ಗ್ರಾಹಕರ ಸುಖ-ದುಃಖ

My Blog List

Tuesday, February 11, 2020

ವಿಸ್ತೃತ ಪೀಠಕ್ಕೆ ಶಬರಿಮಲೈ ವಿವಾದ: ಸುಪ್ರೀಂ ಸಂವಿಧಾನಪೀಠದ ಅಸ್ತು

ವಿಸ್ತೃತ ಪೀಠಕ್ಕೆ ಶಬರಿಮಲೈ ವಿವಾದ: ಸುಪ್ರೀಂ ಸಂವಿಧಾನಪೀಠದ ಅಸ್ತು
ಫೆಬ್ರುವರಿ ೧೭ಕ್ಕೆ ವಿಚಾರಣೆ ಆರಂಭ
ನವದೆಹಲಿ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ವಿಶಾಲ ಪೀಠಕ್ಕೆ ಒಪ್ಪಿಸುವ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ 10ರ ಸೋಮವಾರ ಎತ್ತಿ ಹಿಡಿಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಮೂರ್ತಿಗಳ ಪೀಠವು ತನ್ನ ಪುನರ್ ಪರಿಶೀಲನಾ ವ್ಯಾಪ್ತಿಯಲ್ಲಿ ವಿಶಾಲ ಪೀಠಕ್ಕೆ ಒಪ್ಪಿಸಬೇಕಾದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ ಎಂದು ತೀರ್ಪು ನೀಡಿತು.

ಪೀಠವು ಆಲಿಸಬೇಕಾದ ಪ್ರಶ್ನೆಗಳನ್ನು ಕೂಡಾ ನ್ಯಾಯಾಲಯವು ಪುನರ್ ನಿರೂಪಣೆ ಮಾಡಿತು.
ನವ ಸದಸ್ಯ ಸಂವಿಧಾನ ಪೀಠದ ಮುಂದೆ ವಿಚಾರಣೆ ಫೆಬ್ರುವರಿ ೧೭ಕ್ಕೆ ಆರಂಭವಾಗಲಿದೆ.

ಪ್ರತಿಯೊಂದು ಕಡೆಯ ವಕೀಲರೂ ಪ್ರಮುಖ ವಾದಗಳನ್ನು ಮುಂದಿಡಲಿದ್ದಾರೆ ಮತ್ತು ವಾದ ಮಂಡನೆಗೆ ಪೂರ್ಣ ದಿನದ ಕಾಲಾವಕಾಶ ಪಡೆಯಲಿದ್ದಾರೆ. ಪ್ರತಿಯೊಬ್ಬ ವಕೀಲರಿಗೂ ಪೂರಕ ವಾದ ಮಂಡನೆಗೆ ಎರಡು ಗಂಟೆಗಳ ಹೆಚ್ಚುವರಿ ಕಾಲಾವಕಾಶವನ್ನು ನ್ಯಾಯಾಲಯ ನೀಡಲಿದೆ.

೨೦೧೯ರ ನವೆಂಬರ್ ೧೪ರಂದು ಪಂಚ ಸದಸ್ಯ ಪೀಠವು ಶಬರಿಮಲೈ ಪುನರ್ ಪರಿಶೀಲನಾ ಅರ್ಜಿಗಳನ್ನು ಆಲಿಸಿ ಏಳು ಪ್ರಶ್ನೆಗಳನ್ನು ವಿಶಾಲ ಪೀಠದ ಉತ್ತರಕ್ಕಾಗಿ ರೂಪಿಸಿತ್ತು. ಪ್ರಶ್ನೆಗಳಲ್ಲಿ ಸಂವಿಧಾನದ ೨೫ ಮತ್ತು ೨೬ನೇ ಪರಿಚ್ಛೇದಗಳ ಅಡಿಯಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಚಲಾವಣೆ ಮತ್ತು ಇತರ ಮೂಲಭೂತ ಹಕ್ಕುಗಳು- ಮುಖ್ಯವಾಗಿ ೧೪ನೇ ಪರಿಚ್ಛೆದದ ಅಡಿಯಲ್ಲಿನ ಸಮಾನತೆಯ ಹಕ್ಕು, ನೈತಿಕತೆ ಅಥವಾ ಸಾಂವಿಧಾನಿಕ ನೈತಿಕತೆ ಅಭಿವ್ಯಕ್ತಿಯ ವ್ಯಾಪ್ತಿ ಮತ್ತು ನಿರ್ದಿಷ್ಟ ಆಚರಣೆಯೊಂದು ಧರ್ಮದ ಅವಿಭಾಜ್ಯ ಅಂಗವೇ ಎಂಬುದಾಗಿ ನ್ಯಾಯಾಲಯವು ಎಷ್ಟರ ಮಟ್ಟಿಗೆ ಪರಿಶೀಲಿಸಬಹುದು ಎಂಬ ವಿಷಯಗಳೂ ಇವುಗಳಲ್ಲಿ ಸೇರಿದ್ದವು.

ಪೂಜಾ ಸ್ಥಳಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಆಚರಣೆ ಶಬರಿಮಲೈ ಪ್ರಕರಣಕ್ಕೆ ಮಾತ್ರ ಸೀಮಿತವಾದುದಲ್ಲ, ಸುಪ್ರೀಂಕೋರ್ಟಿನ ಮುಂದೆ ಬಾಕಿ ಉಳಿದಿರುವ ಇತರ ಮೂರು ಪ್ರಕರಣಗಳಲ್ಲೂ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿತ್ತು. ದರ್ಗಾ / ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ಮತ್ತು ಪಾರ್ಸಿಯೇತರ ವ್ಯಕ್ತಿಯನ್ನು ಮದುವೆಯಾಗುವ ಪಾರ್ಸಿ ಮಹಿಳೆಯರು ಅಗ್ಯಾರಿಯಂತ ಪವಿತ್ರ ಅಗ್ನಿಯ ಸ್ಥಳಕ್ಕೆ ಪ್ರವೇಶಿಸುವುದು ಪ್ರಕರಣಗಳನ್ನು ನ್ಯಾಯಾಲಯ ಉಲ್ಲೇಖಿಸಿತ್ತು. ಮೂರನೇ ಪ್ರಕರಣದಲ್ಲಿ ದಾವೂದಿ ಬೋಹ್ರಾ ಸಮುದಾಯದಲ್ಲಿ ಮುಸ್ಲಿಂ ಮಹಿಳೆಯ ಜನನಾಂಗ ಛೇದನ ಸಂಪ್ರದಾಯವಿದೆ ಎಂದು ನ್ಯಾಯಾಲಯ ಉಲ್ಲೇಖ ಮಾಡಿತ್ತು.

ಮಹಿಳೆಯರ ಹಕ್ಕುಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಗಳನ್ನು ಸಪ್ತ ಸದಸ್ಯರಿಗಿಂತ ಕಡಿಮೆಯಲ್ಲದ ವಿಶಾಲ ಪೀಠ ನಿರ್ಧರಿಸಿದ ಬಳಿಕ ಮಾತ್ರವೇ  ಪುನರ್ ಪರಿಶೀಲನಾ ಅರ್ಜಿಗಳನ್ನು ನಿರ್ಧರಿಸಲು ಸಾಧ್ಯ ಎಂದು ನ್ಯಾಯಾಲಯ ಹೇಳಿತ್ತು.

೨೦೧೯ ನವೆಂಬರ್ ೧೪ರ ತೀರ್ಪನ್ನು ಅನುಸರಿಸಿ ನವ ಸದಸ್ಯ ಪೀಠವನ್ನು ರಚಿಸಲಾಗಿತ್ತು.

ಒಂಬತ್ತು ಸದಸ್ಯರ ವಿಶಾಲ ಸಂವಿಧಾನ ಪೀಠವು ವಿಚಾರಣೆಗೆ ಎತ್ತಿಕೊಳ್ಳಲಿರುವ ಪ್ರಶ್ನೆಗಳು:
·         ಧಾರ್ಮಿಕ ಸ್ವಾತಂತ್ರ್ಯದ ತಳಹದಿ ಮತ್ತು ವಿಸ್ತಾರ.
·         ಸಂವಿಧಾನದ ೨೫ನೇ ಪರಿಚ್ಛೇದದ ಮೇರೆಗೆ ನಾಗರಿಕರಿಗೆ ಲಭ್ಯವಿರುವ ಅವಕಾಶಗಳು ಹಾಗೂ ೨೬ನೇ ಪರಿಚ್ಛೇದದ ಮೇರೆಗೆ ಧಾರ್ಮಿಕ ಸಂಸ್ಥೆಗಳಿಗೆ ಇರುವ ಧಾರ್ಮಿಕ ಹಕ್ಕುಗಳು.
·         ಧಾರ್ಮಿಕ ಪಂಗಡಗಳ ಹಕ್ಕುಗಳು ಸಂವಿಧಾನದ ಭಾಗ ೩ರಲ್ಲಿ ಅಳವಡಿಸಲಾಗಿರುವ ಅವಕಾಶಗಳು ಪರಸ್ಪರ ಪೂರಕ ಆಗಿವೆಯೇ ಹೇಗೆ?
·         ೨೫ ಮತ್ತು ೨೬ನೇ ಪರಿಚ್ಛೆದಗಳ ಪ್ರಕಾರ ಇರುವ ನೈತಿಕತೆ ಅವಕಾಶಗಳು ಹಾಗೂ ಪ್ರಯೋಜನಗಳು ಸಂವಿಧಾನ ಚಾರಿತ್ರ್ಯಕ್ಕೆ ಒಳಪಟ್ಟಿವೆಯೇ ಹೇಗೆ?
·         ಭಾರತದ ಸಂವಿಧಾನದ ೨೫ ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿ ಮತ್ತು ವ್ಯಾಪ್ತಿ ಏನು?
·         ಧಾರ್ಮಿಕ ವಿಭಜನೆಗಳಿಗೆಲ್ಲ ಹಕ್ಕುಗಳ ಪ್ರಯೋಜನಗಳು ಒಳಪಡುತ್ತವೆಯೇ ಹೇಗೆ?
·         ೨೫()(ಬಿ) ಪರಿಚ್ಛೇದದ ಪ್ರಕಾರ ಹಿಂದುಗಳ ಒಂದು ಭಾಗ ಎಂಬ ಪದದ ಅರ್ಥವ್ಯಾಪ್ತಿ.
·         ಒಂದು ಧಾರ್ಮಿಕ ಸಂಘಟನೆಗೆ ಸೇರದವರು ಅದೇ ಧರ್ಮದ ಆಚರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದೇ?

No comments:

Advertisement