My Blog List

Sunday, September 14, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 14

ಇಂದಿನ ಇತಿಹಾಸ

ಸೆಪ್ಟೆಂಬರ್ 14

ಪಂಕಜ್ ಅಡ್ವಾಣಿ ಅವರು ಸಿಂಗಪುರದ ಆರ್ಕಿಡ್ ಕಂಟ್ರಿ ಕ್ಲಬ್ಬಿನಲ್ಲಿ ಮುಕ್ತಾಯವಾದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದರು.  ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹುಡುಗ ಪಂಕಜ್ 1963-1489 ಪಾಯಿಂಟುಗಳ ಅಂತರದಿಂದ ಭಾರತದ ಮತ್ತೊಬ್ಬ ಆಟಗಾರ ಧ್ರುವ ಸೀತಾವಾಲಾ ಅವರನ್ನು ಸೋಲಿಸಿದರು. 

2007:  ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ  ಪ್ರಮಾಣ ಪತ್ರದಲ್ಲಿ ರಾಮ ಹಾಗೂ ರಾಮಸೇತು ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯಿತು. ದೇಶಾದ್ಯಂತ ಕಂಡು ಬಂದ ಭಾರೀ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮ ಕೈಗೊಂಡಿತು. ಜೊತೆಗೆ ರಾಮಸೇತು ರಕ್ಷಣೆಯ ದೃಷ್ಟಿಯಿಂದ ಸೇತುಸಮುದ್ರಂ ಕಾಲುವೆ ಯೋಜನೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿಯೂ ಸರ್ಕಾರ ಹೇಳಿತು. ರಾಮ ಹಾಗೂ ರಾಮ ಸೇತು ಇತ್ತೆಂದು ಹೇಳಲು ಯಾವುದೇ ಐತಿಹಾಸಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಇಲಾಖೆ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಪ್ರಮಾಣ ಪತ್ರದ ಆಕ್ಷೇಪಾರ್ಹ ಹೇಳಿಕೆಗಳನ್ನು ವಾಪಸ್ ಪಡೆಯಲು ಸಮ್ಮತಿಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು, ರಾಮ ಸೇತು ಪ್ರದೇಶದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಆಗಸ್ಟ್ 31ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮುಂದುವರಿಯುತ್ತದೆ ಎಂದು ಹೇಳಿ, ವಿಚಾರಣೆಯನ್ನು 2008ರ ಜನವರಿ ಮೊದಲ ವಾರಕ್ಕೆ ಮುಂದೂಡಿತು.

2007: ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸಿದರು. ದಾದಾಸಾಹೇಬ್ ಪ್ರಶಸ್ತಿ ಪಡೆದ ಕರ್ನಾಟಕ ಮೂಲದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್,  ತೀರ್ಪುಗಾರರ ಮಂಡಳಿ ಅಧ್ಯಕ್ಷರಾದ ಹಿರಿಯ ತಾರೆ ಬಿ. ಸರೋಜಾದೇವಿ, ಡಬಲ್ ಪ್ರಶಸ್ತಿ ಪಡೆದ ಕನ್ನಡ ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಿರಂತರವಾಗಿ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಿರ್ದೇಶಕ ಪಿ.ಶೇಷಾದ್ರಿ, ನಿರ್ಮಾಪಕಿಯಾಗಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ಜಯಮಾಲಾ ಮತ್ತು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಿರುವ ನಟಿಯರ ಗುಂಪಿಗೆ ಇನ್ನೊಂದು ಸೇರ್ಪಡೆಯಾಗಿರುವ ನಟಿ ಪ್ರಮೀಳಾ ಜೋಷಾಯ್ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಶ್ಯಾಮ್ ಬೆನಗಲ್ ಅವರು ಫಾಲ್ಕೆ ಪ್ರಶಸ್ತಿ ಪಡೆದರೆ, ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರ `ತಾಯಿ'ಯ  ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, ಆ ಚಿತ್ರದ ಹಾಡಿನ ಸಾಹಿತ್ಯಕ್ಕಾಗಿಯೂ ನೀಡುವ ಪ್ರಶಸ್ತಿ ಸೇರಿ ಡಬ್ಬಲ್ ಪ್ರಶಸ್ತಿ ಪಡೆದರು. ಹಿಂದೆ  `ಸಂಗೀತ' ಚಿತ್ರಕ್ಕಾಗಿ ಪೋಷಕ ನಟಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟಿ ಪ್ರಮೀಳಾ ಜೋಷಾಯ್ `ತಾಯಿ' ಚಿತ್ರದ ನಿರ್ಮಾಪಕಿಯಾಗಿ ಪ್ರಶಸ್ತಿ ಪಡೆದರು. ಯುವ ನಿರ್ದೇಶಕ ಪಿ.ಶೇಷಾದ್ರಿ ಸತತ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದರು. ಮೊದಲು `ಮುನ್ನುಡಿ' ನಂತರ `ಅತಿಥಿ' ಕಳೆದ ಬಾರಿ `ಬೇರು' ಈಗ `ತುತ್ತೂರಿ' ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರಗಳು. ಪರಿಸರ ರಕ್ಷಣೆಯ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ ನಿರ್ಮಾಪಕಿ ಜನಪ್ರಿಯ ನಟಿ ಡಾ.ಜಯಮಾಲಾ `ತಾಯಿ ಸಾಹೇಬ' ಚಿತ್ರದ ನಿರ್ಮಾಪಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈ ಸಲ ಇವರು ಎರಡನೇ ಬಾರಿ 'ತುತ್ತೂರಿ' ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದರು.
 
2007: ರಾಮ ಸೇತು ಕುರಿತು ಎದ್ದಿರುವ ಗದ್ದಲವನ್ನೇ ನೆಪವಾಗಿರಿಸಿಕೊಂಡು ಉತ್ತರಖಂಡ ಸರ್ಕಾರ, ರಾಮ ಸೇತು ಕುರಿತಾದ ಕತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಮುಂದಾಯಿತು. ಸರ್ಕಾರದ ಈ ಕ್ರಮ `ಶಿಕ್ಷಣದ ಕೇಸರಿಕರಣ' ಎಂದು ಕಾಂಗ್ರೆಸ್ ಟೀಕಿಸಿತು.

 2007: ಇಂಡೋನೇಷ್ಯಾದ ಸುಮಾತ್ರಾದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 13 ಜನ ಮೃತರಾಗಿ ಹಲವಾರು ಕಟ್ಟಡಗಳು ಜಖಂಗೊಂಡವು. ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆ ನೀಡಿ ನಂತರ ಅದನ್ನು ವಾಪಸ್ ಪಡೆದರು.

2007: ರಷ್ಯಾ ಸಂಸತ್ತಿನಲ್ಲಿ 450 ಮತಗಳ ಪೈಕಿ 381 ಮತಗಳಿಸಿದ 66 ವರ್ಷದ ವಿಕ್ಟರ್ ಜುಬ್ಕೊವ್ ಅವರು ರಷ್ಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಮಿಖಾಯಿಲ್ ಪಕೊವ್ ಅವರ ನೇತೃತ್ವದ ಸರ್ಕಾರ ವಿಸರ್ಜನೆಯಾದ ಎರಡು ದಿನಗಳ ನಂತರ ಪ್ರಧಾನಿ ಸ್ಥಾನಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾಡಿದ ವಿಕ್ಟೋರ್ ಜುಬ್ಕೊವ್ ನೇಮಕವನ್ನು ರಷ್ಯಾ ಸಂಸತ್ ಈ ಮೂಲಕ ಅಂಗೀಕರಿಸಿತು. ಜಬ್ಕೊವ್ ಹಿರಿಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

2007: ಪ್ರತಿ ಸೆಕೆಂಡಿಗೆ ಕನಿಷ್ಠ ಒಂದು ಸಾವಿರ ಶತಕೋಟಿ ಗಣಿತ ಸಮಸ್ಯೆಗಳನ್ನು ಬಿಡಿಸುವ (ಒಂದು ಟೆರಾಫ್ಲಾಪ್ ವೇಗದ) ಸೂಪರ್ ಕಂಪ್ಯೂಟರನ್ನು ವಿಪ್ರೊ ಇನ್ಫೊಟೆಕ್ ಈದಿನ ಬೆಂಗಳೂರಿನಲ್ಲಿ  ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕ್ಯಾಲಿಫೋರ್ನಿಯಾ ಮೂಲದ ಜಿ- ರಿಸರ್ಚ್ ಇಂಕ್ ನ ಸಹಯೋಗದಲ್ಲಿ ಅತ್ಯಧಿಕ ವೇಗದಲ್ಲಿ ಕಾರ್ಯ ನಿರ್ವಹಿಸುವ ಮತ್ತು ಗರಿಷ್ಠ ಸ್ಮರಣ ಶಕ್ತಿಯ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಹಾಗೂ ಅಸಂಖ್ಯ ಪೆಟಾಬೈಟ್ಸ್ಗಳಷ್ಟು ಮಾಹಿತಿ, ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯದ ಸೂಪರ್ ಸ್ಟೋರೇಜ್  (`ವಿಪ್ರೊ ಸೂಪರ್ನೋವಾ') ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿಪ್ರೊ ವೈಯಕ್ತಿಕ ಕಂಪ್ಯೂಟರ್ ವಿಭಾಗದ ಉಪಾಧ್ಯಕ್ಷ ಅಶುತೋಷ್ ವೈದ್ಯ ಅವರು ಪ್ರಕಟಿಸಿದರು. ಈ ಮೊದಲಿನ ಸೂಪರ್ ಕಂಪ್ಯೂಟರುಗಳ ದಶಲಕ್ಷ ಡಾಲರುಗಳ ದುಬಾರಿ ಬೆಲೆಗೆ ಹೋಲಿಸಿದರೆ ಈ ಕಂಪ್ಯೂಟರ್, ಕೈಗೆಟುಕುವ ಬೆಲೆಗೆ (ವಿಲಾಸಿ ಕಾರಿನ ಬೆಲೆಯಲ್ಲಿ)  ರೂ 25 ಲಕ್ಷಕ್ಕೆ ಲಭ್ಯವಾಗಲಿದೆ. ಇದು ಆರಂಭಿಕ ಬೆಲೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಸೂಪರ್ ಕಂಪ್ಯೂಟರುಗಳ ಗರಿಷ್ಠ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ಬದಲಾಗುತ್ತದೆ. ಎಂಜಿನಿಯರಿಂಗ್ ಕಾಲೇಜು, ಉನ್ನತ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿದ ಉದ್ದಿಮೆ ಸಂಸ್ಥೆಗಳು ಈ ಸೂಪರ್ ಕಂಪ್ಯೂಟರ್ ಬಳಸಬಹುದು. ಇದೊಂದು ಗರಿಷ್ಠ ಕಾರ್ಯಕ್ಷಮತೆಯ, ಬಹುಪಯೋಗಿ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ಸೂಪರ್ ಕಂಪ್ಯೂಟರ್ ಆಗಿದ್ದು, ಭಾರತಕ್ಕೆ ಸೂಪರ್ ಕಂಪ್ಯೂಟರ್ ತರುವ ಕನಸು ಇದರಿಂದ ನನಸಾಗಿದೆ ಎಂದು ವೈದ್ಯ ಹೇಳಿದರು.

2007: ಬಾಹ್ಯಾಕಾಶ ಅಧ್ಯಯನ ಹಾಗೂ ತಂತ್ರಜ್ಞಾನಕ್ಕೆ ಒತ್ತು ನೀಡುವುದರ ಜೊತೆಗೆ ಇಸ್ರೋದ  ಮಾನವ ಸಂಪನ್ಮೂಲ ಬೇಡಿಕೆ ಪೂರೈಸುವ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ (ಐಐಎಸ್ಟಿ) ಸಂಸ್ಥೆಯನ್ನು ಇಸ್ರೋ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ತಿರುವನಂತಪುರದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯಾದ ಸಂಸ್ಥೆಯು ಏವಿಯಾನಿಕ್ ಹಾಗೂ ಬಾಹ್ಯಾಕಾಶ ಎಂಜಿನಿಯರಿಂಗಿನಲ್ಲಿ ಪರಿಣಿತಿ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪದವಿ ನೀಡಲಿದೆ. ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ಅನ್ವಯಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಈ ಸಂಸ್ಥೆ ನೀಡಲಿದೆ.

2007: ಡರ್ಬಾನಿನ ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಬೌಲ್ ಔಟಿನಲ್ಲಿ 3-0ರಲ್ಲಿ ಸೋಲಿಸಿದ ಭಾರತ ಸೂಪರ್ ಏಯ್ಟ್ ಹಂತ ಪ್ರವೇಶಿಸಿತು.
  
2007: ಅಚ್ಚರಿಯ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನವದೆಹಲಿಯಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ದ್ರಾವಿಡ್ ಬಿಸಿಸಿಐಗೆ ರಾಜೀನಾಮೆ ಪತ್ರ ಸಲ್ಲಿಸಿ, ನಾಯಕತ್ವದಿಂದ ಮುಕ್ತಗೊಳಿಸಲು ಕೋರಿದರು. 2005ರಲ್ಲಿ ನಾಯಕನಾಗಿ ನೇಮಕಗೊಂಡ ರಾಹುಲ್ ದ್ರಾವಿಡ್ ಸತತ 16 ಬಾರಿ ಏಕದಿನ ಪಂದ್ಯ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರೂ, 2007ರ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು. ಪಾಕ್, ವಿಂಡೀಸ್, ಬಾಂಗ್ಲಾ ಹಾಗೂ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ಗೆಲುವು ಅವರ ಮಹತ್ವದ ಪಂದ್ಯಗಳು. ಸೌರವ್ ಗಂಗೂಲಿ ಅವರನ್ನು ಕೆಳಗಿಳಿಸಿದ ನಂತರ ಅಂದರೆ 2005ರಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಆಯ್ಕೆ ಆದ ದ್ರಾವಿಡ್ 20 ಟೆಸ್ಟ್ ಹಾಗೂ 62 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 33 ವರ್ಷ ವಯಸ್ಸಿನ ದ್ರಾವಿಡ್ ನಾಯಕತ್ವದಲ್ಲಿ `ಟೀಮ್ ಇಂಡಿಯಾ' ಟೆಸ್ಟಿನಲ್ಲಿ ಯಶಸ್ಸು ಗಳಿಸಿತ್ತು. ಆದರೆ ಏಕದಿನ ಕ್ರಿಕೆಟಿನಲ್ಲಿ ಆರಂಭದ ಯಶಸ್ಸನ್ನು ಕಾಯ್ದುಕೊಳ್ಳಲು ಆಗಲಿಲ್ಲ. ಸತತ 16 ಏಕದಿನ ಪಂದ್ಯಗಳಲ್ಲಿ ಎದುರಾಳಿ ನೀಡಿದ ಗುರಿಯನ್ನು ಬೆನ್ನುಹತ್ತಿ ಗೆಲುವು ಸಾಧಿಸಿದ್ದು ವಿಶೇಷ. ಆದರೆ ತಂಡ ಕೆರಿಬಿಯನ್ ದ್ವೀಪದಲ್ಲಿ ಮಾರ್ಚ್ -ಏಪ್ರಿಲ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿ ಆಕ್ರೋಶಕ್ಕೆ ಒಳಗಾಗಿತ್ತು. ಅವರ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ಆದರೆ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟಿನಲ್ಲಿ ಅವರು ಫಾಲೋಆನ್ ನೀಡಿರಲಿಲ್ಲ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
 
2007:  ಪಂಕಜ್ ಅಡ್ವಾಣಿ ಅವರು ಸಿಂಗಪುರದ ಆರ್ಕಿಡ್ ಕಂಟ್ರಿ ಕ್ಲಬ್ಬಿನಲ್ಲಿ ಮುಕ್ತಾಯವಾದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದರು.  ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹುಡುಗ ಪಂಕಜ್ 1963-1489 ಪಾಯಿಂಟುಗಳ ಅಂತರದಿಂದ ಭಾರತದ ಮತ್ತೊಬ್ಬ ಆಟಗಾರ ಧ್ರುವ ಸೀತಾವಾಲಾ ಅವರನ್ನು ಸೋಲಿಸಿದರು. ಇದು ಪಂಕಜ್ ಪಾಲಿಗೆ ವೃತ್ತಿ ಜೀವನದ ನಾಲ್ಕನೇ ವಿಶ್ವ ಚಾಂಪಿಯನ್ ಶಿಪ್ ಗೆಲುವು.

2006: ಲಾಭದಾಯಕ ಹುದ್ದೆ ತಿದ್ದುಪಡಿ ಕಾಯ್ದೆಯ (2006) ಸಂವೈಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಈ ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ಯವಾಗಿ ಜಾರಿ ಮಾಡುವುದನ್ನು ತಡೆಹಿಡಿಯಬೇಕು ಮತ್ತು ಲಾಭದ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮುಂದಿರುವ ದೂರುಗಳನ್ನು ಈ ತಿದ್ದುಪಡಿ ಅನ್ವಯ ತೀರ್ಮಾನಿಸದಂತೆ  ನಿರ್ದೇಶನ ನೀಡಬೇಕು ಎಂದು ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅರ್ಜಿ ಸಲ್ಲಿಸಿತು.

2006: ಮುಂಬೈ ಸರಣಿ ಬಾಂಬ್ ಸ್ಫೋಟದ ಎರಡನೇ ಕಂತಿನ ತೀರ್ಪಿನಲ್ಲಿ ಝವೇರಿ ಬಜಾರಿನಲ್ಲಿ ಬಾಂಬ್ ಇಟ್ಟಿದ್ದ ಮೊಹಮ್ಮದ್ ಶೋಯೆಬ್ ಘನ್ಸಾರ್ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನಿಯೋಜಿತ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಶೋಯೆಬ್ ಟೈಗರ್ ಮೆಮನ್ನ ಆಪ್ತ ಬಂಟನಾಗಿದ್ದು, ಈತನೇ ಝವೇರಿ ಬಜಾರ್ ಸ್ಫೋಟದ ರೂವಾರಿ ಎಂದು ನ್ಯಾಯಾಲಯ ಹೇಳಿತು.

2006: ಇಂಡೋನೇಷ್ಯಾದ ಡೆನ್ಪಸರ್ ನ್ಯಾಯಾಲಯವು ಬಾಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪ ಹೊತ್ತ ಇಸ್ಲಾಮಿಕ್ ಉಗ್ರಗಾಮಿ ಅನೀಫ್ ಸೊಲ್ಚನುದ್ದೀನ್ ಗೆ 15 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಜಾರ್ಖಂಡಿನಲ್ಲಿ ಒಂಬತ್ತು ದಿನಗಳ ರಾಜಕೀಯ ಅಸ್ಥಿರತೆಗೆ ತೆರೆ ಬಿತ್ತು. ಬಿಜೆಪಿ- ಜೆಡಿಯು ಮೈತ್ರಿಕೂಟದ ಮುಖ್ಯಮಂತ್ರಿ ಅರ್ಜುನ್ ಮುಂಡಾ ರಾಜೀನಾಮೆ ನೀಡಿದರು. ಯುಪಿಎ ಧುರೀಣ ಮಧು ಕೋಡಾ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಂಪುಟದ ನಾಲ್ವರು ಸಚಿವರ ರಾಜೀನಾಮೆ ಬಳಿಕ ಮುಂಡಾ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.

1975: ಮದರ್ ಎಲಿಜಬೆತ್ ಆನ್ ಬೇಲೀ ಸೆಟನ್ ಅವರು ಮೊತ್ತ ಮೊದಲ ಅಮೆರಿಕ ಸಂಜಾತ ಸಂತಳೆಂದು ಪೋಪ್ 6ನೇ ಪಾಲ್ ಅವರು ಘೋಷಿಸಿದರು.

1974: ಗುರುಗ್ರಹದ 13ನೇ ಉಪಗ್ರಹ ಪತ್ತೆಯಾಯಿತು.

1965: ಪಾಕಿಸ್ತಾನಿ ವಾಯುಪಡೆಗಳಿಂದ ಕಲ್ಕತ್ತ (ಈಗಿನ ಕೋಲ್ಕತಾ) ಹಾಗೂ ಅಗರ್ತಲ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಯಿತು.

1953: ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಕರ್ನೂಲು ಬದಲಿಗೆ ಹೈದರಾಬಾದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

1952: ಸಾಹಿತಿ ಗುರುರಾಜ ಮಾರ್ಪಳ್ಳಿ ಜನನ.

1949: ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯಾಗಿ ಈದಿನ ಘೋಷಿಸಲಾಯಿತು. ಸಂವಿಧಾನ ಸಮಿತಿ ಈ ಬಗ್ಗೆ ಮೂರು ದಿನಗಳ ಕಾಲ ಚರ್ಚಿಸಿತ್ತು. ಭಾರತದಲ್ಲಿ 18 ಕೋಟಿ ಜನ ಹಿಂದಿಯನ್ನು ಭಾಷೆಯಾಗಿ ಬಳಸುತ್ತಿದ್ದಾರೆ. ಇತರ 30 ಕೋಟಿ ಜನ ಇದನ್ನು ದ್ವಿತೀಯ ಭಾಷೆಯಾಗಿ ಬಳಸುತ್ತಿದ್ದಾರೆ.ಭಾರತವಲ್ಲದೆ ಇತರ ರಾಷ್ಟ್ರಗಳಲ್ಲೂ ಹಿಂದಿ ಮಾತನಾಡುವವರು ಇದ್ದಾರೆ. ಉರ್ದು ಪ್ರಾಬಲ್ಯ ಇರುವ ಪಾಕಿಸ್ಥಾನದಲ್ಲೂ 4.1 ಕೋಟಿ ಜನ ಹಿಂದಿ ಮಾತನಾಡುತ್ತಾರೆ. ನೇರವಾಗಿ ಸಂಸ್ಕೃತದಿಂದ ಹುಟ್ಟಿರುವ ಹಿಂದಿ, ದ್ರಾವಿಡ ಭಾಷೆಗಳು, ಟರ್ಕಿ, ಅರಬ್ಬಿ, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಬೆಳೆದಿದೆ. ಮಧ್ಯ ಯುಗದಿಂದಲೇ ಬಳಕಯಲ್ಲಿರುವ ಈ ಭಾಷೆಯಲ್ಲಿ ವಿಧವಿಧ ಸಾಹಿತ್ಯವೂ ರಚನೆಗೊಂಡಿದೆ.

1930: ಜರ್ಮನಿ ಚುನಾವಣೆಯಲ್ಲಿ ನಾಝಿಗಳಿಗೆ 107 ಸ್ಥಾನಗಳಲ್ಲಿ ವಿಜಯ ಲಭಿಸಿತು.

1927: ಆಧುನಿಕ ನೃತ್ಯಕಲಾವಿದೆ ಇಸಾಡೋರಾ ಡಂಕನ್ ಅವರು ಫ್ರಾನ್ಸಿನ ನೈಸ್ ನಗರದಲ್ಲಿ ಸ್ಪೋರ್ಟ್ಸ್ ಕಾರು ಅಪಘಾತದಲ್ಲಿ ಮೃತರಾದರು. ಅವರು ತಲೆಗೆ ಸುತ್ತಿಕೊಂಡಿದ್ದ ಸ್ಕಾರ್ಫ್ ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಈ ಅಪಘಾತ ಸಂಭವಿಸಿತು.

1926: ವೈಜ್ಞಾನಿಕ ಕೃತಿಗಳ ಕರ್ತೃ, ಗಣಿತ ಉಪನ್ಯಾಸಕ, ಸಾಹಿತಿ ಜಿ.ಟಿ. ನಾರಾಯಣ ರಾವ್ ಅವರು ಗುಡ್ಡೆಹಿತ್ಲು ತಿಮ್ಮಪ್ಪಯ್ಯ- ವೆಂಕಟಲಕ್ಷ್ಮಿ ದಂಪತಿಯ ಮಗನಾಗಿ ಮಡಿಕೇರಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತ, ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಇವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕತ್ವ ವಹಿಸಿಕೊಂಡಿದ್ದರು. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಾರಾಯಣರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿಗಳು ಲಭಿಸಿವೆ.

1923: ಹಿರಿಯ ಕಾನೂನು ತಜ್ಞ ರಾಂ ಜೇಠ್ಮಲಾನಿ ಜನನ.

1917: ಸಾಹಿತಿ ಗುಡಿಬಂಡೆ ರಾಮಾಚಾರ್ ಜನನ.

1814: ಅಮೆರಿಕದ ರಾಷ್ಟ್ರಗೀತೆ `ದಿ ಸ್ಟಾರ್ ಸ್ಪಾಂಗಲ್ಡ್ ಬ್ಯಾನರ್' ಮುಂಬೈಯ ಜೆಮ್ ಶೆಡ್ ಜಿ ಬೊಮಾನ್ ಜಿ ವಾಡಿಯಾ ಸಂಸ್ಥೆಯು ನಿರ್ಮಿಸಿದ ಎಚ್ ಎಂ ಎಸ್ ಮಿನ್ ಡನ್ ಹಡಗಿನಲ್ಲಿ  ಜನಿಸಿತು. ಅಮೆರಿಕನ್ ವಕೀಲ ಫ್ರಾನ್ಸಿಸ್ ಸ್ಕಾಟ್ ಕೀ ಅವರು ಈ ಕವನವನ್ನು ಅವಸರ ಅವಸರವಾಗಿ ಲಕೋಟೆಯೊಂದರ ಮೇಲೆ ಬರೆದರು. ಗೆಳೆಯನನ್ನು ಬಿಡಿಸುವ ಸಲುವಾಗಿ ಮಾತುಕತೆಗೆಂದು ಹೋಗಿದ್ದ ಫ್ರಾನ್ಸಿಸ್ ಅವರು ಫೋರ್ಟ್ ಮೆಕ್ ಹೆನ್ರಿ ಮೇಲೆ ರಾತ್ರಿ ಇಡೀ ಶೆಲ್ ದಾಳಿ ನಡೆಯುತ್ತಿದ್ದುದರಿಂದ ಹಡಗಿನಲ್ಲೇ ಕಾಲ ಕಳೆಯಬೇಕಾಯಿತು. ತೀವ್ರ ಶೆಲ್ ದಾಳಿಯ ಬಳಿಕವೂ ಮರುದಿನ ಬೆಳಿಗ್ಗೆ ಫೋರ್ಟ್ ಮೆಕ್ ಹೆನ್ರಿಯ ಮೇಲೆ ಅಮೆರಿಕದ ರಾಷ್ಟ್ರಧ್ವಜ ಹಾರಾಡುತ್ತ್ದಿದುದನ್ನು ಕಂಡು ಹರ್ಷಗೊಂಡ ಫ್ರಾನ್ಸಿಸ್ ಅವಸರ ಅವಸರವಾಗಿ ಈ ಕವನ ರಚಿಸಿದರು.

1812: ರಷ್ಯದ ಮೇಲೆ ದಾಳಿ ಮುಂದುವರೆಸುತ್ತಾ ನೆಪೋಲಿಯನ್ ಮಾಸ್ಕೋ ಪ್ರವೇಶಿಸಿದ. ಆತನ ಸೇನೆ ಮುಂದೊತ್ತಿ ಬರದಂತೆ ತಡೆಯಲು ತ್ಸಾರ್ ಮೊದಲನೆಯ ಅಲೆಗ್ಸಾಂಡರ್, ನೆಪೋಲಿಯನ್ ಸೇನೆ ಮುನ್ನುಗ್ಗುತ್ತಿದ್ದ ಕಡೆಯಿಂದ ಮಾಸ್ಕೊ ನಗರಕ್ಕೆ ಬೆಂಕಿ ಹಚ್ಚಿಸಿದ.

1752: ಹನ್ನೊಂದು ದಿನಗಳನ್ನು ತೆಗೆದುಹಾಕಲಾದ ಗ್ರೆಗೋರಿಯನ್ ಕ್ಯಾಲೆಂಡರನ್ನು ಬ್ರಿಟನ್ ಅಂಗೀಕರಿಸಿತು. 2 ಮತ್ತು 14ನೇ
ದಿನಾಂಕಗಳ ನಡುವಣ 11 ದಿನಗಳು ಇತಿಹಾಸದಲ್ಲಿ ನಷ್ಟವಾದವು ಎಂದು ಪರಿಗಣಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

1 comment:

Dr Jayagovinda Ukkinadka said...

hats off to your wonderful work.really informative
Dr. Jayagovinda Ukkinadka

Advertisement