ಲಡಾಖ್‌ನಲ್ಲಿ ಯೋಧರಿಗೆ ಆಧುನಿಕ ವಸತಿ ಸವಲತ್ತು ಸ್ಥಾಪನೆ
ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಗೆ ಮುಖಾಮುಖಿಯಾಗಿರುವ ತನ್ನ ಸೇನೆಯನ್ನು ಚೀನಾವು ತತ್ ಕ್ಷಣ ಹಿಂತೆಗೆದುಕೊಳ್ಳುವ ಯಾವುದೇ ಲಕ್ಷಣಗಳು ಇಲ್ಲದೇ ಇರುವುದರ ಮಧ್ಯೆಯೇ, ಪೂರ್ವ ಲಡಾಖ್ನಲ್ಲಿ ಈ ಚಳಿಗಾಲದ ಕಠಿಣ ಪರಿಸ್ಥಿತಿಗಳಲ್ಲಿ ಸಹಸ್ರಾರು ಸೈನಿಕರ ವಾಸಕ್ಕೆ ಬೇಕಾದ ಅಗತ್ಯ ಆವಾಸಸ್ಥಾನ ಸವಲತ್ತುಗಳ ಸ್ಥಾಪನೆಯನ್ನು ಸೇನೆಯು ಪೂರ್ಣಗೊಳಿಸಿದೆ.
ಸೇನೆಯು ಬಿಡುಗಡೆ ಮಾಡಿರುವ ವೀಡಿಯೋ ಹಾಸಿಗೆಗಳು, ಬೀರುಗಳು ಮತ್ತು ಶಾಖೋತ್ಪಾದಕಗಳು ಸೇರಿದಂತೆ ಮೂಲಸವಲತ್ತುಗಳನ್ನು ಹೊಂದಿರುವ ಸೈನಿಕರ ವಸತಿಗಳನ್ನು ತೋರಿಸುತ್ತದೆ. ಕೆಲವು ಕೋಣೆಗಳು ಒಂದೇ ಹಾಸಿಗೆಗಳನ್ನು ಹೊಂದಿದ್ದರೆ, ಕೆಲವು ಕೋಣೆಗಳಲ್ಲಿ ಒರಗು ಹಲಗೆ (ಬಂಕ್) ಹಾಸಿಗೆಗಳಿವೆ.
ವರ್ಷಗಳಲ್ಲಿ ನಿರ್ಮಿಸಲಾಗಿರುವ ಸಮಗ್ರ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಂಪ್ಗಳ ಹೊರತಾಗಿ, ಸೈನಿಕರಿಗೆ ಸ್ಥಳಾವಕಾಶ ಕಲ್ಪಿಸಲು ವಿದ್ಯುತ್, ನೀರು, ಶಾಖ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಸಮಗ್ರ ವ್ಯವಸ್ಥೆಗಳೊಂದಿಗೆ ಹೆಚ್ಚುವರಿ ಅತ್ಯಾಧುನಿಕ ಆವಾಸಸ್ಥಾನಗಳನ್ನು ಇತ್ತೀಚೆಗೆ ರಚಿಸಲಾಗಿದೆ ಎಂದು ಸೇನೆಯು 2020 ನವೆಂಬರ್ 18ರ ಬುಧವಾರ ಹೇಳಿತು.
"ಮುಂಚೂಣಿಯಲ್ಲಿರುವ ಸೈನಿಕರಿಗೆ ತಮ್ಮ ನಿಯೋಜನೆಯ ಯುದ್ಧತಂತ್ರದ ಪರಿಗಣನೆಗಳ ಪ್ರಕಾರ ಬಿಸಿಯಾದ ಗುಡಾರಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ನಾಗರಿಕ ಮೂಲಸೌಕರ್ಯಗಳನ್ನು ಸಹ ಗುರುತಿಸಲಾಗಿದೆ" ಎಂದು ಸೇನೆ ಹೇಳಿದೆ. ಈ ಪ್ರದೇಶದ ತಾಪಮಾನ ಮೈನಸ್ ೩೦-೪೦ ಡಿಗ್ರಿ ಸೆಲ್ಸಿಯಸ್ಗೆ ಕೂಡಾ ಇಳಿಯುತ್ತದೆ. ಅಲ್ಲದೆ ನವೆಂಬರ್ ತಿಂಗಳ ನಂತರ ೪೦ ಅಡಿಗಳಷ್ಟು ಹಿಮಪಾತ ಉಂಟಾಗುತ್ತದೆ. ಇದರಿಂದಾಗಿ ಈ ಪ್ರದೇಶಕ್ಕೆ ರಸ್ತೆ ಪ್ರವೇಶಕ್ಕೂ ಸ್ವಲ್ಪ ಸಮಯದವರೆಗೆ ಅಡ್ಡಿ ಉಂಟಾಗುತ್ತದೆ ಎಂದು ಅದು ಹೇಳಿತು.
"ಚಳಿಗಾಲದಲ್ಲಿ ನಿಯೋಜಿತ ಸೈನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಸೇನೆಯು ಈ ವಲಯದಲ್ಲಿ ನಿಯೋಜಿಸಲಾಗಿರುವ ಎಲ್ಲಾ ಸೈನಿಕರಿಗೆ ಆವಾಸಸ್ಥಾನ ಸೌಲಭ್ಯಗಳ ಸ್ಥಾಪನೆಯನ್ನು ಪೂರ್ಣಗೊಳಿಸಿದೆ" ಎಂದು ಸೇನೆ ತಿಳಿಸಿದೆ. ಪೂರ್ವ ಲಡಾಖ್ನಲ್ಲಿ ಮೇ ಆರಂಭದಿಂದ ಭಾರತ ಮತ್ತು ಚೀನಾ ಸೇನೆ ಮುಖಾಮುಖಿಯಾಗಿವೆ.
ಚಳಿಗಾಲದ ಪರಿಸ್ಥಿತಿಗಳನ್ನು ನಿಭಾಯಿಸಲು ಸೇನೆಯು ರಷ್ಯಾದ ಡೇರೆಗಳನ್ನು ಸಂಗ್ರಹಿಸುತ್ತಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಈ ಡೇರೆಗಳನ್ನು ಖರೀದಿಸಲು ಕಾನ್ಪುರದ ಆರ್ಡಿನೆನ್ಸ್ ಕಾರ್ಖಾನೆಯು ಸಂಪರ್ಕಿಸಿತ್ತು. ಚೀನಾವು ಪ್ಯಾಂಗೊಂಗ್ ಮತ್ತು ಎಲ್ಎಸಿಯ ಇತರ ಘರ್ಷಣೆ ಸ್ಥಳಗಳಲ್ಲಿ ಅರೆ ಶಾಶ್ವತ ರಚನೆಗಳನ್ನು ನಿರ್ಮಿಸಿದೆ. ಲಾಕ್ಡೌನ್ ಪರಿಣಾವಾಗಿ ಸೈನಿಕರಿಗೆ ಪೂರ್ವ ನಿರ್ಮಿತ ರಚನೆಗಳನ್ನು ನಿರ್ಮಿಸಲು ಭಾರತೀಯ ಸೈನ್ಯಕ್ಕೆ ಸಹಾಯ ಮಾಡಬಹುದಾದ ಕೆಲವು ಗುತ್ತಿಗೆದಾರರು ಲಭಿಸಿರಲಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಸೈಬೀರಿಯಾದಂತಹ ಪ್ರದೇಶಗಳಲ್ಲಿ ಶೀತವನ್ನು ತಡೆದುಕೊಳ್ಳಬಲ್ಲ ರಷ್ಯಾದ ಡೇರೆಗಳನ್ನು ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿ ಪರ್ಯಾಯವಾಗಿ ತಲುಪಿಸಲಾಗಿದೆ.
ದೀರ್ಘ ನಿಯೋಜನೆಯಿಂದಾಗಿ ಹವಾಮಾನ ಮತ್ತು ಜೀವನ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಐಟಿಬಿಪಿ ಯೋಧರು, ’ಶಕ್ಕರ್ಪಾರಾ’ವನ್ನು (ಸಿಹಿ ಶಂಕರ ಪೋಳಿ) ಸೂಪರ್ ಫುಡ್ ಆಗಿ ಅವಲಂಬಿಸಲು ನಿರ್ಧರಿಸಿದ್ದಾರೆ. ’ಶಕ್ಕರ್ಪಾರಾ’ ಉತ್ತರ ಭಾರತದ ತಿಂಡಿ, ಗೋಧಿ ಹಿಟ್ಟನ್ನು ಚೆನ್ನಾಗಿ ಹುರಿದು ಅದನ್ನು ಸಕ್ಕರೆ ಪಾಕದಲ್ಲಿ ಮುಳುಗಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ.
"ಅದರಲ್ಲಿ ಗೋಧಿ ಇದೆ, ಸಕ್ಕರೆ ನಿಮಗೆ ಶಕ್ತಿಯನ್ನು ನೀಡುತ್ತದೆ. ತಯಾರಿಸಲು ಮತ್ತು ಸಾಗಿಸಲು ಸುಲಭವಾಗಿದೆ" ಎಂದು ನಿಯೋಜಿತ ಯೋಧರೊಬ್ಬರು ಈ ಅಸಾಮಾನ್ಯ ಆಯ್ಕೆಯ ಬಗ್ಗೆ ವಿವರಿಸಿದರು. ದೆಹಲಿಯ ಸೈನ್ಯದ ಪ್ರಧಾನ ಕಚೇರಿ ಕೂಡಾ ’ಶಕ್ಕರಪಾರಾ’ ಪೊಟ್ಟಣಗಳನ್ನು ಸಿದ್ಧ ಪಡಿಸಿ ಮುಂಚೂಣಿ ನೆಲೆಗಳಿಗೆ ಕಳುಹಿಸಲಾಗುತ್ತಿದೆ ಎಂದು ದೃಢ ಪಡಿಸಿತು.
ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಎತ್ತರದಲ್ಲಿರುವ ಪ್ರದೇಶಕ್ಕೆ ನೀರು ಸರಬರಾಜು ಮಾಡುವುದು ಇತರ ಸಮಸ್ಯೆಗಳಲ್ಲಿ ದೊಡ್ಡ ಚಿಂತೆಯಾಗಿದೆ. ಕೆಲವು ಮುಂಚೂಣಿಯ ನೆಲೆಗಳಲ್ಲಿ ನೆಲದಲ್ಲಿ ಕೊಳವೆ ಮೂಲಕ ನೀರನ್ನು ವ್ಯವಸ್ಥೆ ಮಾಡಲಾಗಿದೆ. ಚುಶುಲ್ನಲ್ಲಿ ಸ್ಥಳೀಯರು ಭಾರತೀಯ ಸೇನೆಗೆ ಇತರ ಕೆಲವು ಸ್ಥಳಗಳಲ್ಲಿ ನೀರು ಸಾಗಿಸಲು ಸಹಾಯ ಮಾಡಿದ್ದಾರೆ.
ಅಮೆರಿಕದಿಂದ ವಿಶೇಷ ಚಳಿಗಾಲದ ಬಟ್ಟೆಗಳನ್ನು ಸರಬರಾಜು ಮಾಡುವುದು ಸೇರಿದಂತೆ ತನ್ನ ಮುಂಚೂಣಿಯ ನಿಯೋಜಿತ ಸೈನಿಕರಿಗೆ ಸಂಚಾರ-ಸಾಗಣೆ ಬೆಂಬಲವನ್ನು ನೀಡಲು ಭಾರತ ತೀವ್ರ ಪ್ರಯತ್ನಗಳನ್ನು ಮಾಡಿದೆ. ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಮ್ ಆಫ್ ಅಸೋಸಿಯೇಶನ್ (ಲೆಮೋಎ) ಅನ್ನು ಸಕ್ರಿಯಗೊಳಿಸುವ ಮೂಲಕ ತುರ್ತು ಪೂರೈಕೆಯೊಂದಿಗೆ ಭಾರತವು ಅಮೆರಿಕದಿಂದ ೧೫,೦೦೦ ಕ್ಕೂ ಹೆಚ್ಚು ವಿಸ್ತೃತ ಶೀತ ಹವಾಮಾನ ಬಟ್ಟೆ ವ್ಯವಸ್ಥೆಯನ್ನು (ಇಸಿಡಬ್ಲ್ಯೂಸಿಎಸ್) ಆಮದು ಮಾಡಿಕೊಂಡಿದೆ. ದ್ವಿಪಕ್ಷೀಯ ಸೇನಾ ಸಹಕಾರವನ್ನು ಗಾಢವಾಗಿಸಲು ವಾಷಿಂಗ್ಟನ್ ಪ್ರಸ್ತಾಪಿಸಿದ ಮೂರು ಮೂಲಭೂತ ಒಪ್ಪಂದಗಳಲ್ಲಿ ಅಮೆರಿಕ ಜೊತೆಗಿನ ಮೊದಲನೆಯ ಒಪ್ಪಂದಕ್ಕೆ ೨೦೧೬ರ ಆಗಸ್ಟ್ ತಿಂಗಳಲ್ಲಿ ಭಾರತವು ಲೆಮೋವಾದಲ್ಲಿ ಕ್ಕೆ ಸಹಿ ಹಾಕಿತ್ತು.
ಭಾರತೀಯ ಸೈನ್ಯ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ನಡುವಣ ಘರ್ಷಣೆಯನ್ನು ಕಡಿಮೆ ಮಾಡಲು ಉಭಯ ದೇಶಗಳು ಎಂಟು ಸುತ್ತಿನ ಮಾತುಕತೆ ನಡೆಸಿವೆ.
ನವೆಂಬರ್ ೬ ರಂದು ನಡೆದ ಕೊನೆಯ ಸುತ್ತಿನ ಮಾತುಕತೆಯಲ್ಲಿ, ಎಲ್ಎಸಿ ಉದ್ದಕ್ಕೂ ತಮ್ಮ ಮುಂಚೂಣಿಯ ಸೈನಿಕರು ‘ಸಂಯಮ ಮತ್ತು ತಪ್ಪು ತಿಳುವಳಿಕೆ ಮತ್ತು ತಪ್ಪು ಲೆಕ್ಕಾಚಾರವನ್ನು ತಪ್ಪಿಸುವುದನ್ನು’ ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕೋರ್ ಕಮಾಂಡರ್-ಶ್ರೇಣಿಯ ಅಧಿಕಾರಿಗಳ ನಡುವೆ ಒಂಬತ್ತನೇ ಸುತ್ತಿನ ಮಾತುಕತೆ ನಡೆಸಲು ಒಪ್ಪಿಕೊಳ್ಳಲಾಗಿದೆ. ಆದರೆ ಆ ಸಂವಾದಕ್ಕೆ ಇನ್ನೂ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ.
ಮಾತುಕತೆಯ ಸಮಯದಲ್ಲಿ ಭಾರತವು ಎಲ್ಲಾ ಫ್ಲ್ಯಾಷ್ ಪಾಯಿಂಟ್ಗಳಲ್ಲಿ ಸೇನಾ ಚಟುವಟಿಕೆಗಳ ಸಮಗ್ರ ನಿಷ್ಕ್ರಿಯಗೊಳಿಸುವಿಕೆ ಮತ್ತು ಏಪ್ರಿಲ್ ಆರಂಭದಲ್ಲಿದ್ದ ಯಥಾಸ್ಥಿತಿ ಪುನಃಸ್ಥಾಪಿಬೇಕು ಎಂದು ಹೇಳಿದೆ. ಸೂಕ್ಷ್ಮ ಪ್ರದೇಶದಲ್ಲಿ ಪರಿಸ್ಥಿತಿ ದೊಡ್ಡ ಸಂಘರ್ಷಕ್ಕೆ ಉಲ್ಬಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕದಿದ್ದರೂ ಸಹ ಪೂರ್ವ ಲಡಾಖ್ನಲ್ಲಿ ಎಲ್ಎಸಿಯನ್ನು ಸ್ಥಳಾಂತರಿಸುವುದನ್ನು ಭಾರತ ಒಪ್ಪುವುದಿಲ್ಲ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನವೆಂಬರ್ ೬ ರಂದು ಹೇಳಿದ್ದರು.
No comments:
Post a Comment