My Blog List

Sunday, March 22, 2009

ಇಂದಿನ ಇತಿಹಾಸ History Today ಮಾರ್ಚ್ 19

ಇಂದಿನ ಇತಿಹಾಸ

ಮಾರ್ಚ್ 19

ಭಾರತ ತೊರೆದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಲಂಡನ್ ತಲುಪಿದರು. ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ತಾವು ತೆರಳುವ ಸ್ಥಳಕ್ಕೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತ ತೊರೆದು ತಾವು ತೆರಳುತ್ತಿರುವ ಸ್ಥಳ ಬಹಿರಂಗಪಡಿಸಲು 
ನಿರಾಕರಿಸಿದರು.

2008: ಬೆಳಗಾವಿ ಸೇರಿದಂತೆ ರಾಜ್ಯ ಗಡಿ ಭಾಗದ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೈಗೊಂಡ ಗೊತ್ತುವಳಿ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿತು. ಗಡಿ ವಿವಾದ ಕುರಿತು ಆಗಾಗ್ಗೆ ತಗಾದೆ ತೆಗೆಯುವ ಮಹಾರಾಷ್ಟ್ರದ ಚಾಳಿಯನ್ನು ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಕಟುವಾಗಿ ಟೀಕಿಸಿದರು. ಕನ್ನಡ ಪರ ಹೋರಾಟಗಾರರು ಪ್ರತಿಭಟನೆಯ ಮೂಲಕ ಪ್ರತಿಕ್ರಿಯಿಸಿದರು. ಕನ್ನಡಿಗರ ಸಹನೆ ಕೆಣಕದಂತೆ ಎಲ್ಲರೂ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್, `ಮಹಾರಾಷ್ಟ್ರ ವಿಧಾನಸಭೆಯಲ್ಲಿನ ಗೊತ್ತುವಳಿ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ' ಎಂದು ಸ್ಪಷ್ಟ ಪಡಿಸಿದರು.

2008: `ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1968'  ತಿದ್ದುಪಡಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿ ರಾಜ್ಯದಾದ್ಯಂತ ಜಾರಿಗೆ ಬಂದಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು 2007ರ ಡಿಸೆಂಬರ್ 24 ರಂದು ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ರೈತರು ಮತ್ತು ವರ್ತಕರಿಂದ ಬಂದ ಸಲಹೆ ಹಾಗೂ ಆಕ್ಷೇಪಗಳನ್ನೆಲ್ಲ ಪರಿಶೀಲಿಸಿದ ನಂತರ ಕಾಯ್ದೆ ತಿದ್ದುಪಡಿಯ ಅಂತಿಮ ನಿಯಮಾವಳಿಗಳಿಗೆ  ಅನುಮೋದನೆ ದೊರಕಿತು. ಈದಿನದಿಂದಲೇ ರಾಜ್ಯದಾದ್ಯಂತ ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದಿರುತ್ತದೆ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿತು. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಶಾಸನದ ಅನ್ವಯ ರಾಜ್ಯ ಸರ್ಕಾರವೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿತು.

2008: ಹೊಗೇನಕಲ್ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆ ಚಾಲನೆಯಿಂದ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಮಂಜೂರಾತಿ ಸಹ ದೊರಕಿದೆ. ಇದರಿಂದ ಯಾವುದೇ ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಬೆಂಗಳೂರಿನಲ್ಲಿ ಹೇಳಿದರು.

2008: ಆರ್ಯ ಈಡಿಗ ಮಹಾಸಂಸ್ಥಾನದ ಕುಲಗುರುಗಳಾದ ಆರ್ಯ ಶ್ರೀ ರೇಣುಕಾನಂದ ಸ್ವಾಮೀಜಿಯವರ ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ ಕಾರ್ಯಕ್ರಮ ಬೆಂಗಳೂರಿಗೆ ಸಮೀಪದ ಮಾಗಡಿ ತಾಲ್ಲೂಕಿನ  ಸೋಲೂರು ಗ್ರಾಮದಲ್ಲಿ ನೆರವೇರಿತು. ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿಯವರು ಬೆಳಿಗ್ಗೆ 10.30ಕ್ಕೆ ಸರಿಯಾಗಿ ರೇಣುಕಾನಂದ ಸ್ವಾಮೀಜಿಯವರಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಿದರು. ಸೋಲೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಬೃಹತ್ ನಿವೇಶನದಲ್ಲಿ ನಡೆದ ಈ ಸಮಾರಂಭಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.

2008: ಭಾರತ ತೊರೆದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಲಂಡನ್ ತಲುಪಿದರು. ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ತಾವು ತೆರಳುವ ಸ್ಥಳಕ್ಕೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತ ತೊರೆದು ತಾವು ತೆರಳುತ್ತಿರುವ ಸ್ಥಳ ಬಹಿರಂಗಪಡಿಸಲು ನಿರಾಕರಿಸಿದರು.

2008: ನಿರೀಕ್ಷೆಯಂತೆ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಫಾಹ್ಮಿದಾ ಮಿರ್ಜಾ ಅವರು ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ 60 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಸಭಾಧ್ಯಕ್ಷೆಯಾಗಿ ಆಯ್ಕೆಯಾದರು. ಅವರು ಮುಸ್ಲಿಂ ಲೀಗ್ (ಕ್ಯೂ) ಅಭ್ಯರ್ಥಿ ಸರ್ದಾರ್ ಮೊಹಮದ್ ಇಸ್ಸಾರ್ ಅವರನ್ನು 249-70 ಮತಗಳ ಅಂತರದಲ್ಲಿ ಪರಾಜಯಗೊಳಿಸಿದರು. 

2008: `ಸ್ವತಂತ್ರ ಟಿಬೆಟ್'ಗೆ ಒತ್ತಾಯಿಸಿ ಮಾರ್ಚ್ 14ರಂದು ಲ್ಹಾಸಾದಲ್ಲಿ ಹಿಂಸಾಚಾರಕ್ಕೆ ಕಾರಣಕರ್ತರಾಗಿದ್ದ ಸುಮಾರು 105 ಮಂದಿ ಗಲಭೆಕೋರರು ಚೀನಾದ ಪೊಲೀಸರಿಗೆ ಶರಣಾದರು. ಈ ಹಿಂಸಾಚಾರದಲ್ಲಿ ಕನಿಷ್ಠ 13ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದರು. ಆಕ್ರೋಶಗೊಂಡಿದ್ದ ಗಲಭೆಕೋರರ ಶರಣಾಗತಿಗೆ ಟಿಬೆಟಿನ ಸ್ಥಳೀಯ ಸರ್ಕಾರ ಗಡುವು ನೀಡಿದ್ದರ ಹಿನ್ನೆಲೆಯಲ್ಲಿ 105 ಮಂದಿ  ಗಲಭೆಕೋರರು ಶರಣಾಗತರಾದರು.

2008: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ (60) ಹೃದಯಘಾತದಿಂದ ಚೆನ್ನೈಯಲ್ಲಿ ನಿಧನರಾದರು.  ಅವರು ನಟಿ ರೋಹಿಣಿಯವರನ್ನು ವಿವಾಹವಾಗಿದ್ದರು. ಮೃತರು ತಮಿಳು ಭಾಷಾ ಚಿತ್ರಗಳು ಸೇರಿದಂತೆ ತೆಲುಗು, ಕನ್ನಡ, ಮಲೆಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ರಜನಿಕಾಂತ್ ಅವರ `ಶಿವಾಜಿ' ಹಾಗೂ `ಬಾಸ್' ಚಿತ್ರಗಳು ರಘುವರನ್ ನಟಿಸಿದ ಇತ್ತೀಚಿನ ಪ್ರಸಿದ್ಧ ಚಿತ್ರಗಳು, ನಾಯಕ, ಖಳನಾಯಕ, ಪೋಷಕ ನಟ ಮುಂತಾದ ಪಾತ್ರಗಳಲ್ಲಿ ನಟಿಸಿ ಅವರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದರು.

2008: ಭಾರತದ ಗೂಢಚಾರ ಎಂದು ಪಾಕಿಸ್ಥಾನ ಸರ್ಕಾರವು ಪರಿಗಣಿಸಿದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ದಿನವನ್ನು ಪಾಕಿಸ್ಥಾನ ಸರ್ಕಾರವು ಒಂದು ತಿಂಗಳ ಕಾಲ ಮುಂದೂಡಿತು. ಅವರಿಗೆ ಅಧ್ಯಕ್ಷ ಮುಷರಫ್ ಕ್ಷಮಾದಾನ ನೀಡುವ ಸಂಭವವಿದೆ ಎಂದು ವರದಿಗಳು ತಿಳಿಸಿದವು. ಲಾಹೋರ್  ಮತ್ತು ಮುಲ್ತಾನಿನಲ್ಲಿ 1990ರಲ್ಲಿ ನಾಲ್ಕು ಕಡೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ  ಆರೋಪಿ ಎಂದು ಭಾವಿಸಿ ಬಂಧಿಸಲಾದ ಸರಬ್ಜಿತ್ ಸಿಂಗ್ ಅವರಿಗೆ 1991ರಲ್ಲಿಯೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆಗ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಸುಮಾರು 14ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರಬ್ಜಿತ್ ಅವರನ್ನು 2008ರ  ಏಪ್ರಿಲ್ ಒಂದರಂದು ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿತ್ತು.

2008: ಭ್ರಷ್ಟಾಚಾರದಲ್ಲಿ ಭಾರತ ವಿಶ್ವದ 180 ರಾಷ್ಟ್ರಗಳಲ್ಲಿ 72ನೇ ಸ್ಥಾನದಲ್ಲಿದೆ. ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ವಿಷಯಸೂಚಿ (ಸಿಪಿಐ) ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು ವರದಿ ಈದಿನ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿತು.

2008: ಮೇಘಾಲಯ ಪ್ರಗತಿಪರ ಒಕ್ಕೂಟದ (ಎಂಪಿಎ) ನಾಯಕ ಡೊಂಕುಪರ್ ರಾಯ್ ಅವರು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎಸ್.ಎಸ್. ಸಿಧು ಪ್ರಮಾಣ ವಚನ ಬೋಧಿಸಿದರು. ಡಿ.ಡಿ. ಲಪಾಂಗ್ ನೇತೃತ್ವದ 10 ದಿನಗಳ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ಎದುರಿಸುವ ಬದಲು ವಿಶ್ವಾಸಮತಕ್ಕೆ ಮುನ್ನವೇ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಡೊಂಕುಪರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

2008: ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಅವರನ್ನು ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ಹಿಂದೂ ಉಗ್ರವಾದ ಮತ್ತು ವಾಸ್ತವದ ನಡುವಿನ ಅರ್ಥ ತಿಳಿಯದವರು ಅವರನ್ನು `ಬಲಿಪಶು' ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈದಿನ ಬಿಡುಗಡೆಯಾದ ಅಡ್ವಾಣಿ ಅವರ `ಮೈ ಕಂಟ್ರಿ, ಮೈ ಲೈಫ್' ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ. ವಾಜಪೇಯಿ ಅವರು ಅಡ್ವಾಣಿ ಅವರೊಂದಿಗೆ ಕಳೆದ ನಿಮಿಷಗಳನ್ನು ಮುನ್ನುಡಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಭಾರತೀಯ ಜನಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡ 50ಕ್ಕೂ ಹೆಚ್ಚು ವರ್ಷಗಳಿಂದ `ಅಡ್ವಾಣಿ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ' ಎಂದು ವಾಜಪೇಯಿ ಬರೆದಿದ್ದಾರೆ. `ನೈಜ ಜಾತ್ಯತೀತತೆ'ಯ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದವರು ಅಡ್ವಾಣಿ. ಅವರ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಅವರನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಅಡ್ವಾಣಿ ಸಮಗ್ರ ರಾಷ್ಟ್ರೀಯತೆಯಲ್ಲಿ ಇಟ್ಟ ನಂಬಿಕೆಯನ್ನು ಅವರ ಒಡನಾಡಿಗಳು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ' ಎಂದು ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸುದೀರ್ಘ ಒಡನಾಟದಲ್ಲಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ವಾಜಪೇಯಿ ಅವರು ಒಂದೇ ಸಂಸ್ಥೆಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜೊತೆಯಾಗಿ ಕೆಲಸ ಮಾಡಿದವರು ಒಂದೇ ದಿಕ್ಕಿನಲ್ಲಿ ಯೋಚಿಸಬೇಕು ಎಂದೇನಿಲ್ಲ. ಆದರೆ ಈ ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿದ್ದವು. ಒಗ್ಗಟ್ಟನ್ನು ಇನ್ನಷ್ಟು ಬಲಗೊಳಿಸುವಂತಿದ್ದವು' ಎಂದು ಹೇಳಿದ್ದಾರೆ.

2008: ವೈಜ್ಞಾನಿಕ ಕಲ್ಪನೆಗಳ ಜಗತ್ಪ್ರಸಿದ್ಧ ಕಥೆಗಾರ ಆರ್ಥರ್ ಕ್ಲಾರ್ಕ್ (90) ನಿಧನರಾದರು. ಬಾಹ್ಯಾಕಾಶದಲ್ಲಿ ಪ್ರಸಕ್ತ ನಡೆದಿರುವ ಬಹಳಷ್ಟು ಸಾಧನೆಗಳನ್ನೆಲ್ಲ ಅರ್ಧ ಶತಮಾನದ ಹಿಂದೆಯೇ ತಮ್ಮಷ್ಟಕ್ಕೆ ತಾವೇ ಕಲ್ಪಿಸಿಕೊಂಡು ಕಥಾರೂಪ ನೀಡಿದ್ದ ಆರ್ಥರ್ ಕ್ಲಾರ್ಕ್ ಸಾವಿನಿಂದ ವೈಜ್ಞಾನಿಕ ಕಥಾ ಬರವಣಿಗೆಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಂತಾಯಿತು. ಇಂಗ್ಲೆಂಡಿನಲ್ಲಿ 1917ರಲ್ಲಿ ಜನಿಸಿದ ಇವರು 1956ರ ಸುಮಾರಿಗೆ ಶ್ರೀಲಂಕಾಕ್ಕೆ ಬಂದು ನೆಲೆಸಿದರು. ವೈಜ್ಞಾನಿಕ ಕಲ್ಪನೆಗಳ ಬರಹಗಳಿಗೊಂದು ವಿಶಿಷ್ಠ ರೂಪ ನೀಡಿದ ಕ್ಲಾರ್ಕ್ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಮಾನವನು ಚಂದ್ರನ ಮೇಲೆ ನಡೆದಾಡುವ ಬಗ್ಗೆ ಅರ್ಧ ಶತಮಾನಗಳ ಹಿಂದೆಯೇ ಕ್ಲಾರ್ಕ್ ಕಲ್ಪಿಸಿಕೊಂಡು ಕಥೆ ಬರೆದಾಗ ಎಲ್ಲರೂ ಲೇವಡಿ ಮಾಡಿದ್ದರು. ಆದರೆ ಅದಾಗಿ ಕೇವಲ ಒಂದೂವರೆ ದಶಕದಲ್ಲಿ ಮಾನವನು ಚಂದ್ರನ ಮೇಲೆ ಕಾಲಿರಿಸಿದ್ದನು. ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಕ್ಲಾರ್ಕ್ ಉಪಗ್ರಹಗಳ ಕಲ್ಪನೆಯೊಂದಿಗೆ ಕಥೆ ಬರೆದಿದ್ದರು. ಆಗ ಕೂಡ ಓದುಗರು `ಇದೆಲ್ಲಾ ಏನು, ಕಲ್ಪನೆಗೂ ಒಂದು ಮಿತಿ ಬೇಡವೆ' ಎಂದಿದ್ದರು. ಆದರೆ ಕೆಲವೇ ಸಮಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಉನ್ನತ ಮಟ್ಟ ತಲುಪಿತು. ಇವತ್ತು ಉಪಗ್ರಹಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವೈಜ್ಞಾನಿಕ ಕಥೆಗಳ ಈ ವಯೋವೃದ್ಧನಿಗೆ 1998ರಲ್ಲಿ ಇಂಗ್ಲೆಂಡ್ ಸರ್ಕಾರವು `ಸರ್' ಗೌರವ ನೀಡಿ ಅಭಿನಂದಿಸಿತ್ತು.

2007: ಅಮೆರಿಕದ ಉತ್ತರ ನೆವಾಡಾ ರಾಜ್ಯ ವಿಧಾನಸಭಾ ಅಧಿವೇಶನವನ್ನು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಿಸುವುದರೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಉತ್ತರ ನೆವಾಡಾದ ಹಿಂದೂ ದೇವಾಲಯದ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ರಾಜನ್ ಜೆದ್ ವಿಧಾನಸಭೆಯ ಆರಂಭದಲ್ಲಿ ಗಾಯತ್ರಿ ಮಂತ್ರ ಪಠಿಸಿದರು. ನಂತರ ಉಪನಿಷತ್ತಿನಿಂದಲೂ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸಿದರು. 1864ರಲ್ಲಿ ನೆವಾಡಾ ರಾಜ್ಯ ವಿಧಾನಸಭೆ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಪ್ರಾರ್ಥನೆ ನೆರವೇರಿಸಿದರು. ಜೆದ್ ಅವರು ಕಾಷಾಯ ವಸ್ತ್ರ, ಹಣೆಯಲ್ಲಿ ಚಂದನದ ತಿಲಕ, ರುದ್ರಾಕ್ಷಿ ಮಾಲೆ ಧರಿಸಿ ಬಂದು ಗಾಯತ್ರಿ ಮಂತ್ರ ಹಾಗೂ ಋಗ್ವೇದದ ಶ್ಲೋಕಗಳನ್ನು ಪಠಿಸಿದರು.

2007: ದಕ್ಷಿಣ ರಷ್ಯಾದ ಗ್ರಾಮವೊಂದರ ವೃದ್ಧಾಶ್ರಮದಲ್ಲಿ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ 63 ಹಿರಿಯ ನಾಗರಿಕರು ಮೃತರಾಗಿ, 33 ಮಂದಿ ಗಾಯಗೊಂಡರು.

2007: ಇರಾಕಿನಲ್ಲಿ ಸುಮಾರು 148 ಮಂದಿ ಶಿಯಾಗಳನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ, ಸದ್ದಾಮ್ ಹುಸೇನರ ಮಾಜಿ ಸಹಾಯಕರಾಗಿದ್ದ ತಾಹಾ ಯಾಸಿನ್ ರಂಜಾನ್ ಅವರನ್ನು ಬಾಗ್ದಾದಿನಲ್ಲಿ ಬೆಳಗಿನ ಜಾವ ಗಲ್ಲಿಗೇರಿಸಲಾಯಿತು.

2007: ಸೇಂಟ್ ಲೂಸಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಗರಿಷ್ಠ ರನ್ (257) ಅಂತರದ ಜಯ ಗಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತು. ಇದರ ಜೊತೆಗೇ ವಿಶ್ವ ಕಪ್ ಕ್ರಿಕೆಟಿನಲ್ಲೇ ಅತಿ ಹೆಚ್ಚು ಮೊತ್ತ (413), ಕೊನೆಯ 10 ಓವರುಗಳಲ್ಲಿ 136 ರನ್ ಗಳಿಕೆಯ ದಾಖಲೆಗಳನ್ನೂ ಭಾರತ ನಿರ್ಮಿಸಿತು. ವಿಶ್ವದ ಮಹಾ ಕ್ರಿಕೆಟ್ ಸಮರಗಳಲ್ಲಿ 25 ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವ ಮೂಲಕ ಸೌರವ ಗಂಗೂಲಿ ಇನ್ನೊಂದು ದಾಖಲೆ ಸೃಷ್ಟಿಸಿದರು. ಒಂದೇ ಪಂದ್ಯದಲ್ಲಿ 18 ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನೂ ಭಾರತ ಸರಿಗಟ್ಟಿತು.

2007: ಸುಮಾರು 15 ವರ್ಷಗಳಿಂದ  ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾಗಿದ್ದ ರಾಘವೇಂದ್ರ ಖಾಸನೀಸ (74) ಅವರು, ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಸಂಜೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಮಾರ್ಚ್ 20ರಂದು ಹರಿಶ್ಚಂದ್ರ ಘಾಟಿನಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತರಾಗಿದ್ದ ಅವರು ಕಳೆದ ಎರಡೂವರೆ ದಶಕಗಳಲ್ಲಿ ಸುಮಾರು 25 ಅಪರೂಪದ ಕತೆಗಳನ್ನು ನಾಡಿನ ಓದುಗರಿಗೆ ನೀಡಿದ್ದರು. `ಖಾಸನೀಸರ ಕತೆಗಳು' (1984) ಹಾಗೂ `ಬೇಡಿಕೊಂಡವರು' (1989) ಈ ಎರಡು ಕಥಾ ಸಂಕಲನಗಳು. (ಇವೆರಡನ್ನೂ ಸೇರಿಸಿ ಮೂರನೆಯದಾಗಿ ಹೊರಬಂದಿದ್ದ `ಖಾಸನೀಸರ ಸಮಗ್ರ ಕತೆಗಳು'). ಅವರು ಬರೆದದ್ದು ಕಡಿಮೆಯಾದರೂ ಅವರಿಗೆ ಕಥಾ ಪ್ರಪಂಚದಲ್ಲಿ ಶಾಶ್ವತವಾದ ಸ್ಥಾನವನ್ನು ತಂದು ಕೊಟ್ಟದ್ದು `ತಬ್ಬಲಿಗಳು' ಕತೆ. ಉಳಿದಂತೆ `ಮೋನಾಲಿಸಾ', `ಅಲ್ಲಾವುದ್ದೀನನ ಅದ್ಭುತ ದೀಪ', `ಹೀಗೂ ಇರಬಹುದು' ಮುಂತಾದ ಅಪರೂಪದ ಕತೆಗಳನ್ನು ಅವರು ಬರೆದಿದ್ದಾರೆ. ವಿಜಾಪುರದ ಇಂಡಿ ಗ್ರಾಮದಲ್ಲಿ 1933ರಲ್ಲಿ ಜನಿಸಿದ ಖಾಸನೀಸರು ಧಾರವಾಡದಲ್ಲಿ ತಮ್ಮ ಬಿಎ ಪದವಿ ಮುಗಿಸಿದ ನಂತರ ಮುಂಬಯಿಯಲ್ಲಿ ಇಂಗ್ಲಿಷ್ ಎಂ.ಎ. ಓದಿದ್ದರು. ಆನಂತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮಾ ಪೂರೈಸಿ ಪುಣೆಯ ಎಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದರು. ಆಮೇಲೆ ಬೆಂಗಳೂರಿಗೆ ಬಂದ ಅವರು 1991ರವರೆಗೂ ಬೆಂಗಳೂರು ವಿವಿಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಶಸ್ತಿಗಳು: ಸಾಕಷ್ಟು ಜನಪ್ರಿಯ ಕಥೆಗಾರರಾಗಿದ್ದರೂ ಖಾಸನೀಸರಿಗೆ ಪ್ರಶಸ್ತಿಗಳು ಬಂದದ್ದು ಬಹಳ ಕಡಿಮೆ. 1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಸೃಜನಶೀಲ ಕಥಾ ಪ್ರಶಸ್ತಿ ಹಾಗೂ 1995ರಲ್ಲಿ ಗೌರವ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. ಮೃತರು ಪತ್ನಿ ಕಾಂತಾ, ಮೂವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದರು. 

2007: ಉದ್ಯಮ ಕ್ಷೇತ್ರದ  ಸಾಧನೆಗಾಗಿ  ನೀಡಲಾಗುವ `ಇಂಡಿಯಾ ಇಂಟರ್ ನ್ಯಾಷನಲ್ ಫೌಂಡೇಷನ್' ನ 2006ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಅನಿವಾಸಿ ಭಾರತೀಯ ಉದ್ಯಮಿ, `ಕೋಬ್ರಾ ಬೀರ್' ಸ್ಥಾಪಕ ಕರಣ್ ಬಿಲಿಮೋರಿಯಾ ಮತ್ತು ಇಂಗ್ಲೆಂಡಿನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದಕ್ಕಾಗಿ ನೀಡಲಾಗುವ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ನಂದಕುಮಾರ ಅವರು ಗೆದ್ದುಕೊಂಡರು. 1989ರಲ್ಲಿ, ತಮ್ಮ 28ರ ಹರೆಯದಲ್ಲಿ 20,000 ಪೌಂಡ್ ಸಾಲದೊಂದಿಗೆ `ಕೋಬ್ರಾ ಬೀರ್' ಆರಂಭಿಸಿದ ಲಾರ್ಡ್ ಬಿಲಿಮೋರಿಯಾ ಅದನ್ನು ವಾರ್ಷಿಕ 14.50 ಕೋಟಿ ಪೌಂಡ್ ವಹಿವಾಟು ನಡೆಸುವ ಜಾಗತಿಕ ಬೀರ್ ಕಂಪೆನಿಯನ್ನಾಗಿ ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಬಂತು. 2004ರಲ್ಲಿ ರಾಣಿಯಿಂದ ಸಿಬಿಇ ಪ್ರಶಸ್ತಿಯನ್ನೂ  ಪಡೆದ ಬಿಲಿಮೋರಿಯಾ ಲಂಡನ್ನಿನ ಥಾಮಸ್  ವ್ಯಾಲಿ ವಿಶ್ವವಿದ್ಯಾಲಯದ ಕುಲಪತಿ ಕೂಡಾ. ಲಂಡನ್  ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ. ಮತ್ತು  ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದ ನಂದಕುಮಾರ ಅವರು ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾಭವನದ ಚಟುವಟಿಕೆಗಳನ್ನು ಸಂಘಟಿಸಿ, ಭಾರತೀಯ ಸಂಸ್ಕೃತಿ ಬೆಳೆಸುವ ಮುಖ್ಯಶಕ್ತಿಯಾಗಿದ್ದು, ಸಂಗೀತ, ನೃತ್ಯದ ಪದವಿ  ತರಗತಿಗಳ ಆಯೋಜಕರೂ ಹೌದು. ಇಂಗ್ಲೆಂಡಿನ ಜ್ಯುಡಿಷಿಯಲ್ ಅಪಾಯಿಂಟ್ ಮೆಂಟ್ ಕಮೀಷನ್ ಅಧ್ಯಕ್ಷರಾದ ಉಷಾ ಪ್ರಶಾರ್ ಲಂಡನ್ನಿನಲ್ಲಿ ಪ್ರಶಸ್ತಿ  ಪ್ರದಾನ ಮಾಡಿದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಜಯ್ ಪೆಂಬಾ ತಮಾಂಗ್ ಅವರಿಗೆ ಶೂಟಿಂಗ್ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ಪೇರ್ಸ್ ಬಂಗಾರ, ರಾಜ್ಯವರ್ಧನ್ ಸಿಂಗ್ ರಾಠೋಡ್- ವಿಕ್ರಮ್ ಭಟ್ನಾಗರ್ ಅವರಿಗೆ ಡಬಲ್ ಟ್ರ್ಯಾಪ್ ಫೇರ್ಸ್ ರಜತ, ಅಂಜಲಿ ಭಾಗ್ವತ್- ಅನುಜಾ ಜಂಗ್ ಅವರಿಗೆ 50 ಮೀ. ರೈಫಲ್ ಮೂರು ಭಂಗಿ ಫೇರ್ಸಿನಲ್ಲಿ ಎರಡನೇ ಸ್ಥಾನ, ವೇಟ್ ಲಿಫ್ಟಿಂಗಿನಲ್ಲಿ ಮೊಹಮ್ಮದ್ ಜಾಕೀರ್ ಅಸುದುಲ್ಲಾ ಅವರಿಗೆ ಪುರುಷರ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದವು.

2006: ಬಿಜೆಪಿಯಿಂದ ಉಚ್ಚಾಟಿತರಾದ ಉಮಾಭಾರತಿ ಅವರ ರಾಲಿಯಲ್ಲಿ ಪಾಲ್ಗೊಳ್ಳುವ ಯೋಜನೆ ಪ್ರಕಟಿಸಿದ  ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಮದನ್ ಲಾಲ್ ಖುರಾನಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷದ ಅಧ್ಯಕ್ಷ ರಾಜನಾಥ್ಸಿಂಗ್ ಅವರು ಅಮಾನತುಗೊಳಿಸಿದರು.

2001: ವೆಸ್ಟ್ ಇಂಡಿಯನ್ ಬೌಲರ್ ಕರ್ಟ್ನ್ ವಾಲ್ಶ್ 500 ಟೆಸ್ಟ್ ವಿಕೆಟುಗಳನ್ನು ಪಡೆದ ಪ್ರಥಮ ಬೌಲರ್ ಎನಿಸಿಕೊಂಡರು. ಟ್ರಿನಿಡ್ಯಾಡ್ನ ಪೋರ್ಟ್ ಆಫ್ ಸ್ಪೇನಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ನಡೆದ ದ್ವಿತೀಯ ಟೆಸ್ಟಿನ ಎರಡನೇ ಇನ್ನಿಂಗ್ಸಿನಲ್ಲಿ ಜಾಕ್ ಕಾಲಿಸ್ ಅವರನ್ನು ಔಟ್ ಮಾಡಿ ಅವರು ಈ ಸಾಧನೆ ಮೆರೆದರು.

1982: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಂಸದೀಯ ಪಟು, ಕಿಸಾನ್ ಮಜ್ದೂರ್ ದಳ ಸ್ಥಾಪಕ ಜೆ.ಬಿ. ಕೃಪಲಾನಿ (1888-1982) ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.

1973: ಕಲಾವಿದ ಪ್ರಭುಲಿಂಗಯ್ಯ ಬಿ.ಟಿ. ಜನನ.

1965: ಕಲಾವಿದ ರಾಜಶೇಖರ ಜೆ.ಎಂ. ಜನನ.

1937: ಕಲಾವಿದ ಸತ್ಯನಾರಾಯಣ ಎಂ.ಕೆ. ಜನನ.

1926: ಖ್ಯಾತ ಸಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಮೊಡಂಕಾಪು ಬಳಿಯ ಏರ್ಯ ಲಕ್ಷ್ಮೀನಾರಾಯಣ ಆಳ್ವ ಜನನ.

1924: ಕಲಾವಿದ ಎಂ.ಆರ್. ಗೌತಮ್ ಜನನ.

1912: ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ವೇಷಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ವಾಸುದೇವ ಗಿರಿಮಾಜಿ (19-3-1912ರಿಂದ 24-8-1993) ಗೋವಿಂದರಾವ್ ಗಿರಿಮಾಜಿ- ತುಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ರಂಗಭೂಮಿ ನಟನೆಯೊಂದಿಗೆ ಸಿನಿಮಾದೊಂದಿಗೂ ನಂಟು. ಕನ್ನಡ, ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕ, ನಿರ್ದೇಶಕ, ನಾಯಕ, ಖಳನಾಯಕ ಪಾತ್ರಗಳನ್ನು ನಿರ್ವಹಿಸಿದ್ದರು.

1891: ಅರ್ಲ್ ವಾರನ್ (1891-1974) ಹುಟ್ಟಿದ ದಿನ. 1953-69ರ ಅವಧಿಯಲ್ಲಿ ಅಮೆರಿಕಾದ 14ನೇ ಮುಖ್ಯ ನ್ಯಾಯಾಧೀಶರಾದ ಇವರು ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಹತ್ಯೆಯ ತನಿಖೆಗಾಗಿ ರಚಿಸಲಾದ ಆಯೋಗದ ಅಧ್ಯಕ್ಷರಾಗಿದ್ದರು.

1876: ಸರ್ ಜಾನ್ ಹರ್ಬರ್ಟ್ ಮಾರ್ಷಲ್ (1876-1958) ಹುಟ್ಟಿದ ದಿನ. ಸಿಂಧೂ ಕಣಿವೆ ನಾಗರಿಕತೆಯನ್ನು ಬೆಳೆಸಿದ್ದ ಹರಪ್ಪ ಮತ್ತು ಮೊಹೆಂಜದಾರೊ ನಗರಗಳ ಪತ್ತೆಗೆ ನೆರವಾದ ಉತ್ಖನನಗಳ ಕಾರಣಕರ್ತನಾದ ಈತ ಭಾರತೀಯ ಪುರಾತತ್ವ ಸಮೀಕ್ಷೆಯ 1902-31) ಡೈರೆಕ್ಟರ್ ಜನರಲ್ ಆಗಿದ್ದಾಗ ಈ ಉತ್ಖನನ ನಡೆಯಿತು.

1821: ಸರ್ ರಿಚರ್ಡ್ (ಫ್ರಾನ್ಸಿಸ್) ಬರ್ಟನ್ (1821-1890) ಹುಟ್ಟಿದ ದಿನ. ಈತ `ದಿ ಅರೇಬಿಯನ್ ನೈಟ್ಸ್' ನ ಭಾಷಾಂತರವನ್ನು ಪ್ರಕಟಿಸಿದ ಇಂಗ್ಲಿಷ್ ವಿದ್ವಾಂಸ ಹಾಗೂ ಸಂಶೋಧಕ.  

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement