My Blog List

Monday, August 10, 2009

ಇಂದಿನ ಇತಿಹಾಸ History Today ಆಗಸ್ಟ್ 06

ಇಂದಿನ ಇತಿಹಾಸ

ಆಗಸ್ಟ್
06


ಕರ್ನಾಟಕದ ಹೆಮ್ಮೆಯ ಆಟಗಾರ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸಿನಲ್ಲಿ 92ನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ನಂತರ ಡಬಲ್ಸಿನಲ್ಲಿ ಮೊದಲ ನೂರು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿ ಕೊಡಗಿನ ಹುಡುಗನದಾಯಿತು. ಇಂಗ್ಲೆಂಡ್ ಹಾಗೂ ಸ್ಪೇನಿನಲ್ಲಿ ನಡೆದ ಪುರುಷರ ಚಾಲೆಂಜರ್ ಟೆನಿಸ್ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಅಸಿಮ್ ಉಲ್ ಹಕ್ ಖುರೇಶಿ ಅವರೊಂದಿಗೆ ಜೊತೆಗೂಡಿ ಆಡಿದ ಬೋಪಣ್ಣ ಜಯಗಳಿಸಿ ಹೊಸ ದಾಖಲೆ ಬರೆದಿದ್ದರು.

2015: ಜಮ್ಮು/ ಚಂಡೀಗಢ: ಶಸ್ತ್ರಾಸ್ತ್ರರಹಿತರಾಗಿದ್ದ ತನ್ನ 44 ಮಂದಿ ಸಹೋದ್ಯೋಗಿಗಳ ಪ್ರಾಣರಕ್ಷಿಸಲು ದಿಟ್ಟ ಹೋರಾಟ ನಡೆಸಿದ ಬಿಎಸ್​ಎಫ್ ಯೋಧ ರಾಕಿ ಬುಧವಾರ 05-08-2015ರಂದು  ಉಧಂಪುರದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾಗುವ ಮುನ್ನ ತನ್ನ ಬಳಿ ಇದ್ದ 40 ಬುಲೆಟ್​ಗಳ ಸಂಪೂರ್ಣ ಮ್ಯಾಗಝಿನ್​ನ್ನು ಖಾಲಿ ಮಾಡಿದ್ದರು. ಬಿಎಸ್​ಎಫ್ ಯೋಧರ ತುಕಡಿಯ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳನ್ನು ದಿಟ್ಟವಾಗಿ ಎದುರಿಸಿದ 25ರ ಹರೆಯದ ರಾಕಿ, ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರಗಾಮಿಗಳನ್ನು ಸುಮಾರು 20 ನಿಮಿಷ ತಡವಾಗಿ ಬಂದ ಭದ್ರತಾ ಪಡೆಗಳ ಆಗಮನದವರೆಗೂ ತನ್ನೊಡನೆ ನಿರಂತರ ಹೋರಾಟ ನಡೆಸುತ್ತಾ ಕಾಲ ಕಳೆಯುವಂತೆ ಹಿಡಿದಿಟ್ಟುಕೊಂಡಿದ್ದರು. ಉಗ್ರಗಾಮಿಗಳು ಕೇವಲ ತನ್ನೊಂದಿಗೆ ಹೋರಾಟ ನಡೆಸುತ್ತಾ ಕಾಲ ಕಳೆಯುವಂತೆ ಮಾಡಿದ್ದ ರಾಕಿ, 44 ಮಂದಿ ಬಿಎಸ್​ಎಫ್ ಸಿಬ್ಬಂದಿ ಇದ್ದ ಬಸ್ಸಿನತ್ತ ಗ್ರೇನೇಡ್ ಹಾರಿಸಲು ಉಗ್ರಗಾಮಿಗಳಿಗೆ ಅವಕಾಶವಾಗದಂತೆ ನೋಡಿಕೊಂಡಿದ್ದರು. ಈ ಘಟನೆಯಲ್ಲಿ ಒಬ್ಬ ಉಗ್ರಗಾಮಿ ಸ್ಥಳದಲೇ ಹತನಾಗಿದ್ದು, ಇನ್ನೊಬ್ಬನನ್ನು ಬಳಿಕ ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಉಗ್ರಗಾಮಿ ದಾಳಿ ಘಟನೆಯಲ್ಲಿ ರಾಕಿಯ ಸಹೋದ್ಯೋಗಿ, ಬಸ್ ಚಾಲಕ ಸುಭೇಂದು ರಾಯ್ ಕೂಡಾ ಹತನಾಗಿದ್ದು, ಉಗ್ರರು ಬಸ್ ಚಲಿಸದಂತೆ ಮಾಡಲು ಟೈರ್​ಗಳನ್ನು ತೂತುಮಾಡಿ ಬಳಿಕ ಬಸ್ಸಿನೊಳಗಿದ್ದ ಬಿಎಸ್​ಎಫ್ ಸಿಬ್ಬಂದಿಯತ್ತ ಗುರಿ ಇಟ್ಟಿದ್ದರು. ರಾಕಿಯ ದಿಟ್ಟತನವು ಬಿಎಸ್​ಎಫ್ ಉನ್ನತ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಅತ್ತ ಹರಿಯಾಣದಲ್ಲಿನ ರಾಕಿಯ ಹುಟ್ಟೂರು ರಾಮಗಢ ಮಜ್ರಾ ಗ್ರಾಮದಲ್ಲಿ ಸುದ್ದಿ ತಿಳಿದ ಬಳಿಕ ವಿಷಣ್ಣತೆ ಮನೆ ಮಾಡಿತ್ತು.

2015: ಇಸ್ಲಾಮಾಬಾದ್: ಉಧಂಪುರದಲ್ಲಿ ಹಿಂದಿನ ದಿನ ನಡೆದ ದಾಳಿ ವೇಳೆಯಲ್ಲಿ ಜೀವಂತವಾಗಿ ಸೆರೆ ಹಿಡಿಯಲಾದ ಎಲ್​ಇಟಿ ಭಯೋತ್ಪಾದಕ ಪಾಕಿಸ್ತಾನ ಮೂಲದವನು ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ಈದಿನ ನಿರಾಕರಿಸಿತು. ಇಂತಹ ಆಪಾದನೆಗಳಿಂದ ದೂರ ಉಳಿಯುವಂತೆಯೂ ಅದು ಭಾರತವನ್ನು ಆಗ್ರಹಿಸಿತು. ‘ನಾವು ಕೂಡಾ ಮಾಧ್ಯಮ ವರದಿಗಳನ್ನು ನೋಡಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಟಿಪ್ಪಣಿ ನೀಡಲೂ ನಾನು ಇಷ್ಟ ಪಡುವುದಿಲ್ಲ. ಭಾರತೀಯ ಅಧಿಕಾರಿಗಳು ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ಸಂಬಂಧಿತ ಮಾಹಿತಿಯನ್ನು ನಮ್ಮ ಜೊತೆಗೆ ಹಂಚಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಪಾಕಿಸ್ತಾನಿ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್ ಖಾಜಿ ಖಲಿಯುಲ್ಲಾ ಭಾರತದಲ್ಲಿ ಭಯೋತ್ಪಾದಕನ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ‘ಪಾಕಿಸ್ತಾನದ ವಿರುದ್ಧ ತತ್ ಕ್ಷಣದ ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದು ನಾವು ಹಲವಾರು ಸಲ ಹೇಳಿದ್ದೇವೆ. ಇಂತಹ ವಿಚಾರಗಳೆಲ್ಲಾ ವಸ್ತುಸ್ಥಿತಿಯನ್ನು ಆಧರಿಸಿರಬೇಕು. ಪಾಕಿಸ್ತಾನದ ವಿರುದ್ಧ ಯಾವಾಗಲೇ ಆಗಲಿ ಏನಾದರೂ ಆಪಾದನೆ ಮಾಡುವಾಗ ಸಮರ್ಪಕ ಸಾಕ್ಷ್ಯಾಧಾರ ಇರಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಅವರು ನುಡಿದರು. ‘ಭಾರತದ ಪ್ರತಿಪಾದನೆ ತಳರಹಿತವಾದ್ದು. ಇಂತಹ ಆಪಾದನೆಗಳನ್ನು ಮಾಡುವುದರಿಂದ ದೂರ ಉಳಿಯುವಂತೆ ನಾವು ಮತ್ತೆ ಮತ್ತೆ ಭಾರತಕ್ಕೆ ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.  ಬಂಧಿತ ವ್ಯಕ್ತಿ ಉಸ್ಮಾನ್ ಖಾನ್ (ಮೊಹಮ್ಮದ ನವೀದ್ ಯಾಕುಬ್) ಪಾಕಿಸ್ತಾನ ಮೂಲದವನು ಎಂದು ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರದ (ಎನ್​ಎಡಿಆರ್​ಎ) ದಾಖಲೆಯು ಹೇಳಿದೆ ಎಂಬುದಾಗಿ ಎಕ್ಸ್​ಪ್ರೆಸ್ ಟ್ರಿಬ್ಯೂನ್​ನಲ್ಲಿ ಬಂದಿರುವ ವರದಿಯಂತೂ ಸಂಪೂರ್ಣ ನಿರಾಧಾರ ಎಂದು ಪಾಕಿಸ್ತಾನದ ಸರ್ಕಾರಿ ಮೂಲಗಳು ಹೇಳಿವೆ.
2015: ಬೆಂಗಳೂರು: ಉತ್ತಮ ನಿರ್ವಹಣೆ ತೋರಿದ ಕರ್ನಾಟಕದ ಕ್ರೀಡಾಪಟುಗಳು ಲಾಸ್ ಏಂಜಲಿಸ್​ನಲ್ಲಿ ಇತ್ತೀಚೆಗೆ ನಡೆದ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 10 ಪದಕ ಗೆಲ್ಲುವ ಮೂಲಕ ಗಮನಾರ್ಹ ನಿರ್ವಹಣೆ ತೋರಿದರು. ಆಗಸ್ಟ್್ 3ರಂದು ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ 275 ಸದಸ್ಯರನ್ನೊಳಗೊಂಡ ಭಾರತ ತಂಡ ಒಟ್ಟು (47 ಸ್ವರ್ಣ, 54ಬೆಳ್ಳಿ, 72ಕಂಚು) 173 ಪದಕ ತನ್ನದಾಗಿಸಿಕೊಂಡಿತು. ಕರ್ನಾಟಕದ ಕ್ರೀಡಾಪಟುಗಳು ಬಹುತೇಕ ಸ್ವಿಮಿಂಗ್ ಹಾಗೂ ಸ್ಕೇಟಿಂಗ್​ನಲ್ಲಿ ಪದಕ ಜಯಿಸಿದ್ದು, ಇವುಗಳಲ್ಲಿ 1 ಸ್ವರ್ಣ, 3ಬೆಳ್ಳಿ, 6 ಕಂಚು ಪದಕಗಳು ಒಳಗೊಂಡಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಪದಕ ಸಂಖ್ಯೆ ಏರಿಕೆ ಕಂಡಿದ್ದು, ಅಥೆನ್ಸ್​ನಲ್ಲಿ ನಡೆದ 2011ರ ವಿಶೇಷ ಒಲಿಂಪಿಕ್ಸ್​ನಲ್ಲಿ ಭಾರತ 156 ಪದಕ (56 ಚಿನ್ನ, 48 ಬೆಳ್ಳಿ, 52 ಕಂಚು) ಜಯಿಸಿತ್ತು. ದೆಹಲಿಯ ರಣ್​ವೀರ್ ಸಿಂಗ್ ಸೈನಿ ಗಾಲ್ಪ್​ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಎನಿಸಿದರೆ, ರೋಲರ್ ಸ್ಕೇಟಿಂಗ್​ನಲ್ಲಿ 10ಚಿನ್ನ, 17ಬೆಳ್ಳಿ ಮತ್ತು 12 ಕಂಚು ಒಳಗೊಂಡಂತೆ 39ಪದಕ ಲಭಿಸಿವೆ. ಪೂಲನ್ ದೇವಿ ಪವರ್ ಲಿಫ್ಟಿಂಗ್​ನಲ್ಲಿ 1 ಸ್ವರ್ಣ, 3 ಕಂಚು ಪದಕ ಜಯಿಸಿದ್ದರೆ, ಸೋನಾಕ್ಷಿ ಕಂಚು ಜಯಿಸಿದರು.

 2015: ನವದೆಹಲಿ: ಲಲಿತ್ ಮೋದಿ, ವ್ಯಾಪಂ ಮತ್ತು ಕಪ್ಪು ಹಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಉಂಟಾದ ಕೋಲಾಹಲದ ಮಧ್ಯೆ ರಾಜ್ಯಸಭಾ ಕಲಾಪಗಳನ್ನು  ಎರಡು ಬಾರಿ ಮುಂದೂಡಿ ಮೂರನೇ ಬಾರಿ ಇಡೀ ದಿನಕ್ಕೆ ಮುಂದೂಡಲಾಯಿತು. ಮೊದಲಿಗೆ ಕಲಾಪವನ್ನು ಕೋಲಾಹಲದ ಮಧ್ಯೆ 12 ಗಂಟೆಗೆ ಮುಂದೂಡಲಾಯಿತು. ಸದನ ಮತ್ತೆ ಸಮಾವೇಶಗೊಂಡಾಗಲೂ ಕೋಲಾಹಲ ಮುಂದುವರೆದ ಕಾರಣ ಕಲಾಪವನ್ನು ಮತ್ತೆ 2 ಗಂಟೆಗೆ ಮುಂದೂಡಲಾಯಿತು.

2015: ನವದೆಹಲಿ: ಲಂಚ ತೆಗೆದುಕೊಳ್ಳುವುದಷ್ಟೇ ಅಲ್ಲ, ಲಂಚ ಕೊಡುವುದನ್ನೂ ಅಪರಾಧ ಎಂದು ಸಾರಲು ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಕೋಲಾಹಲ ಮತ್ತು ಅಡ್ಡಿ ಆತಂಕಗಳ ಮಧ್ಯೆ ಸರ್ಕಾರವು ಈದಿನ ರಾಜ್ಯಸಭೆಯಲ್ಲಿ ಮಂಡಿಸಿತು. 2013ರಲ್ಲಿ ಮಂಡನೆಯಾಗಿ ಬಳಿಕ ಸಂಸದೀಯ ಸಮಿತಿಗೆ ಕಳುಹಿಸಲ್ಪಟ್ಟಿದ್ದ ಈ ಮಸೂದೆಯು ಲಂಚ ನೀಡುವುದನ್ನೂ ನಿರ್ದಿಷ್ಟ ಅಪರಾಧವನ್ನಾಗಿ ಮಾಡುತ್ತದೆ. ನಿವೃತ್ತ ನೌಕರರನ್ನೂ ಮಸೂದೆ ಈ ಕಾಯ್ದೆಯ ವ್ಯಾಪ್ತಿಗೆ ತರುತ್ತದೆ. ಆದರೆ ಹಾಲಿ ಅಥವಾ ಮಾಜಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಅಗತ್ಯವನ್ನಾಗಿಸುವ ವಿವಾದಾತ್ಮಕ ವಿಧಿಯೊಂದನ್ನು ಮಸೂದೆಗೆ ಸೇರ್ಪಡೆ ಮಾಡಲಾಗಿದೆ.  ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂಬ ತನ್ನ ವಚನದಂತೆ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಸರ್ಕಾಋ ಬದ್ಧವಾಗಿದೆ’ ಎಂದು ಪ್ರಧಾನಿಯವರ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಸೂದೆಯನ್ನು ಮಂಡಿಸುತ್ತಾ ಹೇಳಿದರು. ಏನಿದ್ದರೂ, ವಿರೋಧ ಪಕ್ಷಗಳ ಕೋಲಾಹಲದ ಕಾರಣ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳಲಾಗಲಿಲ್ಲ. ಸದನ ಕಲಾಪ ಸುಸೂತ್ರವಾಗಿದ್ದಾಗ ಮಸೂದೆ ಮೇಲೆ ಚರ್ಚೆ ನಡೆಸಬಹುದು ಎಂದು ಸಚಿವರು ನುಡಿದರು.

2015: ನವದೆಹಲಿ: ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೆ ಅಥವಾ ಬೇಡವೇ ಎಂಬ ಬಗೆಗಿನ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತು. ‘ಖಾಸಗಿತನದ ಹಕ್ಕು ಮೂಲಭೂತ ಹಕ್ಕೇ ಅಥವಾ ಅಲ್ಲವೇ? ಎಂಬ ಪ್ರಶ್ನೆಯನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು ಎಂದು ಕೇಂದ್ರವು ಕೋರಿತ್ತು. ‘ಖಾಸಗಿತನದ ಹಕ್ಕು ಮೂಲಭೂತ ಹಕ್ಕೆ ಅಥವಾ ಅಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಆಧಾರ್ ಯೋಜನೆಯ ಸಿಂಧುತ್ವ ಸಂಬಂಧಿತ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ವಿಶಾಲ ಪೀಠಕ್ಕೆ ಒಪ್ಪಿಸಬೇಕು’ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹಿಂದಿನ ದಿನ ಕೋರಿದ್ದರು. ಸುಪ್ರೀಂ ಕೋರ್ಟ್​ನ ವಿಶಾಲ ಪೀಠಗಳು ಈ ಹಿಂದೆ ನೀಡಿದ್ದ ತೀರ್ಪುಗಳ ಪ್ರಕಾರ ಖಾಸಗಿತನವು ಸಂವಿಧಾನದ 21ನೇ ವಿಧಿಯಡಿ ಬರುವ ಸ್ವಾತಂತ್ರ್ಯ ಭಾಗವಲ್ಲ. ಹೀಗಾಗಿ ಖಾಸಗಿತನಕ್ಕೆ ಸಂವಿಧಾನದಲ್ಲಿ ಎಲ್ಲಿಯೂ ಜಾಗ ಲಭಿಸಿಲ್ಲ ಎಂದು ರೋಹ್ಟಗಿ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದ್ದರು. ಏನಿದ್ದರೂ ಬದುಕು ಮತ್ತು ವೈಯಕ್ತಿ ಸ್ವಾತಂತ್ರ್ಯ ಖಾತರಿ ನೀಡುವ ಸಂವಿಧಾನದ 21ನೇ ವಿಧಿಯಲ್ಲಿ ಖಾಸಗಿತನ ಒಳಗೊಳ್ಳುವುದಿಲ್ಲವಾದರೆ ಈ ವಿಧಿಯಲ್ಲಿ ಇನ್ನೇನು ಉಳಿಯಿತು ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತಿ ಸಿ. ನಾಗಪ್ಪನ್ ಅವರ ಜೊತೆಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಪ್ರಶ್ನಿಸಿದ್ದರು.

2015: ಕೋಲ್ಕತ: ಬಹುಕೋಟಿ ಶಾರದಾ ಹಗರಣಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರ ಅವರ ಜಾಮೀನು ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್  ತಿರಸ್ಕರಿಸಿತು. ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಮಿತ್ರ ಪರವಾಗಿ ಕೋಲ್ಕತ ಹೈಕೋರ್ಟ್​ನಲ್ಲಿ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಶಾರದಾ ವಂಚನೆ ಹಗರಣದ ತನಿಖೆಯನ್ನು ಪ್ರಸ್ತುತ ಸಿಬಿಐ ನಡೆಸುತ್ತಿದೆ. ಮದನ್ ಮಿತ್ರ ಅವರು ಪ್ರಕರಣದಲ್ಲಿ ನೇರವಾಗಿ ಷಾಮೀಲಾಗಿಲ್ಲ. ಆದರಿಂದ ಅವರ ವಿರುದ್ಧ ಸೆಕ್ಷನ್ 409ರ ಅಡಿ ದಾಖಲಿಸಲಾಗಿರುವ ಪ್ರಕರಣ ಅವರಿಗೆ ಅನ್ವಯಿಸುವುದಲ್ಲ ಎಂದು ಸಿಬಲ್ ವಾದಿಸಿದರು. ಆದರೆ ಮಿತ್ರ ಅವರು ಬಿಡುಗಡೆಯಾದರೆ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಹಾಗೂ ಸಾಕ್ಷ್ಯನಾಶ ಮಾಡಿಸುವ ಸಾಧ್ಯತೆಗಳಿವೆ ಎಂದು ಸಿಬಿಐ ವಕೀಲರು ವಾದಿಸಿದರು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಇನ್ನಷ್ಟು ಕಾಲ ವಶಕ್ಕೆ ನೀಡಬೇಕು ಎಂದು ಅವರು ಹೇಳಿದರು. ಸಿಬಿಐ ಡಿಸೆಂಬರ್ 12ರಂದು ಮಿತ್ರ ಅವರನ್ನು ಬಂಧಿಸಿತ್ತು.

2015: ನವದೆಹಲಿ: ‘ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ನಾನು ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು  ಸಂಸತ್ತಿನಲ್ಲಿ ಸ್ಪಷ್ಟ ಪಡಿಸಿದರು. ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಚಿವೆ ’ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ನೀಡುವಂತೆ ಇಂಗ್ಲೆಂಡ್ ಸರ್ಕಾರವನ್ನು ನಾನು ಕೋರಿದುದನ್ನು ತೋರಿಸುವ ಒಂದೇ ಒಂದು ಟಿಪ್ಪಣಿ, ಪತ್ರ ಅಥವಾ ಇ-ಮೇಲ್ ಇದ್ದರೆ ಹಾಜರುಪಡಿಸಿ’ ಎಂದು ಅವರು ಸವಾಲು ಹಾಕಿದರು. ಸುಷ್ಮಾ ಸ್ವರಾಜ್ ಅವರು ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ಒದಗಿಸಲು ನೆರವಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳು ಪ್ರಸಕ್ತ ಮುಂಗಾರು ಅಧಿವೇಶನವನ್ನು ಅಸ್ತವ್ಯಸ್ತಗೊಳಿಸಿತ್ತು. ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು 2010ರಲ್ಲಿ ರಾಷ್ಟ್ರವನ್ನು ತ್ಯಜಿಸಿರುವ ಲಲಿತ್ ಮೋದಿ ಅವರಿಗೆ ಕಳೆದ ವರ್ಷ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ ಲಂಡನ್​ನಿಂದ ಪೋರ್ಚುಗಲ್​ಗೆ ಪ್ರಯಾಣಿಸಲು ಅವಕಾಶ ಒದಗಿಸಲಾಗಿತ್ತು. ಲಲಿತ್ ಮೋದಿಗೆ ಪ್ರವಾಸಿ ದಾಖಲೆಗಳನ್ನು ನೀಡಲು ಇಂಗ್ಲೆಂಡ್ ಸರ್ಕಾರ ನಿರ್ಧರಿಸಿದರೆ ಭಾರತ ಜೊತೆಗಿನ ಬಾಂಧವ್ಯದ ಮೇಲೇನೂ ದುಷ್ಪರಿಣಾಮವಾಗುವುದಿಲ್ಲ ಎಂಬ ಏಕೈಕ ಭರವಸೆಯನ್ನು ತಾನು ಇಂಗ್ಲೆಂಡ್ ಸರ್ಕಾರಕ್ಕೆ ನೀಡಿದ್ದುದಾಗಿ ಸುಷ್ಮಾ ಹೇಳಿದರು.  ‘ನಿಮ್ಮ ನಿಯಮಾವಳಿಗಳನ್ನು ಅನುಸರಿಸಿ’ ಎಂದು ನಾನು ಅವರನ್ನು ಒತ್ತಾಯಿಸಿದ್ದೇನೆ. ಅವರ ನಿರ್ಣಯಗಳ ಮೇಲೆ ಯಾವುದೇ ಪ್ರಭಾವ ಬೀರುವಂತಹ ಸೂಚನೆ ನೀಡಿಲ್ಲ’ ಎಂದು ನುಡಿದ ವಿದೇಶಾಂಗ ಸಚಿವೆ ’ಮಾನವೀಯ ನೆಲೆಯಲ್ಲಿ ನಾನು ವರ್ತಿಸಿದ್ದೇನೆ’ ಎಂದು ಹೇಳಿದರು. ‘ಲಲಿತ್ ಮೋದಿ ಪತ್ನಿ ಯಾವುದೇ ಕ್ರಿಮಿನಲ್ ಪ್ರಕರಣ ಎದುರಿಸುತ್ತಿಲ್ಲ. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ತನ್ನ ಪತಿಯ ಬೆಂಬಲದಿಂದ ಆಕೆಯನ್ನು ಏಕೆ ವಂಚಿತರನ್ನಾಗಿ ಮಾಡಬೇಕು?’ ಸುಷ್ಮಾ ಪ್ರಶ್ನಿಸಿದರು. ‘ನನ್ನ ಸ್ಥಾನದಲ್ಲಿ ಇದ್ದಿದ್ದರೆ ನೀವು ಏನು ಮಾಡುತ್ತಿದ್ದಿರಿ ಎಂಬುದಾಗಿ ನಾನು ಸೋನಿಯಾ ಗಾಂಧಿ ಅವರನ್ನು ಕೇಳಬಯಸುತ್ತೇನೆ’ ಎಂದು ಸುಷ್ಮಾ ಹೇಳಿದರು. ಬಹುತೇಕ ವಿಪಕ್ಷಗಳ ಜೊತೆ ಸೋನಿಯಾ ಗಾಂಧಿ ಅವರೂ ಈದಿನ ಸಂಸತ್ ಕಲಾಪಗಳನ್ನು ಬಹಿಷ್ಕರಿಸಿದ್ದರು. ಸುಷ್ಮಾ ಸ್ವರಾಜ್, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಲಲಿತ್ ಮೋದಿ ಜೊತೆಗೆ ಹೊಂದಿರುವ ನಿಕಟ ಬಾಂಧವ್ಯದ ಹಿನ್ನೆಲೆಯಲ್ಲಿ ಮತ್ತು ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಗಳಿಗೆ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸಿದ್ದವು.

2015: ನವದೆಹಲಿ: ಲೋಕಸಭೆಯಿಂದ 25 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ಪ್ರತಿಭಟಿಸಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿವಿಧ ವಿರೋಧ ಪಕ್ಷಗಳ ನಾಯಕರು ಸಂಸತ್ ಭವನ ಸಮುಚ್ಚಯದಲ್ಲಿ ಮೂರನೇ ದಿನವಾದ ಈದಿನ ಕೂಡಾ ತಮ್ಮ ಪ್ರತಿಭಟನೆ ಮುಂದುವರೆಸಿದರು. ನಾಗಾ ಒಪ್ಪಂದವನ್ನು ಟೀಕಿಸಿದ ಸೋನಿಯಾ ಗಾಂಧಿ, ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸಂಸತ್ ಸದಸ್ಯರನ್ನು ಅಮಾನತು ಗೊಳಿಸಿದ್ದನ್ನು ಖಂಡಿಸಿದ ರಾಹುಲ್ ಗಾಂಧಿ ‘ಸಂಸತ್ತಿನಲ್ಲಿ ನಮ್ಮ ಸ್ವರವನ್ನು ದಮನಿಸಲಾಗುತ್ತಿದೆ’ ಎಂದು ಆಪಾದಿಸಿದರು. ನಾಗಾ ಬಂಡುಕೋರರ ಜೊತೆಗೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದಂತೆಯೂ ಪ್ರಧಾನಿಯವರ ಮೇಲೆ ದಾಳಿ ಮಾಡಿದ ರಾಹುಲ್ ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಈ ಮೂರು ರಾಜ್ಯಗಳ ಧ್ವನಿಗಳನ್ನು ದಮನಿಸಲಾಗಿದೆ ಎಂದು ದೂರಿದರು.
2015: ಪಣಜಿ: ಅಮೆರಿಕದ ಕಂಪನಿ ಲೂಯಿಸ್ ಬರ್ಗರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಮಾಜಿ ಕಾಂಗ್ರೆಸ್ ಸಚಿವ ರ್ಚಚಿಲ್ ಅಲ್ಮೆಲೊ ಅವರನ್ನು ಬಂಧಿಸಲಾಯಿತು. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಕೆಲವೇ ಗಂಟೆಗಳ ಅವಧಿಯಲ್ಲಿ ಅಲ್ಮೆಲೊ ಅವರನ್ನು ಬಂಧಿಸಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಮೆಲೊ ಲೋಕೋಪಯೋಗಿ ಖಾತೆ ಸಚಿವರಾಗಿದ್ದರು. 2010ರಲ್ಲಿ ಸಿದ್ಧಗೊಂಡ ನೀರು ಮತ್ತು ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದ ಕಂಪನಿಯಿಂದ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಈಮೊದಲೇ ಕ್ರೈ ಬ್ರಾಂಚ್  ಅಲ್ಮೆಲೊ ಅವರನ್ನು ವಿಚಾರಣೆಗೊಳಪಡಿಸಿತ್ತು. ತನಿಖೆ ಇನ್ನೂ ಮುಗಿದಿಲ್ಲವಾದ ಹಿನ್ನೆಲೆಯಲ್ಲಿ ತಡರಾತ್ರಿ ಹಠಾತ್ತಾಗಿ ಬಂಧಿಸಲಾಯಿತು.
 2008: ಸರ್ಕಾರವು ಭಯೋತ್ಪಾದನಾ ಸಂಘಟನೆಯೆಂದು ಗುರುತಿಸಿದ ಭಾರತ ವಿದ್ಯಾರ್ಥಿ ಇಸ್ಲಾಮಿಕ್ ಚಳವಳಿಯ (ಸಿಮಿ) ಮೇಲಿನ ನಿಷೇಧವನ್ನು ರದ್ದುಪಡಿಸಿದ ದೆಹಲಿ ಹೈಕೋರ್ಟ್ ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂಕೋರ್ಟ್ ತಡೆಹಿಡಿಯಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಎ.ಕೆ. ಮಾಥೂರ್ ಅವರನ್ನೊಳಗೊಂಡ ನ್ಯಾಯಪೀಠವು, ಸರ್ಕಾರದ ತುರ್ತು ಅರ್ಜಿ ಆಧರಿಸಿ ನ್ಯಾಯಮಂಡಳಿಯ ತೀರ್ಪನ್ನು ಅಮಾನತ್ತಿನಲ್ಲಿ ಇಡಲು ಆದೇಶಿಸಿತು.

2007: `ಕೃಷಿ ರಂಗದ ಪುನಶ್ಚೇತನಕ್ಕೆ ಪ್ರತಿಯೊಂದು ರಾಜ್ಯದ ಭೌಗೋಲಿಕ ವೈಶಿಷ್ಟ್ಯಕ್ಕೆ ಪೂರಕವಾಗುವಂತಹ ವಿಶಿಷ್ಟ ಕೃಷಿ ನೀತಿ ರೂಪಿಸಿ, ರೈತರಿಗಾಗಿ `ಹವಾಮಾನ ಸಾಕ್ಷರತೆ' ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಭಿಪ್ರಾಯಪಟ್ಟರು. ರಾಷ್ಟ್ರಪತಿಯಾದ ಬಳಿಕ ನವದೆಹಲಿಯಲ್ಲಿ ಮೊತ್ತ ಮೊದಲ ಅಧಿಕೃತ ಸಮಾರಂಭದಲ್ಲಿ ಅವರು ಈ ಮಾತು ಹೇಳಿದರು. ಅವರು ಪಾಲ್ಗೊಂಡಿದ್ದುದು ಕೃಷಿ ವಿಜ್ಞಾನ ರಾಷ್ಟ್ರೀಯ ಅಕಾಡೆಮಿ ಸಭೆ.

2007: ಇರಾಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಘಟನೆಗಳಲ್ಲಿ ಒಟ್ಟು 37 ಮಂದಿ ಮೃತರಾಗಿ 50ಕ್ಕೂ ಅಧಿಕ ಮಂದಿ ಗಾಯಗೊಂಡರು. ತಲ್ ಅಫಾರ್ ಸಮೀಪದ ಶಿಯಾ ಗ್ರಾಮದಲ್ಲಿ ಮಾನವ ಬಾಂಬ್ ಸ್ಫೋಟಿಸಿ 28 ಮಂದಿ ಸಾವಿಗೀಡಾದರು. ಸ್ಫೋಟಕ ತುಂಬಿದ್ದ ಟ್ರಕ್ ಚಲಾಯಿಸುತ್ತಿದ್ದ ವ್ಯಕ್ತಿ ಈ ಸ್ಫೋಟ ನಡೆಸಿದ್ದ. ಉತ್ತರ ಬಾಗ್ದಾದಿನಲ್ಲಿ ಅಲ್- ಖೈದಾ ಪ್ರಬಲರಾಗಿರುವ ಪ್ರದೇಶದ ಮೇಲೆ ಅಮೆರಿಕದ ವಾಯುಪಡೆ ದಾಳಿ ನಡೆಸಿದ್ದರಿಂದ ಕನಿಷ್ಠ ಎಂಟು ಮಂದಿ ಸಾವಿಗೀಡಾದರು.

2007: ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಗಮನ ಸೆಳೆದರು. ವಿಶ್ವ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿದ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಅವರು ಮೂವತ್ತನೇ ಸ್ಥಾನ ಪಡೆದುಕೊಂಡರು. ಮುತ್ತಿನ ನಗರಿಯ ಬೆಡಗಿ ಇದರೊಂದಿಗೆ ಮೊದಲ ಮೂವತ್ತನೇ ಶ್ರೇಯಾಂಕದೊಳಗೆ ಪದಾರ್ಪಣೆ ಮಾಡಿದ ಭಾರತದ ಪ್ರಥಮ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು. 1987ರಲ್ಲಿ ರಮೇಶ್ ಕೃಷ್ಣನ್ ಅವರು 23ನೇ ಶ್ರೇಯಾಂಕ ಪಡೆದುಕೊಂಡಿದ್ದರು. ಸ್ಯಾನ್ ಡಿಯಾಗೊ ಚಾಂಪಿಯನ್ ಶಿಪ್ ನ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ ಬಳಿಕವೂ ಡಬಲ್ಸಿನಲ್ಲಿ ಸಾನಿಯಾ ಅವರು 26ನೇ ಸ್ಥಾನ ಉಳಿಸಿಕೊಂಡರು.

2007: ಕರ್ನಾಟಕದ ಹೆಮ್ಮೆಯ ಆಟಗಾರ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸಿನಲ್ಲಿ 92ನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ನಂತರ ಡಬಲ್ಸಿನಲ್ಲಿ ಮೊದಲ ನೂರು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿ ಕೊಡಗಿನ ಹುಡುಗನದಾಯಿತು. ಇಂಗ್ಲೆಂಡ್ ಹಾಗೂ ಸ್ಪೇನಿನಲ್ಲಿ ನಡೆದ ಪುರುಷರ ಚಾಲೆಂಜರ್ ಟೆನಿಸ್ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಅಸಿಮ್ ಉಲ್ ಹಕ್ ಖುರೇಶಿ ಅವರೊಂದಿಗೆ ಜೊತೆಗೂಡಿ ಆಡಿದ ಬೋಪಣ್ಣ ಜಯಗಳಿಸಿ ಹೊಸ ದಾಖಲೆ ಬರೆದಿದ್ದರು.

2007: 1998ರ ಕೊಯಮತ್ತೂರು ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಇನ್ನೂ ಐವರನ್ನು ತಪ್ಪಿತಸ್ಥರೆಂದು ಘೋಷಿಸಿತು. ವಿಶೇಷ ನ್ಯಾಯಾಧೀಶ ಕೆ. ಉಥಿರಾಪತಿ ಅವರು ಸರಬ್ದುದೀನ್, ಸಿಕಂದರ್, ಮೀರ್ ಶಬೀರ್ ಅಹ್ಮದ್, ಅಯ್ಯಪ್ಪನ್ ಹಾಗೂ ಉಬೈದುರ್ ರೆಹಮಾನ್ ಅವರನ್ನು ಸಣ್ಣ ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿದರು. ಸ್ಫೋಟದ ಸಂಚಿನಂತಹ ಗುರುತರ ಆರೋಪ ಇವರ ಮೇಲೆ ಇಲ್ಲದ ಕಾರಣ ಜಾಮೀನು ಅರ್ಜಿ ಸಲ್ಲಿಸುವಂತೆ ಈ ಐವರಿಗೆ ನ್ಯಾಯಾಧೀಶರು ಸೂಚಿಸಿದರು. ಆಗಸ್ಟ್ 1ರಂದು ನ್ಯಾಯಾಲಯ, ಸರಣಿ ಸ್ಫೋಟ ಪ್ರಕರಣದ 167 ಆರೋಪಿತರಲ್ಲಿ 153 ಜನ ತಪ್ಪಿತಸ್ಥರೆಂದು ಘೋಷಿಸಿತ್ತು. ಕೇರಳ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸೇರ್ ಮದನಿ ಸೇರಿದಂತೆ 8 ಜನರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. 1998ರ ಫೆಬ್ರುವರಿ 14ರಂದು ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಕೆಲವೇ ನಿಮಿಷಗಳ ಮುನ್ನ, ಈ ಸರಣಿ ಸ್ಫೋಟಗಳು ಸಂಭವಿಸಿದ್ದವು. 58 ಜನ ಮೃತರಾಗಿ 250 ಜನ ಗಾಯಗೊಂಡಿದ್ದರು.

2007: ವಿವಾದಕ್ಕೆ ಒಳಗಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆನಿಯಂತ್ರಣ) ಮಸೂದೆಗೆ (2007) ವಿಧಾನಸಭೆ ತನ್ನ ಒಪ್ಪಿಗೆ ನೀಡಿತು. ಈ ಹಿಂದೆ ವಿಧಾನಸಭೆಯಿಂದ ಅಂಗೀಕಾರವಾಗಿದ್ದ ಈ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ತಿದ್ದುಪಡಿ ತರಲು ನಿರ್ಧರಿಸಿ ಸದನ ಸಮಿತಿ ರಚಿಸಲಾಗಿತ್ತು. ಈ ವಿಧೇಯಕದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆಯನ್ನು ನಿಯಂತ್ರಿಸಲಾಗುವುದು. ವಿಧೇಯಕ ಪ್ರಕಾರ ಪ್ರತಿ ಶಿಕ್ಷಕ ಕನಿಷ್ಠ ಐದು ವರ್ಷಕಾಲ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಈ ಹಿಂದೆ ಗ್ರಾಮೀಣ ಸೇವೆ ಮಾಡದ ಶಿಕ್ಷಕರು ಕೂಡ ಕನಿಷ್ಠ ಐದು ವರ್ಷಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಶಿಕ್ಷಕ ನೇಮಕವಾದ ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡುವುದನ್ನು ಮಸೂದೆ ನಿಷೇಧಿಸುವುದು.

2006: ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಯೋಧೆ ಮಹಾದೇವಿ ತಾಯಿ (101) ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯ ವಲ್ಲಭ ನಿಕೇತನ ಆಶ್ರಮದಲ್ಲಿ ನಿಧನರಾದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದೊಡ್ಡಪ್ಪನ ಮಗಳಾದ ಮಹಾದೇವಿ ತಾಯಿ ಅವರು ಆಚಾರ್ಯ ವಿನೋಬಾ ಭಾವೆ ಅವರ ಆಶ್ರಮದ ಪ್ರಭಾವಕ್ಕೆ ಒಳಗಾಗಿದ್ದರು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಕುಟುಂಬದ ಕೃಷ್ಣಯ್ಯ ಸುಬ್ಬಯ್ಯ ಹೆಗಡೆ ಅವರ ಮಗಳಾಗಿ ಮಹಾದೇವಿ ತಾಯಿ 1906ರಲ್ಲಿ ಜನಿಸಿದ್ದರು. `ವಿಶ್ವನೀಡಂ' ಟ್ರಸ್ಟ್ ಸಂಸ್ಥಾಪಕರೂ ಆಗಿದ್ದ ಅವರು ಮಹಾತ್ಮಾ ಗಾಂಧೀಜಿ ಅವರ ಅನುಯಾಯಿಯಾಗಿ 1930ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ವಿನೋಬಾ ಭಾವೆ ಅವರ ಭೂದಾನ ಪಾದಯಾತ್ರೆ ಸಂದರ್ಭದಲ್ಲಿ ಇಡೀ ರಾಜ್ಯ ಸುತ್ತಿ ಚಳವಳಿಗೆ ಬಲ ತಂದಿದ್ದರು.

2006: ಹಿರಿಯ ಬಿಜೆಪಿ ನಾಯಕ, ಪರಿಶಿಷ್ಟ ಜಾತಿ/ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸೂರಜ್ ಭಾನ್ ಹೃದಯಾಘಾತದಿಂದ ನವದೆಹಲಿಯಲ್ಲಿ ನಿಧನರಾದರು. ಎನ್ ಡಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಭಾನ್, 1999ರಲ್ಲಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

2006: ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶಗಳು ಕಂಡು ಬಂದ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಕ್ಯಾಂಟೀನುಗಳಲ್ಲಿ ತಂಪು ಪಾನೀಯಗಳನ್ನು ನಿಷೇಧಿಸಿದರು.

2006: ಪಾಠಕ್ ವರದಿ ಸೋರಿಕೆ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಮಾಜಿ ಸಚಿವ ಕೆ. ನಟವರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ರಾಜ್ಯಸಭೆಯಲ್ಲಿ `ಹಕ್ಕುಚ್ಯುತಿ' ಮಂಡಿಸಲು ನೋಟಿಸ್ ಕಳುಹಿಸಿದರು.

1999: ಮಾಜಿ ಕೇಂದ್ರ ಸಚಿವ ಕಲ್ಪನಾಥ ರಾಯ್ (58) ನಿಧನರಾದರು.

1998: ಶ್ವೇತಭವನದ ಮಾಜಿ ಸಿಬ್ಬಂದಿ ಮೋನಿಕಾ ಲೆವಿನ್ ಸ್ಕಿ ಅವರು ಅಧ್ಯಕ್ಷ ಕ್ಲಿಂಟನ್ ಅವರ ಜೊತೆಗೆ ತನಗಿದ್ದ ಸಂಬಂಧದ ಬಗ್ಗೆ ಗ್ರ್ಯಾಂಡ್ ಜ್ಯೂರಿ ಎದುರು ಎಂಟೂವರೆ ಗಂಟೆಗಳ ಕಾಲ ವಿಚಾರಣೆಯಲ್ಲಿ ವಿವರಿಸಿದರು.

1986: ಶ್ಯಾಮಜಿ ಮತ್ತು ಮಣಿ ಚಾವ್ಲಾ ದಂಪತಿಯ ಮಗುವಾಗಿ ಭಾರತದ ಮೊತ್ತ ಮೊದಲ ಪ್ರಣಾಳಶಿಶು `ಹರ್ಷ' ಜನಿಸಿತು. ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಹಾಸ್ಪಿಟಲ್ ನ ಡಾ. ಇಂದಿರಾ ಹಿಂದುಜಾ ಅವರು ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನೆಯ ಫಲವಾಗಿ ಈ ಸಾಧನೆ ಸಾಧ್ಯವಾಯಿತು.

1970: ಕೆವಿನ್ ಮರ್ಫಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಮೊತ್ತ ಮೊದಲ ಬ್ರಿಟಿಷ್ ವ್ಯಕ್ತಿಯಾದರು. ಅವರು ಕಡಲ್ಗಾಲುವೆಯನ್ನು ಕ್ರಮಿಸಲು 35 ಗಂಟೆ 10 ನಿಮಿಷಗಳನ್ನು ತೆಗೆದುಕೊಂಡರು.

1956: ಕಛ್, ಸೌರಾಷ್ಟ್ರ, ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠಾವಾಡಗಳನ್ನು ಒಳಗೊಂಡ ಸಮ್ಮಿಶ್ರ ಮುಂಬಯಿ ಪ್ರಾಂತ್ಯವನ್ನು ರಚಿಸಲು ಸೂಚಿಸುವ ನಿರ್ಣಯವನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಈದಿನ ಅಂಗೀಕರಿಸಿತು. ನಿರ್ಣಯವನ್ನು ಮತಕ್ಕೆ ಹಾಕಿದಾಗ ಎಸ್. ವಿ. ಗಾಡ್ಗೀಳ್ ಒಬ್ಬರ ಮತ ಮಾತ್ರ ಇದಕ್ಕೆ ವಿರುದ್ಧವಾಗಿ ಬಿದ್ದಿತು.

1948: ಸಾಹಿತಿ ಕೆ.ಆರ್. ಕೃಷ್ಣಯ್ಯ ಜನನ.

1947: ಸಾಹಿತಿ ಎಸ್. ಸತ್ಯವತಿ ಜನನ.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಜಪಾನಿನ ಹಿರೋಷಿಮಾ ಮೇಲೆ ಅಮೆರಿಕ ಅಣುಬಾಂಬನ್ನು ಎಸೆಯಿತು. ಯುದ್ಧದಲ್ಲಿ ಮೊತ್ತ ಮೊದಲನೆಯ ಅಣ್ವಸ್ತ್ರ ಬಳಕೆ ಇದು. `ಎನೋಲಾ ಗೇ' ಹೆಸರಿನ ಬಿ-29 ಸೂಪರ್ ಫೋರ್ ಟ್ರೆಸ್ ಬಾಂಬರ್ ಹಿರೋಷಿಮಾ ಪಟ್ಟಣದ ಮೇಲೆ ಬೆಳಿಗ್ಗೆ 8.15ರ ವೇಳೆಗೆ ಬಾಂಬನ್ನು ಬೀಳಿಸಿತು. ಪಟ್ಟಣದಿಂದ 1900 ಅಡಿಗಳಷ್ಟು ಎತ್ತರದಲ್ಲೇ ಬಾಂಬ್ ಸ್ಫೋಟಗೊಂಡಿತು. ಪಟ್ಟಣದ ಮೂರನೇ ಎರಡರಷ್ಟು ಭಾಗ ಧ್ವಂಸವಾಯಿತು. ಅಂದಾಜು 3.5 ಲಕ್ಷ ಜನರ ಪೈಕಿ 1.4 ಲಕ್ಷ ಜನ ಅಸುನೀಗಿದರು.

1944: ಸಾಹಿತಿ ಗಂಗಾಧರ ನಂದಿ ಜನನ.

1926: ಅಮೆರಿಕದ ಈಜುಗಾರ್ತಿ ಗೆರ್ ಟ್ರೂಡ್ (ಕರೋಲಿನ್) ಎಡರ್ಲೆ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನ ಕೇಪ್ ಕ್ರಿಸ್- ನೆಝ್ ನಿಂದ ಇಂಗ್ಲೆಂಡಿನ ಡೋವರ್ ವರೆಗಿನ 35 ಮೈಲು (56 ಕಿಮೀ) ದೂರವನ್ನು 14 ಗಂಟೆ 31 ನಿಮಿಷಗಳಲ್ಲಿ ಕ್ರಮಿಸಿ ಪುರುಷರ ದಾಖಲೆಯನ್ನು ಮುರಿದರು.

1904: ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ. ಕೋಲಾರ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್ ಒದಗಿಸುವ ಸಲುವಾಗಿ ಶಿಂಷಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಈದಿನ ಆರಂಭವಾಯಿತು. ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಇದೆಲ್ಲ ಬರೀ ಬುರುಡೆ ಎಂದು ಅವರು ಹೇಳಿದ್ದರು. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ಕನಕಪುರದ ಕಾನಕಾನಹಳ್ಳಿ ಎಲೆಕ್ಟ್ರಿಕ್ ಗ್ರಿಡ್ ಗೆ ಬಂದು ನಂತರ ಬೆಂಗಳೂರು ನಗರಕ್ಕೆ ಸರಬರಾಜು ಆಗುತ್ತಿತ್ತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿ ಒಂದು ಸೆಕೆಂಡ್ ಕಾಲ ಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.

1884: ಸಾಹಿತಿ, ವಿದ್ವಾಂಸ ಪಂಡಿತ ಮಹಾದೇವ ಪೂಜಾರ (6-8-1884ರಿಂದ 5-1-1962) ಅವರು ಧಾರವಾಡ ಜಿಲ್ಲೆಯ ಬಂಕಾಪುರದ ಬಡ ಅರ್ಚಕ ಮನೆತನದಲ್ಲಿ ಈದಿನ ಜನಿಸಿದರು

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement