ಇಂದಿನ ಇತಿಹಾಸ
ಅಕ್ಟೋಬರ್ 31
ಭಾರತದ ಪ್ರಧಾನಿ ಇಂದಿರಾಗಾಂಧಿ ಅವರನ್ನು ನವದೆಹಲಿಯಲ್ಲಿ ಸಿಖ್ ಅಂಗರಕ್ಷಕರು ಕೊಲೆಗೈದರು. ಅವರ ಪುತ್ರ ರಾಜೀವಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟವನ್ನು ಏರಿದರು.
2008: ತನ್ನನ್ನು ತಾನು `ದಿ ಇಸ್ಲಾಮಿಕ್ ಸೆಕ್ಯೂರಿಟಿಫೋರ್ಸರ್ (ಇಂಡಿಯನ್ ಮುಜಾಹಿದ್ದೀನ್)' ಎಂದು ಕರೆದುಕೊಂಡ ಅಪರಿಚಿತ ಉಗ್ರ ಸಂಘಟನೆಯೊಂದು ಅಸ್ಸಾಂ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿತು. `ಐ ಎಸ್ ಎಫ್- ಐಎಂಗೆ ಸೇರಿರುವ ನಾವು ಅಸ್ಸಾಮಿಲ್ಲಿ ಹಿಂದಿನ ದಿನ ನಡೆದ ಸ್ಫೋಟದ ಹೊಣೆ ಹೊರುತ್ತಿದ್ದೇವೆ. ಅಸ್ಸಾಂ,ಭಾರತದ ಇತರೆಡೆಯೂ ಭವಿಷ್ಯದಲ್ಲಿ ಇಂತಹ ಸ್ಥಿತಿ ಎದುರಿಸಬೇಕಾಗುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಎಲ್ಲಾ ಪವಿತ್ರ ಸದಸ್ಯರು ಮತ್ತು ಸಹಭಾಗಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ, ಅಮೀನ್.' ಎಂಬ ಹೇಳಿಕೆ ಸ್ಥಳೀಯ ಟಿವಿ ಚಾನೆಲ್ಗೆ ಬಂದ ಎಸ್ ಎಂ ಎಸ್ ಸಂದೇಶದಲ್ಲಿ ವ್ಯಕ್ತವಾಯಿತು.
2008: ಹದಿಮೂರು ಜನರು ವಿವಿಧ ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ಮೂಲಕ ಅಸ್ಸಾಮ್ ಸರಣಿ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 77ಕ್ಕೆ ಏರಿತು.
2008: ನಾಡಿನ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಸಮಾಜ ಬಾಂಧವರು, ವಿವಿಧ ಮಠಾಧೀಶರ ಸಮಕ್ಷಮದಲ್ಲಿ ಕೋಲಿ/ಗಂಗಾಮತ ಸಮಾಜದ ವೇದವ್ಯಾಸ ಮಹರ್ಷಿ ಗುರುಪೀಠದ ಪ್ರಥಮ ಗುರುಗಳಾದ ಸಹಜಾನಂದ ಸರಸ್ವತಿ ಸ್ವಾಮೀಜಿಗಳ ಪಟ್ಟಾಭಿಷೇಕ ಮಹೋತ್ಸವ ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. ನಗರದ ಹೊರವಲಯದಲ್ಲಿನ ವಿದ್ಯಾನಗರದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರೋಚ್ಚಾರಣೆ, ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಪಟ್ಟಾಭಿಷೇಕ ಜರುಗಿತು. ತಮ್ಮ ಸಮಾಜದ ಗುರುಪೀಠ ಸ್ಥಾಪನೆ ಹಾಗೂ ಪ್ರಥಮ ಗುರುಗಳ ಪಟ್ಟಾಭಿಷೇಕ ಸಮಾರಂಭಕ್ಕೆ ಸಮಾಜ ಬಾಂಧವರು ಸಾಕ್ಷಿಯಾದರು.
2008: ಜನತಾದಳ (ಎಸ್) ಶಾಸಕರು ಹಾಗೂ ಮುಖಂಡರ ಒತ್ತಾಯಕ್ಕೆ ಮಣಿದು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರ ವಿರೋಧದ ನಡುವೆಯೂ ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
2008: ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಮೇಲೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಲಾಯಿತು.
2007: ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡಲು ರಚಿಸಲಾಗಿದ್ದ ಲಿಬರಾನ್ ಆಯೋಗದ ಕಾಲಾವಧಿಯನ್ನು ಮತ್ತೆ ಎರಡು ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಈಗಾಗಲೇ 7.20 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರೂ ಇನ್ನು ವರದಿಯನ್ನು ಅಂತಿಮಗೊಳಿಸದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿತು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಕಳೆದ 15 ವರ್ಷಗಳಿಂದ ವರದಿ ತಯಾರಿಸುತ್ತಲೇ ಇರುವ ಈ ಆಯೋಗವು ಇದರೊಂದಿಗೆ 42ನೇ ಬಾರಿಗೆ ಕಾಲಾವಧಿ ವಿಸ್ತರಣೆ ಪಡೆದಂತಾಯಿತು.
2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ನಾಲ್ಕು ದಿನಗಳು ಕಳೆದ ನಂತರ ಈದಿನ ರಾತ್ರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರಿಗೆ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಧ್ಯಂತರ ವರದಿಯನ್ನು ರವಾನಿಸಿದರು. ಕಾನೂನು ಮತ್ತು ಇತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು ಮತ್ತೊಂದು ವರದಿಯನ್ನು ಸದ್ಯದಲ್ಲೇ ಕಳುಹಿಸಿಕೊಡಲಾಗುವುದು ಎಂದು ರಾಜಭವನದ ಪತ್ರಿಕಾ ಪ್ರಕಟಣೆ ತಿಳಿಸಿತು. ತಮ್ಮ ವರದಿಯಲ್ಲಿ ವಿಧಾನಸಭೆ ಅಮಾನತನ್ನು ಹಿಂತೆಗೆದುಕೊಳ್ಳುವ ಅಥವಾ ವಿಸರ್ಜಿಸುವ ಬಗ್ಗೆ ಯಾವುದೇ ಶಿಫಾರಸು ಮಾಡದ ರಾಜ್ಯಪಾಲರು ಮುಂದಿನ ತೀರ್ಮಾನವನ್ನು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟರು. ಸರ್ಕಾರ ರಚನೆಗೆ ಆಹ್ವಾನಿಸದೆ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ಧೋರಣೆ ವಿರುದ್ಧ ನಗರದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯು, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
2007: ಉತ್ತರದ ಕ್ಯಾಲಿಫೋರ್ನಿಯಾ ಸಮೀಪದ ಸ್ಯಾನ್ ಜೋಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 5.6 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿತು. ಜಪಾನ್ ಮತ್ತು ಟರ್ಕಿಯಲ್ಲೂ ಭೂಕಂಪ ಸಂಭವಿಸಿತು. ಈ ಪ್ರದೇಶಗಳಲ್ಲಿ ಭೂಕಂಪದ ತೀವ್ರತೆ ಕ್ರಮವಾಗಿ 7.1 ಮತ್ತು 5.1 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಯಿತು.
2007: ಅಶಿಸ್ತಿನ ವರ್ತನೆ ಆರೋಪದ ಮೇಲೆ `ದುನಿಯಾ' ಖ್ಯಾತಿಯ ನಟ ವಿಜಯ್ ಅವರನ್ನು ಒಂದು ವರ್ಷ ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಲು ಸಂಧಾನ ಸಮಿತಿ ತೀರ್ಮಾನಿಸಿತು. ಎಸ್. ನಾರಾಯಣ್ ನಿರ್ದೇಶನದ `ಚಂಡ' ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಭಾಗವಹಿಸುವಂತೆ ಈ ಹಿಂದೆ ಸಂಧಾನ ಸಮಿತಿ ಸೂಚಿಸಿತ್ತು. ಆದರೆ ವಿಜಯ್ ಈ ಸೂಚನೆಯನ್ನು ಪಾಲಿಸಿರಲಿಲ್ಲ. ಇದನ್ನು ಅಶಿಸ್ತು ಎಂದು ಪರಿಗಣಿಸಿ ಬಹಿಷ್ಕಾರದ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಮಿತಿ ಹೇಳಿತು.
2007: ಕೆಂಗೇರಿ ಬಳಿಯ ಶ್ರೀನಿವಾಸಪುರದ ಓಂಕಾರ ಹಿಲ್ಸಿನಲ್ಲಿ ಇರುವ ಓಂಕಾರಾಶ್ರಮದ ಚರ ಮತ್ತು ಸ್ಥಿರಾಸ್ತಿಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ನಗರ ದಕ್ಷಿಣ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 24ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. 2007ರ ನವೆಂಬರ್ 5ರವರೆಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಮೂರ್ತಿ ಎ.ಸಿ.ಕಬ್ಬಿಣ ಆದೇಶ ನೀಡಿದರು.
2006: ವರ್ಣಭೇದವನ್ನು ಪ್ರತಿಪಾದಿಸಿ, ಅಂತಾರಾಷ್ಟ್ರೀಯ ನಿಷೇಧದ ನಡುವೆ ಆಳ್ವಿಕೆ ನಡೆಸಿದ್ದ, `ಗ್ರೇಟ್ ಕ್ರೊಕೋಡೈಲ್' ಎಂದೇ ಖ್ಯಾತರಾಗಿದ್ದ ದಕ್ಷಿಣ ಆಫ್ರಿಕದ ಮಾಜಿ ಪ್ರಧಾನಿ ಹಾಗೂ ಮಾಜಿ ಅಧ್ಯಕ್ಷ ಪೀಟರ್ ವಿಲ್ಹೆಮ್ ಬೋಥಾ (90) ವೆಸ್ಟರ್ನ್ ಕೇಪ್ ನ ತಮ್ಮ ಗ್ರಾಮದಲ್ಲಿ ನಿಧನರಾದರು. ವರ್ಣಭೇದದ ಕಟ್ಟ ಕಡೆಯ ಕಟ್ಟಾ ಪ್ರತಿಪಾದಕರಾಗಿದ್ದ ಬೋಥಾ `ವರ್ಣಭೇದದ ಸಂಕೇತ' ಎಂದೇ ಬಿಂಬಿತರಾಗಿದ್ದರು. ವ್ಯಾಪಕ ವಿರೋಧ, ಪ್ರತಿಭಟನೆಗಳ ಮಧ್ಯೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಅವರು ಅಧಿಕಾರದಲ್ಲಿದ್ದರು.
2006: ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಈ ದಿನ ರೈಲ್ವೆ ಹಳಿಗಳ ಬದಲಿಗೆ ರಸ್ತೆ ಮೇಲೆ ರೈಲುಗಾಡಿ ಚಲಿಸಿತು. ಅದು ಚಲಿಸಿದ್ದು 300 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹ್ದೆದಾರಿಯಲ್ಲಿ. ಡೀಸೆಲ್ ಸಂಚಾರಿ ಬೋಗಿಗಳ (ಮೊಬೈಲ್ ಯೂನಿಟ್) ಈ ರೈಲು ಜಮ್ಮು ರೈಲ್ವೆ ನಿಲ್ದಾಣದಿಂದ ಕಾಶ್ಮೀರದ ಬದ್ಗಾಮ್ ನಿಲ್ದಾಣಕ್ಕೆ ಹಳಿಗಳ ಬದಲಿಗೆ ರಸ್ತೆಯ ಮೂಲಕ ಚಲಿಸುವಾಗ ಮಂತ್ರಘೋಷದೊಂದಿಗೆ ಹೂವಿನ ಮಳೆಗರೆಯಲಾಯಿತು. ಲಾರಿ, ಬಸ್ಸುಗಳ ನಡುವೆ ಸ್ಪರ್ಧಿಸುತ್ತಾ ಓರೆಕೋರೆಯ ರಸ್ತೆಯಲ್ಲಿ ರೈಲು ಓಡಿದಾಗ, ಜನರು ಮಂತ್ರಮುಗ್ಧರಾಗಿ ವೀಕ್ಷಿಸಿ ಆನಂದಿಸಿದರು. ಹಿಮಚ್ಛಾದಿತ ಕಾಶ್ಮೀರ ಕಣಿವೆಯಲ್ಲಿ 2007ರ ಫೆಬ್ರುವರಿ ತಿಂಗಳಲ್ಲಿ ಈ ವಿಶೇಷ ರೈಲು ಅಧಿಕೃತ ಸಂಚಾರಕ್ಕೆ ಸಜ್ಜಾಗಲಿದ್ದು, ಈ ದಿನ ನಡೆದದ್ದು ಇದರ ಪ್ರಾಯೋಗಿಕ ಓಟ. ಈ ಮೂಲಕ 4700 ಕೋಟಿ ರೂಪಾಯಿಗಳ ವೆಚ್ಚದ ಜಮ್ಮು- ಉಧಂಪುರ- ಖ್ವಾಜಿಗುಂಡ್- ಶ್ರೀನಗರ- ಬಾರಾಮುಲ್ಲಾ ರಾಷ್ಟ್ರೀಯ ರೈಲು ಯೋಜನೆಗೆ ಮಾತ್ರವಲ್ಲದೆ, ಇಡೀ ಭಾರತೀಯ ರೈಲ್ವೆಯ ಇತಿಹಾಸಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಯಿತು. ಈ ರೈಲಿಗೆ 36 ವಿಶೇಷ ಲಾರಿ ಚಕ್ರಗಳಿದ್ದು 460 ಎಚ್ ಪಿ (ಅಶ್ವಶಕ್ತಿಯ) ವಿಶೇಷ ಎಂಜಿನ್ ಅಳವಡಿಸಲಾಗಿತ್ತು.
2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತಹ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ (ಯುಎನ್ಇಪಿ) ಅಡಿಯಲ್ಲಿ ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ನಿರ್ಮಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗ ಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜು ಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರ್ ನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ. ವಾತಾವರಣವೂ ಬಿಸಿ ಆಗುವುದಿಲ್ಲ.
2006: ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾದಳದ ಮುಖ್ಯಸ್ಥರಾಗಿ ಮುಖ್ಯ ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಂದ ಅಧಿಕಾರ ವಹಿಸಿಕೊಂಡರು.
2005: ಖ್ಯಾತ ಪಂಜಾಬಿ ಹಾಗೂ ಹಿಂದಿ ಲೇಖಕಿ ಅಮೃತಾ ಪ್ರೀತಮ್ (86) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. 1919ರ ಆಗಸ್ಟ್ 31ರಂದು ಜನಿಸಿದ ಅಮೃತಾ ಪಂಜಾಬಿ ಸಾಹಿತ್ಯದ ಮೇರು ಸಾಹಿತಿ. ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.
2005: ದೆಹಲಿಯ ಕೆಂಪುಕೋಟೆ ಮೇಲೆ 2000ರ ಡಿಸೆಂಬರ್ 22ರಂದು ನಡೆಸಿದ ದಾಳಿ ಪ್ರಕರಣದ ಆರೋಪಿ ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರಗಾಮಿ ಮಹಮ್ಮದ್ ಅರಿಫ್ ಯಾನೆ ಅಶ್ಭಾಕನಿಗೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಒ.ಪಿ. ಸೈನಿ ಮರಣದಂಡನೆ ವಿಧಿಸಿದರು. ನಜೀರ್ ಅಹಮದ್ ಖಾಸಿದ್ ಹಾಗೂ ಆತನ ಪುತ್ರ ಫಾರೂಕ್ ಅಹಮದ್ ಖಾಸಿದ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕೆಂಪುಕೋಟೆಯ 17ನೇ ಶತಮಾನದ ಮೊಘಲ್ ಸ್ಮಾರಕಕ್ಕೆ ನುಗ್ಗಿದ್ದ ಉಗ್ರರು ಇಬ್ಬರು ಸೈನಿಕರು ಹಾಗೂ ನಾಗರಿಕನೊಬ್ಬನನ್ನು ಗುಂಡಿಟ್ಟು ಕೊಂದಿದ್ದರು.
1987: ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಮೂವರು ಆಟಗಾರರನ್ನು ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ ಭಾರತಿಯ ಕ್ರಿಕೆಟ್ ಆಟಗಾರ ಚೇತನ್ ಶರ್ಮಾ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾದರು.
1984: ಭಾರತದ ಪ್ರಧಾನಿ ಇಂದಿರಾಗಾಂಧಿ ಅವರನ್ನು ನವದೆಹಲಿಯಲ್ಲಿ ಸಿಖ್ ಅಂಗರಕ್ಷಕರು ಕೊಲೆಗೈದರು. ಅವರ ಪುತ್ರ ರಾಜೀವಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟವನ್ನು ಏರಿದರು.
1975: ಖ್ಯಾತ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ನಿಧನ.
1951: ಇಂಗ್ಲೆಂಡಿನ ಬೆರ್ಕ್ ಶೈರಿನ ಸ್ಲೊವ್ ನಲ್ಲಿ ಮೊತ್ತ ಮೊದಲ ಬಾರಿಗೆ `ಝೀಬ್ರಾ ಕ್ರಾಸಿಂಗ್' ನ್ನು ಅನುಷ್ಠಾನಗೊಳಿಸಲಾಯಿತು. ರಸ್ತೆ ದಾಟುವಾಗ ಸಂಭವಿಸುತ್ತಿದ್ದ ಅಪಘಾತಗಳಲ್ಲಿ ಪಾದಚಾರಿಗಳ ಸಾವನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ನಡೆಸಿದ ಇತರ ಪ್ರಯತ್ನಗಳು ವಿಫಲಗೊಂಡ ಬಳಿಕ ರಸ್ತೆಗೆ ಅಡ್ಡವಾಗಿ ಬಿಳಿ ಹಾಗೂ ಕಪ್ಪು ಬಣ್ಣಗಳ ದಪ್ಪ ಪಟ್ಟಿಗಳನ್ನು ಹಾಕಿ ವಾಹನ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.
1949: ಸಾಹಿತ್ಯ, ಸಂಗೀತ, ನಟನೆ, ವಾಜ್ಞಯ ಹೀಗೆ ಹಲವಾರು ಪ್ರತಿಭೆಗಳ ಸಂಗಮವಾದ ಅನಸೂಯಾದೇವಿ ಅವರು ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ- ಕಾವೇರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1933: ವಾಷಿಂಗ್ಟನ್, ಜೆಫರ್ಸನ್, ಲಿಂಕನ್ ಮತ್ತು ಥಿಯೋಡೋರ್ ರೂಸ್ ವೆಲ್ಟ್ ಈ ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರ ಕಲ್ಲಿನಲ್ಲಿ ಕೆತ್ತಲಾದ ಶಿರಗಳನ್ನು ಒಳಗೊಂಡ `ಮೌಂಟ್ ರಶ್ಮೋರ್' ಸ್ಮಾರಕ ಯೋಜನೆಯನ್ನು ಅಂತಿಮಗೊಳಿಸಲಾಯಿತು. ದಕ್ಷಿಣ ಡಕೋಟದ ಕೀಸ್ಟೋನ್ ಸಮೀಪ ಈ ಸ್ಮಾರಕಗಳನ್ನು ನಿರ್ಮಿಸಲಾಯಿತು. ಹದಿನಾಲ್ಕು ವರ್ಷಗಳ ಕಾಲ ಇದರ ಯೋಜನಾ ಶಿಲ್ಪಿಯಾಗಿದ್ದ ಗುಟ್ ಝೋನ್ ಬೋರ್ಗ್ಲರ್ಮ್(1867-1941) ಕೆಲಸ ಪೂರ್ಣಗೊಳ್ಳುವುದಕ್ಕೆ 8 ತಿಂಗಳ ಮೊದಲು ಮೃತರಾದಾಗ ಅವರ ಪುತ್ರ ಲಿಂಕನ್ ಬೋರ್ಗ್ಲರ್ಮ್ ಅದನ್ನು ಪೂರ್ಣಗೊಳಿಸಿದರು. 60 -70 ಅಡಿ ಎತ್ತರದ ಈ ಮುಖಗಳು 97 ಕಿಮೀಗಳಷ್ಟು ದೂರದಿಂದಲೇ ಕಾಣಿಸುತ್ತವೆ.
1926: ಖ್ಯಾತ ಅಮೆರಿಕನ್ ಐಂದ್ರಜಾಲಿಕ ಹ್ಯಾರಿ ಹೌಡಿನಿ ಅವರು ತಮ್ಮ 52ನೇ ವಯಸ್ಸಿನಲ್ಲಿ ಮೃತರಾದರು.
1926: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ (ಐಟಕ್) ಉದ್ಘಾಟನಾ ಅಧಿವೇಶನ ಬಾಂಬೆಯಲ್ಲಿ (ಈಗಿನ ಮುಂಬೈ) ನಡೆಯಿತು. ಲಾಲಾ ಲಜಪತ್ ರಾಯ್ ಇದರ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.
1919: ಖ್ಯಾತ ಕೈಗಾರಿಕೋದ್ಯಮಿ ಜೈ ಕಿಸಾನ್ ಹರಿ ವಲ್ಲಭ ದಾಸ್ ಜನನ.
1875: ಸ್ವಾತಂತ್ರ್ಯ ಯೋಧ, ಮುತ್ಸದ್ದಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ವಲ್ಲಭಭಾಯಿ ಝವೆರ್ ಭಾಯಿ ಪಟೇಲ್ (1875-1950) ಜನ್ಮದಿನ. `ಸರ್ದಾರ್' ಎಂದೇ ಇವರು ಜನಪ್ರಿಯರಾಗಿದ್ದರು.
No comments:
Post a Comment