ಇಂದಿನ ಇತಿಹಾಸ
ಜನವರಿ 25
ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.
2009: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಗೋಮೂತ್ರದ ಅಧಿಕ ಉತ್ಪಾದನೆಗಾಗಿ ಉತ್ತರಾಖಂಡ ಸರ್ಕಾರವು ರಾಜ್ಯದ ಎಲ್ಲೆಡೆ 100 ಗೋಮೂತ್ರ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಯಿತು. ಇದರಿಂದ ಪಶುಸಂಗೋಪನೆಯಲ್ಲಿ ತೊಡಗಿದ ರೈತರು ಗೋಮೂತ್ರ ಮಾರಾಟ ಮಾಡಿ ಹಣ ಗಳಿಸಲು ಅವಕಾಶ ಲಭಿಸಿತು. 'ಗೋಮೂತ್ರದಿಂದ ಔಷಧ ತಯಾರಿ ಮಾಡುವ ಹಾಗೂ ಅವುಗಳನ್ನು ಇತರ ರಾಜ್ಯಗಳಿಗೆ ಕಳುಹಿಸಿಕೊಡುವ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಸ್ಪರ್ಶ ನೀಡುತ್ತಿದೆ' ಎಂದು ಪಶುಸಂಗೋಪನೆ ಮತ್ತು ಕೃಷಿ ಸಚಿವ ತ್ರಿವೇಂದ್ರ ರಾವತ್ ಹೇಳಿದರು. ರಾಜ್ಯದ ಹಲವೆಡೆ ಈಗಾಗಲೇ ಇಂತಹ ಕೇಂದ್ರಗಳು ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯರನ್ನೂ ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆ ಪಡೆದು ಕೇಂದ್ರಗಳ ಸ್ಥಾಪನೆಗೆ ಗಂಭೀರ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದರು.
2009: ನವದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಪಾಕಿಸ್ಥಾನಿ ಉಗ್ರರು ನೊಯಿಡಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಪೊಲೀಸರ ಗುಂಡಿಗೆ ಬಲಿಯಾದರು.
2009: ಲಾಹೋರಿನ ಮುರ್ದಿಕೆಯಲ್ಲಿ ಲಷ್ಕರ್ -ಎ-ತೊಯ್ಬಾದ ಧಾರ್ಮಿಕ ಘಟಕ ಜಮಾತ್ ಉದ್-ದಾವಾದ (ಜೆಯುಡಿ) ಪ್ರಧಾನ ಕಚೇರಿಯನ್ನು ಪಾಕಿಸ್ಥಾನ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡಿತು. ಇತ್ತೀಚೆಗೆ ತಾನೆ ಪಾಕಿಸ್ಥಾನದ ಪಂಜಾಬಿನ ಪ್ರಾಂತೀಯ ಸರ್ಕಾರದಿಂದ ಮುಖ್ಯ ಆಡಳಿತಗಾರರಾಗಿ ನೇಮಕಗೊಂಡ ಖಕನ್ ಬಾಬರ್ ಅವರು ಜೆಯುಡಿ ಕೇಂದ್ರ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಲಾಹೋರ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಧಾರ್ಮಿಕ ವ್ಯವಹಾರ ಖಾತೆ ಅಧಿಕಾರಿಯೊಬ್ಬರು ಹಾಗೂ ಪೊಲೀಸ್ ತಂಡದ ಸಮ್ಮುಖದಲ್ಲಿ ಜೆಯುಡಿ ಕಚೇರಿ ಸ್ವಾಧೀನ ಪ್ರಕ್ರಿಯೆ ನಡೆಯಿತು.
2009: ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಪ್ರಧಾನಿ ಮನಮೋಹನ ಸಿಂಗ್ ನಿರೀಕ್ಷೆಗಿಂತ ತ್ವರಿತವಾಗಿ ಚೇತರಿಸಿಕೊಂಡರು. ಅವರಿಗೆ ಅಳವಡಿಸಿದ್ದ ಕೃತಕ ಉಸಿರಾಟದ ಸಾಧನವನ್ನು ಈದಿನ ತೆಗೆದು ಹಾಕಲಾಯಿತು.
2009: ಕರ್ನಾಟಕ ಮೂಲದ ಮಾಧವನ್ ನಾಯರ್ (ಪದ್ಮವಿಭೂಷಣ), ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ. ಆರ್. ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ 'ಪದ್ಮವಿಭೂಷಣ'ಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಯಶಸ್ವಿ 'ಚಂದ್ರಯಾನ'ದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾದರು. ದೇಶದ ಅತ್ಯುತ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ಕ್ಕೆ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರನ್ನು ಕಳೆದ ನವೆಂಬರಿನಲ್ಲೇ ಪ್ರಕಟಿಸಲಾಗಿತ್ತು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವ ಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ. ಪಿ. ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ. ಮೂರನೇ ಅತ್ಯುನ್ನತ ಸನ್ಮಾನ 'ಪದ್ಮಭೂಷಣ'ಕ್ಕೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಜ್ ಅಹುವ್ಲಾಲಿಯಾ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30 ಮಂದಿ ಪಾತ್ರರಾದರು.
2009: ಸಶಸ್ತ್ರ ಪಡೆ ಸಿಬ್ಬಂದಿಗೆ 9 ಮರಣೋತ್ತರ ಅಶೋಕ ಚಕ್ರ, 13 ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಒಟ್ಟು 428 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದರು. ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮಟೆ ಹಾಗೂ ವಿಜಯ್ ಸಾಲಸ್ಕರ್ ಅವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರ 'ಅಶೋಕ ಚಕ್ರ' ಪ್ರಶಸ್ತಿ ಘೋಷಿಸಲಾಯಿತು.
2009: ಭಾರತ ಮತ್ತು ಬ್ರಿಟನ್‌ನ ಜಂಟಿ ನಿರ್ಮಾಣದ 'ಸಮ್ಲ್‌ಡಾಗ್ ಮಿಲಿಯನೇರ್' ಚಲನಚಿತ್ರ, ಅಮೆರಿಕದ ನಿರ್ಮಾಪಕರ ವೇದಿಕೆ (ಪಿಜಿಎ)ಯ ಪುರಸ್ಕಾರಕ್ಕೂ ಪಾತ್ರವಾಯಿತು. ಚಿತ್ರದ ನಿರ್ಮಾಪಕ ಕ್ರಿಶ್ಚಿಯನ್ ಕೋಲ್ಸನ್ ಅವರಿಗೆ 'ಡ್ಯಾರಿಲ್ ಎಫ್ ಝಾನುಕ್ ವರ್ಷದ ನಿರ್ಮಾಪಕ' ಪ್ರಶಸ್ತಿ ದೊರೆಕಿತು, ಲಾಸ್ ಏಂಜೆಲಿಸಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
2009: ಗೃಹ ಸಚಿವ ಪಿ. ಚಿದಂಬರಮ್ ಅವರ ಆಂತರಿಕ ಭದ್ರತಾ ಸಲಹೆಗಾರ ಕೆ.ಸಿ.ವರ್ಮಾ ಅವರು ದೇಶದ ಅಗ್ರಮಾನ್ಯ ಗೂಢಚರ್ಯ ಸಂಸ್ಥೆ 'ರಾ' ಮುಖ್ಯಸ್ಥರಾಗಿ ನೇಮಕಗೊಂಡರು.
2009: ತಮಿಳು ಬಂಡುಕೋರರ (ಎಲ್‌ಟಿಟಿಇ) ಬಿಗಿ ಹಿಡಿತದಲ್ಲಿರುವ ಕಟ್ಟಕಡೆಯ ತಾಣವಾದ ಮುಲ್ಲೈತೀವು ಪಟ್ಟಣವನ್ನು ಸೇನಾ ಪಡೆಗಳು ಪ್ರವೇಶಿಸಿದವು.
2008: ಜಗತ್ತಿನಲ್ಲಿಯೇ ಅತಿ ಉದ್ದದ ರಂಗೋಲಿ ಬಿಡಿಸಿ, ದಾಖಲೆ ನಿರ್ಮಿಸಲು ಹೊರಟ ಬೆಂಗಳೂರಿನ `ಸುವರ್ಣ ಜ್ಯೋತಿ ಟ್ರಸ್ಟ್' ಜೊತೆಗೆ ಒಂದು ಸಾವಿರ ಜನರು ಕೈಜೋಡಿಸಿ ಅರಮನೆ ಮೈದಾನದಲ್ಲಿ 1.50 ಲಕ್ಷ ಚದರ ಅಡಿಯಲ್ಲಿ ದೇವತೆಗಳು, ಸೈನಿಕರು, ಸ್ವಾತಂತ್ರ್ಯ ಯೋಧರ ಚಿತ್ರಗಳನ್ನು ಒಳಗೊಂಡ 'ಅಖಂಡ ಭಾರತ'ದ ಬೃಹತ್ ರಂಗೋಲಿ ಬಿಡಿಸಲು ಆರಂಭಿಸಿದರು. ಈ ಹಿಂದೆ ದಾಖಲೆ ನಿರ್ಮಿಸಿದ್ದ 48 ಸಾವಿರ ಚದರ ಅಡಿಯ ರಂಗೋಲಿಯನ್ನು ಬದಿಗೆ ತಳ್ಳಿ ನೂತನ ಇತಿಹಾಸ ಸೃಷ್ಟಿಸುವ ಸಲುವಾಗಿ ಈ ರಂಗೋಲಿ ಬಿಡಿಸುವ ಕಾರ್ಯ ಶುರುವಾಯಿತು.
2008: ಆಸ್ಟ್ರೇಲಿಯಾದ 15ರ ಹರೆಯದ ಹುಡುಗಿ ಡೆಮಿ ಲಿ ಬ್ರೆನನ್ ಎಂಬಾಕೆ ಯಕೃತ್ ಕಸಿ ಮಾಡಿಸಿಕೊಂಡ ಬಳಿಕ ತನ್ನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನೇ ಸಂಪೂರ್ಣವಾಗಿ ಬದಲಿಸಿಕೊಂಡು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದಳು. ಜೊತೆಗೇ ಇದು ಜಗತ್ತಿನಲ್ಲಿ ದಾಖಲಾದ ಇಂತಹ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ರೆನನ್ 9 ವರ್ಷದವಳಿದ್ದಾಗ ದಾನಿಯೊಬ್ಬರ ಯಕೃತ್ತನ್ನು ಕಸಿ ಮಾಡಿಸಿಕೊಂಡಿದ್ದಳು. ಬಳಿಕ ದಾನಿಯ ರೋಗ ನಿರೋಧಕ ಶಕ್ತಿಯೇ (ಬಿಳಿ ರಕ್ತ ಕಣ) ಅವಳ ದೇಹವನ್ನು ಸಂಪೂರ್ಣವಾಗಿ ಆವರಿಸಲು ಆರಂಭಿಸಿತು. ಇದರಿಂದಾಗಿ ಆಕೆಯ ದೇಹದಲ್ಲಿನ ರಕ್ತದ ಗುಂಪು `ಒ ನೆಗೆಟಿವ್'ನಿಂದ `ಒ ಪಾಸಿಟಿವ್'ಗೆ ಬದಲಾಯಿತು. ಸಿಡ್ನಿಯ ವೆಸ್ಟ್ ಮೆಡ್ ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಅಚ್ಚರಿ ಮೂಡಲು ಇನ್ನೂ ಹಲವು ಕಾರಣಗಳು ಇದ್ದವು. ಬದಲಿ ಅಂಗ ದೇಹಕ್ಕೆ ಹೊಂದಿಕೊಳ್ಳುವ ಸಲುವಾಗಿ ನೀಡಿದ್ದ ಔಷಧವನ್ನು ದೇಹ ಸ್ವೀಕರಿಸದೇ ಇದ್ದಾಗ ದೇಹದಲ್ಲಿ ಏನೋ ಎಡವಟ್ಟು ಆಗಿರುವುದು ಗೊತ್ತಾಯಿತು. ಇದು ಅವಳಿಗೆ ಪೂರಕವಾಯಿತೇ ಹೊರತು ಮಾರಕವಾಗಲಿಲ್ಲ. ಬಹುಶಃ ಹುಡುಗಿಯ ಮೂಲ ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ ಆಕೆಯ ದೇಹ ದಾನಿಯ ಯಕೃತ್ತಿನ ಪ್ರಭಾವಕ್ಕೆ ಒಳಗಾಗಿರಬೇಕು ಎಂಬ ತೀರ್ಮಾನಕ್ಕೆ ವೈದ್ಯರು ಬಂದರು. ಅಂತೂ ಇದರಿಂದಾಗಿ ಬ್ರೆನನ್ ಗೆ ಮರು ಜನ್ಮ ಲಭಿಸಿದಂತಾಯಿತು.
2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ, ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಘೋಷಿಸಿದರು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರು. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದರೆ, ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.
2008: ತಿರುಮಲದ ತಿಮ್ಮಪ್ಪನಿಗೆ ನಂದಮುರಿ ಲತಾ ಎಂಬ ಭಕ್ತರೊಬ್ಬರು 5 ಲಕ್ಷ ರೂಪಾಯಿ ಮೌಲ್ಯದ 5 ತಂಜಾವೂರು ಪೇಂಟಿಂಗುಗಳನ್ನು ದಾನವಾಗಿ ನೀಡಿದರು. ಈ ಚಿತ್ರಗಳು ಬ್ರಹ್ಮೋತ್ಸವಕ್ಕೆ ಸಂಬಂದಿಸಿದವುಗಳು. ಹಿಂದಿನ ಬ್ರಹ್ಮೋತ್ಸವದ ಸಂದರ್ಭದಲ್ಲೂ ಅವರು ತಮ್ಮ ಪೇಂಟಿಂಗುಗಳನ್ನು ತಿಮ್ಮಪ್ಪನಿಗೆ ದಾನ ಮಾಡಿದ್ದರು.
2008: ಸಿಗರೇಟ್ ಪೊಟ್ಟಣಗಳ ಮೇಲೆ `ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಚಿತ್ರ ಸಂದೇಶವನ್ನು 2007ರ ಫೆಬ್ರುವರಿ 1ರಿಂದ ಮುದ್ರಿಸುವುದು ಕಡ್ಡಾಯ ಎಂದು 2006ರ ಜುಲೈ ತಿಂಗಳಲ್ಲಿಯೇ ಆದೇಶ ಹೊರಡಿಸಿ ಅದನ್ನು ಜಾರಿ ಮಾಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ತಂಬಾಕು ಲಾಬಿಗೆ ಮಣಿದಿರುವ ಸರ್ಕಾರ ತನ್ನದೇ ನಿರ್ಧಾರವನ್ನು ಜಾರಿ ಮಾಡುತ್ತಿಲ್ಲ ಎಂದು ದೂರಿ ವಕೀಲರಾದ ನರಿಂದರ್ ಶಮಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. 2007ರ ಫೆಬ್ರುವರಿ 1ರಂದು ಜಾರಿಯಾಗಬೇಕಾಗಿದ್ದ ನಿರ್ಧಾರವನ್ನು ಸರ್ಕಾರ ಡಿಸೆಂಬರ್ ತಿಂಗಳಿಗೆ ಮುಂದೂಡಿ ನಂತರ ಅದನ್ನು ಜಾರಿ ಮಾಡಿಲ್ಲ ಎಂದು ಅರ್ಜಿದಾರರು ದೂರಿದರು.
2008: ಪಶ್ಚಿಮ ಬಂಗಾಳದ 19 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಿಗೆ ಪಕ್ಷಿಜ್ವರ (ಕೋಳಿಜ್ವರ) ಸೋಂಕು ಹರಡಿದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಸೋಂಕು ಪೀಡಿತ ಕೋಳಿಗಳ ಸಾಮೂಹಿಕ ನಾಶಕ್ಕೆ ಸಮರೋಪಾದಿ ಯತ್ನ ಕೈಗೊಂಡಿತು. ಪುರೂಲಿಯಾ ಮತ್ತು ಹೌರಾ ಜಿಲ್ಲೆಗಳನ್ನು ಸೋಂಕು ಪೀಡಿತ ಎಂದು ಘೋಷಿಸಲಾಯಿತು. ಕೂಚ್ ಬಿಹಾರ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಕಾರ್ಯ ಆರಂಭವಾಯಿತು.
2008: ತಮಿಳುನಾಡಿನ ತೆಂಕಾಸಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಅಪರಿಚಿತರು ರಾತ್ರಿ ಬಾಂಬ್ ಎಸೆದರು. ಪರಿಣಾಮವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿತು.
2008: ಅಕ್ರಮವಾಗಿ ಕಿಡ್ನಿ ಕಸಿ ಮಾಡಿ ಬಡವರನ್ನು ವಂಚಿಸುತ್ತಿದ್ದ ಹಾಗೂ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದ ಐವರು ವಿದೇಶಿಯರು ಹಾಗೂ ನಾಲ್ವರು ಸ್ಥಳೀಯ ವೈದ್ಯರನ್ನು ಗುಡಗಾಂವಿನ ಪೊಲೀಸರು ಬಂಧಿಸಿ, ಅಕ್ರಮ ಕಿಡ್ನಿ ಮಾರಾಟದ ಬೃಹತ್ ಜಾಲವೊಂದನ್ನು ಭೇದಿಸಿದರು. ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಡಗಾಂವಿನ ಎರಡು ಮನೆಗಳ ಮೇಲೆ ದಾಳಿ ನಡೆಸಿ ಈ ಜಾಲ ಪತ್ತೆ ಹಚ್ಚಲಾಯಿತು. ಬಂಧಿತರನ್ನು ಜಾಯ್ ಮೆಹತಬ್ (53), ಸೋನಮ್ ಜಾಯ್ (52), ಲಿಯೊನಿಡಾ ದಯಾಸಿ (56), ಲಿಯೊನಿದಾಸ್ ದಯಾಸಿಸ್ (63) ಮತ್ತು ಹೆಲೆನಿ ಕಿತ್ಕೊಸಿ (53) ಎಂದು ಗುರುತಿಸಲಾಯಿತು. ಇವರೆಲ್ಲರೂ ಗ್ರೀಸ್ ದೇಶದ ಪ್ರಜೆಗಳು. ವಲ್ಲಭಗಢ ಹಾಗೂ ಇತರೆಡೆಯ ಮೂವರು ವೈದ್ಯರನ್ನೂ ಬಂಧಿಸಲಾಯಿತು. ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ಡಾ.ಅಮಿತ್ ಸಿಂಗ್ ಹಾಗೂ ಆತನ ಸಹೋದರ ಜೀವನ್ ಮತ್ತು ಅರೆವಳಿಕೆ ತಜ್ಞ ಸರೋಜ್ ಕುಮಾರ್ ತಲೆಮರೆಸಿಕೊಂಡರು.
2008: ಬೆಂಗಳೂರಿನ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್ಎಂ) ಲಭಿಸಿತು.
2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದಾಗಿ `ಗಿಲಿ' ವಿಕೆಟ್ ಹಿಂಬದಿ ಒಟ್ಟು 414 ಬಲಿ ಪಡೆದಂತಾಯಿತು. ಅದರಲ್ಲಿ 377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಸೇರಿವೆ. ಬೌಷರ್ 413 (394 ಕ್ಯಾಚ್, 19 ಸ್ಟಂಪಿಂಗ್) ಬಲಿ ಪಡೆದರು.
2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ಸುವರ್ಣ ರಥ ರೈಲು ಈದಿನ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹೊರವಲಯದ ವೈಟ್ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದಿನ ಒಂದು ವಾರದಲ್ಲಿ ರೈಲಿನ ಒಳಾಂಗಣ ವಿನ್ಯಾಸ, ನೆಲಹಾಸು, ಸೂಕ್ಷ್ಮ ಮರಗೆಲಸ, ಹಾಸಿಗೆ ಮತ್ತು ಹೊದಿಕೆ ಹಾಕುವ ಕೆಲಸ ನಡೆಸಲಾಯಿತು. ಇದು ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
2007: ಆರ್ಥಿಕ ಸಂಕಷ್ಟದಿಂದ ಬೇಸತ್ತು ಹಾಸನ ನಗರದ ವ್ಯಾಪಾರಿ ಕೀರ್ತಿ ಗುಪ್ತ ಅವರು ತಮ್ಮ ಮೂವರು ಮಕ್ಕಳು ಸೇರಿದಂತೆ ಕುಟುಂಬದ 6 ಜನ ಸದಸ್ಯರನ್ನು ಕ್ಲೋರೋಫಾರಂ ಬಳಸಿ ಕೊಲೆಗೈದು, ತಾವೂ ಆತ್ಮಹತ್ಯೆ ಮಾಡಿಕೊಂಡರು.
2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನಿನ ವಸಾಹತಾಗಿತ್ತು. `ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು. 1892ರ ನವೆಂಬರ್ 22ರಂದು ಜನಿಸಿದ ಕನೆಕ್ಟಿಕಟ್ ಮಹಿಳೆ ಎಮ್ಮಾ ಫಾಸ್ಟ್ ಟಿಲ್ ಮ್ಯಾನ್ (114) ಈತನ ಬಳಿಕ ಬದುಕುಳಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ.
2007: ಕರ್ನಾಟಕದ ದಿವಂಗತ ಸಾಹಿತಿ `ಕಾಂತಾಪುರ' ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ, ಕರ್ನಾಟಕದ ಸೊಸೆ ಮತ್ತು ಪೆಪ್ಸೆ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.
2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ದಾಖಲು ಮಾಡಿಕೊಂಡು, `ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ' ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.
2007: ತಮಿಳುನಾಡಿನ ಕುದಂಕುಲಮ್ ವಿದ್ಯುತ್ ಯೋಜನೆ ಹಾಗೂ ಇತರ ಹೊಸ ಪ್ರದೇಶಗಳಲ್ಲಿ ಇನ್ನಷ್ಟು ಅಣುಸ್ಥಾವರಗಳನ್ನು ನಿರ್ಮಿಸುವ ಸಲುವಾಗಿ ಭಾರತ ಮತ್ತು ರಷ್ಯ ಒಪ್ಪಂದಕ್ಕೆ ಸಹಿ ಹಾಕಿದವು.
2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ (85) ಕೇರಳದ ತಿರುವನಂತಪುರದಲ್ಲಿ ನಿಧನರಾದರು.
2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
2006: ಸಾಫ್ಟವೇರ್ ಸಂಸ್ಥೆ ಇನ್ಫೋಸಿಸ್ಸಿನ ಸಿಇಒ ನಂದನ್ ನೀಲೇಕಣಿ (ಪದ್ಮಭೂಷಣ), ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಯುವ ಟೆನಿಸ್ ತಾರೆ ಸಾನಿಯಾ ಮಿರ್ಜಾ (ಪದ್ಮಶ್ರೀ) ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣ, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರು ಪದ್ಮಿವಿಭೂಷಣ ಪ್ರಶಸ್ತಿಗೆ ಭಾಜನರಾದರು.
2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ಹಿಮಶೃಂಗದಲ್ಲೇ ಜೀವತೆತ್ತ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.
2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು 4.5-2.5 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಮೊತ್ತ ಮೊದಲ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.
1971: ಸೇನಾದಂಗೆಯೊಂದರಲ್ಲಿ ಮಿಲ್ಟನ್ ಒಬೊಟೆ ಅವರನ್ನು ಪದಚ್ಯುತಿಗೊಳಿಸಿ ಇದಿ ಅಮಿನ್ ಉಗಾಂಡಾದ ಅಧ್ಯಕ್ಷರಾದರು.
1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.
1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು.
1939: ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ರಂಗದ ಖಳನಾಯಕ ದಿನೇಶ್ (25-1-1939ರಿಂದ 20-12-1990) ಅವರು ಬೆಂಗಳೂರಿನಲ್ಲಿ ಈದಿನ ಜನಿಸಿದರು.
1933: ಫಿಲಿಪ್ಪೈನ್ಸಿನ ನಾಯಕಿ ಕೊರಜಾನ್ ಅಕ್ವಿನೊ ಹುಟ್ಟಿದರು. ದಿವಂಗತ ಬೆನಿಗ್ನೊ ಅಕ್ವಿನೊ ಅವರ ಕೈಹಿಡಿದ ಅವರು 1983ರಿಂದ ಪಿಲಿಪ್ಪೈನ್ಸಿನ ರಾಜಕೀಯ ನಾಯಕಿಯಾದರು. 1986-1992ರ ಅವಧಿಯಲ್ಲಿ ಅಲ್ಲಿನ ಅಧ್ಯಕ್ಷರಾದರು.
1924: ಫ್ರೆಂಚ್ ಆಲ್ಫ್ ನ ಚಾಮೊನಿಕ್ಸಿನಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಆರಂಭವಾಯಿತು.
1921: ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ನಾಡಿಗ ಕೃಷ್ಣಮೂರ್ತಿ (1921-1983) ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ನರಸಿಂಗರಾವ್ ನಾಡಿಗ -ಕಮಲಾಬಾಯಿ ದಂಪತಿಯ ಪುತ್ರನಾಗಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅವರು ಸಂದರ್ಶಿಸಿದ ರಾಷ್ಟ್ರಗಳು ಹತ್ತಕ್ಕೂ ಹೆಚ್ಚು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದ ನಾಡಿಗ ಕೃಷ್ಣಮೂರ್ತಿ ಅಂದಿನ ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು (16-3-1982ರಿಂದ 1-5-1983ರವರೆಗೆ). ಕೇಂದ್ರ, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅಮೆರಿಕದ ಖಂಡಾಂತರ (ಟ್ರಾನ್ಸ್ ಕಾಂಟಿನೆಂಟಲ್) ಟೆಲಿಫೋನ್ ಸೇವೆ ಉದ್ಘಾಟಿಸಿದರು. ಬೆಲ್ ಅವರು ತಮ್ಮ ಮಾಜಿ ಸಹಯೋಗಿ ವಾಟ್ಸನ್ ಅವರ ಜೊತೆ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ 3400 ಮೈಲು ಉದ್ದದ ತಂತಿ ಮೂಲಕ ಸಂಪರ್ಕಿಸಲಾದ ಟೆಲಿಫೋನಿನಲ್ಲಿ ಮಾತನಾಡಿದರು.
1824: ಮೈಕೆಲ್ ಮಧುಸೂದನ ದತ್ (1824-1873) ಹುಟ್ಟಿದ ದಿನ. ಇವರು ಕವಿ ಹಾಗೂ ನಾಟಕಕಾರರಾಗಿ ಆಧುನಿಕ ಬಂಗಾಳಿ ಸಾಹಿತ್ಯದ ಮಹಾನ್ ಕವಿ ಎಂದು ಖ್ಯಾತರಾಗಿದ್ದಾರೆ.
No comments:
Post a Comment