ಇಂದಿನ ಇತಿಹಾಸ
ಮಾರ್ಚ್ 24
ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು.
2008: ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು. ಸುಮಾರು 150 ಅತಿಥಿಗಳು ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾದರು. ಈ ಮದುವೆ ಅದೆಷ್ಟು ಗೌಪ್ಯವಾಗಿ ನಡೆಯಿತೆಂದರೆ ಆಹ್ವಾನಿತ ಅತಿಥಿಗಳು ಈ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ.
2008: 2005ರಲ್ಲಿ ಕಾರ್ಯಾರಂಭ ಮಾಡಿದ ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವ ಈದಿನ ನಡೆಯಿತು. ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ, ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ಮತ್ತು ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು. 21 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಚಿನ್ನದ ಪದಕ ಪಡೆದರು. ತುಮಕೂರು ವಿವಿಯ ಮೊದಲ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು. ಮೊದಲೇ ಡಾಕ್ಟರೇಟ್ ಸಿಕ್ಕಿರುವುದರಿಂದ ಮತ್ತೊಮ್ಮೆ ಅದರ ಅಗತ್ಯವಿಲ್ಲ, ಆದ್ದರಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಶ್ರೀಗಳು ಮೊದಲೇ ವಿವಿ ಆಡಳಿತದ ಗಮನಕ್ಕೆ ತಂದಿದ್ದರು.
2008: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಆರೋಪಿಗಳಾದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಆರ್. ಕೆ. ಶರ್ಮಾ ಮತ್ತು ಇತರ ಮೂವರಿಗೆ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಶರ್ಮಾ ಮತ್ತು ಇತರರು ಕೊಲೆ ಹಾಗೂ ಕ್ರಿಮಿನಲ್ ಒಳಸಂಚಿಗಾಗಿ ಶಿಕ್ಷೆಗೆ ಒಳಗಾದರು. ಶಿವಾನಿ ಬಳಿ ಶರ್ಮಾಗೆ ವಿರುದ್ಧವಾದ ಕೆಲವು `ದಾಖಲೆಗಳು' ಇದ್ದ ಕಾರಣಕ್ಕಾಗಿ ಶಿವಾನಿಯನ್ನು ಕೊಲೆಗೈಯಲಾಯಿತು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು.
2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.
2008: ಮೊಟ್ಟಮೊದಲ ಸಂಸದೀಯ ಚುನಾವಣೆಯನ್ನು ಕಾಣುತ್ತಿರುವ ಭೂತಾನಿನಲ್ಲಿ ಜನರು ಈದಿನ ತಮ್ಮ ಮತದಾನದ ಹಕ್ಕನ್ನು ಸಂಭ್ರಮೋತ್ಸಾಹದೊಂದಿಗೆ ಚಲಾಯಿಸಿದರು. ವಿಶ್ವದ ವಿವಿಧ ಕಡೆಗಳಲ್ಲಿ ಅಧಿಕಾರದಿಂದ ಕೆಳಗಿಳಿಯದೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದರೆ, ಭೂತಾನಿನಲ್ಲಿ ಮಾತ್ರ ಇದಕ್ಕೆ ವಿರುದ್ಧ. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದದ್ದು ಒಂದು ವಿಶೇಷ.
2008: 65 ವರ್ಷದ ಭೂತಾನೀ ಮಹಿಳೆಯೊಬ್ಬರು (ಅಜ್ಜಿ) ತನ್ನ ಮತ ಚಲಾಯಿಸಲು ರಬ್ಬರ್ ಚಪ್ಪಲಿಗಳನ್ನು ಧರಿಸಿ, ಕೈಯಲ್ಲಿ ಊರುಗೋಲು ಹಿಡಿದುಕೊಂಡು 600 ಕಿ.ಮೀ. ದೂರ ಪಾದಯಾತ್ರೆ ಮಾಡಿದರು. ಈಕೆಯ ಹೆಸರು ತ್ಸೆವಾಂಗ್ ಡೇಮಾ. ಪೂರ್ವದ ಟ್ರಶಿಯಾಂಗ್ ಸ್ತೆ ಜಿಲ್ಲೆಯಲ್ಲಿನ ಮತಗಟ್ಟೆ ತಲುಪಲು ಈಕೆ ಥಿಂಪುವಿನಿಂದ 14 ದಿನಗಳ ಪಾದಯಾತ್ರೆ ಮಾಡಿದರು. ಚಳಿಯಲ್ಲಿ ಗಢಗಢ ನಡುಗುತ್ತಾ, ಬೆಟ್ಟಗುಡ್ಡಗಳ ಕಡಿದಾದ ದಾರಿಯನ್ನು ಹತ್ತಿ ಇಳಿದರು.
2008: ಪ್ರಧಾನಿ ಮನಮೋಹನ್ ಸಿಂಗ್ ಅವರು 5000 ಕೋಟಿ ರೂಪಾಯಿ ವೆಚ್ಚದ ಅನಿಲ ಆಧಾರಿತ ವಿದ್ಯುತ್ ಯೋಜನೆಗೆ ನವದೆಹಲಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
2008: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ನೇತೃತ್ವದ ಆರನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಶಿಫಾರಸು ಸಲ್ಲಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವಿವಿಧ ಭತ್ಯೆಗಳನ್ನು ದುಪ್ಪಟ್ಟುಗೊಳಿಸಲು ಆಯೋಗ ಶಿಫಾರಸು ಮಾಡಿತು. ವೇತನ ಆಯೋಗ ಮಾಡಿದ ಶಿಫಾರಸಿನಿಂದ ಸರ್ಕಾರದ ಬೊಕ್ಕಸಕ್ಕೆ 2008-2009ನೇ ಸಾಲಿನಲ್ಲಿ 12,561 ಕೋಟಿ ರೂಪಾಯಿಗಳಷ್ಟು ಹೊರೆಯಾಗುವುದು.
2008: ಕೆಲವು ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾದರೆಂಬ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಜನರ ಗುಂಪೊಂದು ಆಗ್ರಾ ಜಿಲ್ಲೆಯ ಖೇರಗಢ ಪಟ್ಟಣದ ಪೊಲೀಸ್ ಠಾಣೆಗೆ ಕಿಚ್ಚಿಟ್ಟು ಆವರಣದಲ್ಲಿದ್ದ ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ಅನಿಲ್ ಗಾರ್ಗ್ ಅವರು ಕುಡಿದ ಮತ್ತಿನಲ್ಲಿ ಹಿಂಸಾಚಾರ ನಿರತರಾಗಿದ್ದ ನಾಲ್ವರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಇದಕ್ಕೆ ಕಾರಣವಾಯಿತು. ಪೊಲೀಸರು ಈ ಯುವಕರನ್ನು ಹಾಗೆಯೇ ಬಿಟ್ಟು ಬಿಟ್ಟಾಗ ಸಿಟ್ಟಿಗೆದ್ದ ಗಾರ್ಗ್ ಬೆಂಬಲಿಗರು ಗಲಭೆಯಲ್ಲಿ ತೊಡಗಿದರು ಎಂಬುದು ಪೊಲೀಸರ ಹೇಳಿಕೆ.
2008: ವಿಶ್ವವಿಖ್ಯಾತ ಕಾಶ್ಮೀರದ ದಲ್ ಸರೋವರಕ್ಕೆ ಮುಖಮಾಡಿ ತಲೆ ಎತ್ತಿರುವ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಏಷ್ಯಾದ ಅತಿ ದೊಡ್ಡ ಟ್ಯುಲಿಪ್ ಹೂವಿನ ಉದ್ಯಾನ 2008ರ ಏಪ್ರಿಲ್ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯ ನಿರ್ದೇಶಕ ಸರ್ವರ್ ನಾಗೇಶ್ ತಿಳಿಸಿದರು.
2007: ಪಾಕಿಸ್ಥಾನದ ಮುಖ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಪ್ರಮಾಣ ವಚನ ಸ್ವೀಕರಿಸಿದರು ಪಾಕಿಸ್ಥಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ ಪ್ರಥಮ ಹಿಂದೂ ಎಂಬ ಹೆಗ್ಗಳಿಕೆ ಅವರದಾಯಿತು.
2007: ಭಾರತೀಯ ಸಂಜಾತರಿಗೆ ನೀಡುವ ಇಂಡಿಯನ್ ಅಬ್ರಾಡ್ ಪ್ರಶಸ್ತಿಯನ್ನು ಪೆಪ್ಸಿಕೊ ಕಂಪೆನಿಯ ಅಧ್ಯಕ್ಷೆ ಇಂದಿರಾ ನೂಯಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್, ಸಾಹಿತಿ ಸಲ್ಮಾನ್ ರಷ್ದಿ ಹಾಗೂ ಸಮುದಾಯ ನಾಯಕ ಸ್ವದೇಶ್ ಚಟರ್ಜಿ ಅವರಿಗೆ ನ್ಯೂಯಾರ್ಕಿನಲ್ಲಿ ನೀಡಲಾಯಿತು.
2007: ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಹನ್ನೊಂದು ಮಂದಿ ಮೃತರಾದರು. ಕ್ಷಿಪಣಿ ದಾಳಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಬೈಲೋರಷ್ಯ ಪ್ರಕಟಿಸಿತು.
2007: ಬಹುಕೋಟಿ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ನಗರದ ವಿಶೇಷ ಸಿಬಿಐ ನ್ಯಾಯಾಲಯ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನ ನಾಲ್ವರು ಸಹಚರರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 6.75 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ತೆಲಗಿಗೆ ರಾಜ್ಯದಲ್ಲಿ ವಿಧಿಸಲಾದ ಮೊದಲ ಶಿಕ್ಷೆ ಇದಾಯಿತು.
2007: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟು ಮಂದಿ ಕ್ರಿಯಾಶೀಲರಿಗೆ `ನಾಡಚೇತನ' ಪ್ರಶಸ್ತಿ ಸೇರಿದಂತೆ ಹೆಸರಾಂತ ನಿರ್ದೇಶಕರಾಗಿದ್ದ ದಿವಂಗತ ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನ ಸಿಜಿಕೆ ಪ್ರಶಸ್ತಿಯನ್ನು ಸಾಹಿತಿ ಕೋಟಗಾನಹಳ್ಳ ರಾಮಯ್ಯ ಅವರಿಗೆ ರಂಗಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪ್ರಕಟಿಸಿತು.
2007: ಆವಶ್ಯಕತೆಗೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.
2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಮೂರು ಭಂಗಿ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.
2006: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಹ್ಯಾನ್ ಮೈಂಗ್ ಸೂಕ್ ಆಯ್ಕೆಯಾದರು.
2006: ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಸೇರಿದಂತೆ ಲಾಭದ ಹುದ್ದೆ ಹೊಂದಿದ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 18 ಸದಸ್ಯರ ವಿರುದ್ಧ ಬಂದ ದೂರುಗಳನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಲಾಭದ ಹುದ್ದೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಕಪಿಲಾ ವಾತ್ಸಾಯನ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
2006: ಲಾಭದ ಹುದ್ದೆ ಹೊಂದಿರುವ ಜಾರ್ಖಂಡಿನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಬಿಜೆಪಿ ನೇತೃತ್ವದ ಅರ್ಜುನ್ ಮುಂಡಾ ಅವರ ಎನ್ ಡಿ ಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿತು.
1983: ಕಲಾವಿದೆ ಶ್ವೇತಾ ರತ್ನಾಕರ ಭಟ್ಟ ಜನನ.
1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಯಾದರು. ಕೇಂದ್ರದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಅವರು ಸ್ಥಾಪಿಸಿದರು. 81 ವರ್ಷ ವಯಸ್ಸಾಗಿದ್ದ ಅವರು ಅತ್ಯಂತ ಹಿರಿಯ ಪ್ರಧಾನಿ ಎನ್ನಿಸಿಕೊಂಡರು.
1943: ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದ ನರ್ತಕಿ ಲಲಿತಾ ಶ್ರೀನಿವಾಸನ್ ಅವರು ಶಿವನ ಸಮುದ್ರದಲ್ಲಿ ಜನಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಸುಲಲಿತ ನೃತ್ಯ ಸಂಶೋಧನೆಗಾಗಿ ಶ್ರಮಿಸಿದ ಅವರು ಅನೇಕ ಪ್ರಾತ್ಯಕ್ಷಿಕೆ, ನೃತ್ಯ ಕಾರ್ಯಾಗಾರಗಳನ್ನು ಸಂಘಟಿಸಿದರು. ದೇಶ- ವಿದೇಶಗಳಲ್ಲಿ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ನಡೆಸಿದರು.
1932: ಜಗತ್ತಿನ ಮುಂಚೂಣಿಯ ಕ್ರಿಕೆಟ್ ಪ್ರಚಾರಕ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಅವರು ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಐರೋಪ್ಯರು ಮತ್ತು ಪಾರ್ಸಿಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಅವರು ಆರಂಭಿಸಿದರು.
1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಬರ್ಲಿನ್ನಿನ ಫಿಸಿಯೊಲಾಜಿಕಲ್ ಸೊಸೈಟಿಯಲ್ಲಿ ಎಲ್ಲ ರೂಪದ ಕ್ಷಯ (ಟ್ಯೂಬರ್ ಕ್ಯುಲೋಸಿಸ್) ರೋಗಕ್ಕೆ ಕಾರಣವಾದ ಟ್ಯೂಬರ್ ಕುಲ್ ಬ್ಯಾಸಿಲಸ್ಸನ್ನು ತಾನು ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಿರುವುದಾಗಿ ಪ್ರಕಟಿಸಿದ. (ಈತ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂಬುದನ್ನೂ ಹೆಚ್ಚು ಕಡಿಮೆ ಕಂಡುಕೊಂಡಿದ್ದ, ಆದರೆ ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ರೊನಾಲ್ಡ್ ರಾಸ್ ತಾನು ಕಂಡುಕೊಂಡ ಇದೇ ನಿರ್ಣಯವನ್ನು ಕೋಚ್ ಗಿಂತ ಮೊದಲೇ ಪ್ರಕಟಿಸಿ ಈತನನ್ನು ಹಿಂದೆ ಹಾಕಿದ ಎಂಬುದು ಬಹುಜನಕ್ಕೆ ಗೊತ್ತಿಲ್ಲದ ಸಂಗತಿ).
1874: `ಹ್ಯಾರಿ ಹೌಡಿನಿ' ಎಂದೇ ಖ್ಯಾತನಾಗಿದ್ದ ಅಮೆರಿಕದ ಖ್ಯಾತ ಐಂದ್ರಜಾಲಿಕ ಎರಿಕ್ ವೀಸ್ (1874-1926) ಹುಟ್ಟಿದ ದಿನ.
1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ ವಿಲಿಯಂ ಮೋರಿಸ್ ಜನ್ಮದಿನ. ಈತ ನಿರ್ಮಿಸಿದ ಪೀಠೋಪಕರಣ, ಬಟ್ಟೆಗಳು, ವಾಲ್ ಪೇಪರ್ ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment