My Blog List

Wednesday, January 14, 2009

ಇಂದಿನ ಇತಿಹಾಸ History Today ಜನವರಿ 14

ಇಂದಿನ ಇತಿಹಾಸ

ಜನವರಿ 14

1996ರಿಂದ 2006ರವರೆಗೆ ಕೈಗೊಂಡ ಉಪಗ್ರಹಗಳ ಸಮೀಕ್ಷೆಯಿಂದ ದಕ್ಷಿಣ ಧ್ರುವದಲ್ಲಿ (ಅಂಟಾರ್ಕ್ಟಿಕ) ಮಂಜು ಕರಗುವ ಪ್ರಮಾಣ ಶೇ 75ರಷ್ಟು ಹೆಚ್ಚಿರುವುದು ಬೆಳಕಿಗೆ ಬಂದಿತು. ನೀರ್ಗಲ್ಲುಗಳು ಸಮುದ್ರದತ್ತ ಸರಿಯುವ ಪ್ರಮಾಣವೂ ಹೆಚ್ಚಿದೆ ಅಧ್ಯಯನ ಹೇಳಿತು.

2008: 1996ರಿಂದ 2006ರವರೆಗೆ ಕೈಗೊಂಡ ಉಪಗ್ರಹಗಳ ಸಮೀಕ್ಷೆಯಿಂದ ದಕ್ಷಿಣ ಧ್ರುವದಲ್ಲಿ (ಅಂಟಾರ್ಕ್ಟಿಕ) ಮಂಜು ಕರಗುವ ಪ್ರಮಾಣ ಶೇ 75ರಷ್ಟು ಹೆಚ್ಚಿರುವುದು ಬೆಳಕಿಗೆ ಬಂದಿತು. ನೀರ್ಗಲ್ಲುಗಳು ಸಮುದ್ರದತ್ತ ಸರಿಯುವ ಪ್ರಮಾಣವೂ ಹೆಚ್ಚಿದೆ ಅಧ್ಯಯನ ಹೇಳಿತು. ಕಳೆದ ಒಂದು ದಶಕದಲ್ಲಿ ಸಮುದ್ರದ ಮಟ್ಟವೂ ಏರಿದೆ. 20ನೇ  ಶತಮಾನದಲ್ಲಿ ಸಮುದ್ರ ಮಟ್ಟ ಏರಿಕೆ ಪ್ರಮಾಣ ಪ್ರತಿವರ್ಷ 1.8 ಮಿ.ಮೀ. ಇದ್ದರೆ, ಈ ದಶಕದಲ್ಲಿ ಈ ಏರಿಕೆ ಪ್ರಮಾಣ ವರ್ಷವೊಂದಕ್ಕೆ 3.4 ಮಿ.ಮೀ.ನಷ್ಟು ಆಗಿದೆ. ಮಂಜುಗಡ್ಡೆ ಕರಗುವ ವೇಗ ಮುಂದಿನ ದಶಕದಲ್ಲಿ ಇನ್ನಷ್ಟು ಹೆಚ್ಚಬಹುದು ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಎರಿಕ್ ರಿಗ್ ನಾಟ್ ತಿಳಿಸಿದರು.

2008: ಪುತ್ತಿಗೆ ಪರ್ಯಾಯ ವಿರುದ್ಧ ಉಡುಪಿಯ ಹೆಚ್ಚವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ದಾವೆಯನ್ನು ನ್ಯಾಯಾಧೀಶ ಚಲುವಮೂರ್ತಿ ಅವರು ತಳ್ಳಿ ಹಾಕಿದರು. ಇದರಿಂದ `ಸುಗಮ' ಪರ್ಯಾಯಕ್ಕೆ ಎದುರಾಗಿದ್ದ ಕಾನೂನಿನ ತೊಡಕು ತತ್ಕಾಲಕ್ಕೆ ದೂರವಾಯಿತು. ಪೇಜಾವರ ಹಾಗೂ ಪುತ್ತಿಗೆ ಶ್ರೀಗಳು ನ್ಯಾಯಾಲಯದ ಆದೇಶವನ್ನು  ಸ್ವಾಗತಿಸಿದರು.

2008: ತನ್ನ ಚಂದಾದಾರರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಭಾರತೀಯ ಸಂಪರ್ಕ ನಿಗಮ ಲಿಮಿಟೆಡ್ (ಬಿಎಸ್ಸೆನ್ನೆಲ್) ನಿರ್ಧರಿಸಿತು. `ಇದರಿಂದ ದೇಶಾದ್ಯಂತ ಇರುವ 3.40 ಕೋಟಿ ಬಿಎಸ್ಸೆನ್ನೆಲ್ ಚಂದಾದಾರರಿಗೆ (ದೂರವಾಣಿ ಹೊಂದಿರುವವರಿಗೆ) ಲಾಭವಾಗಲಿದೆ' ಎಂದು ಕಂಪೆನಿಯ ಅಧ್ಯಕ್ಷ ಕುಲದೀಪ್ ಗೋಯಲ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲಿ ಪ್ರಕಟಿಸಿದರು. ಯೋಜನೆಯ ಫಲವಾಗಿ `ಬಿಎಸ್ಸೆನ್ನೆಲ್ ಚಂದಾದಾರರು ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಈಡಾದರೆ ಅಥವಾ ಮೃತಪಟ್ಟರೆ ಅವರಿಗೆ ರೂ.50,000ವರೆಗೆ ವಿಮಾ ಪರಿಹಾರ ದೊರೆಯುವುದು. ವಿಮೆ ಸೇವೆ ಒದಗಿಸುವ ಬಜಾಜ್-ಅಲಯನ್ಸ್ ಗೆ ಸ್ವತಃ ಬಿಎಸ್ಸೆನ್ನೆಲ್ ಪ್ರೀಮಿಯಮ್ ನೀಡಲಿದ್ದು, ಬಿಎಸ್ಸೆನ್ನೆಲ್ ಸ್ಥಿರ, ಮೊಬೈಲ್ (ಪ್ರೀ ಪೇಡ್ ಹಾಗೂ ಪೋಸ್ಟ್ ಪೇಡ್) ಹಾಗೂ ನಿಸ್ತಂತು (ಡಬ್ಲೂ ಎಲ್ ಎಲ್) ಬಳಕೆದಾರರು ವಿಮಾ ವ್ಯಾಪ್ತಿಗೆ ಒಳಪಡುತ್ತಾರೆ.

2008: ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಬ್ರಾಡ್ ಹಾಗ್ ಅವರು ತಮ್ಮ ಆಟಗಾರರ ವಿರುದ್ಧ ನಿಂದನೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ನೀಡಿದ್ದ ದೂರನ್ನು `ಟೀಮ್ ಇಂಡಿಯಾ' ಆಡಳಿತ ಹಿಂದಕ್ಕೆ ಪಡೆಯಿತು. ಸರಣಿಯ ಮುಂಬರುವ ಪಂದ್ಯಗಳು ಸುಗಮವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ಹಾಗ್ ವಿರುದ್ಧದ ದೂರನ್ನು ಹಿಂದೆ ಪಡೆಯಲಾಗಿದೆ ಎಂದು ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಪ್ರಕಟಿಸಿದರು.

2008: ಕೀನ್ಯಾದ ಅಧ್ಯಕ್ಷರಾಗಿ ಎಂ. ಕಿಬಾಕಿ ಅವರು ಪುನರಾಯ್ಕೆಗೊಂಡ ರೀತಿಯನ್ನು ವಿರೋಧಿಸಿ ವಿವಿಧ ಪಕ್ಷಗಳು  ಎರಡು ವಾರಗಳಿಂದ ನಡೆಸಿದ ಚಳವಳಿಯಲ್ಲಿ ಸತ್ತವರ ಸಂಖ್ಯೆ 600ಕ್ಕೆ ಏರಿತು. 

2007: ವಿಶ್ವದ ಬೃಹತ್ ಪರಿಹಾರ ಸಂಸ್ಥೆಗಳಾದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ತಮ್ಮ ಹಳೆಯ ಲಾಂಛನಗಳ ಜೊತೆಗೆ ಇನ್ನೊಂದು ನೂತನ ಲಾಂಛನ ಬಳಕೆ ಆರಂಭಿಸಿದವು. ಹಿಂದೆ ರೆಡ್ ಕ್ರಾಸ್ ಬಳಸುತ್ತಿದ್ದ ಕೆಂಪು ಬಣ್ಣದ ಕ್ರಾಸ್ ಮತ್ತು ರೆಡ್ ಕ್ರೆಸೆಂಟಿನ ಅರ್ಧ ಚಂದ್ರ ಲಾಂಛನಗಳ ಜೊತೆಗೆ ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಹರಳಿನ (ಕ್ರಿಸ್ಟಲ್) ಚಿತ್ರವಿರುವ ನೂತನ ಲಾಂಛನ ಬಳಕೆಗೆ ಬಂತು.

2007: ಹಿಂದಿ ಚಿತ್ರೋದ್ಯಮದಲ್ಲಿ ಬಹಳ ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ಡಿನ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಮದುವೆ ನಿಶ್ಚಿತಾರ್ಥವು ಮುಂಬೈಯಲ್ಲಿ ಸರಳ ಸಮಾರಂಭದಲ್ಲಿ ನೆರವೇರಿತು.

2007: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯ ಜ್ಞಾನ ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಕಡ್ಡಾಯಗೊಳಿಸುವ ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರ ಸಿದ್ಧ ಪಡಿಸಿತು.

2007: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಕೋನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಅಶೋಕ ಹಾಲಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಲಕೃಷ್ಣನ್ ಅವರಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಪ್ರಮಾಣ ವಚನ ಬೋಧಿಸಿದರು.

2007: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಮೊಮ್ಮಗ ಪ್ರಫುಲ್ ಮಾಧವ ಚಿಪ್ಲುಂಕರ್ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ರಸ್ತೆಗಳಲ್ಲಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪತ್ತೆ ಹಚ್ಚಿತು. ಮುಂಬೈಯ ಸರಸ್ ಬಾಗ್ ಉದ್ಯಾನದ ಬಳಿ ಪ್ರಫುಲ್ ಅವರನ್ನು ಪತ್ತೆ ಹಚ್ಚಿದ ಸೇನೆ ಗುರುತು ಖಾತರಿ ಪಡಿಸಿಕೊಂಡು ಪುನರ್ವಸತಿಗೆ ವ್ಯವಸ್ಥೆ ಮಾಡಿತು. ಇವರು ಸಾವರ್ಕರ್ ಪುತ್ರಿಯ ಮಗ. 

2007: ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್ ಯಧುವೇಂದ್ರ ವಸಿಷ್ಠ (39) ಉತ್ತರ ಪ್ರದೇಶದ ಘಾಜಿಯಾಬಾದಿನಲ್ಲಿ ಹೃದಯಾಘಾತದಿಂದ ನಿಧನರಾದರು. 1998ರ ಬ್ಯಾಂಕಾಂಕ್ ಮತ್ತು 2002ರ ಬುಸಾನ ಏಷ್ಯನ್ ಕ್ರೀಡಾಕೂಟಗಳಲ್ಲಿ ಎಫ್ -44 ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವಸಿಷ್ಠ 2000ದಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು.

2007: ಮೂಲ್ಕಿ ಪಟ್ಟಣದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ರಫೀಕ್ ಯಾನೆ ಮೂಲ್ಕಿ ರಫೀಕ್ ಉಡುಪಿ ರೈಲು ನಿಲ್ದಾಣದ ಬಳಿ ನಡೆದ ಪೊಲೀಸರ ಜೊತೆಗಿನ ಗುಂಡಿನ ಘರ್ಷಣೆಯಲ್ಲಿ ಹತನಾದ.

2006: ಬೆಂಗಳೂರಿನ ಸುರಭಾರತಿ ಸಂಸ್ಕತಿ ಮತ್ತು ಸಾಂಸ್ಕತಿಕ ಪ್ರತಿಷ್ಠಾನವು ಖ್ಯಾತ ಗಾಯಕ ಡಾ. ಎಂ. ಬಾಲಮುರಳಿಕೃಷ್ಣ ಅವರಿಗೆ ಸಂಗೀತ ರತ್ನಾಕರ ಹಾಗೂ ಕೆ. ನಾರಾಯಣ ಭಟ್ ಶಾಸ್ತ್ರ ರತ್ನಾಕರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

2006: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಈದಿನ ರಾತ್ರಿ ಸಹಸ್ರ ಚಂದ್ರದರ್ಶನ ಪೂರೈಸಿದರು. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹಿತ ಹಲವಾರು ಗಣ್ಯರು ಹಾಜರಿದ್ದರು.

1991: ಸಂಗೀತ ನಿರ್ದೇಶಕ ಚಿತ್ರಗುಪ್ತ ನಿಧನರಾದರು.

1977: ರೇಸಿಂಗ್ ಪಟು ನಾರಾಯಣ್ ಕಾರ್ತಿಕೇಯನ್ ಹುಟ್ಟಿದ ದಿನ. ಫಾರ್ಮ್ಯುಲಾ ಥ್ರೀ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆ ಇವರದು.

1969: ಮದ್ರಾಸ್ ರಾಜ್ಯಕ್ಕೆ ಅಧಿಕೃತವಾಗಿ ತಮಿಳುನಾಡು ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1954: ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಚಾಂಪಿಯನ್ ಬೇಸ್ ಬಾಲ್ ಆಟಗಾರ ಜೊ ಡೆಮಾಗ್ಗಿಯೊ ಅವರನ್ನು ಮದುವೆಯಾದರು.

1953: ವೈ.ಸಿ. ಭಾನುಮತಿ ಜನನ.

1950: ಕಲಾವಿದೆ ಪದ್ಮಜಾ ಪ್ರಕಾಶ್ ಜನನ.

1946: ಕಲಾವಿದ ರಾಮಕೃಷ್ಣಾಚಾರ್ ಜನನ.

1944: ಕಾಡಣ್ಣ ಹೊಸಟ್ಟಿ ಜನನ.

1942: ಕಲಾವಿದ ನಾಗಮಂಗಲಯ್ಯ ಜನನ.

1935: ಕಲಾವಿದೆ ಸುಶೀಲಮ್ಮ ಜನನ.

1930: ಕುಂದಾನಿ ಸತ್ಯನ್ ಜನನ.

1921: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ (ಪಾಪು) ಅವರು ಹಾವೇರಿ ತಾಲ್ಲೂಕಿನ ಕುರುಬಗೊಂಡಹಳ್ಳಿಯಲ್ಲಿ ಸಿದ್ದಲಿಂಗಪ್ಪ-ಮಲ್ಲಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಕಾನೂನು ಪದವಿ ಪಡೆದು ವಿಜಾಪುರದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಕಕ್ಷಿಗಾರರು ಸಿಗದೇ ಹೋದಾಗ ಮುಂಬೈಗೆ ಪಯಣ. ಅಲ್ಲಿ ಪತ್ರಿಕೋದ್ಯಮದ ಹುಚ್ಚು. ಕ್ಯಾಲಿಫೋರ್ನಿಯಾಕ್ಕೆ ತೆರಳಿ ಪತ್ರಿಕೋದ್ಯಮದ ಎಂಎಸ್ಸಿ ಮುಗಿಸಿ ಬಂದು ಪತ್ರಿಕಾರಂಗಕ್ಕೆ ಪ್ರವೇಶ. 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಇತ್ಯಾದಿ ಪತ್ರಿಕೆಗಳ ಸಂಪಾದಕತ್ವ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷಸ್ಥಾನ.  ಹಲವಾರು ಸಾಹಿತ್ಯ ಕೃತಿಗಳನ್ನೂ ಪಾಪು ರಚಿಸಿದ್ದು ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿದಳು- ಕಥಾಸಂಕಲನಗಳು, ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು - ಜೀವನ ಚರಿತ್ರೆ, ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು- ಪ್ರಬಂಧ ಸಂಕಲನ ಅವರ ಪ್ರಮುಖ ಕೃತಿಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭೆ ಸದಸ್ಯತ್ವ, 2003ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ ಎಸ್ ಆರ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಇತ್ಯಾದಿ ಗೌರವ-ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1920: ಕರ್ನಾಟಕ ಸಂಗೀತ ಕ್ಷೇತ್ರದ ಖ್ಯಾತ ಗಾಯಕ ಆರ್. ಕೆ. ಶ್ರೀಕಂಠನ್ ಅವರು ಕೃಷ್ಣ ಶಾಸ್ತ್ರಿಗಳು- ಸಣ್ಣಕ್ಕ ದಂಪತಿಯ ಮಗನಾಗಿ ರುದ್ರಪಟ್ಟಣದಲ್ಲಿ ಸಂಕ್ರಾಂತಿಯ ಈ ದಿನ ಜನಿಸಿದರು.

1918: ಕಲಾವಿದ ಮಲ್ಲಯ್ಯ ಸ್ವಾಮಿ ಜನನ.

1892: ಪ್ರೊಫೆಸರ್ ದಿನಕರ್ ಬಲವಂತ್ ದೇವಧರ್ (1892-1993) ಹುಟ್ಟಿದ ದಿನ. ಭಾರತೀಯ ಕ್ರಿಕೆಟಿನ  `ಹಿರಿಯಜ್ಜ' (ಗ್ರ್ಯಾಂಡ್ ಓಲ್ಡ್ ಮ್ಯಾನ್) ಎಂದೇ ಇವರು ಖ್ಯಾತರಾಗಿದ್ದಾರೆ.

1882: ಕುಟುಂಬ ಯೋಜನೆ, ಲೈಂಗಿಕ ಶಿಕ್ಷಣದ ಪಿತಾಮಹ ಆರ್.ಡಿ. ಕರ್ವೆ ಜನಿಸಿದರು.

1863: `ದಿ ಬೋಸ್ಟನ್ ವೀಕ್ಲಿ ಜರ್ನಲ್' ಮರದ ಪಲ್ಪಿನಿಂದ (ವುಡ್ ಪಲ್ಪ್) ತಯಾರಿಸಲಾದ ಕಾಗದದಲ್ಲಿ ಮುದ್ರಣಗೊಂಡಿತು. ಅಮೆರಿಕದ ಸುದ್ದಿ ಪತ್ರಿಕೆ ಈ ವಸ್ತುವಿನಲ್ಲಿ ಮುದ್ರಣಗೊಂಡದ್ದು ದಾಖಲಾದ ಮೊತ್ತ ಮೊದಲ ಘಟನೆ ಇದು.

1761: ಮರಾಠಾ ಸೇನೆಯು ಪಾಣಿಪತ್ತಿನಲ್ಲಿ ಆಕ್ರಮಣ ಎಸಗಿದ ಅಹಮದ್ ಶಹಾ ದುರ್ರಾನಿಯ ಸೇನೆಯನ್ನು ಎದುರಿಸಿತು. ಮೂರನೇ `ಪಾಣಿಪತ್ ಯುದ್ಧ'  ಎಂದೇ ಖ್ಯಾತಿ ಪಡೆದ ಈ ಭೀಕರ ಸಮರದಲ್ಲಿ ಮರಾಠಾ ಸೇನೆ ಭಾರೀ ಸೋಲು ಅನುಭವಿಸಿತು. ಇದರಿಂದ ಉಂಟಾದ ಅರಾಜಕತೆ ಭವಿಷ್ಯದಲ್ಲಿ ಬ್ರಿಟಿಷರ ಆಡಳಿತಕ್ಕೆ ದಾರಿ ಮಾಡಿಕೊಟ್ಟಿತು. 

1742: ಎಡ್ಮಂಡ್ ಹ್ಯಾಲಿ (1656-1742) ಹುಟ್ಟಿದ ದಿನ. ಖಗೋಳ ತಜ್ಞ ಹಾಗೂ ಗಣಿತ ತಜ್ಞನಾದ ಈತ ಕಂಡು ಹಿಡಿದ ಧೂಮಕೇತುವಿಗೆ ಈತನ ಹೆಸರನ್ನೇ ಇಡಲಾಗಿದೆ.

1551: ಚರಿತ್ರಕಾರ ಅಬುಲ್ ಫಝಲ್ (1551-1602) ಹುಟ್ಟಿದ. `ಐನ್-ಎ-ಅಕ್ಬರಿ' ಗ್ರಂಥದ     ಕರ್ತೃವಾದ ಈತ ಮೊಘಲ್ ಚಕ್ರವರ್ತಿ ಅಕ್ಬರನ ನಿಕಟವರ್ತಿ. ರಾಜಕುಮಾರ ಸಲೀಂ (ಜಹಾಂಗೀರ್) ಈತನನ್ನು ಕೊಲ್ಲಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement