My Blog List

Saturday, June 14, 2008

ಪಾಪ ಪರಿಮಾರ್ಜನೆಯ ಮೊದಲ ಹೆಜ್ಜೆ..!

ಪಾಪ ಪರಿಮಾರ್ಜನೆಯ

ಮೊದಲ ಹೆಜ್ಜೆ..!


ಭತ್ತದ ಕೃಷಿಕರಿಗೆ ಬಡ್ಡಿ ರಹಿತ ಸಾಲ ಮತ್ತು ಉಚಿತ ವಿಮೆ ಒದಗಿಸುವ ನಿರ್ಧಾರದ ಮೂಲಕ ಕೇರಳ ಸರ್ಕಾರ ಪಾಪ ಪರಿಮಾರ್ಜನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಎಲ್ಲ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಾಗಬೇಕಾದ ಅಗತ್ಯ ಇದೆ. ರಸಗೊಬ್ಬರಗಳಿಗೆ ಸುರಿಯಲಾಗುವ ಸಬ್ಸಿಡಿ ಹಣ ನೇರವಾಗಿ ಈ ರೀತಿ ರೈತರಿಗೆ ತಲುಪಿದರೆ ರೈತ ಉದ್ಧಾರವಾಗಬಲ್ಲ.

ನೆತ್ರಕೆರೆ ಉದಯಶಂಕರ

ಕೇರಳದಿಂದ ಒಂದು ಒಳ್ಳೆಯ ಸುದ್ದಿ ಬಂದಿದೆ. ಬಹುಶಃ ದೇಶದಲ್ಲಿ ಇದೇ ಮೊದಲನೆಯ ಬಾರಿಗೆ ಭತ್ತ ಬೆಳೆಯುವ ಕೃಷಿಕರಿಗೆ ಬಡ್ಡಿ ರಹಿತ ಸಾಲ ಮತ್ತು ಉಚಿತ ವಿಮೆ ನೀಡುವ ಮೂಲಕ ಕೇರಳದಲ್ಲಿ ಭತ್ತದ ಬೆಳೆಗೆ ಉತ್ತೇಜನ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಕೇರಳ ಸರ್ಕಾರ ನೂತನ ಯೋಜನೆಯೊಂದನ್ನು ರೂಪಿಸಿದೆ ಎಂದು ಕೃಷಿ ಸಚಿವ ಮುಲ್ಲಾಕರ ರತ್ನಾಕರನ್ 13 ಜೂನ್ 2008ರ ಶುಕ್ರವಾರ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ.

ಎಲ್ಡಿಎಫ್ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂಬುದು ಅವರ ಹೇಳಿಕೆ.

ಸಚಿವರ ಹೇಳಿಕೆ ಪ್ರಕಾರ ಪಾಲಕ್ಕಾಡ್, ಅಲಪ್ಪುಳ, ಕೊಟ್ಟಾಯಂ ಹಾಗೂ ತ್ರಿಶ್ಯೂರ್ ಜಿಲ್ಲೆಗಳ ಭತ್ತದ ಬೆಳೆಗಾರರಿಗೆ ಬಡ್ಡಿ ರಹಿತ ಸಾಲ ಸಿಗಲಿದೆ. ಅದಕ್ಕಾಗಿ ಸರ್ಕಾರ 100 ಕೋಟಿ ರೂಪಾಯಿ ವಿನಿಯೋಗಿಸಲಿದೆ.

ಕೇರಳ ರಾಜ್ಯದಲ್ಲಿ ಭತ್ತದ ವಾರ್ಷಿಕ ಇಳುವರಿ ಆರು ಲಕ್ಷ ಟನ್ಗಳಷ್ಟಿದೆ. ಅದನ್ನು 12 ಲಕ್ಷ ಟನ್ಗೆ ಹೆಚ್ಚಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿ ಹೆಚ್ಚುವರಿ 50 ಸಾವಿರ ಹೆಕ್ಟೇರ್ ಭೂಮಿಯನ್ನು ಭತ್ತದ ಕೃಷಿಗೆ ಅಳವಡಿಸಲಾಗುತ್ತಿದೆ ಎಂದಿದ್ದಾರೆ ಸಚಿವರು.

ರೈತರಿಗೂ ನಿವೃತ್ತಿ ವೇತನ ನೀಡುವ ಯೋಜನೆ ಕೂಡಾ ಸರ್ಕಾರದ ಮುಂದಿದ್ದು, ವರ್ಷಾಂತ್ಯದ ಒಳಗೆ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆ ಅವರಿಂದ ಹೊರಬಿದ್ದಿದೆ.

ಕೇಂದ್ರ ಸರ್ಕಾರವು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ 850 ರೂಪಾಯಿಗಳಿಗೆ ಹೆಚ್ಚಿಸಿದ ಹೊತ್ತಿನಲ್ಲೇ ಕೇರಳ ಸರ್ಕಾರದ ಹೊಸ ಯೋಜನೆಗಳ ವಿವರ ಹೊರಬಿದ್ದಿದೆ.

ಬಹುಶಃ ದೇಶದಲ್ಲಿ ಮೊತ್ತ ಮೊದಲನೆಯ ಬಾರಿಗೆ ಕೇರಳ ಸರ್ಕಾರದಿಂದ ಪಾಪ ಪರಿಮಾರ್ಜನೆಯ ಯತ್ನ ನಡೆದಿದೆ ಎಂದರೆ ತಪ್ಪಾಗಲಾರದು ಎನಿಸುತ್ತಿದೆ.

ಕರ್ನಾಟಕದಲ್ಲಿ ಜನತಾದಳ- ಬಿಜೆಪಿ ಸಮ್ಮಿಶ್ರ ಸರ್ಕಾರ ರೈತರಿಗೆ ಶೇಕಡಾ 4ರ ದರದಲ್ಲಿ ಸಾಲ ನೀಡುವ ನಿರ್ಧಾರ ಕೈಗೊಂಡಾಗ ಹಲವೆಡೆಗಳಿಂದ ಟೀಕೆ ವ್ಯಕ್ತವಾಗಿತ್ತು. ಆದರೆ ಕ್ರಮೇಣ ಅದಕ್ಕೆ ಬೆಂಬಲ ಲಭಿಸಿತ್ತು.

ಈಗ ಕೇರಳ ಸರ್ಕಾರದ ಬಡ್ಡಿ ರಹಿತ ಸಾಲದ ಪ್ರಸ್ತಾವ, ಉಚಿತ ವಿಮೆಗಳ ಪ್ರಸ್ತಾವಕ್ಕೂ ಇಂತಹುದೇ ಟೀಕೆಗಳು ವ್ಯಕ್ತವಾಗಬಹುದು. ಇಂತಹ ಕ್ರಮದಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗಬಹುದು ಎಂಬ ಹುಯಿಲು ಏಳಬಹುದು.

ಆದರೆ ಸರ್ಕಾರಗಳು ಇಂತಹ ಉಪಕ್ರಮಗಳಿಗೆ ಮುಂದಾಗಲೇ ಬೇಕಾದ ಅಗತ್ಯ ಇಂದು ಇದೆ. ತನ್ಮೂಲಕವಾದರೂ ಸರ್ಕಾರಗಳು ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರನ್ನು ಹುಚ್ಚೆಬ್ಬಿಸಿ ರಸಗೊಬ್ಬರ ಬಳಕೆಯ ವಿಷವರ್ತುಲಕ್ಕೆ ತಳ್ಳಿ, ಕೃಷಿ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿ, ಲಕ್ಷಾಂತರ ಕೃಷಿಕರನ್ನು ಆತ್ಮಹತ್ಯೆಯ ಉರುಳಿಗೆ ಕೊರಳೊಡ್ಡುವಂತೆ ಮಾಡಿದ ಪಾಪಕ್ಕೆ ಪರಿಮಾರ್ಜನೆ ಮಾಡಿಕೊಳ್ಳಬೇಕಾಗಿದೆ.

ಯೋಚನೆ ಮಾಡಲೇ ಬೇಕಾದ ವಿಚಾರ ಇದು. ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಸಿಮ್ಲಾದಲ್ಲಿ ನಡೆದ ಆಹಾರ ವೈವಿಧ್ಯ ವಿಚಾರ ಸಂಕಿರಣ ಒಂದರಲ್ಲಿ ಮಂಡನೆಯಾದ ಅಂಕಿ ಅಂಶಗಳು ಇದಕ್ಕೆ ಹೇಗೆ ಒತ್ತು ಕೊಡುತ್ತವೆ, ಗಮನಿಸಿ:

1980ರಲ್ಲಿ ಮತ್ತು 1997ರಲ್ಲಿ ಕೃಷಿಯ ಉತ್ಪಾದನೆ ಶೇಕಡಾ 3.2ರಷ್ಟು ಇತ್ತು. ಆದರೆ 1997ರ ಬಳಿಕ ಇದು ಶೇಕಡಾ 1.5ಕ್ಕೆ ಕುಸಿದಿದೆ. ಭಾರತೀಯ ಕೃಷಿಕರ ಪೈಕಿ ಶೇಕಡಾ 40 ರಷ್ಟು ಮಂದಿ ಇಂತಹ ಪರಿಸ್ಥಿತಿಗೆ ಬೇಸತ್ತು ವ್ಯವಸಾಯ ವೃತ್ತಿಯನ್ನೇ ತೊರೆಯುವ ಆಸಕ್ತಿ ವ್ಯಕ್ತ ಪಡಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಅಂದರೆ 1950-51ರ ವೇಳೆಯಲ್ಲಿ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲುದಾರಿಕೆ ಶೇಕಡಾ 56ರಷ್ಟು ಇತ್ತು. ದೇಶದಲ್ಲಿ ಹಸಿರು ಕ್ರಾಂತಿ ನಡೆದು ಉತ್ಪಾದನೆ ಹೆಚ್ಚಿತೆಂಬ ಘೋಷಣೆಗಳೆಲ್ಲ ಮುಗಿದ ಬಳಿಕ ಈಗ ಅಂದರೆ 2006-07ರ ಹೊತ್ತಿಗೆ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲುದಾರಿಕೆ ಪ್ರಮಾಣ ಶೇಕಡಾ 18.6ಕ್ಕೆ ಕುಗ್ಗಿ ಹೋಗಿದೆ.

ಇಷ್ಟಾದರೂ ನೆನಪಿಡಬೇಕಾದ ಅಂಶ ಏನು ಗೊತ್ತೇ? ಇಂದಿಗೂ ದೇಶದ ಮೂರನೇ ಒಂದು ಭಾಗದಷ್ಟು ಜನ ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿದ್ದಾರೆ. 1991ರಿಂದ 2001ರ ಅವಧಿಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 8.6 ಕೋಟಿಯಿಂದ 10.6 ಕೋಟಿಗೆ ಏರಿದೆ. ಜೊತೆಗೆ ಭೂಮಿಯ ಮೇಲಿನ ಒಡೆತನ ಹೆಚ್ಚಿದ್ದು ಗ್ರಾಮೀಣ ಮಂದಿಗೆ ಕೃಷಿಯೇತರ ಕೆಲಸಗಳು ಲಭಿಸುತ್ತಿಲ್ಲ.

ಕೃಷಿ ಕ್ಷೇತ್ರದ ದು:ಸ್ಥಿತಿಗೆ ಹಸಿರು ಕ್ರಾಂತಿಯ ಘೋಷಣೆ ಒಂದೇ ಕಾರಣ ಎನ್ನುವಂತಿಲ್ಲ. ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರನ್ನು ಸ್ವಾವಲಂಬನೆಯ ಗೋ ಆಧಾರಿತ ಸಾವಯವ ಕೃಷಿಯಿಂದ, ಕಂಪೆನಿ ಆಧಾರಿತ ಪರಾವಲಂಬಿ ರಸಗೊಬ್ಬರ ಬಳಕೆಯತ್ತ ತಿರುಗಿಸಿದ್ದು ಮೊದಲ ತಪ್ಪು.

ಪಂಚವಾರ್ಷಿಕ ಯೋಜನೆಗಳುದ್ದಕ್ಕೂ ಕೃಷಿಯನ್ನು ಮೂಲೆ ಪಾಲು ಮಾಡುತ್ತಾ ಕೈಗಾರಿಕೋದ್ಯಮಕ್ಕೆ ಮಾತ್ರವೇ ಬೆಂಬಲ ನೀಡುತ್ತಾ ಬಂದದ್ದು ಎರಡನೇ ತಪ್ಪು.

ಇವೆರಡಕ್ಕೂ ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೆ ಕುಠಾರಪ್ರಾಯವಾಗಿ ಬಂದದ್ದು ವಿವೇಚನೆ ರಹಿತವಾದ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ.

1990ರ ಬಳಿಕ ಕೃಷಿ ಕ್ಷೇತ್ರ ಎಂದೂ ಇಲ್ಲದಂತೆ ಸೊರಗಿ ಹೋದದ್ದಕ್ಕೆ ಜೀವನ ದುರ್ಭರವಾಗಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡದ್ದೇ ಸಾಕ್ಷಿ.

ಇಂದು ದೇಶದ ಅರ್ಧಭಾಗಕ್ಕಿಂತ ಹೆಚ್ಚು ರೈತರ ಮನೆಗಳ ಮೇಲೆ ಕನಿಷ್ಠ 25,000 ರೂಗಳಿಗಿಂತ ಹೆಚ್ಚಿನ ಸಾಲದ ಹೊರೆ ಇದೆ. ಸಣ್ಣ ಮತ್ತು ಮಧ್ಯಮ ವರ್ಗದ ಬಹುತೇಕ ಮಂದಿಯ ಸಾಲ ಖಾಸಗಿ ವ್ಯಕ್ತಿಗಳಿಂದ ಪಡೆದುದಾಗಿದ್ದು ಅದಕ್ಕೆ ಅವರು ತೆರಬೇಕಾದ ಬಡ್ಡಿಯ ದರ ಶೇಕಡಾ 30ಕ್ಕಿಂತಲೂ ಹೆಚ್ಚು.

ರಫ್ತಿನ ಮೂಲಕ ಅಧಿಕ ಸಂಪಾದನೆ ಮಾಡಬಹುದು ಎಂಬುದಾಗಿ ಹೇಳುತ್ತಾ ಒತ್ತು ಕೊಡಲಾದ ಉನ್ನತ ತಂತ್ರಜ್ಞಾನದ ಪುಷ್ಪೋದ್ಯಮದಂತಹ ಯತ್ನಗಳಿಂದ ಸಾಮಾನ್ಯ ರೈತರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಆಹಾರ ಧಾನ್ಯ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ಇಂತಹ 'ಲಾಭದ ಕೃಷಿ' ಆಕ್ರಮಿಸಿದ್ದು ಆಹಾರೋತ್ಪಾದನೆ ಕುಂಠಿತವಾಗಲು ಕಾಣಿಕೆ ನೀಡಿತು ಅಷ್ಟೆ.

ಸಾಲದ ಬಲೆಯಿಂದ ಹೊರಬೀಳಲು ರೈತನಿಗೆ ಕಾಣುವ ಸುಲಭ ದಾರಿ: ರಸಗೊಬ್ಬರದ ಬಳಕೆ. ಆದರೆ ಅದಕ್ಕಾಗಿ ಆತ ಮತ್ತೆ ಸಾಲ ಮಾಡಬೇಕು. ಅಷ್ಟೊಂದು ಒಳಸುರಿ ಸುರಿದು ಮಾಡಿದ ಕೃಷಿ ನೈಸರ್ಗಿಕ ಕಾರಣಕ್ಕೆ ವಿಫಲವಾದರೆ ಇಲ್ಲವೇ ಬೆಳೆ ಬರುವ ಹೊತ್ತಿಗೆ ಬೆಲೆಯೇ ಕುಸಿದು ಹೋದರೆ ಆತ ಮತ್ತೆ ಪ್ರಪಾತಕ್ಕೆ. ರಸಗೊಬ್ಬರ ಬಳಕೆಯಿಂದ ಭೂಮಿಯೇ ಬರಡಾಗುತ್ತಿದೆ ಎಂಬುದು ಪ್ರತ್ಯೇಕ ವಿಚಾರ.

ರಸಗೊಬ್ಬರ ಉದ್ಯಮಗಳಿಗೆ ಕೊಡುವ ಬೃಹತ್ ಪ್ರಮಾಣದ ಸಬ್ಸಿಡಿಯನ್ನು ನಿಲ್ಲಿಸಿ, ರೈತರನ್ನು ಸಹಜ, ಗೋ ಆಧಾರಿತ ಸಾವಯವ ಕೃಷಿಯತ್ತ ತಿರುಗಿಸಬೇಕಾದದ್ದು ಇಂದಿನ ಅನಿವಾರ್ಯ ಅಗತ್ಯ. ರಸಗೊಬ್ಬರಗಳಿಗೆ ಸಬ್ಸಿಡಿ ಸುರಿಯುವ ಬದಲು ಅದೇ ಹಣವನ್ನು ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಲು, ಬೆಳೆಗೆ ಉಚಿತ ವಿಮೆ ಒದಗಿಸಲು, ಕೃಷಿ ಆಧಾರಿತ ಸಣ್ಣ ಸಣ್ಣ ಗೃಹೋದ್ಯಮ ಸ್ಥಾಪನೆಗೆ ಬಳಸಿದರೆ ರೈತ ಮೇಲೇಳಲು ಅವಕಾಶವಿದೆ.

ಇಷ್ಟೇ ಸಾಕಾಗುವುದಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸುವುದು, ದುಬಾರಿ ನೀರಾವರಿಗಳನ್ನು ಕೈಬಿಟ್ಟು ಮಳೆಕೊಯ್ಲಿನಂತಹ ಸರಳ, ಸಹಜ ನೀರಾವರಿಗೆ ಒತ್ತು ನೀಡುವುದು, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಾಗಿ ಸಣ್ಣ ಸಣ್ಣ ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ ಘಟಕಗಳನ್ನು ಹಳ್ಳಿಗಳಲ್ಲೇ ಸ್ಥಾಪಿಸುವುದು - ತನ್ಮೂಲಕ ರೈತ, ಕೃಷಿ ಕಾರ್ಮಿಕ ಕುಟುಂಬಗಳ ಯುವಕರಿಗೆ ಹಳ್ಳಿಗಳಲ್ಲೇ ನೆಮ್ಮದಿಯ ಉದ್ಯೋಗ ಕಲ್ಪಿಸುವುದಕ್ಕೆ ವ್ಯವಸ್ಥೆ ಮಾಡುವ ಅಗತ್ಯವಿದೆ.

ಆಗ ಮಾತ್ರವೇ ಸರ್ಕಾರಗಳು ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಂತಾಗುತ್ತದೆ. ಕೃಷಿ ಕ್ಷೇತ್ರವನ್ನು ಪ್ರಪಾತಕ್ಕೆ ತಳ್ಳಿದ ಪಾಪ ಪರಿಮಾರ್ಜನೆ ನಿಟ್ಟಿನಲ್ಲಿ ಸರ್ಕಾರಗಳು ಹೆಜ್ಜೆ ಮುಂದಿಟ್ಟಂತಾಗುತ್ತದೆ.

No comments:

Advertisement