Sunday, September 20, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 17

ಇಂದಿನ ಇತಿಹಾಸ

ಸೆಪ್ಟೆಂಬರ್ 17

 ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

2014: ಢಾಕಾ: ಜಮಾತ್-ಇ-ಇಸ್ಲಾಮಿ ನಾಯಕ ಹಾಗೂ 1971ರ ಯುದ್ಧಾಪರಾಧಿ ದೆಲ್ವಾರ್ ಹೊಸೈನ್ ಸಯೀದೀಗೆ ಬಾಂಗ್ಲಾದೇಶ ಸುಪ್ರಿಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಸಯೀದೀ ಸಾಯುವವರೆಗೂ ಸೆರೆಮನೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿತು. 'ತನ್ನ ಜೀವನದ ಉಳಿದ ಆಯುಸ್ಸನ್ನು ಆತ ಸೆರೆಮನೆಯಲ್ಲೇ ಕಳೆಯಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಎಂ. ಮುಝಾಮ್ಮೆಲ್ ಹೊಸೈನ್ ಅವರು ನ್ಯಾಯಾಲಯದ ಕಿಕ್ಕಿರಿದ ಕೊಠಡಿಯಲ್ಲಿ ಅಚ್ಚರಿದಾಯಕ ತೀರ್ಪು ಪ್ರಕಟಿಸುತ್ತಾ ಹೇಳಿದರು. ಹೊಸೈನ್ ನೇತೃತ್ವದ ಪಂಚ ಸದಸ್ಯ ಪೀಠವು ಬಹುಮತದ ಅಭಿಪ್ರಾಯವನ್ನು ಆಧರಿಸಿ ಈ ತೀರ್ಪು ನೀಡಿತು. ಆದರೆ ಸಯೀದೀಗೆ ಕೊಡುವ ಶಿಕ್ಷೆ ಬಗ್ಗೆ ಎಷ್ಟು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ಹೊಂದಿದ್ದರು ಎಂದು ಎಂದು ಸ್ಪಷ್ಟ ಪಡಿಸಲಿಲ್ಲ. ಕಳೆದ ಫೆಬ್ರುವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಸಯೀದೀಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ರಾಷ್ಟ್ರದ ಇತಿಹಾಸದಲ್ಲೇ ಭೀಕರ ರಾಜಕೀಯ ಹಿಂಸಾಚಾರ ಭುಗಿಲೆದ್ದಿತ್ತು. ಸಯೀದೀ ಜಮಾತ್​ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು 1971ರ ಸಮರ ಕಾಲದಲ್ಲಿ ಪಾಕ್ ಕಡೆಗೆ ವಾಲಿ, ಬಾಂಗ್ಲಾ ಸಮರವನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಆಗಿನ ಪಾಕಿಸ್ತಾನಿ ಆಡಳಿತದ ಜೊತೆ ಕೈಮಿಲಾಯಿಸಿ ಆಲ್ ಬದರ್, ಅಲ್ ಶಾಮ್ಂತಹ ಕುಖ್ಯಾತ ಗುಂಪುಗಳನ್ನು ಪಾಕ್ ಸೇನೆಗೆ ನೆರವಾಗುವ ಸಲುವಾಗಿ ಸ್ಥಾಪಿಸಿದ್ದರು. ಸಯೀದೀ ಕಾರ್ಯಾಚರಣೆಗಳಿಂದಾಗಿ 100 ಹೆಚ್ಚು ಮಂದಿ ಹತರಾಗಿದ್ದರು.
2014: ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯೆ ಲಲಿತಾ ಕುಮಾರಮಂಗಲಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ನೂನತ ಅಧ್ಯಕ್ಷೆಯಾಗಿ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರ ಈದಿನ ಲಲಿತಾ ಅವರ ನೇಮಕಾತಿಯನ್ನು ಅಧಿಕೃತಗೊಳಿಸಿತು. ಈ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾಹಿತಿ ನೀಡಿದರು. ಲಲಿತಾ ತಮಿಳುನಾಡಿನಲ್ಲಿ ಪ್ರಕೃತಿ ಎನ್ನುವ ಖಾಸಗಿ ಸಂಸ್ಥೆಯೊಂದನ್ನು(ಎನ್​ಜಿಒ) ನಡೆಸಿದ ಅನುಭವ ಹೊಂದಿದ್ದು, ಖುದ್ದು ಪ್ರಧಾನಿಯೇ ಇವರ ನೇಮಕಾತಿ ಮಾಡಿದ್ದಾರೆ. ಆಕೆ ಸಾಮರ್ಥ್ಯವಂತೆಯಾಗಿದ್ದು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲರು ಎಂದು ಮೇನಕಾ ಹೇಳಿದರು.

2014: ನವದೆಹಲಿ: ಅರ್ಜುನ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯದ ಜತೆ ಹೋರಾಡುತ್ತಿದ್ದ ಬಾಕ್ಸರ್ ಮನೋಜ್ ಕುಮಾರ್ ಕೊನೆಗೂ ಗೆಲುವು ಸಾಧಿಸಿದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಮನೋಜ್​ಗೆ ತಲೆಬಾಗಿದ ಕ್ರೀಡಾ ಸಚಿವಾಲಯ, ಅವರಿಗೆ ಅರ್ಜುನ ಪ್ರಶಸ್ತಿ ನೀಡಲು ಒಪ್ಪಿಕೊಂಡಿತು. 2010ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ಸಾಧಕ ಮನೋಜ್​ಗೆ ಈದಿನ ಬೆಳಗ್ಗೆ ಕ್ರೀಡಾ ಸಚಿವಾಲಯ, ಅರ್ಜುನ ಪ್ರಶಸ್ತಿ ನೀಡುವ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿತು.

2014: ಚೆನ್ನೈ: 'ಮೈ ಹೂಂ ರಜನೀಕಾಂತ್' ಚಿತ್ರದ ವಿರುದ್ಧ ನ್ಯಾಯಾಲಯದ ಕಟ್ಟೆ ಏರಿದ ತಮಿಳು ‘ಸೂಪರ್ ಸ್ಟಾರ್ ರಜನೀಕಾಂತ್’ ಚಿತ್ರದ ಬಿಡುಗಡೆ ವಿರುದ್ಧ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡರು. 'ಮೈ ಹೂಂ ರಜನೀಕಾಂತ್' ಚಿತ್ರ ನಿರ್ಮಾಪಕರ ವಿರುದ್ಧ ಮದ್ರಾಸ್ ಹೈಕೋರ್ಟ್​ನಲ್ಲಿ ರಜನೀಕಾಂತ್ ದಾವೆ ಹೂಡಿದರು. 'ನನ್ನ ಹೆಸರನ್ನು ದುರುಪಯೋಗಿಸಲಾಗಿದೆ. ಮತ್ತು ಚಿತ್ರ ನಿರ್ಮಾಪಕರು ನನ್ನ ಹೆಸರು ಬಳಸುವ ಮುನ್ನ ನನ್ನ ಅನುಮತಿ ಪಡೆದುಕೊಂಡಿಲ್ಲ' ಎಂದು ರಜನೀಕಾಂತ್ ದೂರಿದರು. ಅಹವಾಲು ಆಲಿಸಿದ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಪ್ರಕರಣವನ್ನು ವಿಚಾರಣೆಗಾಗಿ ಸೆಪ್ಟೆಂಬರ್ 22ಕ್ಕೆ ಮುಂದೂಡಲಾಯಿತು.

2014: ಅಹಮದಾಬಾದ್: ಭಾರತಕ್ಕೆ ಆಗಮಿಸಿದ ಒಂದು ಗಂಟೆ ಅವಧಿಯಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಪ್ರಮುಖ ಮೂರು ಅಂಶಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಮಾಡಿದರು. ನೆರೆಯ ರಾಷ್ಟ್ರ ಚೀನಾ ಜತೆಗಿನ ಬಾಂಧವ್ಯ ವೃದ್ಧಿಸಿಕೊಳ್ಳುವ ವಿಚಾರ ಸೇರಿದಂತೆ ವ್ಯಾಪಾರ ವಿನಿಮಯ, ಬಂಡವಾಳ ಹೂಡಿಕೆ ಮತ್ತು ಗಡಿ ವಿಚಾರವಾಗಿ ಆಗಾಗ ತಲೆದೋರುವ ಸಮಸ್ಯೆಗಳ ಕುರಿತು ಒಪ್ಪಂದ ಪ್ರಕ್ರಿಯೆ ನಡೆಯಿತು. ಗುಜರಾತ್ ಸರ್ಕಾರದ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳಿಗೆ ನೇರ ಬಂಡವಾಳ ಹೂಡಿಕೆಯ ಒಪ್ಪಂದವೂ ನಡೆದಿದೆ ಎನ್ನಲಾಯಿತು. ಮೂರು ದಿನಗಳ ಪ್ರವಾಸಕ್ಕಾಗಿ ಈದಿನ ಭಾರತಕ್ಕೆ ಆಗಮಿಸಿದ ಕ್ಸಿ ಜಿನ್​ಪಿಂಗ್ ಅವರಿಗೆ ಅಹಮದಾಬಾದ್​ನಲ್ಲಿ ಅದ್ದೂರಿ ಸ್ವಾಗತವನ್ನೇ ನೀಡಲಾಯಿತು. ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ರಾಜ್ಯಪಾಲ ಒ.ಪಿ. ಕೊಹ್ಲಿ ಮತ್ತು ರಾಜ್ಯ ಸಂಪುಟ ಸಚಿವರು ಬರಮಾಡಿಕೊಂಡರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಿಯಾತ್ ಹೋಟೆಲ್​ನಲ್ಲಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿದರು. ಬೌದ್ಧ ಸಂಸ್ಕೃತಿ ಪ್ರತಿಬಿಂಬಿಸುವ ನಾನಾ ಕಲಾಕೃತಿಗಳ ಪ್ರದರ್ಶನ ಮತ್ತು ಸ್ಲೈಡ್ ಶೋ ನಡೆಯಿತು. ನಂತರ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಸಹಿ ಮಾಡಿಸಿಕೊಳ್ಳಲಾಯಿತು. ಭಾರತದಲ್ಲಿ ಚೀನಾದ ಹೂಡಿಕೆ ಮತ್ತು ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲ ಅಂಶಗಳು ಜಿನ್​ಪಿಂಗ್ ಮತ್ತು ಪ್ರಧಾನಿ ಮೋದಿ ಅವರ ಮಾತುಕತೆಯ ಮಹತ್ವದ ಅಂಶಗಳಾಗಿದ್ದವು. ಅಹಮದಾಬಾದ್​ನಲ್ಲಿ ಇಂಡಿಸ್ಟ್ರಿಯಲ್ ಪಾರ್ಕ್ ನಿರ್ವಿುಸಿ ಚೀನಾದ ಗುವಾಂಗ್ಜೋ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದೂ ಒಪ್ಪಂದದೊಳಗಿನ ಒಂದು ಅಂಶವಾದರೆ, ಉಳಿದಂತೆ ಭಾರತೀಯ ರೈಲ್ವೆ ಯೋಜನೆಗಳಲ್ಲಿ ಚೀನಾ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು, ತಯಾರಿಕೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳಲ್ಲೂ ಹೂಡಿಕೆ ಮಾಡುವ ವಿಚಾರವೂ ಒಪ್ಪಂದದ ಪ್ರಮುಖ ಅಂಶಗಳಾಗಿದ್ದವು ಎಂದು ಹೇಳಲಾಯಿತು. ಇವೆಲ್ಲದರ ಜೊತೆಗೆ ಗುಜರಾತ್​ನ ಶಿಕ್ಷಣ ಕ್ಷೇತ್ರದಲ್ಲೂ ಚೀನಾ ಸರ್ಕಾರದ ಹೂಡಿಕೆ ಮಾಡಲಿದೆ ಎನ್ನಲಾಯಿತು.

2014: ನವದೆಹಲಿ: ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕ ಮಾಡಿರುವುದರ ವಿರುದ್ಧ ವಕೀಲೆ ಹಾಗೂ ಮಾಜಿ ರಾ ಮಹಿಳಾ ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ಆಲಿಸಲು ದೆಹಲಿ ಹೈಕೋರ್ಟ್ ಒಪ್ಪಿತು. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಿಶಾ ಪ್ರಿಯಾ ಭಾಟಿಯಾ (51) ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದತ್ತು ಅವರ ಹೆಸರನ್ನು ಸರ್ಕಾರವು ರಾಷ್ಟ್ರಪತಿಗಳಿಗೆ ಮಾಡಿರುವ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಕೋರಿದರು. ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಆರ್.ಎಸ್. ಎಂಡ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಷಯವನ್ನು ಆಲಿಸುವುದಾಗಿ ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ಸಂಜಯ ಜೈನ್ ಅವರು ಮನವಿಯನ್ನು ವಿರೋಧಿಸಿದರು. ಅರ್ಜಿಯು ಕ್ಷುಲ್ಲಕವಾದುದಾಗಿದ್ದು ಅದನ್ನು ಪುರಸ್ಕರಿಸಬಾರದು ಎಂದು ಜೈನ್ ವಾದಿಸಿದರು. ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ ಎನ್ನಲಾಗಿದ್ದು ಈ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಭಾಟಿಯಾ ತಮ್ಮ ಮನವಿಯಲ್ಲಿ ಕೋರಿದರು. '2011ರಲ್ಲಿ ನ್ಯಾಯಮೂರ್ತಿ ದತ್ತು ಅವರು ಸುಪ್ರೀಂಕೋರ್ಟಿನಲ್ಲಿ ನನ್ನ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾಗ ನಾನು ಕಾನೂನು ವಿದ್ಯಾರ್ಥಿನಿಯಾಗಿದ್ದೆ. ಆವಾಗಿನಿಂದ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ' ಎಂದು ಭಾಟಿಯಾ ದೂರಿದರು. 'ದತ್ತು ಅವರು ನನ್ನ ಎಲ್ಲಾ ಪ್ರಕರಣಗಳನ್ನೂ ವಜಾ ಮಾಡಿದ್ದರು. ಅವರ ವಿರುದ್ಧ ನಾನು ಪೊಲೀಸರು, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ದೆಹಲಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದೆ' ಎಂದು ಭಾಟಿಯಾ ವಿವರಿಸಿದರು. 1987ರಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್​ನಲ್ಲಿ (ರಾ) ಪ್ರಥಮ ದರ್ಜೆ ಎಕ್ಸಿಕ್ಯೂಟಿವ್ ಅಧಿಕಾರಿಯಾಗಿದ್ದ ಭಾಟಿಯಾ ಅವರನ್ನು 2009ರಲ್ಲಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ ಮಾಡಲಾಗಿತ್ತು.

2014: ಅಹಮದಾಬಾದ್: ತಮ್ಮ ಜನ್ಮದಿನವಾದ ಈದಿನ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ತಮ್ಮ ಮಾತೆಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜಪಾನ್ ಪ್ರಧಾನಿ ಶಿಂಝೊ ಅಬೆ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದರು. 64ಕ್ಕೆ ಕಾಲಿರಿಸಿದ ಮೋದಿ ಅವರು ಅಹಮದಾಬಾದಿನಿಂದ 23 ಕಿ.ಮೀ. ದೂರದ ಗಾಂಧಿ ನಗರಕ್ಕೆ ತಮ್ಮ ಸಾಮಾನ್ಯ ವಾಹನದಲ್ಲಿ ಯಾವ ಭದ್ರತೆಯೂ ಇಲ್ಲದೆ ಏಕಾಂಗಿಯಾಗಿ ತೆರಳಿ ತಮ್ಮ ಮಾತೆ ಹೀರಾಬೆನ್ ಅವರ ಆಶೀರ್ವಾದ ಪಡೆದರು. ಪ್ರಧಾನಿಯಾಗಿ ತಮ್ಮ ಜನ್ಮದಿನವನ್ನು ಆಚರಿಸದೇ ಇರಲು ಮೋದಿ ಜನತೆಗೆ ಮನವಿ ಮಾಡಿದ್ದರು. ಬದಲಾಗಿ ಪ್ರವಾಹ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಶ್ರಮಿಸುವಂತೆ ಕೋರಿದ್ದರು. ಹೀರಾಬೆನ್ ಅವರು ಪುತ್ರನಿಗೆ 50,000ರೂಪಾಯಿಗಳ ಗಿಫ್ಟ್ ಚೆಕ್ ನೀಡಿ ಜಮ್ಮು  - ಕಾಶ್ಮೀರ ನೆರೆಸಂತ್ರಸ್ಥರ ಪರಿಹಾರಕ್ಕೆ ಬಳಸುವಂತೆ ಸೂಚಿಸಿದರು.

2014: ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಲೋಕಸಭೆಯ ಪ್ರತಿಷ್ಠಿತ ನೈತಿಕತೆ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. 75 ವಯಸ್ಸು ಮೀರಿದವರನ್ನು ಸಂಪುಟದಿಂದ ಹೊರಗಿಡಬೇಕು ಎಂಬ ನಿರ್ಧಾರದ ಪರಿಣಾಮವಾಗಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಿರಿಯ ಸಚಿವರಾಗುವ ಅವಕಾಶ ವಂಚಿತರಾಗಿದ್ದ 86ರ ಹರೆಯದ ಹಿರಿಯ ನಾಯಕ ಅಡ್ವಾಣಿ ಅವರನ್ನು ನೈತಿಕತೆ ಸಮಿತಿಯ ಅಧ್ಯಕ್ಷರನ್ನಾಗಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ನೇಮಕ ಮಾಡಿದರು. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಮಾಣಿಕ್​ರಾವ್ ಗವಿಟ್ ಅವರು ನೈತಿಕತೆ ಸಮಿತಿಯ ಅಧ್ಯಕ್ಷರಾಗಿದ್ದರು.

2014: ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್, ಅವರ ಸಂಪುಟ ಸಚಿವರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಇಸ್ಲಾಮಾಬಾದಿನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಕಾರರ ಹತ್ಯೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ ಕೊಲೆ ಪ್ರಕರಣ ದಾಖಲಿಸಲಾಯಿತು. ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಹಿಂದಿನ ರಾತ್ರಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಕಾರರನ್ನು ಕೊಂದುದಕ್ಕಾಗಿ ಶರೀಫ್ ಮತ್ತು ಇತರರ ವಿರುದ್ಧ ಕೊಲೆ ಆಪಾದನೆ ಹೊರಿಸುವಂತೆ ಜಿಲ್ಲಾ ನ್ಯಾಯಾಧೀಶರು ಆಜ್ಞಾಪಿಸಿದ ಬಳಿಕ ಕಳೆದ ರಾತ್ರಿ ಪ್ರಕರಣ ದಾಖಲಿಸಲಾಯಿತು ಎಂದು ವರದಿ ತಿಳಿಸಿತು. ಪ್ರಧಾನಿ ವಿರುದ್ಧ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು. ಮುಸ್ಲಿಂ ಧಾರ್ವಿುಕ ನಾಯಕ ತಾಹೀರುಲ್ ಖಾದ್ರಿ ನೇತೃತ್ವದ ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಸಂಘಟನೆಯು ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆಗಸ್ಟ್ 30ರಂದು ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಮೃತರಾಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಾಹೋರಿನಲ್ಲಿ ಖಾದ್ರಿ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಕಳೆದ ಜೂನ್​ನಲ್ಲಿ ಸಂಭವಿಸಿದ್ದ ಘರ್ಷಣೆಗಾಗಿ ಪ್ರಧಾನಿ ವಿರುದ್ಧ ಕಳೆದ ತಿಂಗಳು ಪ್ರಕರಣ ದಾಖಲಾದ ಬಳಿಕ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು.

2014: ನವದೆಹಲಿ: ಶಾರದಾ ಹಗರಣದಲ್ಲಿ ಸಿಬಿಐ ಪರಿಶೀಲನೆಗೆ ಒಳಗಾಗಿದ್ದ ಅಸ್ಸಾಮಿನ ಮಾಜಿ ಡಿಜಿಪಿ ಶಂಕರ ಬರೂವ ಅವರು ಗುವಾಹಟಿಯ ತಮ್ಮ ನಿವಾಸದಲ್ಲಿ ಮೃತರಾಗಿರುವುದು ಪತ್ತೆಯಾಯಿತು. ಶಂಕರ ಬರೂವ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದರು. ಮಾಜಿ ಡಿಜಿಪಿ ರಿವಾಲ್ವರಿನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಯಿತು. ಶಂಕರ ಬರೂವ ಅವರ ಮನೆ ಮೇಲೆ ಶಾರದಾ ಹಗರಣದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಸಿಬಿಐ ದಾಳಿ ನಡೆಸಿತ್ತು. ಬರೂವ ಮನೆ ಸೇರಿದಂತೆ ಗುವಾಹಟಿಯಲ್ಲಿ 12 ಕಡೆ ಸಿಬಿಐ ಸಿಬ್ಬಂದಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.

2014: ಸುವಾ (ಫಿಜಿ): ಫಿಜಿಯಲ್ಲಿ 2006ರಲ್ಲಿ ಸಂಭವಿಸಿದ ಸೇನಾ ದಂಗೆಯ ಬಳಿಕ ಫಿಜಿ ಸಂಸತ್ತಿಗಾಗಿ ಇದೇ ಮೊತ್ತ ಮೊದಲ ಸಾರ್ವಜನಿಕ ಚುನಾವಣೆ ಈದಿನ ನಡೆಯಿತು. ಚುನಾವಣೆ ಸಲುವಾಗಿ ಒಟ್ಟು 1460 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಬಂದು ಮತಚಲಾಯಿಸಿದರು ಎಂದು ಸನೀಮ್​ಹರ್ಷ ವ್ಯಕ್ತ ಪಡಿಸಿದರು. 50 ಸದಸ್ಯ ಬಲದ ಸಂಸತ್ತಿಗೆ ನಡೆಯುತ್ತಿರುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು.

2008: ವಿಶ್ವದ ವಿವಿಧ ದೇಶಗಳ ಸಾವಿರಾರು ಅಂಗವಿಕಲ ಸ್ಪರ್ಧಿಗಳು ಪಾಲ್ಗೊಂಡ 12 ದಿನಗಳ ಬೀಜಿಂಗ್ ಪ್ಯಾರಾಲಿಂಪಿಕ್ ಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಈ ಮಹಾ ಕ್ರೀಡಾಮೇಳವನ್ನು ಯಶಸ್ವಿಯಾಗಿ ಸಂಘಟಿಸಿದ ಚೀನಾ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಿತು. `ಬರ್ಡ್ಸ್ ನೆಸ್ಟ್' ಎಂದೇ ಪ್ರಸಿದ್ಧಿ ಪಡೆದ ಬೀಜಿಂಗಿನ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಸೆಪ್ಟೆಂಬರ್ 6 ರಂದು ಇದೇ ರೀತಿ ವರ್ಣರಂಜಿತ ಉದ್ಘಾಟನಾ ಸಮಾರಂಭ ಏರ್ಪಡಿಸಿ ಸಂಘಟಕರು ಎಲ್ಲರ ಗಮನ ಸೆಳೆದಿದ್ದರು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ ಶ್ರೇಷ್ಠ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಆಯ್ಕೆಯಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಒಟ್ಟು 24 ಸಂಸ್ಥೆಗಳು ಸ್ಪರ್ಧೆಯಲ್ಲಿದ್ದವು. ಹಿರಿಯ ವಿಮರ್ಶಕ ಪ್ರೊ. ಜಿ. ಎಚ್. ನಾಯಕ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಂತಿಮವಾಗಿ ಈ ಆಯ್ಕೆ ನಡೆಸಿತು.

2007: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸಂಬಂಧವನ್ನು ಪ್ರತಿಬಿಂಬಿಸುವ ಉದ್ದೇಶದಿಂದ  ಡರ್ಬಾನಿನ ಖ್ಯಾತ ಕ್ವಾಜುಲು- ನಾಟಲ್ ವಿಶ್ವವಿದ್ಯಾಲಯವು, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಭಾರತದ ಮಹಾತ್ಮ ಗಾಂಧಿ ಹಾಗೂ ದಕ್ಷಿಣ ಆಫ್ರಿಕದ ಆಲ್ಬರ್ಟ್ ಲುಥುಲಿ ಅವರ ಸ್ಮರಣಾರ್ಥ ಶಾಂತಿ ಅಧ್ಯಯನ ಪೀಠ ಆರಂಭಿಸುತ್ತಿರುವುದಾಗಿ ಪ್ರಕಟಿಸಿತು. 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡರ್ಬಾನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಅವರಿಗೆ ಈ ಅಧ್ಯಯನ ಪೀಠದ ಕಲ್ಪನೆ ಮೊಳೆಯಿತು. ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದವರೇ ಗಾಂಧಿ ಅವರ ಮೊಮ್ಮಗಳು ಇಳಾ ಗಾಂಧಿ. ನಂತರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್  ಪೀಠದ ಪ್ರಾಯೋಜಕತ್ವ ವಹಿಸಿಕೊಂಡಿತು. ಆಫ್ರಿಕದಲ್ಲೇ ಮಹಾತ್ಮ ಗಾಂಧಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು.

2007: ಬ್ರಿಟನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ವಿಶ್ವದ ಮೊಟ್ಟಮೊದಲ ಸೀಡ್ಲೆಸ್ (ಬೀಜರಹಿತ) ನಿಂಬೆಹಣ್ಣು ಕಾಣಿಸಿಕೊಳ್ಳಲಿದೆ ! ಬ್ರಿಟನ್ನಿನ ರೈತರೊಬ್ಬರು ಬೀಜಗಳೇ ಇಲ್ಲದ ನಿಂಬೆ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ. ಒಗರು ಮಿಶ್ರಿತ ಸಿಹಿ ರುಚಿ ಹೊಂದಿರುವ ಈ ವಿಶಿಷ್ಟ ನಿಂಬೆ  ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಬೀಜರಹಿತ ನಿಂಬೆ ವಿಶೇಷ ಹಣ್ಣು. ಯುರೋಪಿನ 900 ವರ್ಷಗಳ ಇತಿಹಾಸದಲ್ಲಿ ಇಂಥ ಹಣ್ಣನ್ನು ಕಂಡಿಲ್ಲ ಎಂದು ಇಂಗ್ಲೆಂಡಿನ ಮಾಧ್ಯಮಗಳು ವರದಿ ಮಾಡಿದವು.

2007: ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಎಂಜಿನ್ ಹಾಗೂ ಜಿ-ಮೇಲ್ ಸೇರಿದಂತೆ ಅನೇಕ ವಿದೇಶಿ ವೆಬ್ಸೈಟ್, ಇ-ಮೈಲ್ ತಾಣಗಳ ಬಳಕೆಯನ್ನು ಇರಾನ್ ನಿಷೇಧಿಸಿತು.

2007: ಎಳ್ಳು ಹಾಗೂ ಶೇಂಗಾ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ರಷ್ಯ ತೆರವುಗೊಳಿಸಿತು. ಭಾರತದ ಶೇಂಗಾ ಹಾಗೂ ಎಳ್ಳಿನ ಮೇಲೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಉಳಿಕೆ ಹೆಚ್ಚಾಗಿರುತ್ತಿದ್ದುದರಿಂದ ರಷ್ಯಾದ ಕೃಷಿ ಕಾವಲುಪಡೆ ಈ ನಿರ್ಬಂಧ ಹೇರಿತ್ತು.

2006: ಭಯೋತ್ಪಾದನೆ ನಿಗ್ರಹ ಕುರಿತು ಭಾರತದ ನಿಲುವನ್ನು ಬೆಂಬಲಿಸಿದ ಅಲಿಪ್ತ ಚಳವಳಿಯ ರಾಷ್ಟ್ರಗಳ ಒಕ್ಕೂಟವು (ನ್ಯಾಮ್) ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಸದಸ್ಯ ರಾಷ್ಟ್ರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ 91 ಪುಟಗಳ ನಿರ್ಣಯವನ್ನು ಸ್ವೀಕರಿಸಿತು. ಭಯೋತ್ಪಾದನೆಯಲ್ಲಿ ತೊಡಗಿರುವವರ ಗಡೀಪಾರು ಅಥವಾ ಹಸ್ತಾಂತರ ಮತ್ತು ನ್ಯಾಯಾಂಗದ ಪರಿಧಿಗೆ ಅವರನ್ನು ತರಲು ಸದಸ್ಯ ರಾಷ್ಟ್ರಗಳು ಪ್ರಯತ್ನಿಸಬೇಕು ಎಂದು ನಿರ್ಣಯ ಹೇಳಿತು.

1980: ನಿಕರಾಗುವಾದ ಮಾಜಿ ಅಧ್ಯಕ್ಷ ಅನಾಸ್ಟಾಸಿಯೊ ಸೊಮಾಝಾ ಅವರನ್ನು ಪರಗ್ವೆಯಲ್ಲಿ ಹತ್ಯೆಗೈಯಲಾಯಿತು.

1970: ಸಾಹಿತಿ ರಾಘವೇಂದ್ರ ದಂಡಿನ ಜನನ.

1960: ಸಿಂಧು ಮತ್ತು ಅದರ ಉಪನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ.

1956: ಒಎನ್ ಜಿಸಿ ಆರಂಭ.

1950: ಭಾರತ ಸರ್ಕಾರವು ಇಸ್ರೇಲಿಗೆ ಮಾನ್ಯತೆ ನೀಡಿತು.

1949: ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

1948: ಹೈದರಾಬಾದ್ ಭಾರತದೊಂದಿಗೆ ವಿಲೀನಗೊಂಡ ಬಗ್ಗೆ ಹೈದರಾಬಾದ್ ನಿಜಾಮನಿಂದ ಘೋಷಣೆ.

1939: ಸಾಹಿತಿ ಗುರುಸ್ವಾಮಿ ಕಲಗೇರಿ ಜನನ.

1915: ಸಮಕಾಲೀನ ಭಾರತೀಯ ಕಲಾವಿದ ಹಾಗೂ ಚಿತ್ರ ನಿರ್ಮಾಪಕ ಮಕ್ಬೂಲ್ ಫಿದಾ ಹುಸೇನ್ ಜನ್ಮದಿನ.

1906: ಜ್ಯೂನಿಯಸ್ ರಿಚರ್ಡ್ ಜಯವರ್ಧನೆ ಜನ್ಮದಿನ. ವಕೀಲ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಇವರು 1978ರಿಂದ

1989ರ ಅವಧಿಯಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದರು.

1879: ಸಮಾಜ ಸುಧಾರಕ ಹಾಗೂ `ದ್ರಾವಿಡ ಕಳಗಂ' ಪಕ್ಷದ ಸ್ಥಾಪಕ ಇ.ವಿ. ರಾಮಸ್ವಾಮಿ `ಪೆರಿಯಾರ್' ಜನ್ಮದಿನ.

1876: ಭಾರತೀಯ ಕಾದಂಬರಿಕಾರ ಶರತ್ ಚಂದ್ರ ಚಟರ್ಜಿ (1876-1938) ಜನ್ಮದಿನ.

1867: ಭಾರತೀಯ ಕಲಾವಿದ ಹಾಗೂ ಒಳಾಂಗಣ ಕಲಾವಿದ ಗಗನೇಂದ್ರನಾಥ ಟ್ಯಾಗೋರ್ (1867-1938) ಜನ್ಮದಿನ. ಇವರು ರಬೀಂದ್ರನಾಥ ಟ್ಯಾಗೋರ್ ಅವರ ಸೋದರಳಿಯ.

1850: ಸಾಹಿತಿ, ಶಿಕ್ಷಣ ತಜ್ಞ, ಮುಂಬೈ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ ರೊದ್ದ ಶ್ರೀನಿವಾಸರಾಯರು (17-9-1850ರಿಂದ 4-8-1929) ಕೋನೆರರಾಯರು- ಸುಬ್ಬಮ್ಮ ದಂಪತಿಯ ಮಗನಾಗಿ ಧಾರವಾಡದ ಮದಿಹಾಳದಲ್ಲಿ ಜನಿಸಿದರು.

1827:  ಬ್ರೈಟನ್ನಿನಲ್ಲಿ ಸಸೆಕ್ಸ್ ವಿರುದ್ಧ ಕೆಂಟ್ ಪಂದ್ಯದಲ್ಲಿ ಕ್ರಿಕೆಟ್ ಆಟಕ್ಕೆ `ವೈಡ್ ಬಾಲ್' ಪ್ರವೇಶ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement