Wednesday, September 30, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 30

ಇಂದಿನ ಇತಿಹಾಸ

ಸೆಪ್ಟೆಂಬರ್ 30
 ಝೆಕ್ ಗಣರಾಜ್ಯದ ಸುಂದರಿ, ಕ್ರೀಡಾಪಟು ಟಟನಾ ಕುಚರೋವಾ ಅವರು ಈ ರಾತ್ರಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2006ರ ಸಾಲಿನ `ವಿಶ್ವಸುಂದರಿ' ಪ್ರಶಸ್ತಿಗೆ ಪಾತ್ರರಾಗಿ, ಝೆಕ್ ಗಣರಾಜ್ಯಕ್ಕೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಕಿರೀಟವನ್ನು ತಂದು ಕೊಟ್ಟರು.

2014:  ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಸಹಚರ ಎನಿಸಿಕೊಂಡ ಚೋಟಾ ಶಕೀಲ್ ಘೋಷಿತ ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯ ಘೋಷಿಸಿದೆ.  ದೆಹಲಿ ಕೋರ್ಟಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎನ್ನುವುದು ತನಿಖೆಯ ವೇಳೆ ಸಾಬೀತಾಗಿದೆ. ಅಲ್ಲದೆ ಪೋಲಿಸರು ಸಂಬಂಧಿಸಿದ ಎಲ್ಲಾ ಆಸ್ತಿಗಳಿಗೂ ಮುಟ್ಟುಗೋಲು ಹಾಕಿದ್ದು, ಎಲ್ಲಾ ದಾಖಲೆಗಳಿಂದಲೂ ಇವರು ಅಪರಾಧಿಗಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿತು. ಇತ್ತೀಚೆಗೆ ಕೋರ್ಟ್ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈದಿನ ವಿಚಾರಣೆ ವೇಳೆ ದೆಹಲಿ ಪೋಲಿಸರು ವಾರಂಟಿಗೆ ಸಂಬಂಧಿಸಿ ಸಲ್ಲಿಸಬೇಕಾದ ಮಾಹಿತಿ ನೀಡಿದರು. ದಾವೂದ್ ಮತ್ತು ಚೋಟಾ ಶಕೀಲ್​ಗೆ ಸೇರಿದ ಮುಂಬೈನಲ್ಲಿರುವ ಆಸ್ತಿಗಳ ದಾಖಲೆಗಳ ಮುಟ್ಟುಗೋಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈಗಾಗಲೇ ನೀಡಿದ್ದಾಗಿದೆ. ಅಲ್ಲದೆ 1993ರ ಮುಂಬೈ ದಾಳಿ ಪ್ರಕರಣದ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದು, ಇನ್ನೂ ಭಾರತಕ್ಕೆ ಮರಳಿಲ್ಲ ಎಂದು ಅವರು ಹೇಳಿದರು.

2014: ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣದ  ಬಳಿಕ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಸಂಬಂಧಿತರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಅಗ್ನಿ ಮತ್ತು ತುರ್ತ ಸೇವೆ) ಸುತ್ತೋಲೆ ಹೊರಡಿಸಿದರು. ಸಿಗರೇಟ್ ಮತ್ತು ಇತರ ತಂಬಾಕು ಪದಾರ್ಥಗಳ ಕಾಯ್ದೆ(ಕೊಟ್ಪಾ)ಯ ಸಮರ್ಪಕ ಅನುಷ್ಠಾನ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆ(ಐಪಿಎಚ್) ಸಲ್ಲಿಸಿದ್ದ ಮನವಿ ಮೇರೆಗೆ ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಸೆ. 22ರಂದು ಈ ಆದೇಶ ಹೊರಡಿಸಿದ್ದಾರೆ. ಕೊಟ್ಪಾದ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆ ಪ್ರಕಾರ ಸರ್ಕಾರಿ-ಖಾಸಗಿ ಕಚೇರಿ, ಕಾರ್ಪೆರೇಟ್ ಹೌಸ್, ಶಾಪಿಂಗ್ ಮಾಲ್, ಥಿಯೇಟರ್, ರೆಸ್ಟೋರೆಂಟ್, ಕಾರ್ಖಾನೆ, ಆಸ್ಪತ್ರೆ, ಮನರಂಜನಾ ಕೇಂದ್ರ, ನ್ಯಾಯಾಲಯದ ಕಟ್ಟಡ ಮತ್ತಿತರ ಸಾರ್ವಜನಿಕ ಕಚೇರಿ-ಕಟ್ಟಡಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಹಾಕುವುದು ಕಡ್ಡಾಯ. ಧೂಮಪಾನಿಗಳ ಅಚಾತುರ್ಯದಿಂದಾಗುವ ಅಗ್ನಿ ಅನಾಹುತದಲ್ಲಿ ಇತರ ಅಗ್ನಿ ಅನಾಹುತಗಳಲ್ಲಿ ಉಂಟಾಗುವುದಕ್ಕಿಂತ ಹೆಚ್ಚು ಜೀವ ಹಾಗೂ ಸ್ವತ್ತು ಹಾನಿಗಳಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಅಗ್ನಿ ಅನಾಹುತಗಳಿಗೆ ಧೂಮಪಾನಿಗಳ ಅಚಾತುರ್ಯವೇ ಪ್ರಮುಖ ಕಾರಣವಾಗಿದ್ದು, ಅದರಿಂದ ಪ್ರತಿವರ್ಷ 500-700 ಜನ ಸಾವಿಗೀಡಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಐಪಿಎಚ್-ಕ್ಯಾನ್ಸರ್ ತಡೆ ಯೋಜನೆ ನಿರ್ದೇಶಕ ಡಾ.ಯು.ಎಸ್.ವಿಶಾಲ್​ರಾವ್ ಮಾ. 8ರಂದು ಡಿಜಿ ಅವರಿಗೆ ಮನವಿ ಸಲ್ಲಿಸಿದ್ದರು. ಆದ್ದರಿಂದ ಕಟ್ಟಡದ ಪ್ರವೇಶ, ಲಿಫ್ಟ್​ನ ಪ್ರವೇಶದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಫಲಕಗಳನ್ನು ಹಾಕಲೇಬೇಕು ಎಂದು ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಸೂಚನೆ ನೀಡಬೇಕು ಎಂದು ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಆದೇಶಿಸಿದ್ದಾರೆ.

2014: ಮಂಗಳನ ಕಕ್ಷೆಯಲ್ಲಿರುವ ಇಸ್ರೋದ ಮಂಗಳ ಯಾನ ಬಾಹ್ಯಾಕಾಶ ನೌಕೆ ಕೆಂಪು ಗ್ರಹದ ನೂತನ ಚಿತ್ರಗಳನ್ನು ಕಳಿಹಿಸಿತು. ಮಂಗಳ ಗ್ರಹದಲ್ಲಿ ಧೂಳಿನ ಸುನಾಮಿ ಬೀಸುತ್ತಿರುವ ದೃಶ್ಯ ಸೆರೆ ಹಿಡಿಯುವಲ್ಲಿ ನೌಕೆ ಯಶಸ್ವಿಯಾಯಿತು.. ಈ ಚಿತ್ರಗಳನ್ನು 74,500 ಕಿ.ಮೀ. ಎತ್ತರದಿಂದ ಕ್ಲಿಕ್ಕಿಸಲಾಯಿತು. ಮಂಗಳನ ಅಧ್ಯಯನಕ್ಕೆ ಈ ಚಿತ್ರ ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿತು.

2014: ಬೆಂಗಳೂರು: ಕನ್ನಡಿಗ ಅಥ್ಲೀಟ್ ವಿಕಾಸ್ ಗೌಡ ಇಂಚೋನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್​ನ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಕಳೆದ ತಿಂಗಳಷ್ಟೆ ಗ್ಲಾಸ್ಗೋನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಸಂಭ್ರಮ ಅನುಭವಿಸಿದ್ದ ವಿಕಾಸ್ ಗೌಡ ಏಷ್ಯನ್ ಗೇಮ್ಸ್​ನಲ್ಲಿ 62.58 ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕ ಸಂಪಾದಿಸಿದರು. ಒಲಿಂಪಿಕ್ ಕಂಚಿನ ಪದಕ ವಿಜೇತ ಇರಾನ್​ನ ಇಹ್ಸಾನ್ ಹದಾದಿ 65.11 ಮೀಟರ್ ದೂರಕ್ಕೆಸೆದು ಚಿನ್ನ ಗೆದ್ದರೆ, ಇನ್ನೊಬ್ಬ ಇರಾನಿಯನ್ ಮೊಹಮ್ಮದ್ ಅಹಮ್ಮದ್ ದಾಹೀಬ್ 61.25 ಮೀಟರ್ ದೂರಕ್ಕೆಸೆದು ಕಂಚು ಗೆದ್ದರು.


2014: ಇಂಚೋನ್: ಭಾರತದ ಬಾಕ್ಸರ್ ಪೂಜಾ ರಾಣಿ ಏಷ್ಯನ್ ಗೇಮ್ಸ್​ನ 69-75ಕೆಜಿ ಮಿಡಲ್​ವೇಟ್ ಮಹಿಳಾ ವಿಭಾಗದ ಸೆಮಿಫೈನಲ್​ನಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಪೂಜಾ 02 ಅಂತರದಿಂದ ಚೀನಾದ ಲಿ ಕ್ವಿಯಾನ್ ವಿರುದ್ಧ ಸೋಲನುಭವಿಸಿದರು. ಪುರುಷರ ವಿಭಾಗದಲ್ಲಿ ಸತೀಶ್ ಕುಮಾರ್ 91ಕೆಜಿಗಿಂತ ಮೇಲ್ಪಟ್ಟ ಸೂಪರ್ ಹೆವಿವೇಟ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಕ್ವಾರ್ಟರ್ ಫೈನಲ್​ನಲ್ಲಿ 2-1 ಅಂತರದಿಂದ ಜೋರ್ಡನ್ಸ್ ಹುಸೈನ್ ವಿರುದ್ಧ ಜಯ ಸಾಧಿಸಿದರು. ಇದಕ್ಕೂ ಮೊದಲ ಹಣಾಹಣಿಯಲ್ಲಿ ಶಿವ ಥಾಪಾ 56ಕೆಜಿ ಬ್ಯಾಂಟಮ್ೇಟ್ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಪರಾಭವಗೊಂಡರು. ಹಾಕಿಯಲ್ಲಿ ಫೈನಲ್​ಗೆ: ಆಕಾಶ್​ದೀಪ್ ಸಿಂಗ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಏಷ್ಯಾಡ್ ಫೈನಲ್ ಪ್ರವೇಶಿಸಿತು. ಕೊರಿಯಾ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಳೆದ 12 ವರ್ಷಗಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. 

2008: ಜೋಧಪುರ ಸಮೀಪದ ಮೆಹರಂಗಢ ಮೇಲಿನ ಕೋಟೆಯಲ್ಲಿನ ಚಾಮುಂಡಾ ದೇವಿ ದೇವಸ್ಥಾನದ ಬಳಿ ಬೆಳಗಿನ ಜಾವ 5.30ರ ಸುಮಾರಿಗೆ ಸಂಭವಿಸಿದ ಭಾರಿ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 177 ಜನರು ಮೃತರಾದರು. ದೇವಾಲಯದಿಂದ ಕೇವಲ 150 ಅಡಿ ದೂರದಲ್ಲೇ ಸಂಭವಿಸಿದ ಈ ಹೃದಯವಿದ್ರಾವಕ ದುರಂತದಲ್ಲಿ ಸುಮಾರು 300 ಜನರು ಗಾಯಗೊಂಡರು. ನವರಾತ್ರಿ ಪೂಜೆಯ ಮೊದಲ ದಿನದ ನಿಮಿತ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸಹಸ್ರಾರು ಭಕ್ತರು ಬೆಟ್ಟದ ಮೇಲೆ ಸಾಲುಗಟ್ಟಿ ನಿಂತ್ದಿದರು. ಶರದೃತುವಿನ ಸುಕೋಮಲ ವಾತಾವರಣದಲ್ಲಿ ಬೆಟ್ಟದ ಮೇಲಿನ ದೇವಾಲಯದಿಂದ ಪ್ರಾತಃಕಾಲದ ಮಂತ್ರಘೋಷಗಳು ಮೊಳಗುತ್ತಿದ್ದವು. ಆದರೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಮರಳುವಾಗ ಆತುರ ತೋರಿದ್ದೇ ದುರ್ಘಟನೆಗೆ ಕಾರಣವಾಯಿತು.
ಈ ಹಿಂದಿನ ಭಕ್ತರ ಸಾವಿನ ಸರಮಾಲೆಗಳ ದಾಖಲೆಗಳು ಈ ಕೆಳಗಿನಂತಿವೆ: (ಆಗಸ್ಟ್ 27, 2003: ಮಹಾರಾಷ್ಟ್ರದ ನಾಸಿಕ್ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಿಕ್ಕಿ 39 ಜನರ ಸಾವು, ಜನವರಿ 25, 2005: ಮಹಾರಾಷ್ಟ್ರದ ಮಾಂಧ್ರಾ ದೇವಾಲಯದಲ್ಲಿ ಸಾಂಪ್ರದಾಯಿಕ ವಾರ್ಷಿಕೋತ್ಸವದಲ್ಲಿ ಉಂಟಾದ ಕಾಲ್ತುಳಿತಕ್ಕೆ 340 ಜನರ ಮೃತ್ಯು, ಆಗಸ್ಟ್ 3, 2008: ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 162 ಜನರ ಸಾವು. 47 ಜನಕ್ಕೆ ಗಾಯ. ಮೇಲಿನಿಂದ ಬಂಡೆ ಉರುಳಿ ಬೀಳುತ್ತಿದೆ ಎಂಬ ವದಂತಿಯೇ ದುರ್ಘಟನೆಗೆ ಕಾರಣ., ಆಗಸ್ಟ್ 10, 2008: ರಾಜಸ್ಥಾನದ ಕೋಟಾ ಜಿಲ್ಲೆಯ ಮಹಾದೇವ ದೇಗುಲಕ್ಕೆ ಸಾಗುವಾಗ ಉಂಟಾದ ಇಕ್ಕಟ್ಟಿನಲ್ಲಿ ಇಬ್ಬರು ಭಕ್ತರ ಸಾವು.)

2008: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ ಅವರ ಅವಧಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದ ಮೂರು ನಿರ್ಣಯಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಿತು. ಈ ವಿಷಯವನ್ನು ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ ಮತ್ತು ಅರವಿಂದ ಲಿಂಬಾವಳಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಇತ್ತೀಚೆಗಷ್ಟೇ ಮೇವರಿಕ್ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಿದ್ದ ಈಜಿಪುರ ವಸತಿ ಯೋಜನೆಯನ್ನೂ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಯಿತು. ಅಲ್ಲದೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಂಜೂರಾತಿ ನೀಡಿದ್ದ `ಗರುಡಾ ಮಾಲ್' ಕೂಡ ತನಿಖೆ ವ್ಯಾಪ್ತಿಗೆ ಸೇರುವುದು ಎಂದು ಅವರು ಹೇಳಿದರು.

2008: ಶ್ರೀಲಂಕಾದ ಉತ್ತರ ತೀರಕ್ಕೆ ಸಮೀಪದಲ್ಲಿ ಲಂಕಾ ಸೇನೆ ಮತ್ತು ಎಲ್ ಟಿ ಟಿ ಇ ನೌಕಾ ವಿಭಾಗ `ಸೀ ಟೈಗರ್ಸ್' ಮಧ್ಯೆ ಸಮುದ್ರದಲ್ಲಿ ಸಂಭವಿಸಿದ ಕಾಳಗದಲ್ಲಿ ಬಂಡುಕೋರರ ಎರಡು ದೋಣಿಗಳು ಧ್ವಂಸವಾಗಿ, ಎಂಟುಮಂದಿ ಸಾವನ್ನಪ್ಪಿದರು. ಇದೇ ಸಂದರ್ಭದಲ್ಲಿ ಲಂಕಾ ಸೇನೆ ಉತ್ತರ ಭಾಗದ ವಿವಿಧ ಕಡೆ ನಡೆಸಿದ ದಾಳಿಯಲ್ಲಿ 45 ಮಂದಿ ಉಗ್ರರು ಮೃತರಾದರು. ಐವರು ಸೈನಿಕರೂ ಸಾವನ್ನಪ್ಪಿದರು.

2008: ಮಧ್ಯಪ್ರಾಚ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಥಾಚಿತ್ರ ವಿಭಾಗಕ್ಕೆ ಏಕೈಕ ಭಾರತೀಯ ಚಲನಚಿತ್ರವಾಗಿ ಗಿರೀಶ್ ಕಾಸರವಳ್ಳಿ ಅವರ `ಗುಲಾಬಿ ಟಾಕೀಸ್' ಪ್ರವೇಶ ಪಡೆಯಿತು. 2 ಲಕ್ಷ ಡಾಲರ್ ಮೌಲ್ಯದ `ಬ್ಲಾಕ್ ಪರ್ಲ್' ಪ್ರಶಸ್ತಿಗಾಗಿ ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ, ಯೂರೋಪ್ ಹಾಗೂ ಅಮೆರಿಕದ ಇತರ 15 ಚಲನ ಚಿತ್ರಗಳೊಂದಿಗೆ ಈ ಚಿತ್ರ ಸ್ಪರ್ಧಿಸುವುದು.

2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಜನತಾ ದಳ (ಎಸ್) ಅನಿರೀಕ್ಷಿತವಾಗಿ ಭರ್ಜರಿ ಗೆಲುವು ಸಾಧಿಸಿತು. ಆರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಯಿತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಬಿಜೆಪಿ ಕಳೆದ ಸಲಕ್ಕಿಂತ ದುಪ್ಪಟ್ಟು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಬಹುಮತ ಪಡೆದಿರುವ ಲೆಕ್ಕದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಚುನಾವಣೆ ನಡೆದ ಆರು ಮಹಾನಗರ ಪಾಲಿಕೆಗಳ ಪೈಕಿ 3ರಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯಿತು. ಎರಡರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಯಿತು. 44 ನಗರಸಭೆಗಳ ಪೈಕಿ ತಲಾ 11ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದವು.

 2007: ಬೆಂಗಳೂರು ನಗರದ ಇನ್ ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ 'ವಾರ್ತಾ ಸೌಧ' ಕಟ್ಟಡವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಉದ್ಘಾಟಿಸಿದರು.

2007: ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದ ಇಂಗ್ಲೆಂಡ್ ಈ ಸಂಬಂಧ ಹೊಸ ಕಾನೂನನ್ನು ಜಾರಿ ತರುವುದಾಗಿ ಪ್ರಕಟಿಸಿತು. ಈ ಕಾನೂನಿನ ಅನ್ವಯ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ರಕ್ಷಣೆ ದೊರೆಯಲಿದೆ. ಸಿಖ್ ಹಾಗೂ ಯಹೂದಿಗಳಿಗೆ ಈಗಾಗಲೇ ಈ ರಕ್ಷಣೆ ನೀಡಲಾಗಿದೆ.

2007: ಭಾರತೀಯರಿಗೆ ಚಿಕ್ಕ ವಯಸ್ಸಿನಲ್ಲೇ ಕಾಡುವ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅದರಿಂದ ಉಂಟಾಗುವ ಸಾವಿನ ಪ್ರಮಾಣ ಕುರಿತು ಆತಂಕ ವ್ಯಕ್ತಪಡಿಸಿದ ಹೃದಯ ತಜ್ಞರು, ಈ ಕುರಿತು ಜಾಗೃತಿ ಮೂಡಿಸಲು ಜನರಿಗೆ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಧ್ಯಾನದ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ ನೀಡಿದರು. ಜಗತ್ತಿನಲ್ಲಿ ಹೃದಯ ರೋಗದಿಂದ ಸಾವನ್ನಪ್ಪುವ 7ಮಂದಿಯ ಪೈಕಿ ಒಬ್ಬ ಭಾರತೀಯನಾಗಿರುತ್ತಾನೆ. ಬೊಜ್ಜು, ಧೂಮಪಾನ, ಮಧುಮೇಹ, ಅತಿ ರಕ್ತದೊತ್ತಡದಿಂದಾಗಿ ಪ್ರತಿ ನಿಮಿಷಕ್ಕೆ ಕನಿಷ್ಠ ನಾಲ್ಕು ಭಾರತೀಯ ಹೃದಯ ರೋಗಿಗಳು ಸಾವನ್ನಪ್ಪುತ್ತಾರೆ. ಭಾರತದಲ್ಲಿ 40 ಲಕ್ಷ ಜನರು ಹೃದಯರೋಗಗಳಿಂದ ಸಾವನ್ನಪ್ಪುತ್ತಾರೆ. ಅವರಲ್ಲಿ 25 ಲಕ್ಷ ಜನರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹೃದಯಾಘಾತಕ್ಕೀಡಾಗಿ ಸಾಯುತ್ತಾರೆ. ಭಾರತದಲ್ಲಿ ಹೃದಯಘಾತಕ್ಕೀಡಾಗುವ ಪುರುಷರ ಸರಾಸರಿ ವಯಸ್ಸು 55 ಇದ್ದರೆ, ಮಹಿಳೆಯರಿಗೆ 56 ವರ್ಷ ಎಂಬುದು ಡಾ. ಅಗರ್ ವಾಲ್ ಅಂಕಿ ಅಂಶ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತಿರಲು ಮಾನವ ದೇಹದಲ್ಲಿನ ಗ್ಲೈಕೊಸೊಲೇಟ್ ಹಿಮೊಗ್ಲೊಬಿನ್ ಪ್ರಮಾಣ ಶೇ. 6.5ಕ್ಕಿಂತ ಕಡಿಮೆ ಇರಬೇಕು. ಎಲ್ ಡಿ ಎಲ್ ಅಥವಾ ಕೊಲೆಸ್ಟ್ರಾಲ್ ಪ್ರಮಾಣ 100ಕ್ಕಿಂತ ಜಾಸ್ತಿ ಇರಬಾರದು. ರಕ್ತದೊತ್ತಡದ ಪ್ರಮಾಣ 120/80ಗಿಂತ ಕಡಿಮೆ ಇರಬೇಕು. ಪುರುಷರ ಹೊಟ್ಟೆಯ ಸುತ್ತಳತೆ 35 ಅಂಗುಲಕ್ಕಿಂತ ಹಾಗೂ ಮಹಿಳೆಯರ ಹೊಟ್ಟೆಯ ಸುತ್ತಳತೆ  32 ಅಂಗುಲಕ್ಕಿಂತ ಹೆಚ್ಚಿರಬಾರದು ಎಂಬುದು ತಜ್ಞರ ಸಲಹೆ. ಮೇಲಿನ ಅಳತೆಗೋಲನ್ನು ಹೊಂದಲು ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಅವಶ್ಯಕ. ಆಹಾರದಲ್ಲಿ ಸಂಸ್ಕರಿತ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಕಡಿಮೆ ಇರಬೇಕು. ಕಡಿಮೆ ಆಹಾರ, ನಾರಿನಾಂಶವುಳ್ಳ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಜೊತೆಗೆ ದೇಹಕ್ಕೆ ಪ್ರತಿನಿತ್ಯ ನಿಯಮಿತ ಪ್ರಮಾಣದ ವ್ಯಾಯಾಮ ಮತ್ತು ಒತ್ತಡ ಕಡಿಮೆಗೊಳಿಸಲು ಯೋಗ-ಧ್ಯಾನ ಅಗತ್ಯ ಎಂಬುದು ತಜ್ಞರ ಕಿವಿಮಾತು.

2006: ಝೆಕ್ ಗಣರಾಜ್ಯದ ಸುಂದರಿ, ಕ್ರೀಡಾಪಟು ಟಟನಾ ಕುಚರೋವಾ ಅವರು ಈ ರಾತ್ರಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2006ರ ಸಾಲಿನ `ವಿಶ್ವಸುಂದರಿ' ಪ್ರಶಸ್ತಿಗೆ ಪಾತ್ರರಾಗಿ, ಝೆಕ್ ಗಣರಾಜ್ಯಕ್ಕೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಕಿರೀಟವನ್ನು ತಂದು ಕೊಟ್ಟರು. 200 ರಾಷ್ಟ್ರಗಳಿಂದ ಆಗಮಿಸಿದ್ದ ಭಾರಿ ಸಂಖ್ಯೆಯ ವೀಕ್ಷಕರ ಎದುರಲ್ಲಿ ಅಂತಿಮ ಸ್ಪರ್ಧೆಯಲ್ಲಿ ಟಟನಾ ಕುಚರೋವಾ `ವಿಶ್ವಸುಂದರಿ' ಕಿರೀಟವನ್ನು ಧರಿಸಿದರು. 18ರ ಹರೆಯದ ಕುಚರೋವಾ ಅವರು ರೊಮಾನಿಯಾದ ಐವೊನಾ ವ್ಯಾಲೆಂಟಿನಾ, ಆಸ್ಟ್ರೇಲಿಯಾದ ಸಬ್ರೀನಾ ಹೌಸ್ಸಮಿ, ಆಂಗೋಲಾದ ಸ್ಟಿವಿಂದ್ರಾ ಒಲಿವೀರಾ, ಬ್ರೆಜಿಲ್ಲಿನ ಜಾನೆ ಸೌಸಾ ಬೋರ್ಗೆಸ್ ಒಲಿವೀರಾ ಮತ್ತು ಜಮೈಕಾದ ಸಾರಾ ಲಾರೆನ್ಸ್ ಅವರನ್ನು ಅಂತಿಮ ಸುತ್ತಿನಲ್ಲಿ ಹಿಂದಿಕ್ಕಿದರು. ಭಾರತದ ಸುಂದರಿ ಮುಂಬೈಯ ನತಾಶಾ ಸುರಿ ಸೇರಿದಂತೆ ಒಟ್ಟು 102 ಮಂದಿ ಸ್ಪರ್ಧಿಗಳು ಈ ಸಲ ಕಣದಲ್ಲಿ ಇದ್ದರು. ನತಾಶಾ ಸುರಿ ಅವರು 6ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

2006: ಮುಂಬೈ ಮಹಾನಗರದ ಉಪನಗರ ರೈಲುಗಳಲ್ಲಿ ಜುಲೈ 11ರಂದು ನಡೆದ ಬಾಂಬ್ ಸ್ಫೋಟಗಳ ಹಿಂದಿನ ಸಂಚನ್ನು ಭೇದಿಸಿರುವುದಾಗಿ ಪೊಲೀಸರು ಪ್ರಕಟಿಸಿದರು. ಪಾಕಿಸ್ಥಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ಕೈವಾಡ ಇರುವುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸರ ಪ್ರಕಾರ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ ಎಸ್ ಐ, ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರ ನೆರವಿನಿಂದ ಒಟ್ಟು ಏಳು ರೈಲುಗಳಲ್ಲಿ ಈ ಬಾಂಬ್ ಸ್ಫೋಟಗಳನ್ನು ನಡೆಸಲಾಯಿತು.

2006: ಇರಾನಿನ ಮೊತ್ತ ಮೊದಲ ತದ್ರೂಪಿ ಜೀವಂತ ಕುರಿಮರಿ ಜನಿಸಿದೆ ಎಂದು ಇರಾನಿ ವಿಜ್ಞಾನಿಗಳು ಪ್ರಕಟಿಸಿದರು. ಇಸ್ಫಹಾನ್ ನಗರದ ರೊವುಯನ ಸಂಶೋಧನಾ ಕೇಂದ್ರದಲ್ಲಿ ಈ ತದ್ರೂಪಿ ಜೀವಂತ ಕುರಿಮರಿಯ ಜನನವಾಗಿದೆ ಎಂದು ಅವರು ಹೇಳಿದರು. ಕಳೆದ ಜುಲೈಯಲ್ಲಿ ಇರಾನಿನ ಪ್ರಥಮ ತದ್ರೂಪಿ ಕುರಿಮರಿ ಜನಿಸಿರುವುದಾಗಿ ವಿಜ್ಞಾನಿಗಳು  ಪ್ರಕಟಿಸಿದ್ದರು. ಆದರೆ ಆ ಮರಿ ಹುಟ್ಟಿದ ಕೆಲ ಕ್ಷಣಗಳಲ್ಲೇ ಸತ್ತಿತ್ತು. ಜಗತ್ತಿನ ಮೊತ್ತ ಮೊದಲ ತದ್ರೂಪಿ ಕುರಿಮರಿ `ಡಾಲಿ' ಸೃಷ್ಟಿಗೆ ಬಳಸಿದ ತಂತ್ರಜ್ಞಾನವನ್ನೇ ಬಳಸಿ ಇರಾನಿನಲ್ಲಿ ತದ್ರೂಪಿ ಕುರಿಮರಿ ಸೃಷ್ಟಿಸಲಾಗಿದೆ.

2005: `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ  12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಪ್ರಕಟಿಸಿತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರುಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತು. ಪ್ರವಾದಿ ಮಹಮ್ಮದರ ಬಗೆಗಿನ ಈ ವ್ಯಂಗ್ಯಚಿತ್ರಗಳಿಗೆ ವಿಶ್ವದಾದ್ಯಂತ ಮುಸ್ಲಿಮರ ವಿರೋಧ- ಪ್ರತಿಭಟನೆ ವ್ಯಕ್ತಗೊಂಡು ಕೊನೆಗೆ ಪತ್ರಿಕೆಯು ಕ್ಷಮೆ ಯಾಚನೆ ಮಾಡುವುದರೊಂದಿಗೆ ವಿವಾದವು 2006 ಫೆಬ್ರುವರಿಯಲ್ಲಿ ಅಂತ್ಯಗೊಂಡಿತು. ಈ ಅವಧಿಯಲ್ಲಿ ವಿವಿಧೆಡೆ ಸಂಭವಿಸಿದ ಹಿಂಸಾಚಾರಕ್ಕೆ 32 ಮಂದಿ ಬಲಿಯಾದರು. ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಸಚಿವ ರಾಬರ್ಟೊ ರಾಜೀನಾಮೆ ನೀಡಬೇಕಾಯಿತು.

2000: ವಿಶ್ವ ಸುಂದರಿಯಾಗಿ ಭಾರತದ ಪ್ರಿಯಾಂಕಾ ಚೋಪ್ರಾ ಆಯ್ಕೆ.

1996: ತಮಿಳುನಾಡು ಸರ್ಕಾರವು `ಮದ್ರಾಸ್' ಹೆಸರನ್ನು ಬದಲಾಯಿಸಿ `ಚೆನ್ನೈ` ಎಂಬುದಾಗಿ ಮರು ನಾಮಕರಣ ಮಾಡುವ ನಿರ್ಧಾರವನ್ನು ಕೈಗೊಂಡಿತು.

1980: ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜನನ.

1961: ಮದ್ರಾಸಿನ (ಈಗಿನ ಚೆನ್ನೈ) ನೆಹರೂ ಸ್ಟೇಡಿಯಮ್ಮಿನಲ್ಲಿ ದುಲೀಪ್ ಟ್ರೋಫಿಗಾಗಿ ಮೊತ್ತ ಮೊದಲ ಅಂತರ್ ವಲಯ ಕ್ರಿಕೆಟ್ ಕ್ರೀಡಾಕೂಟದ ಮೊದಲ ಪಂದ್ಯ ಉತ್ತರ ವಲಯ ಮತ್ತು ದಕ್ಷಿಣ ವಲಯದ ಮಧ್ಯೆ ಆರಂಭವಾಯಿತು. ಉತ್ತರ ವಲಯದ ಸುರೇಂದ್ರನಾಥ್ ಮೊದಲ ಚೆಂಡನ್ನು ದಕ್ಷಿಣ ವಲಯದ ಎಂ.ಎಲ್. ಜಯಸಿಂಹರತ್ತ ಎಸೆದರು. ಕ್ರಿಕೆಟಿನ ಮಹಾನ್ ಆಟಗಾರ ರಣಜಿತ್ ಸಿನ್ಹಜಿ ಅವರ ಅಳಿಯ ಕೇಂಬ್ರಿಜ್ ಮತ್ತು ಸಸೆಕ್ಸಿನಲ್ಲಿ ಆಡಿದ್ದ ಕೆ.ಎಸ್. ದುಲೀಪ್ ಸಿನ್ಹಜಿ ಗೌರವಾರ್ಥ ದುಲೀಪ್ ಟ್ರೋಫಿಯನ್ನು ಆರಂಭಿಸಲಾಯಿತು.

1955: ಕ್ಯಾಲಿಫೋರ್ನಿಯಾದ ಕೊಲೇಮಿನಲ್ಲಿ ಎರಡು ಕಾರುಗಳ ಮಧ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಿತ್ರನಟ ಜೇಮ್ಸ್ ಡೀನ್ (24) ಸಾವನ್ನಪ್ಪಿದರು.

1954: ಅಮೆರಿಕನ್ ನೌಕಾಪಡೆಯ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ `ನಾಟಿಲಸ್' ಕಾರ್ಯಾರಂಭ ಮಾಡಿತು.

1947: ಸಾಹಿತಿ ಸು. ರಂಗಸ್ವಾಮಿ ಜನನ.

1943: ಲೇಖಕ ರಮಾನಂದ ಚಟ್ಟೋಪಾಧ್ಯಾಯ ನಿಧನ.

1933: ಸಾಹಿತಿ ಡಾ. ನಿರುಪಮಾ ಜನನ.

1922: ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಜನ್ಮದಿನ.

1921: ಸಾಹಿತಿ ವರದರಾಜ ಅಯ್ಯಂಗಾರ್ ಜನನ.

1914: ಸಾಹಿತಿ ಟಿ.ಜಿ. ಸಿದ್ದಪ್ಪಾಜಿ ಜನನ.

1908: ರಾಮ್ ಧಾರಿ ಸಿಂಗ್ (1908-74) ಜನ್ಮದಿನ. ಖ್ಯಾತ ಹಿಂದಿ ಕವಿಯಾಗಿದ್ದ ಇವರು `ದಿನಕರ್' ಎಂದೇ ಪರಿಚಿತರಾಗಿದ್ದರು.

1900: ಎಂ.ಸಿ. ಛಾಗ್ಲಾ (1900-81) ಜನ್ಮದಿನ. ಇವರು ಖ್ಯಾತ ನ್ಯಾಯವಾದಿ, ಶಿಕ್ಷಣ ತಜ್ಞ, ರಾಜತಾಂತ್ರಿಕ ಹಾಗೂ ಕೇಂದ್ರ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1894: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ನೇತಾರ, ಸಾಹಿತಿ, ಪತ್ರಕರ್ತ ರಂಗರಾವ್ ರಾಮಚಂದ್ರ ದಿವಾಕರ (ಆರ್. ಆರ್. ದಿವಾಕರ) (30-9-1894ರಿಂದ 15-1-1990) ಅವರು ರಾಮಚಂದ್ರ- ಸೀತಾ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಗಳ ಸ್ಥಾಪಕ ಸಂಪಾದಕರಾಗಿದ್ದ ಇವರು ಆಗಮ ಮತ್ತು ತಾಂತ್ರಿಕ ಪರಂಪರೆಯನ್ನು ಅಭ್ಯಸಿಸಿ ಭಗವದ್ಗೀತೆ, ಉಪನಿಷತ್ತುಗಳಿಗೆ ಸಂಬಂಧಿಸಿದಂತೆಯೂ ಗ್ರಂಥಗಳನ್ನು ರಚಿಸಿದ್ದಾರೆ.

1881: ಖ್ಯಾತ ಸಂಗೀತ ವಿದ್ವಾಂಸ, ಸಮಾಜ ಸೇವಕ ರಾಜಾ ಅಣ್ಣಾಮಲೈ ಚೆಟ್ಟಿಯಾರ್ ಜನನ.

1846: ಈಥರನ್ನು ಮೊತ್ತ ಮೊದಲ ಬಾರಿಗೆ ಅರಿವಳಿಕೆಯಾಗಿ ಹಲ್ಲು ತೆಗೆಯಲು ಬಳಸಲಾಯಿತು.

1452: ಜೋಹಾನ್ಸ್ ಗುಟನ್ ಬರ್ಗಿನಲ್ಲಿ ಮೊದಲ ಪುಸ್ತಕವಾಗಿ ಬೈಬಲ್ ಪ್ರಕಟವಾಯಿತು.

1773: ಭಾರತೀಯ ಸೇನೆಯ ಅತ್ಯಂತ ಹಳೆಯ ತುಕಡಿಯನ್ನು ವಾರನ್ ಹೇಸ್ಟಿಂಗ್ಸ್ ವಾರಣಾಸಿಯಲ್ಲಿ `ಗವರ್ನರ್ಸ್ ಟ್ರೂಪ್ಸ್ ಆಫ್ ಮೊಘಲ್ಸ್' ಹೆಸರಿನಲ್ಲಿ ಆರಂಭಿಸಿದ. ಈ ತುಕಡಿಗಳು ಶಾಂತಿಕಾಲದಲ್ಲಿ ಗವರ್ನರ್ ಜನರಲ್ ನ ಅಂಗರಕ್ಷಕ ಪಡೆಯಾಗಿಯೂ, ಸಮರ ಕಾಲದಲ್ಲಿ ಕಮಾಂಡರ್- ಇನ್- ಚೀಫ್ ಜೊತೆಗೂ ಸೇವೆ ಸಲ್ಲಿಸಿದವು. ಮುಂದೆ ಇದು `ಪ್ರೆಸಿಡೆಂಟ್ಸ್ ಬಾಡಿ ಗಾರ್ಡ್' ಆಗಿ ಖ್ಯಾತಿ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement