Friday, July 18, 2008

Chaturmasya again in Bangalore

Chaturmasya the season of spiritual quest is devoted by holy men for meditation, study and cultivation of mind and soul. During this period holy men work for the welfare of humanity and for propogation of Dharma.His Holiness Jagadguru Shankaracharya Shree Shree Raghaveshwara Bharathi Mahaswamiji who started Cow Protection Movement, will observe his fifteenth Chaturmasya from 18th of July to 15th of September 2008 at Shree Ramashrama, Girinagara, Bangalore.

ರಾಜಧಾನಿಯಲ್ಲಿ ಮತ್ತೊಮ್ಮೆ

ರಾಘವೇಶ್ವರ ಶ್ರೀ

ಚಾತುರ್ಮಾಸ್ಯ


ಗೋ ಸಂರಕ್ಷಣಾ ಚಳವಳಿಯ ಅಲೆಯನ್ನು ಕಳೆದ ವರ್ಷವಷ್ಟೇ ಕರ್ನಾಟಕದ ರಾಜಧಾನಿಯಲ್ಲಿ ಚಾತುರ್ಮಾಸ್ಯದ ಅವಧಿಯಲ್ಲಿ ಎಬ್ಬಿಸಿದ್ದ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೆ ಅದೇ ಸಂಕಲ್ಪದೊಂದಿಗೆ: ತಮ್ಮ 15ನೇ ಚಾತುರ್ಮಾಸ್ಯದ ಸಲುವಾಗಿ.

2008ರ ಜುಲೈ 17ರ ಬೆಳಗ್ಗೆ ಸಂಭ್ರಮೋತ್ಸಾಹದ ಮಧ್ಯೆ ನಾಗವಾರದ ನಾಗಲಿಂಗ ಗಣಪತಿ ದೇವಾಲಯದಲ್ಲಿ ಪೂರ್ಣ ಕುಂಭ ಸ್ವಾಗತ, ಸಂಜೆ ಮೈಸೂರು ರಸ್ತೆ ರಾಜರಾಜೇಶ್ವರಿ ನಗರದಲ್ಲಿ ಪೂರ್ಣಕುಂಭ ಸ್ವಾಗತ- ಮೆರವಣಿಗೆಯೊಂದಿಗೆ ಪುರಪ್ರವೇಶ ಮಾಡಿದ್ದಾರೆ.

ಜುಲೈ 18ರ ಮುಂಜಾನೆ ವ್ಯಾಸ ಪೂಜೆಯೊಂದಿಗೆ ಅವರ 15ನೇ ಚಾತುರ್ಮಾಸ್ಯ ಆರಂಭ.

ಚಾತುರ್ಮಾಸ್ಯದ ಈ ಕಾಲಾವಧಿಯಲ್ಲಿ ನಿತ್ಯ ಧರ್ಮಸಭೆ, ಭಜನೆ, ರಾಮಾಯಣ ಪ್ರವಚನ, ಗೋ ಮಾತೆಯ ಪೂಜೆ, ಹೋಮ, ಹವನ, ನಡೆಯಲಿವೆ. ಪ್ರತಿ ಶನಿವಾರ, ಭಾನುವಾರ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಚಾತುರ್ಮಾಸ್ಯ ಕಾಲ ಅಂದರೆ ಧರ್ಮಾಧರ್ಮ ಚಿಂತನೆಯ, ಸಮಾಜ ವಿಮರ್ಶೆಯ ಸತ್ಕಾರ್ಯಕ್ಕೆ ಸಕಾಲ. ಸಾರ್ವಕಾಲಿಕ ಸತ್ಯದ ಪುನರ್ ಸ್ಮರಣೆಯ ದೃಷ್ಟಿಯಿಂದ ನಮ್ಮ ಹಿರಿಯರು
ಇಂಥ ಅನೇಕ ಪರ್ವಕಾಲಗಳನ್ನು ನಿಗದಿಪಡಿಸಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಕಾಲಕ್ಕೆ ಅನುಗುಣವಾಗಿ ಧರ್ಮವೂ ವಿಮರ್ಶೆಗೆ ಒಳ ಪಡಬೇಕಾಗುತ್ತದೆ. ಅದು ಕಾಲಧರ್ಮ.

ಕಾಲ ಬದಲಾದಂತೆಲ್ಲ ಎಂದೋ ಪ್ರತಿಪಾದಿಸಿದ ಜೀವನಕ್ರಮವನ್ನೇ ಇಂದಿಗೂ
ಪಾಲಿಸುವುದು ಧರ್ಮವಾಗಲಾರದು. ಹಾಗೆ ಧರ್ಮದ ಮರುವ್ಯಾಖ್ಯಾನಕ್ಕೆ
ಮುನ್ನ ತಜ್ಞರು, ಚಿಂತಕರು, ವಿದ್ವಜ್ಜನರ ನಡುವೆ ಸಾಕಷ್ಟು ಚಿಂತನ ಮಂಥನ
ನಡೆಯಬೇಕು. ಅಂಥ ವಿಚಾರ ಮಂಥನಕ್ಕೆ ಚಾತುರ್ಮಾಸ್ಯ ವೇದಿಕೆಯೊದಗಿಸುತ್ತದೆ.

ಇಲ್ಲೊಂದು ಜಿಜ್ಞಾಸೆ. ಧರ್ಮ ಎಂದರೇನು? ಇದೇಕೆ ಬದಲಾಗಬೇಕು?

ಸಂದೇಹ ಸಹಜ. ಚಿಕ್ಕ ಉದಾಹರಣೆಯೊಂದು ನೆನಪಿಗೆ ಬರುತ್ತದೆ. ನಿಮಗೆಲ್ಲ ಗೊತ್ತೇ ಇದೆ. ಸತ್ಯ ಪಾಲನೆ ಧರ್ಮ. ಅನೃತ ಧರ್ಮಕ್ಕೆ ವಿರುದ್ಧವಾದದ್ದು. ಆದರೆ ಸನ್ನಿವೇಶಕ್ಕೆ ಅನುಗುಣವಾಗಿ ಅಪ್ರಿಯ ಸತ್ಯವೂ ಅಧರ್ಮವಾಗುತ್ತದೆ. ಅದು ಹೇಗೆ?

ಒಮ್ಮೆ ಒಂದು ಗುರುಕುಲದಲ್ಲಿ ಶಿಷ್ಯ ಸಮೂಹಕ್ಕೆ ಋಷಿಯೊಬ್ಬರು ಬೋಧನಾ ನಿರತರಾಗಿದ್ದರು. ಶಿಷ್ಯರು ತದೇಕಚಿತ್ತದಿಂದ ಪಾಠ ಕೇಳುತ್ತಿದ್ದರು.

ಇದ್ದಕ್ಕಿದ್ದಂತೆ ಒಂದು ಗೋವು ಜೀವಭಯದಲ್ಲಿ ಆರ್ತನಾದ ಮಾಡುತ್ತ ಬಾಲವನ್ನೆತ್ತಿಕೊಂದು ಓಡಿಬಂದು, ಅತ್ಯಂತ ದೈನ್ಯ ಭಾವದಲ್ಲಿ ಆ ಮುನಿಯ ಬಲ ಪಾರ್ಶ್ವಕ್ಕೆ ಬಂದು ನಿಂತಿತು.

ಪಾಠವನ್ನು ಮೊಟಕುಗೊಳಿಸಿದ ಗುರುಗಳು ಗೋವನ್ನು ಸಂತೈಸಿ, ಒಂದಷ್ಟು ನೀರುಕೊಟ್ಟು, ಗೋಗ್ರಾಸ ದಾನ ಮಾಡಿ ತಮ್ಮ ಕುಟೀರದ ಹಿಂಬದಿಯಲ್ಲಿ ಹುಲ್ಲುಹಾಸಿ ಆಶ್ರಯ ನೀಡಿದರು.

ಇನ್ನೇನು ಪಾಠ ಮುಂದುವರಿಸಬೇಕು ಎನ್ನುವಷ್ಟರಲ್ಲಿ ಗೋವನ್ನು ಅರಸುತ್ತ ಕಟುಕನೊಬ್ಬ
ಓಡೋಡಿ ಬಂದ. ಮುನಿಯನ್ನು ನೋಡುತ್ತಲೇ ಇದೇ ದಾರಿಯಲ್ಲಿ ಒಂದು ಹಸು ಓಡಿ ಬಂತೇ? ನಾನದನ್ನು ಬೆಳಗ್ಗೆಯಷ್ಟೇ ನೂರು ವರಹ ಕೊಟ್ಟು ಖರೀದಿಸಿದ್ದೆ. ಅದನ್ನು ಕಡಿದು ಮಾಂಸವನ್ನು ಮಾರಬೇಕು. ಗಿರಾಕಿಗಳು ಕಾಯುತ್ತಿದ್ದಾರೆ. ನೀವದನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದ
ಕಟುಕ.

ಗುರುಗಳು ಒಂದು ಕ್ಷಣ ಆಶ್ಚರ್ಯದಿಂದ ಸ್ಥಂಬಿಭೂತರಾದರು. ಜಿಜ್ಞಾಸೆಗೆ ಬಿದ್ದರು.

ಸಾವರಿಸಿಕೊಂಡು "ಗೋವು ಇತ್ತ ಓಡಿ ಬಂದದ್ದು ನಿಜ. ನಂತರ ಎಲ್ಲಿ ಹೋಯಿತೆಂಬುದನ್ನು ಗಮನಿಸಿಲ್ಲ. ಬಹುಶಃ ಹೀಗೆಯೇ ಮುಂದೆ ಹೋಗಿರಬೇಕು" ಎಂದು ಇನ್ನೊಂದು ಪಾರ್ಶ್ವ ತೋರಿದರು.

ಕಟುಕ ಅತ್ತ ಹೊರಟುಹೋದ. ಬಳಿದ ಶಿಷ್ಯರು ಪ್ರಶ್ನಿಸಿದರು.

"ಗೋವನ್ನು ನಿಮ್ಮಲ್ಲೇ ಇಟ್ಟುಕೊಂಡು ಸುಳ್ಳು ಹೇಳಿದ್ದೇಕೆ. ಇದು ಅಧರ್ಮವಲ್ಲವೇ?" ಎಂದು ಸಂದೇಹಿಸಿದರು.

ಗುರುಗಳು ನಸುನಕ್ಕು ಹೇಳಿದರು. "ನಿಜ ಶಿಷ್ಯರೇ, ಅನೃತ ಖಂಡಿತಾ ದರ್ಮ ವಿರೋಧಿ. ಆದರೆ 'ಮಾಬ್ರೂಯಾತ್ ಸತ್ಯಮಪ್ರಿಯಮ್' ಎಂಬ ಮಾತೊಂದಿದೆ. ನಮ್ಮ ಆತ್ಮಕ್ಕೆ
ಅಪ್ರಿಯವಾದ ಸತ್ಯವನ್ನೂ ಹೇಳಬಾರದು. ನಾನು ಗೋವನ್ನು ಇಲ್ಲೇ ಇದೆ ಎಂದು ಹೇಳಿದ್ದರೆ, ಆತ ಅದನ್ನು ಕೊಂಡೊಯ್ದು ಕಡಿದು ಮಾಂಸ ಮಾರುತ್ತಿದ್ದ. ಒಂದು ಜೀವದ ಸಾವಿಗೆ ನಾನು
ಕಾರಣವಾಗುತ್ತಿದ್ದೆ. ಜೀವ ಉಳಿಸುವ, ಜೀವ ಸೃಷ್ಟಿಯ ಶಕ್ತಿ ನಮಗಿಲ್ಲ ಎನ್ನುವುದಾದರೆ ಅದನ್ನು ಕೊಲ್ಲುವ, ಕೊಲ್ಲಿಸುವ ಹಕ್ಕ ನಮಗೆಲ್ಲಿದೆ? ಜೀವ ಕೊಟ್ಟವರೂ ನಾವಲ್ಲ, ಕೊಲ್ಲುವ
ಅಧಿಕಾರವೂ ನಮಗಿಲ್ಲ" ಎಂದರು.

ಹಾಗಾದರೆ ಸುಳ್ಳು ಹೇಳುವುದು ಸರಿಯೇ? ಪ್ರಶ್ನೆ ಸಹಜ.

ಆದರೆ ಅಂಥ ಸಂದರ್ಭದಲ್ಲಿ ಸತ್ಯ ಹೇಳುವುದರಿಂದ ಆಗುವ ಅಧರ್ಮಕ್ಕಿಂತ ಸುಳ್ಳು ಹೇಳಿ ನಿಷ್ಪಾಪಿ ಗೋವಿನ ರಕ್ಷಣೆ ಮಾಡಿದ್ದು ದೊಡ್ಡದಾಗುತ್ತದೆ.

ಹೀಗೆ ಧರ್ಮದ ವ್ಯಾಖ್ಯೆ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕು. ಧರ್ಮದ ಮೂಲವನ್ನು, ಸೂಕ್ಷ್ಮವನ್ನು ಅರಿಯಲು ಪ್ರಯತ್ನಿಸಿದರೆ ತಂತಾನೇ ಧರ್ಮ ರಕ್ಷಣೆಯಾಗುತ್ತದೆ. ಅಂಥ ಮಹತ್ಕಾರ್ಯಕ್ಕೆ ಧರ್ಮಭೂಮಿ ಎನಿಸಿದ ಈ ಭರತಖಂಡವೇ ನೆಲೆಯಾಗಬೇಕು. ನಾವು ನೀವು ಅದರ ರಕ್ಷಣೆಯ ಸೈನಿಕರಾಗಬೇಕಲ್ಲವೇ?

ಸಕಲರಿಗೂ ಅನ್ನ ನೀಡುವ ಅನ್ನದಾತರ ಆತ್ಮಹತ್ಯೆಗಳು ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಗೋವುಗಳ ಸಂರಕ್ಷಣೆಯೊಂದೇ ಅವರ ಸಮಸ್ಯೆಗಳನ್ನು ನಿವಾರಿಸಬಲ್ಲವು. ಗೋವುಗಳು ಜಗತ್ತನ್ನು ಸಂಕಟದಿಂದ ಪಾರು ಮಾಡಬಲ್ಲವು.

ಈ ಹಿನ್ನೆಲೆಯಲ್ಲೇ ಗೋ ಸಂರಕ್ಷಣೆಗಾಗಿ ಕಟಿಬದ್ಧರಾಗಿರುವ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಜೊತೆಗೆ ಎಲ್ಲರೂ ಕೈಜೋಡಿಸಬೇಕಲ್ಲವೇ?

(ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ಕಥೆಯನ್ನು, ಧರ್ಮದ ವ್ಯಾಖ್ಯಾನವನ್ನು ಸ್ವತಃ ಶ್ರೀ ರಾಘವೇಶ್ವರ ಭಾರತೀ ಅವರೇ ಹೇಳಿದ್ದು ಅದನ್ನು 'ಗೋವಿಶ್ವ' ಇ-ಪತ್ರಿಕೆಯ ಕೃಪೆಯಿಂದ ಇಲ್ಲಿ ಉಲ್ಲೇಖಿಸಲಾಗಿದೆ).

No comments:

Advertisement