ಇಂದಿನ ಇತಿಹಾಸ
ಆಗಸ್ಟ್ 25
ಕಂಧಮಲ್ ಜಿಲ್ಲೆಯ ಜಲಸ್ ಪೇಟಾ ಆಶ್ರಮದ ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಆಗಸ್ಟ್ 23ರಂದು ಕೊಲೆ ಮಾಡಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ಬರ್ಘರ್ ಜಿಲ್ಲೆಯ ಕುಂತಿಪಲಿ ಗ್ರಾಮದಲ್ಲಿ ಗಲಭೆಕೋರರು ಅನಾಥಾಶ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಕ್ರೈಸ್ತ ಸನ್ಯಾಸಿನಿಯೊಬ್ಬಳು ಸಜೀವ ದಹನಗೊಂಡ ಘಟನೆ ನಡೆಯಿತು. ಘಟನೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅನಾಥಾಶ್ರಮವನ್ನು ಸುತ್ತುವರಿದ ದುಷ್ಕರ್ಮಿಗಳು ಅದರಲ್ಲಿ 22 ವಿದ್ಯಾರ್ಥಿಗಳನ್ನು ಹೊರಕ್ಕೆ ಕರೆಯಿಸಿ ಬೆಂಕಿ ಹಚ್ಚಿದ್ದರಿಂದ ಒಳಗಿದ್ದ ಸನ್ಯಾಸಿನಿ ಸಜೀವ ದಹನಗೊಂಡರು. ಕ್ರೈಸ್ತ ಪಾದರ್ ಕಷ್ಟಪಟ್ಟು ಹೊರ ಬರುವಲ್ಲಿ ಯಶಸ್ವಿಯಾದರು.
2015: ಬೆಂಗಳೂರು
ಮಹಾನಗರ ಪಾಲಿಕೆಯ 198 ವಾರ್ಡ್ಗಳಿಗೆ ಆಗಸ್ಟ್ 22ರಂದ ನಡೆದ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಗೆಲುವಿನೊಂದಿಗೆ
ಬಿಜೆಪಿ ದೊಡ್ಡ ಪಕ್ಷವಾಗಿ ಮೂಡಿಬಂದು ಮತ್ತೆ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಬಿಜೆಪಿಗೆ ತೀವ್ರ ಹಣಾಹಣಿ ಒಡ್ಡಿದ ಕಾಂಗ್ರೆಸ್ 76 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಎರಡನೇ ಸ್ಥಾನಕ್ಕೆ
ತೃಪ್ತಿ ಪಡಬೇಕಾಯಿತು. ಜನತಾದಳ (ಎಸ್) 14 ಕಡೆ ಮತ್ತು ಇತರರು 08 ಕಡೆ ಗೆಲುವು ಸಾಧಿಸಿದರು. ಇಬ್ಬರು
ಪಕ್ಷೇತರರು ಬೆಂಬಲ ನೀಡಲು ಮುಂದೆ ಬಂದದ್ದರಿಂದ ಬಿಜೆಪಿಗೆ ಅಧಿಕಾರ ಖಚಿತವಾಯಿತು. ಬಹುತೇಕ ಚುನಾವಣಾ
ಸಮೀಕ್ಷೆಗಳನ್ನು ಫಲಿತಾಂಶ ತಲೆಕೆಳಗು ಮಾಡಿತು. ಚುನಾವಣೆಯ ಮತಗಳ ಎಣಿಕೆ ಈದಿನ ಬೆಳಗ್ಗೆ ಬೆಂಗಳೂರಿನ
27 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 27 ಮತ ಎಣಿಕೆ ಕೇಂದ್ರಗಳಲ್ಲಿ ಆರಂಭವಾಗಿತ್ತು. ಪ್ರಧಾನಿ
ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಪಕ್ಷಾಧ್ಯಕ್ಷ ಅಮಿತ್ ಷಾ ಈ ವಿಜಯಕ್ಕಾಗಿ ಬಿಜೆಪಿ
ಕರ್ನಾಟಕ ಘಟಕವನ್ನು ಅಭಿನಂದಿಸಿದರು..
2015: ನವದೆಹಲಿ:
ಪಕ್ಷ ನಾಯಕತ್ವವನ್ನು ತಮ್ಮ ಹೇಳಿಕೆ ಮೂಲಕ ಮುಜುಗರಕ್ಕೆ ಈಡು ಮಾಡಿದ ಬಂಡಾಯ ಬಿಜೆಪಿ ಸಂಸತ್ ಸದಸ್ಯ
ಶತ್ರುಘ್ನ ಸಿನ್ಹ ಅವರು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಯಕತ್ವಕ್ಕೆ ಸವಾಲು ಹಾಕಿದರು. ಬಿಹಾರ
ಚುನಾವಣೆಗಳ ಬಳಿಕ ಪಕ್ಷ ನಾಯಕತ್ವವು ಪಕ್ಷ ವಿರೋಧಿ ಹೇಳಿಕೆಗಾಗಿ ಸಿನ್ಹ ವಿರುದ್ಧ ಕ್ರಮ ಕೈಗೊಳ್ಳಲು
ಯೋಜಿಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿ ಬಿಹಾರಿನ ಪಟ್ನಾ ಸಾಹಿಬ್ ಕ್ಷೇತ್ರದ ಸಂಸದ ಸಿನ್ಹ
ಅವರು ಟ್ವಿಟ್ಟರ್ನಲ್ಲಿ ಸರಣಿ ಟ್ವೀಟ್ಗಳ ಮೂಲಕ ನಾಯಕತ್ವಕ್ಕೆ ಈ ಸವಾಲೆಸೆದರು. “ಸುದ್ದಿ ವಾಹಿನಿಯೊಂದರ
ಅಧಿಕೃತವಲ್ಲದ ವರದಿಯ ಬಳಿಕ ಈ ಅನಧಿಕೃತ ವರದಿ ಬಗ್ಗೆ ಜನ ನನ್ನ ಪ್ರತಿಕ್ರಿಯೆ ಕೇಳುತ್ತಿದ್ದಾರೆ’
ಎಂದು ಸಿನ್ಹ ಹೇಳಿದರು. ‘ಸ್ಥಾಪಿತ ಹಿತಾಸಕ್ತಿಗಳು ಹರಡಿದ ಅನಧಿಕೃತ ವರದಿ ಬಗ್ಗೆ ನಾನು ಟೀಕಿಸುವುದಿಲ್ಲ.
ಏನಿದ್ದರೂ ಪ್ರತಿಯೊಂದು ಕ್ರಿಯೆಗೂ ಸಮಬಲದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬುದಾಗಿ
ನ್ಯೂಟನ್ ಹೇಳಿದ ಮೂರನೇ ನಿಯಮವನ್ನು ನಾವು ಮರೆಯಲಾಗದು’ ಎಂದು ಪಕ್ಷ ಮತ್ತು ಸರ್ಕಾರದಿಂದ ಬದಿಗೊತ್ತಲ್ಪಟ್ಟಿರುವ
ಸಿನ್ಹ ಟ್ವೀಟ್ನಲ್ಲಿ ತಿಳಿಸಿದರು. ಸಿನ್ಹ ವಿರುದ್ಧ ಬಿಹಾರ ಚುನಾವಣೆಗಳ ಮತಗಳ ಎಣಿಕೆ ಬಗ್ಗೆ ಕ್ರಮ
ಕೈಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ನಾಯಕರೊಬ್ಬರು ಹೇಳಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ
ಮೋದಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖಂಡತುಂಡವಾಗಿ ಟೀಕಿಸಿದ ಮರುದಿನ ಸಿನ್ಹ
ಅವರು ನಿತೀಶ್ ಕುಮಾರ್ ಅವರನ್ನು ಹೊಗಳಿದ್ದರು.
2015: ಬೀಜಿಂಗ್:
1996ರಿಂದೀಚೆಗೆ ಅನುಭವಿಸುತ್ತಿರುವ ಅತ್ಯಂತ ದೊಡ್ಡ ಪ್ರಮಾಣದ ಷೇರು ಮಾರುಕಟ್ಟೆ ಕುಸಿತ ಮತ್ತು ತೀವ್ರಗೊಳ್ಳುತ್ತಿರುವ
ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಚೀನಾ ಸರ್ಕಾರವು ನವೆಂಬರ್ ಬಳಿಕ ಇದೀಗ 5ನೇ ಬಾರಿಗೆ
ಬಡ್ಡಿ ದರಗಳನ್ನು ಇಳಿಸಿತು. ಜೊತೆಗೆ ತೆಗೆದಿಡಬೇಕಾದ ಬ್ಯಾಂಕ್ಗಳ ನಗದು ಮೀಸಲು ಧನದ ಮೊತ್ತವನ್ನು
ಕಡಿಮೆಗೊಳಿಸಿತು. ವಾರ್ಷಿಕ ಸಾಲದ
ಬಡ್ಡಿದರವು 25 ಪಾಯಿಂಟ್ನಷ್ಟು ಅಂದರೆ ಶೕಕಡಾ 4.6ಕ್ಕೆ ಇಳಿದಿದ್ದು ಆಗಸ್ಟ್ 26ರ ಬುಧವಾರದಿಂದಲೇ
ಜಾರಿಯಾಗುವುದು ಎಂದು ಬೀಜಿಂಗ್ನ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತು.
ಇದೇ ವೇಳೆಗೆ ಒಂದು ವರ್ಷದ ಠೇವಣಿ ದರವೂ 25 ಪಾಯಿಂಟ್ ಅಂದರೆ ಶೇಕಡಾ 1.75ರಷ್ಟಕ್ಕೆ ಇಳಿಯುವುದು.
ಜೊತೆಗೆ ಎಲ್ಲಾ ಬ್ಯಾಂಕ್ಗಳ ಮೀಸಲು ಧನದ ಅನುಪಾತವನ್ನೂ 50 ಮೂಲ ಪಾಯಿಂಟ್ನಷ್ಟು ಇಳಿಸಲಾಗಿದೆ ಎಂದು
ಸರ್ಕಾರಿ ಪ್ರಕಟಣೆ ತಿಳಿಸಿತು.
2008: ಕಂಧಮಲ್ ಜಿಲ್ಲೆಯ ಜಲಸ್ ಪೇಟಾ ಆಶ್ರಮದ ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಆಗಸ್ಟ್ 23ರಂದು ಕೊಲೆ ಮಾಡಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ಬರ್ಘರ್ ಜಿಲ್ಲೆಯ ಕುಂತಿಪಲಿ ಗ್ರಾಮದಲ್ಲಿ ಗಲಭೆಕೋರರು ಅನಾಥಾಶ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಕ್ರೈಸ್ತ ಸನ್ಯಾಸಿನಿಯೊಬ್ಬಳು ಸಜೀವ ದಹನಗೊಂಡ ಘಟನೆ ನಡೆಯಿತು. ಘಟನೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅನಾಥಾಶ್ರಮವನ್ನು ಸುತ್ತುವರಿದ ದುಷ್ಕರ್ಮಿಗಳು ಅದರಲ್ಲಿ 22 ವಿದ್ಯಾರ್ಥಿಗಳನ್ನು ಹೊರಕ್ಕೆ ಕರೆಯಿಸಿ ಬೆಂಕಿ ಹಚ್ಚಿದ್ದರಿಂದ ಒಳಗಿದ್ದ ಸನ್ಯಾಸಿನಿ ಸಜೀವ ದಹನಗೊಂಡರು. ಕ್ರೈಸ್ತ ಪಾದರ್ ಕಷ್ಟಪಟ್ಟು ಹೊರ ಬರುವಲ್ಲಿ ಯಶಸ್ವಿಯಾದರು.
2007: ಹೈದರಾಬಾದ್ ನಗರದ ಸಚಿವಾಲಯ ಸಮೀಪದ ಲುಂಬಿನಿ ಪಾರ್ಕ್ (ರಾತ್ರಿ 7.45) ಹಾಗೂ ಗೋಕುಲ್ ಚಾಟ್ ಶಾಪ್ ಬಳಿ ಈದಿನ (ರಾತ್ರಿ 7.50 ಗಂಟೆಗೆ) ಶಂಕಿತ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 32 ಮಂದಿ ಮೃತರಾಗಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೊದಲ ಸ್ಫೋಟ ರಾತ್ರಿ 7.45ಕ್ಕೆ ಹುಸೇನ್ ಸಾಗರ್ ಎದುರಿಗೇ ಇರುವ ಲುಂಬಿನಿ ಪಾರ್ಕಿನಲ್ಲಿ ಸಂಭವಿಸಿ 6 ಮಂದಿ ಮೃತರಾದರು. ರಾತ್ರಿ 7.45ಕ್ಕೆ ಗೋಕುಲ್ ಚಾಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 26 ಮಂದಿ ಮೃತರಾಗಿ 25-30 ಜನ ಗಾಯಗೊಂಡರು.
2007: `ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ಜೋದಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಂತರ ಜೈಲಿಗೆ ಕಳುಹಿಸಿದರು. ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಸಲ್ಮಾನ್ ಖಾನ್ ಅವರು ತಮ್ಮ ಸಹೋದರ ಸೋಹೆಲ್ ಹಾಗೂ ವಕೀಲ ದೀಪೆಶ್ ಮೆಹ್ತಾ ಅವರೊಂದಿಗೆ ಮುಂಬೈನಿಂದ ವಿಮಾನದ ಮೂಲಕ ಬಂದಿಳಿದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಾಯ್ ಸಿಂಗ್ ಗೋಧರ್ ನೇತೃತ್ವದ ಪೊಲೀಸ್ ತಂಡ ಖಾನ್ ಅವರನ್ನು ಬಂಧಿಸಿತು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಆರ್. ಸಿಂಘ್ವಿ ಎತ್ತಿಹಿಡಿದರು. ಸಲ್ಮಾನ್ ಬಂಧನದಿಂದ ಸುಮಾರು 70 ಕೋಟಿ ವೆಚ್ಚದ ಸಿನಿಮಾ ಯೋಜನೆಗಳ ಮೇಲೆ ಕರಿಮೋಡ ಆವರಿಸಿತು. 35 ಕೋಟಿ ವೆಚ್ಚದ ಅಫ್ಜಲ್ ಖಾನ್ ಅವರ `ಗಾಡ್ ತುಸ್ಸಿ ಗ್ರೇಟ್ ಹೊ', ಬೋನಿ ಕಪೂರ್ ನಿರ್ಮಾಣದ 35-40 ಕೋಟಿ ವೆಚ್ಚದ ಮತ್ತೊಂದು ಹೊಸ ಚಿತ್ರ ಹಾಗೂ ಇತರ ಚಿತ್ರಗಳ ಚಿತ್ರೀಕರಣಕ್ಕೆ ಧಕ್ಕೆ ಉಂಟಾಯಿತು.
2007: ಕೊಲೆ ಆರೋಪದಿಂದ ಮುಕ್ತರಾದ ನಾಲ್ಕು ದಿನಗಳ ಬಳಿಕ ಜೆಎಂಎಂ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಜಾರ್ಖಂಡಿನ ಡುಮ್ಕಾ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಆರೋಪ ಸೊರೇನ್ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಂಬತ್ತು ತಿಂಗಳನ್ನು ಕಾರಾಗೃಹದಲ್ಲಿ ಕಳೆದ ಕೇಂದ್ರದ ಮಾಜಿ ಸಚಿವ ಸೊರೇನ್ ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಜೈಲಿನ ಹೊರಗೆ ಸೇರಿದ್ದರು. 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಳಹಂತದ ನ್ಯಾಯಾಲಯವು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2006ರ ನವೆಂಬರ್ 28 ರಂದು ಅವರು ಜೈಲು ಶಿಕ್ಷೆಗೆ ಒಳಗಾಗಿದ್ದರು.
2007: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ (87) ಅವರು ಈದಿನ ಬೆಳಿಗ್ಗೆ ಮೌಂಟ್ ಅಬುವಿನಲ್ಲಿ ವಿಧಿವಶರಾದರು. ಪ್ರಕಾಶಮಣಿ ಈಗಿನ ಪಾಕಿಸ್ಥಾನದಲ್ಲಿರುವ ಸಿಂಧ್ ಪ್ರಾಂತದ ಹೈದರಾಬಾದಿನಲ್ಲಿ ಜನಿಸಿದವರು. ಇವರು 14ನೇ ವಯಸ್ಸಿನಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದ್ದರು. 1937ರಲ್ಲಿ ಈ ಸಂಸ್ಥೆ ರೂಪುಗೊಂಡಾಗ 8 ಜನರ ಟ್ರಸ್ಟಿನಲ್ಲಿ ಇವರನ್ನೂ ಸಹ ಒಬ್ಬರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಂಸ್ಥೆಯ ಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಅವರು 1969ರ ಜನವರಿಯಲ್ಲಿ ಇಹಲೋಕ ತ್ಯಜಿಸಿದ ಬಳಿಕ ಪ್ರಕಾಶಮಣಿ ಅವರು ಮುಖ್ಯ ಆಡಳಿತಾಧಿಕಾರಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು. ಪ್ರಕಾಶಮಣಿ ಅವರ ಆಡಳಿತ ಅವಧಿಯಲ್ಲೇ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಯುನಿಸೆಫ್ ಸರಕಾರೇತರ ಸಂಸ್ಥೆ (ಎನ್.ಜಿ.ಓ) ಮಾನ್ಯತೆ ನೀಡಿದ್ದಲ್ಲದೆ ಇವರಿಗೆ ಏಳು ಶಾಂತಿ ಪಾರಿತೋಷಕಗಳನ್ನು ನೀಡಿ ಗೌರವಿಸಿತ್ತು. ಪ್ರಕಾಶಮಣಿ ಅವರು ಈ ಪಾರಿತೋಷಕ ಪಡೆದ ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2007: ಆಲ್ಕೋಹಾಲ್ ಸೇವನೆಯಿಂದ ಕಿಡ್ನಿ ಕ್ಯಾನ್ಸರ್ ಉಲ್ಬಣದ ಮಟ್ಟವನ್ನು ಕಡಿಮೆಗೊಳಿಸಬಹುದು ಎಂದು ಬ್ರಿಟಿಷ್ ಪತ್ರಿಕೆಯ ಅಧ್ಯಯನ ವರದಿಯೊಂದು ಬಹಿರಂಗಪಡಿಸಿತು. ಎಲ್ಲಾ ರೀತಿಯ ಆಲ್ಕೋಹಾಲ್ ಅಂಶ ಇರುವ ಮದ್ಯಪಾನಗಳನ್ನು ಮತ್ತು ಆಲ್ಕೋಹಾಲ್ ಸೇವಿಸಿರುವ ವ್ಯಕ್ತಿಗಳನ್ನು ಪರೀಕ್ಷಿಸಿದ ಸ್ವೀಡನ್ನಿನ ಸ್ಟಾಕ್ ಹೋಮಿನಲ್ಲಿರುವ ಕರೊಲಿಂಸ್ಕ ಸಂಸ್ಥೆಯ ಡಾ.ಅಲಿಕ್ಜಾ ವೊಲ್ಕ್ ಮತ್ತು ಅವರ ಸಹೋದ್ಯೋಗಿಗಳು ಈ ವಿಷಯವನ್ನು ಪ್ರಕಟಿಸಿದರು. ಕಿಡ್ನಿ ಕ್ಯಾನ್ಸರ್ ಅಭಿವೃದ್ಧಿಯಾಗುತ್ತಿರುವ ವ್ಯಕ್ತಿ ಪ್ರತಿ ತಿಂಗಳು ಶೇ 620 ಜಿ ಎಥೆನಾಲ್ ಸೇವಿಸಿದರೆ ಶೇ 40ರಷ್ಟು ಕ್ಯಾನ್ಸರ್ ಅಭಿವೃದ್ಧಿಯನ್ನು ತಡೆಗಟ್ಟಬಹುದು. ಪ್ರತಿ ವಾರ ಎರಡೂ ಲೋಟಕ್ಕಿಂತ ಹೆಚ್ಚು ರೆಡ್ ವೈನ್ ಸೇವಿಸುವ ವ್ಯಕ್ತಿಯಲ್ಲೂ ಶೇ 40ರಷ್ಟು ಕ್ಯಾನ್ಸರ್ ನಿಯಂತ್ರಣವಾಗುತ್ತದೆ. ವೈಟ್ ವೈನ್ ಮತ್ತು ಆಲ್ಕೋಹಾಲ್ ಅಂಶ ಹೆಚ್ಚು ಇರುವ ಬಿಯರ್ ಸೇವನೆಯಿಂದಲೂ ಇದೇ ರೀತಿಯ ಪರಿಣಾಮವಾಗುತ್ತದೆ. ಆದರೆ, ಕಿಡ್ನಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುವ ಬಿಯರ್, ಆಲ್ಕೋಹಾಲ್ ಮಧ್ಯಮ ಮಟ್ಟದ್ಲಲಿರುವ ಬಿಯರ್, ಆಲ್ಕೋಹಾಲ್ ಹೆಚ್ಚಿರುವ ವೈನ್ ಅಥವಾ ಇತರೆ ಮದ್ಯಪಾನಗಳು ಸಹಾಯ ಮಾಡುವುದಿಲ್ಲ ಎಂಬುದು ವರದಿಯ ಅಭಿಮತ.
2006: ಭಾರತೀಯ ಸಂಜಾತ ಜಲ ನಿರ್ಹಹಣಾ ತಜ್ಞ, ಕೆನಡಾ ಪ್ರಜೆ ಅಸಿತ್ ಕೆ. ಬಿಸ್ವಾಸ್ ಅವರಿಗೆ ಜಾಗತಿಕ ಜಲ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿನೀಡಲಾಗುವ 1.50 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪ್ರತಿಷ್ಠಿತ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯನ್ನು ಸ್ವೀಡಿಷ್ ರಾಜಕುಮಾರಿ ವಿಕ್ಟೋರಿಯಾ ಅವರು ಸ್ಟಾಕ್ ಹೋಮಿನಲ್ಲಿ ಪ್ರದಾನ ಮಾಡಿದರು. ಸ್ವೀಡನ್ನಿನ ದೊರೆ 16ನೇ ಕಾಲ್ ಗುಸ್ತಾಫ್ ಜಲ ಪ್ರಶಸ್ತಿಯ ಪೋಷಕತ್ವದ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯು ಜಾಗತಿಕ ಪ್ರಶಸ್ತಿಯಾಗಿದ್ದು ಇದನ್ನು 1990ರಲ್ಲಿ ಸ್ಥಾಪಿಸಲಾಯಿತು. ಜಲ ಸಂಬಂಧಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ, ಸಂಘಟನೆ ಅಥವಾ ಜಲ ಸಂಬಂಧಿ ಚಟುವಟಿಕೆ ನಿರತರಾಗಿರುವ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಶಿಕ್ಷಣ, ಮಾನವೀಯ ಅಥವಾ ಅಂತಾರಾಷ್ಟ್ರೀಯ ಬಾಂಧವ್ಯ, ಜಲ ನಿರ್ವಹಣೆ, ಜಲ ಸಂಬಂಧಿ ನೆರವು ಇತ್ಯಾದಿ ಕ್ಷೇತ್ರಗಳು ಈ ವ್ಯಾಪ್ತಿಗೆ ಬರುತ್ತದೆ.
2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಲೋಕಸಭಯಲ್ಲಿ ಮಂಡಿಸಲಾಯಿತು. ಬೆಂಗಳೂರಿನ ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಮುಂಬೈಯ ಹೋಮಿ ಬಾಬಾ ರಾಷ್ಟ್ರೀಯ ಸಂಸ್ಥೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಸೇರಿ 8 ಸಂಸ್ಥೆಗಳಿಗೆ ಈ ಮೀಸಲಾತಿ ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರ ಸಂಸ್ಥೆಗಳಿಗೂ ಮೀಸಲಾತಿಯಿಂದ ವಿನಾಯ್ತಿ. ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರು ಮಂಡಿಸಿದ ಈ ಮಸೂದೆಯನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಿದರು.
2006: ಲಾಭದಾಯಕ ಹುದ್ದೆ ಹೊಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಇವರಿಬ್ಬರೂ ರಾಜೀವ್ಗಾಂಧಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ.
2006: ಸುಮಾರು 3200 ವರ್ಷಗಳಷ್ಟು ಹಳೆಯದಾದ 125 ಟನ್ ತೂಕದ ಪರ್ಹೋ 2ನೇ ರಾಮ್ಸೇಸ ಮೂರ್ತಿಯನ್ನು ಈಜಿಪ್ಟಿನ ಕೈರೋದ ರಾಮ್ಸೇಸ ಚೌಕದಿಂದ ಕೈರೋ ಹೊರವಲಯದ ಗಿಝಾದಲ್ಲಿನ ಪಿರಮಿಡ್ಡಿಗೆ ಸಾಗಿಸಲಾಯಿತು.
2004: ಈದ್ಗಾ ಮೈದಾನ ರಾಷ್ಟ್ರ ಧ್ವಜಾರೋಹಣ ವಿವಾದ ಸಂಬಂಧ ಹೊರಡಿಸಲಾದ ವಾರಂಟ್ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾದರು.
2001: ಹೆಪಟೈಟಿಸ್, ಲಿವರ್ ಸಿರೋಸಿಸ್ ಮತ್ತು ಕ್ಯಾನ್ಸರಿಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ಸಿನ ಗುಣಾಣು ನಕ್ಷೆಯನ್ನು (ಜೆನೋಮ್) ಅನಿವಾಸಿ ಭಾರತೀಯ ವಿಜ್ಞಾನಿ ರಾಮರೆಡ್ಡಿ ಗುಂಟಕ ಅವರ ಸಹಯೋಗದೊಂದಿಗೆ ವಿಜ್ಞಾನಿಗಳು ಹೈದರಾಬಾದಿನ ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಸಿನಲ್ಲಿ ಗುರುತಿಸಿ ರೂಪಿಸಿದರು. ಸೂಕ್ಷ್ಮಜೀವಿಯೊಂದರ ಗುಣಾಣು ನಕ್ಷೆಯನ್ನು ಈ ರೀತಿ ಭಾರತದಲ್ಲಿ ಗುರುತಿಸಿದ್ದು ಇದೇ ಮೊದಲು.
2001: ಲಂಡನ್ನಿನ ಓವಲ್ಲಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 400ನೇ ಟೆಸ್ಟ್ ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಶೇನ್ ವಾರ್ನ್ ಪಾತ್ರರಾದರು.
1999: ಡೇವಿಸ್ ಕಪ್ ಮಾಜಿ ನಾಯಕ ನರೇಂದ್ರನಾಥ ನಿಧನ.
1996: ಸಮುದ್ರಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ವಿಶ್ವ ವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕ್ಕೆ ಹೊರಟಿದ್ದ 194 ಮಂದಿ ಯಾತ್ರಾರ್ಥಿಗಳು ಅಮರನಾಥ ಗುಹೆಗಳಲ್ಲಿ ಅತಿಯಾದ ಶೀತಕ್ಕೆ ಸಿಲುಕಿ ಮೃತರಾದರು.
1981: ಕರ್ನಾಟಕದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಶುಲ್ಕ ವಿಧಿಸುವುದನ್ನು ಹಂತ, ಹಂತವಾಗಿ ರದ್ದು ಪಡಿಸಲು ಸಚಿವ ಸಂಪುಟ ನಿರ್ಧರಿಸಿತು.
1948: `ಜನ ಗಣ ಮನ'ವನ್ನು ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಅಂಗೀಕರಿಸಲು ಭಾರತದ ಸಂವಿಧಾನ ಸಭೆ ಅಂತಿಮ ನಿರ್ಣಯ ಕೈಗೊಂಡಿತು.
1947: ಸಾಹಿತಿ ಶ್ರೀಧರ ರಾಯಸಂ ಜನನ.
1944: ನಾಲ್ಕು ವರ್ಷಗಳ ನಾಝಿ ಆಳ್ವಿಕೆಯಿಂದ ಪ್ಯಾರಿಸ್ಸನ್ನು ಮಿತ್ರ ಪಡೆಗಳು ವಿಮೋಚನೆಗೊಳಿಸಿದವು.
1919: ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಜನನ.
1918: ಖ್ಯಾತ ಸಾಹಿತಿ ಹಾಗೂ ಸಮಾಜ ಸುಧಾರಕ ಮಿರ್ಜಿ ಅಣ್ಣಾರಾಯ (25-8-1919ರಿಂದ 23-12-1975) ಅವರು ಅಪ್ಪಣ್ಣ- ಚಂದ್ರವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ ಜನಿಸಿದರು. ಒಟ್ಟು 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅಣ್ಣಾರಾಯ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
1890: ಸಾಹಿತಿ ಸುಬೋಧ ರಾಮರಾವ್ ಜನನ.
1888: ಭಾರತೀಯ ವಿದ್ವಾಂಸ ಹಾಗೂ ಆಡಳಿತಗಾರ ಅಲ್ಲಾಮಾ ಮಾಶ್ರಿಕಿ (1888-1963) ಜನ್ಮದಿನ. ಹೈದರಾಬಾದಿನಲ್ಲಿ ಖಕ್ಸಾರ್ ತೆಹ್ರಿಕಿ ಪಕ್ಷವನ್ನು ಹುಟ್ಟುಹಾಕಿದ ಇವರು ಕೋಮು ಆಧಾರದ ವಿಭಜನೆಯನ್ನು ಪ್ರತಿಪಾದಿಸಿದವರು.
1875: ಹಡಗೊಂದರ ಮಾಸ್ಟರ್ ಮ್ಯಾಥ್ಯೂ ವೆಬ್ ಅವರು 21 ಗಂಟೆ 45 ನಿಮಿಷಗಳ ಅವಧಿಯ್ಲಲಿ ಬ್ರೆಸ್ಟ್ ಸ್ಟ್ರೋಕ್ ವಿಧಾನದಲ್ಲಿ ಈಜುತ್ತಾ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
No comments:
Post a Comment