My Blog List

Tuesday, September 29, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

ಇಂದಿನ ಇತಿಹಾಸ

ಸೆಪ್ಟೆಂಬರ್ 29
ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು.

2014: ಚೆನ್ನೈ: ತಮಿಳುನಾಡಿನ ಹಣಕಾಸು ಸಚಿವ ಒ. ಪನ್ನೀರ್​ಸೆಲ್ವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರೋಸಯ್ಯ ಅವರು ಸೆಲ್ವಂ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದಿನ ದಿನ ಸಂಜೆ ಏಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ 63ರ ಹರೆಯದ ಪನ್ನೀರ್​ಸೆಲ್ವಂ ಅವರು, ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಶಿಕ್ಷಿತರಾಗಿ ಸೆರೆಮನೆ ಸೇರಿದ ಜೆ. ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು. ಥೇಣಿ ಜಿಲ್ಲೆಯ ರೈತರಾದ ಪನ್ನೀರ್​ಸೆಲ್ವಂ ಅಥವಾ ಪಕ್ಷದಲ್ಲಿ ಒಪಿಎಸ್ ಎಂದೇ ಪರಿಚಿತರಾದ ಅವರು ಜಯಲಲಿತಾ ಅವರ ಕಟ್ಟಾ ಅನುಯಾಯಿ. 1996ರಲ್ಲಿ ಸ್ಥಳೀಯ ಸಂಸ್ಥೆಯೊಂದರ ಮುಖ್ಯಸ್ಥನಾಗಿ ರಾಜಕೀಯ ಪ್ರವೇಶಿಸಿದರು. 2001ರಲ್ಲಿ ಪೆರಿಕುಲಂ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಅವರು ಲೋಕೋಪಯೋಗಿ ಸಚಿವರಾಗಿದ್ದರು. 2001ರಲ್ಲಿ ಈಗಿನಂತಹುದೇ ಸನ್ನಿವೇಶದಲ್ಲಿ ಪನ್ನೀರ್​ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. 2006ರಲ್ಲಿ ಏಐಎಡಿಎಂಕೆ ಪರಾಭವಗೊಂಡಿದ್ದಾಗ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಭಾನುವಾರ ಪನ್ನೀರ್​ಸೆಲ್ವಂ ಮತ್ತು ಏಐಡಿಎಂಕೆಯ ಇತರ ಕೆಲವು ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಜಯಲಲಿತಾ ಅವರನ್ನು ಭೇಟಿ ಮಾಡಿದ್ದರು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ಭಾರತದ ಸನಮ್​ಸಿಂಗ್ ಮತ್ತು ಸಾಕೇತ್​ವೆುೖನೇನಿ ಜೋಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಯೊಂಗ್ಕ್ಯೂ ಲಿಮ್​ವುತ್ತು ಹೈಯಿಯೋನ್ ಚುಂಗ್ ಜೋಡಿಯಿಂದ 7-5, 7-6(2-7) ಅಂಕಗಳ ಅಂತರದಲ್ಲಿ ಪರಾಭವಗೊಳ್ಳುವುದರೊಂದಿಗೆ ಭಾರತದ ಜೋಡಿ ಬೆಳ್ಳಿ ಪದಕ್ಕೆ ತೃಪ್ತಿಪಡಬೇಕಾಯಿತು. ಏಷ್ಯಾಡ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಎರಡು ನಿರ್ಣಾಯಕ ಪಾಯಿಂಟ್ ಗಳಿಸಿಕೊಂಡು ಜಪಾನಿನ ತಕತ್ಸುಕಾ ಓಟಕ್ಕೆ ಬ್ರೇಕ್ ಹಾಕಿ, ಫೈನಲ್ ತಲುಪಿದರು. ಪುರುಷರ ಫ್ರೀಸ್ಟೈಲ್ 61 ಕೆಜಿ ಸ್ಪರ್ಧೆಯಲ್ಲಿ 3-1 ಅಂಕಗಳ ಅಂತರದಲ್ಲಿ ಅವರು ಜಯಗಳಿಸಿ, ಚಿನ್ನದ ಪದಕದ ಮೇಲೆ ಕಣ್ಣಿಟ್ಟರು.

2014: ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಮಾಡಿದ ಭಾಷಣವನ್ನು ಮೀರಿಸಿದೆ. ಮೋದಿ ಭಾಷಣದಲ್ಲಿ ಎಲ್ಲವೂ ಇತ್ತು, ಆದರೆ ಷರೀಫ್ ಭಾಷಣದಲ್ಲಿ ಏನೂ ಇರಲಿಲ್ಲ ಎಂದು ಪಾಕಿಸ್ತಾನಿ ದಿನ ಪತ್ರಿಕೆ 'ಡೈಲಿ ಟೈಮ್ಸ್ ಶ್ಲಾಘಿಸಿತು. 'ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದೊಂದಿಗೆ ಮೋದಿಯವರು ಪಶ್ಚಿಮ ದೇಶಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಯನ್ನು ಮುನ್ನಡೆಸಿದ್ದಾರೆ. ಅವರ ಭಾಷಣದಲ್ಲಿ ಎಲ್ಲವೂ ಇತ್ತು, ನವಾಜ್ ಷರೀಪ್ ಭಾಷಣದಲ್ಲಿ ಏನೂ ಇರಲಿಲ್ಲ' ಎಂದು ಡೈಲಿ ಟೈಮ್ಸ್ ತನ್ನ ಸಂಪಾಕೀಯದಲ್ಲಿ ಹೇಳಿತು. ಮೋದಿಯವರು ಭಾರತದ ಪ್ರಾಚೀನ ವೈದಿಕ ಸಂಸ್ಕೃತಿಯನ್ನು ಉಲ್ಲೇಖಿಸುತ್ತಾ ತಮ್ಮ ಭಾಷಣ ಆರಂಭಿಸಿ ಅದರ ಸಾರವನ್ನು ಭಾಷಣದುದ್ದಕ್ಕೂ ಹರಡಿದರು. ನವಾಜ್ ಷರೀಫ್ ಅವರು ಒಂದು ದಿನದ ಹಿಂದಷ್ಟೇ ಮಾಡಿದ್ದ ಭಾಷಣಕ್ಕೆ ಪರಿಣಾಮಕಾರಿಯಾಗಿ ಉತ್ತರ ನೀಡಲು ಮೋದಿ ಅವರು ಈ ಅವಕಾಶವನ್ನು ಬಳಸಿಕೊಂಡರು ಎಂದು ಪತ್ರಿಕೆ ಬರೆಯಿತು. 'ಬಹುಶಃ ಅವರು (ಮೋದಿ) ಅವರ ನಡೆ ಸರಿ. ವಿಶ್ವಸಂಸ್ಥೆ ಗಂಭೀರ ಚರ್ಚೆಯ ವೇದಿಕೆಯಾಗಿಯಷ್ಟೇ ಉಳಿದಿಲ್ಲ. ತಮ್ಮ ರಾಷ್ಟ್ರ ಹಾಗೂ ತಮ್ಮ ವರ್ಚಸ್ಸು ವೃದ್ಧಿಗಾಗಿ ರಾಷ್ಟ್ರಗಳ ಪ್ರಮುಖರಿಗೆ ಅದೊಂದು ಮಾರ್ಗವಾಗಿದೆ' ಎಂದು ಸಂಪಾದಕೀಯ ಹೇಳಿತು. ಭಾರತದ ಆಧ್ಯಾತ್ಮಿಕ ಪರಂಪರೆಗಳನ್ನು ಉಲ್ಲೇಖಿಸುವ ಮೂಲಕ ಮೋದಿ ಅವರು ಅಮೆರಿಕದ ಜನರಿಗೆ ತಾವು ಹೇಳುವುದನ್ನು ಸುಲಭವಾಗಿ ಅರಗಿಸಿದರು. ಷರೀಫ್ ಅವರ ಸಂಕುಚಿತ ದೃಷ್ಟಿಕೋನದ ಭಾಷಣ ಪಾಶ್ಚಾತ್ಯರು ಪಾಕಿಸ್ತಾನದ್ದು ತಪ್ಪುದಾರಿ ಎಂದು ಭಾವಿಸುವಂತೆ ಮಾಡಿತು ಎಂದು ಪತ್ರಿಕೆ ಹೇಳಿತು. 'ಪಾಕಿಸ್ತಾನಕ್ಕೆ ಭಾರತದ್ದೇ ಗೀಳು, ಅದಕ್ಕಿರುವುದು ಪ್ರದೇಶ ವಿಸ್ತರಣೆಯ ಇಚ್ಛೆ ಎಂದು ಪಾಶ್ಚಾತ್ಯರು ಭಾವಿಸುವಂತೆ ಮಾಡಿತು. ಷರೀಫ್ ಭಾಷಣದಲ್ಲಿ ಪ್ರಭಾವ ಬೀರುವಂತಹ ಯಾವುದೇ ಶಕ್ತಿಯೂ ಇರಲಿಲ್ಲ' ಎಂದು ಅದು ಬಣ್ಣಿಸಿತು. ಭಾರತದ ಪ್ರಧಾನಿಯ ಭಾಷಣ ಎಲ್ಲಿಯೂ ಪಾಕಿಸ್ತಾನದ ಬಗ್ಗೆ ನೇರವಾಗಿ ಹೇಳಲಿಲ್ಲ. ಆದರೆ ಅಂತರ್ಗತವಾಗಿತ್ತು ಎಂದೂ ಪತ್ರಿಕೆ ಹೇಳಿತು.

2014: ನ್ಯೂಯಾರ್ಕ್: ವಿಶ್ವಸಂಸ್ಥೆ ಮಹಾಧಿವೇಶನದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ರಕ್ಷಣಾ ಸಹಕಾರ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸೃಷ್ಟಿಸಿದ ಪರಿಸ್ಥಿತಿ ಸೇರಿದಂತೆ ವ್ಯಾಪಕ ವಿಷಯಗಳ ಬಗ್ಗೆ ರ್ಚಚಿಸಿದರು. 30 ನಿಮಿಷಗಳ ಮಾತುಕತೆ ಕಾಲದಲ್ಲಿ ಆದಷ್ಟೂ ಶೀಘ್ರದಲ್ಲೇ ಇಸ್ರೇಲ್​ಗೆ ಭೇಟಿ ನೀಡುವಂತೆ ಮೋದಿ ಅವರಿಗೆ ನೆತನ್ಯಾಹು ಆಹ್ವಾನ ನೀಡಿದರು. ಗುಜರಾತಿನ ಮುಖ್ಯಮಂತ್ರಿಯಾಗಿ ಇಸ್ರೆಲ್​ಗೆ ಮೋದಿ ಅವರು ಭೇಟಿ ನೀಡಿದ್ದುದನ್ನು ನೆನಪಿಸಿದ ನೆತನ್ಯಾಹು, ಈಗ ಪ್ರಧಾನಿಯಾಗಿ ಅವರು ಇಸ್ರೇಲ್​ಗೆ ಭೇಟಿ ನೀಡಬಹುದು ಎಂದು ಹಾರೈಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದರು. ಪ್ರಧಾನಿಯವರು ಆಹ್ವಾನವನ್ನು ಗಮನದಲ್ಲಿ ಇಟ್ಟುಕೊಂಡಿದ್ದು, ರಾಜತಾಂತ್ರಿಕ ವಿಧಾನದ ಮೂಲಕ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲಾಗುವುದು ಎಂದು ಅವರು ನುಡಿದರು. ಆರ್ಥಿಕ ಸಹಕಾರ ವೃದ್ಧಿ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಜಲ ನಿರ್ವಹಣೆ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ತನ್ನ ತಜ್ಞರ ನೆರವು ಒದಗಿಸುವ ಕೊಡುಗೆಯನ್ನು ಇಸ್ರೇಲ್ ಮುಂದಿಟ್ಟಿತು ಎಂದು ವಕ್ತಾರರು ವಿವರಿಸಿದರು. ಭಾರತ ಮತ್ತು ಇಸ್ರೇಲ್ ಮಧ್ಯೆ ಉತ್ತಮ ಬಾಂಧವ್ಯ ಇದ್ದು, ಪ್ರಸ್ತುತ 60 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವಹಿವಾಟು ಉಭಯ ರಾಷ್ಟ್ರಗಳ ನಡುವೆ ಇದೆ.

2014: ಕಾಬೂಲ್ (ಆಫ್ಘಾನಿಸ್ಥಾನ): ಆಫ್ಘಾನಿಸ್ಥಾನದ ನೂತನ ಅಧ್ಯಕ್ಷರಾಗಿ ಅಶ್ರಫ್ ಘನಿ ಅಹ್ಮದ್​ಜೈ ಅವರು ಹಮೀದ್ ಕರ್ಜೈ ಅವರ ಸ್ಥಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ಜೈ ಅವರು 2001ರಲ್ಲಿ ಅಮೆರಿಕ ನೇತೃತ್ವದ ದಾಳಿಯಲ್ಲಿ ತಾಲಿಬಾನ್ ಆಡಳಿತಕ್ಕೆ ತೆರೆ ಎಳೆದ ಬಳಿಕ ಅಧಿಕಾರಕ್ಕೆ ಬಂದಿದ್ದರು. 2001ರ ಬಳಿಕ ಇದೇ ಮೊದಲ ಬಾರಿಗೆ ಪ್ರಜಾತಾಂತ್ರಿಕವಾಗಿ ಅಧಿಕಾರ ವರ್ಗಾವಣೆಗೊಂಡಿದ್ದು, ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳ ಬಳಿಕ ಚುನಾವಣೆಯಲ್ಲಿ ತಮಗೆ ಪ್ರಬಲ ಎದುರಾಳಿಯಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ಘನಿ ಅಹ್ಮದ್​ಜೈ ಅವರು ನೇಮಕ ಮಾಡಿದರು. ತನ್ಮೂಲಕ ಚುನಾವಣಾ ಪ್ರಕ್ಷುಬ್ಧತೆ ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವುದಾಗಿ ಮಾಡಿದ್ದ ರಾಜಕೀಯ ಪ್ರತಿಜ್ಞೆಯನ್ನು ಅವರು ಈಡೇರಿಸಿದರು. ಸ್ಪಷ್ಟ ಬಹುಮತ ಬಾರದೇ ಇದ್ದ ಹಿನ್ನೆಲೆಯಲ್ಲಿ ರಾಷ್ಟ್ರದ ಉತ್ತರ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಹಿಂಸಾಚಾರದ ಸಂಭಾವ್ಯತೆ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವ ಭರವಸೆಯನ್ನು ಘನಿ ಅಹ್ಮದ್​ಜೈ ನೀಡಿದ್ದರು. ಮೊದಲಿಗೆ ಮಾತನಾಡಿದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಅವರು ಕರ್ಜೈ ಅವರಿಗೆ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಅರ್ಪಿಸಿದರು. ಚುನಾವಣಾ ಪ್ರಕ್ರಿಯೆಯನ್ನೇ ಹಾಳುಗೆಡವಲು ದಾಳಿಯ ಬೆದರಿಕೆ ಹಾಕಿದ್ದ ತಾಲಿಬಾನ್ ಉಗ್ರರ ಬೆದರಿಕೆ ಹೊರತಾಗಿಯೂ ಹೆದರದೇ ಬಂದು ಮತದಾನದಲ್ಲಿ ಪಾಲ್ಗೊಂಡ ಲಕ್ಷಾಂತರ ಸಂಖ್ಯೆಯ ಜನರಿಗೂ ಅವರು ವಂದನೆಗಳನ್ನು ಸಲ್ಲಿಸಿದರು. 'ರಾಷ್ಟ್ರದ ಐಕ್ಯ ಸರ್ಕಾರದಲ್ಲಿ ನಾವು ಒಂದಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ. ರಾಷ್ಟ್ರೀಯ ಏಕತೆಗಾಗಿ ಏಕತಂಡವಾಗಿ ಕೆಲಸ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಈಡೇರಿಸುತ್ತೇವೆ' ಎಂದು ಅವರು ನುಡಿದರು. ಶಾಂತಿಯುತವಾಗಿ ಪ್ರಜಾತಾಂತ್ರಿಕ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸಿದ್ದಕ್ಕಾಗಿ ಘನಿ ಅಹ್ಮದ್​ಜೈ ಅವರು ಕರ್ಜೈ ಅವರನ್ನು ಅಭಿನಂದಿಸಿದರು. ರಾಷ್ಟ್ರೀಯ ಐಕ್ಯ ಸರ್ಕಾರ ರಚನೆಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರು ಅಬ್ದುಲ್ಲಾ ಅವರಿಗೂ ಧನ್ಯವಾದ ಸಲ್ಲಿಸಿದರು.

2014: ಬೆಂಗಳೂರು: ಸೆರೆವಾಸಕ್ಕೆ ಗುರಿಯಾದ ಏಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ಪರವಾಗಿ ವಕೀಲರು ಕರ್ನಾಟಕ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದರು. ಜೊತೆಗೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಅಪರಾಧಿ ಎಂಬುದಾಗಿ ಘೋಷಿಸಿರುವುದಕ್ಕೆ ಮತ್ತು ಶಿಕ್ಷೆಗೆ ತಡೆಯಾಜ್ಞೆ ಕೋರಿದರು. ಜಾಮೀನು ಕೋರಿ ಈದಿನ ಅರ್ಜಿ ಸಲ್ಲಿಸಲಾಗಿದ್ದರೂ, ಅದು ರಜಾಕಾಲೀನ ಪೀಠದ ಮುಂದೆ ಒಂದು ದಿನದ ಬಳಿಕ ಬರುವ ನಿರೀಕ್ಷೆಯಿದೆ. ಈ ಮಧ್ಯೆ ಜಯಲಲಿತಾ ಅವರ ನಿಕಟವರ್ತಿ ಶಶಿಕಲಾ, ಬಂಧುಗಳಾದ ವಿ.ಎನ್. ಸುಧಾಕರನ್ ಮತ್ತು ಇಳವರಸಿ ಅವರೂ ಜಾಮೀನು ಕೋರಿಕೆ ಅರ್ಜಿಯೊಂದಿಗೆ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. 66.65 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶ ಜಾನ್ ಮೈಕೆಲ್ ಡಿ'ಕುನ್ಹಾ ಅವರಿಂದ ಸೆಪ್ಟೆಂಬರ್ 27ರಂದು ಅಪರಾಧಿ ಎಂಬುದಾಗಿ ಘೋಷಿತರಾಗಿ 4 ವರ್ಷಗಳ ಸೆರೆವಾಸಕ್ಕೆ ಜಯಲಲಿತಾ ಗುರಿಯಾಗಿದ್ದರು.

2014: ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಅನಂತ ಗೀತೆ ಅವರು ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಲು ಸಜ್ಜಾಗುವುದರೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣ ಘರ್ಷಣೆ ರೈಸೀನಾ ಹಿಲ್ಸ್ ತಲುಪಿತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಈ ಬಗ್ಗೆ ಸುಳಿವು ನೀಡಿದರು. ಅನಂತ ಗೀತೆ ಅವರು ಎನ್​ಡಿಎ ಸರ್ಕಾರದಲ್ಲಿ ಶಿವಸೇನೆಯ ಏಕೈಕ ಸಚಿವರಾಗಿದ್ದು, ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ ಬಳಿಕ ಸಂಪುಟ ತ್ಯಜಿಸುವ ಸಾಧ್ಯತೆ ಎನ್ನಲಾಯಿತು. ಅನಂತ ಗೀತೆ ಅವರು ಸಂಪುಟದಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂಬುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ ಒಂದು ದಿನದ ಬಳಿಕ ಗೀತೆ ಅವರ ರಾಜೀನಾಮೆ ವಿಚಾರ ಬಂದಿತು. ಅಕ್ಟೋಬರ್ 15ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತ ಎರಡು ವಾರಗಳ ಬಿರುಸಿನ ಮಾತುಕತೆ ವೈಫಲ್ಯದ ಬಳಿಕ ಕಳೆದ ವಾರ ಬಿಜೆಪಿ ಮತ್ತು ಶಿವಸೇನೆ ತಮ್ಮ 25 ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದ್ದವು.

2008: ಜಮ್ಮಿವಿನ ದೋಡಾ ಜಿಲ್ಲೆಯಲ್ಲಿ ಬಸ್ಸೊಂದು 500 ಅಡಿ ಆಳದ  ಕಂದಕಕ್ಕೆ ಉರುಳಿ ಬಿದ್ದು ಆರು ಜನ  ಮೃತರಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ  ಘಟನೆ ಘಟಿಸಿತು. ದೋಡಾ ಜಿಲ್ಲೆಯಿಂದ ಸುಮಾರು 200 ಕಿ.ಮೀ. ದೂರದ  ಭದೇರ್ ವಾಹ್ನಿಂದ ಮೂವತ್ತು ಜನರನ್ನು ಹೊತ್ತು ಪ್ರಯಾಣಿಸುತ್ತಿದ್ದ ಈ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿತ್ತು..

2008: ಜಾರ್ಖಂಡಿನ ಪಲಮಾವು ಜಿಲ್ಲೆಯಲ್ಲಿ ಮಾವೋ ಉಗ್ರರು ಶಾಲಾ ಕಟ್ಟಡವನ್ನು ಸ್ಫೋಟಿಸಿದರು. ಅಂದಾಜು 20 ರಿಂದ 30ರಷ್ಟಿದ್ದ ಸಿಪಿಐ-ಮಾವೊ ಉಗ್ರರು ಶಾಲೆ ಸುತ್ತುವರಿದು ಕಟ್ಟಡವನ್ನು ಸ್ಫೋಟಿಸಿದರು.  ಈ ಘಟನೆಯಲ್ಲಿ ಯಾರೂ ಗಾಯಗೊಳಲಿಲ್ಲ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳು ಈ ಶಾಲೆಯನ್ನು ಬಳಸುತ್ತಿದ್ದವು. ಈ ಕಾರಣದಿಂದಲೇ ಅದನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

2008: ಸಾರ್ವಜನಿಕರ ಪ್ರವೇಶವಿರುವ ಖಾಸಗಿ ಕಚೇರಿಗಳೂ ಸೇರಿದಂತೆ ಜನರು ಸೇರುವ ಎಲ್ಲಾ ಸ್ಥಳಗಳಲ್ಲಿ ಗಾಂಧಿ ಜಯಂತಿ ದಿನವಾದ ಅ.2ರಿಂದ ಧೂಮಪಾನ ನಿಷೇಧವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿತು. ವಕೀಲರ ಕಚೇರಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ, ವೈದ್ಯರ ಕ್ಲಿನಿಕ್, ವಾಸ್ತುಶಿಲ್ಪಿಗಳ ಕಚೇರಿ ಹಾಗೂ ಸಾರ್ವಜನಿಕರ ಪ್ರವೇಶವಿರುವ ಇನ್ನಿತರ ಖಾಸಗಿ ಕಚೇರಿಗಳಿಗೆ ಇದು ಅನ್ವಯವಾಗುವುದು.

2007: ಮುಖ್ಯಮಂತ್ರಿ ವಿರುದ್ಧ ಕೊಲೆ ಆರೋಪ ಮಾಡುವುದರ ಮೂಲಕ ಮಿತ್ರಪಕ್ಷದೊಂದಿಗೆ ವೈಮನಸ್ಯಕ್ಕೆ ಕಾರಣವಾಗಿ, ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಡಿ.ವಿ.ಸದಾನಂದಗೌಡರಿಗೆ ಸಚಿವ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ರಾಜ್ಯ ರಾಜಕೀಯ ಹಾಗೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಎದ್ದಿದ್ದ ಬೆಂಕಿಯನ್ನು ಬಿಜೆಪಿ ವರಿಷ್ಠರು ಶ್ರೀರಾಮುಲು ರಾಜೀನಾಮೆ ಪಡೆಯುವ ಮೂಲಕ ಶಮನಗೊಳಿಸಿದಂತಾಯಿತು. ಬಳ್ಳಾರಿಯಿಂದ ಹೆಲಿಕಾಪ್ಟರಿನಲ್ಲಿ ಆಗಮಿಸಿದ ಶ್ರೀರಾಮುಲು ಅವರು ರಾಜ್ಯದಲ್ಲಿಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹಾ, ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರೆ ಹಿರಿಯ ಸಚಿವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪತ್ರದಲ್ಲಿ `ಪಕ್ಷದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಶ್ರೀರಾಮುಲು ವಿವರಿಸಿದರು. ಮುಖ್ಯಮಂತ್ರಿ ವಿರುದ್ಧವೇ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಹಸ್ತಾಂತರ ವಿಚಾರದಲ್ಲಿ ಬಿಜೆಪಿ ವರಿಷ್ಠರ ಜೊತೆ ಚರ್ಚೆನಡೆಸಲು ನವದೆಹಲಿಗೆ ತೆರಳಿದ್ದ ಜೆಡಿ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸದೆ ವಾಪಸಾಗಿದ್ದರು. ಇದರ ಜೊತೆ ಬಳ್ಳಾರಿ ಘಟನೆಯಿಂದ ರಾಜಕೀಯವಾಗಿ ಹೆಚ್ಚೂ ಕಡಿಮೆಯಾದರೆ ತಾವು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಸಿದ್ದರು.

2007: ಆಧುನಿಕ ಪ್ರಜ್ಞೆಯ ಕವಿ, ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಧ್ವನಿ, ವೀ. ಚಿಕ್ಕವೀರಯ್ಯ (ವೀಚಿ) (77) ಅವರು ತುಮಕೂರಿನ ಸ್ವಗೃಹದಲ್ಲಿ ನಿಧನರಾದರು. ಸಾಹಿತಿ ವೀಚಿ ಅವರದ್ದು ಬಹುಮುಖ ವ್ಯಕ್ತಿತ್ವ. ಓದಿದ್ದು ಮೆಟ್ರಿಕ್ಯುಲೇಷನ್. ಆದರೆ ಜೀವನ ಅನುಭವ ಪದವಿಗಳ ಮಿತಿಯನ್ನು ಮೀರಿದ್ದು. ಅತ್ಯಂತ ಸರಳ, ಸಜ್ಜನಿಕೆಯ ವೀಚಿ ಕೃಷಿಕರಾಗಿ, ಸಮಾಜ ಸೇವಕರಾಗಿ, ಸಮಾಜಕ್ಕಾಗಿ ರಾಜಕೀಯ ಪ್ರವೇಶಿಸಿದ ವಿಶಿಷ್ಟ ವ್ಯಕ್ತಿಯಾಗಿ ತುಮಕೂರಿನ ಬದುಕನ್ನು ಶ್ರೀಮಂತಗೊಳಿಸಿದವರು. `ಪ್ರಣಯ ಚೈತ್ರ' ಇವರ ಮೊದಲ ಕವನ ಸಂಕಲನ. `ವಿಷಾದ ನಕ್ಷೆ', `ಸಂಕರತಳಿ', `ನವಿಲ ಮನೆ', `ಅಭಿನಯದ ಬಯಲು', `ನಿತ್ಯ ಮದುವಣಗಿತ್ತಿ', `ಮಹಾಯಾನ', `ಹಸಿವಿನ ಲೋಕ', `ಹಿಡಿ ಶಾಪ', `ಬಂತೆಂದರೂ ಇದ್ದುದಿದ್ದೆಯಿತ್ತು' ಇತರ ಕವನ ಸಂಕಲನಗಳು. `ಸಿದ್ದರಬೆಟ್ಟ', `ಇವರು ನನ್ನವರು', `ನೆಚ್ಚಿನವರು' ಮತ್ತು `ಇಷ್ಟಮಿತ್ರರು' ವೀಚಿಯವರ ಪ್ರಮುಖ ಗದ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. 1971ರಿಂದ 1973ರವರೆಗೆ ತುಮಕೂರು ನಗರಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೀಚಿ ಬೈಸಿಕಲ್ಲಿನಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕವಿ ವೀ.ಚಿಕ್ಕವೀರಯ್ಯ (ವೀಚಿ)  ತುಮಕೂರು ಸಮೀಪದ ಅಮೀನುದ್ದೀನ್ ಸಾಹೇಬರ ಪಾಳ್ಯದಲ್ಲಿ ನವೆಂಬರ್ 5, 1930ರಂದು ಜನಿಸಿದರು.

2007: ಭಾರತದ ವಿಶ್ವನಾಥನ್ ಆನಂದ್ ಮೆಕ್ಸಿಕೊ ಸಿಟಿಯಲ್ಲಿ ಮುಕ್ತಾಯವಾದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ವಿಶ್ವದ ಎಂಟು ಶ್ರೇಷ್ಠ ಆಟಗಾರರು ಪೈಪೋಟಿ ನಡೆಸಿದ 14 ಸುತ್ತುಗಳ ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯ ಈ ಟೂರ್ನಿಯಲ್ಲಿ ಆನಂದ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದು, ಅಗ್ರಸ್ಥಾನದ ಗೌರವ ಪಡೆದು ಕೊಂಡರು. 14ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಪೀಟರ್ ಲೆಕೊ ಜೊತೆಗೆ ಪಾಯಿಂಟು ಹಂಚಿಕೊಂಡರು.

2007: ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ- ಕಾಲೇಜುಗಳಲ್ಲಿ ಮೊಬೈಲ್ ದೂರವಾಣಿ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು ಅದು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಅರವತ್ತರ ಹರೆಯದ ಮಹಿಳೆಯೊಬ್ಬಳು ಪ್ರಣಾಳ ಶಿಶು ವಿಧಾನದ ಮೂಲಕ ಪುಣೆಯ ಆಸ್ಪತ್ರೆಯೊಂದರಲ್ಲಿ ತನ್ನ ಪುತ್ರಿಯ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಏಕಕಾಲದಲ್ಲಿ ಈ ಅವಳಿ ಮಕ್ಕಳಿಗೆ ಅಮ್ಮ ಹಾಗೂ ಅಜ್ಜಿಯಾದರು. ಈ ಅಜ್ಜಿಯ ಪುತ್ರಿ ಕ್ಯಾನ್ಸರಿನಿಂದ ಬಳಲುತ್ತಿದ್ದ ಕಾರಣ ಕೃತಕ ಗರ್ಭ ಧಾರಣೆಯ ಮೂಲಕ ಬಾಡಿಗೆ ತಾಯಿಯ ಗರ್ಭದಲ್ಲಿ ವಂಶದ ಕುಡಿ ಬೆಳೆಸಲು ಸಾಧ್ಯ ಎಂದು ವೈದ್ಯರು  ಹೇಳಿದ್ದರು. ಅಮೆರಿಕದಲ್ಲಿದ್ದ ಈ ಮಹಿಳೆ ತನ್ನ ಮಗುವಿಗೆ ಕುಟುಂಬದವರೇ ಬಾಡಿಗೆ ತಾಯಿ ಆಗಬೇಕೆಂದು ಬಯಸಿದಾಗ, ಮಗಳಿಗೆ ಮಕ್ಕಳನ್ನು ಹೆತ್ತು ಕೊಡಲು ಹೆತ್ತಮ್ಮನೇ ಮುಂದೆ ಬಂದರು. ಕೃತಕ ಗರ್ಭಧಾರಣೆ  ಮೂಲಕ ಇವರು ತಮ್ಮ ಪುತ್ರಿಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಎಂದು ಪುಣೆಯ ರುಬಿ ಹಾಲ್ ಕ್ಲಿನಿಕ್ಕಿನ ಕೃತಕ ಗರ್ಭಧಾರಣೆ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ತೆಂಡೂಲ್ ವಾಡ್ಕರ್ ಸುದ್ದಿಗಾರರಿಗೆ ತಿಳಿಸಿದರು. ಅವಳಿ ಮಕ್ಕಳು ಕ್ರಮವಾಗಿ 1.7 ಕೆ.ಜಿ ಹಾಗೂ 1.4 ಕೆ.ಜಿ ತೂಕ ಹೊಂದಿದ್ದು ಆರೋಗ್ಯವಾಗಿದ್ದವು.

 2007: ರಿಲಯನ್ಸ್ ಸಮೂಹ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬರೋಡಾದ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯವು ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಿತು.

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬ್ರೆಜಿಲ್ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 115 ಜನ ಮೃತರಾದರು. ಬ್ರೆಜಿಲಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತ ಫೋರ್ಟ್ ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು.

2006: ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು. ಅವರು ಸೆಪ್ಟೆಂಬರ 18ರಂದು ಬೈಕನೂರ್ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಹೊರಟಿದ್ದರು.

2006: ಮಾಜಿ ನಟಿ, ಭೂಗತ ಪಾತಕಿ ಅಬು ಸಲೇಂನ ಗೆಳತಿ ಮೋನಿಕಾ ಬೇಡಿ ಅವರಿಗೆ ಹೈದರಾಬಾದಿನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯಗಳಲ್ಲಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಪಾಸ್ ಪೋರ್ಟ್ಟ್ ನಕಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಸಜೆ ಹಾಗೂ 5000 ರೂಪಾಯಿಗಳ ದಂಡ ವಿಧಿಸಿದರು. ಮೋನಿಕಾಳನ್ನು 2005ರ ನವೆಂಬರ್ 11ರಂದು ಪೋಚರ್ುಗಲ್ಲಿನಿಂದ ಗಡೀಪಾರು ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಿವೃತ್ತ ಎಎಸ್ ಐ ಅಬ್ದುಲ್ ಸತ್ತಾರ್ ಮತ್ತು ಪೋಸ್ಟ್ ಮ್ಯಾನ್ ಗೋಕರಿ ಸಾಹೇಬ್ ಗೂ ನ್ಯಾಯಾಲಯ ತಲಾ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.

2006: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎರಪಳ್ಳಿ ಪ್ರಸನ್ನ ಅವರನ್ನು ಮುಂಬೈಯಲ್ಲಿ ಕ್ಯಾಸ್ಟ್ರಾಲ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2006: ರಾಯಚೂರಿನ ಹಿಂದೂಸ್ಥಾನಿ ಸಂಗೀತಗಾರ ಪಂಡಿತ್ ಮಾಣಿಕರಾವ್ ರಾಯಚೂರಕರ್ ಅವರು 2006ನೇ ಸಾಲಿನ `ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಐದು ದಿನಗಳ ಚಾರಿತ್ರಿಕ ಅಧಿವೇಶನ ಮುಕ್ತಾಯಗೊಂಡಿತು.

1991: ಆಗ್ರಾ ಘರಾಣಾದ ಖ್ಯಾತ ಗಾಯಕ ಉಸ್ತಾದ್ ಯೂನಸ್ ಹುಸೇನ್ ಖಾನ್ ನಿಧನರಾದರು.

1981: ನೂರ ಹದಿನೇಳು ಜನರಿದ್ದ ಇಂಡಿಯನ್ ಏರ್ ಲೈನಿನ ಬೋಯಿಂಗ್-737 ವಿಮಾನವನ್ನು ಪಾಕಿಸ್ಥಾನದ ಲಾಹೋರಿಗೆ ಅಪಹರಿಸಲಾಯಿತು. ದೆಹಲಿಯಿಂದ ಶ್ರೀನಗರಕ್ಕೆ ಅಮೃತಸರ ಮಾರ್ಗವಾಗಿ ಹೊರಟಿದ್ದಾಗ ಈ ಅಪಹರಣ ನಡೆಯಿತು.

1962: ಏಷ್ಯಾದ ಮೊತ್ತ ಮೊದಲ ತಾರಾಲಯ `ಬಿರ್ಲಾ ಪ್ಲಾನೆಟೇರಿಯಂ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉದ್ಘಾಟನೆಗೊಂಡಿತು.

1936: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆೆ ರೇಡಿಯೋ ಬಳಸಲಾಯಿತು.

1934: ಕೀಟ ಸಂಶೋಧನಾ ಅಧಿಕಾರಿ, ಛಾಯಾಗ್ರಾಹಕ, ಸಾಹಿತಿ ಕೃಷ್ಣಾನಂದ ಕಾಮತ್ (29-9-1934ರಿಂದ 20-2-2002) ಅವರು ಲಕ್ಷ್ಮಣ ವಾಸುದೇವ ಕಾಮತ್- ರಮಾಬಾಯಿ ದಂಪತಿಯ ಮಗನಾಗಿ ಹೊನ್ನಾವರದಲ್ಲಿ ಜನಿಸಿದರು.

1931: ಸಾಹಿತಿ ನೀಲತ್ತಳ್ಳಿ ಕಸ್ತೂರಿ ಜನನ.

1930: ಸಾಹಿತಿ ಕೃ. ನಾರಾಯಣರಾವ್ ಜನನ.

1919: ಸಾಹಿತಿ ಮಹಾಲಕ್ಷ್ಮೀ ಜನನ.

1914: ಎಸ್ ಎಸ್ ಕೊಮಾಗತಮಾರು ಹಡಗು ವ್ಯಾಂಕೋವರಿನಿಂದ ಕಲ್ಕತ್ತಾದ ಬಜ್ ಬಜ್ ಸಮೀಪ ಬಂದಿತು. ಬ್ರಿಟಿಷ್ ರಾಜ್ಯಕ್ಕೆ ಸವಾಲು ಹಾಕಿದ್ದಕ್ಕಾಗಿ 17 ಯುವಕರನ್ನು ಕೊಂದು 202 ಜನರನ್ನು ಸೆರೆಮನೆಗೆ ತಳ್ಳಲಾಯಿತು. ಮಾರ್ಚಿಯಲ್ಲಿ ಘದರ್ ಚಳವಳಿಯ ಅಂಗವಾಗಿ ಇದೇ ಹಡಗು ಹಾಂಕಾಂಗಿನಿಂದ ವ್ಯಾಂಕೋವರಿಗೆ ಪ್ರಯಾಣ ಬೆಳೆಸಿತು. ಆದರೆ ಜುಲೈ 28ರಂದು ಅದನ್ನು ಬಲಾತ್ಕಾರವಾಗಿ ವ್ಯಾಂಕೋವರಿನಿಂದ ಹೊರಕ್ಕೆ ಕಳುಹಿಸಲಾಯಿತು.

1829: ಲಂಡನ್ನಿನ ಮಾನ್ಯತೆ ಪಡೆದ ಪೊಲೀಸ್ ಪಡೆ ಲಂಡನ್ನಿನ ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿತು. ಮುಂದೆ ಇದೇ ಪೊಲೀಸ್ ಪಡೆ `ಸ್ಕಾಟ್ಲೆಂಡ್ ಯಾರ್ಡ್' ಎಂಬ ಹೆಸರು ಪಡೆಯಿತು.

1725: ರಾಬರ್ಟ್ ಕ್ಲೈವ್ (1725-1774) ಜನ್ಮದಿನ. ಪ್ಲಾಸಿ ಕದನದಲ್ಲಿ ಮುಖ್ಯಪಾತ್ರ ವಹಿಸಿದ್ದ ಈತ ಬಂಗಾಳದ ಮೊದಲ ಬ್ರಿಟಿಷ್ ಆಡಳಿತಗಾರನಾಗಿದ್ದು, ಭಾರತದಲ್ಲಿ ಬ್ರಿಟಿಷ್ ಅಧಿಕಾರ ಸ್ಥಾಪನೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement