My Blog List

Thursday, January 15, 2009

ಇಂದಿನ ಇತಿಹಾಸ History Today ಜನವರಿ 15

ಇಂದಿನ ಇತಿಹಾಸ

ಜನವರಿ 15

ಜನರಲ್ ಕೆ.ಎಂ. ಕಾರಿಯಪ್ಪ ಅವರು ಭಾರತದ ಪ್ರಪ್ರಥಮ ಸೇನಾ ದಂಡನಾಯಕರಾಗಿ ಸರ್ ರಾಯ್ ಬೌಚರ್ ಅವರಿಂದ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತದಲ್ಲಿ `ಸೇನಾ ದಿನ'ಆಗಿ ಆಚರಿಸ ಲಾಗುತ್ತದೆ. 1986ರಲ್ಲಿ ಭಾರತದ ಪ್ರಥಮ ಸೇನಾ ದಂಡನಾಯಕರಾದ 37ನೇ ವರ್ಷಾಚರಣೆಗೆ ಸಂದರ್ಭದಲ್ಲಿ ಜನರಲ್ ಕಾರಿಯಪ್ಪ ಅವರಿಗೆ `ಫೀಲ್ಡ್ ಮಾರ್ಷಲ್' ಹುದ್ದೆಗೆ ಬಡ್ತಿ ನೀಡಲಾಯಿತು.

2008:  ಅನಿಲ್ ಧೀರೂಬಾಯಿ ಅಂಬಾನಿ ಸಮೂಹದ ರಿಲಯನ್ಸ್ ಪವರ್ ನ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಮೊದಲ ದಿನವೇ ಹೂಡಿಕೆದಾರರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತಗೊಂಡು ಸಂಗ್ರಹಿಸಲು ಉದ್ದೇಶಿಸಿದ ಮೊತ್ತಕ್ಕಿಂತ 10.8 ಪಟ್ಟು ಹೆಚ್ಚಿನ ಹಣ ಸಂಗ್ರಹವಾಯಿತು. ದೇಶದ ಇದುವರೆಗಿನ ಅತಿ ದೊಡ್ಡ ಐಪಿಒ ಇದಾಗಿದ್ದು, ನೀಡಿಕೆ ಆರಂಭವಾದ ದಿನವೇ 10 ಪಟ್ಟುಗಳಷ್ಟು (ರೂ 1.08 ಲಕ್ಷ ಕೋಟಿ) ಹೆಚ್ಚಿನ ಖರೀದಿ ಬೇಡಿಕೆ ವ್ಯಕ್ತವಾಯಿತು. ಷೇರುಪೇಟೆಯಲ್ಲಿ ಇದೊಂದು ಅಸಾಮಾನ್ಯ  ಘಟನೆ ಎಂದೇ ದಾಖಲಾಯಿತು. ಒಟ್ಟು 22.80 ಕೋಟಿಗಳಷ್ಟು ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆಗೆ ಬಿಡುಗಡೆ  ಮಾಡಲಾಗಿದ್ದು, ಈದಿನ ಒಂದೇ ದಿನ 220 ಕೋಟಿ ಷೇರುಗಳಿಗೆ ಬೇಡಿಕೆ  (ಬಿಡ್) ಕಂಡು ಬಂದಿತು. 

2008: ಪಶ್ಚಿಮ  ಬಂಗಾಳ ಸರ್ಕಾರವು ರಾಜ್ಯದ ಭೀರ್ ಭೂಮ್ ಮತ್ತು  ದಕ್ಷಿಣ ದೀನಾಪುರ್ ಜಿಲ್ಲೆಗಳಲ್ಲಿ ಕೋಳಿಜ್ವರ ವ್ಯಾಪಕವಾಗಿ ಕಾಣಿಸಿಕೊಂಡಿರುವುದನ್ನು ದೃಢಪಡಿಸಿತು. ಈ ಪ್ರದೇಶಗಳಲ್ಲಿ ಸಾಮೂಹಿಕ ಕೋಳಿ ಹತ್ಯೆ ಸಿದ್ಧತೆ ನಡೆಯಿತು. ಈ ಭಾಗದಲ್ಲಿ ಒಂದೇ ದಿನ ಸುಮಾರು 18,000 ಕೋಳಿಗಳು ಜ್ವರದಿಂದ ಸತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಇತರ ಕೋಳಿಗಳ ಸಾಮೂಹಿಕ ಹತ್ಯೆಗೆ ಸಜ್ಜಾದರು.

2008: ನ್ಯೂಜಿಲೆಂಡಿನ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ ಅವರ ಸ್ಮರಣಾರ್ಥ ನೇಪಾಳದ ಈಶಾನ್ಯ ಪ್ರದೇಶದಲ್ಲಿರುವ ಲುಕ್ಲಾ ವಿಮಾನ ನಿಲ್ದಾಣಕ್ಕೆ `ಹಿಲರಿ ತೇನ್ ಸಿಂಗ್ ವಿಮಾನ ನಿಲ್ದಾಣ' ಎಂದು ನೇಪಾಳ ಸರ್ಕಾರ ನಾಮಕರಣ ಮಾಡಿತು. 1953ರಲ್ಲಿ ನ್ಯೂಜಿಲೆಂಡಿನ ಹಿಲರಿ ಮತ್ತು ನೇಪಾಳದ ತೇನ್ ಸಿಂಗ್ ಅವರು ಪ್ರಪಂಚದಲ್ಲೇ ಅತ್ಯಂತ ಎತ್ತರದ ಎವರೆಸ್ಟ್ ಪರ್ವತಾರೋಹಣ ಮಾಡಿ ಜಾಗತಿಕ ಮಟ್ಟದಲ್ಲಿ ನೇಪಾಳಕ್ಕೆ ಹೆಸರು ತಂದುಕೊಟ್ಟಿದ್ದರು.

2008: ಕೃಷ್ಣ ಮಠದ ಪರ್ಯಾಯ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಈದಿನ ಬೆಳಿಗ್ಗೆ ಆಶಾಭಾವನೆ ಮೂಡಿಸಿದ್ದ ಒಡಂಬಡಿಕೆ ಅಂತಿಮ ಹಂತದಲ್ಲಿ ಬಿದ್ದು ಹೋಗಿ, ಪೇಜಾವರ ಶ್ರೀಗಳ ನೇತೃತ್ವದಲ್ಲಿ ಯತಿಗಳು ಉಪವಾಸ ಆರಂಭಿಸಿದರು. ಉಪವಾಸದಲ್ಲಿ ವಿಶ್ವೇಶತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು, ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು, ಅದಮಾರು ಕಿರಿಯ ಯತಿ ವಿಶ್ವಪ್ರಿಯ ತೀರ್ಥರು ಪಾಲ್ಗೊಂಡರು.

2008: ಮಹಾರಾಷ್ಟ್ರದ ದಾಬೋಲ್ ಮತ್ತು ಬೆಂಗಳೂರು ನಡುವಣ ಅನಿಲ ಸರಬರಾಜು ಕೊಳವೆ ಮಾರ್ಗ ಸ್ಥಾಪಿಸುವ ಪ್ರಸ್ತಾವಕ್ಕೆ ರಾಷ್ಟ್ರದ ಪ್ರಮುಖ ಅನಿಲ ಸರಬರಾಜು ಸಂಸ್ಥೆಯಾದ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್ ಇಂಡಿಯಾ) ನಿರ್ದೇಶಕ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು.  ದಾಬೋಲ್ ಮತ್ತು ಬೆಂಗಳೂರು ನಡುವಣ 730 ಕಿಲೋ ಮೀಟರ್ ಉದ್ದದ ಈ ಕೊಳವೆ ಮಾರ್ಗದ ಮೂಲಕ ಪ್ರತಿನಿತ್ಯ 16 ದಶಲಕ್ಷ ಕ್ಯುಬಿಕ್ ಮೀಟರ್ ಅನಿಲವನ್ನು ಸಾಗಣೆ ಮಾಡುವ ಉದ್ದೇಶ ಹೊಂದಲಾಗಿದ್ದು, 2,500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು 2011-12ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕಂಪೆನಿಯ ಪ್ರಕಟಣೆ ತಿಳಿಸಿತು.

2008: ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವಿರೇನ್ ರಸ್ಕಿನ ಅಂತಾರಾಷ್ಟ್ರೀಯ ಹಾಕಿಗೆ ಮುಂಬೈಯಲ್ಲಿ ವಿದಾಯ ಪ್ರಕಟಿಸಿದರು. ಶಿಕ್ಷಣವನ್ನು ಮುಂದುವರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡರು. ಮಿಡ್ ಫೀಲ್ಡರ್ ಆಗಿದ್ದ ರಸ್ಕಿನ ಎಂಟು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಪ್ರೀಮಿಯರ್ ಹಾಕಿ ಲೀಗಿನಲ್ಲಿ 2004 ರಿಂದ 2007ರವರೆಗೆ ಮರಾಠಾ ವಾರಿಯರ್ ತಂಡವನ್ನು ಮುನ್ನಡೆಸಿದ್ದರು. 

2008:  ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಲೇಖಕ ಜಯಪ್ರಕಾಶ ಮಾವಿನಕುಳಿ, `ಪ್ರಜಾವಾಣಿ'ಯ ಉಪ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ, ವರದಿಗಾರ ಗಣೇಶ ಅಮಿನಗಡ, ಮತ್ತು ಎಸ್.ಎಂ.ಗಂಗಾಧರಯ್ಯ ಅವರ ಕೃತಿಗಳು ಆಯ್ಕೆಯಾದವು.

2008: ಡಾ. ಜಿಎಸ್ಸೆಸ್ ವಿಶ್ವಸ್ಥ ಮಂಡಳಿಯು 2007ನೇ ಸಾಲಿನ `ಡಾ. ಜಿಎಸ್ಸೆಸ್ ಪ್ರಶಸ್ತಿ'ಗಾಗಿ ವಿಮರ್ಶಕಿ ಡಾ.ಬಿ.ಎನ್.ಸುಮಿತ್ರಾಬಾಯಿ ಅವರನ್ನು ಆಯ್ಕೆ ಮಾಡಿತು.

2007: ಕುವೈತ್ ನ್ಯಾಯಾಲಯವೊಂದು ಆಡಳಿತ ನಡೆಸುತ್ತಿರುವ ಅಲ್-ಸಭಾ ರಾಜಕುಟುಂಬದ ಸದಸ್ಯ ಷೇಕ್ ತಲಾಲ್ ಎಂಬವರಿಗೆ  ಮಾದಕ ವಸ್ತು ಕಳ್ಳಸಾಗಣೆಗಾಗಿ ಮರಣದಂಡನೆ  ಹಾಗೂ 35,000 ಡಾಲರುಗಳ ದಂಡವನ್ನು ವಿಧಿಸಿತು. ಬಿಡೂನ್ ಎಂಬ ಅರಬ್ ವ್ಯಕ್ತಿ, ಒಬ್ಬ ಬಾಂಗ್ಲಾದೇಶಿ ಹಾಗೂ ಒಬ್ಬ ಭಾರತೀಯನಿಗೂ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು. ಒಬ್ಬ ಲೆಬನಾನ್ ವ್ಯಕ್ತಿ ಮತ್ತು ಒಬ್ಬ ಇರಾಕಿ ವ್ಯಕ್ತಿಗೆ ಏಳು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಕುವೈತಿ ಪೊಲೀಸರು ಕಳೆದ ವರ್ಷ ಏಪ್ರಿಲಿನಲ್ಲಿ ಈ ತಂಡವನ್ನು ಬಂಧಿಸಿ, ಅವರಿಂದ 10 ಕಿ.ಗ್ರಾಂ. ಕೊಕೇನ್ ಮತ್ತು 120 ಕಿ.ಗ್ರಾಂ. ಹಶಿಷ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಕುವೈತಿನ ಒಳಾಡಳಿತ ಹಾಗೂ ರಕ್ಷಣಾ ಸಚಿವರಾದ ಷೇಕ್ ಅಲ್-ಮುಬಾರಕ್ ಅಲ್-ಸಭಾ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

2007: ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ನೇಮಿಸಲಾಗಿದ್ದ ಜಂಟಿ ವಿಶೇಷ ಕಾರ್ಯಪಡೆಯಿಂದ ದೌರ್ಜನ್ಯಕ್ಕೆ ಈಡಾದ 89 ವ್ಯಕ್ತಿಗಳಿಗೆ ಒಟ್ಟು 2.89 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಕೇಂದ್ರ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಶಿಫಾರಸು ಮಾಡಿತು.

2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಬಲಗೈ ಬಂಟರಾಗಿದ್ದ ಅವರ ಮಲ ಸಹೋದರ ಬರ್ಜಾನ್ ಇಬ್ರಾಹಿಂ ಅಲ್ ಟಿಕ್ರಿತಿ ಮತ್ತು ಸದ್ದಾಮ್ ನಡೆಸುತ್ತಿದ್ದ ಕ್ರಾಂತಿಕಾರಿ ನ್ಯಾಯಾಲಯದ ಮುಖ್ಯಸ್ಥರಾಗಿದ್ದ ಅವಾದ್ ಅಹಮದ್ ಅಲ್ ಬಂಡರ ಈ ಇಬ್ಬರನ್ನೂ ಬೆಳಗಿನ ಜಾವ (ಭಾರತೀಯ ಕಾಲಮಾನ 5.30) ಗಲ್ಲಿಗೇರಿಸಲಾಯಿತು.

2007: ಅಣು ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಭಿವೃದ್ಧಿಗೊಳಿಸಿ ಇಂಧನ ಭದ್ರತೆಗೆ ಒತ್ತು ನೀಡಲು ಭಾರತ ಸೇರಿದಂತೆ ಪೂರ್ವ ಏಷ್ಯ ಖಂಡದ 15 ರಾಷ್ಟ್ರಗಳು ಸೆಬುವಿನಲ್ಲಿ ಒಪ್ಪಿಕೊಂಡವು. ಇಂಧನ ಭದ್ರತೆಯ ಸೆಬು ಘೋಷಣೆಗೆ ಈ ಎಲ್ಲ ರಾಷ್ಟ್ರಗಳು ಸಹಿ ಮಾಡಿದವು.

2006: ಕೆ.ಕೆ. ಬಿರ್ಲಾ ಪ್ರತಿಷ್ಠಾನವು ಹಿಂದಿ ಸಾಹಿತ್ಯಕ್ಕೆ ನೀಡುವ 2005ನೇ ಸಾಲಿನ ವ್ಯಾಸ ಸಮ್ಮಾನ್ ಪ್ರಶಸ್ತಿಯು ಲೇಖಕಿ ಚಂದ್ರಕಾಂತಾ ಅವರ ಕಥಾ ಸತಿಸರ್ ಕಾದಂಬರಿಗೆ ಲಭಿಸಿತು. 2.5 ಲಕ್ಷ ರೂಪಾಯಿ ನಗದು ಪುರಸ್ಕಾರ ಹೊಂದಿರುವ ಈ ಪ್ರಶಸ್ತಿ ಹಿಂದಿ ಸಾಹಿತ್ಯದಲ್ಲಿ ನೀಡಲಾಗುತ್ತಿರುವ ಪ್ರಮುಖ ಪ್ರಶಸ್ತಿಗಳಲ್ಲಿ ಒಂದು.

2006: ತೈಲ ಸಮೃದ್ಧ ಕುವೈತ್ ರಾಷ್ಟ್ರವನ್ನು ಸುಮಾರು 30 ವರ್ಷಗಳ ಕಾಲ ಆಳಿದ ದೊರೆ ಶೇಖ್ ಜಬರ್ ಅಲ್- ಸಭಾ ನಿಧನರಾದರು. ಶೇಕ್ ಸಾದ್ ಅಲ್ - ಸಭಾ ಅವರನ್ನು ಜಬರ್ ಉತ್ತರಾಧಿಕಾರಿಯಾಗಿ ಕುವೈತ್ ಸಂಪುಟ ನೇಮಕ ಮಾಡಿತು.

2006: ಸೌರವ್ಯೂಹ ರಚನೆ ಬಗ್ಗೆ ಮಹತ್ವದ ಸುಳಿವು ನೀಡಬಹುದಾದ ಧೂಮಕೇತುವಿನ ದೂಳನ್ನು ಹೊತ್ತು ತಂದ ಅಂತರಿಕ್ಷ ಕೋಶ ಸುರಕ್ಷಿತವಾಗಿ ಅಮೆರಿಕದ ಸೇನಾ ನೆಲೆಯಲ್ಲಿ ಸುರಕ್ಷಿತವಾಗಿ ಭೂಮಿಗೆ ವಾಪಸಾಯಿತು. 2.9 ಶತಕೋಟಿ ಮೈಲುಗಳಷ್ಟು ದೀರ್ಘಪಯಣ ಪೂರ್ಣಗೊಳಿಸಿದ ಕೋಶವು ಅಮೆರಿಕದ ವಾಯುಪಡೆಯ ಉತಾಹ್ ಪರೀಕ್ಷಾ ಮತ್ತು ತರಬೇತಿ ಪ್ರದೇಶದಲ್ಲಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಮೊದಲೇ ಧರೆಗೆ ಇಳಿಯಿತು. ಸ್ಟಾರ್ ಡಸ್ಟ್ ಹೆಸರಿನ ಯೋಜನೆಯಡಿ ಅಂತರಿಕ್ಷದಲ್ಲಿ ಪಯಣ ಕೈಗೊಂಡಿದ್ದ 45 ಕಿಲೋಗ್ರಾಂ ತೂಕದ (100 ಪೌಂಡ್) ಕೋಶ (ಸ್ಪೇಸ್ ಕ್ಯಾಪ್ಸೂಲ್) ವೈಲ್ಡ್-2 ಧೂಮಕೇತುವಿನ ದೂಳನ್ನು ತನ್ನ ಒಡಲಲ್ಲಿ ಹೊತ್ತು ತಂದಿದೆ. ಈ ಯೋಜನೆಯ ನಿರ್ವಾಹಕ ಟಾಮ್ ಡಕ್ಸಬರಿ. 2004ರಲ್ಲಿ ಸೌರವ್ಯೂಹದ ಅಣುಗಳನ್ನು ಹೊತ್ತು ತಂದಿದ್ದ ಜೆನೆಸಿಸ್ ಹೆಸರಿನ ಕೋಶ ಪ್ಯಾರಾಚೂಟ್ ಬಿಚ್ಚಿಕೊಳ್ಳದೆ ಅಪಘಾತಕ್ಕೆ ಒಳಗಾಗಿತ್ತು. ಸ್ಟಾರ್ ಡಸ್ಟ್ ಯೋಜನೆಯ ಅಂತರಿಕ್ಷ ಕೋಶವು ಪ್ರತಿ ಗಂಟೆಗೆ 46,440 ಕಿಮೀ (28,860 ಮೈಲು) ವೇಗದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿ 13 ನಿಮಿಷಗಳಲ್ಲಿ ಸೇನಾ ನೆಲೆಗೆ ಬಂದು ಇಳಿಯಿತು. ಮಾನವ ನಿರ್ಮಿತ ನೌಕೆಯೊಂದು / ಕೋಶವೊಂದು ಇಷ್ಟೊಂದು ಗರಿಷ್ಠ ವೇಗದಲ್ಲಿ ಪಯಣಿಸಿದ್ದು ಇದೇ ಮೊದಲು. ಸೌರವ್ಯೂಹದ ಹುಟ್ಟಿನ ಗುಟ್ಟು ಅರಿಯಲು ನಾಸಾ ವಿಜ್ಞಾನಿಗಳು 1999ರಲ್ಲಿ ಈ ಯೋಜನೆ ಆರಂಭಿಸಿದ್ದರು. ವೈಲ್ಡ್-2 ಧೂಮಕೇತುವಿನ ದೂಳು ಸಂಗ್ರಹಿಸಲು ಈ ಸ್ಟಾರ್ ಡಸ್ಟ್ ಕೋಶವು 480 ಕೋಟಿ ಕಿಮೀ ಕ್ರಮಿಸಿತ್ತು. ಸೂರ್ಯನಿಗೆ ಸುತ್ತು ಹಾಕಿ, ಗುರು ಗ್ರಹದ ಸಮೀಪ ಕೂಡಾ ಸುಳಿದಿತ್ತು. ಧೂಮಕೇತುಗಳು ಗ್ರಹಗಳ ಹುಟ್ಟಿನ ಪ್ರಕ್ರಿಯೆ ನಂತರ ಉಳಿದ ಅವಶೇಷಗಳು ಎಂದು ಭಾವಿಸಲಾಗಿದೆ. ಹೀಗಾಗಿ 4.5 ಶತಕೋಟಿ ವರ್ಷಗಳಷ್ಟು ಹಳೆಯ ಸೌರವ್ಯೂಹದ ಹುಟ್ಟಿನ ರಹಸ್ಯಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿವೆ ಎಂಬ ಗುಮಾನಿ ಇದೆ. ಈ ರಹಸ್ಯ ಭೇದಿಸುವ ಮೊದಲ ಹಂತದ ಕಾರ್ಯಾಚರಣೆ ಇದು.

2006: ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರಿಗೆ ಈಟಿವಿ ನೀಡುವ ವರ್ಷದ ಕನ್ನಡಿಗ-2005 ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಪ್ರದಾನ ಮಾಡಿದರು. 

1998: ಹಿರಿಯ ರಾಜಕಾರಣಿ ಗುಲ್ಜಾರಿಲಾಲ್ ನಂದಾ ನಿಧನರಾದರು. 1964 ಮತ್ತು 1966ರಲ್ಲಿ ಎರಡು ಬಾರಿ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

1986: ಸಂಪೂರ್ಣ ಮಹಿಳಾ ಸಿಬ್ಬಂದಿ ಮೂಲಕ ಮೊತ್ತ ಮೊದಲ ಭಾರತೀಯ ವಾಣಿಜ್ಯ ಪ್ರಯಾಣಿಕ ವಿಮಾನ ಹಾರಾಟವನ್ನು ಇಂಡಿಯನ್ ಏರ್ ಲೈನ್ಸ್ ನಡೆಸಿತು. ಕ್ಯಾಪ್ಟನ್ ಸೌದಾಮಿನಿ ದೇಶಮುಖ್ ಮತ್ತು ಸಹ ಪೈಲಟ್ ನಿವೇದಿತಾ ಭಾಸಿನ್ ಅವರು ಇಬ್ಬರು ಗಗನಸಖಿಯರ ನೆರವಿನೊಂದಿಗೆ ಐಸಿ 258 ವಿಮಾನವನ್ನು ಸಿಲ್ಚಾರ್ನಿಂದ ಕಲ್ಕತ್ತಾಕ್ಕೆ (ಈಗಿನ ಕೋಲ್ಕತ್ತಾ) ಹಾರಿಸಿದರು.

1962: ಸಾಹಿತಿ ಮಾನಸ ಹುಟ್ಟಿದ ದಿನ.

1956: ಕಲಾವಿದ ಪರಮೇಶ್ವರ ಹೆಗಡೆ ಜನನ.

1953 ಸಾಹಿತಿ ಗೋವಿಂದರಾಜು ಟಿ ಹುಟ್ಟಿದ ದಿನ.

1949: ಜನರಲ್ ಕೆ.ಎಂ. ಕಾರಿಯಪ್ಪ ಅವರು ಭಾರತದ ಪ್ರಪ್ರಥಮ ಸೇನಾ ದಂಡನಾಯಕರಾಗಿ ಸರ್ ರಾಯ್ ಬೌಚರ್ ಅವರಿಂದ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತದಲ್ಲಿ `ಸೇನಾ ದಿನ'ಆಗಿ ಆಚರಿಸಲಾಗುತ್ತದೆ. 1986ರಲ್ಲಿ ಭಾರತದ ಪ್ರಥಮ ಸೇನಾ ದಂಡನಾಯಕರಾದ 37ನೇ ವರ್ಷಾಚರಣೆಗೆ ಸಂದರ್ಭದಲ್ಲಿ ಜನರಲ್ ಕಾರಿಯಪ್ಪ ಅವರಿಗೆ `ಫೀಲ್ಡ್ ಮಾರ್ಷಲ್' ಹುದ್ದೆಗೆ ಬಡ್ತಿ ನೀಡಲಾಯಿತು.

1929: ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯನ್ನು ಹುಟ್ಟು ಹಾಕಿದ ಕರಿಯ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ (1929-1968) ಹುಟ್ಟಿದ ದಿನ.

1928: ಕಲಾವಿದೆ ಲಲಿತಾ ಉಭಯಂಕರ ಜನನ.

1920: ಸಾಹಿತಿ ಆರ್. ಸಿ. ಹಿರೇಮಠ ಹುಟ್ಟಿದ ದಿನ.

1918: ಈಜಿಪ್ಟಿನ ಅಧ್ಯಕ್ಷ ಗಮೆಲ್ ಅಬ್ದುಲ್ ನಾಸೆರ್ (1918-1970) ಹುಟ್ಟಿದ ದಿನ.

1916: ಖ್ಯಾತ ನಾಟಕಕಾರ, ಸಂಗೀತಗಾರ, ವಾಗ್ಗೇಯಕಾರ ಹೊನ್ನಪ್ಪ ಭಾಗವತರ್ (15-1-1916ರಿಂದ 1-10-1992) ಅವರು ಚಿಕ್ಕಲಿಂಗಪ್ಪ- ಕಲ್ಲವ್ವ ದಂಪತಿಯ ಮಗನಾಗಿ ನೆಲಮಂಗಲ ತಾಲ್ಲೂಕಿನ ಚೌಡಸಂದ್ರದಲ್ಲಿ ಜನಿಸಿದರು.

1908: ಹಂಗೇರಿಯನ್ ಸಂಜಾತ ಅಮೆರಿಕನ್ ಪರಮಾಣು ತಜ್ಞ ಎಡ್ವರ್ಡ್ ಟೆಲ್ಲರ್ ಹುಟ್ಟಿದ ದಿನ. 1945ರಲ್ಲಿನಿರ್ಮಿಸಲಾದ ಜಗತ್ತಿನ ಮೊತ್ತ ಮೊದಲ ಪರಮಾಣು ಬಾಂಬ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಇವರು ಜಗತ್ತಿನ ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ನಿರ್ಮಿಸುವಲ್ಲೂ ಮುಂಚೂಣಿಯಲ್ಲಿದ್ದ.

1906: ಅರಿಸ್ಟಾಟಲ್ ಒನಾಸಿಸ್ (1906-1975) ಹುಟ್ಟಿದ ದಿನ. ಸೂಪರ್ ಟ್ಯಾಂಕರುಗಳ ಪಡೆಯನ್ನು ನಿರ್ಮಿಸಿದ ಗ್ರೀಕ್ ಶಿಪ್ಪಿಂಗ್ ಉದ್ಯಮಿಯಾದ ಇವರು ಅಮೆರಿಕಾದ ಅಧ್ಯಕ್ಷ ಕೆನಡಿ ಅವರ ವಿಧವಾ ಪತ್ನಿ ಜಾಕೆಲಿನ್ ಕೆನಡಿ ಅವರನ್ನು ವಿವಾಹವಾದರು.

1856: ಶಾಂತಕವಿ ಕಾವ್ಯನಾಮದ ಸಾಹಿತಿ ಸಕ್ಕರಿ ಬ ಬಾಳಾಚಾರ್ಯರು (1956-1920) ಸಾತೇನಹಳ್ಳಿಯಲ್ಲಿ ಜನಿಸಿದರು.

1592: ಮೊಘಲ್ ಚಕ್ರವರ್ತಿ ಶಹಜಹಾನ್ (1592-1666) ಹುಟ್ಟಿದ ದಿನ. ಈತ ವಿಶ್ವ ಖ್ಯಾತಿಯ ತಾಜ್ ಮಹಲ್ ನಿರ್ಮಿಸಿದ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement