Thursday, December 19, 2019

ಪೌರತ್ವ ಕಾಯ್ದೆ ಅನುಷ್ಠಾನ ತಡೆಗೆ ಸುಪ್ರೀಂ ನಕಾರ

ಪೌರತ್ವ ಕಾಯ್ದೆ ಅನುಷ್ಠಾನ ತಡೆಗೆ ಸುಪ್ರೀಂ ನಕಾರ
ಸಿಂಧುತ್ವ ಪರಿಶೀಲನೆಗೆ ಅಸ್ತು, ಕೇಂದ್ರಕ್ಕೆ ನೋಟಿಸ್
ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸುವ ಪೌರತ್ವ (ತಿದ್ದುಪಡಿ) ಕಾನೂನಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ 2019 ಡಿಸೆಂಬರ್  18ರ ಬುಧವಾರ ನಿರಾಕರಿಸಿತು, ಆದರೆ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ನಿರ್ಧರಿಸಿತು.

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಮನವಿಗಳನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠವು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ ಅರ್ಜಿಗಳೂ ಸೇರಿದಂತೆ ಒಟ್ಟು ೫೯ ಅರ್ಜಿಗಳ ವಿಚಾರಣೆಗೆ  2020  ಜನವರಿ ೨೨ನೇ ದಿನಾಂಕವನ್ನು ನಿಗದಿ ಪಡಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶ, ಗುರಿ ಮತ್ತು ವಿವರಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂಬುದಾಗಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಮಾಡಿದ ಮನವಿಯನ್ನು ಒಪ್ಪಿದ ಪೀಠ,  ನಾಗರಿಕರಲ್ಲಿ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಶ್ರಾವ್ಯ-ದೃಶ್ಯ (ಆಡಿಯೋ-ವಿಶುವಲ್) ಮಾಧ್ಯಮವನ್ನು ಬಳಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಸೂಚಿಸಿತು.

ಸಲಹೆಯನ್ನು  ಒಪ್ಪಿದ ವೇಣುಗೋಪಾಲ್ ಅವರು ಸರ್ಕಾರವು ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಹೇಳಿದರು. ವಿಚಾರಣೆ ವೇಳೆಯಲ್ಲಿ ಕೆಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಹಾಜರಾದ ಕೆಲವು ವಕೀಲರು ನೂತನ ಕಾಯ್ದೆಯ ಅನುಷ್ಠಾನಕ್ಕೆ ತಡೆಯಾಜ್ಞೆ  ನೀಡುವಂತೆ ಮನವಿ ಮಾಡಿದರು.

ಅಟಾರ್ನಿ ಜನರಲ್ ಅವರು ಕೋರಿಕೆಯನ್ನು ವಿರೋಧಿಸಿದರು. ಅಧಿಕೃತ ಪ್ರಕಟಣೆಯ ಬಳಿಕ ಕಾಯ್ದೆಗೆ ತಡೆಯಾಜ್ಞೆ ನೀಡಲಾಗದು ಎಂಬುದಾಗಿ ನ್ಯಾಯಾಲಯ ತಿಳಿಸಿರುವ ಸುಮಾರು ನಾಲ್ಕಕ್ಕೂ ಹೆಚ್ಚು ತೀರ್ಪುಗಳಿವೆ ಎಂದು ವೇಣುಗೋಪಾಲ್ ಅವರು ತಿಳಿಸಿದರು. ’ನಾವು ಈಗ ಕಾಯ್ದೆಗೆ ತಡೆಯಾಜ್ಞೆ ನೀಡುವುದಿಲ್ಲಎಂದು ಹೇಳಿದ ಪೀಠ, ತಡೆಯಾಜ್ಞೆ ನೀಡುವ ಸಂಬಂಧದ ವಾದಗಳನ್ನು ಮುಂದಿನ ವಿಚಾರಣಾ ದಿನಾಂಕವಾದ ಜನವರಿ ೨೨ರಂದು ಮಾಡಬಹುದು ಎಂದು ತಿಳಿಸಿತು.  
ಕಕ್ಷಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಾಜೀವ ಧವನ್ ಅವರುಕಾನೂನಿನ ಅಡಿಯಲ್ಲಿ ನಿಯಮಾವಳಿಗಳ ರಚನೆ ಸೇರಿದಂತೆ ಹಲವಾರು ವಿಷಯಗಳು ಇನ್ನೂ ಪೂರ್ಣಗೊಂಡಿಲ್ಲವಾದ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲು ಸಾಧ್ಯವಿಲ್ಲ. ಆದ್ದರಿಂದ ಅದರ ಅನುಷ್ಠಾನಕ್ಕೆ ತಡೆಯಾಜ್ಞೆ ಕೋರುವ ಅಗತ್ಯವಿಲ್ಲಎಂದು ಹೇಳಿದರು. 
ಕಕ್ಷಿದಾರರಲ್ಲಿ ಒಂದಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ತನ್ನ ಮನವಿಯಲ್ಲಿ ಕಾಯ್ದೆಯು ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅಕ್ರಮ ವಲಸೆಗಾರರ ಒಂದು ಗುಂಪಿಗೆ ಧಾರ್ಮಿಕ ಆಧಾರದಲ್ಲಿ ಪೌರತ್ವ ನೀಡಲು ಉದ್ದೇಶಿಸಿದೆ ಎಂದು ತಿಳಿಸಿತ್ತು.  

೨೦೧೪ರ ಡಿಸೆಂಬರ್ ೩೧ರಂದು ಅಥವಾ ಅದಕ್ಕೆ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದುಗಳು, ಕ್ರೈಸ್ತರು, ಸಿಕ್ಖರು, ಪಾರ್ಸಿಗಳು, ಜೈನರು ಮತ್ತು ಬೌದ್ಧರು- ಆರು ಸಮುದಾಯಗಳ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸುವ ಕಾಯ್ದೆಗೆ ಸಂಸತ್ತು ಇತ್ತೀಚೆಗೆ ಅನುಮೋದನೆ ನೀಡಿತ್ತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪೌರತ್ವ (ತಿದ್ದುಪಡಿ) ಮಸೂದೆಗೆ ೨೦೧೯ರ ಡಿಸೆಂಬರ್ ೧೨ರಂದು ತಮ್ಮ ಒಪ್ಪಿಗೆ ನೀಡುವುದರೊಂದಿಗೆ ಮಸೂದೆ ಕಾಯ್ದೆಯಾಗಿ ಅನುಷ್ಠಾನಕ್ಕೆ ಬಂದಿತ್ತು.

ವಕೀಲರಾದ ಪಲ್ಲವಿ ಪ್ರತಾಪ್ ಅವರ ಮೂಲಕ ಸಲ್ಲಿಸಲಾದ ಐಯುಎಂಎಲ್ ಅರ್ಜಿಯು ಮಸೂದೆಯ ಅನುಷ್ಠಾನ ಮತ್ತು ವಿದೇಶೀ (ತಿದ್ದುಪಡಿ) ಆದೇಶ, ೨೦೧೫ ಮತ್ತು ಪಾಸ್ ಪೋರ್ಟ್ (ಎಂಟ್ರಿ ಇನ್ ಟು ರೂಲ್ಸ್) ತಿದ್ದುಪಡಿ ನಿಯಮಾವಳಿಗಳು, ೨೦೧೫ಕ್ಕೂ ಅನುಷ್ಠಾನಕ್ಕೂ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿತ್ತು.

ಪೌರತ್ವ ತಿದ್ದುಪಡಿ ಮಸೂದೆಯು (ಸಿಎಬಿ) ಸಂವಿಧಾನದ ಮೂಲರಚನೆಗೇ ವಿರುದ್ಧವಾಗಿದ್ದು, ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಅದರ ಅನುಕೂಲ ವಿಸ್ತರಿಸುವ ಮೂಕ ಮುಸ್ಲಿಮರ ವಿರುದ್ಧ ಕಾಯ್ದೆಯು ತಾರತಮ್ಯ ಮಾಡಿದೆ ಎಂದು ಅರ್ಜಿ ಆಪಾದಿಸಿತ್ತು.

ಕಾಯ್ದೆಯು
ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಮೇಲಿನ ನಿರ್ಲಜ್ಞ ದಾಳಿಯಾಗಿದ್ದು, ಸಮಾನರನ್ನು ಅಸಮಾನರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಲ್ಲಿಸಿದ ಅರ್ಜಿ ಹೇಳಿತ್ತು.

ಭಾರತದಲ್ಲಿ ಪೌರತ್ವ ಪಡೆಯಲು ಅಥವಾ ನಿರಾಕರಿಸಲು ಧರ್ಮವು ಒಂದು ಅಂಶವಾಗಬಹುದೇ ಎಂಬ ಪ್ರಶ್ನೆ ಸೇರಿದಂತೆ ಹಲವಾರು ಕಾನೂನಿನ ಪ್ರಶ್ನೆಗಳು ನ್ಯಾಯಾಲಯದ ಪರಿಶೀಲನೆಗಾಗಿ ಉದ್ಭವಿಸಿವೆ, ಏಕೆಂದರೆ ಇದು ೧೯೫೫ರ ಪೌರತ್ವ ಕಾಯ್ದೆಗೆ ಮಾಡಲಾಗಿರುವ ಸಂವಿಧಾನಬಾಹಿರ ತಿದ್ದುಪಡಿಯಾಗಿದೆ  ಎಂದು ರಮೇಶ್ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಸದರಿ ಕಾಯ್ದೆಯು ಎರಡು ವರ್ಗೀಕರಣಗಳನ್ನು ಮಾಡಿದೆ- ಧರ್ಮದ ಆಧಾರದಲ್ಲಿ ಮಾಡಲಾಗಿರುವ ವರ್ಗೀಕರಣ ಮತ್ತು ಬೌಗೋಳಿಕ ಆಧಾರದಲ್ಲಿ ಮಾಡಲಾಗಿರುವ ವರ್ಗೀಕರಣ. ಉಭಯ ವರ್ಗೀಕರಣಗಳು ಸಂಪೂರ್ಣ ಅತಾರ್ಕಿಕವಾಗಿದ್ದು, ತಮ್ಮ ಸ್ವದೇಶಗಳಲ್ಲಿ ಧಾರ್ಮಿಕ ನೆಲೆಯಲ್ಲಿ ಕಿರುಕುಳ ಎದುರಿಸುತ್ತಿರುವ ನೆಲೆಯಲ್ಲಿ ಸಮುದಾಯಗಳಿಗೆ ಆಶ್ರಯ, ಭದ್ರತೆ ಮತ್ತು ಪೌರತ್ವ ಒದಗಿಸುವ ಸದರಿ ಕಾಯ್ದೆಯ ಉದ್ದೇಶಕ್ಕೇ ವಿರುದ್ಧವಾಗಿವೆಎಂದು ಜೈರಾಮ್ ಅರ್ಜಿ ಹೇಳಿದೆ.

೨೦೧೯ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಆರ್ಜೆಡಿ ನಾಯಕ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಮುಸ್ಲಿಮ್ ಸಂಘಟನೆ ಜಮೀಯತ್ ಉಲೇಮ--ಹಿಂದ್, ಆಲ್ ಅಸ್ಸಾಮ್ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ ಯು), ಪೀಸ್ ಪಾರ್ಟಿ, ರಿಹಾಯ್ ಮಂಚ್ ಮತ್ತು ಸಿಟಿಜನ್ಸ್ ಅಗೆಯಿನ್ಸ್ಟ್ ಹೇಟ್, ವಕೀಲರಾದ ಎಂಎಲ್ ಶರ್ಮ ಮತ್ತು ಕಾನೂನು ವಿದ್ಯಾರ್ಥಿಗಳೂ ಕಾಯ್ದೆಯನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದವರಲ್ಲಿ ಸೇರಿದ್ದಾರೆ.

No comments:

Advertisement