ಇಂದಿನ ಇತಿಹಾಸ
ಮೇ 17
ಕ್ಯಾಲಿಫೋರ್ನಿಯಾದ 18ರ ಹರೆಯದ ತರುಣಿ ಸಮಂಥಾ ಲಾರ್ಸನ್ ಅವರು ವಿಶ್ವದ ಅತ್ಯುನ್ನತವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊತ್ತ ಮೊದಲ ಅತಿ ಕಿರಿಯ ವಿದೇಶಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು.
2007: ಕ್ಯಾಲಿಫೋರ್ನಿಯಾದ 18ರ ಹರೆಯದ ತರುಣಿ ಸಮಂಥಾ ಲಾರ್ಸನ್ ಅವರು ವಿಶ್ವದ ಅತ್ಯುನ್ನತವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊತ್ತ ಮೊದಲ ಅತಿ ಕಿರಿಯ ವಿದೇಶಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ನೇಪಾಳದ 15 ವರ್ಷದ ಶೆರ್ಪಾ ಬಾಲಕಿಯೊಬ್ಬಳು ಎವರೆಸ್ಟ್ ಶಿಖರ ಏರಿದ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರಳಾಗಿದ್ದಾಳೆ.
2007: ಬಜಾಜ್ ಆಟೋ ಸಂಸ್ಥೆಯನ್ನು ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ ವೆಸ್ಟ್ ಮೆಂಟ್ಸ್ ಲಿಮಿಟೆಡ್ (ಬಿಎಚ್ ಐಎಲ್) ಮತ್ತು ಬಜಾಜ್ ಫೈನಾನ್ಸರ್ಸ್ ಲಿಮಿಟೆಡ್ (ಬಿಎಫ್ ಎಲ್) ಎಂಬ ಹೆಸರಿನೊಂದಿಗೆ ಎರಡು ಸಂಸ್ಥೆಗಳಾಗಿ ವಿಭಜಿಸುವ ಯೋಜನೆಗೆ ಬಜಾಜ್ ಆಟೋ ಲಿಮಿಟೆಡ್ ಬೋರ್ಡ್ ಒಪ್ಪಿಗೆ ನೀಡಿತು.
2007: ಮೈಸೂರು, ಮಂಡ್ಯ ಜಿಲ್ಲೆಗೆ ನೀರು ಒದಗಿಸುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ತಗ್ಗುತ್ತಿದ್ದಂತೆಯೇ ಮೈಸೂರು ತಾಲ್ಲೂಕಿಗೆ ಸೇರಿದ ಆನಂದೂರು ಗ್ರಾಮದ ಬಳಿ ಜಲಾಶಯದ ಕೆಳಗಿದ್ದ ನಾರಾಯಣಸ್ವಾಮಿ ದೇವಾಲಯ ಪ್ರತ್ಯಕ್ಷವಾಯಿತು. ಕಳೆದ ಬಾರಿ ಜಲಾಶಯದಲ್ಲಿ ಕನ್ನಂಬಾಡಿ ಗ್ರಾಮದ ಬಳಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಗೋಚರಿಸಿತ್ತು.
2007: ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ವಿಷಯದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಉನ್ನತ ಪೀಠಕ್ಕೆ ವಹಿಸಿತು.
2007: ಬ್ರಿಟನ್ನಿನ ಚಾನ್ಸೆಲರ್ ಗಾರ್ಡನ್ ಬ್ರೌನ್ ಅವರು ಸಂಸತ್ತಿನಲ್ಲಿ ನಡೆದ ನಾಮ ನಿರ್ದೇಶನದಲ್ಲಿ ತಮ್ಮ ವಿರೋಧಿ ಎಡಪಂಥೀಯ ಜಾನ್ ಮೆಕ್ ಡೊನೆಲ್ ಅವರನ್ನು ಸೋಲಿಸಿದರು. ಇದರೊಂದಿಗೆ ಟೋನಿ ಬ್ಲೇರ್ ನಂತರ ಬ್ರೌನ್ ಪ್ರಧಾನ ಮಂತ್ರಿಯಾಗುವುದು ಖಚಿತಗೊಂಡಿತು.
2007: ಹಿಂದೂಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟನ್ನಿನ ಹಿಂದೂ ದೇವಾಲಯದಲ್ಲಿ ಬಿಡಲಾಗಿದ್ದ ಬಸವನ (ಶಂಭು) ಹತ್ಯೆಯ ನಿರ್ಧಾರವನ್ನು ಸರ್ಕಾರ ಮುಂದೂಡಿತು.
2007: ಐವತ್ತಾರು ವರ್ಷಗಳ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಎರಡು ರೈಲುಗಾಡಿಗಳು ಪರಸ್ಪರ ಗಡಿ ದಾಟಿ ಏಕತೆಯೆಡೆಗೆ ಮತ್ತೆ ಹೆಜ್ಜೆ ಹಾಕಿದವು.
2007: ದೇಶದ ಪ್ರಪ್ರಥಮ ಕೃಷಿ ಸಮುದಾಯ ಬಾನುಲಿ ಕೇಂದವು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಚಾಲನೆಗೊಂಡಿತು. ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ ಬಾನುಲಿ ಕೇಂದ್ರವನ್ನು ಉದ್ಘಾಟಿಸಿದರು.
2007: ಡೆಕ್ಕನ್ ಹೆರಾಲ್ಡ್ ಹಿರಿಯ ವರದಿಗಾರ್ತಿ ಸಂಗೀತಾಚೆಂಗಪ್ಪ ಅವರಿಗೆ 9ನೇ ವರ್ಷದ `ಪೋಲ್ಸ್ಟಾರ್' ಪ್ರಶಸ್ತಿ ಲಭಿಸಿತು.
2006: ಸ್ವಾತಂತ್ರ್ಯ ಹೋರಾಟಗಾರ, ಇಂಡಿಯನ್ ನ್ಯಾಷನಲ್ ಆರ್ಮಿ ಸಂಸ್ಥಾಪಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬುದಾಗಿ ಹೇಳಿರುವ ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ನ್ಯಾಯಮೂರ್ತಿ ಮುಖರ್ಜಿ ಆಯೋಗವು 2005 ನವೆಂಬರ್ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಪರಿಶೀಲಿಸಿದೆ, ಆದರೆ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಜಪಾನ್ ದೇವಾಲಯದಲ್ಲಿ ಇರುವ ಚಿತಾಭಸ್ಮ ಅವರದ್ದಲ್ಲ ಎಂಬ ಆಯೋಗದ ವರದಿಗೆ ಸರ್ಕಾರದ ಸಹಮತ ಇಲ್ಲ ಎಂದು ಸದನದಲ್ಲಿ ವರದಿಯ ಜೊತೆಗೆ ಮಂಡಿಸಲಾದ ಕ್ರಮಾನುಷ್ಠಾನ ವರದಿಯಲ್ಲಿ (ಕ್ರಮ ಕೈಗೊಂಡ ವರದಿ) ಸರ್ಕಾರ ತಿಳಿಸಿತು.
2006: ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ಕಲ್ಪಿಸುವ ಪ್ರಸ್ತಾವದ ವಿರುದ್ಧ ದೇಶದ ವಿವಿಧ ಪ್ರದೇಶಗಳಿಗೆ ಚಳವಳಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹೆಚ್ಚಳ ಪರಿಶೀಲಿಸಿ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್, ಕಾನೂನು ಸಚಿವ ಎಚ್. ಆರ್. ಭಾರದ್ವಾಜ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಒಳಗೊಂಡ ನಾಲ್ಕು ಮಂದಿ ಸಚಿವರ `ಅನೌಪಚಾರಿಕ ಸಲಹಾ ಸಮಿತಿ' ಒಂದನ್ನು ರಚಿಸಿದರು.
1965: ಕಲಾವಿದ ರಾಜಗೋಪಾಲ ಕಲ್ಲೂರಕರ ಜನನ.
1954: ಕರಿಯರು ಮತ್ತು ಬಿಳಿಯರಿಗಾಗಿ `ಪ್ರತ್ಯೇಕ ಮತ್ತು ಸಮಾನ' ಪಬ್ಲಿಕ್ ಶಾಲೆಗಳನ್ನು ನಡೆಸುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂಬ ಚಾರಿತ್ರಿಕ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿತು.
1946: ಕಲಾವಿದೆ ಕಾವೇರಿ ಶ್ರೀಧರ್ ಜನನ.
1935: ಕಲಾವಿದ ಉತ್ತರಾಚಾರ್ಯ ಜನನ.
1934: ಕಲಾವಿದ ರಾಮಮೂರ್ತಿ ಜನನ.
1934: ಕಲಾವಿದ ಜಂಬೂಕಣ್ಣನ್ ಜನನ.
1897: ಕರ್ನಾಟಕ ಸಂಗೀತದ ವಾಗ್ಗೇಯಕಾರ ಎಚ್. ಯೋಗಾ ನರಸಿಂಹಂ (17-5-1897ರಿಂದ 14-5-1971) ಅವರು ಹೊಳೆನರಸೀಪುರದ ನಾರಣಪ್ಪ- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಕೋಲಾರದಲ್ಲಿ ಜನಿಸಿದರು.
1861: ಲಂಡನ್ನಿನಿಂದ ಪ್ಯಾರಿಸ್ಸಿಗೆ 6 ದಿನಗಳ ಪ್ರವಾಸ ಏರ್ಪಡಿಸುವ ಮೂಲಕ ಥಾಮಸ್ ಕುಕ್ ಮೊತ್ತ ಮೊದಲ `ಪ್ಯಾಕೇಜ್ ಹಾಲಿಡೇ' ಆರಂಭಿಸಿದ.
1792: `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ಆರಂಭಗೊಂಡಿತು. ಈಗ ವಾಲ್ ಸ್ಟ್ರೀಟ್ ಎಂಬುದಾಗಿ ಕರೆಯಲಾಗುವ ಸ್ಥಳದಲ್ಲಿ ಸೆಕ್ಯುರಿಟಿಗಳ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಸ್ಥಳೀಯ ಬ್ರೋಕರುಗಳು ತಮ್ಮ ವಹಿವಾಟನ್ನು ಈ ಕೇಂದ್ರದ ಮೂಲಕ ಅಧಿಕೃತಗೊಳಿಸಲು ಒಪ್ಪಿದರು. ಈಗ ಎಲ್ಲರಿಂದ ಮಾನ್ಯತೆ ಪಡೆದಿರುವ ದಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 1825ರಲ್ಲಿ ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟಿನ 11ನೇ ನಂಬರ್ ಕಟ್ಟಡದಲ್ಲಿ ಸ್ಥಾಪನೆಗೊಂಡಿತು.
1540: ಕನೋಜಿನಲ್ಲಿ ನಡೆದ ಕದನದಲ್ಲಿ ಹುಮಾಯೂನನನ್ನು ಶೇರ್ ಶಹ ಸೂರಿ ಸೋಲಿಸಿದ. ಸೋತ ಹುಮಾಯೂನ್ ಸಿಂಧ್ ಹಾಗೂ ನಂತರ ಮಾರವಾಡದಲ್ಲಿ ನಿರಾಶ್ರಿತನಾಗಿ ನೆಲೆಸಬೇಕಾಯಿತು. ಆತನ ಮಗ ಅಕ್ಬರ್ ಇಂತಹ ಪರಿಸ್ಥಿತಿಯಲ್ಲೇ 1542ರಲ್ಲಿ ಜನಿಸಿ ಮುಂದೆ ಮೊಘಲ್ ಸಾಮ್ರಾಟರಲ್ಲೇ ಅತ್ಯಂತ ಶ್ರೇಷ್ಠ ಸಾಮ್ರಾಟನೆಂಬ ಹೆಸರು ಪಡೆದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment