My Blog List

Saturday, January 24, 2009

ಇಂದಿನ ಇತಿಹಾಸ History Today ಜನವರಿ 19

ಇಂದಿನ ಇತಿಹಾಸ

ಜನವರಿ 19

ಭಾರತದ ಆಧ್ಯಾತ್ಮಿಕ ಧುರೀಣ ಭಗವಾನ್ ಶ್ರೀ ರಜನೀಶ್ ತಮ್ಮ 58ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ತಮ್ಮ ಬೋಧನೆಗಳಿಂದಾಗಿ ತೀವ್ರ ವಿವಾದಗಳಿಗೂ ಕಾರಣರಾಗಿದ್ದ ರಜನೀಶ್ ಅವರು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಹೆಸರನ್ನು `ಓಶೊ' ಎಂಬುದಾಗಿ ಬದಲಾಯಿಸಿಕೊಂಡಿದ್ದರು.

2008: ಪರ್ತಿನ ಡಬ್ಲ್ಯೂಸಿಎಯಲ್ಲಿ ಮೂರನೇ ಕ್ರಿಕೆಟ್ ಟೆಸ್ಟಿನ ನಾಲ್ಕನೇ ದಿನವೇ ಭಾರತವು 72 ರನ್ನುಗಳ ಅಂತರದಿಂದ ಅತಿಥೇಯ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿತು. ಇದು ಭಾರತದ `ಸಿಡ್ನಿ' ನೋವನ್ನು ಮರೆಸಿತು. ಭಾರತ ತಂಡ ಒಡ್ಡಿದ 413 ರನ್ನುಗಳ  ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 340 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.  ಈ ವಿಜಯದಿಂದ ಭಾರತವು ನಾಲ್ಕು ಟೆಸ್ಟ್ ಸರಣಿಯಲ್ಲಿ ಅಂತರವನ್ನು 2-1ಕ್ಕೆ ಇಳಿಸಿತು. ಪಂದ್ಯ ಪುರುಷೋತ್ತಮನಾಗಿ ಇರ್ಫಾನ್ ಪಠಾಣ್ ಅವರನ್ನು  ಆರಿಸಲಾಯಿತು.

2008: ರಾಜ್ಯಸಭೆ ಸದಸ್ಯ ಶಾಂತಾರಾಮ ನಾಯಕ್ ಅವರು, ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಚುನಾಯಿತರಾದರು. ದಕ್ಷಿಣ ಗೋವೆಯ ಕುಂಕಳೀಮಿನಲ್ಲಿ ಜನಿಸಿದ ನಾಯಕ್ ಅವರು ಕಲೆ ಮತ್ತು ಕಾನೂನು ವಿಷಯಗಳಲ್ಲಿ ಪದವೀಧರರು. ಗೋವೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೊಂಕಣಿಗೆ ಶಾಸನಬದ್ಧ ಮಾನ್ಯತೆಗಾಗಿ ನಡೆದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. 2006ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಶಾಂತಾರಾಮ್ ಅವರು ಲೋಕಸಭೆ ಸದಸ್ಯರಾಗಿ 1989ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಕೊಂಕಣಿಯಲ್ಲಿ  ಮಾತನಾಡಿ ಇತಿಹಾಸ ನಿರ್ಮಿಸಿದ್ದರು.

2008: ಸರ್ಕಾರ ಮತ್ತು ಮಹಾನಗರ ಪಾಲಿಕೆಗಳ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ವಿಮೆ ಒದಗಿಸುವ `ಆರೋಗ್ಯ ಚೇತನ' ಎಂಬ ವಿಶಿಷ್ಟ ಯೋಜನೆಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರ ಸ್ಮರಣಾರ್ಥ ಸ್ಥಾಪಿಸಿರುವ `ಅದಮ್ಯ ಚೇತನ' ಸಂಸ್ಥೆಯು ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಈ ವಿಮಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿತು. ಈ ಯೋಜನೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 35 ರೂಪಾಯಿಯಂತೆ ವಿಮಾ ಕಂತನ್ನು ನಿಗದಿ ಮಾಡಲಾಯಿತು. ಸದ್ಯ ಸಂಸ್ಥೆಯು 1ರಿಂದ 10ನೇ ತರಗತಿವರೆಗಿನ ಹತ್ತು ಸಾವಿರ ಮಕ್ಕಳಿಗೆ ಉಚಿತವಾಗಿ ಈ ವಿಮಾ ಸೌಲಭ್ಯ ಕಲ್ಪಿಸಿತು. ಮುಂದಿನ ದಿನಗಳಲ್ಲಿ ಸರ್ಕಾರಿ/ ಪಾಲಿಕೆ ಶಾಲೆಗಳ ಮಕ್ಕಳು ತಲಾ 10 ರೂಪಾಯಿ ನೀಡಿದರೆ ಉಳಿದ ಹಣವನ್ನು ಸಂಸ್ಥೆಯೇ ಭರಿಸುವುದು. ಸಂಸ್ಥೆಯು ಈಗಾಗಲೇ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಊಟ ನೀಡುತ್ತಿರುವ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ರಾಜಸ್ಥಾನದ ಜೋಧ್ ಪುರದ ವಿವಿಧ ಶಾಲೆಗಳ ಎರಡೂವರೆ ಲಕ್ಷ ಮಕ್ಕಳನ್ನು ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಖಾಸಗಿ ಇಂಗ್ಲಿಷ್ ಮಾಧ್ಯಮ ಸೇರಿದಂತೆ ಯಾವುದೇ ಶಾಲಾ ಮಕ್ಕಳು ಈ ವಿಮಾ ವ್ಯಾಪ್ತಿಗೆ ಬರಬಹುದು. ಅವರು 35 ರೂಪಾಯಿ ವಿಮಾ ಕಂತು ಪಾವತಿಸಬೇಕು. ವಿಮಾ ಪಾಲಿಸಿ ಪಡೆದುಕೊಂಡ ವಿದ್ಯಾರ್ಥಿಗಳು ಬೆಂಗಳೂರಿನ 369 ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ತಲಾ 10 ಸಾವಿರ ರೂಪಾಯಿವರೆಗಿನ ವೆಚ್ಚದ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬಹುದು. 10 ಸಾವಿರಕ್ಕಿಂತ ಹೆಚ್ಚು ವೆಚ್ಚದ ಚಿಕಿತ್ಸೆ ಬೇಕಾಗುವ ಮಕ್ಕಳಿಗೆ ಹೆಚ್ಚುವರಿ ಸಹಾಯ ಮಾಡಲು ಸಂಸ್ಥೆಯು ಹತ್ತು ಲಕ್ಷ ರೂಪಾಯಿ ನಿಧಿಯನ್ನು ಸ್ಥಾಪಿಸಿದೆ.

2008: ಮೆಲ್ಬೋರ್ನಿನ ರಾಡ್ ಲೆವರ್ ಎರಿನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸಿನ ಮೂರನೇ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು 7-6(7-0), 6-4ರಲ್ಲಿ ಮೂವತ್ತೊಂದನೇ ಶ್ರೇಯಾಂಕದ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಪರಾಭವಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯದಲ್ಲಿ ವಿಲಿಯಮ್ಸ್ ಅವರು ಏಳು ಬಾರಿ ಏಸ್ ಸಿಡಿಸಿದರೆ, ಭಾರತದ ಹುಡುಗಿ ಕೇವಲ ಒಂದು ಬಾರಿ ಮಾತ್ರ ಈ ಸಾಧನೆ ಮಾಡಿದರು. ಇದರೊಂದಿಗೆ  ಸಾನಿಯಾ ಮಿರ್ಜಾ ಅವರ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ ಶಿಪ್ಪಿನ ಸಿಂಗಲ್ಸ್ ವಿಭಾಗದಲ್ಲಿನ ಓಟಕ್ಕೆ ತೆರೆ ಬಿದ್ದಿತು. 

2008: ಸಂಗ್ರಾಜ್ ಥೈರೋ ಎಂಬ ಬೌದ್ಧ ಭಿಕ್ಷುವೊಬ್ಬರ ಕೊಲೆ ನಡೆದ ಒಂದು ವಾರದ ಬಳಿಕ ಮುಂಬೈಯ ಗೋವಂದಿ  ಪ್ರದೇಶದಲ್ಲಿ ಇನ್ನೊಬ್ಬ ಬೌದ್ಧ ಭಿಕ್ಷುವಿನ ಶವ ಪತ್ತೆಯಾಯಿತು. ಭದಂತ್ ಕಶ್ಯಪ್ ಹೆಸರಿನ ಬೌದ್ಧ ಭಿಕ್ಷು ವಿಷ ಸೇವಿಸಿ ತಮ್ಮ ಬದುಕು ಕೊನೆಗೊಳಿಸಿಕೊಂಡರು. ತನ್ನ ಸಹಭಿಕ್ಷುವಿನ  ಮರಣದ  ಬಳಿಕ ತನಿಖೆ ಬಗ್ಗೆ  ಅತೃಪ್ತರಾಗಿ, ಭ್ರಮನಿರಸನಗೊಂಡಿರುವುದಾಗಿ  ಈ ಬೌದ್ಧ ಭಿಕ್ಷು ಆತ್ಮಹತ್ಯೆಗೆ ಮುಂಚೆ ಬರೆದಿಟ್ಟ ಪತ್ರದಲ್ಲಿ ತಿಳಿಸಿದ್ದರು.

2008: ಬಂಡಾಯ ಎದ್ದಿದ್ದ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶಾಸಕರ ಎಲ್ಲ ಷರತ್ತುಗಳಿಗೆ ಕಾಂಗ್ರೆಸ್ ಹೈಕಮಾಂಡ್ ತಲೆಬಾಗಿದ್ದರಿಂದ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ನೇತೃತ್ವದ  ಸರ್ಕಾರ ನಾಲ್ಕು ದಿನಗಳಿಂದ ಎದುರಿಸುತ್ತಿದ್ದ ಪತನದ ಭೀತಿಯಿಂದ ಪಾರಾಯಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಂಡಾಯ ಎದ್ದಿದ್ದ ಎನ್ಸಿಪಿಯ ಶಾಸಕರ ಷರತ್ತುಗಳ ಈಡೇರಿಕೆಗೆ ಒಪ್ಪಿದರು.
2008: ಸಾರ್ವಜನಿಕ ಆರಂಭಿಕ ಕೊಡುಗೆ (ಐಪಿಒ)ಯ ಮೂಲಕ ಅತಿ ಹೆಚ್ಚು ಬಂಡವಾಳ ಸಂಗ್ರಹಿಸಿ ಜಾಗತಿಕ ಇತಿಹಾಸ ನಿರ್ಮಿಸಿದ ರಿಲಯನ್ಸ್ ಪವರ್ ಲಿಮಿಟೆಡ್, ಪ್ರತಿ ಷೇರು ದರವನ್ನು ರೂ 450ಕ್ಕೆ ನಿಗದಿ ಗೊಳಿಸಿತು. ಸಾಮಾನ್ಯ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ 20 ರಿಯಾಯಿತಿ ಘೋಷಣೆ ಮಾಡಲಾಯಿತು. ಇದರಿಂದಾಗಿ ಪ್ರತಿ ಷೇರಿಗೆ  430 ರೂಪಾಯಿ ನಿಗದಿಯಾಯಿತು.

2008: ಕೋಲ್ಕತದ ಭೀರ್ ಭುಮ್ ಜಿಲ್ಲೆಯ ಶಿಯುರಿ ಉಪ ವಿಭಾಗದ ಮೊಹಮ್ಮದ್ ಬಜಾರ್  ಪ್ರದೇಶಕ್ಕೆ ಕೋಳಿಜ್ವರ ಹೊಸದಾಗಿ ಹರಡಿತು. ಜಿಲ್ಲೆಯಲ್ಲಿ ಇಲ್ಲಿವರೆಗೆ 80,000 ಕೋಳಿಗಳನ್ನು ಕೊಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದವು.

2007: ವಿಶ್ವಸಂಸ್ಥೆಯಲ್ಲಿನ ಬಾಂಗ್ಲಾದೇಶದ ಕಾಯಂ ಪ್ರತಿನಿಧಿ ಇಫ್ತಿಕರ್ ಅಹ್ಮದ್ ಚೌಧರಿ ಅವರನ್ನು ರಾಷ್ಟ್ರದ ಉಸ್ತುವಾರಿ ಸರ್ಕಾರದ ಸಲಹೆಗಾರರಾಗಿ ನೇಮಿಸಲಾಯಿತು.

2007: ಮುಂಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರವಾಸ ಮಾಡಿದ್ದ ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಅವರ ಬ್ಯಾಗಿನಿಂದ ಪಿಸ್ತೂಲು ಮತ್ತು 30 ಗುಂಡುಗಳನ್ನು ದುಬೈ ವಿಮಾನ ನಿಲ್ದಾಣದ ಪೊಲೀಸರು ವಶಪಡಿಸಿಕೊಂಡರು.

2007: ಸೆಲೆಬ್ರಿಟಿ ಬಿಗ್ ಬ್ರದರ್ ಕಾರ್ಯಕ್ರಮದ ಅಂಗವಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೊತೆಗೆ ಒಂದೇ ಕೋಣೆಯಲ್ಲಿದ್ದ ಸಹಸ್ಪರ್ಧಿಗಳಾದ ಜೇಡ್ ಗೂಡಿ ಮತ್ತು ಡೇನಿಯಲ್ ಲಾಯ್ಡ್ ಅವರು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾಶೆಟ್ಟಿ ಅವರ ಕ್ಷಮೆ ಕೋರಿದರು.

2007: ಮೋನಾಲಿಸಾ ಅವರು 1542ರ ಜುಲೈ 15ರಂದು ಮೃತಳಾಗಿದ್ದು, ಆಕೆ ತನ್ನ ಅಂತಿಮ ದಿನಗಳನ್ನು ಕಳೆದ ಸೆಂಟ್ರಲ್ ಫ್ಲಾರೆನ್ಸಿನಲ್ಲಿ ಆಕೆಯನ್ನು ಸಮಾಧಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ದಾಖಲೆ ತಮಗೆ ಲಭಿಸಿದೆ ಎಂದು ಮೋನಾಲಿಸಾ ಕುರಿತು ವಿಶೇಷ ಅಧ್ಯಯನ ನಡೆಸಿದ ಗಿಯಾಸುಪ್ಪೆ ಪಲ್ಲಾಂಟಿ ಪ್ರಕಟಿಸಿದರು. ಫ್ಲಾರೆನ್ಸಿನ ಇಗರ್ಜಿಯೊಂದರಲ್ಲಿ ಈ ದಾಖಲೆ ಲಭಿಸಿರುವುದಾಗಿ ಅವರು ಹೇಳಿದರು.

 2006: ಜನವರಿ 27 ಅಥವಾ ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಸೂಚನೆ ನೀಡಿರುವುದಾಗಿ ರಾಜ್ಯಪಾಲ ಟಿ.ಎನ್. ಚತುರ್ವೇದಿಪ್ರಕಟಿಸಿದರು.

2006: ರೋಗ ನಿರ್ಧಾರ ಹಾಗೂ ಚಿಕಿತ್ಸಾ ಪದ್ಧತಿ ಸುಧಾರಣೆಯಲ್ಲಿ ಕಂಪ್ಯೂಟರೀಕೃತ ಮಾಹಿತಿ ಬಳಸುವ ಹೊಸ ವಿಧಾನ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಭಾರತಿಯ ಸಂಜಾತ ಅಮೆರಿಕದ ವಿಜ್ಞಾನಿ ಆರ್. ಭರತ್ ರಾವ್ ಅವರಿಗೆ ಸೀಮೆನ್ಸಿನ ವರ್ಷದ ಸಂಶೋಧಕ ಪ್ರಶಸ್ತಿ ಲಭಿಸಿತು.

2000: ಫಕ್ರುದ್ದೀನ್ ತಾಕುಲ್ಲಾ ರಾಜಧಾನಿ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಪ್ರಯಾಣಕ್ಕೆ ಅವರು ಬಳಸಿದ್ದು 26 ವರ್ಷಗಳ ಹಿಂದೆ 1973ರ ಜುಲೈ 15ರಂದು ತಾವು ಖರೀದಿಸಿದ್ದ ಟಿಕೆಟನ್ನು! ಭಾರತೀಯ ರೈಲ್ವೆಯು ಒದಗಿಸಿದ್ದ `ಮಿತಿ ರಹಿತ ಬುಕ್ಕಿಂಗ್' ಸವಲತ್ತನ್ನು ಬಳಸಿಕೊಂಡು ಭಾರತದ 50ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಈ ಟಿಕೆಟನ್ನು ಫಕ್ರುದ್ದೀನ್ ಖರೀದಿಸಿದ್ದರು.. ರೈಲ್ವೆ ಇಲಾಖೆಯು ಈಗ ಈ ಸವಲತ್ತುನ್ನು ಹಿಂತೆಗೆದುಕೊಂಡಿದೆ.

1990: ಭಾರತದ ಆಧ್ಯಾತ್ಮಿಕ ಧುರೀಣ ಭಗವಾನ್ ಶ್ರೀ ರಜನೀಶ್ ತಮ್ಮ 58ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ತಮ್ಮ ಬೋಧನೆಗಳಿಂದಾಗಿ ತೀವ್ರ ವಿವಾದಗಳಿಗೂ ಕಾರಣರಾಗಿದ್ದ ರಜನೀಶ್ ಅವರು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಹೆಸರನ್ನು `ಓಶೊ' ಎಂಬುದಾಗಿ ಬದಲಾಯಿಸಿಕೊಂಡಿದ್ದರು.

1937: ಲಾಸ್ ಏಂಜೆಲಿಸ್ನಿಂದ ನ್ಯೂಜೆರ್ಸಿಯ ನ್ಯೂಯಾರ್ಕಿಗೆ 7 ಗಂಟೆ 28 ನಿಮಿಷ, 25 ಸೆಕೆಂಡುಗಳಲ್ಲಿ ತನ್ನ ಮಾನೋಪ್ಲೇನನ್ನು ಹಾರಿಸುವ ಮೂಲಕ ಲಕ್ಷಾಧೀಶ ಹೊವರ್ಡ್ ಹಗ್ಸ್ ಖಂಡಾಂತರ ವಿಮಾನ ಹಾರಾಟ ದಾಖಲೆ ನಿರ್ಮಿಸಿದರು.

1931: ಲಂಡನ್ನಿನಲ್ಲಿ ಪ್ರಥಮ ದುಂಡುಮೇಜಿನ ಪರಿಷತ್ತು ಮುಕ್ತಾಯಗೊಂಡಿತು.

1920: ಜೇವಿಯರ್ ಪೆರೆಜ್ ಡಿ ಕ್ಯೂಲರ್ ಹುಟ್ಟಿದ ದಿನ. ಪೆರುವಿನ ರಾಜತಂತ್ರಜ್ಞರಾದ ಇವರು 1982-91ರ ಅವದಿಯಲ್ಲಿ ವಿಶ್ವಸಂಸ್ಥೆಯ 5ನೇ ಪ್ರಧಾನ ಕಾರ್ಯದರ್ಶಿಯಾಗಿದರ್ಶಿಯಾಗಿದ್ದರು..

1905: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ರಬೀಂದ್ರನಾಥ ಟ್ಯಾಗೋರ್ ಅವರ ತಂದೆಯಾದ ದೇಬೇಂದ್ರನಾಥ ಟ್ಯಾಗೋರ್ ವಿದ್ವಾಂಸ ಹಾಗೂ ಧಾರ್ಮಿಕ ಸುಧಾರಕರಾಗಿದ್ದವರು.

1736: ಸ್ಕಾಟಿಷ್ ಸಂಶೋಧಕ ಜೇಮ್ಸ್ ವಾಟ್ (1736-1819) ಹುಟ್ಟಿದ. ಈತ ಸಂಶೋಧಿಸಿದ ಹಬೆ ಯಂತ್ರ  (ಸ್ಟೀಮ್ ಎಂಜಿನ್) ಕೈಗಾರಿಕಾ ಕ್ರಾಂತಿಗೆ ಮಹತ್ವದ ಕೊಡುಗೆ ನೀಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement