Tuesday, January 13, 2009

ಇಂದಿನ ಇತಿಹಾಸ History Today ಜನವರಿ 13

ಇಂದಿನ ಇತಿಹಾಸ

ಜನವರಿ 13

ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

2008: ಸುಗುಣೇಂದ್ರ ತೀರ್ಥರು ದ್ವಂದ್ವಮಠ ಕೃಷ್ಣಾಪುರ ಮಠಾಧೀಶರಿಂದ ಶಿಷ್ಯರನ್ನು ಸ್ವೀಕರಿಸಿ ಅವರ ಮೂಲಕ ಪರ್ಯಾಯ ಪೀಠಾರೋಹಣ ಹಾಗೂ ಕೃಷ್ಣಪೂಜೆ ಮಾಡಿಸಬೇಕು ಎಂದು ಉಡುಪಿಯಲ್ಲಿ ನಡೆದ ಮಧ್ವಮಠಾಧೀಶರ ಮಹತ್ವದ ಸಭೆ ಒಕ್ಕೊರಲ ನಿರ್ಧಾರ ತೆಗೆದುಕೊಂಡಿತು. ಒಂದು ವೇಳೆ ಈ ಸಭೆಯ ನಿರ್ಣಯವನ್ನು ಪುತ್ತಿಗೆ ಶ್ರೀಗಳು ಒಪ್ಪದೇ ಇದ್ದಲ್ಲಿ ಜನವರಿ 15ರ ಮಧ್ಯಾಹ್ನದಿಂದ ಪೇಜಾವರ ಮಠದಲ್ಲಿ ಅಷ್ಟಮಠಗಳ ಆರು ಯತಿಗಳು ಕಠಿಣ ಉಪವಾಸ ಕೈಗೊಳ್ಳಬೇಕು ಎಂದು ಸಭೆ ತೀರ್ಮಾನಿಸಿತು.

2008: ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ತಾಂತ್ರಿಕ ದೋಷದ ಕಾರಣ ಸರಕು ಸಾಗಣೆ ಲಿಫ್ಟ್ ಕುಸಿದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯೆಲ್ಲದಕೆರೆಯ ಸೋಮಶೇಖರ್ (30) ಹಾಗೂ ಬೋರನಕುಂಟೆ ಗ್ರಾಮದ ಆರ್.ರಾಜಣ್ಣ (30) ಎಂಬ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತರಾದರು. ಇವರಿಬ್ಬರೂ ಚಿಕ್ಕಮಗಳೂರು ಮೂಲದ ಈ ಕಂಪೆನಿಯ ಕೋಳಿ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

2008:  ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ `ಡೆಕ್ಕನ್ ಒಡಿಸ್ಸಿ ಎಕ್ಸ್ ಪ್ರೆಸ್' ರೈಲು ಸೇರಿದಂತೆ ಒಟ್ಟು ಮೂರು ರೈಲುಗಳು ಸೇರಿದವು. 100 ವರ್ಷದ ಹಿಂದೆ ಸಂಚರಿಸುತ್ತಿದ್ದ ಉಗಿಯಂತ್ರದ  ರೈಲು ಹಾಗೂ `ಗಾಲಿಗಳ ಮೇಲೆ ಅರಮನೆ ` ರೈಲು ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಸಂಘ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಹ್ಯೂಸ್ಟನ್ನಿನಲ್ಲಿ ತಯಾರಿಸಿತು. ಅದರಲ್ಲಿ ಅತ್ಯಂತ ಐಷಾರಾಮಿ ಸೌಲಭ್ಯ ಹೊಂದಿರುವ `ಗೋಲ್ಡನ್ ಈಗಲ್ ಟ್ರಾನ್ಸಿಬ್ರೈನ್ ಎಕ್ಸ್ ಪ್ರೆಸ್' ರೈಲು ಮೊದಲನೆ ಸ್ಥಾನ ಪಡೆಯಿತು.  

2008: ಬಿಹಾರದ ಗಯಾ ಜಿಲ್ಲೆಯಲ್ಲಿ ಪೊಲೀಸರ ಗುಂಡೇಟಿಗೆ ಆರು ಮಂದಿ ನಕ್ಸಲೀಯರು ಹತರಾದರು. ಬೆಟ್ಟ ಪ್ರದೇಶದಲ್ಲಿ ನಕ್ಸಲೀಯರು ಅಡಗಿದ್ದಾರೆಂಬ ಖಚಿತ ಸುಳಿವಿನ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಆರು ನಕ್ಸಲೀಯರು ಬಲಿಯಾದರು ಎಂದು ಡಿ ವೈ ಎಸ್ ಪಿ ಬಲರಾಮ್ ಕುಮಾರ್ ಚೌಧರಿ ತಿಳಿಸಿದರು.

2008: ಪಶ್ಚಿಮ ಆಫ್ಘಾನಿಸ್ಥಾನದ ಕಾಬೂಲನ್ನು ತತ್ತರಿಸುವಂತೆ ಮಾಡಿದ ನಿರಂತರ ಹಿಮಪಾತ ಮತ್ತು ಚಳಿಗೆ ಕನಿಷ್ಠ 52 ಮಂದಿ ಮೃತರಾದರು. ಇತ್ತೀಚಿನ ವರ್ಷಗಳಲ್ಲಿ ಚಳಿ ಮತ್ತು ಹಿಮಕ್ಕೆ ಈ ಪ್ರಮಾಣದ ಸಾವು ನೋವು ಸಂಭವಿಸಿರುವುದು ಇದೇ ಮೊದಲು.

2008: ಜಾಫ್ನಾ ಹಾಗೂ ಶ್ರೀಲಂಕಾದ ವಾಯವ್ಯ ಭಾಗದಲ್ಲಿ ಶ್ರೀಲಂಕಾ ಯೋಧರು ಹಾಗೂ ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 85 ಮಂದಿ ಯೋಧರು ಸೇರಿದಂತೆ 151 ಮಂದಿ ಮೃತರಾದರು.

2008:  ಆಫ್ಘಾನಿಸ್ಥಾನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ವಾಜಿರಿಸ್ಥಾನ್ ಪ್ರದೇಶದಲ್ಲಿ ಅಡಗಿದ್ದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಅವರ ಬೆಂಬಲಿಗರ ಮೇಲೆ ಪಾಕಿಸ್ಥಾನದ ಸೈನ್ಯ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿ, ಸುಮಾರು 40ರಿಂದ 50 ಉಗ್ರರನ್ನು ಹತ್ಯೆ ಮಾಡಿತು. ಈಚೆಗೆ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಸೇನೆಯು ಈ ಕಾರ್ಯಾಚರಣೆ ನಡೆಸಿತು. 

2007: ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

2007: ಖ್ಯಾತ ಚಿತ್ರನಟಿ ಶಬಾನಾ ಅಜ್ಮಿ ಅವರಿಗೆ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಹೈದರಾಬಾದಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

2007: ಟಾಟಾ ಸಮೂಹದ ತಾಜ್ ಹೋಟೆಲ್ಸ್ ರಿಸಾರ್ಟ್ಸ್ ಅಂಡ್ ಪ್ಯಾಲೇಸಸ್ ಸಂಸ್ಥೆಯು ಅಮೆರಿಕದ ಬೋಸ್ಟನ್ನಿನ 80 ವರ್ಷ ಇತಿಹಾಸ ಹೊಂದಿರುವ ರಿಜ್ ಹೋಟೆಲನ್ನು 7650 ಕೋಟಿ ರೂಪಾಯಿಗಳಿಗೆ ಖರೀದಿಸಿತು.

2006: ಡಾ. ಜಿ.ಎಸ್. ಶಿವರುದ್ರಪ್ಪ ವಿಶ್ವಸ್ತ ಮಂಡಲಿಯು 2005ನೇ ಸಾಲಿನ ಡಾ. ಜಿಎಸ್ಸೆಸ್ ಪ್ರಶಸ್ತಿಗೆ ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಿತು.

2004: ಹದಿನೈದು ಮಂದಿ ರೋಗಿಗಳನ್ನು ಕೊಂದುದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಬ್ರಿಟನ್ನಿನ ಸರಣಿ ಕೊಲೆಗಾರ ಹೆರಾಲ್ಡ್ ಶಿಪ್ ಮನ್ ಸೆರೆಮನೆಯ ಸೆಲ್ಲಿನಲ್ಲಿ ನೇಣು ಹಾಕಿಕೊಂಡಿದ್ದುದು ಪತ್ತೆಯಾಯಿತು.

2000: ಮೈಕ್ರೋಸಾಫ್ಟ್ ಚೇರ್ಮನ್ ಬಿಲ್ ಗೇಟ್ಸ್  ಮುಖ್ಯ ಎಕ್ಸಿಕ್ಯೂಟಿವ್ ಸ್ಥಾನದಿಂದ ಕೆಳಗಿಳಿದು ಕಂಪೆನಿ ಅಧ್ಯಕ್ಷ ಸ್ಟೀವ್ ಬಾಮರ್ (Steve Ballmer)  ಅವರಿಗೆ ಈ ಸ್ಥಾನಕ್ಕೆ ಬಡ್ತಿ ನೀಡಿದರು.

1999: ಮೈಕೆಲ್ ಜೋರ್ಡಾನ್ ಅವರು ಷಿಕಾಗೋ ಬುಲ್ಸ್ ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದರು. (2001ರ ಸೆಪ್ಟೆಂಬರಿನಲ್ಲಿ ವಾಷಿಂಗ್ಟನ್ ವಿಜಾರ್ಡ್ಸ್ ಪರ ಆಡುವ ಸಲುವಾಗಿ ತಾವು ಮತ್ತೆ ಕಣಕ್ಕೆ ಇಳಿಯುವುದಾಗಿ ಅವರು ಘೋಷಿಸಿದರು).

1982: ಮದ್ದೂರಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆ ಕುಸಿದು ಬಿಜೆಪಿ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಗಾಯಗೊಂಡರು.

1960: ಕಲಾವಿದೆ ಸರ್ವಮಂಗಳಾ ಗುರ್ಲ ಹೊಸೂರು ಜನನ.

1957: ಖ್ಯಾತ ರಂಗಭೂಮಿ ನಿರ್ದೇಶಕ ಜಿ. ಅಶೋಕ ಬಾಬು ಅವರು ಎಸ್. ಗೋವಿಂದರಾಜು- ಸರಸ್ವತಿಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1949: ಭಾರತದ ಪ್ರಪ್ರಥಮ ಗಗನಯಾತ್ರಿ ರಾಕೇಶ ಶರ್ಮಾ ಈದಿನ ಪಂಜಾಬಿನ ಪಟಿಯಾಲದಲ್ಲಿ ಜನಿಸಿದರು. ಭಾರತೀಯ ವಾಯುಪಡೆಗೆ ಸ್ವಾಡ್ರನ್ ಲೀಡರ್ ಆಗಿ ಸೇರ್ಪಡೆಯಾದ ಶರ್ಮಾ, ತಮ್ಮ 35ನೇ ವಯಸ್ಸಿನಲ್ಲಿ 138ನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1938: ಭಾರತೀಯ ಸಂತೂರ್ ವಾದಕ ಪಂಡಿತ್ ಶಿವಕುಮಾರ ಶರ್ಮಾ ಹುಟ್ಟಿದ ದಿನ.

1915: ಕೇಂದ್ರ ಇಟಲಿಯ ಅವೆಝಾನೊ ಪಟ್ಟಣದಲ್ಲಿ ಸಂಭವಿಸಿದ ಭಾರಿ ಭೂಕಂಪಕ್ಕೆ 30,000 ಜನ ಬಲಿಯಾದರು.

1898: ಸಂಸ ಎಂದೇ ಖ್ಯಾತರಾದ ಖ್ಯಾತ ನಾಟಕಕಾರ, ಸಾಹಿತಿ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ನರಸಿಂಹ ಪಂಡಿತ-ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 17ರ ಪ್ರಾಯದಲ್ಲೇ ಸಾಹಿತ್ಯದ ಹುಚ್ಚು ಅಂಟಿಸಿಕೊಂಡ ಅಯ್ಯರ್ ಅವರ ಮೊದಲ ಕಾದಂಬರಿ ಕೌಶಲ. 1919ರಿಂದ 1935ರವರೆಗೆ ಉದ್ಯೋಗಾರ್ಥ ದೇಶ ಪರ್ಯಟನೆ. ಫಿಜಿ ದ್ವೀಪ, ಟಿಬೆಟ್, ಆಫ್ಘಾನಿಸ್ಥಾನ, ಬಲೂಚಿಸ್ಥಾನ, ಬರ್ಮಾ, ದಕ್ಷಿಣ ಆಫ್ರಿಕಾಕ್ಕೂ ಭೇಟಿ. ಮೈಸೂರಿನ ಅರಸರ ಚರಿತ್ರೆಗೆ ಸಂಬಂಧಿಸಿದಂತೆ ಅವರು ರಚಿಸಿದ 23 ನಾಟಕಗಳ ಪೈಕಿ ಉಳಿದಿರುವುದು ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯನಾರಸಿಂಹ, ಬಿರುದಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರಶಕ್ತಿ. ಕೌಶಲ ಮತ್ತು ಶೆರ್ಲಾಕ್ ಹೋಮ್ಸ್ ಇನ್ ಜೈಲ್ ಎರಡು ಕಾದಂಬರಿಗಳು, ಶ್ರೀಮಂತೋ ಧ್ಯಾನ ವರ್ಣನಂ, ಸಂಸಪದಂ, ಈಶ ಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಪದ್ಯಕಾವ್ಯ ಅವರ ಕೃತಿಗಳು. ಚಿಕ್ಕ ವಯಸ್ಸಿನಲ್ಲೇ ತಂದೆಯ ಸಾವಿನಿಂದ ಅನಾಥಭಾವ, ತನ್ನನ್ನು ಕಂಡರೆ ಲೋಕಕ್ಕೆ ಸಹನೆ ಇಲ್ಲ, ಇತರರು ತನ್ನ ಬಾಳನ್ನು ಕೆಡಿಸುತ್ತಿದ್ದಾರೆ ಎಂಬ ಭ್ರಮೆಗೆ ಈಡಾಗಿ ಪರ್ಸೆಕ್ಯೂಷನ್ ಕಾಂಪ್ಲೆಕ್ಸಿಗೆ ಒಳಗಾದ ಅವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೊಠಡಿಯೊಂದರಲ್ಲಿ 1939ರ ಫೆಬ್ರವರಿ 14ರಂದು ಆತ್ಮಹತ್ಯೆ ಮಾಡಿಕೊಂಡರು.

1888: `ಭೌಗೋಳಿಕ ಜ್ಞಾನ' ಹೆಚ್ಚಿಸುವ ಸಲುವಾಗಿ ಸೊಸೈಟಿ ಒಂದನ್ನು ಸ್ಥಾಪಿಸಲು ವಾಷಿಂಗ್ಟನ್ನಿನ ಕಾಸ್ಮೋಸ್ ಕ್ಲಬ್ಬಿನಲ್ಲಿ 33 ಜನ ಸಭೆ ಸೇರಿದರು. ಇದು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಕ್ಕೆ ಮೂಲವಾಯಿತು. ಗಾರ್ಡಿನರ್ ಹಬ್ಬರ್ಡ್ 1888ರ ಫೆಬ್ರುವರಿ 17ರಂದು ಇದರ ಪ್ರಥಮ ಅಧ್ಯಕ್ಷರಾದರು. ಮೊತ್ತ ಮೊದಲ `ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್' ಅದೇ ವರ್ಷ ಪ್ರಕಟಗೊಂಡಿತು.

1849: ಸರ್ ಹಗ್ ಗೌಗ್ ಲಾಹೋರ್ ಪ್ರಾಂತದ ಚಿಲಿಯನ್ ವಾಲಾದಲ್ಲಿ ಸಿಕ್ಖರ ಜೊತೆಗೆ ಭೀಕರ ಕದನ ನಡೆಸಿದ. ಎರಡನೇ ಸಿಖ್ ಸಮರ ಕಾಲದಲ್ಲಿ ನಡೆದ ಈ ಕದನದಲ್ಲಿ ಗೌಗ್ ಜಯ ಗಳಿಸಿದೆನೆಂದು ಹೇಳಿಕೊಂಡರೂ, ಬ್ರಿಟಿಷ್ ಕಡೆಯಲ್ಲಿ ಉಂಟಾದ ಭಾರೀ ಸಾವು ನೋವಿಗಾಗಿ ತೀವ್ರ ಟೀಕೆಗೆ ಗುರಿಯಾದ. ಫೆಬ್ರುವರಿಯಲ್ಲಿ ನಡೆದ ಗುಜರಾತ್ ಸಮರದ ಬಳಿಕ ಮಾತ್ರವೇ 1849ರ 
ಮಾರ್ಚಿನಲ್ಲಿ ಸಿಕ್ಖರು ಅಂತಿಮವಾಗಿ ಸೋತರು ಮತ್ತು ಸಿಖ್ ರಾಜ್ಯ ಅಸ್ತಿತ್ವ ಕಳೆದುಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement