My Blog List

Friday, February 26, 2010

ಇಂದಿನ ಇತಿಹಾಸ History Today ಜನವರಿ 24

ಇಂದಿನ ಇತಿಹಾಸ

ಜನವರಿ 24

ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2009: ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಈದಿನ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. 'ಅವರ ಆರೋಗ್ಯ ಸ್ಥಿರವಾಗಿದ್ದು, 11 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ತೀವ್ರ ನಿಗಾ ಘಟಕ (ಐಸಿಸಿಯು)ಕ್ಕೆ ಸ್ಥಳಾಂತರಿಸಲಾಗಿದೆ. 1990ರಲ್ಲಿ ಬ್ರಿಟನ್ನಿನಲ್ಲಿ ಅವರಿಗೆ ನಡೆದಿದ್ದ ಬೈಪಾಸ್ ಸಂದರ್ಭದಲ್ಲಿ ಕಸಿ ಮಾಡಿದ್ದ ಅಂಗಾಂಶಗಳ ಬದಲಿ ಜೋಡಣೆಯನ್ನು ಸಹ ಇಂದಿನ ಶಸ್ತ್ರಚಿಕಿತ್ಸೆ ಒಳಗೊಂಡಿತ್ತು' ಎಂದು ಏಮ್ಸ್ ವೈದ್ಯರು ತಿಳಿಸಿದರು. ಮುಂಜಾನೆ 5.30ಕ್ಕೆ ಪ್ರಧಾನಿಯನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತಾದರೂ 7.15ಕ್ಕೆ ಚಿಕಿತ್ಸೆ ಆರಂಭವಾಯಿತು. ಮುಂಬೈನ ಏಷ್ಯನ್ ಹಾರ್ಟ್ ಇನ್ಸ್‌ಟಿಟ್ಯೂಟ್ (ಎಎಚ್‌ಐ)ನ ತಜ್ಞ ರಮಾಕಾಂತ ಪಾಂಡ ನೇತೃತ್ವದ 11 ವೈದ್ಯರ ತಂಡದೊಂದಿಗೆ ಏಮ್ಸ್‌ನ ಮೂವರು ವೈದ್ಯರು ಮತ್ತು ಸಿಬ್ಬಂದಿ ಸಹಕರಿಸಿದರು.

2009: ನಕಲಿ ವೀಸಾ, ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳನ್ನು ಸೃಷ್ಟಿಸಿ ವಿದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ವಂಚಕರ ಜಾಲವನ್ನು ಭೇದಿಸಿದ ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದರು. ಆರ್.ಟಿ.ನಗರದ ಸೈಯದ್ ಇಕ್ಬಾಲ್ (28), ಇಲಿಯಾಜ್ (43), ವಸೀಂ ಪಾಷಾ (24), ಸೈಯದ್ ಗೌಸ್ (37), ಚಿಕ್ಕಪೇಟೆ ಡಾ.ಟಿ.ಸಿ.ಎಂ.ರಾಯನ್ ರಸ್ತೆಯ ಸೈಯದ್ ಅಕ್ರಂ (44), ನ್ಯೂಭಾರತಿ ನಗರದ ಸಿದ್ದಿಕ್ ಹುಸೇನ್ (37) ಮತ್ತು ಮಾರಪ್ಪ ಗಾರ್ಡನ್ ಮೂರನೇ ಅಡ್ಡರಸ್ತೆಯ ಇಕ್ಬಾಲ್ ಅಹಮ್ಮದ್ (44) ಬಂಧಿತರು. ಪ್ರಕರಣದ ಇತರೆ ಎಂಟು ಆರೋಪಿಗಳು ತಲೆಮರೆಸಿಕೊಂಡರು.

2009: ಕಾಂಗ್ರೆಸ್, ಜೆಡಿಎಸ್, ಜೆಡಿಯು ಸದಸ್ಯರ ಆಕ್ಷೇಪದ ನಡುವೆ ವಿಧಾನ ಪರಿಷತ್ತಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್) ಜಾರಿಗೆ ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಯಿತು. ತೆರಿಗೆ ನಿಗದಿ ಮಾಡುವ ಹಾಗೂ ಅದನ್ನು ಪರಿಷ್ಕರಿಸುವ ಅಧಿಕಾರವನ್ನು ಆಯುಕ್ತರಿಗೆ ನೀಡಿದ್ದು ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ವಿರೋಧ ಪಕ್ಷಗಳ ಸದಸ್ಯರು ಶಂಕೆ ವ್ಯಕ್ತಪಡಿಸಿದರು. ವಾಹನ ನಿಲುಗಡೆ ಬಾಡಿಗೆ ಮೇಲೂ ತೆರಿಗೆ ವಿಧಿಸುವ ಉದ್ದೇಶಿತ ಪ್ರಸ್ತಾವದಿಂದ ನಾಗರಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

2009: 2020ನೇ ವರ್ಷದ ವೇಳೆಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಎರಡನೇ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿತು. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಭೂದಾಖಲೆಗಳ ವಿತರಣೆಗೆ ಆದ್ಯತೆ ನೀಡಲಾಯಿತು. ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಚಂಡೀಗಡದಲ್ಲಿ ದೇಶದ ಮೊದಲ ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು 2009ನೇ ಮಾರ್ಚ್ ತಿಂಗಳೊಳಗೆ ಕಾರ್ಯಾರಂಭ ಮಾಡುವುವು. ಈ ಶಿಫಾರಸುಗಳನ್ನೊಳಗೊಂಡ ಆಯೋಗದ ಹನ್ನೊಂದನೇ ವರದಿಯನ್ನು ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಈದಿನ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ದೇಶದಲ್ಲಿ ಈಗ 345 ಪಾಸ್‌ಪೋರ್ಟ್ ಕಚೇರಿಗಳಿದ್ದು ಅವುಗಳನ್ನು 1250ಕ್ಕೆ ಹೆಚ್ಚಿಸುವುದರ ಜೊತೆಗೆ ಅದರ ಸಂಪೂರ್ಣ ಕಾರ್ಯವನ್ನು ಆನ್‌ಲೈನ್ ಮಾಡಲು ವಿದೇಶಾಂಗ ವ್ಯವಹಾರ ಇಲಾಖೆ ನಿರ್ಧರಿಸಿದೆ ಎಂದು ವರದಿ ಹೇಳಿತು.

2009: ತಿಲಕರತ್ನೆ ದಿಲ್ಶನ್ ಅವರ ಅಜೇಯ ಶತಕ (137) ಹಾಗೂ ಬೌಲರುಗಳ ಮೊನಚಾದ ದಾಳಿಯ ನೆರವಿನಿಂದ ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ಥಾನ ವಿರುದ್ಧ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 234 ರನ್ನುಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಮಾಹೇಲ ಜಯವರ್ಧನೆ ಬಳಗ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ತನ್ನದಾಗಿಸಿತು. ಲಂಕಾ ತಂಡದ ವಿಶ್ವವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಈ ಪಂದ್ಯದಲ್ಲಿ ಏಕದಿನ ಕ್ರಿಕೆಟಿನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿ ಸಹ ಆಟಗಾರರ ಸಂಭ್ರಮ ಹೆಚ್ಚಿಸಿದರು.

2009: ಜಲಜನಕ ಉತ್ಪತ್ತಿಗೆ ವಿಜ್ಞಾನಿಗಳು ಹೊಸ ವಿಧಾನವೊಂದನ್ನು ಕಂಡುಹಿಡಿದರು. ಅಲ್ಯೂಮಿನಿಯಂ ಅಣುಗಳ ಆಯ್ದ ಗುಚ್ಛಗಳು ಹಾಗೂ ನೀರಿನ ನಡುವೆ ರಾಸಾಯನಿಕ ಕ್ರಿಯೆ ನಡೆಯುವಂತೆ ಮಾಡುವ ಮೂಲಕ ಈ ಹೊಸ ವಿಧಾನವನ್ನು ಕಂಡುಹಿಡಿದಿರುವುದಾಗಿ ಅವರು ವಾಷಿಂಗ್ಟನ್ನಿನಲ್ಲಿ ಪ್ರಕಟಿಸಿದರು. ಈ ಸಂಶೋಧನೆಯು ಕೇವಲ ನೀರಿನ ವಿಭಜನೆಯಲ್ಲಿ ಮಾತ್ರವಲ್ಲ; ಇತರ ಸಣ್ಣ ಕಣಗಳ ಬಂಧವನ್ನು ಬೇರ್ಪಡಿಸುವಲ್ಲಿಯೂ ಹೊಸ ಸಾಧ್ಯತೆಯನ್ನು ತೆರೆದಿಡಬಲ್ಲುದು ಎಂದು ಪೆನ್ ವಿಶ್ವವಿದ್ಯಾಲಯದ ವಿಜ್ಞಾನಿ ಇವಾನ್ ಪಗ್ ಅಭಿಪ್ರಾಯಪಟ್ಟರು.

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ `ದಿ ಬುಲೆಟಿನ್' ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು. ಈ ಮೂಲಕ 127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ ಅಧಿಕೃತವಾಗಿ ಮುಚ್ಚಿಹೋಯಿತು. ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡದ್ದರಿಂದ ಪತ್ರಿಕೆಯನ್ನು ಮುಚ್ಚಬೇಕಾಯಿತು. ಈ ಪ್ರಸಿದ್ಧ ಪತ್ರಿಕೆಯಲ್ಲಿ ಹಲವು ಖ್ಯಾತನಾಮರ ಆರಂಭಿಕ ಲೇಖನಗಳು ಪ್ರಕಟವಾಗಿದ್ದವು. ಉತ್ತಮ ಗುಣಮಟ್ಟ, ನಿಷ್ಪಕ್ಷಪಾತ ವರದಿಗಳು, ಪ್ರಚಲಿತ ವಿಷಯಗಳ ವಿಶ್ಲೇಷಣೆಗೆ ಹೆಸರಾಗಿದ್ದ `ದಿ ಬುಲೆಟಿನ್' ಪತ್ರಿಕಾ ರಂಗದ ಹಲವು ಪ್ರಶಸ್ತಿಗಳನ್ನು ಗಳಿಸಿತ್ತು. ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಪತ್ರಿಕೋದ್ಯಮದೊಂದಿಗೆ ಸ್ಪರ್ಧಿಸಲಾಗದೇ ಇದ್ದುದರಿಂದ `ದಿ ಬುಲೆಟಿನ್' ಕೊನೆಯುಸಿರು ಎಳೆಯಬೇಕಾಯಿತು ಎಂದು ಮಾಧ್ಯಮ ವಿಶ್ಲೇಷಕ ಹರೊಲ್ಡ್ ಮಿಚೆಲ್ ವಿಶ್ಲೇಷಿಸಿದರು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2008: ಫ್ರಾನ್ಸಿನ ಪ್ರತಿಷ್ಠಿತ `ಆಫೀಸರ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಸಾಂಸ್ಕೃತಿಕ ಪ್ರಶಸ್ತಿಗೆ ಬಾಲಿವುಡ್ಡಿನ ಖ್ಯಾತ ನಟ ಶಾರುಖ್ ಖಾನ್ ಆಯ್ಕೆಯಾದರು. ವೃತ್ತಿ ಜೀವನದ ಉತ್ತಮ ಸಾಧನೆ ಮತ್ತು ಸಿನಿಮಾದ ಮೂಲಕ ಭಾರತ-ಫ್ರಾನ್ಸ್ ಮಧ್ಯೆ ಸಹಕಾರ ಮೂಡಿಸಿರುವ ಕಾರ್ಯವನ್ನು ಗುರುತಿಸಿ ಖಾನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಫ್ರಾನ್ಸ್ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿತು. ಶಾರುಖ್ ಜತೆಗೆ ಜಾರ್ಜ್ ಕ್ಲೂನಿ, ಕ್ಲಿಂಟ್ ಈಸ್ಟ್ ವುಡ್, ಮೆರಿ ಸ್ಟ್ರೀಟ್, ಬ್ರ್ಯೂಸ್ ವಿಲ್ಸ್, ಜುಡೆ ಲಾ ಹಾಗೂ ಅರುಂಧತಿ ರಾಯ್ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿತು.

2008: ವಿಜಾಪುರ ಮಹಿಳಾ ವಿವಿ ಕುಲಪತಿಯಾಗಿ ಬೆಂಗಳೂರು ವಿ.ವಿಯ ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ ಬಾಲಿ ಅವರನ್ನು ನೇಮಕ ಮಾಡಲಾಯಿತು.

2008: `ಹೆವೆನ್ ಸೆಂಟ್ ಬ್ರಾಂಡಿ' - ಇದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, `ಉದ್ದದಲ್ಲಿ ಅತಿ ಪುಟ್ಟ ನಾಯಿ' ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು.

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ ವೇರ್ ಸಾಧನ ಮತ್ತು ಫಾಂಟ್ ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಇಮೇಲ್ ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್, ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ (86) ಅವರು ಬೆಂಗಳೂರಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರಾಜಗೋಪಾಲ್ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು `ಮದರ್ ಲ್ಯಾಂಡ್' `ಇನ್ಫಾ' ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು `ಸ್ಕೂಪ್' ಮಾಡಿದ ಕೀರ್ತಿ ಇವರದು.

2007: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಸಿ.ಎಂ. ಉದಾಸಿ ರಾಷ್ಟ್ರಕೆ ಸಮರ್ಪಿಸಿದರು.

2006: ಬಿಹಾರದ ಈ ಮೊದಲಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ್ದ ರಾಜ್ಯಪಾಲ ಬೂಟಾಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ರಾಜ್ಯಪಾಲರು ಕೇಂದ್ರ ಸರ್ಕಾರವನ್ನು ಹಾದಿ ತಪ್ಪಿಸಿದ್ದಾರೆ ಎಂದೂ ಮುಖ್ಯನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠವು 3-2ರ ಬಹುಮತದ ತೀರ್ಪಿನಲ್ಲಿ ಹೇಳಿತು. ಜನತಾದಳ (ಯು) ಅಧಿಕಾರಕ್ಕೆ ಬರದಂತೆ ತಡೆಯುವ ಏಕಮಾತ್ರ ಉದ್ದೇಶದ ರಾಜ್ಯಪಾಲರ ಕ್ರಮದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರವೂ ಪರಾಮರ್ಶಿಸಿ ರಾಜ್ಯಪಾಲರ ವರದಿಯ ಅಂಶವನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

2006: ಕುವೈತಿನ ಅಸ್ವಸ್ಥ ದೊರೆ ಶೇಖ್ ಸಾದ್ ಅಲ್ ಅಬ್ದ್ಲುಲಾ ಅವರು ಆಳುವ ಕುಟುಂಬದ ಒಳಗಿನ ಒಪ್ಪಂದಕ್ಕೆ ಅನುಗುಣವಾಗಿ ಅರಸೊತ್ತಿಗೆ ತ್ಯಜಿಸಿದರು. ಇದರಿಂದಾಗಿ ರಾಜಕುಟುಂಬದೊಳಗಿನ ಬಿಕ್ಕಟ್ಟು ಬಗೆಹರಿದು, ದೀರ್ಘಕಾಲದಿಂದ ಅಧಿಕಾರ ಇಲ್ಲದೆ ನಾಮಮಾತ್ರ ಆಳ್ವಿಕೆ ನಡೆಸುತ್ತಿದ್ದ ಪ್ರಧಾನಿ ಶೇಕ್ ಅಲ್ ಸಭಾ ಅಲ್ ಅಹಮದ್ ಅಲ್ ಸಭಾ ಅವರಿಗೆ ನೂತನ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲು ದಾರಿ ಸುಗಮಗೊಂಡಿತು.

2006: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸೋನಿಯಾಗಾಂಧಿ ಮತ್ತು ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಧ್ಯೆ ನವದೆಹಲಿಯಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡಿತು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1966: ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1963: ಸಾಹಿತಿ ರವೀಂದ್ರ ಶರ್ಮ ಟಿ. ಜನನ.

1950: `ಜನ ಗಣ ಮನ' ಹಾಡನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1944: ಕಲಾವಿದ ಶೇಷಚಂದ್ರ ಎಚ್. ಎಲ್. ಜನನ.

1936: ಕಲಾವಿದೆ ಶಾಂತಾ ಪೋಟಿ ಜನನ.

1895: ಲಾರ್ಡ್ ರಾಂಡೋಲ್ಫ್ ಚರ್ಚಿಲ್ (1849-1895) ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್ ನ ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದರು. ಇವರ ಪುತ್ರ ವಿನ್ ಸ್ಟನ್ ಚರ್ಚಿಲ್ (1874-1965) 1965ರಲ್ಲಿ ಇದೇ ದಿನ ಮೃತರಾದರು. ಬ್ರಿಟನ್ನಿನ ಪ್ರಧಾನಿಯಾಗಿ ಯುದ್ಧಕಾಲದಲ್ಲಿ ಗ್ರೇಟ್ ಬ್ರಿಟನ್ನನ್ನು ವಿಜಯದತ್ತ ಮುನ್ನಡೆಸಿದ ಚರ್ಚಿಲ್ ತಾನು ಅಪ್ಪ ಸತ್ತ ದಿನವೇ ಸಾಯುವುದಾಗಿ ಹೇಳಿದ್ದರು.!

1877: ಕಾವ್ಯವಾಚನದಲ್ಲಿ ಹೆಸರುವಾಸಿಯಾಗಿದ್ದ ಸಂ.ಗೋ. ಬಿಂದೂರಾಯರು (24-1-1877ರಿಂದ 6-9-1966) ಗೋವಿಂದ ರಾಯರು- ರಮಾಭಾಯಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು.

1870: ಮುದ್ದಣ ಹೆಸರಿನಿಂದಲೇ ಜನಪ್ರಿಯರಾಗಿದ್ದ ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನ ಕೃತಿಗಳ ರಚನೆಗೈದ ಮುದ್ದಣನ ಮೇರು ಕೃತಿ ರಾಮಾಶ್ವಮೇಧ. ಮುದ್ದಣ ಮನೋರಮೆಯರ ಸರಸ ಸಂಭಾಷಣೆಯೊಂದಿಗೆ ಆರಂಭವಾಗುವ ಈ ಕೃತಿ ವಿಶಿಷ್ಟವಾದುದು. ಕನ್ನಡ ನವೋದಯದ ಮುಂಜಾನೆ ಕೋಳಿ ಎಂಬ ಕೀರ್ತಿಗೆ ಭಾಜನರಾದ ಮುದ್ದಣ ಅವರನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು ಎಂದು ಎಸ್. ವಿ. ರಂಗಣ್ಣ ಪ್ರಶಂಸಿದ್ದರು. ಕ್ಷಯರೋಗ ತಗುಲಿ 32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು ಮುದ್ದಣ ನಿಧನರಾದರು. 75 ವರ್ಷಗಳ ನಂತರ 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1826: ಜ್ಞಾನೇಂದ್ರ ಮೋಹನ್ ಟ್ಯಾಗೋರ್ (1826-1890) ಹುಟ್ಟಿದ ದಿನ. ಇವರು ಕಲ್ಕತ್ತಾ ಹೈಕೋರ್ಟಿನ ಬ್ಯಾರಿಸ್ಟರ್ ಆಗಿ ನೋಂದಣಿಯಾದ ಮೊದಲ ಭಾರತೀಯ.

No comments:

Advertisement