Monday, November 23, 2009

ಇಂದಿನ ಇತಿಹಾಸ History Today ನವೆಂಬರ್ 08

ಇಂದಿನ ಇತಿಹಾಸ

ನವೆಂಬರ್ 08

ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel) ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

ಇದು ಎಕ್ಸ್ ರೇ ಪತ್ತೆಯಾದ ದಿನ. 1895ರಲ್ಲಿ ವಿಲ್ಹೆಮ್ ರಾಂಟ್ಜೆನ್ ಗಾಳಿ ತೆಗೆದ ಗಾಜಿನ ಬಲ್ಬ್ ಮುಖಾಂತರ ಹೈ ವೋಲ್ಟೇಜ್ ಬೆಳಕು ಹಾಯಿಸುತ್ತಿದ್ದಾಗ ಅದರಿಂದ `ಅಪರಿಚಿತ ವಿಕಿರಣ' ಹೊರ ಹೊಮ್ಮುತ್ತಿದ್ದುದನ್ನು ಗಮನಿಸಿದ. ಈ ವಿಕಿರಣವು ಬೆಂಚಿನ ಮೇಲೆ ಇದ್ದ ಸಣ್ಣ ಬಾರಿಯಂ ಪ್ಲಾಟಿನೊಸಯನೈಡ್ ಪರದೆಯ ಮೇಲೆ ಹೊಳಪು ಮೂಡಿಸುತ್ತಿತ್ತು. ಅದು ಏನು ಎಂಬುದಾಗಿ ಗೊತ್ತಿಲ್ಲದೇ ಇದ್ದುದರಿಂದ ಆತ ಅದನ್ನು `ಎಕ್ಸ್ ರೇ' ಎಂಬುದಾಗಿ ಕರೆದ. ಆತನ ಗೌರವಾರ್ಥ ನಂತರ ಅದಕ್ಕೆ `ರಾಂಟ್ಜೆನ್ ಕಿರಣ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು. (ಆತನ ಪತ್ನಿಯ ತೋಳನ್ನೇ ಮೊತ್ತ ಮೊದಲ `ಎಕ್ಸ್ ರೇ' ಫೊಟೋಗ್ರಾಫಿ'ಗೆ ಬಳಸಲಾಗಿತ್ತು. ಪ್ರಾರಂಭದಲ್ಲಿ ಜನರಿಗೆ ಇದರ ಬಗ್ಗೆ ಬಹಳ ಗುಮಾನಿ ಇತ್ತು. ಬಟ್ಟೆಯ ಮುಖಾಂತರ ದೇಹದ ಒಳಭಾಗ ವೀಕ್ಷಣೆಗೆ ಇದನ್ನು ಬಳಸಬಹುದೆಂದು ಅವರು ಶಂಕಿಸಿದ್ದರು. ಲಂಡನ್ನಿನ ಕಂಪೆನಿಯೊಂದು ಇದೇ ಹಿನ್ನೆಲೆಯಲ್ಲಿ `ಎಕ್ಸ್ ರೇ ಪ್ರೂಫ್ ಅಂಡರ್ ವೇರ್' ತಯಾರಿಸಿರುವುದಾಗಿಯೂ ಜಾಹೀರಾತು ನೀಡಿತ್ತು.)

2008: ಚಂದ್ರನ ಸಮಗ್ರ ಅಧ್ಯಯನಕ್ಕೆ ಪಯಣ ಬೆಳೆಸಿದ `ಚಂದ್ರ ಯಾನ-1' ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು. ಭೂಮಿಯಿಂದ ಸುಮಾರು 3.80 ಲಕ್ಷ ಕಿಲೋಮೀಟರ್ ದೂರದಲ್ಲಿದ್ದ ನೌಕೆಯು ಸಂಜೆ 5.15ಕ್ಕೆ ಚಂದ್ರನ ಕಕ್ಷೆ ಪ್ರವೇಶಿಸಿದಾಗ, ವಿಜ್ಞಾನಿಗಳ ಸಂತಸ ಇಮ್ಮಡಿಯಾಯಿತು. `ನೌಕೆಗೆ ಅಳವಡಿಸಿದ ದ್ರವ ಇಂಧನದ ಲ್ಯಾಮ್ ರಾಕೆಟನ್ನು' ಉರಿಸಿ, ಚಂದ್ರನ ಕಕ್ಷೆಯ ಸಮೀಪಕ್ಕೆ ಸಾಗುವಂತೆ ಮಾಡಲಾಗಿತ್ತು. ಈದಿನ ಸಂಜೆ ಈ ರಾಕೆಟನ್ನು 817 ಸೆಕೆಂಡುಗಳ ಕಾಲ ಮತ್ತೊಮ್ಮೆ ಉರಿಸಿ, ಚಂದ್ರನ ಕಕ್ಷೆ ಪ್ರವೇಶಿಸುವಂತೆ ಮಾಡಲಾಯಿತು. ಕ್ಲಿಷ್ಟಕರವಾದ ಈ ಕಾರ್ಯ ಯಶಸ್ವಿಯಾದಾಗ ಸಂತಸವಾಯಿತು' ಎಂದು ಚಂದ್ರಯಾನ ಯೋಜನೆ ನಿರ್ದೇಶಕ ಎಂ.ಅಣ್ಣಾದೊರೈ ಹೇಳಿದರು.

2008: ಹೈಟಿಯ ಪೆಟಿಯಾನ್- ವಿಲ್ಲಿಯ ಶಾಲಾ ಕಟ್ಟಡವೊಂದು ಕುಸಿದು 58 ಶಾಲಾ ಮಕ್ಕಳು ಮತ್ತು ಅಧ್ಯಾಪಕರು ಸಾವನ್ನಪ್ಪಿ, ನೂರಾರು ವಿದ್ಯಾರ್ಥಿಗಳು ಗಾಯಗೊಂಡರು. ಬೆಳಗ್ಗೆ 10 ಗಂಟೆ ವೇಳೆಗೆ ಮೂರು ಅಂತಸ್ತಿನ ಶಾಲಾ ಕಟ್ಟಡ ಕುಸಿದು ಅನಾಹುತ ಸಂಭವಿಸಿತು.

2008: ಹಲವು ಸಾಧನೆಗಳನ್ನು ತೋರಿರುವ ಭಾರತೀಯ ವಿಮಾನ ಯಾನ ಕ್ಷೇತ್ರ ಮತ್ತೊಂದು ಗರಿಯನ್ನು ತನ್ನ ಮುಡಿಗೇ ರಿಸಿಕೊಂಡಿತು. ಸ್ವದೇಶಿ ನಿರ್ಮಿತ `ತೇಜಸ್' ಯುದ್ಧ ವಿಮಾನವನ್ನು ಈ ರಾತ್ರಿ ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿತು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 8.05ರ ಸುಮಾರಿಗೆ `ತೇಜಸ್'ನ್ನು ಕೆಲ ದೂರದವರೆಗೆ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿದೆವು ಎಂದು ಹಿಂದೂಸ್ಥಾನ್ ಏರೊನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಅಧಿಕಾರಿ ತಿಳಿಸಿದರು. ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರಿನ ಕ್ಯಾಪ್ಟನ್ ಎನ್.ತಿವಾರಿ ವಿಮಾನದ ಪೈಲಟ್ ಆಗಿ ಯಶಸ್ವಿ ಹಾರಾಟ ನಡೆಸಿದರು.
2008: ಏರಿದ ನಷ್ಟ ಭರಿಸಲಾಗದೆ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್ವೇಸ್ ಕನಿಷ್ಠ 25 ವಿದೇಶಿ ಪೈಲಟ್ಗಳನ್ನು ಸೇವೆಯಿಂದ ವಜಾಗೊಳಿಸಿತು. ಈ ವಿದೇಶಿ ಪೈಲಟ್ಗಳಿಗೆ ಮಾಸಿಕ 15,000 ದಿಂದ 18,000 ಅಮೆರಿಕ ಡಾಲರುವರೆಗೆ ವೇತನ ನೀಡಲಾಗುತ್ತಿತ್ತು. ಜೊತೆಗೆ ಪಂಚತಾರಾ ಹೋಟೆಲ್ ವಾಸ ಸೌಕರ್ಯ, ತಮ್ಮ ಸ್ವದೇಶಕ್ಕೆ ಹೋಗಿ ಬರಲು ಬಿಸಿನೆಸ್ ಕ್ಲಾಸ್ ಪ್ರಯಾಣ ಭತ್ಯೆ ಇತ್ಯಾದಿ ಸೌಲಭ್ಯಗಳನ್ನೂ ನೀಡಲಾಗುತ್ತಿತ್ತು.

2007: ತಮ್ಮ ವೃತ್ತಿ ಬದುಕಿನ ಮುಸ್ಸಂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಮೂಲಕ ಅನಿಲ್ ಕುಂಬ್ಳೆ ವಿಶ್ವದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ತಂಡದ ಚುಕ್ಕಾಣಿ ಹಿಡಿದವರ ಪೈಕಿ ಅನಿಲ್ ಕುಂಬ್ಳೆ ಈಗ ಅಗ್ರಗಣ್ಯರು. ತಂಡದ ನಾಯಕತ್ವ ಹಿಡಿಯುವ ಮುನ್ನ ಅವರು 118 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಟೀವ್ ವಾ 111 ಪಂದ್ಯಗಳ ನಂತರ ಸಾರಥ್ಯ ವಹಿಸಿದ್ದರು. ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 97 ಪಂದ್ಯಗಳ ಬಳಿಕ, ಭಾರತದ ವೆಂಗ್ ಸರ್ಕಾರ್ 95 ಪಂದ್ಯಗಳ ಬಳಿಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

2006: ಹಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಬೆಸಿಲ್ ಪೊಲಿಜ್ಯುರಸ್ (61) ಲಾಸ್ ಏಂಜೆಲ್ಸಿನಲ್ಲಿ ನಿಧನರಾದರು. 80ರ ದಶಕದಲ್ಲಿ ಸಂಗೀತ ಸಾಮ್ರಾಟರಾಗಿ ಮೆರೆದಿದ್ದ ಬೆಸಿಲ್ 1989ರಲ್ಲಿ ಪ್ರತಿಷ್ಠಿತ `ಎಮ್ಮಿ' ಪ್ರಶಸ್ತಿಗೆ ಪಾತ್ರರಾಗಿದ್ದರು. ಸಾಹಸ ಚಿತ್ರಗಳಾದ ಕ್ಯಾನನ್ ದಿ ಬಾರ್ಬರಿಯನ್ ಮತ್ತು ಕ್ಯಾನನ್ ಡೆಸ್ಟ್ರಾಯರ್ ಚಿತ್ರಕ್ಕೆ ಅವರು ಸಂಗೀತ ನೀಡಿದ್ದರು.

2006: ಗರಿಷ್ಠ 10 ಸಾವಿರ ಟನ್ ತೂಕದ ಹಡಗನ್ನು ಮೇಲೆತ್ತಬಹುದಾದ ಹಾಗೂ ಏಕಕಾಲಕ್ಕೆ 4 ಹಡಗುಗಳನ್ನು ದುರಸ್ತಿ ಮಾಡಬಹುದಾದ ಹಡಗು ಮೇಲೆತ್ತುವ ದೇಶದ ಪ್ರಪ್ರಥಮ `ಶಿಪ್ ಲಿಫ್ಟ್' ವ್ಯವಸ್ಥೆಯನ್ನು ಪಶ್ಚಿಮ ಕಮಾಂಡಿನ ನೌಕಾ ಮುಖ್ಯಸ್ಥ ವೈಸ ಅಡ್ಮಿರಲ್ ಸಂಗ್ರಾಮ್ ಸಿಂಗ್ ಬೈಸ್ ಉದ್ಘಾಟಿಸಿದರು. ಇದರ ಉದ್ದ 175 ಮೀಟರ್, ಅಗಲ 28 ಮೀಟರ್. ತಲಾ 430 ಟನ್ ಭಾರ ಹೊರುವ 42 ಫ್ಲಾಟ್ ಫಾರಂಗಳನ್ನು ಸೇರಿಸಿ ಸಿದ್ಧಪಡಿಸಿದ ಈ ಲಿಫ್ಟನ್ನು ಅಮೆರಿಕದ ರೋಲ್ಸ್ ರಾಯ್ ಅಂಗಸಂಸ್ಥೆ ಸಿಂಕ್ರೋಸಾಫ್ಟ್ ಸಿಂಕ್ ಯುಎಸ್ ಎ ನಿರ್ಮಿಸಿದೆ. ನಾರ್ವೆಯ ಟಿಟಿಎಸ್ ಕಂಪೆನಿ ಹಡಗು ವರ್ಗಾವಣೆ ವ್ಯವಸ್ಥೆಯನ್ನು ರೂಪಿಸಿದೆ.

2006: ಲಾಭದ ಹುದ್ದೆ ಮಸೂದೆಗೆ ರಾಜ್ಯಪಾಲರ ಅಂಕಿತ ಲಭಿಸಿತು. ಇದರಿಂದ ನಿಗಮ, ಮಂಡಳಿಗಳ ಸಹಿತ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಎದುರಾಗಿದ್ದ ಅಡ್ಡಿ ನಿವಾರಣೆಗೊಂಡಿತು.

2006: ಒಂದು ದಶಕದಿಂದ ನಡೆಯುತ್ತಿದ್ದ ಹೋರಾಟವನ್ನು ಸ್ಥಗಿತಗೊಳಿಸಿ ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಲು ನೇಪಾಳ ಸರ್ಕಾರ ಹಾಗೂ ಮಾವೋವಾದಿ ಬಣಗಳ ಮಧ್ಯೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿತು. ಪ್ರಧಾನಿ ಕೊಯಿರಾಲ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ಅಂಶಗಳ ಒಪ್ಪಂದ ಸಿದ್ಧಪಡಿಸಲಾಯಿತು.

2000: ಉತ್ತರಾಂಚಲವು ಭಾರತದ 27ನೇ ರಾಜ್ಯವಾಯಿತು. ಡೆಹ್ರಾಡೂನ್ ಅದರ ರಾಜಧಾನಿಯಾಯಿತು.

1999: ಹೈದರಾಬಾದಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಒಂದು ದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್ ಗಳಿಸುವ ಮೂಲಕ ಅತ್ಯಂತ ಹೆಚ್ಚು ರನ್ ಗಳಿಸಿದ `ಬ್ಯಾಟ್ಸ್ ಮನ್ ಜೋಡಿ' ಎನಿಸಿದರು.

1966: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ ರಾಮೇಶ್ವರಿ ನೆಹರು ನಿಧನರಾದರು.

1958: ಚಂದ್ರಗ್ರಹ ಶೋಧಕ್ಕೆಂದು ಅಮೆರಿಕ ಪ್ರಯೋಗಿಸಿದ ಮೂರನೇ ರಾಕೆಟ್ ವಿಫಲವಾಯಿತು. ಕೇಪ್ ಕೆನವರಾಲಿನ ಪ್ರಯೋಗ ಕ್ಷೇತ್ರದಿಂದ ಒಂದು ಸಾವಿರ ಮೈಲಿ ಮೇಲಕ್ಕೆ ಹೋದ ನಂತರ ಆ ರಾಕೆಟ್ ಮಧ್ಯ ಆಫ್ರಿಕದ ಪೂರ್ವಭಾಗದ ಪ್ರದೇಶದ ಮೇಲೆ ಚೂರು ಚೂರಾಯಿತು. 88 ಅಡಿ ಉದ್ದದ ವಿಮಾನ ಪಡೆಯ ಆ ರಾಕೆಟಿನ ಮೂರನೆಯ ಹಂತವು ಹೊತ್ತಿಕೊಳ್ಳದೆ, ಗಂಟೆಗೆ ಹದಿನಾರು ಸಾವಿರ ಮೈಲಿ ವೇಗವನ್ನು ಮುಟ್ಟಿದ ನಂತರ ಭೂಮಿಯ ವಾತಾವರಣಕ್ಕೇ ವಾಪಸಾಯಿತು.

1956: ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel) ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

1953: ಸಾಹಿತಿ ತಾರಾನಾಥ ಜನನ.

1933: ಸಾಹಿತಿ ಎಂ.ಆರ್. ನರಸಿಂಹನ್ ಜನನ.

1929: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿ ಧುರೀಣ ಲಾಲ್ ಕೃಷ್ಣ ಆಡ್ವಾಣಿ ಹುಟ್ಟಿದ ದಿನ.

1923: ದಂಗೆ ಮೂಲಕ ಜರ್ಮನಿಯ ಅಧಿಕಾರ ವಶಪಡಿಸಿಕೊಳ್ಳುವ ಅಡಾಲ್ಫ್ ಹಿಟ್ಲರನ ಮೊದಲ ಪ್ರಯತ್ನ ವಿಫಲವಾಯಿತು. ಆತ ಬಂಧಿತನಾಗಿ ಸೆರೆಮನೆ ಸೇರಿದ. ಸೆರೆಮನೆಯಲ್ಲಿ ಇದ್ದಾಗಲೇ ತನ್ನ `ಮೆಯ್ನ್ ಕಾಮ್ಫ್' ಪುಸ್ತಕವನ್ನು ರುಡಾಲ್ಫ್ ಹೆಸ್ ಗೆ ಹೇಳಿ ಬರೆಯಿಸಿದ.

1908: ಹಾಸನದಲ್ಲಿ ಹುಟ್ಟಿ ಇಂಗ್ಲಿಷ್ ಸಾಹಿತ್ಯ ರಚನೆಯಲ್ಲಿ ವಿಶ್ವಮಾನ್ಯತೆ ಗಳಿಸಿದ ಹಾಸನ ರಾಜಾರಾವ್ (8-11-1908ರಿಂದ 8-7-2006) ಅವರು ಎಚ್. ವಿ. ಕೃಷ್ಣಸ್ವಾಮಿ - ಗೌರಮ್ಮ ದಂಪತಿಯ ಮಗನಾಗಿ ಈದಿನ ಜನಿಸಿದರು.

No comments:

Advertisement