Friday, January 23, 2009

ಇಂದಿನ ಇತಿಹಾಸ History Today ಜನವರಿ 18

ಇಂದಿನ ಇತಿಹಾಸ

ಜನವರಿ 18

ಉಡುಪಿಯ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈದಿನ ಉಷಃಕಾಲದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಪೀಠಾರೋಹಣದ ಜೊತೆಗೇ ಪರ್ಯಾಯದ ಮೊದಲ ದಿನವೇ ಶ್ರೀಕೃಷ್ಣ ದೇವರ ಪೂಜೆ ನೆರವೇರಿಸುವ ಮೂಲಕ ಅವರು ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು. 

2008: ಉಡುಪಿಯ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈದಿನ ಉಷಃಕಾಲದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಪೀಠಾರೋಹಣದ ಜೊತೆಗೇ ಪರ್ಯಾಯದ ಮೊದಲ ದಿನವೇ ಶ್ರೀಕೃಷ್ಣ ದೇವರ ಪೂಜೆ ನೆರವೇರಿಸುವ ಮೂಲಕ ಅವರು ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು. `ಶ್ರೀಕೃಷ್ಣ ಸಂಧಾನ' ಮುರಿದು ಬಿದ್ದ ಹಿನ್ನೆಲೆಯಲ್ಲಿ ಅಷ್ಟ ಮಠಗಳ ಪೈಕಿ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ನಸುಕಿನ 5.55ಕ್ಕೆ ಸುಗುಣೇಂದ್ರ ತೀರ್ಥರು ಪೀಠಾರೋಹಣ ಮಾಡಿದರು. ಸುಮಾರು ಎಂಟು ನೂರು ವರ್ಷಗಳ ಪರ್ಯಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಏಳು ಮಠದ ಯತಿಗಳು ಪರ್ಯಾಯ ಮೆರವಣಿಗೆ ಹಾಗೂ ದರ್ಬಾರಿನಲ್ಲಿ ಭಾಗವಹಿಸಲಿಲ್ಲ. ಅವರು ಬಹುಮತ ನಿರ್ಣಯಕ್ಕೆ ಬದ್ಧರಾಗಿ ಹೊರಗೆ ಉಳಿದರು. `ಪರ್ಯಾಯ ವಿವಾದ'ದ ಅಂತಿಮ ಕ್ಷಣದ ತನಕವೂ ಪುತ್ತಿಗೆ ಶ್ರೀಗಳ ಪರವಾಗಿ ನಿಂತಿದ್ದ ಶೀರೂರು ಮಠದ ಲಕ್ಷ್ಮೀವರ ತೀರ್ಥರೂ ಪರ್ಯಾಯ ಮೆರವಣಿಗೆಗೆ ಕೆಲವೇ ಕ್ಷಣಗಳು ಉಳಿದ್ದಿದಾಗ ನಿಲುವು ಬದಲಾಯಿಸಿ ಗೈರು ಹಾಜರಾದರು. ಬೆಳಿಗ್ಗೆ 4 ಗಂಟೆ ಸುಮಾರಿಗೆ ಹಿಂದಿನ ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಅಕ್ಷಯಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈಯನ್ನು ಆಚಾರ್ಯ ಮಧ್ವರ ಮೂಲ ಪೀಠದ ಬಳಿಯಲ್ಲಿ ಇಟ್ಟು ತೆರಳಿದರು. ನಿರ್ಗಮನ ಪರ್ಯಾಯ ಮಠಾಧೀಶರು ಪರ್ಯಾಯ ಪೀಠವನ್ನೇರಲಿರುವ ಮಠಾಧೀಶರ ಕೈಗೆ ಇದನ್ನೆಲ್ಲ ಒಪ್ಪಿಸುವುದು ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. ಈ ಬಾರಿ ಹಿಂದಿನ ಪರ್ಯಾಯ ಮಠಾಧೀಶರಿಂದ ಅಧಿಕಾರ ಹಸ್ತಾಂತರ ನಡೆಯಲಿಲ್ಲ. ಕೃಷ್ಣಾಪುರ ಶ್ರೀಗಳ ಅನುಪಸ್ಥಿತಿಯಲ್ಲಿ ಭೀಮನಕಟ್ಟೆಯ ರಘುಮಾನ್ಯ ತೀರ್ಥರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನೆರವೇರಿಸಿದರು. ಅಷ್ಟ ಮಠಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಷ್ಟ ಮಠಗಳಿಗೆ ಸೇರದ ಹೊರಗಿನ ಯತಿಯೊಬ್ಬರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಿದಂತಾಯಿತು.

2008: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಮೂಡುಬಿದಿರೆಯ ಬಿ.ದೇವಕುಮಾರ ಶಾಸ್ತ್ರಿ  ಹಾಗೂ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ಸಾಹಿತ್ಯ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹಿರಿಯ ಲೇಖಕಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು ಆಯ್ಕೆಯಾದರು.

2008: ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಎಚ್. ಕೆ. ಪಾಟೀಲ್ ಅವರಿಗೆ ನೀಡಿದ್ದ ಮಾನ್ಯತೆಯನ್ನು ಹಿಂದಕ್ಕೆ ಪಡೆದು ಸಭಾಪತಿಗಳು ಅಧಿಸೂಚನೆ ಹೊರಡಿಸಿದರು. ವಿರೋಧ ಪಕ್ಷದ ನಾಯಕನ ಸ್ಥಾನದ ಮಾನ್ಯತೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಪಾಟೀಲರು ಸಭಾಪತಿ ಪ್ರೊ. ಬಿ.ಕೆ.ಚಂದ್ರಶೇಖರ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮಾನ್ಯತೆಯನ್ನು ಹಿಂದಕ್ಕೆ ಪಡೆಯಲಾಯಿತು.

2008:  ಧರ್ಮಪುರಿಯಲ್ಲಿ ಮೂವರು ವಿದ್ಯಾರ್ಥಿಗಳ ಸಜೀವ ದಹನಕ್ಕೆ ಕಾರಣವಾಗಿದ್ದ, ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಐಎಡಿಎಂಕೆ ಕಾರ್ಯಕರ್ತರಾದ ನೆಡುಂಚೆಳಿಯನ್, ರವೀಂದ್ರನ್ ಮತ್ತು ಸಿ.ಮುನಿಯಪ್ಪನ್ ಅವರಿಗೆ ಹೈಕೋರ್ಟ್ ನೀಡಿದ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಅಪರಾಧಿಗಳು ಸಲ್ಲಿಸಿದ ಮೇಲ್ಮನವಿ ಆಲಿಸಿ ಈ ತಡೆಯಾಜ್ಞೆ  ನೀಡಲಾಯಿತು. 

2008: ಸಿಂಗೂರಿನಲ್ಲಿ ಸಣ್ಣ ಕಾರು ಯೋಜನೆಗಾಗಿ ಮಾಡಿಕೊಳ್ಳಲಾದ ಭೂಸ್ವಾಧೀನವು ಸಿಂಧು ಎಂದು ಕಲ್ಕತ್ತ ಹೈಕೋರ್ಟ್ ತೀರ್ಪು ನೀಡಿತು. ವಿವಾದಾತ್ಮಕ ಸಿಂಗೂರು ಯೋಜನೆ- ಭೂಸ್ವಾಧೀನ ವಿರೋಧಿಸಿ ರೈತರು ಕಳೆದ ಒಂದು ವರ್ಷದಿಂದ ದೀರ್ಘ ಚಳವಳಿ ನಿರತರಾದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆ ಸಮಾಧಾನದ ಉಸಿರಾಡುವಂತೆ ಮಾಡಿತು. ಟಾಟಾ ಕಂಪೆನಿ  ಮುಖ್ಯಸ್ಥ ರತನ್  ಟಾಟಾ ಅವರು ವಿಶ್ವದ ಪ್ರಪ್ರಥಮ ಅಗ್ಗದ `ನ್ಯಾನೋ' ಕಾರನ್ನು  ಅನಾವರಣಗೊಳಿಸಿದ ಒಂದು ವಾರದ ಬಳಿಕ ಹೈಕೋರ್ಟ್ ಈ ತೀರ್ಪು ನೀಡಿತು. `ನ್ಯಾನೋ' ಕಾರು ಸಿಂಗೂರು ಕಾರ್ಖಾನೆಯಲ್ಲಿ ನಿರ್ಮಾಣಗೊಂಡಿದೆ. ಸಿಂಗೂರಿನಲ್ಲಿ 997.11 ಎಕರೆ ಭೂಸ್ವಾಧೀನದ ಪ್ರಕ್ರಿಯೆಯನ್ನು  ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ 11 ಅರ್ಜಿಗಳನ್ನೂ ನ್ಯಾಯಮೂರ್ತಿ ಎಸ್.ಎಸ್. ನಿಜ್ಜರ್ ಮತ್ತು  ನ್ಯಾಯಮೂರ್ತಿ ಪಿ.ಸಿ. ಘೋಷ್  ಅವರನ್ನು  ಒಳಗೊಂಡ ಪೀಠವು ವಜಾ ಮಾಡಿತು. 2007ರ ಫೆಬ್ರುವರಿ 9ರಂದು ಅರ್ಜಿದಾರ ಜೊಯ್ ದೀಪ್ ಮುಖರ್ಜಿ ಅವರು, ಕೊಲ್ಕತ್ತ ಮಹಾನಗರದಿಂದ 40 ಕಿ.ಮೀ. ದೂರದಲ್ಲಿರುವ ಹೂಡಗಲಿ ಜಿಲ್ಲೆಯ ಸಿಂಗೂರಿನಲ್ಲಿ 997.11 ಎಕರೆ ಭೂಮಿಯ ಸ್ವಾಧೀನವನ್ನು  ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.

2008: ಚೆಸ್ ವಿಶ್ವ ಚಾಂಪಿಯನ್ಪಟ್ಟ ಧರಿಸಿದ ಅಮೆರಿಕದ ಮೊತ್ತಮೊದಲ ಸ್ಪರ್ಧಿ ಎನಿಸಿರುವ ಬಾಬ್ಬಿ ಫಿಷರ್ ಅವರು ರೆಜಾವಿಕ್ನಲ್ಲಿ (ಐಲ್ಯಾಂಡ್) ನಿಧನರಾದರು. 64ರ ಹರೆಯದ ಅವರು ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿದ್ದರು. 1972ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ವಿರುದ್ಧ ಗೆಲುವು ಪಡೆದು ವಿಶ್ವ ಚಾಂಪಿಯನ್ ಪಟ್ಟ ತಮ್ಮದಾಗಿಸುವ ಮೂಲಕ ಈ ಸಾಧನೆ ಮಾಡಿದ ಅಮೆರಿಕದ ಮೊದಲ ಸ್ಪರ್ಧಿ ಎಂಬ ಹೆಸರು ಪಡೆದಿದ್ದರು. ತಾನು ಮುಂದಿಟ್ಟ ಬೇಡಿಕೆಗಳನ್ನು ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಈಡೇರಿಸಲಿಲ್ಲ ಎಂಬ ಕಾರಣ 1975ರಲ್ಲಿ ಅವರು ವಿಶ್ವ ಚಾಂಪಿಯನ್ ಶಿಪ್ನಲ್ಲಿ ಸ್ಪರ್ಧಿಸಲು ನಿರಾಕರಿಸಿ, ಕಿರೀಟವನ್ನು ರಷ್ಯಾದ ಅನತೊಲಿ ಕಾರ್ಪೊವ್ ಅವರಿಗೆ ಬಿಟ್ಟುಕೊಟ್ಟಿದ್ದರು. 1943ರ ಮಾರ್ಚ್ 9 ರಂದು ಅಮೆರಿಕದಲ್ಲಿ ಜನಿಸಿದ ಫಿಷರ್ ತಮ್ಮ 14ರ ಹರೆಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ, 15ರ ಹರೆಯದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟ ಧರಿಸಿದ್ದರು. 1992ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ಜೊತೆ `ಮರು ಪಂದ್ಯ' ಆಡುವ ಮೂಲಕ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆಲ್ಗ್ರೇಡಿನಲ್ಲಿ ಈ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಪಾಲ್ಗೊಂಡದ್ದಕ್ಕೆ ಫಿಷರ್ ಮೇಲೆ ಅಮೆರಿಕ ಬಂಧನ ವಾರೆಂಟ್ ಹೊರಡಿಸಿತ್ತು. ಇದರಿಂದ ಆ ಬಳಿಕ ಫಿಷರ್ ಅಮೆರಿಕಕ್ಕೆ ಕಾಲಿಡಲಿಲ್ಲ. ಹಂಗೇರಿಯಲ್ಲಿ ಕೆಲಕಾಲ ಜೀವನ ನಡೆಸಿದ ಬಳಿಕ ಜಪಾನಿಗೆ ತೆರಳಿದರು. ಬಳಿಕ ಐಲ್ಯಾಂಡಿನ ಪೌರತ್ವ ಪಡೆದು ರೆಜಾವಿಕ್ನಲ್ಲಿ ವಾಸಿಸಿದರು.

2008:  ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತಿನಲ್ಲಿ ನಡೆದ ಘೋರ ಘಟನೆಗಳಲ್ಲಿ ಒಂದಾದ ಬಿಲ್ಕಿಷ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 13 ಆರೋಪಿಗಳು ತಪ್ಪಿತಸ್ಥರೆಂದು ಮುಂಬೈನ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯು.ಡಿ. ಸಾಳ್ವಿ ಮಹತ್ವದ ತೀರ್ಪು ನೀಡಿದರು.  ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಪ್ರವೇಶ ನೀಡದೆ ಕ್ಯಾಮರಾ ಚಿತ್ರೀಕರಣ ಸಹಿತ ಈ ಪ್ರಕರಣದ ವಿಚಾರಣೆ  ನಡೆದಿತ್ತು. 2002ರ ಮಾರ್ಚ್ 3ರಂದು ದೋಹಾ ಜಿಲ್ಲೆಯ ದೇವ್ಗರ್ ಬಾರಿಯಾ ಗ್ರಾಮದಲ್ಲಿ ನಡೆದ ಹೇಯ ಕೃತ್ಯದಲ್ಲಿ ಬಿಲ್ಕಿಷ್ ಬಾನು ಕುಟುಂಬದ ಮೇಲೆ ದಾಳಿ ನಡೆಸಿ 8 ಜನರನ್ನು ಅಲ್ಲೇ ಕೊಂದು ಉಳಿದ 6 ಜನರನ್ನು ಅಪಹರಿಸಲಾಗಿತ್ತು. ಅದೇ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾದ ಬಿಲ್ಕಿಷ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತೀವ್ರವಾಗಿ ಹೊಡೆದು ಆಕೆ ಸತ್ತೇ ಹೋಗುತ್ತಾಳೆಂದು ಭಾವಿಸಿ ದಾರುಣ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು. ``ಅವತ್ತು ಮಗಳನ್ನು ನಾನು ಎತ್ತಿಕೊಂಡು ಹೋಗುತ್ತಿದ್ದಾಗ ಅಡ್ಡಬಂದ ಆರೋಪಿಗಳು ಅವಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಕಲ್ಲಿನಿಂದ ಹೊಡೆದು ಕೊಂದರು. `ನೀವೆಲ್ಲಾ ನನ್ನ ಊರಿನವರೇ, ನನ್ನ ಸಂಸಾರವನ್ನು ಉಳಿಸಿ' ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವರು ಕೇಳಲಿಲ್ಲ'' ಎಂದು ಬಿಲ್ಕಿಷ್ ಕೋರ್ಟಿನಲ್ಲಿ ಹೇಳಿದ್ದರು. ಆದರೂ ಗುಜರಾತ್ ಸರ್ಕಾರ ಪ್ರಕರಣವನ್ನು ರದ್ದುಗೊಳಿಸಿದ ನಂತರ ಸ್ಥಳೀಯ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿತ್ತು. ನಂತರ ಬಿಲ್ಕಿಷ್ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು.

2007: ಜಗತ್ತಿನ ಹಿರಿಯಜ್ಜಿ ಎಂದೇ ಹೆಸರಾದ ಕೆನಡಾದ ಜೂಲಿ ವಿನ್ ಫರ್ಡ್ ಬರ್ಟ್ರೆಂಡ್ (115) ಈ ದಿನ ಮುಂಜಾನೆ  ವಿಧಿವಶರಾದರು ಎಂದು ಕ್ಯಾನ್ ವೆಸ್ಟ್ ಸುದ್ದಿ ಸೇವಾ ಸಂಸ್ಥೆ ವರದಿ ಮಾಡಿತು. ಜೂಲಿ ಜಗತ್ತಿನ ಹಿರಿಯಳು ಎಂಬ ಖ್ಯಾತಿ ಪಡೆದಿದ್ದರು. ಗಿನ್ನೆಸ್ ದಾಖಲೆಯ ಪುಸ್ತಕಕ್ಕೂ ಸೇರಿದ್ದರು. ನಿದ್ದೆಯಲ್ಲಿಯೇ ಸಾವಿನ ಮನೆಗೆ ಸರಿದ ಈಕೆ 1891ರ ಸೆಪ್ಟೆಂಬರ್ 16ರಂದು ಕ್ಯೂಬಿಕ್ನಲ್ಲಿ ಜನಿಸಿದ್ದರು.

2007: ಖ್ಯಾತ ಪತ್ರಿಕೋದ್ಯಮಿ ಲಲಿತ್ ಮೋಹನ್ ಥಾಪರ್ (76) ನವದೆಹಲಿಯಲ್ಲಿ ನಿಧನರಾದರು. ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್ (ಬಿ ಐ ಎಲ್ ಟಿ) ಮುಖ್ಯಸ್ಥರಾಗಿದ್ದ ಥಾಪರ್ 1991ರಲ್ಲಿ ದಿ ಪಯೋನೀರ್ ಪತ್ರಿಕೆಯ ಮಾಲೀಕರಾದರು. 1998ರಲ್ಲಿ ಹಾಲಿ ಆಡಳಿತಕ್ಕೆ ಹಸ್ತಾಂತರಿಸುವವರೆಗೂ ಪತ್ರಿಕೆಯನ್ನು ಮುನ್ನಡೆಸಿದರು.

2007: ಪ್ರತಿ ಕುಟುಂಬದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಎಂಬ ಎಂಬ ಖ್ಯಾತಿಗೆ ಗುಲ್ಬರ್ಗ ಜಿಲ್ಲೆ ಪಾತ್ರವಾಯಿತು. ಇದು ಈ ಹೆಗ್ಗಳಕೆ ಹೊಂದಿರುವ ದೇಶದ ಎರಡನೇ ಜಿಲ್ಲೆ ಕೂಡಾ.

2007: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಹೊಸದಾಗಿ ಸೇರಿಕೊಂಡಿರುವ ಪ್ರದೇಶಗಳಲ್ಲಿ ಪಾಲಿಕೆಯು ತಾತ್ಕಾಲಿಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿತು.

2006: ನಾಟಕೀಯ ಬೆಳವಣಿಗೆಗಳಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಜಾತ್ಯತೀತ ಜನತಾದಳವು ಬಿಜೆಪಿ ಜೊತೆಗೂಡಿ ಪರ್ಯಾಯ ಸರ್ಕಾರ ರಚನೆಗೆ ಮುಂದಾಯಿತು. ಜೆಡಿಎಸ್ ಕಾರ್ಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪುತ್ರ ಎಚ್. ಡಿ. ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರನ್ನು ಭೇಟಿ ಮಾಡಿ ಪರ್ಯಾಯ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಜನತಾದಳ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ, ಪುತ್ರ ಎಚ್. ಡಿ. ರೇವಣ್ಣ ಅವರಿಂದ ಇದಕ್ಕೆ ವಿರೋಧ. ಜನವರಿ 26ರ ಒಳಗೆ ಬಹುಮತ ಸಾಬೀತಿಗೆ ರಾಜ್ಯಪಾಲರಿಂದ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಸೂಚನೆ.

1996: ತೆಲುಗು ಚಿತ್ರನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ತಮ್ಮ 72ನೇ ವಯಸಿನಲ್ಲಿ ಹೈದರಾಬಾದಿನಲ್ಲಿ ನಿಧನರಾದರು.

1977: ಸೆರೆಮನೆಯಿಂದ ಮೊರಾರ್ಜಿ ದೇಸಾಯಿ ಮತ್ತಿತರ ಧುರೀಣರ ಬಿಡುಗಡೆ.

1972: ಭಾರತದ ಕ್ರಿಕೆಟ್ ಪಟು ವಿನೋದ್ ಕಾಂಬ್ಳಿ ಹುಟ್ಟಿದರು. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನಿರಂತರ ಡಬಲ್ ಸೆಂಚುರಿ ಸಿಡಿಸುವ ಮೂಲಕ ಅವರು ಖ್ಯಾತಿ ಪಡೆದರು. 

1966: ಭರತನಾಟ್ಯ ಕಲಾವಿದೆ ವಿದ್ಯಾ ರವಿಶಂಕರ್ ಅವರು ಬಿ.ಎಸ್. ಅನಂತರಾಮಯ್ಯ- ಕಮಲಮ್ಮ ದಂಪತಿಯ ಮಗಳಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು.

1957: ಭಾರತೀಯ ಈಜುಗಾರ್ತಿ, ಸೌಂದರ್ಯ ರಾಣಿ, ನಟಿ ನಫೀಸಾ ಅಲಿ ಹುಟ್ಟಿದರು.

1950: ಭಾರತ ಜಾತ್ಯತೀತ ರಾಷ್ಟ್ರ ಎಂದು ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಘೋಷಣೆ.

1950: ಕಲಾವಿದ ಜನಾರ್ದನರಾವ್ ಮಾನೆ ಪಿ.ಎನ್. ಜನನ.

1947: ಭಾರತೀಯ ಗಾಯಕ, ನಟ ಕುಂದನ್ ಲಾಲ್ ಸೈಗಲ್ (1904-1947) ತಮ್ಮ 42ನೇ ವಯಸಿನಲ್ಲಿ ಜಲಂಧರಿನಲ್ಲಿ ನಿಧನರಾದರು. `ದೇವದಾಸ್' ಚಿತ್ರದ ಮೂಲಕ ಅವರು ಅಪಾರ ಖ್ಯಾತಿ ಗಳಿಸಿದರು.

1936: ಇಂಗ್ಲಿಷ್ ಸಣ್ಣ ಕಥೆಗಾರ, ಕವಿ, ಕಾದಂಬರಿಕಾರ ರುಡ್ ಯಾರ್ಡ್ ಕಿಪ್ಲಿಂಗ್ ತಮ್ಮ 71ನೇ ವಯಸಿನಲ್ಲಿ ಇಂಗ್ಲೆಂಡಿನ ಬುರ್ ವಾಶ್ನಲ್ಲಿ ನಿಧನರಾದರು.

1919: ಮೊದಲ ಜಾಗತಿಕ ಸಮರದಿಂದ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗಾಗಿ ಪ್ಯಾರಿಸ್ ಶಾಂತಿ ಸಮ್ಮೇಳನವನ್ನು ಸಂಘಟಿಸಲಾಯಿತು. ಸಮರದಲ್ಲಿ ಪರಾಭವಗೊಂಡ ಜರ್ಮನಿಗೆ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಸಮ್ಮೇಳನದಲ್ಲಿ ವಿಜಯ ಸಾಧಿಸಿದ ನಾಲ್ಕು ಪ್ರಮುಖ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕಾ (ಯುನೈಟೆಡ್ ಸ್ಟೇಟ್ಸ್) ಪ್ರಮುಖ ಪಾತ್ರ ವಹಿಸಿದವು.

1911: ಮೊತ್ತ ಮೊದಲ ಬಾರಿಗೆ ಹಡಗಿನಲ್ಲಿ ವಿಮಾನ ಬಂದಿಳಿಯಿತು. ಪೈಲಟ್ ಇ.ಬಿ. ಎಲಿ ತನ್ನ ವಿಮಾನವನ್ನು ಸಾನ್ ಫ್ರಾನ್ಸಿಸ್ಕೊ ಬಂದರಿನಲ್ಲಿ ಯು ಎಸ್ ಎಸ್ ಪೆನ್ಸಿಲ್ವೇನಿಯಾ ಹಡಗಿನಲ್ಲಿ ತಂದು ಇಳಿಸಿದರು.

1892: ಖ್ಯಾತ ಹಾಲಿವುಡ್ ನಟ ಅಲಿವರ್ ಹಾರ್ಡಿ (1892-1957) ಹುಟ್ಟಿದ ದಿನ. ಅಮೆರಿಕದ ಹಾಸ್ಯ ಚಿತ್ರನಟರಾದ ಇವರು ತಮ್ಮ ಸಹನಟ ಸ್ಟಾನ್ ಲಾರೆಲ್ ಜೊತೆಗೆ ನಟಿಸುತ್ತ ಜನಮನದಲ್ಲಿ ಅಚ್ಚಳಿಯದಂತೆ ತಮ್ಮ ಪ್ರಭಾವ ಬೀರಿದ್ದಾರೆ..

1842: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ (1842-1901) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement