Wednesday, April 15, 2020

ಭಾರತದಲ್ಲಿ ೧೭೦ ಜಿಲ್ಲೆಗಳು ಕೊರೋನಾ ಕೆಂಪುವಲಯಗಳು

ಭಾರತದಲ್ಲಿ ೧೭೦ ಜಿಲ್ಲೆಗಳು ಕೊರೋನಾ ಕೆಂಪುವಲಯಗಳು
ಸೋಂಕು ೧೨,೦೦೦ ಸನಿಹ,  ಸಾವು ೩೯೨ ಸಾವು, ಮುಂಬೈ ಪ್ರಥಮ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಸಂಖ್ಯೆ ೧೨,೦೦೦ ಸಮೀಪಕ್ಕೆ ಬಂದಿದ್ದು, ಸಾವಿನ ಸಂಖ್ಯೆ ೩೯೨ಕ್ಕೆ ಏರಿದೆ. ಇದೇ ವೇಳೆಗೆ ಕೇಂದ್ರ ಸರ್ಕಾರವು ದೇಶದ ೧೭೦ ಜಿಲ್ಲೆಗಳನ್ನು ಕೋವಿಡ್-೧೯ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಗುರುತಿಸಿ, ಅವುಗಳನ್ನು ಕೆಂಪು ವಲಯ (ರೆಡ್ ಜೋನ್) ಎಂಬುದಾಗಿ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ವರ್ಗೀಕರಿಸಿತು.

‘ರೆಡ್ ಜೋನ್ ಎಂಬುದಾಗಿ ವರ್ಗೀಕರಿಸಲಾಗಿರುವ ಈ ಜಿಲ್ಲೆಗಳಲ್ಲಿ  ಕೊರೋನಾವೈರಸ್ ಹರಡದಂತೆ ತಡೆಯಲು ಅತ್ಯಂತ ಕಠಿಣ ದಿಗ್ಬಂಧನ (ಲಾಕ್‌ಡೌನ್) ಜಾರಿಯಾಗಲಿದೆ.

ರೆಡ್ ಜೋನ್ ಅಥವಾ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಸರ್ಕಾರವು ಗುರುತಿಸಿರುವ ಜಿಲ್ಲೆಗಳ ಪೈಕಿ ಹೆಚ್ಚಿನ ಜಿಲ್ಲೆಗಳು ತಮಿಳುನಾಡಿನಲ್ಲಿ (೩೭ ಜಿಲ್ಲೆಗಳ ಪೈಕಿ ೨೨) ಇದ್ದು, ಮಹಾರಾಷ್ಟ್ರದಲ್ಲಿ ೧೪ ಜಿಲ್ಲೆಗಳು, ಉತ್ತರ ಪ್ರದೇಶದಲ್ಲಿ ೧೩ ಜಿಲ್ಲೆಗಳು, ರಾಜಸ್ಥಾನದಲ್ಲಿ ೧೨ ಜಿಲ್ಲೆಗಳು, ಆಂದ್ರಪ್ರದೇಶದಲ್ಲಿ ೧೧ ಜಿಲ್ಲೆಗಳು ಮತ್ತು ದೆಹಲಿಯಲ್ಲಿ ೧೦ ಜಿಲ್ಲೆಗಳು ಹಾಟ್‌ಸ್ಪಾಟ್‌ಗಳು ಎಂಬುದಾಗಿ ವರ್ಗೀಕರಣಗೊಂಡಿವೆ.

೬೦೦ಕ್ಕೂ ಹೆಚ್ಚು ಪ್ರಕರಣಗಳು ಇರುವ ತೆಲಂಗಾಣ ರಾಜ್ಯವು ೯ ಹಾಟ್‌ಸ್ಪಾಟ್ ಜಿಲ್ಲೆಗಳೊಂದಿಗೆ ನಂತರದ ಸ್ಥಾನದಲ್ಲಿದ್ದು, ತಲಾ ೮ ಜಿಲ್ಲೆಗಳೊಂದಿಗೆ ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕವು ತೆಲಂಗಾಣದ ಹಿಂದೆ ಇವೆ. ಕೇರಳವು ೭, ಗುಜರಾತ್, ಮಧ್ಯಪ್ರದೇಶ ಮತ್ತು ಹರಿಯಾಣ ತಲಾ ೬ ಹಾಟ್‌ಸ್ಟಾಟ್ ಜಿಲ್ಲೆಗಳನ್ನು ಹೊಂದಿವೆ. ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ೫ ರೆಡ್ ಜೋನ್ ಜಿಲ್ಲೆಗಳಿದ್ದು ಇಲ್ಲಿ ಗುಂಪು ರೋಗ ಲಕ್ಷಣಗಳು ಕಾಣಿಸಿವೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ೪ ರೆಡ್ ಜೋನ್ ಜಿಲ್ಲೆಗಳಿವೆ.

ರೆಡ್ ಜೋನ್ ಜಿಲ್ಲೆಗಳನ್ನು ಕೂಡಾ ದೊಡ್ಡ ಪ್ರಮಾಣದ ಅಥವಾ ಗುಂಪು ಪಿಡುಗಿನ ಜಿಲ್ಲೆಗಳಾಗಿ ವರ್ಗೀಕರಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪಿಡುಗು ಕಂಡು ಬಂದ ಜಿಲ್ಲೆಗಳಲ್ಲಿ ಏಕರೂಪದ ನಿರ್ಬಂಧಗಳಿದ್ದರೆ, ಗುಂಪು ಪಿಡುಗು ಕಂಡು ಬಂದ ಜಿಲ್ಲೆಗಳಲ್ಲಿ ಅತ್ಯಂತ ಕಠಿಣ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆಗಳಿವೆ.

ಬಿಳಿ ಮತ್ತು ಹಸಿರು ವಲಯಗಳು
ಸರ್ಕಾರವು ಕೊರೋನಾವೈರಸ್ ವರದಿಯಾದ ವೈಟ್ ಜೋನ್ (ಬಿಳಿ ವಲಯ) ಅಡಿಯಲ್ಲಿ ೨೦೭ ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳು ಎಂಬುದಾಗಿ ಗುರುತಿಸಿದೆ ಮತ್ತು ಪಿಡುಗು ಕಾಣಿಸಿಕೊಳ್ಳದ ೩೫೩ ಜಿಲ್ಲೆಗಳನ್ನು ಹಸಿರು ವಲಯದ (ಗ್ರೀನ್ ಜೋನ್) ಅಡಿಯಲ್ಲಿ ಗುರುತಿಸಿದೆ.

ಹಸಿರು ವಲಯದ ಅಡಿಯಲ್ಲಿನ ೩೫೩ ಜಿಲ್ಲೆಗಳಲ್ಲಿ ಏಪ್ರಿಲ್ ೨೦ರ ಬಳಿಕ, ಅವು ವೈರಸ್ ಮುಕ್ತವಾಗಿಯೇ ಮುಂದುವರೆದಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ ೧೪ರ ಭಾಷಣದಲ್ಲಿ ತಿಳಿಸಿದಂತೆ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ಸಾಧ್ಯತೆ ಇದೆ.

ಗೃಹ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳಿಗೆ ಹಾಟ್ ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ವಿನಾಯ್ತಿ ಲಭಿಸುವ ಸಾಧ್ಯತೆ ಇದೆ.

ಬಿಳಿವಲಯ (ವೈಟ್ ಜೋನ್) ಜಿಲ್ಲೆಗಳಲ್ಲಿ ಸಾಂಕ್ರಾಮಿಕ ಹತೋಟಿ ಕ್ರಮಗಳು ಜಾರಿಯಾಗಲಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ಪ್ರದೇಶದಲ್ಲಿ ರೋಗ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುವ ಸಲುವಾಗಿ ಹತೋಟಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅದು ತಿಳಿಸಿದೆ.

ರಾಜ್ಯಗಳು ಎಸ್‌ಎಆರ್‌ಐ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್) ಮತ್ತು ಐಎಲ್‌ಐ (ಇನ್‌ಫ್ಲುಯೆಂಜಾ ಲೈನ್ ಇನ್‌ಫೆಕ್ಷನ್) ಬಗ್ಗೆ ಪರಿಣಾಮಕಾರಿ ನಿಗಾ ಕ್ರಮಗಳನ್ನು ಬಿಳಿ ಮತ್ತು ಹಸಿರು ವಲಯ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ ಕೋವಿಡ್‌ಗಾಗಿಯೇ ಆಸ್ಪತ್ರೆಗಳನ್ನು ಖಚಿತಪಡಿಸಬೇಕಾಗುತ್ತದೆ.

ಜೋನ್ ವರ್ಗೀಕರಣ ಹೇಗೆ?
ಒಂದು ಜಿಲ್ಲೆಯನ್ನು ಹಾಟ್‌ಸ್ಪಾಟ್ ಎಂಬುದಾಗಿ ವರ್ಗೀಕರಿಸಲು ಅದು ಮೂರು ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ: ೧) ಭಾರತದ ಶೇಕಡಾ ೮೦ರಷ್ಟು ಪ್ರಕರಣಗಳ ಹೊರೆ ಈ ಜಿಲ್ಲೆಗಳದ್ದಾಗಿದ್ದು, ಅತಿ ಹೆಚ್ಚಿನ ಪ್ರಕರಣಗಳನ್ನು ಹೊಂದಿರಬೇಕು. ಅಥವಾ ೨) ಪ್ರತಿಯೊಂದು ರಾಜ್ಯದ ಶೇಕಡಾ ೮೦ರಷ್ಟು ಪ್ರಕರಣಗಳನ್ನು ಹೊಂದಿರಬೇಕು ಇಲ್ಲವೇ ೩) ನಾಲ್ಕು ದಿನಗಳಿಗೊಮ್ಮೆ ಪ್ರಕರಣಗಳು ದುಪ್ಪಟ್ಟು ಆಗುತ್ತಿರಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ರೆಡ್ ಜೋನ್ ಜಿಲ್ಲೆಯಿಂದ ೧೪ ದಿನಗಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗದೇ ಇದ್ದಲ್ಲಿ, ಆ ಜಿಲ್ಲೆಯು ಆರೇಂಜ್ ಜೋನ್‌ಗೆ (ಕಿತ್ತಳೆ ವಲಯ) ಹೋಗುತ್ತದೆ. ೨೮ ದಿನಗಳವರೆಗೆ ಯಾವುದೇ ಹೊಸ ಪ್ರಕರಣ ದಾಖಲಾಗದೇ ಇದ್ದರೆ ಅದು ಹಸಿರು ವಲಯಕ್ಕೆ ಹೋಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಒಟ್ಟು ಪ್ರಕರಣ
ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಕೊರೋನಾವೈರಸ್ ಸೋಂಕಿನ ೧,೧೭೪ ಹೊಸ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ ೩೯೨ಕ್ಕೆ ಏರಿದೆ. ಹೀಗಾಗಿ ಒಟ್ಟು ಪ್ರಕರಣಗಳ ಸಂಖ್ಯೆ ೧೨,೦೦೦ದ ಸಮೀಪಕ್ಕೆ ಬಂದಿವೆ.

ಈವರೆಗೆ ಭಾರತದಲ್ಲಿ ೧೧,೯೩೩ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ೧೦,೧೯೭ ಸಕ್ರಿಯ ಪ್ರಕರಣಗಳಾಗಿವೆ ಮತ್ತು ೧,೩೪೩ ಪ್ರಕರಣಗಳು ಗುಣಮುಖರಾದ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಪ್ರಕರಣಗಳಾಗಿವೆ.

ಮುಂಬೈಯಲ್ಲಿ ಬುಧವಾರ ೧೮೩ ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು ನಗರದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ ೧,೯೩೬ಕ್ಕೆ ಏರಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿರು ೨೦,೨೬,೦೫೧, ಸಾವು ೧,೨೯,೦೭೭
ಚೇತರಿಸಿಕೊಂಡವರು- ೪,೯೨,೮೯೨
ಅಮೆರಿಕ ಸೋಂಕಿತರು ೬,೧೫,೮೯೫, ಸಾವು ೨೬,೧೮೫
ಸ್ಪೇನ್ ಸೋಂಕಿತರು ೧,೭೭,೬೩೩, ಸಾವು ೧೮,೫೭೯
ಇಟಲಿ ಸೋಂಕಿತರು ೧,೬೨,೪೮೮, ಸಾವು ೨೧,೦೬೭
ಜರ್ಮನಿ ಸೋಂಕಿತರು ೧,೩೨,೫೯೨, ಸಾವು ೩,೫೯೨
ಚೀನಾ ಸೋಂಕಿತರು ೮೨,೨೯೫, ಸಾವು ೩,೩೪೨
ಇಂಗ್ಲೆಂಡ್ ಸೋಂಕಿತರು ೯೮,೪೭೬, ಸಾವು ೧೨,೮೬೮
ಸ್ಪೇನಿನಲ್ಲಿ ೩೨೪, ಬೆಲ್ಜಿಯಂನಲ್ಲಿ ೨೮೩, ಇಂಗ್ಲೆಂಡಿನಲ್ಲಿ ೭೬೧, ಒಟ್ಟಾರೆ ವಿಶ್ವಾದ್ಯಂತ ೨,೪೭೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement