My Blog List

Monday, November 23, 2009

ಇಂದಿನ ಇತಿಹಾಸ History Today ನವೆಂಬರ್ 09

ಇಂದಿನ ಇತಿಹಾಸ

ನವೆಂಬರ್ 09

800 ಸೇತುವೆಗಳು ಹಾಗೂ 102 ಸುರಂಗಗಳನ್ನು ಹೊಂದಿರುವ 105 ವರ್ಷಗಳ ಹಳೆಯದಾದ ಕಲ್ಕಾ-ಶಿಮ್ಲಾ ರೈಲ್ವೆ ಹಳಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿದ ಹಿನ್ನೆಲೆಯಲ್ಲಿ, ವಿಶ್ವ ಪಾರಂಪರಿಕ ತಾಣ ಎಂದು ಬರೆದ ಅಲಂಕಾರಿಕ ಫಲಕವನ್ನು ಚಂಡೀಗಢದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಕಲ್ಕಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಅನಾವರಣಗೊಳಿಸಿದರು.

2008: 800 ಸೇತುವೆಗಳು ಹಾಗೂ 102 ಸುರಂಗಗಳನ್ನು ಹೊಂದಿರುವ 105 ವರ್ಷಗಳ ಹಳೆಯದಾದ ಕಲ್ಕಾ-ಶಿಮ್ಲಾ ರೈಲ್ವೆ ಹಳಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿದ ಹಿನ್ನೆಲೆಯಲ್ಲಿ, ವಿಶ್ವ ಪಾರಂಪರಿಕ ತಾಣ ಎಂದು ಬರೆದ ಅಲಂಕಾರಿಕ ಫಲಕವನ್ನು ಚಂಡೀಗಢದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಕಲ್ಕಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಅನಾವರಣಗೊಳಿಸಿದರು. ಭಾರತದ ಬೇಸಿಗೆ ರಾಜಧಾನಿ ಎಂದು ಗುರುತಿಸಿಕೊಳ್ಳುವ ಶಿಮ್ಲಾಕ್ಕೆ ದೇಶದ ಇತರ ಭಾಗಗಳಿಂದ ಸಂಪರ್ಕ ಕಲ್ಪಿಸಲು 1898ರಲ್ಲಿ ಬ್ರಿಟಿಷರು ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗ ನಿರ್ಮಾಣ ಪ್ರಾರಂಭಿಸಿದ್ದರು. 2 ಅಡಿ 6 ಇಂಚು ಅಗಲವಿರುವ 96 ಕಿ.ಮೀ. ದೂರದ ನ್ಯಾರೋ ಗೇಜ್ ರೈಲ್ವೆ ಹಳಿಯನ್ನು 1903ರ ನವೆಂಬರ್ 9ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಹಳೆಯ ಚಕ್ರಗಳು, ವಿಶ್ವದಲ್ಲಿ ಎಲ್ಲೂ ಕಾಣದ ವಿವಿಧ ತಾಂತ್ರಿಕ ವಸ್ತುಗಳು, ಅಪರೂಪದ ಗಡಿಯಾರ ಮತ್ತು ಉಗಿ ಎಂಜಿನ್ನುಗಳನ್ನು ಶಿಮ್ಲಾದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಈ ಕಂಪ್ಯೂಟರ್ ಯುಗದಲ್ಲೂ ಸಹ ಮಾರ್ಗದ ತೆರವಿಗಾಗಿ ಎಲ್ಲಾ ನಿಲ್ದಾಣಗಳಲ್ಲಿ ಟೋಕನ್ ಬದಲಾಯಿಸುವ ನಿಯಾಲ್ಸ್ ಟೋಕನ್ ಪದ್ಧತಿ ಇಲ್ಲಿ ಜಾರಿಯಲ್ಲಿದೆ ಎಂದು ಕಲ್ಕಾ ರೈಲ್ವೆ ನಿಲ್ದಾಣದ ಅಧಿಕಾರಿ ಅಜಯ್ ಕೋಚರ್ ಹೇಳಿದರು. ಈ ರೈಲ್ವೆ ಹಳಿ ಸಮುದ್ರ ಮಟ್ಟದಿಂದ 656 ಮೀಟರ್ ಎತ್ತರದಲ್ಲಿರುವ ಕಲ್ಕಾದಿಂದ ಆರಂಭಗೊಂಡು ಸಮುದ್ರ ಮಟ್ಟದಿಂದ 2,076 ಮೀಟರ್ ಎತ್ತರದಲ್ಲಿರುವ ಶಿಮ್ಲಾದಲ್ಲಿ ಕೊನೆಗೊಳ್ಳುವುದು. ಈ ರೈಲ್ವೆ ಹಾದಿಯಲ್ಲಿ ಬೆಟ್ಟದ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತವೆ.

2008: ಹೈಟಿಯ ರಾಜಧಾನಿ ಪೆಟಿಯಾನ್ ವಿಲ್ಲಿಯಲ್ಲಿ 8-11-2008ರಂದು ಸಂಭವಿಸಿದ ಶಾಲಾ ಕಟ್ಟದ ಕುಸಿತದಲ್ಲಿ ಮೃತರಾದವರ ಸಂಖ್ಯೆ 84 ಕ್ಕೆ ಏರಿತು. ಹಿಂದಿನ ದಿನ ದುರಂತದಲ್ಲಿ 58 ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಮೃತರಾಗಿದ್ದಾರೆ ಎಂದು ನಂಬಲಾಗಿತ್ತು.

2008: ಮಲೇಷ್ಯಾ ರಾಷ್ಟ್ಟ್ರಿಯ ಫತ್ವಾ ಮಂಡಳಿ ಯೋಗಾಭ್ಯಾಸಕ್ಕೆ ನಿಷೇಧ ಹೇರಿ ಧಾರ್ಮಿಕ ಆದೇಶ ಹೊರಡಿಸುವುದನ್ನು ಮುಂದೂಡಿತು. ಮಂಡಳಿಯ ಅಧ್ಯಕ್ಷ ಪ್ರಸ್ತುತ ವಿದೇಶ ಪ್ರವಾಸದಲ್ಲಿ ಇರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಇಸ್ಲಾಂ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಶೇಖ್ ಅಬ್ದುಲ್ ಅಜೀಜ್ ಹೇಳಿಕೆ ನೀಡಿದರು.

2008: ಸಾಧಾರಣ ಮುಖಚಹರೆಯುಳ್ಳವರು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡುವ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಿರುವುದಾಗಿ ಟೆಲ್ ಅವೀವ್ ವಿವಿಯ ವಿಜ್ಞಾನಿಗಳು ಪ್ರಕಟಿಸಿದರು. ಸದ್ಯಕ್ಕೆ ಈ ಸಾಫ್ಟ್ ವೇರನ್ನು ಡಿಜಿಟಲ್ ಬಿಂಬಗಳಲ್ಲಿ ಮಾತ್ರ ಬಳಸಲಾಗಿದೆ. ಇನ್ನಷ್ಟು ಅಭಿವೃದ್ಧಿಪಡಿಸಿದಲ್ಲಿ ಸುರೂಪಿ ಚಿಕಿತ್ಸೆ ನೀಡುವ ಪ್ಲಾಸ್ಟಿಕ್ ಸರ್ಜನ್ಗಳು ಇದನ್ನು ಬಳಸಿಕೊಳ್ಳಬಹುದು. ಭವಿಷ್ಯದಲ್ಲಿ ಎಲ್ಲಾ ಡಿಜಿಟಲ್ ಕ್ಯಾಮೆರಾಗಳಲ್ಲೂ ಈ ಸಾಫ್ ್ಟವೇರ್ ಅಳವಡಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದರು.

2008: ಜಲಜನಕವನ್ನು ಇಂಧನವಾಗಿ ಬಳಸಿಕೊಂಡು ಅತಿ ವೇಗ ವಾಗಿ ಚಲಿಸನಬಲ್ಲ ಕಾರನ್ನು ಸಿದ್ಧ ಪಡಿಸಿರುವುದಾಗಿ ಆಸ್ಟ್ರೇಲಿಯಾದ ಸಂಶೋಧಕರು ಸಿಡ್ನಿಯಲ್ಲಿ ಪ್ರಕಟಿಸಿದರು. ಮುಂದಿನ ವರ್ಷದ ಜನವರಿಯಲ್ಲಿ ಜರ್ಮನಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಈ ಕಾರು ಪಾಲ್ಗೊಳ್ಳಲ್ದಿದು, ಜಗತ್ತಿನಲ್ಲೇ ಅತಿ ವೇಗವಾಗಿ ಓಡುವ ಜಲಜನಕ ಕಾರು ಎಂದು ಗಿನ್ನೆಸ್ ದಾಖಲೆ ಪುಸ್ತಕದ್ಲಲಿ ನಮೂದಾಗುವ ಸಾಧ್ಯತೆಯಿದೆ. ಗಂಟೆಗೆ 170 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಈ ಕಾರನ್ನು ರಾಯಲ್ ಮೆಬೋರ್ನ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ತಯಾರಿಸಿದರು. ಭವಿಷ್ಯದ ವಾಹನಗಳಲ್ಲಿ ಜಲಜನಕವನ್ನು ಇಂಧನವಾಗಿ ಬಳಸುವ ಸಾಧ್ಯತೆಯ ಮೇಲೆ ಈ ಕಾರು ಬೆಳಕು ಚೆಲ್ಲುವುದು.

2008: ಗರ್ಭ ಧರಿಸಿದ್ದ ಹಸುವೊಂದನ್ನು ಕೊಂದದ್ದಕ್ಕಾಗಿ ದೆಹಲಿಯ ಬೇಕರಿ ಮಾಲೀಕನೊಬ್ಬನಿಗೆ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತು. ತನ್ನ ಬೇಕರಿಗೆ ಹಸುವೊಂದು ನುಗ್ಗಿ ತಿಂಡಿ, ತಿನಿಸುಗಳಿಗೆ ಬಾಯಿಹಾಕಿದಾಗ ಕುಪಿತಗೊಂಡ ನಸೀಮ್ ಖಾನ್ (25) ಚಾಕು ತೆಗೆದುಕೊಂಡು ಮೂರು ಬಾರಿ ಇರಿದ. ಹಸು ಸ್ಥಳದ್ಲಲೇ ಸಾವನ್ನಪ್ಪಿತು. ಹಸುವಿನ ಮಾಲೀಕ ವೀರ್ ಸಿಂಗ್ ಈ ಬಗ್ಗೆ ದೂರು ಸಲ್ಲಿಸಿದ. ಈ ದೂರಿನ ವಿಚಾರಣೆಯ ಸಂದರ್ಭದಲ್ಲಿ ಖಾನನ ವಕೀಲರು ವೀರ್ ಸಿಂಗನನ್ನು ಪಾಟೀ ಸವಾಲಿಗೆ ಒಳಪಡಿಸಿರಲಿಲ್ಲ. ಘಟನೆ ಕುರಿತು ತೀರ್ಪು ನೀಡಿದ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಧೀಶರು, ಖಾನ್ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸೆಕ್ಯೂಷನ್ ಯಶಸ್ವಿಯಾಗಿದೆ. ಆರೋಪಿ ಪರ ವಕೀಲರು ಸಾಕ್ಷ್ಯವನ್ನು ಪಾಟೀ ಸವಾಲಿಗೆ ಒಳಪಡಿಸದ ಕಾರಣ ಆತನ ಹೇಳಿಕೆ ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದರು. ವಯಸ್ಸಾದ ತಂದೆ-ತಾಯಿ ಹಾಗೂ ಚಿಕ್ಕ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ ಶಿಕ್ಷೆಯಿಂದ ವಿನಾಯತಿ ನೀಡುವಂತೆ ನಸೀಮ್ ಖಾನ್ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು.

2008: ಭಾರತಕ್ಕೆ ಮುಂದಿನ ವರ್ಷ ಗುತ್ತಿಗೆ ಆಧಾರದ ಮೇಲೆ ನೀಡಲು ಉದ್ದೇಶಿಸಲಾದ ಹೊಚ್ಚ ಹೊಸ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಿಲ ಸೋರಿ 20 ಜನರು ಮೃತರಾಗಿ 21 ಜನ ಗಾಯಗೊಂಡರು. ರಷ್ಯಾದಲ್ಲಿ ದಶಕದ ನಂತರ ಸಂಭವಿಸಿದ ನೌಕಾ ದುರಂತವಿದು. ಸತ್ತವರಲ್ಲಿ ಮೂವರು ನಾವಿಕರು.

2008: ಡಾ. ರಾಜಕುಮಾರ್ ಅವರ ಹುಟ್ಟೂರಾದ ದೊಡ್ಡಗಾಜನೂರಿನ ಗ್ರಾಮಸ್ಥರು ಗ್ರಾಮದ ಕೂಡು ರಸ್ತೆ (ಪೆಟ್ರೋಲ್ ಬಂಕ್ ಬಳಿ) ವೃತ್ತಕ್ಕೆ `ಪದ್ಮಭೂಷಣ ಡಾ. ರಾಜಕುಮಾರ್' ಎಂದು ನಾಮಕರಣ ಮಾಡಿ ಪ್ರತಿಮೆ ಸ್ಥಾಪಿಸುವ ಮೂಲಕ ವರನಟನಿಗೆ ತಮ್ಮ ಗೌರವ ಸಲ್ಲಿಸಿದರು. ಈ ಸಂಬಂಧಿ ಫಲಕವನ್ನು ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅನಾವರಣ ಮಾಡಿದರು.

2008: ಗ್ರಾಮೀಣ ಜನರಿಗೆ ನೆರವಾಗುವ ಸಣ್ಣ ಕಂತಿನ ಜನತಾ ಬಿಮಾ ಯೋಜನೆಗೆ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತಮಿಳುನಾಡಿನ ಕುರೈಕುಡಿಯಲ್ಲಿ ಚಾಲನೆ ನೀಡಿದರು. ಖಾಸಗಿ ಕಂಪೆನಿಯೊಂದು ಈ ಯೋಜನೆಯನ್ನು ರೂಪಿಸಿತು. ಇದು ರೂ 100 ರ ಪ್ರೀಮಿಯಂ ಮೊತ್ತವನ್ನು ಹೊಂದಿದೆ. ಗ್ರಾಮೀಣರನ್ನೇ ಉದ್ದೇಶವಾಗಿಟ್ಟುಕೊಳ್ಳಲಾದ ಈ ಯೋಜನೆಯ ವಾಪ್ತಿಗೆ 18-60ರ ವರೆಗಿನ ವಯಸ್ಸಿನವರು ಬರುತ್ತಾರೆ.

2007: ದೇಶದಲ್ಲೇ ಪ್ರಥಮ ಎನ್ನಲಾದ ಅನಗತ್ಯ ಅವಯವಗಳ ನಿವಾರಣೆಗಾಗಿ ನಡೆಸಲಾದ 27 ಗಂಟೆಗಳ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಒಳಗಾಗಿದ್ದ ಬಿಹಾರ ಲಕ್ಷ್ಮಿ ಎರಡು ದಿನಗಳ ಬಳಿಕ ಈದಿನ ಚೇತರಿಸಿಕೊಂಡು ಅಪ್ಪ, ಅಮ್ಮ, ಅಣ್ಣನನ್ನು ಗುರುತಿಸಿದಳು. ಅಮ್ಮನನ್ನು ಕಂಡೊಡನೆಯೇ ಕಿರುನಗೆ ಸೂಚಿಸಿದಳು. ಆಕೆ ಚೇತರಿಸಿಕೊಂಡ ವಿಚಾರವನ್ನು ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಬಹಿರಂಗಗೊಳಿಸಿದರು.

2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸರ್ಕಾರ ರಚನೆಗೆ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಜೊತೆಗೆ ಈದಿನ ಸಂಜೆ ರಾಜಭವನಕ್ಕೆ ತೆರಳಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯಪಾಲರು ಈ ಆಹ್ವಾನ ನೀಡಿದರು. ಇದರೊಂದಿಗೆ ಬಿಜೆಪಿಯು ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಜ್ಜಾಯಿತು. ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರಾವಧಿ ನಂತರ ಅಕ್ಟೋಬರ್ 3ರಂದು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ, `ರಾಜಕೀಯ ಕಾರಣ'ಗಳಿಂದಾಗಿ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇದರಿಂದ ಬೇಸತ್ತ ಬಿಜೆಪಿ ತನ್ನ ಬೆಂಬಲವನ್ನು ಅಕ್ಟೋಬರ್ 7ರಂದು ವಾಪಸ್ ಪಡೆದಿತ್ತು. ಮರುದಿನ ಕುಮಾರಸ್ವಾಮಿ ಸರ್ಕಾರ ಪತನಗೊಂಡಿತು. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್- ಮೂರು ಪಕ್ಷಗಳೂ ವಿಧಾನಸಭೆ ವಿಸರ್ಜಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಶಿಫಾರಸಿನ ಮೇರೆಗೆ ಅಕ್ಟೋಬರ್ 9ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ನಂತರದ ಬೆಳವಣಿಗೆಗಳಲ್ಲಿ ಜೆಡಿಎಸ್ ನ ಬಹುತೇಕ ಶಾಸಕರು ಚುನಾವಣೆ ಬೇಡ ಎಂದು ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾದರು. ಇದರ ಸುಳಿವರಿತ ಜೆಡಿಎಸ್ ವರಿಷ್ಠರು ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದರು. 15 ದಿನಕ್ಕೂ ಹೆಚ್ಚು ಕಾಲ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಿಜೆಪಿ ಮರು ಹೊಂದಾಣಿಕೆಗೆ ಒಪ್ಪಿತು. ಪುನಃ ಎರಡೂ ಪಕ್ಷಗಳ ಮುಖಂಡರು ಅಕ್ಟೋಬರ್ 27ರಂದು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕೇಂದ್ರದ ಮೇಲೆ ಒತ್ತಡ ಹೇರಿದರೂ, ಅಕ್ಟೋಬರ್ 8ರ ಸಂಪುಟ ಸಭೆಯಲ್ಲಿ ಕೇಂದ್ರವು ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿತು. ಈ ನಿರ್ಧಾರಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದರು. ಇದಕ್ಕೂ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಈ ಎರಡೂ ಪಕ್ಷಗಳ 129 ಮಂದಿ ಶಾಸಕರು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಮುಂದೆ ಪೆರೇಡ್ ಕೂಡಾ ನಡೆಸಿ ಬಹುಮತ ಪ್ರದರ್ಶಿಸಿದ್ದರು.

2007: ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಬೆನ ಜೀರ್ ಭುಟ್ಟೋ ಅವರನ್ನು ಪೊಲೀಸರು ಬಂಧಿಸಿದರು.

2007: ನೈಋತ್ಯ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಯಿಂದ 29 ಕಾರ್ಮಿಕರು ಮೃತರಾಗಿ, ಆರು ಮಂದಿ ಕಾಣೆಯಾದರು. ಈ ಗಣಿಯಲ್ಲಿ 52 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

2006: ಕಾದಂಬರಿಗಾರ್ತಿ ಎಚ್. ಜಿ. ರಾಧಾದೇವಿ (55) ಅವರು ಹೃದಯಾಘಾತದಿಂದ ರಾಯಚೂರಿನಲ್ಲಿ ನಿಧನರಾದರು. ಮೂಲತಃ ಕೋಲಾರದವರಾದ ರಾಧಾದೇವಿ 1975ರಲ್ಲಿ ಸುದರ್ಶನ ಅವರ ಜೊತೆಗೆ ವಿವಾಹವಾದ ಬಳಿಕ ರಾಯಚೂರಿನಲ್ಲಿ ನೆಲೆಸಿ ಕಾದಂಬರಿ ರಚನೆಯಲ್ಲಿ ತೊಡಗಿದ್ದರು. ಅನುರಾಗ ಅರಳಿತು, ಸುವರ್ಣ ಸೇತುವೆ, ಭ್ರಮರ ಬಂಧನ, ಅಮರ ಚುಂಬಿತೆ, ಬಂಗಾರದ ನಕ್ಷತ್ರ, ಕನಸಿನ ಚಪ್ಪರ ಇತ್ಯಾದಿ 150ಕ್ಕೂ ಹೆಚ್ಚು ಕಾದಂಬರಿಗಳನ್ನು ಅವರು ರಚಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಬಂದಿವೆ. `ಅನುರಾಗ ಅರಳಿತು', `ಸುವರ್ಣ ಸೇತುವೆ' ಚಲನಚಿತ್ರಗಳಾಗಿವೆ. `ಅನುರಾಗ ಅರಳಿತು' ಆಧರಿಸಿ ತೆಲುಗಿನಲ್ಲೂ `ಘರಾನ ಮೊಗಡು' ಚಲನಚಿತ್ರ ನಿರ್ಮಾಣಗೊಂಡಿತ್ತು.

2006: ಸಂಸತ್ತಿನ ಮೇಲೆ 2001 ರಲ್ಲಿ ನಡೆಸಿದ ಭಯೋತ್ಪಾದಕ ದಾಳಿಗಾಗಿ ಮರಣದಂಡನೆಗೆ ಗುರಿಯಾಗಿರುವ ಮೊಹಮ್ಮದ್ ಅಫ್ಜಲ್ ಗುರು ತಡವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ. 102 ಪುಟಗಳ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಆತ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಸಲ್ಲಿಸಿದ.

2006: ಸಂವೇದನಾಶೀಲ, ಕೃತಕ ಹಲ್ಲುಗಳನ್ನು ಶಾಶ್ವತವಾಗಿ ಅಳವಡಿಸುವ ಅತ್ಯಾಧುನಿಕ ತಂತ್ರಜ್ಞಾನ ಬೆಂಗಳೂರಿನ ಲ್ಯಾವೆಲ್ಲೇ ರಸ್ತೆಯಲ್ಲಿನ `ಡೆಂಟಲ್ ಲ್ಯಾವೆಲ್ಲೆ' ಚಿಕಿತ್ಸಾಲಯಕ್ಕೆ ಬಂತು. ಸ್ವೀಡನ್ ಮೂಲದ ಈ ತಂತ್ರಜ್ಞಾನವನ್ನು ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ ಎಂದು ಚಿಕಿತ್ಸಾಲಯದ ಸ್ಥಾಪಕ, ಹಿರಿಯ ವೈದ್ಯ ಡಾ. ಜಗದೀಶ್ ಬೆಲೂರು ಪ್ರಕಟಿಸಿದರು.

2005: ನಿಷ್ಠುರ ನಡೆ ನುಡಿಯ ಮುತ್ಸದ್ಧಿ ಭಾರತದ ಮಾಜಿ ರಾಷ್ಟ್ರಪತಿ ಕೊಚೇರಿಲ್ ರಾಮನ್ ವೈದ್ಯರ್ ನಾರಾಯಣನ್ (ಕೆ.ಆರ್. ನಾರಾಯಣನ್) (85) ನವದೆಹಲಿಯಲ್ಲಿ ನಿಧನರಾದರು. ಅವರು 1997-2002ರ ಅವದಿಯಲ್ಲಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

2005: ಭೂಮಿಗೆ ಸಮೀಪದಲ್ಲಿರುವ ಶುಕ್ರಗ್ರಹದ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ `ವೀನಸ್ ಎಕ್ಸ್ ಪ್ರೆಸ್' ಅಂತರಿಕ್ಷ ನೌಕೆಯನ್ನು ರಷ್ಯದ ಕಜಕಸ್ಥಾನದ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿಬಿಡಲಾಯಿತು. ಅದು ಸೋಯುಜ್ ಎಫ್. ಜಿ. ರಾಕೆಟ್ಟಿನಿಂದ ಬೇರ್ಪಟ್ಟು ಶುಕ್ರಗ್ರಹದಿಂದ 163 ದಿನಗಳ ಪಯಣ ಆರಂಭಿಸಿತು.

1989: ಕಮ್ಯೂನಿಸ್ಟ್ ಪೂರ್ವ ಜರ್ಮನಿಯು ತನ್ನ ಗಡಿಗಳನ್ನು ತೆರೆದು ತನ್ನ ನಾಗರಿಕರಿಗೆ ಪಶ್ಚಿಮ ಜರ್ಮನಿಗೆ ಪ್ರವಾಸ ಮಾಡಲು ಮುಕ್ತ ಅವಕಾಶ ಕಲ್ಪಿಸಿತು. ಮರುದಿನ ಪೂರ್ವ ಜರ್ಮನಿಯ ಪಡೆಗಳು `ಬರ್ಲಿನ್ ಗೋಡೆ'ಯ ಭಾಗಗಳನ್ನು ಕೆಡವಿ ಹಾಕಲು ಆರಂಭಿಸಿದವು. ನವೆಂಬರ್ 22ರಂದು ಬ್ರಾಂಡೆನ್ ಬರ್ಗ್ ಗೇಟ್ ನ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹೊಸ ದಾರಿಗಳನ್ನು ನಿರ್ಮಿಸಲಾಯಿತು. 1990ರ ವೇಳೆಗೆ ಸಂಪೂರ್ಣ ಗೋಡೆಯನ್ನು ಕೆಡವಿ ಹಾಕಲಾಯಿತು.

1960: ಭಾರತದ ವಾಯುಪಡೆಯ ಪ್ರಥಮ ಏರ್ ಚೀಫ್ ಮಾರ್ಷಲ್ ಸುಬ್ರತೋ ಮುಖರ್ಜಿ ನಿಧನರಾದರು.

1943: ಸಾಹಿತ್ಯ , ಸಂಗೀತ, ಚಿತ್ರಕಲೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವ ಅಮೃತೇಶ್ವರ ತಂಡರ ಅವರು ಉಮ್ಮಣ್ಣ ತಂಡರ- ಬಸವಣ್ಣೆವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ಜನಿಸಿದರು.

1938: ನಾಜಿ ಪಡೆಗಳು ಮತ್ತು ಬೆಂಬಲಿಗರು 7500 ಯಹೂದಿ ವಾಣಿಜ್ಯ ಮುಂಗಟ್ಟುಗಳನ್ನು ನಾಶಮಾಡಿ ಲೂಟಿ ಮಾಡಿದರು. 267 ಯಹೂದಿ ಪೂಜಾ ಮಂದಿರಗಳನ್ನು ಸುಟ್ಟು ಹಾಕಲಾಯಿತು. 91 ಯಹೂದ್ಯರನ್ನು ಕೊಲ್ಲಲಾಯಿತು. 25,000 ಯಹೂದಿಗಳನ್ನು ಬಂಧಿಸಲಾಯಿತು.

1877: ಖ್ಯಾತ ಉರ್ದು ಕವಿ, ತತ್ವಜ್ಞಾನಿ ಸರ್ . ಮಹಮ್ಮದ್ ಇಕ್ಬಾಲ್ (1877-1938) ಹುಟ್ಟಿದ ದಿನ. ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಸ್ಥಾಪನೆಯ ವಿಚಾರವನ್ನು ಬೆಂಬಲಿಸಿದ ಇವರು 20ನೇ ಶತಮಾನದ ಶ್ರೇಷ್ಠ ಉರ್ದು ಕವಿ ಎಂಬ ಖ್ಯಾತಿ ಪಡೆದವರು.

No comments:

Advertisement