Tuesday, February 11, 2020

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ತಿದ್ದುಪಡಿ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ತಿದ್ದುಪಡಿ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ೨೦೧೮ರ ಮಾರ್ಚ್ ತಿಂಗಳಲ್ಲಿ ನೀಡಿದ್ದ ತೀರ್ಪಿನ ಪರಿಣಾಮ ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ೨೦೧೮ರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು  ಸುಪ್ರೀಂ ಕೋರ್ಟ್  2020 ಫೆಬ್ರುವರಿ 10ರ ಸೋಮವಾರ  ಎತ್ತಿ ಹಿಡಿಯಿತು.

ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಅರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರಾಥಮಿಕ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಹಿರಿಯ ಪೊಲೀಸ್ ಅಧಿಕಾರಿಯ ಅನುಮತಿಯೂ ಬೇಕಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿತು.

ತ್ರಿಸದಸ್ಯ ಪೀಠದ ಸದಸ್ಯರ ಪೈಕಿ ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಭಿನ್ನಮತದ ತೀರ್ಪು ನೀಡಿದ್ದು ಪ್ರತಿಯೊಬ್ಬ ನಾಗರಿಕನೂ ಸಹ ನಾಗರಿಕನನ್ನು ಸಮಾನವಾಗಿ ಕಾಣುವ ಅಗತ್ಯವಿದೆ ಮತ್ತು ಭ್ರಾತೃತ್ವದ ಕಲ್ಪನೆಯನ್ನು ಪೋಷಿಸುವ ಅಗತ್ಯವಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಕಾಯ್ದೆಯ ಅಡಿಯಲ್ಲಿ ಮೇಲ್ನೋಟಕ್ಕೇ ಪ್ರಕರಣ ಕಂಡು ಬರದ ಸಂದರ್ಭದಲ್ಲಿ ನ್ಯಾಯಾಲಯವು ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ರದ್ದು ಪಡಿಸಬಹುದು ಮತ್ತು  ನಿರೀಕ್ಷಣಾ ಜಾಮೀನಿನ ಉದಾರ ಬಳಕೆಯ ಸಂಸತ್ತಿನ ಉದ್ದೇಶವನ್ನು ವಿಫಲಗೊಳಿಸಬಹುದು ಎಂದು ನ್ಯಾಯಮೂರ್ತಿ ಭಟ್ ಹೇಳಿದರು.

ಕಾಯ್ದೆಯ ಅಡಿಯಲ್ಲಿ ನಿರೀಕ್ಷಣಾ ಜಮೀನಿಗೂ ಅವಕಾಶವಿಲ್ಲ. ಆದರೆ, ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಎಫ್ಐಆರ್ನ್ನು ವಿಶೇಷ ಸಂದರ್ಭಗಳಲ್ಲಿ ರದ್ದು ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಇಲ್ಲದೇ ಹೋದರೆ ಅದು ನ್ಯಾಯದ ಅಸಮಾನತೆಯಾಗುತ್ತದೆ ಎಂದು ನ್ಯಾಯಮೂರ್ತಿ ಭಟ್ ನುಡಿದರು.

೨೦೧೮ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪರಿಣಾಮವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆ ದುರ್ಬಲಗೊಳ್ಳದಂತೆ ತಡೆಯುವ ಸಲುವಾಗಿ ೨೦೧೮ರಲ್ಲಿ ಜಾರಿಗೊಳಿಸಲಾಗಿದ್ದ ಪರಿಶಿಷ್ಟ ಜಾತಿ/ ಪರಿಶಿಷ್ಟ ತಿದ್ದುಪಡಿ ಕಾಯೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿದೆ.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯಲ್ಲಿ ಬಂಧನಕ್ಕೆ ಅವಕಾಶ ನೀಡುವ ಕಠಿಣ ವಿಧಿಯನ್ನು ದುರ್ಬಲಗೊಳಿಸಿ ನೀಡಿದ್ದ ತನ್ನ ೨೦೧೮ ಮಾರ್ಚ್ ೨೦ರ ತನ್ನ ಆದೇಶವನ್ನು ಅದೇಶವನ್ನು ಸೆಪ್ಟೆಂಬರ್ ೩೦ರ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಹಿಂಪಡೆದಿತ್ತು ಮತ್ತು ತನ್ಮೂಲಕ ಇಂತಹ ಪ್ರಕರಣಗಳಲ್ಲಿ ಬಂಧನದ ಅವಕಾಶವನ್ನು ಮತ್ತು ಊರ್ಜಿತಗೊಳಿಸಿತ್ತು.

ಬಂಧನಕ್ಕೆ ಮುನ್ನ ಪೊಲೀಸರ ಪ್ರಾಥಮಿಕ ತನಿಖೆಗೆ ಸಂಬಂಧಿಸಿದ ತನ್ನ ಆದೇಶವನ್ನು ಕೂಡಾ ಪೀಠ ಹಿಂಪಡೆದಿತ್ತು. ೨೦೧೮ರ ಮಾರ್ಚ್ ೨೦ರ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಪ್ರಾಥಮಿಕ ತನಿಖೆ ಇಲ್ಲದೆ ಬಂಧಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಕಾಯ್ದೆಗೆ ನಿರೀಕ್ಷಣಾ ಜಾಮೀನಿನ ಅವಕಾಶವನ್ನೂ ಅದು ಸೇರ್ಪಡೆ ಮಾಡಿತ್ತು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ ಜನರಿಗೆ ತಾರತಮ್ಯದಿಂದ ರಕ್ಷಣೆ ಒದಗಿಸಲು ಜಾರಿಗೆ ಬಂದ ಕಾಯ್ದೆಯು ಸಾರ್ವಜನಿಕ ಸೇವೆಯಲ್ಲಿ ಇರುವವರನ್ನು ಹಾಗೂ ಮುಗ್ಧರನ್ನು  ಬ್ಲ್ಯಾಕ್ ಮೇಲ್ಗೆ ಒಳಪಡಿಸುವ ಅಸ್ತ್ರವಾಗಿದೆ ಎಂದೂ ದ್ವಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಸೇವೆಯಲ್ಲಿರುವವರ (ಅಂದರೆ, ಸರ್ಕಾರಿ ನೌಕರರ) ವಿರುದ್ಧ, ಜನಸಾಮಾನ್ಯರ ವಿರುದ್ಧ ಕಾಯ್ದೆಯ ಅಡಿ ದೂರು ದಾಖಲಾದ ಸಂದರ್ಭದಲ್ಲಿ, ಕ್ರಮವಾಗಿ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಅನುಮತಿ ಸಿಗುವವರೆಗೆ ಆರೋಪಿಯ ಬಂಧನ ಆಗುವಂತಿಲ್ಲ ಎಂದು ಹೇಳಿತ್ತು. ಪ್ರಕರಣ ದಾಖಲಿಸಿಕೊಳ್ಳುವ ಮೊದಲು, ದೂರಿನಲ್ಲಿ ಹುರುಳಿದೆಯೇ ಅಥವಾ ಅದು ದುರುದ್ದೇಶದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬಹುದು ಎಂದೂ ದ್ವಿಸದಸ್ಯ ಪೀಠವು ೨೦೧೮ರ ತೀರ್ಪಿನಲ್ಲಿ ಹೇಳಿತ್ತು.

ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ತೀರ್ಪನ್ನು ವಿರೋಧಿಸಿ ದೇಶದ ಹಲವೆಡೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೆಲವೆಡೆ ಇದು ಹಿಂಸಾರೂಪಕ್ಕೂ ತಿರುಗಿತ್ತು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ದ್ವಿಸದಸ್ಯ ಪೀಠದ ತೀರ್ಪಿನ ಪರಿಣಾಮವನ್ನು ತಡೆಯುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತಂದಿತ್ತು.

ಜೊತೆಗೇ ತೀರ್ಪಿನ ಮರುಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.
ಇದೇ ವೇಳೆಗೆ ಕೇಂದ್ರ ಸರ್ಕಾರ ತಂದಿದ್ದ ತಿದ್ದುಪಡಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಫೆ.೧೦ಕ್ಕೆ ಕಾದಿರಿಸಿತ್ತು.

No comments:

Advertisement