Friday, May 16, 2008

How much we 'voters' involved? / ಮತದಾರ ಪ್ರಭುವೆಷ್ಟು ಸುಬಗ ಸುಕುಮಾರ ?

How much 'voters' involved?

Karnataka is ready for second face of polling. Before going to polling booth apply your mind and think twice. Bharateesha from Girinagar Bangalore has presented beautiful thought whether we are really involved in the process of reconstructing society after getting independence.

ಮತದಾರ ಪ್ರಭುವೆಷ್ಟು ಸುಬಗ ಸುಕುಮಾರ ?

ನಾವು ಬಯಸುವ, ಸದಾ ಕನವರಿಸುವ ಸಮಾಜದ ನಿರ್ಮಾಣದ ಭದ್ರ ಬುನಾದಿಯೇ ಇದು ? ಅರವತ್ತು ಸಂವತ್ಸರಗಳುದ್ದಕ್ಕೂ ನಮ್ಮಿಂದಲೇ, ನಮ್ಮವರೇ, ನಮಗಾಗಿ ಆಳ್ವಿಕೆ ನಡೆಸಿದ್ದಾರೆ. ಬ್ರಿಟಿಷರೊಂದಿಗೆ ಹೋರಾಡಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವವನ್ನು ಬಿಗಿದಪ್ಪಿದಷ್ಟೇ ಪ್ರೀತಿ, ಶ್ರದ್ಧೆಗಳಿಂದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದೇವೆಯೇ ? ನಿಜವಾದ ಉತ್ತರಕ್ಕೆ ನಮ್ಮ ನಮ್ಮ ಆತ್ಮಸಾಕ್ಷಿಯನ್ನು ತಡಕಬೇಕಿದೆ.

ಪಿ. ಭಾರತೀಶ


ನಮ್ಮ ಗಣತಂತ್ರದ ಅವ್ಯವಸ್ಥೆಯ ಬಗ್ಗೆ ಉದ್ದಾನುದ್ದ ಭಾಷಣ ಮಾಡುವಾಗ ಮನಸ್ಸಿನ ಮೂಲೆಯಲ್ಲಿ ಸದಾ ಕುಟುಕುವ ಪ್ರಶ್ನೆಯೊಂದೇ 'ಅವರಿವರನ್ನು ಟೀಕಿಸುವ ನಾವೆಷ್ಟು ಸುಬಗರು ?'

ಮೇಲ್ನೋಟಕ್ಕೆ ನಮ್ಮ ತಪ್ಪೇ ಇಲ್ಲ. ಹಸುಗೂಸಿನಷ್ಟು ಮುಗ್ಧರು. ಏನೂ ಮಾಡಲಾರದ ಬಡಪಾಯಿಗಳು. ಇಷ್ಟೆಲ್ಲಾ ಹಾದಿ ತಪ್ಪಲು ಅವರಿದ್ದಾರಲ್ಲ, ನಮ್ಮನ್ನಾಳುವ ಆ ಪ್ರಭುಗಳೇ ಕಾರಣ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಭಾಗಶಃ ಹೌದು ಕೂಡ.

ಈಗ ನಡೆಯುತ್ತಿರುವ ರಾಜ್ಯದ ಚುನಾವಣೆಯ ಪೂರ್ವಾಪರವನ್ನು ನೋಡಿದಾಗಲೂ ಅಹುದಹುದೆನಿಸುತ್ತದೆ. ವಿಭಿನ್ನ ತತ್ತ್ವ, ಸಿದ್ಧಾಂತಗಳನ್ನು ಶಿರಸಾವಹಿಸಿದ್ದ ಇಬ್ಬರು ಪ್ರಭುಗಳು ಅಧಿಕಾರ ಲಾಲಸೆಯಿಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿದರು. ಇದು ರಾಜ್ಯದ ಕಲ್ಯಾಣಕ್ಕೆ ಅನಿವಾರ್ಯ ಎಂದರು. ಭೂಮಿ ಬೊಕ್ಕಸಗಳನ್ನು ಬರಿದು ಮಾಡುವಷ್ಟು ಮಾಡಿದರು. ಕಡೆಗೆ ಸರ್ಕಾರವನ್ನು ಒಂದು ದೊಡ್ಡ ನಾಟಕದ ಪ್ರಸ್ತುತಿಯೊಂದಿಗೆ ಒಡೆದರು.

ಈಗ ಅವರೇ ನಮ್ಮ ಮುಂದೆ ರಿಫ್ರೆಶ್ ಆಗಿ ಬಂದು ನಿಂತು ಮತಯಾಚಿಸುತ್ತಿದ್ದಾರೆ. ಯಾವ ಪಕ್ಷದ ಬಳಿಯೂ ಕರ್ನಾಟಕವನ್ನು ಕಟ್ಟುವ ಚುನಾವಣಾ ಪ್ರಣಾಳಿಕೆಯಿಲ್ಲ. ಆದಕಾರಣ, ಪ್ರಣಾಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ವಿಶ್ವಾಸವೇ ಉಳಿಯಲಿಲ್ಲ. ಇನ್ನು ಇದ್ದಿದ್ದ ದಾರಿಗಳೆರಡೇ. ಒಂದು ಅಬ್ಬರದ ಪ್ರಚಾರ. ಮತ್ತೊಂದು ಸೀರೆ, ಪಂಚೆ, ಮದ್ಯ ಪ್ರಸಾರ.

ಅದಕ್ಕೂ ಈ ಸಾರಿಯ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನ ಕತ್ತರಿ ಹಾಕಿದ್ದು ನುಂಗಲಾರದ ತುತ್ತಾಗಿದ್ದು ಬೇರೆ ವಿಷಯ.
ಅದನ್ನೂ ಮೀರಿ ಒಳಗೊಳಗೇ, ಗುಟ್ಟುಗುಟ್ಟಾಗಿ ಹಂಚಿದ್ದು, ಕೆಲವೇ ಕೆಲವೆಡೆ ಸಿಕ್ಕಿಹಾಕಿಕೊಂಡದ್ದು ಹೇಳಬಾರದ ವಿಷಯ.

ಹೀಗೆ ನಮ್ಮ ಈ ಗಣತಂತ್ರ ವ್ಯವಸ್ಥೆ ಭ್ರಷ್ಟವಾಗುತ್ತಿರುವುದಕ್ಕೆ ಇವಿಷ್ಟೆಂದರೆ ಇವಿಷ್ಟೇ ಕಾರಣ ಎಂಬಂತೆ ಬೊಬ್ಬಿಡುತ್ತೇವೆ.

ಹಾಗಾದರೆ, ಹಾಳುಗೆಡವಿದ್ದರಲ್ಲಿ ಮತದಾರರಾದ ನಮ್ಮದೇನೂ ತಪ್ಪೇ ಇಲ್ಲವೇ ? ಇದ್ದರೂ ಎಷ್ಟರದ್ದು ? ಎಂಬ ಪ್ರಶ್ನೆಗಳ ಸರಣಿ ಕಾಡುವುದೇ ಇಲ್ಲವೇ ? ಕಾಡದೇ ಎಲ್ಲಿಗೆ ಹೋಗುತ್ತದೆ. ಕಾಡಲು ಶುರುವಿಟ್ಟುಕೊಂಡರೆ ನಮ್ಮ ಬುಡಕ್ಕೇ ಬರುತ್ತದೆ. ಆದ್ದರಿಂದ ಅದರ ಗೋಜಿಗೆ ಹೋಗುವಾಗ ಥರಥರ ನಡುಕ ಬರುತ್ತದೆ. ಎಷ್ಟಾದರೂ ಸತ್ಯವನ್ನು ಎದುರಿಸುವ ವಿಷಯ ನೋಡಿ.

'ಭಾರತವೊಂದು ಅತಿದೊಡ್ಡ ಪ್ರಜಾಸತ್ತೆಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಜನರು ಜನರಿಂದ ಜನರಿಗಾಗಿ ಆಳ್ವಿಕೆ ನಡೆಸುತ್ತಾರೆ' ಎಂದು ಹೇಳುವುದು ಶೋಕಿಯಾಗಿದೆ. ಇಲ್ಲಿ ನಮ್ಮ ಪ್ರತಿನಿಧಿಯ ನಿರ್ಮಾಣದ ಹೊಣೆ ನಮಗೆ ಬೇಡ. ಆದರೆ ಒಳ್ಳೆಯ ಪ್ರತಿನಿಧಿ ಬೇಕು. ಅವನೇನು ಮೇಲಿನಿಂದ ಉದುರಲು ಸಾಧ್ಯವೇ ? ಬೇಡ ಅವನು ಹೇಗಿದ್ದರೂ ನಡೆಯುತ್ತದೆ. ಸುಭದ್ರ ಸರಕಾರ ನಡೆಸಿಕೊಟ್ಟರೆ ಸಾಕು. ಇದು ಹೌದೇಹೌದು ಎಂಬಂತೆ ಇದೆ ಇಂದು ನಡೆಯುತ್ತಿರುವ ಚುನಾವಣೆಯ ಬಗೆಗಿನ ದಯನೀಯ ನಿರೀಕ್ಷೆ.

'ಸಮ್ಮಿಶ್ರ ಸರ್ಕಾರದ ಆಳ್ವಿಕೆಯಿಂದ ಕರ್ನಾಟಕ ಸೋತು ಸುಣ್ಣವಾಗಿದೆ. ದಯವಿಟ್ಟು ಯಾವುದಾದರೊಂದು ಪಕ್ಷವನ್ನು ಬಹುಮತದೊಂದಿಗೆ ಚುನಾಯಿಸಿ'.

ಪವಾಡ ಸಂಭವಿಸಿದರೂ ಸಂಭವಿಸಬಹುದು. ಯಾರಿಗೆ ಗೊತ್ತು ? ಸಾಮಾನ್ಯವಾಗಿ ತಂದೆತಾಯಿ ತಮ್ಮ ಮಕ್ಕಳು ರಾಜಕಾರಣಿಯಾಗುವುದು ಬೇಡ, ಸೈನಿಕನಾಗುವ ರಿಸ್ಕ್ ತೆಗೆದುಕೊಳ್ಳುವುದೇ ಬೇಡವೇ ಬೇಡ, ಇನ್ನು ರೈತನಾಗುವುದು ನೋಚಾನ್ಸ್ ಎನ್ನುತ್ತಾರೆ. ಅವರೇನಿದ್ದರೂ ಹೈಲಿ ರೆಪ್ಯುಟೆಡ್ ಪ್ರೊಫೆಶನಲ್ ಗಳೇ ಆಗಬೇಕು ಅಷ್ಟೆ. ಉಳಿದದ್ದು ಏನಾದರೇನು. ತಮಗೆ ಸಂಬಂಧಪಟ್ಟಿದ್ದು ಭರ್ ಪೂರ್ ಸುಖದಲ್ಲಿರಬೇಕು.

ಇದು ಜನನಾಯಕರ ಉದಯಕ್ಕೆ ಹೇಳಿಮಾಡಿಸಿದ ವಾತಾವರಣವಾದರೆ ಮುಂದೆ ಮಾತೇ ಇಲ್ಲ ಬಿಡಿ.

ಮತದಾನವೆಂಬ ಪವಿತ್ರ ಹಕ್ಕನ್ನು ಚಲಾಯಿಸಿದರೆ ಮುಗಿಯಿತಲ್ಲ ಎಂದು ಜಾರಿಕೊಳ್ಳುತ್ತೇವೆ. ಅದೂ ಕುಂಟು ನೆಪಗಳಿಗೆ ಹೊರತಲ್ಲ. ಮೊದಲ ಹಂತದ ಮತದಾನ ಕಡಿಮೆ ಪ್ರಮಾಣದಲ್ಲಾಗಲು ರಾಜಕೀಯ ಪಕ್ಷಗಳ ವತಿಯಿಂದ ವಾಹನ ವ್ಯವಸ್ಥೆ ಇಲ್ಲದಿರುವುದು, ಒಟ್ಟೊಟ್ಟಿಗೆ ಬಂದ ನಾಲ್ಕು ಸರ್ಕಾರಿ ರಜೆಗಳು, ಬೇಸಿಗೆ ರಜಾದ ಮಜಾ ಸವಿಯಲು ಪ್ರವಾಸ ಹೊಗಿದ್ದು, ಕಡೆಗೆ ಮೂಡ್ ಇಲ್ಲದಿರುವುದೂ ಕಾರಣವಾಗುತ್ತದೆಂದರೆ ಊಹಿಸಬಹುದು.

ಕೇಂದ್ರ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿಯವರು ಪಾರದರ್ಶಕ ಚುನಾವಣೆಗೆ ಪಟ್ಟುಹಿಡಿದದ್ದು ಕಣದಲ್ಲಿರುವ ಅಭ್ಯರ್ಥಿಗಳ ಕಡೆಯಿಂದ ಮತದಾರರಿಗೆ ಆಗಬೇಕಿದ್ದ 'ಉಡುಗೊರೆ ಸಮರ್ಪಣೆ'ಗೆ ಬಹಳ ಅಡ್ಡಿಪಡಿಸಿತು. ಇದು ಕೂಡ ಮತದಾನ ಮಾಡದಿರಲು 'ಬಹಿರಂಗ ಕಾರಣ'ವಾಗಿದೆಯೆಂದರೆ !

ಇಲ್ಲಿಗೇ ನಿಲ್ಲುವುದಿಲ್ಲ. ದೇಶದ ನಿರ್ವಹಣೆಯ ಸಲುವಾಗಿ ನಮ್ಮ ಪಾಲಿನ ತೆರಿಗೆಯನ್ನು ಪಾವತಿಸಲು 'ಕೃಷ್ಣನ ಲೆಕ್ಕ'ವನ್ನು ತೆಗೆದುಕೊಳ್ಳುತ್ತೇವೆ. ಭ್ರಷ್ಟರು ತಿನ್ನಲು ಇಷ್ಟೇ ಸಾಕು ಎನ್ನುತ್ತಾ ಭ್ರಷ್ಟ ಪ್ರತಿನಿಧಿಗಳನ್ನು ಆರಿಸಿದ್ದು ನಾವೇ ಎಂಬುದನ್ನು ಮರೆಯಲು ಜಾಣ ಕುರುಡು ಆವರಿಸುತ್ತದೆ. ಪಕ್ಕದಲ್ಲಿಯೇ ಕುಂಟುತ್ತಿರುವ ದೇಶದ ಪ್ರಗತಿಯನ್ನು ಅಣಕಿಸಲು ಮರೆಯುವುದಿಲ್ಲ. ಹಾಗಾದರೆ ದೇಶ ಯಾರದ್ದು? ಯಾರಿಗಾಗಿ? ಒಂದೂ ಅರ್ಥವೇ ಆಗುವುದಿಲ್ಲ.

ಇನ್ನು ನಮ್ಮ ದಿನನಿತ್ಯದ ಜೀವನದಲ್ಲಿಯೇ ನಮ್ಮ ಲಾಭಕ್ಕಾಗಿ, ನಮ್ಮ ಮನೆ ತುಂಬಿಸಲು ಇರುವುದರಲ್ಲಿ ಶಾರ್ಟೆಸ್ಟ್ ದಾರಿಯೇ ಬೇಕು. ಯಾರಿಗೆ ಏನಾದರೂ ಪರವಾಗಿಲ್ಲ. ಎಷ್ಟು ಸುರಿದರೂ ಯೋಚನೆಯಿಲ್ಲ. ಹಾಗಾಗಿ 'ರೀಸನೆಬಲ್' ಬೇಡವಾಗಿದೆ. 'ಚೀಪ್' ಅನಿವಾರ್ಯವಾಗಿದೆ.

ರಾಜ್ಯದಲ್ಲಿ ಜನ ಬರದ ಹೊಡೆತದಿಂದ ತತ್ತರಿಸುತ್ತಿದ್ದರೆ ಅತ್ತ ಎಸ್.ಎಮ್. ಕೃಷ್ಣ ಸರ್ಕಾರ ಬೆಂಗಳೂರನ್ನು ಸಿಂಗಪೂರ್ ಮಾಡಲು ಹೊರಟಿದ್ದು, ನಂತರ ಸರ್ಕಾರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವ ನೆನಪುಗಳೂ ಮಾಸಿಲ್ಲ. ಗ್ರಾಮವನ್ನು ನಿರ್ಲಕ್ಷಿಸಿ ಪಟ್ಟಣದೆಡೆಗೆ ಧಾವಿಸುವ ಪ್ರವೃತ್ತಿ ನಮ್ಮ ಪ್ರತಿನಿಧಿಗಳಿಗಿರುವಷ್ಟೇ ನಮ್ಮಲ್ಲಿರುವಾಗ ಹಾಗೂ ಪಟ್ಟಣದ ವೈಭವ ಅನ್ನದ ಮೂಲವನ್ನು ಮರೆಸುತ್ತಿರುವಾಗ ಧರಿಸಿದ ಕೆಂಗಣ್ಣಿಗೆ ನೈತಿಕ ಬಲವಿದ್ದಿರಲು ಸಾಧ್ಯವಿತ್ತೇ ?

ನಮ್ಮ ಪ್ರತಿನಿಧಿ ಮಾಡುತ್ತಿರುವುದೆಲ್ಲವೂ ಸರಿ ಎಂದು ಪ್ರತಿಪಾದಿಸಲು ಹೊರಟಿಲ್ಲ. ನಮಗೆ ಸಂಪೂರ್ಣ ಒಪ್ಪಿಗೆ ಇದೆಯೋ? ಇಲ್ಲವೋ? ಅದು ಬೇರೆ. ಒಟ್ಟಾರೆಯಾಗಿ ಒಬ್ಬನನ್ನು ನಮ್ಮ ಪ್ರತಿನಿಧಿ ಎಂದು ಆರಿಸಿದ ಮೇಲೆ ಆತ ನಮ್ಮಗಳ ಒಟ್ಟು ಮೊತ್ತ ಎಂದು ಬಿಂಬಿಸಲ್ಪಡುತ್ತಾನೆ. ಅವನ ಮತ್ತು ನಮ್ಮಗಳ ಎಲ್ಲ ಆಶೋತ್ತರಗಳೂ ಅವನವು ಎಂದಾಗುತ್ತವೆ. ಹಾಗೆ ನೋಡಿದಾಗ ನಮ್ಮೆಲ್ಲರ ಒಟ್ಟು ಭ್ರಷ್ಟತೆಯನ್ನು ಅವನು ಮೈಗೂಡಿಸಿಕೊಂಡರೆ ಏನಾಗಬಹುದು ! ಅವನು ಬೆಳೆಯುವ ಎತ್ತರ, ಧುಮುಕುವ ಪ್ರಪಾತ ಊಹಿಸಲು ಸಾಧ್ಯವೇ ?

ನನ್ನ ಸ್ನೇಹಿತರೊಬ್ಬರು ಸದಾ ಹೇಳುತ್ತಿರುತ್ತಾರೆ. ಅವನು ಹೆಂಡತಿ, ಮಕ್ಕಳನ್ನು ಬಿಟ್ಟು ಹೊತ್ತಲ್ಲದ ಹೊತ್ತಲ್ಲಿ, ಊರಲ್ಲದ ಊರಲ್ಲಿ ಏನಾದರೊಂದನ್ನು ಸಾಧಿಸಲು ಹೆಣಗಾಡುತ್ತಿರುತ್ತಾನೆ. ಉದ್ದೇಶ ಏನೇ ಇರಬಹುದು. ನಾವು ಅಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಟ್ಟಿಗೆ ಕಾಫಿ ಹೀರುತ್ತಾ ಅವರಿವರ ಬಗ್ಗೆ ಕಿಚಾಯಿಸುವುದರಲ್ಲೇ ಕಾಲಕಳೆಯುತ್ತೇವೆ. ಹಾಗಾದರೆ ನೀವೇ ಹೇಳಿ. ಯಾರು ಬೆಟರ್ ?

ನಾವು ಬಯಸುವ, ಸದಾ ಕನವರಿಸುವ ಸಮಾಜದ ನಿರ್ಮಾಣದ ಭದ್ರ ಬುನಾದಿಯೇ ಇದು ? ಅರವತ್ತು ಸಂವತ್ಸರಗಳುದ್ದಕ್ಕೂ ನಮ್ಮಿಂದಲೇ, ನಮ್ಮವರೇ, ನಮಗಾಗಿ ಆಳ್ವಿಕೆ ನಡೆಸಿದ್ದಾರೆ. ಬ್ರಿಟಿಷರೊಂದಿಗೆ ಹೋರಾಡಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವವನ್ನು ಬಿಗಿದಪ್ಪಿದಷ್ಟೇ ಪ್ರೀತಿ, ಶ್ರದ್ಧೆಗಳಿಂದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದೇವೆಯೇ ? ನಿಜವಾದ ಉತ್ತರಕ್ಕೆ ನಮ್ಮ ನಮ್ಮ ಆತ್ಮಸಾಕ್ಷಿಯನ್ನು ತಡಕಬೇಕಿದೆ.

ಲಾಸ್ಟ್ ಕಿಕ್ : 'ಸಮಸ್ತರ ದರ್ಶನ ದೊಡ್ಡವರ ಆದರ್ಶ'. ಹೊಟ್ಟೆಹೊರೆದುಕೊಳ್ಳುವುದೇ ನಮ್ಮ ಗುರಿಯಾಗಿದ್ದರೆ ನಮ್ಮ ಮತ ಹೊಟ್ಟೆ ಪಕ್ಷಕ್ಕೆ ಏಕಾಗಬಾರದು ? ತಪ್ಪೇ ?

No comments:

Advertisement