Thursday, August 28, 2008

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!


Yaksha Vaibhava in Akka ...!

For the first time in the history of Yakshagana, full fledged troop of nine members led by S.N. Panjaje is participating in Akka Conference in America with the sponsorship of Union Government. Some time back Mr. Panjaje and his friends played 'Chende' in front of Mahatma Gandhi Statue in Bangalore to press their demand to create separate academy for Yakshagana. Nethrakere Udaya Shankara details about the Panjaje venture.

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...!

ಯಕ್ಷಗಾನಕ್ಕೊಂದು ಪ್ರತ್ಯೇಕ ಅಕಾಡೆಮಿ ಬೇಕು ಎಂದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚೆಂಡೆ ಭಾರಿಸಿ ಗಮನ ಸೆಳೆದಿದ್ದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಪಂಜಾಜೆ ಮತ್ತು ಅವರ ಗೆಳೆಯರು ಯಕ್ಷರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ 'ಅಕ್ಕ' ಸಮ್ಮೇಳನದಲ್ಲಿ ಯಕ್ಷಗಾನದ ಸಮಗ್ರ ಕಂಪು ಪಸರಿಸಲು ದಾಂಗುಡಿ ಇಟ್ಟಿದ್ದಾರೆ..

ನೆತ್ರಕೆರೆ ಉದಯಶಂಕರ

ಯಕ್ಷರಂಗದ ಇತಿಹಾಸದಲ್ಲೇ ಇದು ಮೊದಲು ಎಂದರೆ ತಪ್ಪಲ್ಲ. ಪೂರ್ಣ ಪ್ರಮಾಣದ ಯಕ್ಷಗಾನ ತಂಡವು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಮೆರಿಕದ ಚಿಕಾಗೋ ನಗರಕ್ಕೆ ದಾಂಗುಡಿ ಇಡುತ್ತಿದೆ. ಅಮೆರಿಕದಲ್ಲಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಚೆಂಡೆ ಸದ್ದನ್ನು ಮಾರ್ದನಿಸುತ್ತಿದೆ.

ಎಸ್.ಎನ್. ಪಂಜಾಜೆ ನೇತೃತ್ವದ ತೆಂಕುತಿಟ್ಟಿನ ಯಕ್ಷಗಾನ ತಂಡವು ಸೆಪ್ಟೆಂಬರ್ 29, 30 ಮತ್ತು 31ರಂದು 'ಅಕ್ಕ ಸಮ್ಮೇಳನ' ಎಂದೇ ಖ್ಯಾತವಾಗಿರುವ ಚಿಕಾಗೋದ ಐದನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಎರಡು ಅದ್ಧೂರಿಯ ಪ್ರದರ್ಶನಗಳನ್ನು ನೀಡಲಿದೆ.

ಇಂತಹ ಸಮ್ಮೇಳನಗಳಿಗೆ ಸರ್ಕಾರ ಕಲಾವಿದರನ್ನು ಸಾಮಾನ್ಯವಾಗಿ ವ್ಯಕ್ತಿಗತ ನೆಲೆಯಲ್ಲಿ ಕಳುಹಿಸಿಕೊಡುವುದೇ ಹೆಚ್ಚು. ಪೂರ್ಣ ಪ್ರಮಾಣದ ಯಕ್ಷಗಾನ ತಂಡ ಎಂದರೆ ಪಾತ್ರಧಾರಿಗಳು ಮಾತ್ರವೇ ಅಲ್ಲ, ಭಾಗವತರು, ಚೆಂಡೆವಾದಕರು, ಮದ್ದಳೆ, ಹಾರ್ಮೋನಿಯಂ ವಾದಕರೂ ಬೇಕು. ಇಷ್ಟೆಲ್ಲ ಮಂದಿಯನ್ನು ಒಳಗೊಂಡ ತಂಡವನ್ನು ವಿದೇಶಕ್ಕೆ ಕಳುಹಿಸಿಕೊಡುವ ಯತ್ನಕ್ಕೆ ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಅಧಿಕಾರಿಗಳು ಅಂತಹ ಯತ್ನಕ್ಕೆ ಕೈಹಾಕುವುದೇ ಕಡಿಮೆ.

'ಅಕ್ಕ' ಸಮ್ಮೇಳನದಲ್ಲಿ ಒಂದಿಬ್ಬರನ್ನು ಕಳುಹಿಸಿ ಕೊಡುವುದರಿಂದ ಯಕ್ಷಗಾನದ ಸಮಗ್ರ ಪರಿಚಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಡಲು ಸಾಧ್ಯವಿಲ್ಲ ಎಂಬುದು ಎಸ್.ಎನ್.ಪಂಜಾಜೆ ಅಭಿಪ್ರಾಯ. ಹೀಗಾಗಿ ಪೂರ್ಣ ಪ್ರಮಾಣದ ತಂಡವೊಂದನ್ನು ಒಯ್ಯಲು ಪ್ರಾಯೋಜಕತ್ವ ಪಡೆಯಬೇಕು ಎಂದು ಅವರು ಯತ್ನ ನಡೆಸಿದ್ದರು.

ರಾಜ್ಯ ಮಟ್ಟದಲ್ಲಿ ಅವರ ಯತ್ನ ಸಫಲವಾಗಲಿಲ್ಲ. ಈ ವರ್ಷ ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಯಕ್ಷಗಾನದ ಸೊಬಗು ಪರಿಚಯಿಸುವ ವ್ಯಕ್ತಿಗತ ಅವಕಾಶ ಸಿಕ್ಕಿದ್ದು ಉತ್ತರ ಕನ್ನಡದ ಕಡತೋಕದ ಎಳೆಯ ಪ್ರತಿಭೆ ಅರ್ಪಿತಾ ಹೆಗಡೆಗೆ. ಪುಟ್ಟ ವಯಸ್ಸಿನಲ್ಲೇ ತನ್ನ ಪ್ರತಿಭೆಯನ್ನು ಹೊರಗೆಡವಿದ ಈಕೆ ಮೊದಲ ಪಾತ್ರ ಪ್ರದರ್ಶಿಸಿದ್ದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಮ್ಮುಖದಲ್ಲಿ.

ಸ್ವಾಮೀಜಿ ಸಮ್ಮುಖದಲ್ಲಿ ಪಾತ್ರ ಪ್ರದರ್ಶಿಸಿದ ಬಳಿಕ ಈಕೆ ಬಡಗು ತಿಟ್ಟಿನ ಶ್ರೇಷ್ಠ ಕಲಾವಿದರಾದ ಚಿಟ್ಟಾಣಿ, ಯಾಜಿ, ಕೊಂಡದಕುಳಿ ಅವರೊಂದಿಗೆ ಹೆಜ್ಜೆ ವೇಷ ಹಾಕಿದ್ದಾಳೆ. ಅಭಿಮನ್ಯು, ಕೃಷ್ಣ, ಧರ್ಮಾಂಗದ, ಬಭ್ರುವಾಹನ ಮುಂತಾದ ಪಾತ್ರಗಳನ್ನು ಪ್ರದರ್ಶಿಸಿ ಶಹಭಾಸ್ ಗಿರಿ ಪಡೆದಿದ್ದಾಳೆ. ಇದೀಗ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲೂ ಆಯ್ಕೆ ಆಗಿದ್ದಾಳೆ. ಆಕೆಗೆ ಅಭಿನಂದನೆ ಹೇಳಲೇ ಬೇಕು.

ಕರಾವಳಿಯ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಯಕ್ಷಗಾನದಲ್ಲಿ ಬಡಗು ತಿಟ್ಟಿಗೆ ಇರುವಷ್ಟೇ ಪ್ರಾಶಸ್ತ್ಯ ತೆಂಕು ತಿಟ್ಟಿಗೂ ಇದೆ. ಆದರೆ ವಿದೇಶಗಳಲ್ಲಿ ಯಕ್ಷಗಾನ ಅಂದೊಡನೆ ಜನರ ಕಣ್ಣಿಗೆ ಕಟ್ಟುವುದು ಬಡಗು ತಿಟ್ಟು. ಇದಕ್ಕೆ ಕಾರಣ ತೆಂಕುತಿಟ್ಟಿನ ಯಕ್ಷಗಾನ ಕಲಾವಿದರಿಗೆ ಬಡಗುತಿಟ್ಟಿನ ಕಲಾವಿದರಷ್ಟು ಪ್ರೋತ್ಸಾಹ ಸಿಕ್ಕದೇ ಇರುವುದು ಎಂದರೆ ತಪ್ಪಲ್ಲ.

'ಅಕ್ಕ' ಸಮ್ಮೇಳನದಲ್ಲಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಸಮಗ್ರ ಸ್ವರೂಪವನ್ನು ನೀಡಲು ಸಾಧ್ಯವಾಗುವಂತೆ ಪೂರ್ಣ ಪ್ರಮಾಣದ ತೆಂಕು ತಿಟ್ಟಿನ ತಂಡವನ್ನು ಒಯ್ಯಬೇಕು ಎಂಬ ಪ್ರಯತ್ನಕ್ಕೆ ಪಂಜಾಜೆ ಕೈ ಹಾಕಿದ್ದು ಈ ಹಿನ್ನೆಲೆಯಲ್ಲೇ.

ರಾಜ್ಯದ ಅಧಿಕಾರಿಗಳ ವಲಯದಲ್ಲಿ ಕಂಬ ಕಂಬ ಸುತ್ತಿದರೂ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಇಡೀ ತಂಡವನ್ನು ಒಯ್ಯುವ ಸಾಹಸಕ್ಕೆ ಶಿಫಾರಸು ಮಾಡುವ 'ಧೈರ್ಯ' ಕೂಡಾ ಅಧಿಕಾರಿಗಳಿಗೆ ಬರಲಿಲ್ಲ.

ಆದರೆ ಪಂಜಾಜೆ ಸುಮ್ನನೇ ಕುಳಿತುಕೊಳ್ಳುವವರಲ್ಲ. ರಾಜ್ಯ ಮಟ್ಟದಲ್ಲಿ ಆಗದಿದ್ದರೆ ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಯತ್ನಕ್ಕೆ ಏಕೆ ಕೈಹಾಕಬಾರದು? ಪಂಜಾಜೆ ಕಾರ್ಯಮಗ್ನರಾಗಿಯೇ ಬಿಟ್ಟರು. ಅವರ ಪ್ರಯತ್ನಗಳಿಗೆ ಆಸ್ಕರ್ ಫರ್ನಾಂಡಿಸ್ ಭುಜ ಕೊಟ್ಟರು. ಈ ಎಲ್ಲ ಯತ್ನದ ಫಲವಾಗಿ ಒಂಬತ್ತು ಮಂದಿಯ 'ತೆಂಕು ತಿಟ್ಟು ಯಕ್ಷಗಾನ ತಂಡ'ಕ್ಕೆ 'ಅಕ್ಕ'ದಲ್ಲಿ ಪಾಲ್ಗೊಳ್ಳುವ ಯೋಗ ಲಭಿಸಿತು. ಕೇಂದ್ರ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಇಡೀ ತಂಡದ ಪ್ರವಾಸದ ಪ್ರಾಯೋಜಕತ್ವ ವಹಿಸಿಕೊಂಡಿತು.


ಈ ತಂಡ ಸಮ್ಮೇಳನದಲ್ಲಿ 'ನರಕಾಸುರ ವಧೆ' ಮತ್ತು 'ಜಾಂಬವತಿ ಕಲ್ಯಾಣ' ಈ ಎರಡು ಪ್ರಸಂಗಗಳನ್ನು ಪ್ರಸ್ತುತಪಡಿಸಲಿದೆ. ಎಸ್.ಎನ್. ಪಂಜಾಜೆ ಅವರ ಜೊತೆಗೆ ಕಲಾವಿದರಾದ ಪಿ.ವಿ. ಪರಮೇಶ್, ದೀಪಕರಾವ್, ಕಾರ್ತಿಕ್ ಕೊರ್ಡೆಲು, ನರೇಂದ್ರ ಕುಮಾರ್, ಶ್ರೀಮತಿ ಮನೋರಮಾ, ಕರುಣಾಕರ ಶೆಟ್ಟಿ, ಗೋಪಾಲಕೃಷ್ಣ ನಾವಡ, ಕೋಳ್ಯೂರು ಭಾಸ್ಕರ 'ಅಕ್ಕ ಅಂಗಣ'ದಲ್ಲಿ 'ರಿಂಗಣ' ಹಾಕಲಿದ್ದಾರೆ.

ಅತ್ಯಂತ ಸೌಮ್ಯ ಸ್ವಭಾವದ ಎಸ್.ಎನ್. ಪಂಜಾಜೆ ಸಾಮಾನ್ಯದವರೇನೂ ಅಲ್ಲ. ಬಹುಮುಖ ಪ್ರತಿಭೆಯ ಇವರು ಏನಾದರೂ ಕೆಲಸ ಮಾಡಬೇಕು ಅಂದುಕೊಂಡರೆ, ಅದನ್ನು ಸಾಧಿಸದೇ ಸುಮ್ಮನೇ ಬಿಡುವವರಲ್ಲ. ಇವರ ನೇತೃತ್ವದ ಯಕ್ಷಗಾನ ತಂಡ 2003ರಲ್ಲಿ ಬರ್ಲಿನ್ ಉತ್ಸವದಲ್ಲಿ ಪಾಲ್ಗೊಂಡದ್ದಷ್ಟೇ ಅಲ್ಲ ವಿಮರ್ಶಕರ ಗಮನವನ್ನೂ ಸೆಳೆದಿತ್ತು ಎಂಬುದು ಸಣ್ಣ ಮಾತಲ್ಲ.

ಯಕ್ಷಗಾನಕ್ಕೊಂದು 'ಪ್ರತ್ಯೇಕ ಅಕಾಡೆಮಿ' ಸ್ಥಾಪನೆಗೆ ಸರ್ಕಾರ ಈಗ ತತ್ವಶಃ ಒಪ್ಪಿಕೊಂಡಿದೆಯಲ್ಲ? ಈ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಬೇಕೆಂದು ಮೊತ್ತ ಮೊದಲಿಗೆ ಸದ್ದೆಬ್ಬಿಸಿದವರು ಇದೇ ಪಂಜಾಜೆ ಮತ್ತು ಅವರ ಗೆಳೆಯರು. ಅವರು ಹೊರಡಿಸಿದ್ದ ಸದ್ದು ಅಂತಿತಹುದಲ್ಲ, ಅದು ಚೆಂಡೆಯ ಸದ್ದು..!

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆಯ ಎದುರು ಕೆಲ ಸಮಯದ ಹಿಂದೆ ಒಂದು ಮುಂಜಾನೆ ಇವರು ಚೆಂಡೆ ಭಾರಿಸುತ್ತಾ ನಿಂತಿದ್ದರು. ಬಾಯಲ್ಲಿ ಏನೂ ಹೇಳಲಿಲ್ಲ. ಬ್ಯಾನರ್ ಹೇಳುತ್ತಿತ್ತು: ಯಕ್ಷಗಾನಕ್ಕೆ ಬೇಕು ಪ್ರತ್ಯೇಕ ಅಕಾಡೆಮಿ..!

ಬಡವ, ಬಲ್ಲಿದ, ಪಂಡಿತ, ಪಾಮರ ಎಂಬ ಭೇದವಿಲ್ಲದೆ ಸಕಲರಿಗೂ ಮುದ ನೀಡುವ ಯಕ್ಷಗಾನ ಎಂಬ ಸಮಷ್ಠಿ ಕಲೆಯಲ್ಲಿ ಪ್ರಕಾರಗಳು ಹಲವಿವೆ. ಪ್ರಮುಖವಾಗಿ ಕಂಡು ಬರುವುದು ತೆಂಕುತಿಟ್ಟು, ಬಡಗು ತಿಟ್ಟು. ಆದರೆ ಕರ್ನಾಟಕದ ಉದ್ದಗಲಕ್ಕೂ ಮೂಡಲಪಾಯ, ದೊಡ್ಡಾಟ, ಕೃಷ್ಣ ಪಾರಿಜಾತ, ಘಟ್ಟದ ಕೋರೆ, ಬೊಂಬೆಯಾಟ ಇತ್ಯಾದಿ ಹೆಸರಿನಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಕನ್ನಡ- ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿರುವ ಕೇವಲ ಪದ್ಯ- ಮಾತಿನಲ್ಲೇ ಕತೆಯನ್ನು ಕಣ್ಣಿಗೆ ಕಟ್ಟಿಕೊಡುವ 'ತಾಳಮದ್ದಲೆ' ಕೂಡಾ ಯಕ್ಷಗಾನದ ಪ್ರಕಾರದಲ್ಲಿ ಒಂದು.

ಯಕ್ಷಗಾನದ ಈ ಎಲ್ಲ ಪ್ರಕಾರಗಳ ಪರಿಚಯ ಮಾಡಿಕೊಡಲಿಕ್ಕಾಗಿ ವರ್ಷದ ಹಿಂದೆ ಅಂದರೆ 2007ರ ಜೂನ್ 8, 9 ಮತ್ತು 10ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವೊಂದನ್ನು ಸಂಘಟಿಸಿದ್ದು ಇದೇ ಎಸ್. ಪಂಜಾಜೆ ಅಧ್ಯಕ್ಷತೆಯ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಂಸ್ಥೆ. ಈ ಸಂದರ್ಭದಲ್ಲಿ ಹೊರತರಲಾದ 'ಕಿರೀಟ' ಸ್ಮರಣ ಸಂಚಿಕೆ ಯಕ್ಷಗಾನದ ಹಲವು ಮಗ್ಗುಲುಗಳನ್ನು ಪರಿಚಯಿಸುವ ಒಂದು ಅಪೂರ್ವ ಸಂಚಿಕೆ.

ಇದಕ್ಕೂ ಮೊದಲು ಯಕ್ಷಗಾನದ ಅಭಿವೃದ್ಧಿ ಸಲುವಾಗಿಯೇ ಅವರು ಗದಗ ಮತ್ತು ಬೆಂಗಳೂರಿನಲ್ಲಿ ಇದೇ ಮಾದರಿಯ ಎರಡು ಸಮ್ಮೇಳನಗಳನ್ನು ಸಂಘಟಿಸಿದ್ದರು. ಉಡುಪಿಯ ಸಮ್ಮೇಳನ ಸಂಘಟಿಸುವಲ್ಲಿ ಅವರೊಂದಿಗೆ ಉಡುಪಿ ಶ್ರೀಕೃಷ್ಣ ಮಠ ಮತ್ತು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಸಹಯೋಗ ನೀಡಿದ್ದವು.

ಈಗ ಯಕ್ಷಗಾನದ ಮಹಿಮೆಯನ್ನು ಅಮೆರಿಕದಲ್ಲಿ ಮೊಳಗಿಸಲು ಹೊರಟಿದ್ದಾರೆ ಪಂಜಾಜೆ ಮತ್ತು ಅವರ ಮಿತ್ರರು. ಅವರ ಯತ್ನ ಫಲಪ್ರದವಾಗಲಿ, ಕನ್ನಡ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯ ಸಂಪೂರ್ಣ ಕಂಪು ಅಮೆರಿಕದಲ್ಲಿ ಪಸರಿಸಿ ಅದೊಂದು ಒಂದು ಅಚ್ಚಳಿಯದ ದಾಖಲೆಯಾಗಲಿ ಎಂದು 'ಪರ್ಯಾಯ'
ಹಾರೈಸುತ್ತದೆ.

No comments:

Advertisement