಬಳಿಕ ಬಂಡಾಯ ಶಾಸಕರನ್ನು ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸಿದ ಆಗಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್
ಕುಮಾರ್ ಅವರ ತೀರ್ಪನ್ನು ಸುಪ್ರೀಂಕೋರ್ಟ್ ಭಾಗಶಃ
ಎತ್ತಿ ಹಿಡಿದು, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿತ್ತು.
ಬಂಡಾಯ
ಶಾಸಕರ ರಾಜೀನಾಮೆ/ ಅನರ್ಹತೆ ಪರಿಣಾಮವಾಗಿ ಖಾಲಿಯಾದ ೧೭ ಸ್ಥಾನಗಳ ಪೈಕಿ
೧೫ ಸ್ಥಾನಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದ ಬಳಿಕ ಎಲ್ಲ ೧೫ ಮಂದಿ ಅನರ್ಹರನ್ನೂ
ಬಿಜೆಪಿಯು ತನ್ನ ಟಿಕೆಟ್ ನೀಡಿ ಕಣಕ್ಕೆ ಇಳಿಸಿತ್ತು.
No comments:
Post a Comment