My Blog List

Sunday, March 29, 2009

ಇಂದಿನ ಇತಿಹಾಸ History Today ಮಾರ್ಚ್ 23

ಇಂದಿನ ಇತಿಹಾಸ

ಮಾರ್ಚ್ 23

ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು `ಗಿಳಿವಿಂಡು' ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2008: ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು `ಗಿಳಿವಿಂಡು' ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2008: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಆರ್ಭಟ ಮುಂದುವರೆಯಿತು. ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಮೂವರು ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗುಲ್ಬರ್ಬ ಮತ್ತು ವಿಜಾಪುರ ಜಿಲ್ಲೆಗಳಲ್ಲಿ  ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತರಾದರು. ಕುರಿ, ಕೋಳಿ ಹಾಗೂ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿ ಭಾರೀ ನಷ್ಟ ಸಂಭವಿಸಿತು. ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ರೈತರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾದರು. ಬೆಳೆದು ನಿಂತಿದ್ದ ಜಯಧರ ಹತ್ತಿ, ಬಿಳಿಜೋಳ, ಗೋಧಿ, ಕಡಲೆ, ಕುಸುಬಿ, ಕೆಂಪು ಮೆಣಸಿನಕಾಯಿ ಬೆಳೆಗಳೆಲ್ಲ ಮಳೆಗೆ ಆಹುತಿಯಾದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

2008: 700- 900 ಕಿ.ಮೀ. ದೂರದವರೆಗೆ ಕ್ರಮಿಸಬಲ್ಲ ಘನ ಇಂಧನ ಚಾಲಿತ `ಅಗ್ನಿ-1' ಕ್ಷಿಪಣಿಯ ಪರೀಕ್ಷೆ ಒರಿಸ್ಸಾದ ಬಾಲಸೋರಿಗೆ ಸಮೀಪದ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನಡೆಯಿತು.  ಬೆಳಗ್ಗೆ 10.15ರ ಸಮಯದಲ್ಲಿ ಸಂಚಾರಿ ಉಡಾವಣಾ ವೇದಿಕೆಯಿಂದ (ಮೊಬೈಲ್ ಲಾಂಚರ್) ಕ್ಷಿಪಣಿ ಉಡಾಯಿಸಲಾಯಿತು. `ಅಗ್ನಿ-1' ಭಾರತೀಯ ಸೇನೆಗೆ ಪೂರೈಸಿರುವ ಏಕೈಕ ಘನ ಇಂಧನ ಕ್ಷಿಪಣಿ. ಪ್ರತಿ ಕ್ಷಿಪಣಿಯ ಸಾಮರ್ಥ್ಯ ಒರೆಗಲ್ಲಿಗೆ ಹಚ್ಚಲು ಡಿ ಆರ್ ಡಿ ಒ ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವುದು. 2007ರ ಅಕ್ಟೋಬರಿನಲ್ಲಿ ವ್ಹೀಲರ್ ದ್ವೀಪದಿಂದಲೇ `ಅಗ್ನಿ-1'ರ ಪರೀಕ್ಷೆ ನಡೆಸಲಾಗಿತ್ತು. ದೇಶೀಯವಾಗಿ ನಿರ್ಮಿತವಾದ ಅಗ್ನಿ 15 ಮೀಟರ್ ಎತ್ತರವಾಗಿದ್ದು, 12 ಟನ್ ತೂಕವಿದೆ. 1000 ಕೆ.ಜಿ. ತೂಕದ ಶಸ್ತ್ರ ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

2008: ಹೂಳು ತುಂಬಿ, ಮಲಿನಗೊಂಡಿದ್ದ ಶತಮಾನದಷ್ಟು ಹಳೆಯದಾದ ಕಲ್ಯಾಣಿಯ ಹೂಳು ತೆಗೆಯುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮಸ್ಥರು ಮಹತ್ವದ ಕಾರ್ಯ ಕೈಗೊಂಡರು. ನೂರಕ್ಕೂ ಹೆಚ್ಚು ಮಂದಿಯ ತಂಡಗಳು ಮೂರು ದಿನಗಳಿಂದ ಎಡೆ ಬಿಡದೆ ಕಲ್ಯಾಣಿ ಬದಿ ಎತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡವು. ನೇಕಾರರು, ಕೃಷಿಕರು ವ್ಯಾಪಾರಿಗಳು ತಮ್ಮ ಕಸುಬನ್ನೇ ಮರೆತು ಕಲ್ಯಾಣಿ ಸ್ವಚ್ಛ ಕಾರ್ಯದಲ್ಲಿ ತಲ್ಲೀನರಾದರು. ಮಕ್ಕಳು ಮುದುಕರೆನ್ನದೆ ಗ್ರಾಮದ ಎಲ್ಲಾ ವರ್ಗದ ಜನ ಈ ಕಲ್ಯಾಣಿಯ ಬದಿ ಎತ್ತುವ ಕೆಲಸದಲ್ಲಿ ತೊಡಗಿದರು. ಕೊಳವೆ ಬಾವಿಗಳೇ ಇಲ್ಲದ ಕಾಲದಲ್ಲಿ, ನೂರು ವರ್ಷಗಳ ಹಿಂದೆ ಕೊಡಿಯಾಲದ ಸಾವುಕಾರ ಲಕ್ಷ್ಮಯ್ಯ ಊರಿನ ಋಣ ತೀರಿಸಲಿಕ್ಕಾಗಿ ಈ ಕಲ್ಯಾಣಿ ನಿರ್ಮಿಸಿದ್ದರು. ಇಡೀ ಊರಿಗೆ ಇದು ನೀರಿನ ಮೂಲವೂ ಆಗಿತ್ತು. 170 ಚದುರ ಅಡಿ ವಿಸ್ತಾರದ, ಸುಮಾರು 50 ಅಡಿ ಆಳದ ಕಲ್ಯಾಣಿಯನ್ನು ಚುರಕಿ ಗಾರೆ ಹಾಗೂ ಕಲ್ಲು ಚಪ್ಪಡಿ ಬಳಸಿ ನಿರ್ಮಿಸಲಾಗಿತ್ತು. ಕಲ್ಯಾಣಿ ಬತ್ತಿ ಹೋಗದಂತೆ ಕೂಗಳತೆಯ ದೂರದಲ್ಲಿ ನೀರಿನ ಕಟ್ಟೆ ನಿರ್ಮಿಸಿ, ಅಲ್ಲಿಂದ ನೀರಿನ ಪೂರಣವಾಗುವಂತೆ ಮಾಡಲಾಗಿತ್ತು. ಇದು ಕಲ್ಯಾಣಿ ನಿರ್ಮಸಿದವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಒಂದಾನೊಂದು ಕಾಲದಲ್ಲಿ ಊರಿನ ನೀರಿನ ಆಕರವಾಗಿದ್ದ ಈ  ಕಲ್ಯಾಣಿಯು ಹೂಳು ತುಂಬಿ ನೀರು ಬಗ್ಗಡವಾಗಿತ್ತು. ಹತ್ತು ವರ್ಷಗಳಿಂದ ನೀರು ಬಳಕೆಗೆ ಬಾರದಷ್ಟು ಮಲಿನಗೊಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಯುವಕರನ್ನು ಕಟ್ಟಿಕೊಂಡು, ಸರ್ಕಾರದ ನೆರವಿಗೆ ಕಾಯದೆ ಸ್ವಪ್ರೇರಣೆಯಿಂದ ಕಲ್ಯಾಣಿಯ ಮಲಿನ ತೊಳೆಯಲು ಟೊಂಕ ಕಟ್ಟಿ ನಿಂತರು.

2008: ದೆಹಲಿ-  ಚಂಡೀಗಢ-ಅಮೃತಸರ ಮಾರ್ಗದ ಪ್ರಯಾಣ ಸಮಯವನ್ನು ಅರ್ಧದಷ್ಟು ಉಳಿಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು  ರೈಲ್ವೆ ಇಲಾಖೆಯು ಜಾಗತಿಕ ಟೆಂಡರ್ ಆಹ್ವಾನಿಸಿತು. ಸದ್ಯ ದೆಹಲಿ ಮತ್ತು ಅಮೃತಸರ ನಡುವಿನ 520  ಕಿ.ಮೀ.  ದೂರವನ್ನು ಶತಾಬ್ದಿ  ಎಕ್ಸ್ ಪ್ರೆಸ್ ಐದುವರೆ ಗಂಟೆಯಲ್ಲಿ ಕ್ರಮಿಸುವುದು. ಇದೇ ಮಾರ್ಗದಲ್ಲಿ ಗಂಟೆಗೆ  300 ಕಿ.ಮೀ. ವೇಗದಲ್ಲಿ ಪ್ರಸ್ತಾವಿತ ಅತೀ ವೇಗದ ಅಥವಾ ಬುಲೆಟ್ ರೈಲನ್ನು ಓಡಿಸುವ ಸಲುವಾಗಿ ಪೂರ್ವಭಾವಿ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಯಿತು.

2008: ಸೇಂಟ್ ಪೀಟರ್ ಎಂದೇ ಕರೆಯಲಾಗುವ ಅಪೋಸ್ತ್ಲೇ ಪೀಟರ್ ಮೊದಲ ಪೋಪ್ ಆಗಿರಲಿಲ್ಲ ಹಾಗೂ ಈತ ಎಂದೂ ರೋಮ್ ನಗರಕ್ಕೆ ಕಾಲಿಟ್ಟಿರಲೇ ಇಲ್ಲ ಎಂದು ಹೊಸ ಸಾಕ್ಷ್ಯಚಿತ್ರವೊಂದು ಪ್ರತಿಪಾದಿಸಿತು. ಚಾನಲ್-4ರಲ್ಲಿ ಪ್ರಸಾರವಾದ ಈ ಸಾಕ್ಷ್ಯಚಿತ್ರದಲ್ಲಿ ಈ ಕುರಿತ ಹಲವಾರು ಅಂಶಗಳು ವ್ಯಕ್ತವಾದವು. ಪಶ್ಚಿಮದಲ್ಲಿ ಕ್ರೈಸ್ತ ಮತ ಪ್ರಸಾರ ಮಾಡಬೇಕೆಂಬ ಏಕೈಕ ಉದ್ದೇಶದಿಂದ ವ್ಯಾಟಿಕನ್ ನಗರ ಜಗತ್ತನ್ನು ದಿಕ್ಕುತಪ್ಪಿಸಿದೆ ಎಂದು ಪ್ರಮುಖ ಶಿಕ್ಷಣವೇತ್ತರು ಈ ಸಾಕ್ಷ್ಯಚಿತ್ರದಲ್ಲಿ ಆಪಾದಿಸಿದರು. ಸೇಂಟ್ ಪೀಟರ್ ಅವರ ಅಂತ್ಯಸಂಸ್ಕಾರ ರೋಮ್ನಲ್ಲಿ ನಡೆಯಿತು ಎಂಬ ಸಂಗತಿಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಈ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿರುವ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದ ಡಾ. ರೋಬರ್ಟ್ ಬೆಕ್ ಫೋರ್ಡ್ ಹೇಳಿದರು. ವಿಶ್ವದ ರೋಮ್ ಸಮುದಾಯದ ಮೇಲೆ ನಂಬಿಕೆ ಹುಟ್ಟಿಸುವ ದಿಸೆಯಲ್ಲಿ ಸರಿಸುಮಾರು 2 ಸಾವಿರ ವರ್ಷಗಳ ಕೆಳಗೆ ಸೇಂಟ್ ಪೀಟರನನ್ನು ಇಲ್ಲಿ ಸಮಾಧಿ ಮಾಡಲಾಯಿತು ಎಂಬ ಅಂತೆ ಕಂತೆಗಳನ್ನು ಹೆಣೆಯಲಾಗಿದೆ ಎಂದು ಬೆಕ್ ಫೋರ್ಡ್ ಹೇಳಿರುವುದಾಗಿ `ದಿ ಸಂಡೇ ಟೆಲಿಗ್ರಾಫ್' ವರದಿ ಮಾಡಿತು.

2007: ಬೆಂಗಳೂರಿನ ಕೋಟೆ ಶ್ರೀರಾಮಸೇವಾ ಮಂಡಲಿಯ ಸ್ಥಾಪಕ `ಎಸ್.ವಿ. ನಾರಾಯಣಸ್ವಾಮಿ ರಾವ್' ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ (2007) ಹಿರಿಯ ಗಾಯಕ ವಿದ್ವಾನ್ ನೇದನೂರಿ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

2007: ಹಿರಿಯ ಕವಿ ಡಾ. ಎನ್. ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇರಾಕಿನಲ್ಲಿ ಇರುವ ಅಮೆರಿಕದ ಪಡೆಗಳ ವಾಪಸಾತಿಯನ್ನು  ನಾಲ್ಕು ತಿಂಗಳಲ್ಲಿ ಆರಂಭಿಸಲು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಅವಕಾಶ ಒದಗಿಸುವ ಡೆಮಾಕ್ರಾಟಿಕ್ ಯೋಜನೆಗೆ  ಸೆನೆಟ್ ಸಮಿತಿಯ ಅನುಮೋದನೆ ಲಭಿಸಿತು. ಇರಾಕ್ ಮತ್ತು  ಆಫ್ಘಾನಿಸ್ಥಾನದಲ್ಲಿನ ಸಮರಗಳಿಗೆ ನಿಧಿ ಒದಗಿಸುವುದನ್ನು ಮುಂದುವರೆಸಲು ಅವಕಾಶ ನೀಡುವ 121.6 ಶತಕೋಟಿ ಡಾಲರ್ ಮೊತ್ತದ ಮಸೂದೆಗೆ ಸೆನೆಟ್ ಹಣಕಾಸು ಸಂಬಂಧಿತ ಸಮಿತಿ ಅನುಮೋದನೆ ನೀಡಿತು. ಆದರೆ ಅಮೆರಿಕದ ಎಲ್ಲ ಯುದ್ಧ ಪಡೆಗಳನ್ನು 2008ರ ಮಾರ್ಚ್ 31 ರ ಒಳಗಾಗಿ  ಹಿಂದಕ್ಕೆ  ಕರೆಸಿಕೊಳ್ಳಬೇಕು ಎಂಬ ಗಡುವನ್ನೂ  ವಿಧಿಸಿತು. ಇಂತಹುದೇ ಪ್ರಸ್ತಾವಕ್ಕೆ  ಮಂಜೂರಾತಿ  ನೀಡಲು ಸೆನೆಟ್ ವಾರದ ಹಿಂದೆ ವಿಫಲಗೊಂಡಿತ್ತು.

2007: ಪಾಕಿಸ್ಥಾನದ ಖ್ಯಾತ ಕ್ರಿಕೆಟ್ ತರಬೇತುದಾರ ಬಾಬ್ ವೂಲ್ಮರ್ ಸಾವಿನ ಸುತ್ತ ಹಬ್ಬಿದ ಬಿರುಗಾಳಿಯ ನಡುವೆ ದಿಕ್ಕು ತೋಚದೆ ಕಂಗೆಟ್ಟಿದ್ದ ಜಮೈಕಾ ಪೊಲೀಸರು ಕೊನೆಗೂ `ಇದು ಕೊಲೆ' ಎಂಬ ತೀರ್ಮಾನಕ್ಕೆ ಬಂದರು.

2007: ಕೋಲಾರ ಮೂಲದ ಭಾರತೀಯ ತೈಲ ನಿಗಮದ (ಐಓಸಿ) ಮಾರಾಟ ಅಧಿಕಾರಿ ಎಸ್. ಮಂಜುನಾಥ ಅವರ ಹತ್ಯೆ ಪ್ರಕರಣದ ಎಲ್ಲ 8 ಆರೋಪಿಗಳನ್ನು ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲಾ ನ್ಯಾಯಾಲಯ `ತಪ್ಪಿತಸ್ಥರು' ಎಂದು ಘೋಷಿಸಿತು. ಲಖನೌ ಐಐಎಂನಿಂದ ಪದವಿ ಪಡೆದಿದ್ದ ಮಂಜುನಾಥ 2005ರ ನವೆಂಬರ್ 19ರಂದು ಕೊಲೆಯಾಗಿದ್ದರು. ಕಲಬೆರಕೆ ಪೆಟ್ರೋಲ್ ಮಾರಾಟ ಮಾಡಿದ್ದಕ್ಕಾಗಿ ಪರವಾನಗಿ ರದ್ದು ಪಡಿಸಿದ್ದಕ್ಕಾಗಿ ಪವನ್ ಪೆಟ್ರೋಲ್ ಪಂಪ್ ಮಾಲೀಕರ ಮಗ ಪವನ್ ಕುಮಾರ್ ಕೆಲವು ಹಂತಕರ ನೆರವಿನಿಂದ ಮಂಜುನಾಥ ಅವರ ಕೊಲೆ ಮಾಡಿಸಿದ್ದ. ಕೆಲದಿನಗಳ ನಂತರ ಮಂಜುನಾಥನ ಶವ ಪಕ್ಕದ ಸೀತಾಪುರ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.

2007: ನಕಲಿ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಮತ್ತು ಆತನ ನಾಲ್ವರು ಸಹಚರರನ್ನು (ಇರ್ಫಾನ್ ಅಹಮದ್, ವಜೀರ್ ಅಹಮದ್ ಸೈಲಿಕ್ ಮತ್ತು ಪ್ರದೀಪ ಕುಮಾರ್) ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ವಿಶ್ವನಾಥ ಅಗಡಿ ಅವರು ಈ ತೀರ್ಪನ್ನು ಪ್ರಕಟಿಸಿದರು.

2007: ವಿಶೇಷ ಆರ್ಥಿಕ ವಲಯ (ಎಸ್ ಇ ಜೆಡ್) ಸ್ಥಾಪನೆ ಕುರಿತಂತೆ ಸಚಿವರ ತಂಡ (ಜಿ ಎಫ್ ಎಂ) ಅಧ್ಯಯನ ನಡೆಸಿ ವರದಿ ನೀಡುವವರೆಗೆ ಹೊಸ ಎಸ್ ಇ ಜೆಡ್ ಸ್ಥಾಪನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಕೈಗಾರಿಕಾ ರಾಜ್ಯ ಸಚಿವ ಅಶ್ವಿನಿ ಕುಮಾರ ತಿಳಿಸಿದರು.

 2006:  ಲಾಭದಾಯಕ ಹುದ್ದೆಯ ವಿವಾದದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭಾ ಸದಸ್ಯತ್ವ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ `ತಲೆದಂಡ' ಒಪ್ಪಿಸಿದರು. ಸೋನಿಯಾಗಾಂಧಿ ರಕ್ಷಣೆಗೆ ಯುಪಿಎ ಸರ್ಕಾರ ಇನ್ನೇನು ಸುಗ್ರೀವಾಜ್ಞೆ ಹೊರಡಿಸಲಿದೆ ಎಂಬ ನಿರೀಕ್ಷೆಯ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಅನಿರೀಕ್ಷಿತ ನಿರ್ಧಾರದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್  ಅವರು ವಕೀಲರ ತಂಡದ ಜತೆ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಒಂಭತ್ತು ಪುಟಗಳ ದೀರ್ಘ ಮನವಿ ಪತ್ರ ಸಲ್ಲಿಸಿ ಸೋನಿಯಾಗಾಂಧಿ ಹೊಂದಿರುವ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆಯಾಗಿರುವ ಕಾರಣ ಸಂವಿಧಾನದ 102ನೇ ವಿಧಿ ಪ್ರಕಾರ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕೋರಿದ್ದು ಇದಕ್ಕೆ ಕಾರಣವಾಯಿತು. ಸೋನಿಯಾ ದಾರಿಯನ್ನೇ ಅನುಸರಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್ ಅವರೂ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಶಾಸಕರ ಸದಸ್ಯತ್ವ ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜನತಾದಳದ (ಎಸ್) 39 ಮಂದಿ ಶಾಸಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ವಿಧಾನಸಭೆ ಅಧ್ಯಕ್ಷ ಕೃಷ್ಣ ಸದನದಲ್ಲಿ ಪ್ರಕಟಿಸಿದರು. ಶಾಸಕ ವಾಟಾಳ್ ನಾಗರಾಜ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದರು.

2006: ತನ್ನ ಗೆಳತಿಯ ಕತ್ತು ಹಿಸುಕಿ ಕೊಂದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಲೆ ಹ್ಯೂ ಅಂಗ್ (27) ಎಂಬ ವ್ಯಕ್ತಿಗೆ ಆತನ ಕೋರಿಕೆ ಮೇರೆಗೆ ಹನಾಯ್ ನ್ಯಾಯಾಲಯ ಮರಣದಂಡನೆ ವಿಧಿಸಿತು. 2004ರ ಜುಲೈ ತಿಂಗಳಲ್ಲಿ ಹೊ ಚಿ ಮಿನ್ ನಗರದಲ್ಲಿ ಗೆಳತಿಯ ಜೊತೆಗೆ ಕಾರು ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿತು. ಆಗ ಆತನನ್ನು ಬಿಟ್ಟು ಪರಾರಿಯಾಗಲು ಯತ್ನಿಸ್ದಿದಕ್ಕಾಗಿ ಗೆಳತಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದ. ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪಾಪಪ್ರಜ್ಞೆಯಿಂದ ಕೊರಗುತ್ತಿದ್ದ ಆತ ಮೇಲ್ಮನವಿ ಸಲ್ಲಿಸಿ ಮರಣದಂಡನೆ ವಿಧಿಸಲು ಕೋರಿದ. ಆತನ ಮೊರೆಗೆ ನ್ಯಾಯಾಲಯ ಓಗೊಟ್ಟು ಮರಣದಂಡನೆ ದಯಪಾಲಿಸಿತು.

2006: ವಿಶ್ವಮಟ್ಟದ ಪೈಪೋಟಿ ಎದುರಿಸಲು ಬ್ರಿಟನ್ ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸುವುದಕ್ಕಾಗಿ ಬ್ರಿಟಿಷ್ ಹಣಕಾಸು ಸಚಿವ ಗೋರ್ಡಾನ್ ಬ್ರೌನ್ ಅವರಿಗೆ ಸಲಹೆ ನೀಡಲು ರಚಿಸಲಾದ ಸಮಿತಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಟಾಟಾ ಸಮೂಹದ ರತನ್ ಟಾಟಾ ಸೇರ್ಪಡೆಯಾದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಮಹಿಳೆಯರ 50 ಮೀ. ರೈಫಲ್ ವಿಭಾಗದಲ್ಲಿ ಭಾರತದ ಅನುಜಾ ಜಂಗ್ ಸ್ವರ್ಣ ಪದಕ ಗೆದ್ದುಕೊಂಡರು.

2001: ರಷ್ಯದ ಬಾಹ್ಯಾಕಾಶ ನಿಲ್ದಾಣ `ಮೀರ್' (ರಷ್ಯದಲ್ಲಿ ಈ ಶಬ್ದಕ್ಕೆ ಶಾಂತಿ ಮತ್ತು ಜಗತ್ತು ಎಂಬ ಅರ್ಥಗಳಿವೆ.) 15 ವರ್ಷಗಳ ಸೇವೆಯ ಬಳಿಕ ಆಸ್ಟ್ರೇಲಿಯಾ ಮತ್ತು ಚಿಲಿ ನಡುವಣ ಜನವಸತಿ ರಹಿತ ಫೆಸಿಫಿಕ್ ಸಾಗರದಲ್ಲಿ ಬಿತ್ತು. ಇದು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಬಾಹ್ಯಾಕಾಶ ನಿಲ್ದಾಣವಾಗಿ ಕಾರ್ಯ ನಿರ್ವಹಿಸಿತು.

 1983: ಮೊತ್ತ ಮೊದಲ ಬಾರಿಗೆ ಖಾಯಂ ಕೃತಕ ಹೃದಯ ಕಸಿ ಮಾಡಿಸಿಕೊಂಡ ಡಾ. ಬಾರ್ನಿ ಕ್ಲಾರ್ಕ್ ಅವರು ಯುನಿವರ್ಸಿಟಿ ಉಟಾಹ್ ಮೆಡಿಕಲ್ ಸೆಂಟರಿನಲ್ಲಿ ಮೃತರಾದರು. ಕೃತಕ ಹೃದಯದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು.

1980: ಭಾರತದ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ್ನು ಗೆದ್ದುಕೊಂಡ ಪ್ರಥಮ ಭಾರತೀಯ ಎನಿಸಿಕೊಂಡರು. ಅವರು ಸೋಲಿಸಿದ್ದು ಇಂಡೋನೇಸಿಯಾದ ಲೀಮ್ ಸ್ವೀ ಕಿಂಗ್ ಅವರನ್ನು. 

1955: ಕಲಾವಿದ ತಿಮ್ಮಯ್ಯ ಸಿ.ಎಂ. ಜನನ.

1951: ಹಲವಾರು ರಂಗಸಂಸ್ಥೆಗಳನ್ನು ಕಟ್ಟಿ, ನಿರ್ದೇಶಕರಾಗಿ ಹಲವಾರು ಮಂದಿ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ರಂಗಭೂಮಿಗೆ ತಂದ ರಂಗಕರ್ಮಿ ಪ್ರಸನ್ನ ಅವರು ಪ್ರಹ್ಲಾದಾಚಾರ್ಯ- ಹೇಮಾವತಿ ಬಾಯಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜನಿಸಿದರು. ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಬಹುಮಾನ, ಪು.ತಿ.ನ. ಪುರಸ್ಕಾರ, ಚದುರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪ್ರಸನ್ನ ಅವರಿಗೆ ಸಂದಿವೆ.

1931: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರನ್ನು ಗಲ್ಲಿಗೇರಿಸಲಾಯಿತು.

1928: ಕಲಾವಿದ ಬಿ.ಆರ್. ಶೇಷಾದ್ರಿ ಜನನ.

1919: ಕಲಾವಿದ ಸುಗಂಧ ರಾಮನ್ ಜನನ.

1919: ಬೆನಿಟೋ ಮುಸ್ಸೋಲಿನಿ ಇಟಾಲಿಯನ್ ಫ್ಯಾಸಿಸ್ಟ್ ಪಾರ್ಟಿಯನ್ನು ಮಿಲಾನಿನಲ್ಲಿ ಸ್ಥಾಪಿಸಿದ. ಮುಸ್ಸೋಲಿನಿ ಈ ಪಾರ್ಟಿಗೆ `ಫ್ಯಾಸಿ ಡಿ ಕೊಂಬಾಟ್ಟಿಮೆಂಟೋ' ಎಂದು ಹೆಸರಿಟ್ಟ. ಇದರೊಂದಿಗೆ `ಫ್ಯಾಸಿಸಂ' ಜನ್ಮತಳೆಯಿತು.

1910: ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಹುಟ್ಟಿದ ದಿನ. ಲೋಹಿಯಾ ಅವರು 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಪ್ರಜಾ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1910: ಅಕಿರಾ ಕುರೊಸಾವಾ ಹುಟ್ಟಿದ ದಿನ. ಜಪಾನಿನ ಚಿತ್ರ ನಿರ್ದೇಶಕರಾದ ಇವರು `ರಾಶೊಮೋನ್' `ಸೆವೆನ್ ಸಮುರಾಯಿ' ಚಿತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದರು.

1899: ಗೋವಾವನ್ನು ಪೋರ್ಚುಗೀಸ್ ಆಡಳಿತದಿಂದ ಮುಕ್ತಗೊಳಿಸುವ ಸಲುವಾಗಿ ಹೋರಾಡಿದ ಭಾರತೀಯ ಪತ್ರಕರ್ತ, ಕವಿ, ಸ್ವಾತಂತ್ರ್ಯ ಹೋರಾಟಗಾರ ಟೆಲೋ ಡಿ ಮಸ್ಕರೇಙಸ್ (1899-1979) ಜನ್ಮದಿನ.

1893: ಕಲಾವಿದ ಎನ್.ವಿ. ಚಿನ್ನಾಚಾರಿ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement