ವಲಸೆ
ಕಾರ್ಮಿಕರಿಗೆ ಉಚಿತ ಪ್ರಯಾಣ, ನೀರು, ಆಹಾರ: ಸುಪ್ರೀಂ ಆದೇಶ
ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಂದ ರೈಲು ಅಥವಾ ಬಸ್ಸು ಟಿಕೆಟ್ ದರ ವಸೂಲಿ ಮಾಡಬಾರದು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ 2020 ಮೇ 28ರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.
ಸ್ವ
ಇಚ್ಛೆಯಿಂದ ದಾಖಲಿಸಿದ ಪ್ರಕರಣದಲ್ಲಿ, ಮಧ್ಯಂತರ ನಿರ್ದೇಶನ ನೀಡಿದ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು, ಸಿಕ್ಕಿಹಾಕಿಕೊಂಡಿರುವ ಎಲ್ಲ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕಟಿತ ಮತ್ತು ಘೋಷಿತ ಸ್ಥಳಗಳಲ್ಲಿ ಅವರಿಗೆ ರೈಲು ಅಥವಾ ಬಸ್ಸು ಏರಲು ಸಾಧ್ಯವಾಗುವವರೆಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿತು.
ಪಯಣ
ಆರಂಭವಾಗುವ ರಾಜ್ಯವು ನಿಲ್ದಾಣಗಳಲ್ಲಿಯೇ ಊಟ ಮತ್ತು ನೀರನ್ನು
ಒದಗಿಸಬೇಕು, ಭಾರತೀಯ ರೈಲ್ವೇಯು ಪಯಣದ ವೇಳೆಯಲ್ಲಿ ಅವರಿಗೆ ಆಹಾರ ನೀರನ್ನು ಒದಗಿಸಬೇಕು. ಬಸ್ಸು ಪಯಣದಲ್ಲೂ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಪೀಠ ಸೂಚಿಸಿತು.
ವಲಸೆ
ಕಾರ್ಮಿಕರಿಗೆ ಆದಷ್ಟೂ ಬೇಗನೆ ರೈಲು ಅಥವಾ ಬಸ್ಸು ಪಯಣ ಮಾಡಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ರಾಜ್ಯಗಳು ಮಾಡಬೇಕು. ಈ ನಿಟ್ಟಿನ ಸಂಪೂರ್ಣ
ಮಾಹಿತಿಯನ್ನು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರನ್ನೂ ಒಳಗೊಂಡ
ಪೀಠ ನಿರ್ದೇಶನ ನೀಡಿತು.
ತಮ್ಮ
ಮನೆಗಳಿಗೆ ವಾಪಸಾಗಲು ಯತ್ನಿಸುತ್ತಿರುವ ವಲಸೆ ಕಾರ್ಮಿಕರು ತೊಂದರೆಗಳು ಕಳವಳದಾಯಕ. ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ನೋಂದಣಿ, ಸಾಗಣೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ನೀರು ಒದಗಿಸುವ ಪ್ರಕ್ರಿಯೆಯಲ್ಲಿ ಹಲವಾರು ನ್ಯೂನತೆಗಳು ಕಂಡು ಬಂದಿವೆ ಎಂದು ಕೋರ್ಟ್ ಹೇಳಿತು.
ಇದಕ್ಕೆ
ಮುನ್ನ ವಲಸೆ ಕಾರ್ಮಿಕರ ಸಮಸ್ಯೆಯು ಅಭೂತಪೂರ್ವ ಬಿಕ್ಕಟ್ಟಾಗಿದ್ದು, ಈ ಅಭೂತಪೂರ್ವ ಬಿಕ್ಕಟ್ಟನ್ನು
ಬಗೆ ಹರಿಸಲು ಸರ್ಕಾರ ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ಮೇ ೧ರಿಂದ ಇಲ್ಲಿಯವರೆಗೆ
೯೭ ಲಕ್ಷ ವಲಸೆ ಕಾರ್ಮಿಕರನ್ನು
ಅವರವರ ಹುಟ್ಟೂರುಗಳಿಗೆ ಕಳುಹಿಸಿಕೊಟ್ಟಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಬೆಳಗ್ಗೆ ಸುಪ್ರೀಂಕೋರ್ಟಿಗೆ ವಿವರಿಸಿತ್ತು.
‘ಇದೊಂದು
ಅಭೂತಪೂರ್ವ ಬಿಕ್ಕಟ್ಟು ಮತ್ತು ನಾವು ಅಭೂತಪೂರ್ವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು
ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಕೋವಿಡ್-೧೯ ದಿಗ್ಬಂಧನ (ಲಾಕ್
ಡೌನ್) ವೇಳೆಯಲ್ಲಿನ ವಲಸೆ ಕಾರ್ಮಿಕರ ಪರಿಸ್ಥಿತಿ ಕುರಿತು ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದರು.
‘ಸಿಕ್ಕಿಹಾಕಿಕೊಂಡು
ತಮ್ಮ ಹುಟ್ಟೂರುಗಳಿಗೆ ವಾಪಸಾಗಬಯಸುವ ವಲಸೆ ಕಾರ್ಮಿಕರನ್ನು ತಡೆಯಬಾರದು’
ಎಂದು ಪೀಠವು ಹೇಳಿತು.
‘ವಲಸೆ
ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಬಯಸಿದರೆ, ಯಾವ ರಾಜ್ಯವೂ ನಾವು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವುದಿಲ್ಲ ಎಂದು ಹೇಳಬಾರದು’
ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು ಹೇಳಿತು. ಸುಪ್ರೀಂಕೋರ್ಟ್ ಪೀಠವು ಸ್ವ ಇಚ್ಛೆಯಿಂದ ವಲಸೆ ಕಾರ್ಮಿಕರ ಸ್ಥಿತಿಗತಿ ಕುರಿತ ಪ್ರಕರಣವನ್ನು ವಿಚಾರಣೆಗಾಗಿ ಎತ್ತಿಕೊಂಡಿತ್ತು.
ತಮ್ಮ
ರಾಜ್ಯಗಳಿಗೆ ವಾಪಸಾಗಬಯಸುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಕಾಲಮಿತಿಯೊಂದನ್ನು ಸರ್ಕಾರವು ಹಾಕಿಕೊಳ್ಳಬೇಕು. ಮಧ್ಯಂತರದ ಅವಧಿಯಲ್ಲಿ ಅವರಿಗೆ ಆಹಾರ ಮತ್ತು ಇತರ ಸವಲತ್ತುಗಳನ್ನು
ಒದಗಿಸಬೇಕು ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನುಡಿದರು.
ವಲಸೆ
ಕಾರ್ಮಿಕರ ಸ್ಥಳಾಂತರಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ನೀಡಿದ ಸರ್ಕಾರ ೫೦ ಲಕ್ಷ ವಲಸೆ
ಕಾರ್ಮಿಕರನ್ನು ಮೇ ೧ರಿಂದ ೨೭ರ
ನಡುವಣ ಅವಧಿಯಲ್ಲಿ ಶ್ರಮಿಕ ವಿಶೇಷ ರೈಲುಗಳ ಮೂಲಕ ಅವರವರ ಹುಟ್ಟೂರುಗಳಿಗೆ ಕಳುಹಿಸಲಾಗಿದೆ. ೪೧ ಲಕ್ಷ ಮಂದಿಯನ್ನು
ರಸ್ತೆ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿತು.
‘ಮೇ
೧ರಿಂದ ಇಲ್ಲಿಯವರೆಗೆ ೯೭ ಲಕ್ಷ ವಲಸೆ
ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆ’ ಎಂದು
ತುಷಾರ ಮೆಹ್ತ ನುಡಿದರು.
ರಾಜ್ಯಗಳು
ಪೂರ್ತಿ ಮಾಹಿತಿ ನೀಡಿದ ಬಳಿಕ ಮಾತ್ರವೇ ಸಿಕ್ಕಿ ಹಾಕಿಕೊಂಡ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲು ಸಾಧ್ಯ. ಹುಟ್ಟೂರುಗಳಿಗೆ ಕಳುಹಿಸಲಾದ ವಲಸೆ ಕಾರ್ಮಿಕರ ಪೈಕಿ ಶೇಕಡಾ ೮೦ರಷ್ಟು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರು ಎಂದು ಸಾಲಿಸಿಟರ್ ಜನರಲ್ ನುಡಿದರು.
‘ರಾಜ್ಯಗಳು
ಉತ್ತರಿಸಲಿ, ಆಗ ನಿಮಗೆ ಸಮಗ್ರ
ಚಿತ್ರ ಲಭಿಸುತ್ತದೆ. ಬಿಡಿ ಘಟನೆಗಳು ವಿಚಾರಣೆಯ ಮೇಲೆ ಪ್ರಭಾವ ಬೀರದಿರಲಿ’
ಎಂದು ಅವರು ಹೇಳಿದರು.
ಇದಕ್ಕೆ
ಮುನ್ನ ಕಾಂಗ್ರೆಸ್ ಪಕ್ಷದ ’ಮಾತನಾಡಿ’
(ಸ್ಪೀಕ್ ಅಪ್) ಪ್ರಚಾರ ಅಭಿಯಾನದಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರು ’ಕೋವಿಡ್-೧೯ ದಿಗ್ಬಂಧನ ಪರಿಣಾಮವಾಗಿ
ವಲಸೆ ಕಾರ್ಮಿಕರು ಮನೆ ತಲುಪಲು ಹೆದ್ದಾರಿಗಳಲ್ಲಿ ಬರಿಗಾಲುಗಳಲ್ಲಿ ಕಾಲ್ನಡಿಗೆ ಮಾಡುತ್ತಿರುವಾಗ ’ಇಡೀ
ರಾಷ್ಟವೇ ಹೇಗೆ ನೋವು ಅನುಭವಿಸಿತು’ ಎಂದು
ವಿವರಿಸಿದ್ದರು. ಈ ಬಡ ಜನರ
ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ’ ಎಂದು
ಸೋನಿಯಾ ಗಾಂಧಿ ಆಪಾದಿಸಿದ್ದರು.
ಸುಪ್ರೀಂಕೋರ್ಟ್
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿತ್ತು. ವಲಸೆ ಕಾರ್ಮಿಕರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಸಮಂಜಸತೆ ಮತ್ತು ಕೆಲವು ಲೋಪದೋಷಗಳಿದ್ದವು ಎಂದು ಪೀಠ ಹೇಳಿತ್ತು.
‘ಮಾಧ್ಯಮ ವರದಿಗಳು ನಿರಂತರವಾಗಿ ಸುದೀರ್ಘ ದೂರವನ್ನು ನಡೆಯುತ್ತಾ ಇಲ್ಲವೇ ಸೈಕಲ್‌ಗಳ ಮೂಲಕ ಕ್ರಮಿಸುವ ವಲಸೆ ಕಾರ್ಮಿಕರ ದುರದೃಷ್ಟಕರ ಮತ್ತು ದಾರುಣ ಪರಿಸ್ಥಿತಿಯನ್ನು ತೋರಿಸುತ್ತಿವೆ’ ಎಂದು ನ್ಯಾಯಾಲಯ ಹೇಳಿತ್ತು.
No comments:
Post a Comment