Saturday, September 13, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 13


ಇಂದಿನ ಇತಿಹಾಸ

ಸೆಪ್ಟೆಂಬರ್ 13

ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಂಸದರು ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರರಾದರು. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರತಿಭಾ ಪಾಟೀಲ್ ಅವರಿಂದ ಸುಷ್ಮಾ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಸಚಿವರಾದ ಪಿ. ಚಿದಂಬರಂ, ಶರದ್ ಪವಾರ್, ಮಣಿಶಂಕರ್ ಅಯ್ಯರ್ ಅವರಿಗೂ ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ಮಾಡಲಾಯಿತು.

2007: ಶ್ರೀರಾಮಚಂದ್ರ ಅಥವಾ ರಾಮಾಯಣದ ಪಾತ್ರಗಳ ಅಸ್ತಿತ್ವವನ್ನು ಸಮರ್ಥಿಸುವ ಚಾರಿತ್ರಿಕ ಪುರಾವೆಗಳಿಲ್ಲ ಎಂಬುದಾಗಿ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರ್ಕಾರವು ಅದರಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿತು. ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಬಳಿಕ ಸಂಘ ಪರಿವಾರದಿಂದ ತೀವ್ರ ವಾಗ್ದಾಳಿಗೆ ತುತ್ತಾದ ಸರ್ಕಾರ ಈದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದ ಬಳಿಕ  ಈ ನಿರ್ಧಾರಕ್ಕೆ ಬಂದಿತು. ಕಾನೂನು ಸಚಿವ ಭಾರದ್ವಾಜ್ ಪ್ರಮಾಣ ಪತ್ರದಲ್ಲಿರುವ ಆಕ್ಷೇಪಾರ್ಹ ಭಾಗಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಶುಕ್ರವಾರ ಈ ಸಂಬಂಧ ನ್ಯಾಯಾಲಯಕ್ಕೆ ಪೂರಕ ಪ್ರಮಾಣಪತ್ರ ಸಲ್ಲಿಸುವುದಾಗಿಯೂ ಪ್ರಕಟಿಸಿದರು.

2007: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಈದಿನ ಸರಣಿ ಭೂಕಂಪಗಳು ಸಂಭವಿಸಿ, ಕನಿಷ್ಠ 6 ಜನ ಮೃತರಾದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಯಿತು. ಒಂದೇ ಒಂದು ದಿನದಲ್ಲಿ ರಿಕ್ಟರ್ ಮಾಪಕದಲ್ಲಿ 4.9ರಿಂದ 8.4ರವರೆಗಿನ 19 ಕಂಪನಗಳು ಸಂಭವಿಸಿದವು. ರಿಕ್ಟರ್ ಮಾಪಕದಲ್ಲಿ 8.4ರಷ್ಟಿದ್ದ ಈದಿನ ರಾತ್ರಿಯ ಭೂಕಂಪ, ವಿಶ್ವದಾದ್ಯಂತ ಈ ವರ್ಷ ಸಂಭವಿಸಿದ ಭೂಕಂಪಗಳಲ್ಲೇ ಅತಿ ಪ್ರಬಲವಾದದ್ದು ಎನ್ನಲಾಗಿತ್ತು. ಈ ಭೂಕಂಪದಲ್ಲಿ ನೂರಾರು ಮಂದಿ ಗಾಯಗೊಂಡರು.

2007: ಚುನಾವಣೆಯ ಸುಳಿವಿನ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಗೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು.  ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಶೇ 30ರಷ್ಟು ಮೀಸಲಾತಿಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಪ್ರತ್ಯೇಕವಾಗಿ ಶೇ. 3.5ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿತು ಎಂದು ಎಂದು ಮುಖ್ಯಮಂತ್ರಿ ಎಂ.ಕರುಣಾನಿಧಿ ಪ್ರಕಟಿಸಿದರು.

2007: ಅಸ್ಸಾಮಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕಿ ಮತ್ತು ಉಲ್ಫಾ ಶಾಂತಿ ಸಂಧಾನದ ರೂವಾರಿ ಇಂದಿರಾ ಗೋಸ್ವಾಮಿ ಅವರಿಗೆ ಲಘು ಪಾಶ್ರ್ವವಾಯು ತಗುಲಿತು. ತತ್ ಕ್ಷಣ ಅವರನ್ನು ಗುವಾಹಟಿಯ ಸ್ಥಳೀಯ ನರ್ಸಿಂಗ್ ಹೋಮ್ ಗೆ ದಾಖಲಿಸಲಾಯಿತು. ಇಂದಿರಾ ಗೋಸ್ವಾಮಿಯವರು ಅಸ್ಸಾಂ ಬಂಡುಕೋರರ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರದೊಡನೆ ನಡೆಸಿದ ಮಾತುಕತೆಯಲ್ಲಿ ಉಲ್ಫಾ ಸಂಘಟನೆಯ ಪರಗಿ ಭಾಗವಹಿಸಿದ್ದರು. ಪರಿಣಾಮವಾಗಿ ಜನತಾ ಸಮಾಲೋಚನಾ ತಂಡ (ಪಿಸಿಜಿ) ರಚಿಸಲಾಗಿತ್ತು.

2007: ಮಂಗಳೂರಿನ ತಣ್ಣೀರುಬಾವಿ ತೀರದ ಸಮೀಪ ಕಡಲಲ್ಲಿ ಎಂಟು ದಿನಗಳಿಂದ ವಾಲಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ಚೀನಾ ಮೂಲದ ಹಡಗು `ಚಾಂಗ್-ಲೆ-ಮೆನ್' ಕಡೆಗೂ ಈದಿನ  ಬೆಳಿಗ್ಗೆ ಯಶಸ್ವಿಯಾಗಿ ಆಳ ಸಮುದ್ರಕ್ಕೆ ಇಳಿಯಿತು. ಹಡಗನ್ನು ಸಮತೋಲನಕ್ಕೆ ತರುವ ನಿರಂತರ ಆರು ದಿನಗಳ ಕಾರ್ಯಾಚರಣೆ ಹಿಂದಿನ ರಾತ್ರಿ ಯಶಸ್ವಿಯಾಗಿದ್ದು, ಸುಮಾರು 16 ಡಿಗ್ರಿ ವಾಲಿಕೊಂಡಿದ್ದ ಹಡಗು ಸಮಸ್ಥಿತಿಗೆ ಬಂದಿತ್ತು. ಧಾರಾಕಾರ ಮಳೆ ಸುರಿದದ್ದೂ ಸಮುದ್ರತೀರದಲ್ಲಿ ಮಟ್ಟ ಏರಿಕೆಗೆ ಕಾರಣವಾಗಿ ಹಡಗನ್ನು ಆಳಸಮುದ್ರಕ್ಕೆ ಇಳಿಸಲು ಅನುಕೂಲವಾಯಿತು. ಸಾಲ್ವೇಜ್ (ವಿಮೋಚನಾ) ತಂಡ, ಎನ್ ಎಂಪಿಟಿ ಸಿಬ್ಬಂದಿ ಹಾಗೂ ಯೋಜನಾ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿಯಿತು. ಒಟ್ಟು 28 ಪಯಣಿಗರೊಂದಿಗೆ 16,100 ಟನ್ ಹೊತ್ತು ಸೆ.6 ರಂದು ಮಂಗಳೂರಿನ ಎನ್ ಎಂಪಿಟಿಯಿಂದ ಹೊರಟ ಚಾಂಗ್-ಲೆ-ಮೆನ್ ಕೇವಲ ಏಳು ನಾಟಿಕಲ್ ಮೈಲ್ ದೂರದ ಯಾನದಲ್ಲೇ ವಾಲಲು ಆರಂಭಗೊಂಡ ಪರಿಣಾಮ ತಣ್ಣೀರುಬಾವಿ ತೀರ ಸಮೀಪ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು.

2007: ವಾಯವ್ಯ ಪಾಕಿಸ್ತಾನದ ಗುಡ್ಡಗಾಡು ಪ್ರದೇಶದ ಜಹನಾಬಾದ್ ಗ್ರಾಮದಲ್ಲಿನ ಬೃಹದಾಕಾರದ ಬುದ್ಧನ ಪ್ರತಿಮೆಯನ್ನು ಸ್ಫೋಟಿಸಲು ಶಂಕಿತ ತಾಲಿಬಾನ್ ಉಗ್ರರು ಯತ್ನಿದರು.    ಇದರಿಂದ ಪ್ರತಿಮೆಗೆ ಸ್ವಲ್ಪಪ್ರಮಾಣದ  ಹಾನಿಯಾಯಿತು. ಆಫ್ಘಾನಿಸ್ಥಾನ ಗಡಿಯಲ್ಲಿನ ಜಹನಾಬಾದ್ ಗ್ರಾಮವು ತಾಲಿಬಾನ್ ಪರ ಉಗ್ರರ ಪ್ರಬಲ  ಹಿಡಿತದಲ್ಲಿದೆ. 2001 ರಲ್ಲಿ ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನದಲ್ಲಿನ ಬೃಹದಾಕಾರದ ಬುದ್ಧನ ಪ್ರತಿಮೆಯನ್ನು ನಾಶಪಡಿಸಿದ್ದರು. ಪಾಕಿಸ್ಥಾನದಲ್ಲಿ ಇಂತಹ ಕೃತ್ಯಕ್ಕೆ ಉಗ್ರರು ಯತ್ನಿಸಿದ್ದು ಇದೇ ಮೊದಲ ಬಾರಿ. 

2007: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಂಸದರು ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರರಾದರು. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರತಿಭಾ ಪಾಟೀಲ್ ಅವರಿಂದ ಸುಷ್ಮಾ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಸಚಿವರಾದ ಪಿ. ಚಿದಂಬರಂ, ಶರದ್ ಪವಾರ್, ಮಣಿಶಂಕರ್ ಅಯ್ಯರ್ ಅವರಿಗೂ ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ಮಾಡಲಾಯಿತು.

2007: ಐತಿಹಾಸಿಕ ಕೆಂಪು ಕೋಟೆ ಮೇಲೆ ಏಳು ವರ್ಷಗಳ ಹಿಂದೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೋಯ್ಬಾ ಉಗ್ರ ಮೊಹಮ್ಮದ್ ಅಷ್ಫಾಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿದ್ದ ಇತರ ಆರು ಜನ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಷ್ಫಾಕ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಹಾಗೂ ಪಿ.ಕೆ. ಭಾಸಿನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ದೆಹಲಿಯ ಕೆಂಪು ಕೋಟೆ ಮೇಲೆ 2000ನೇ ಇಸ್ವಿಯ ಡಿಸೆಂಬರ್ 22ರಂದು ದಾಳಿ ಮಾಡಿ ಇಬ್ಬರು ಸೈನಿಕರು ಸೇರಿದಂತೆ ಮೂವರನ್ನು ಹತ್ಯೆಗೈದ ಆರೋಪದ ಮೇಲೆ ಅಷ್ಫಾಕನನ್ನು ಬಂಧಿಸಲಾಗಿತ್ತು. 

2006: ಬೆಂಗಳೂರು ಮಹಾನಗರ ಪಾಲಿಕೆ, ಏಳು ನಗರಸಭೆಗಳು ಮತ್ತು ಒಂದು ಪುರಸಭೆಯನ್ನು ಸೇರಿಸಿ `ಗ್ರೇಟರ್ ಬೆಂಗಳೂರು' ರಚಿಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿತು. ರಾಜ್ಯೋತ್ಸವದ ಒಳಗಾಗಿ ಇದಕ್ಕೆ ಸ್ಪಷ್ಟ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು.

2006: ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದ ಮೊತ್ತ ಮೊದಲ ಸಾಧನೆಯನ್ನು ವಿಶ್ವಕ್ಕೆ ಎತ್ತಿ ತೋರಿಸಿದ ಖ್ಯಾತ ಕ್ರಿಕೆಟ್ ಅಂಕಿ ಅಂಶ ತಜ್ಞ ಡಾ. ವಸಂತ ನಾಯಕ್ (82) ಇಂಗ್ಲೆಂಡಿನಲ್ಲಿ ತಮ್ಮ ನಿವಾಸದ್ಲಲಿಯೇ ನಿಧನರಾದರು. 1987-88ರಲ್ಲಿ ಸಚಿನ್ ಮತ್ತು ವಿನೋದ ಕಾಂಬ್ಳಿ ಅವರು ಶಾಲಾ ಮಟ್ಟದ ಪಂದ್ಯವೊಂದರಲ್ಲಿ ವಿಶ್ವ ದಾಖಲೆ ಮಟ್ಟದ ಜೊತೆಯಾಟ ಆಡಿದ್ದರು. ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಮುಂಬೈನ ಈ ಇಬ್ಬರು ಬ್ಯಾಟ್ಸ್ ಮನ್ನರು 664 ರನ್ ಸೇರಿಸಿದ್ದರು. ಇದು ತೆಂಡೂಲ್ಕರ್ ಕ್ರಿಕೆಟ್ ಜೀವನದ ಮೊತ್ತ ಮೊದಲ ದಾಖಲೆ. ಇದನ್ನು ವಿಶ್ವದ ಗಮನಕ್ಕೆ ಬರುವಂತೆ ಮಾಡಿದ್ದ ವಸಂತ್ ನಾಯಕ್. ಅವರ ಪ್ರಯತ್ನದ ಫಲವಾಗಿ ತೆಂಡೂಲ್ಕರ್ ಅವರ ಈ ಸಾಧನೆ ವಿಸ್ಡನ್ ಕ್ರಿಕೆಟರ್ಸ್ ಅಲ್ಮೆನಾಕ್ ಮತ್ತು ಗಿನ್ನೆಸ್ ವಿಶ್ವದಾಖಲೆ ಪುಸ್ತಕಗಳಿಗೆ ಸೇರ್ಪಡೆಯಾಗಿತ್ತು. ಹೀಗಾಗಿಯೇ ವಸಂತ್ ವಿಶ್ವದ ಖ್ಯಾತ ಅಂಕಿ ಅಂಶ ತಜ್ಞರ ಸಾಲಿನಲ್ಲಿ ಸ್ಥಾನ ಪಡೆದಿದ್ದರು. `ಹಿಸ್ಟರಿ ಆಫ್ ವರ್ಲ್ಡ್ ಕ್ರಿಕೆಟ್' ಪುಸ್ತಕವು ಕ್ರಿಕೆಟ್ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ. ವೃತ್ತಿಯಿಂದ ವೈದ್ಯರಾಗಿದ್ದರೂ ಕ್ರಿಕೆಟಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವಸಂತ್ 1996ರಲ್ಲಿ ಇಂಗ್ಲೆಂಡಿಗೆ ವಲಸೆ ಹೋಗಿ ಅಲ್ಲಿಯೇನೆಲಸಿದ್ದರು.

2006: ದುರಂತ ಸಂಭವಿಸಿದ 22 ವರ್ಷಗಳ ಬಳಿಕ ಕಟ್ಟ ಕಡೆಯ ಪರಿಹಾರ ಚೆಕ್ಕನ್ನು ಭೋಪಾಲಿನ ಯೂನಿಯನ್ ಕಾರ್ಬೈಡ್ ವಿಷಾನಿಲ ದುರಂತದ ಸಂತ್ರಸ್ತನಿಗೆ ನೀಡಲಾಯಿತು. ಇದರೊಂದಿಗೆ ವಿಷಾನಿಲ ದುರಂತ ಸಂತ್ರಸ್ತರಿಗೆ ಪರಿಹಾರ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿತು. ಸಂತ್ರಸ್ತರಿಗೆ ಒಟ್ಟು 3040 ಕೋಟಿ ರೂಪಾಯಿಗಳನ್ನು 5.74 ಲಕ್ಷ ಸಂತ್ರಸ್ತರಿಗೆ ಎರಡು ಕಂತುಗಳಲ್ಲಿ ವಿತರಿಸಲಾಯಿತು. ಪ್ರತಿಯೊಬ್ಬ ಸಂತ್ರಸ್ತನಿಗೆ ಸರಾಸರಿ 50,000 ರೂಪಾಯಿ ಪರಿಹಾರ ನೀಡಲಾಯಿತು. 1987ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಮತ್ತು ಭಾರತ ಸರ್ಕಾರದ ಮಧ್ಯೆ ಅಂತಿಮಗೊಳಿಸಲಾದ ಒಪ್ಪಂದದ ಮೇರೆಗೆ ಕಂಪೆನಿಯಿಂದ ಪಾವತಿ ಮಾಡಲಾದ 470 ದಶಲಕ್ಷ ಡಾಲರ್ ಹಣದಿಂದ ಈ ಪರಿಹಾರಗಳನ್ನು ನೀಡಲಾಯಿತು. ಕೇಂದ್ರ ಸರ್ಕಾರವು ಮಸೂದೆಯೊಂದರ ಮೂಲಕ ಸಂತ್ರಸ್ತರ ಪರವಾಗಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ವಿರುದ್ಧ ಖಟ್ಲೆ ಹೂಡುವ ಹಕ್ಕು ಪಡೆದುಕೊಂಡಿತ್ತು. ಕಾರ್ಪೊರೇಷನ್ ಹಣಸಂದಾಯ ಮಾಡಿದ ಬಳಿಕವೂ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಲು 6 ವರ್ಷಗಳು ಬೇಕಾದವು. 1984ರ ಡಿಸೆಂಬರ್ 3ರ ರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸೋರಿಕೆಯಾದ ವಿಷಾನಿಲ ನಗರದ 36 ಮತ್ತು 56ನೇ ವಾರ್ಡುಗಳಲ್ಲಿ ಹರಡಿ 5.72 ಲಕ್ಷಕ್ಕೂ ಹೆಚ್ಚು ಮಂದಿ ನಿವಾಸಿಗಳು ತೀವ್ರ ತೊಂದರೆಗೆ ಈಡಾದರು. ಸಹಸ್ರಾರು ಮಂದಿ ಅಸು ನೀಗಿದರೆ ಬಹಳಷ್ಟು ಮಂದಿಯ ಆರೋಗ್ಯ ಹದಗೆಟ್ಟಿತು.

2006: ಉಡುಪಿ ತಾಲ್ಲೂಕಿನ ಹಳ್ಳಿಹೊಳೆ ಬಳಿಯ ಬೊಮ್ಮನಹಳ್ಳದ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಪೊಲೀಸರ ಮಧ್ಯ ಗುಂಡಿನ ಚಕಮಕಿ ನಡೆಯಿತು. ಆದರೆ ಯಾವುದೇ ಸಾವು ನೋವು ಸಂಭವಿಸಲಿಲ್ಲ.

2006: ನವಜಾತ ಶಿಶುಗಳಲ್ಲಿ ಹೃದಯದ ತೊಂದರೆಯ ಬಗ್ಗೆ ಸಂಶೋಧನೆ ನಡೆಸಿದ ಭಾರತೀಯ ಮೂಲದ ವಿಜ್ಞಾನಿ ಮಾಲಾ ಆರ್. ಚಿನಾಯ್ ಅವರನ್ನು 2006ನೇ ಸಾಲಿನ ಪ್ರತಿಷ್ಠಿತ `ಸೈನ್ಸ್ ಸ್ಪೆಕ್ಟ್ರಮ್ ಟ್ರಯಲ್ ಬ್ಲೇಜರ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ವಾಷಿಂಗ್ಟನ್ನ ಪೆನ್ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚಿನಾಯ್ ಟ್ರಯಲ್ ಬ್ಲೇಜರ್ ಪ್ರಶಸ್ತಿ ಪಡೆದ ಐವರು ಭಾರತೀಯ ಮೂಲದ ವಿಜ್ಞಾನಿಗಳಲ್ಲಿ ಒಬ್ಬರು. ವೀಣಾ ರಾವ್, ಶರ್ಮಿಳಾ ಮಜುಂದಾರ್, ಸತ್ಯೇಂದ್ರ ಗುಪ್ತ, ಮತ್ತು ಸತೀಶ ಗದ್ದೆ ಪ್ರಶಸ್ತಿ ಪಡೆದ ಇತರ ಪ್ರತಿಭಾವಂತರು.

2006: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ ಈ ಹಿಂದೆ ದಾಖಲಾಗಿದ್ದ ಅತಿ ಹೆಚ್ಚು ಬೆಲೆಯಿಂದ 16 ಡಾಲರುಗಳಷ್ಟು ಭಾರಿ ಇಳಿಕೆ ಕಂಡಿತು. ಇದು ಕಳೆದ 16 ವರ್ಷಗಳಲ್ಲಿನ ಅತಿ ಹೆಚ್ಚಿನ ಕುಸಿತ ಎಂದು ಸಿಂಗಪುರ ಮಾರುಕಟ್ಟೆ ಮೂಲಗಳು ತಿಳಿಸಿದವು. ಆಗಸ್ಟ್ 8ರಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಬ್ಯಾರೆಲ್ಲಿಗೆ 78.65 ಡಾಲರ್ ಇತ್ತು. ಇದು ಈಗ 63 ಡಾಲರಿಗೆ ಕುಸಿದಿದೆ. 1990ರಲ್ಲಿ ಕುವೈಟನ್ನು ಇರಾಕ್ ಆಕ್ರಮಿಸಿದ್ದ ಸಂದರ್ಭ 40 ಡಾಲರುಗಳಷ್ಟಿದ್ದ ತೈಲ ಬೆಲೆ 16 ಡಾಲರಿಗೆ ಕುಸಿದುದೇ ಇದುವರೆಗಿನ ಅತಿ ಹೆಚ್ಚಿನ ಇಳಿಕೆಯಾಗಿತ್ತು.

2000: ಅಯೋಡೀಕೃತವಲ್ಲದ ಉಪ್ಪಿನ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತು.

1996: ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡಿಸಲಾಯಿತು.

1992: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆಗೆ ಕೇಂದ್ರ ಸರ್ಕಾರದ ನಿರ್ಧಾರ.

1984: ಸ್ವಾತಂತ್ರ್ಯ ಸೇನಾನಿ ಸ್ವಾಮಿ ಬ್ರಹ್ಮಾನಂದ (4-12-1894ರಿಂದ 13-9-1984)ಅವರು ನಿಧನರಾದರು. ಉತ್ತರ ಪ್ರದೇಶದ ಹಮೀರಪುರದಲ್ಲಿ ಜನಿಸಿದ್ದ ಬ್ರಹ್ಮಾನಂದ ಅವರು 1918ರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ, ದಂಡಿ ಸತ್ಯಾಗ್ರಹ, ಅಸಹಕಾರ ಚಳವಳಿ ಹಾಗೂ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ಸೇರಿದ್ದರು. ದುರ್ಬಲರ ಏಳಿಗೆಗಾಗಿಯೂ ದುಡಿದ ಬ್ರಹ್ಮಾನಂದ ಅವರು ಬ್ರಹ್ಮಾನಂದ ಇಂಟರ್ ಕಾಲೇಜು (1943), ಬ್ರಹ್ಮಾನಂದ ಮಹಾ ವಿದ್ಯಾಲಯ (1960) ಇತ್ಯಾದಿ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದರು.

1971: ವಿಶ್ವ ಹಾಕಿ ಸಂಘದ ರಚನೆಯಾಯಿತು.

1954: ಸಾಹಿತಿ ನಾಗತ್ನಕುಮಾರಿ ಬಿ.ಎಸ್. ಜನನ.

1943: ಸಾಹಿತಿ ಕೆ.ಪಿ. ಪುತ್ತೂರಾಯ ಜನನ.

1936: ವಿದ್ವಾಂಸ, ಭಾಷಾ ವಿಜ್ಞಾನಿ, ಪ್ರಾಧ್ಯಾಪಕ ಡಾ. ಬಿ.ನಂ. ಚಂದ್ರಯ್ಯ ಅವರು ನಂಜುಂಡಾರಾಧ್ಯ- ಅಕ್ಕ ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಕೆಸ್ತೂರಿನಲ್ಲಿ ಜನಿಸಿದರು., ಕಾದಂಬರಿ, ಖಂಡಕಾವ್ಯ, ಜೀವನಚರಿತ್ರೆ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಚಂದ್ರಯ್ಯ ಅವರಿಗೆ ಡಾ. ಜ.ಚ.ನಿ. ವಿದ್ಯಾಸಂಸ್ಥೆಯ ಭಾರತೀಯ ಭಾಷಾ ವಿಜ್ಞಾನಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ದೇವಾಂಗ ಸಂಸ್ಥಾನ ಮಠದ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ಅಲಹಾಬಾದ್ ಸಂಸ್ಥೆಯಿಂದ ಸಾಹಿತ್ಯ ಮಹೋಪಾಧ್ಯಾಯ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಲಭಿಸಿವೆ.

1934: ಸಾಹಿತಿ ರೋಹಿತ ದಾಸಮಹಾಲೆ ಜನನ.

1929: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಅವರು ತಮ್ಮ ನಿರಶನ ಸತ್ಯಾಗ್ರಹದ 63ನೇ ದಿನ ಲಾಹೋರ್ ಸೆರೆಮನೆಯಲ್ಲಿ ಅಸುನೀಗಿದರು. ಸೆರೆಮನೆಯಲ್ಲಿನ ನಿಕೃಷ್ಠ ಪರಿಸ್ಥಿತಿ ಹಾಗೂ ವಿಚಾರಣಾಧೀನ ರಾಜಕೀಯ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಪ್ರತಿಭಟಿಸಿ ಸೆರೆಮನೆಯೊಳಗೇ ಅವರು ಉಪವಾಸ ಆರಂಭಿಸಿದ್ದರು. ಅವರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕಲ್ಕತ್ತಕ್ಕೆ (ಇಂದಿನ ಕೋಲ್ಕತ್ತಾ) ರೈಲಿನಲ್ಲಿ ಒಯ್ಯುವಾಗ ಪ್ರತಿ ನಿಲ್ದಾಣದಲ್ಲೂ ಸಹಸ್ರಾರು ಮಂದಿ ನೆರೆದು ತಮ್ಮ ಗೌರವ ಅರ್ಪಿಸಿದರು. ಕಲ್ಕತ್ತದದಲ್ಲಿ 6 ಲಕ್ಷ ಮಂದಿ ಅವರ ಅಂತ್ಯ ಸಂಸ್ಕಾರ ಮೆರವಣಿಗೆಯಲ್ಲಿ ಪಾಲ್ಗೊಂಡರು.

1922: ಲಿಬಿಯಾದ ಎಲ್ ಅಜೀಜಿಯಾದಲ್ಲಿ 136.4 ಡಿಗ್ರಿ ಫ್ಯಾರನ್ ಹೀಟ್ ಅಥವಾ 58 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ದಾಖಲಾಯಿತು. ಇದು ಗರಿಷ್ಠ ದಾಖಲೆಯ ಉಷ್ಣತೆ.

1906: ಯುರೋಪಿನಲ್ಲಿ ಮೊದಲ ವಿಮಾನ ಹಾರಾಟ ನಡೆಯಿತು.

1893: ಪ್ರಾರ್ಥನಾ ಸಮಾಜದ ಸ್ಥಾಪಕರಲ್ಲಿ ಒಬ್ಬರಾದ ಮಾಮಾ ಪರಮಾನಂದ ನಿಧನ.

1857: ಅಮೆರಿಕದ ಉತ್ಪಾದಕ ಹಾಗೂ ದಾನಿ ಮಿಲ್ಟನ್ ಸ್ನಾವೆಲ್ ಹರ್ಷ್ (1857-1945) ಜನ್ಮದಿನ. ಇವರು ಸ್ಥಾಪಿಸಿದ ಹರ್ಷ್ ಚಾಕೋಲೆಟ್ ಕಾರ್ಪೊರೇಷನ್ ಜಗತ್ತಿನಾದ್ಯಂತ ಚಾಕೋಲಟನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

1813: ಡೇನಿಯಲ್ ಮ್ಯಾಕ್ ಮಿಲನ್ (1813-57) ಜನ್ಮದಿನ. ಸ್ಕಾಟ್ಲೆಂಡಿನ ಪುಸ್ತಕ ವ್ಯಾಪಾರಿ ಹಾಗೂ ಪ್ರಕಾಶಕರಾದ ಇವರು 1843ರಲ್ಲಿ ಮ್ಯಾಕ್ ಮಿಲನ್ ಅಂಡ್ ಕಂಪೆನಿ ಪುಸ್ತಕದ ಅಂಗಡಿಯನ್ನು ಸ್ಥಾಪಿಸಿದರು. ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಕಾಶನ ಕಂಪೆನಿಗಳಲ್ಲಿ ಒಂದಾಗಿ ಬೆಳೆಯಿತು.

1788: ನ್ಯೂಯಾರ್ಕಿಗೆ ಅಮೆರಿಕದ ರಾಜಧಾನಿ ಪಟ್ಟ ಲಭಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement