My Blog List

Sunday, March 22, 2009

ಸಮುದ್ರ ಮಥನ 25: ಧನ ಸಂಪತ್ತು, ಜ್ಞಾನ ಸಂಪತ್ತಿ

ಸಮುದ್ರ ಮಥನ 25:

ಧನ ಸಂಪತ್ತು, ಜ್ಞಾನ ಸಂಪತ್ತಿ

 'ಆಯೇ ದುಃಖಂ ವ್ಯಯೇ ದುಃಖಮ್' - ಹಣ ಬಂದಾಗ ಇಷ್ಟೇ! ಎಂಬ ಅತೃಪ್ತಿ, ವಿನಿಯೋಗಿಸಿದಾಗ ಖರ್ಚಾಯಿತಲ್ಲಾ! ಎಂಬ ಬೇಜಾರು ನಿತ್ಯ ನಿರಂತರ. 

ಧನ, ಜ್ಞಾನಗಳೆರಡೂ ಸಂಪದ್ರಾಶಿಯ ಎರಡು ರತ್ನಗಳು. ಇಂದು ಜ್ಞಾನವನ್ನು ಸಂಪತ್ತಾಗಿ ಸ್ವೀಕರಿಸುವವರಿಲ್ಲ. ಧನವೇ ಸರ್ವಸಂಪತ್ತು ಎಂದು ಭಾವಿಸುವವರೇ ಬಹುಸಂಖ್ಯಾತರಿದ್ದಾರೆ. 'ದುಡ್ಡೇ ದೊಡ್ಡಪ್ಪ', 'ಸರ್ವೇ ಗುಣಾಃ ಕಾಂಚನಮಾಶ್ರಯಂತಿ' - ಎಲ್ಲವೂ ಹಣವನ್ನೇ ಅವಲಂಬಿಸಿರುತ್ತದೆ. ಹೀಗೆ ಸಂಪದ್ರಾಶಿಯಲ್ಲಿ ಧನ ಸಂಪತ್ತಿನ ಗಾಥೆ ಬಿಚ್ಚಿಕೊಳ್ಳುತ್ತದೆ.

ಹಣ ಇಟ್ಟುಕೊಂಡವನೇ ರೂಪವಂತ, ಯಶೋವಂತ, ಅಂಥವ, ಇಂಥವ, ಇನ್ನೂ ಏನೇನೋ. ಜನರ  ಬಣ್ಣನೆಗೆ ಪಾರವೇ ಇರುವುದಿಲ್ಲ. ಆದರೆ, ಬಲ್ಲವರು ಹೇಳುತ್ತಾರೆ 'ಧನ ಸಂಪತ್ತಿಗಿಂತ ಜ್ಞಾನ ಸಂಪತ್ತಿಯೇ ಎಷ್ಟೋ ಹಿರಿದು'. ಈ ತತ್ತ್ವ ಸಾಧನೆಗೆ ಇಟ್ಟುಕೊಳ್ಳುವ ತುಲನೆಯ ಕ್ರಮ ಸ್ವಾರಸ್ಯಕರವಾಗಿದೆ.

ಕಳ್ಳಕಾಕರು ಹಣವನ್ನು ಲೂಟಿ ಮಾಡಬಹುದು, ಆದರೆ ಜ್ಞಾನಕ್ಕೆ, ವಿದ್ಯೆಗೆ ಈ ಅಪಾಯವೇ ಇಲ್ಲ. ಹಣ ನಷ್ಟವಾಗದೇ ಹಾಗೇ ಉಳಿದರೆ ರಾಜ್ಯಕ್ಕೆ ತೆರಿಗೆ ಪಾವತಿ ಮಾಡಬೇಕು ಹಾಗೂ ತೆರಿಗೆ ಪಾವತಿಯಲ್ಲೇನಾದರೂ ಕಳ್ಳಬಿದ್ದಿದ್ದು ಅಧಿಕಾರಿಯ ಅರಿವಿಗೆ ಬಂದರೆ ಸಂಪತ್ತೆಲ್ಲ ಮುಟ್ಟುಗೋಲಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ, ವಿದ್ಯೆಗೆ ಪಾವತಿಯ, ಸ್ವಂತ ಲಾಭಕ್ಕಾಗಿ ಕಳ್ಳಬೀಳುವ ಯಾವುದೇ ಗೊಂದಲ ಇಲ್ಲ.

ಧನ, ಕನಕಾದಿಗಳಲ್ಲಿ ಪಾಲನ್ನು ಪಡೆಯಲು ದಾಯಾದಿಗಳು, ಹೆಂಡತಿ, ಮಕ್ಕಳು, ಅವಕಾಶ ಸಿಕ್ಕರೆ ಮೂರನೆಯವರೂ ತುದಿಗಾಲಲ್ಲಿರುತ್ತಾರೆ. ಪಡೆಯುವ ಆಸೆ ಉತ್ಕಟವಾದರೆ ಏನು ಬೇಕಾದರೂ ಮಾಡುತ್ತಾರೆ. ಪ್ರಾಣ ಪಕ್ಷಿಯನ್ನು ಬೇಕಾದರೂ ಹಾರಿಸುತ್ತಾರೆ. ಆದರೆ, ವಿದ್ಯಾ ಸಂಪತ್ತಿಗೆ ಯಾವತ್ತೂ ಈ ಸಮಸ್ಯೆ ಇಲ್ಲ. ವಿದ್ಯೆಯನ್ನು ಧರಿಸಲು ಸಂಸ್ಕಾರ ಬೇಕಾಗಿರುವುದರಿಂದ ಅದಕ್ಕೆ ಪಾಲು-ಪಂಚಾಯಿತಿಯ ಬಾಧೆ ಇಲ್ಲ.

'ವಿತ್ತಾನಾಂ ಆರ್ಜವೇ ದುಃಖಮ್' - ಹಣ ಸಂಪಾದನೆಯೇ ದುಃಖಕರ. 'ಆರ್ಜಿತಾನಾಂ ಚ ರಕ್ಷಣೇ' - ಸಂಪಾದಿಸಿದ್ದನ್ನು ಕಾಪಾಡಿಕೊಳ್ಳುವುದು ದುಸ್ತರ. ಮನೆಯಲ್ಲಿಟ್ಟರೆ ಕಳ್ಳರು ಕದಿಯುವ ಭಯ, ಮಕ್ಕಳು ಅಪಹರಿಸುವ ಅಪಾಯ, ಇನ್ನು ಬ್ಯಾಂಕಿನಲ್ಲಿಟ್ಟರೆ ಬ್ಯಾಂಕ್ ಮುಳುಗಿದರೆ! ಎಂಬ ಅವಿಶ್ವಾಸ ಬಿಟ್ಟೂಬಿಡದೇ ಕಾಡುತ್ತಿರುತ್ತದೆ. 'ಆಯೇ ದುಃಖಂ ವ್ಯಯೇ ದುಃಖಮ್' - ಹಣ ಬಂದಾಗ ಇಷ್ಟೇ! ಎಂಬ ಅತೃಪ್ತಿ, ವಿನಿಯೋಗಿಸಿದಾಗ ಖರ್ಚಾಯಿತಲ್ಲಾ! ಎಂಬ ಬೇಜಾರು ನಿತ್ಯ ನಿರಂತರ. 

ಮತ್ತೆ, ವಿದ್ಯೆಯ ವಿಷಯ ಹಾಗಲ್ಲ. ಆನಂದಕ್ಕೋಸ್ಕರ, ತೃಪ್ತಿಯ ಹಾದಿಯಲ್ಲಿ, ಭಾರವಲ್ಲದ, ಹಗುರಾಗುವುದನ್ನೇ ಆಶಿಸುವ, ಭಾವಿಸುವ, ಒದಗಿಸುವ, ಅದನ್ನೇ ಮುಂದಿನ ಪರಂಪರೆಗೆ ಹರಿಸುವ ರೀತಿಯ ಕಲಾತ್ಮಕ ಪ್ರಕ್ರಿಯೆ (ವಿದ್ಯೆ-ವಿದ್ಯಾರ್ಜನೆಯಲ್ಲಿ) ಆದಿಯಿಂದ ಅಂತ್ಯದವರೆಗೆ ಹರವಿಕೊಂಡಿರುತ್ತದೆ. ರಕ್ಷಣೆಯ ಗುಮ್ಮ ಇರುವುದಿಲ್ಲ. ಪೋಷಣೆಯ ಬೊಮ್ಮ ಸದಾ ಸಮೃದ್ಧವಾಗಿ ಬೆಳೆಯುತ್ತಿರುತ್ತಾನೆ. ನಿರಾತಂಕದ ಭಾವವೇ ಹಂತಹಂತದಲ್ಲಿ ಒಳಗೊಳ್ಳುತ್ತದೆ. ವಿದ್ಯಾರ್ಜನೆಯೊಂದು ಸಂಭ್ರಮ.

ಸಂಪಾದನೆಯಿಂದ ಖರ್ಚು ಮಾಡುವಲ್ಲಿಯವರೆಗೆ ಆತಂಕವನ್ನು ಸೃಜಿಸುವ ಧನ ಸಂಪತ್ತಿಗೆ ಹೆಚ್ಚು ಮಹತ್ತ್ವ ಕೊಡಬೇಕೋ ಅಥವಾ ಆದಿಯಿಂದ ಅಂತ್ಯದವರೆಗೆ ಸುಖದ ಅನುಭೂತಿಯನ್ನೇ ಸೃಜಿಸುವ ಜ್ಞಾನ ಸಂಪತ್ತಿಗೆ ಹೆಚ್ಚಿನ ಒತ್ತನ್ನು ಕೊಡಬೇಕೋ, ಯೋಚಿಸಲೇಬೇಕು. ಮತ್ತೂ ಒಂದೆಂದರೆ ಸದಾಶಯವನ್ನು ಹುಡುಕಿಕೊಂಡು ಧನಲಕ್ಷ್ಮಿ ಬರುತ್ತಾಳೆ. ಸದಾಶಯದ ಮನೆಯಲ್ಲಿ ಕಾಲು ಮುರಿದುಕೊಂಡು ಸುಖವಾಗಿ ಬದುಕುತ್ತಾಳೆ.

ಇದೇ ಲಹರಿಯನ್ನು ಪೋಷಿಸಿ, ಬೆಳೆಸುವ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ

No comments:

Advertisement