My Blog List

Thursday, December 4, 2008

ಸಮುದ್ರ ಮಥನ 13: ಒಳ್ಳೆಯದೆಂಬುದು ಪ್ರದರ್ಶನ ಕಲೆಯಲ್ಲ

ಸಮುದ್ರ ಮಥನ 13: ಒಳ್ಳೆಯದೆಂಬುದು

ಪ್ರದರ್ಶನ ಕಲೆಯಲ್ಲ


ಎಷ್ಟು ಬೇಕೋ ಅಷ್ಟೇ ಮಾತು. ಆ ಮಾತಾದರೂ ಎಂತಹುದ್ದು ಎಂದರೆ ಕೇವಲ ಕೆಲಸಕ್ಕೆ ಬರುವ ಮಾತು. ಟೈಂಪಾಸಿಗಾಗಿ ಎಂದು ಮಾತಾಡುತ್ತಾ ಕೂರುವ ಪರಿಪಾಠವಿರುವುದಿಲ್ಲ. ಹೀಗೆಲ್ಲ ಬಹಳ, ಬಹಳ ಆಗಿಹೋದವರ ಕುಲದಲ್ಲಿ ರಾಮ ಅವತರಿಸಿದ. 

ಪರಂಪರೆಯಿಂದ ಬಂದ ನೋಟ. ಸದ್ವಿಚಾರ, ಸದ್ಭಾವನೆ, ಸದಾಚಾರ, ಸತ್ಸಂಗತಿ - ಇವುಗಳು ಯಾರನ್ನೂ ಮೆಚ್ಚಿಸುವ ಸಲುವಾಗಿ ಇಲ್ಲ. ಅವು ಈ ಸೃಷ್ಟಿಯ 
ಮೂಲಸ್ವರೂಪಗಳು. ಒಂದೊಮ್ಮೆ ವ್ಯಕ್ತಿ ಆ ಎಲ್ಲವುಗಳಿಂದ ಕಂಗೊಳಿಸುತ್ತಿದ್ದಾನೆ ಎಂದಾದರೆ, ಅವನಿಗೆ ಈ ಸೃಷ್ಟಿ ವಿಸ್ತಾರದ ಮರ್ಮ ನಿಶ್ಚಿತವಾಗಿ ತಿಳಿದಿರುತ್ತದೆ. ಆಗ ಅವನು ಪ್ರಕೃತಿಯ ಹೆಜ್ಜೆಗೆ ಗೆಜ್ಜೆಯಾಗಿ ತನ್ನ ಜೀವಿತಾವಧಿಯನ್ನು ವಿನಿಯೋಗಿಸಿರುತ್ತಾನೆ. 

ಅಂತಹವರ ನಡೆ-ನುಡಿಗಳ ಬಗೆಗೆ ಅಧ್ಯಯನ ಮಾಡಬೇಕು. ಅವರು ಹಟಕ್ಕೆ ಬಿದ್ದವರಾಗಿರುತ್ತಾರೆ. ಅದು ಭಂಡ ಧೈರ್ಯದಿಂದ ಬಂದ ಮೊಂಡು ಹಟವಾಗಿರುವುದಿಲ್ಲ.

 ಒಂದು ಕಾರ್ಯವನ್ನು ಮಾಡಬೇಕು ಎಂದು ತೀರ್ಮಾನಿಸಿದರೆ ಅದು ಆಗಿಯೇ ತೀರಬೇಕು. ಎಷ್ಟೇ ಅಡೆತಡೆಗಳು ಬಂದು, ಉಹುಂ! ಇನ್ನು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ ಅನಿಸಿದರೂ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ.

 ಏಕೆಂದರೆ ಆ ಹಟ ಅವರ ಸ್ವಂತದ್ದೇನನ್ನೋ ಮಾಡುವ ಸಲುವಾಗಿ ಬಂದಂದ್ದಾಗಿರುವುದಿಲ್ಲ. ಪ್ರಕೃತಿಯ ಆಜ್ಞಾಪಾಲಕರಾಗಿ, ಅದೇ ಪ್ರಕೃತಿಯ ಪ್ರಸಾದವೆಂಬಂತೆ ಆ ಹಟವನ್ನು ಧರಿಸಿರುತ್ತಾರೆ. ಹಾಗಿರುವ ಕಾರಣದಿಂದ ಅವರ ಮರಣವೂ ಅದರ ಸಾಧನೆಗೆ ಅಡ್ಡ ಬರುವುದಿಲ್ಲ. ಅದರ ಸಾಧನೆಗೆ ಆಗಲೇ ಅವರ ಉತ್ತರಾಧಿಕಾರಿ ಸಿದ್ಧನಾಗಿ ನಿಂತಿರುತ್ತಾನೆ. ಈ ಅಂಶವನ್ನು ನಾವೂ ನಮ್ಮ ಮಕ್ಕಳನ್ನು ಪಡೆಯುವ, ಬೆಳೆಸುವ ಹಂತದಲ್ಲಿ ಪರಿಗಣಿಸಿದರೆ ಹೇಗಿರುತ್ತದೆ ಎಂಬುದರ ಬಗ್ಗೆ ಗಹನವಾದ ಯೋಚನೆ ಆಗಬೇಕಿದೆ.

ಅಂತಹ ಸಮರ್ಥರು ಒಂದೊಮ್ಮೆ ದೊಡ್ಡ ಅಧಿಕಾರದಲ್ಲಿದ್ದರೆ 'ಯಥಾಪರಾಧ ದಂಡಾನಾಂ' ಆಗಿರುತ್ತಾರೆ ಮತ್ತು ಆಗಿರಲೇಬೇಕು. ಅಂದರೆ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಡಬೇಕು. ತಪ್ಪಿತಸ್ಥ ಇನ್ನೆಂದೂ ಮೇಲೇಳಬಾರದು, ಹಾಗೆಯೇ ಕೊರಗಿ-ಕೊರಗಿ ಸಾಯಬೇಕು ಎಂಬ ರೀತಿಯ ಶಿಕ್ಷೆ ಕೊಡಬಾರದು. ಅರೆಬೆಂದದ್ದರಿಂದ ತಪ್ಪಾಗಿದೆ. ಪೂರ್ತಿ ಬೇಯುವಂತೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ದಂಡದ ಪ್ರಯೋಗ ಆಗುವಾಗ ಭಾವನೆಗಳನ್ನು ಹತೋಟಿಯಲ್ಲಿಡದೇ, ವಿವೇಚನೆಯನ್ನು ಕೈಬಿಟ್ಟು, ಉದ್ರೇಕದಿಂದ ವರ್ತಿಸಿದರೆ ಆಗಬೇಕಾದ ಕೆಲಸ ಕೆಡುತ್ತದೆ. ತಪ್ಪು ತಪ್ಪೇ. ಅದರಲ್ಲಿ ಸಂಶಯವಿಲ್ಲ. ಆದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶವಿರಬೇಕಲ್ಲ. ಅದು ದಂಡನೆ ಕೊಡಲಿ ಎಂಬುದು ಆಶಯ.

ಇಂದಿನ ದಿನಮಾನದಲ್ಲಿ ಬೊಕ್ಕಸ ತುಂಬುವ, ದೇಶದ ವ್ಯಾಪ್ತಿಯನ್ನು ವಿಸ್ತರಿಸುವ ವಿಚಾರ ಶಂಕೆಗೆ ಆಸ್ಪದ ಕೊಡುತ್ತದೆ. ಅಲ್ಲಿ ಹಪಹಪಿ ಎದ್ದು ಕಾಣುತ್ತದೆ. ಹಾಗದು ಇರಬೇಕಾದ ಅನಿವಾರ್ಯತೆಯೇನೂ ಇಲ್ಲ. ಹಾಗೆ ಭಾವಿಸುವುದು ನಮ್ಮ ಆತಂಕವನ್ನು ತೋರಿಸುತ್ತದೆ. 

ಅರಿತವರಿಗೆ ಮುಂದೆ ಯಾರೇನು ಮಾಡುತ್ತಾರೋ!? ಎಂಬ ಆತಂಕ ಇರುವುದಿಲ್ಲವಾದ್ದರಿಂದ ಎಲ್ಲವನ್ನೂ ಸಂಗ್ರಹಿಸಿ, ಭದ್ರವಾಗಿಸುವ ಹಪಹಪಿಗೆ ಒಳಗಾಗುವುದಿಲ್ಲ. ಅವರಲ್ಲಿ ವಿವೇಚನೆ ಬಲವಾಗಿ ಬೇರುಬಿಟ್ಟಿರುತ್ತದೆ. ಧನಕನಕಾದಿ ಸಂಪತ್ತಿರುವುದು ವಿನಿಯೋಗಕ್ಕಾಗಿ. ವಿನಿಯೋಗವಾಗಲೇಬೇಕು ಎಂಬುದು ಪ್ರಕೃತಿಯ ಆಶಯವಾಗಿದ್ದರೆ ಅದು ಒದಗಿ ಬಂದೇಬರುತ್ತದೆ. ಹಾಗೆ ಬರಲು ತಮಗೊಂದಿಷ್ಟು ಜವಾಬ್ದಾರಿಗಳನ್ನು ಅದೇ ಪ್ರಕೃತಿ ವಹಿಸಿದೆ. ಅದನ್ನು ನಿರ್ವಹಿಸಿದರೆ ಆಯಿತೆಂದು ಹಗುರಾಗಿರುತ್ತಾರೆ. ಇನ್ನು ದೇಶದವನ್ನು ವಿಸ್ತರಿಸುವುದೂ ಹಾಗೆಯೇ. 

ಕಡೆಯದಾಗಿ ಮಾತೊಂದನ್ನು ಹೇಳಲೇಬೇಕು. ಅವರ ಮಿತ ಮಾತುಗಾರಿಕೆಯ ಬಗೆಗೆ. ಎಷ್ಟು ಬೇಕೋ ಅಷ್ಟೇ ಮಾತು. ಆ ಮಾತಾದರೂ ಎಂತಹುದ್ದು ಎಂದರೆ ಕೇವಲ ಕೆಲಸಕ್ಕೆ ಬರುವ ಮಾತು. ಟೈಂಪಾಸಿಗಾಗಿ ಎಂದು ಮಾತಾಡುತ್ತಾ ಕೂರುವ ಪರಿಪಾಠವಿರುವುದಿಲ್ಲ.

ಹೀಗೆಲ್ಲ ಬಹಳ, ಬಹಳ ಆಗಿಹೋದವರ ಕುಲದಲ್ಲಿ ರಾಮ ಅವತರಿಸಿದ. ವಿಮಾನ ಇಳಿಯಲು ವಿಮಾನ ನಿಲ್ದಾಣವನ್ನೇ ಆಯ್ದುಕೊಂಡಂತೆ ರಾಮ ತನ್ನ ಹುಟ್ಟಿಗೆ ಸೂರ್ಯವಂಶವನ್ನೇ ಆಯ್ದುಕೊಂಡ. ನಿಮ್ಮ ಸಂತತಿಯೂ ಹೀಗೆಲ್ಲ ಇರಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ, ಇಂದಿನಿಂದಲೇ ಇನಿತಿನಿತಾದರೂ ತಯಾರಾಗಬಹುದೇ? ಹಾಗಾಗಲು ಬಯಸುವವರಿಗೆ ಅನಂತಾನಂತ ಆಶೀರ್ವಾದಗಳು. 

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
 

No comments:

Advertisement