Tuesday, March 9, 2010

ಇಂದಿನ ಇತಿಹಾಸ History Today ಮಾರ್ಚ್ 09

ಇಂದಿನ ಇತಿಹಾಸ

ಮಾರ್ಚ್ 09

ಒರಿಸ್ಸಾ ಸರ್ಕಾರದ ವಿಶ್ವಾಸಮತಕ್ಕೆ ಎರಡು ದಿನ ಇರುವಂತೆಯೇ ಬಿಜು ಜನತಾ ದಳವು (ಬಿಜೆಡಿ) ಈದಿನ ಎನ್‌ಡಿಎ ಸಂಬಂಧವನ್ನು ಔಪಚಾರಿಕವಾಗಿ ಕಡಿದುಹಾಕಿ, ಬಿಜೆಪಿ ತನಗೆ 'ವಿಶ್ವಾಸದ್ರೋಹ' ಮಾಡಿದೆ ಎಂದು ಆರೋಪಿಸಿತು. ಸೀಟು ಹಂಚಿಕೆ ಮಾತುಕತೆ ಮುರಿದು ಬಿದ್ದ ಬಳಿಕ ನವೀನ್ ಪಟ್ನಾಯಕ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆಗೆದುಕೊಂಡಿತ್ತು.

2009: ಒರಿಸ್ಸಾ ಸರ್ಕಾರದ ವಿಶ್ವಾಸಮತಕ್ಕೆ ಎರಡು ದಿನ ಇರುವಂತೆಯೇ ಬಿಜು ಜನತಾ ದಳವು (ಬಿಜೆಡಿ) ಈದಿನ ಎನ್‌ಡಿಎ ಸಂಬಂಧವನ್ನು ಔಪಚಾರಿಕವಾಗಿ ಕಡಿದುಹಾಕಿ, ಬಿಜೆಪಿ ತನಗೆ 'ವಿಶ್ವಾಸದ್ರೋಹ' ಮಾಡಿದೆ ಎಂದು ಆರೋಪಿಸಿತು. ಸೀಟು ಹಂಚಿಕೆ ಮಾತುಕತೆ ಮುರಿದು ಬಿದ್ದ ಬಳಿಕ ನವೀನ್ ಪಟ್ನಾಯಕ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆಗೆದುಕೊಂಡಿತ್ತು. ಅಲ್ಪಮತಕ್ಕೆ ಜಾರಿದ ಸರ್ಕಾರ ಎಡಪಕ್ಷಗಳು, ಜೆಎಂಎಂ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಹುಮತ ಗಳಿಸುವ ನಿರೀಕ್ಷೆ ಇಟ್ಟುಕೊಂಡು ಎನ್‌ಡಿಎ ಜತೆಗಿನ ತನ್ನ 11 ವರ್ಷಗಳ ಸಖ್ಯ ಕಡಿದುಹಾಕುವ ಪ್ರಕಟಣೆ ನೀಡಿತು.

2009: ಕುಡುಕರು ಮತ್ತು ಧೂಮಪಾನಿಗಳಿಗೆ ದುಃಸ್ವಪ್ನವಾಗಿ ಕಾಡಿದ ಕೇಂದ್ರದ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹುಕ್ಕಾ ಸೇದುವವರತ್ತಲೂ ಕೆಂಗಣ್ಣು ಬೀರಿದರು. ಹುಕ್ಕಾ ಬಾರ್‌ಗಳಲ್ಲಿ ಸಾಮಾನ್ಯವಾಗಿ ತಂಬಾಕು ಮತ್ತು ನಿಕೊಟಿನ್ ಆಧಾರಿತ ಉತ್ಪನ್ನಗಳನ್ನು ನೀಡಲಾಗುತ್ತದೆ. ಇಂತಹ ಹುಕ್ಕಾ ಬಾರ್‌ಗಳನ್ನು ಬಂದ್ ಮಾಡಿಸಬೇಕು ಎಂದು ಹೇಳಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮುಂಬೈಯಲ್ಲಿ ತಿಳಿಸಿದರು. 'ರಾಜ್ಯಗಳು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು' ಎಂದು ಅವರು ಇಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಪತ್ರಕರ್ತರಿಗೆ ತಿಳಿಸಿದರು. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಯಂತ್ರಗಳನ್ನು ಇಟ್ಟುಕೊಂಡಿರುವುದೂ ಅಕ್ರಮವಾಗುತ್ತದೆ ಎಂದೂ ಅವರು ಹೇಳಿದರು.

2009: ಢಾಕಾಕ್ಕೆ 72 ಕಿ. ಮೀ. ದೂರದಲ್ಲಿನ ಕೇಂದ್ರ ತಂಗೈ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾದದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಮೇಜರ್ ಜನರಲ್ ರಫಿಕ್ ಇಸ್ಲಾಂ ಮತ್ತು ಪೈಲಟ್ ಲೆಫ್ಟಿನೆಂಟ್ ಕರ್ನಲ್ ಶಹಿದ್ ಮೃತರಾದರು. ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾದ ಕೂಡಲೇ ಇಬ್ಬರೂ ಸ್ಥಳದಲ್ಲಿಯೇ ಮೃತರಾದರು.. ಇವರ ಜತೆಗಿದ್ದ ಮೇಜರ್ ಸೈಫ್ ಅವರು ತೀವ್ರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಇನ್ನೊಂದು ಹೆಲಿಕಾಪ್ಟರಿನಲ್ಲಿ ಢಾಕಾ ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಲಿಕಾಪ್ಟರ್ ಢಾಕಾದಿಂದ ತಂಗೈಲ್ ಪಟ್ಟಣದ ಸೇನಾ ನೆಲೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು.

2009: ಇಂಗ್ಲೆಂಡಿನ ಸ್ಟಾಫೋರ್ಡ್ ಪಟ್ಟಣದಲ್ಲಿರುವ ಷೇಕ್ಸ್‌ಪಿಯರ್ ವಸ್ತು ಸಂಗ್ರಹಾಲಯಕ್ಕೆ ಮಹಾರಾಷ್ಟ್ರದಿಂದ ಅಪರೂಪವಾದ ಮೂರು ಕಾಣಿಕೆಗಳು ಬಂದವು. ಮರಾಠಿಯ ಖ್ಯಾತ ಕವಿ ಮಂಗೇಶ್ ಪಡಗಾಂವ್‌ಕರ್ ಅವರು ತಾವು ಇಂಗ್ಲಿಷಿಗೆ ಭಾಷಾಂತರಿಸಿದ 'ದಿ ಟೆಂಪೆಸ್ಟ್', ರೋಮಿಯೋ ಮತ್ತು ಜೂಲಿಯಟ್ ಹಾಗೂ 'ಜೂಲಿಯಸ್ ಸೀಸರ್' ಕೃತಿಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡಿದರು. ಪಡಗಾಂವ್‌ಕರ್ ಅವರು ಗಾಲಿಕುರ್ಚಿಯ ಮೇಲೆ ಲಂಡನ್‌ನಿಂದ ಸ್ಟಾಫೋರ್ಡ್ ಪಟ್ಟಣಕ್ಕೆ ತೆರಳಿ ಪುಸ್ತಕ ಗಳನ್ನು ಕಾಣಿಕೆಯಾಗಿ ನೀಡಿದರು.

2009: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೃಗಾಲಯದ 44 ವರ್ಷದ ಹೆಣ್ಣಾನೆ 'ಜಾಂಬಿ' ಈದಿನ ಮೃತವಾಯಿತು. ಪ್ರಾಣಿ ವಿನಿಮಯದಡಿ 1976ರಲ್ಲಿ ಆಫ್ರಿಕಾ ಮೂಲದ ಜಾಂಬಿ ಮತ್ತು ಟಿಂಬೊ ಎಂಬ ಆನೆಗಳನ್ನು ಪಶ್ಚಿಮ ಜರ್ಮನಿಯಿಂದ ಮೈಸೂರು ಮೃಗಾಲಯಕ್ಕೆ ಕರೆತರಲಾಗಿತ್ತು. ಆನೆಗಳ ಕಾದಾಟ ಸಂದರ್ಭದಲ್ಲಿ ಕಂದಕದ ಒಳಗೆ ಬಿದ್ದ ಪರಿಣಾಮ ಜಾಂಬಿಯ ತೊಡೆಯ ಭಾಗಕ್ಕೆ ಪೆಟ್ಟು ಬಿದ್ದಿತ್ತು. ನಂತರ ಅದು ಸಂದಿವಾತಕ್ಕೆ ತಿರುಗಿತು. ಆರು ವರ್ಷಗಳಿಂದ ಜಾಂಬಿ ನೆಮ್ಮದಿಯಿಂದ ನಿದ್ರಿಸಲಿಲ್ಲ.

2008: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2007ನೇ ಸಾಲಿನ ಸನ್ ಫೀಸ್ಟ್ ಉದಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚೆಲುವಿನ ಚಿತ್ತಾರ ಚಿತ್ರದ ಅಭಿನಯಕ್ಕಾಗಿ ಗಣೇಶ್ ಮತ್ತು ಅಮೂಲ್ಯ ಕ್ರಮವಾಗಿ ಅತ್ಯುತ್ತಮ ನಟ- ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ವರ್ಷದ ಯಶಸ್ವಿ ನಾಯಕ ನಟ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಪಡೆದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ `ದುನಿಯಾ'ದ ಪಾಲಾಯಿತು. ನಟ ಅಂಬರೀಶ್ ಮತ್ತು ನಟಿ ಜಯಂತಿ ಜೀವಮಾನದ ಸರ್ವಶ್ರೇಷ್ಠ ಸಾಧನೆಯ ಪ್ರಶಸ್ತಿ ಹಾಗೂ ಕನ್ನಡ ಚಿತ್ರರಂಗಕ್ಕೆ 25 ವರ್ಷ ಸೇವೆ ಸಲ್ಲಿಸಿದ ನಟರಾದ ರವಿಚಂದ್ರನ್ ಮತ್ತು ಜಗ್ಗೇಶ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ರಾಜ್ ಕುಮಾರ್ ವಿಶೇಷ ಪ್ರಶಸ್ತಿಗೆ ಹಿರಿಯ ನಟ ಶನಿಮಹದೇವಪ್ಪ ಮತ್ತು ನಟಿ ಶಾಂತಮ್ಮ ಭಾಜನರಾದರು. ಸ್ನೇಹಾಂಜಲಿ ಚಿತ್ರದ ನಾಯಕ ನಟ ಧ್ರುವ ವಿಶೇಷ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ-ಚಿತ್ರ: ಅತ್ಯುತ್ತಮ ನಿರ್ದೇಶಕ ಪ್ರಕಾಶ್- ಮಿಲನ, ಖಳನಟ ಶರತ್ ಲೋಹಿತಾಶ್ವ- ಆ ದಿನಗಳು, ಹಾಸ್ಯನಟ ಕೋಮಲ್- ಸತ್ಯವಾನ್ ಸಾವಿತ್ರಿ, ಗಾಯಕ ಗುರುಕಿರಣ್- ಪಲ್ಲಕ್ಕಿ, ಗಾಯಕಿ ನಂದಿತಾ- ದುನಿಯಾ, ಸಾಹಿತ್ಯ ನಾಗೇಂದ್ರ ಪ್ರಸಾದ್- ದುನಿಯಾ, ಚಿತ್ರಕಥೆ ಸೂರಿ- ದುನಿಯಾ, ಸಂಭಾಷಣೆ ಅಗ್ನಿ ಶ್ರೀಧರ್- ಆ ದಿನಗಳು, ಸಂಕಲನಕಾರ ದೀಪು ಎನ್ ಕುಮಾರ್- ದುನಿಯಾ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ- ದುನಿಯಾ, ಛಾಯಾಗ್ರಹಣ ಕೃಷ್ಣಕುಮಾರ್- ಮಾತಾಡ್ ಮಾತಾಡ್ ಮಲ್ಲಿಗೆ, ನೃತ್ಯ ನಿರ್ದೇಶಕ ಇಮ್ರಾನ್- ಕೃಷ್ಣ.

2008: ಕೇರಳದ ಕಣ್ಣೂರಿನಲ್ಲಿ ನಡೆದ ಏಳು ಮಂದಿ ಆರೆಸ್ಸೆಸ್ಸ್ ಕಾರ್ಯಕರ್ತರ ಹತ್ಯೆಗೆ ಪ್ರತೀಕಾರವಾಗಿ ನವದೆಹಲಿಯ ಸಿಪಿಎಂ ಪ್ರಧಾನ ಕಚೇರಿ ಮೇಲೆ ಶಂಕಿತ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದರು. ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡರು. ಆದರೆ ಹಿಂದೂಗಳು ಹಿಂಸಾಚಾರ ಉತ್ತೇಜಿಸಿಲ್ಲ, ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ಬಿಜೆಪಿ ಹೇಳಿತು.

2008: ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು ಭರ್ಜರಿ ಆಟದ ಪ್ರದರ್ಶನ ತೋರಿ `ಕೆನರಾ ಬ್ಯಾಂಕ್ ಬೆಂಗಳೂರು ಓಪನ್' ಡಬ್ಲ್ಯುಟಿಎ ಚಾಂಪಿಯನ್ ಶಿಪ್ಪನ್ನು ತಮ್ಮದಾಗಿಸಿಕೊಂಡರು. ಕಬ್ಬನ್ ಪಾರ್ಕಿನ ಕೆ ಎಸ್ ಎಲ್ ಟಿ ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 7-5, 6-4ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಸ್ವಿಟ್ಜರ್ ಲೆಂಡಿನ ಪ್ಯಾಟಿ ಸ್ನೈಡರ್ ಅವರನ್ನು ಸೋಲಿಸಿದರು.

2008: ಬಹುಕೋಟಿ ರೂಪಾಯಿ ಮೌಲ್ಯದ ಬಾರಕ್ ಕ್ಷಿಪಣಿ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಹಾಗೂ ಪುತ್ರ ಸಂಜೀವ್ ನಂದಾ ಅವರನ್ನು ಸಿಬಿಐ ತಂಡ ಮುಂಬೈಯಲ್ಲಿ ಬಂಧಿಸಿತು. ಜೊತೆಗೆ ನಂದಾ ಕುಟುಂಬದ ಚಾರ್ಟರ್ಡ್ ಅಕೌಂಟೆಂಟ್ ಬಿಪಿನ್ ಷಾ ಮತ್ತು 1999ರ ತಂಡದ ಭಾರತೀಯ ಕಂದಾಯ ಸೇವೆ ಅಧಿಕಾರಿ ಆಶುತೋಷ್ ವರ್ಮಾ ಅವರನ್ನೂ ಬಂಧಿಸಲಾಯಿತು.

2008: ಎಲ್ ಟಿ ಟಿ ಇ ನಾಯಕ ವಿ.ಪ್ರಭಾಕರನ್ ಅವರು ಮೂರು ತಿಂಗಳ ಹಿಂದೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ಬಳಿಕ ಇದೇ ಮೊದಲ ಬಾರಿ ಮೃತ ಟಿ ಎನ್ ಎ ಸಂಸದ ಕೆ.ಸಿವನೆಸನ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರು. ವನ್ನಿಯಲ್ಲಿ ನಡೆದ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಭಾಕರನ್ ಸುತ್ತ ಸಣ್ಣ ಗುಂಪು ಸುತ್ತುವರೆದಿತ್ತು. ಎಲ್ ಟಿ ಟಿ ಇ ಬೆಂಬಲಿಗ ಸಿವನೆಸನ್ ಅವರು ವನ್ನಿಯಲ್ಲಿ ಬಾಂಬ್ ದಾಳಿಗೆ ಬಲಿಯಾಗಿದ್ದರು.

2008: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನ ಉದ್ಯಾನವನ ಹಾಗೂ ರಾಜೀವ್ ಅವರ ಕಂಚಿನ ಪ್ರತಿಮೆಯನ್ನು ಅಂಗುಲ್ನ ಬನಾರ್ ಪಾಲಿನಲ್ಲಿ ಅನಾವರಣಗೊಳಿಸಿದರು. ರಾಜೀವ್ ಪ್ರತಿಮೆಯನ್ನು ಹತ್ತು ವರ್ಷಗಳ ಹಿಂದೆ ತಯಾರಿಸಲಾಗಿದ್ದು, ಗಾಂಧಿ ಕುಟುಂಬದ ಸದಸ್ಯರಿಂದಲೇ ಅನಾವರಣಗೊಳ್ಳಬೇಕೆಂಬ ಆಶಯದಿಂದ ಇಲ್ಲಿಯವರೆಗೂ ಪ್ರತಿಮೆಯನ್ನು ಅನಾವರಣಗೊಳಿಸಿರಲಿಲ್ಲ. ತಮಿಳುನಾಡಿನಲ್ಲಿ ಹತ್ಯೆಯಾಗುವುದಕ್ಕಿಂತ ಮುಂಚೆ ಮೇ 21, 1991ರಂದು ರಾಜೀವ್ ಗಾಂಧಿ ಇದೇ ಸ್ಥಳದಲ್ಲಿ ತಮ್ಮ ಕೊನೆಯ ಸಾರ್ವಜನಿಕ ಸಭೆ ನಡೆಸಿದ್ದರು.

2008: ನೂತನ ಸರ್ಕಾರ ರಚನೆ ಸಂಬಂಧ ಪಿಪಿಪಿ ಪಕ್ಷದ ನಾಯಕ ಆಸಿಫ್ ಆಲಿ ಜರ್ದಾರಿ ಅವರು ಪಿಎಂ ಎಲ್-ಎನ್ ನಾಯಕ ನವಾಜ್ ಷರೀಫ್ ಜತೆಗೆ ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಸ್ಥಾನದ ಕೊಡುಗೆಯನ್ನು ನವಾಜ್ ಷರೀಫ್ ಅವರು ಸ್ಪಷ್ಟವಾಗಿ ತಿರಸ್ಕರಿಸಿದರು.

2008: ಮಲೇಷ್ಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬದಾವಿ ನೇತೃತ್ವದ ಆಡಳಿತಾರೂಢ ಸಮ್ಮಿಶ್ರ ಪಕ್ಷ ಭಾರಿ ಹಿನ್ನಡೆ ಅನುಭವಿಸಿತು. 4 ರಾಜ್ಯಗಳನ್ನು ಕಳೆದುಕೊಂಡ ಅದು, ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಗಳಿಸಲು ವಿಫಲವಾಯಿತು.

2008: ಕೆನಡಾದಲ್ಲಿರುವ ಭಾರತೀಯ ಮೂಲದ ನಾಲ್ವರು ಟೊರಾಂಟೋದ ಅಲ್ಬೆರ್ಟಾದಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಜಯ ಗಳಿಸಿದರು. ವಿಂಡ್ಸರ್ ವಿವಿ ಕಾನೂನು ವಿದ್ಯಾರ್ಥಿ ಮನ್ಮೀತ್ ಭುಲ್ಲರ್, ನರೇಶ್ ಭಾರದ್ವಾಜ್, ಪೀಟರ್ ಸಂಧು ಹಾಗೂ ರಾಜ್ ಶೆರ್ಮಾನ್ ವಿಜೇತ ಅಭ್ಯರ್ಥಿಗಳು.

2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಳ್ಳಾರಿ ರಸ್ತೆಯ ಆನಂದನಗರ ಜಂಕ್ಷನ್ ಬಳಿ ಬೆಳಗ್ಗೆ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ 52 ಎಲಿಮೆಂಟ್ ಅಳವಡಿಸಿ ನಿರ್ಮಿಸಲಾಗುವ ನೂತನ ಅಂಡರ್ ಪಾಸ್ ಕಾಮಗಾರಿಯನ್ನು ಆರಂಭಿಸಿತು.

2008: ಹೆಸರಾಂತ ಮಾಜಿ ರಾಜ್ಯ ಆಟಗಾರ ಹಾಗೂ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಟಿ. ಷಣ್ಮುಗಂ (64) ಅವರು ತಮಿಳುನಾಡಿನ ವೇಲೂರು ಬಳಿಯ ಅರಾನಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. `ಷಣ್ಣಿ' ಎಂದೇ ಖ್ಯಾತರಾಗಿದ್ದ ಷಣ್ಮುಗಂ ಕರ್ನಾಟಕ ರಾಜ್ಯದಲ್ಲಿ ಹಾಕಿ ಆಟದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸಿದ್ದವರು. 4 ದಶಕಕ್ಕೂ ಹೆಚ್ಚು ಕಾಲ ತಮ್ಮನ್ನು ಹಾಕಿ ಕ್ರೀಡೆಗೆ ಸಮರ್ಪಿಸಿಕೊಂಡಿದ್ದ ಅವರು, ಆಟಗಾರರಾಗಿ, ತಾಂತ್ರಿಕ ಅಧಿಕಾರಿಯಾಗಿ, ಅಂಪೈರ್ ಆಗಿ, ಕ್ರೀಡಾ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಥ್ಲೆಟಿಕ್ಸ್ ಮೂಲಕ ತಮ್ಮ ಕ್ರೀಡಾ ಜೀವನ ಆರಂಭಿಸಿದ್ದ ಷಣ್ಮುಗಂ ಬಳಿಕ ಎಂಇಜಿ ಆಟಗಾರರಾದ ವಿ.ಜೆ.ಪೀಟರ್, ಮ್ಯಾನ್ಯೂಯೆಲ್ ಅವರ ಮೂಲಕ ಹಾಕಿ ಆಟದತ್ತ ಆಕರ್ಷಿತರಾದರು. ಆರಂಭದ ದಿನಗಳಲ್ಲಿ ಪ್ರಿಮ್ ರೋಸ್, ಬೆಂಗಳೂರು ಯೂಥ್ಸ್, ವಾಂಡರರ್ಸ್ ಕ್ಲಬ್ ಪರ ಆಡಿದ್ದ ಅವರು, ನಂತರ ತಮ್ಮ ಜೀವನ ಪೂರ್ತಿ ಸಿಐಎಲ್ ತಂಡಕ್ಕೆ ಆಡಿದರು. ವೃತ್ತಿಯಲ್ಲಿ ಟೆಲಿಕಾಂ ಎಂಜಿನಿಯರ್ ಆಗಿದ್ದ ಷಣ್ಮುಗಂ ಸಿಐಎಲ್ನಲ್ಲಿ ಜೂನಿಯರ್ ಸೈಂಟಿಫಿಕ್ ಅಧಿಕಾರಿಯಾಗಿ ನಿವೃತ್ತರಾಗಿದ್ದರು. 1964ರಿಂದ ಸುಮಾರು 36 ವರ್ಷಗಳ ಕಾಲ ಹಾಕಿ ಆಡಿದ ಷಣ್ಮುಗಂ ರಾಜ್ಯ ತಂಡದ ಪರವಾಗಿ ಹದಿನಾಲ್ಕು ವರ್ಷಗಳ (1967-1981) ಕಾಲ ಆಡಿದ್ದರು. 1985 ರಿಂದ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ಷಣ್ಮುಗಂ ಅನೇಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಹ್ವಾನ ಟೂರ್ನಿಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಭಾರತೀಯ ಮೂಲದ ಸಂಗೀತಗಾರ ಜುಬಿನ್ ಮೆಹ್ತಾ ಅವರಿಗೆ 2007ನೇ ಸಾಲಿನ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿತು. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜುಬಿನ್ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು. 2005ರಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ಜುಬಿನ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಎರಡನೇ ಭಾರತೀಯ.

2007: ಭಾರತೀಯ ಮೂಲದ ಲೇಖಕಿ ಕಿರಣ್ ದೇಸಾಯಿ ಅವರ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಪುಸ್ತಕವು ಮತ್ತೊಂದು ಸಾಹಿತ್ಯ ಪ್ರಶಸ್ತಿಗೆ ಭಾಜನವಾಯಿತು. ಈ ಸಾಲಿನ ದಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಫಿಕ್ಷನ್ ಪ್ರಶಸ್ತಿಗೆ ಈ ಪ್ರಸ್ತಕ ಆಯ್ಕೆಯಾಯಿತು. ಈ ಮೊದಲೇ ದಿ ಇನ್ ಹೆರಿಟೆನ್ಸ್ ಆಫ್ ಲಾಸ್ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿತ್ತು.

2007: ರಾಷ್ಟ್ರೀಯ ಮಹತ್ವದ ಕ್ರೀಡಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸಾರ್ವಜನಿಕ ಪ್ರಸಾರ ಸಂಸ್ಥೆಯಾದ `ಪ್ರಸಾರ ಭಾರತಿ' ಜೊತೆಗೆ ಹಂಚಿಕೊಳ್ಳುವುದನ್ನು ಖಾಸಗಿ ಟಿವಿ ಚಾನೆಲ್ಲುಗಳಿಗೆ ಕಡ್ಡಾಯಗೊಳಿಸುವ 2007ರ ಕ್ರೀಡಾ ಪ್ರಸಾರ ಸಂಕೇತಗಳ (ಪ್ರಸಾರ ಭಾರತಿ ಜೊತೆಗೆ ಹಂಚಿಕೆ ಕಡ್ಡಾಯ) ಮಸೂದೆಯನ್ನು ಸಂಸತ್ತು ಅಂಗೀಕರಿಸಿತು. ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳಲು ಖಾಸಗಿ ಚಾನೆಲ್ ಒಂದು ನಿರಾಕರಿಸಿದ್ದಲ್ಲದೆ, ಸರ್ಕಾರದ ಪ್ರಸಾರ ನಿಯಮಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆಯನ್ನು ಈ ಮಸೂದೆ ಕಾನೂನುಬದ್ಧಗೊಳಿಸಿತು.

2007: ಭಾರತೀಯ ಸಾಹಿತ್ಯಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಖ್ಯಾತ ಕಾಶ್ಮೀರಿ ಕವಿ, ವಿಮರ್ಶಕ ರೆಹಮಾನ್ ರಾಹಿ ಅವರನ್ನು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಎಲ್.ಎಂ. ಸಿಂಘ್ವಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು 40ನೇ ಜ್ಞಾನಪೀಠ ಪ್ರಶಸ್ತಿಯಾದ 2004-05ರ ಸಾಲಿನ ಪ್ರಶಸ್ತಿಗೆ ರೆಹಮಾನ್ ರಾಹಿ ಅವರನ್ನು ಆಯ್ಕೆ ಮಾಡಿತು. ಜ್ಞಾನಪೀಠವು ಭಾರತೀಯ ಸಾಹಿತ್ಯ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, 5 ಲಕ್ಷ ರೂಪಾಯಿ ಗೌರವ ಧನ, ಪ್ರಶಸ್ತಿ ಫಲಕ ಮತ್ತು ವಾಗ್ದೇವಿಯ ಮೂರ್ತಿಯನ್ನು ಒಳಗೊಂಡಿರುತ್ತದೆ. ರಾಹಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊತ್ತ ಮೊದಲ ಕಾಶ್ಮೀರಿ ಬರಹಗಾರರಾಗಿದ್ದು, ಈ ಹಿಂದೆ 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1925ರಲ್ಲಿ ಜನಿಸಿದ ರಾಹಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಅವರು ಸಾಹಿತ್ಯ ಅಕಾಡೆಮಿ ಫೆಲೋ ಕೂಡಾ. ಅವರ ಕವನಗಳು, ಪ್ರಬಂಧಗಳ ಸಂಕಲನಗಳು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಮಹಾಶ್ವೇತಾ ದೇವಿ, ರಾಮಕಾಂತ ರಥ್ ಮತ್ತು ಗೋಪಿಚಂದ್ ನಾರಂಗ್ ಅವರೂ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಲ್ಲಿ ಸೇರಿದ್ದರು.

2007: ಬ್ರಿಟನ್ನಿನಲ್ಲಿರುವ ಭಾರತೀಯ ವೈದ್ಯರು ವೀಸಾ ಸಂಬಂಧಿತ ಕಾನೂನು ಸಮರದಲ್ಲಿ ವಿಜಯಗಳಿಸಿದರು. 2007ರ ಆಗಸ್ಟ್ 1ರ ನಂತರದ ವಾಸಕ್ಕೆ ವೀಸಾ ಹೊಂದಿಲ್ಲದ ಭಾರತೀಯ ವೈದ್ಯರು ನೇಮಕ ಪ್ರಕ್ರಿಯೆಗೆ ಅರ್ಹರಾಗುವುದಿಲ್ಲ ಎಂದು ಘೋಷಿಸಿದ ಕಾನೂನನ್ನು ಸರ್ಕಾರವೇ ಹಿಂತೆಗೆದುಕೊಂಡಿತು. ಈ ಕಾನೂನು ವಿರುದ್ಧ ಭಾರತೀಯ ವೈದ್ಯರು ಕಾನೂನು ಸಮರ ಸಾರಿದ್ದರು.

2007: ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ಸಣ್ಣ ಕಾರು ಯೋಜನೆಯ ಮಹತ್ವದ ಹೆಜ್ಜೆಯಾಗಿ ಜಮೀನು ಭೋಗ್ಯಕ್ಕೆ ನೀಡುವ ಒಪ್ಪಂದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಸಹಿ ಹಾಕಿತು. ಇದರಿಂದಾಗಿ ಟಾಟಾ ಮೋಟಾರ್ಸ್ ಸಂಸ್ಥೆಗೆ 997 ಎಕರೆ ಮೇಲೆ ಪೂರ್ಣ ಸ್ವಾಮ್ಯ ಲಭಿಸಿತು.

2006: ಭಾರತದ ಪರ ಮೊಹಾಲಿಯಲ್ಲಿ 131ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಸಚಿನ್ ತೆಂಡೂಲ್ಕರ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಭಾರತದ ಪರ ಕಪಿಲ್ ದೇವ್ ಅತ್ಯಂತ ಹೆಚ್ಚು ಟೆಸ್ಟುಗಳಲ್ಲಿ ಅಂದರೆ 131 ಪಂದ್ಯಗಳಲ್ಲಿ ಆಡಿದ ದಾಖಲೆ ಹೊಂದಿದ್ದರು.

2006: ಗೂಢಚರ್ಯೆ ಹಾಗೂ 14 ಮಂದಿಯ ಸಾವಿಗೆ ಕಾರಣವಾದ 4 ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ 1991ರಲ್ಲಿ ಪಾಕಿಸ್ಥಾನಿ ಸುಪ್ರೀಂ ಕೋರ್ಟಿನಿಂದ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಸರಬ್ ಜಿತ್ ಸಿಂಗ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಪಾಕ್ ಸುಪ್ರೀಂಕೋರ್ಟ್ ವಜಾ ಮಾಡಿತು.

2006: ಮ್ಯಾನ್ಮಾರ್ (ಹಿಂದಿನ ಬರ್ಮಾ) ಭೇಟಿ ಕಾಲದಲ್ಲಿ ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊನೆಯ ಮೊಘಲ್ ದೊರೆ ಬಹ್ದದೂರ್ ಷಾ ಅವರ ಯಾಂಗನ್ನಿನಲ್ಲಿ ಇರುವ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ ಬ್ರಿಟಿಷ್ ಆಡಳಿತ ಬಹದ್ದೂರ್ ಷಾ ಅವರನ್ನು ಯಾಂಗನ್ಗೆ ಗಡೀಪಾರು ಮಾಡಿತ್ತು. ಅಲ್ಲೇ ಮೃತರಾದ ಷಾ ಅವರ ಸಮಾಧಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕಲಾಂ ಅವರು ಈ ಭೇಟಿ ಮೂಲಕ ಪಾತ್ರರಾದರು. ನೇತಾಜಿ ಸುಭಾಶ ಚಂದ್ರ ಬೋಸ್ ಅವರು ಈ ಸಮಾಧಿಗೆ ಬೇಟಿ ನೀಡಿದ್ದರು.

1951: ಝಾಕೀರ್ ಹುಸೇನ್ ಹುಟ್ಟಿದ ದಿನ. ಭಾರತೀಯ ತಬಲಾ ವಾದಕರಾದ ಇವರು ಸಾಂಪ್ರದಾಯಿಕ ತಬಲಾವಾದನ ಕಲೆಯನ್ನು ಕ್ರಾಂತಿಕಾರಕಗೊಳಿಸಿದರು.

1934: ಯೂರಿ ಅಲೆಕ್ಸೆಯಿವಿಚ್ ಗಗಾರಿನ್ (1934-1968) ಹುಟ್ಟಿದ ದಿನ. ಸೋವಿಯತ್ ಗಗನಯಾನಿಯಾದ ಇವರು 1961ರಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1907: ಮಿರ್ಸಿಯಾ ಎಲಿಯಾಡ್ (1907-86) ಹುಟ್ಟಿದರು. ರೊಮೇನಿಯಾ ಸಂಜಾತ ಧಾರ್ಮಿಕ ಇತಿಹಾಸಕಾರರಾದ ಇವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಸುರೇಂದ್ರನಾಥ ದಾಸ್ ಗುಪ್ತ ಅವರ ಕೈಕೆಳಗೆ ಧಾರ್ಮಿಕ ಇತಿಹಾಸದ ಅಧ್ಯಯನ ನಡೆಸಿದ್ದರು. ಆರು ಸಂಪುಟಗಳ `ಎನ್ಸೈಕ್ಲೋಪಿಡಿಯಾ ಆಫ್ ರಿಲಿಜನ್ಸ್'ನ ಮುಖ್ಯ ಸಂಪಾದಕರೂ ಆಗಿದ್ದರು.

1900: ಹೊವರ್ಡ್ ಹಾಥವೇ ಐಕಿನ್ (1900-1973) ಹುಟ್ಟಿದ ದಿನ. ಅಮೆರಿಕದ ಗಣಿತ ತಜ್ಞನಾದ ಈತ ಮುಂಚೂಣಿಯ `ಹಾರ್ವರ್ಡ್ ಮಾರ್ಕ್ 1' ಆಧುನಿಕ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರಿನ ಸಂಶೋಧಕ.

1862: ಫರ್ನಾಂಡ್ ಇಸಿಡೋರ್ ವೈಡಲ್ (1862-1929) ಹುಟ್ಟಿದ ದಿನ. ಫೆಂಚ್ ವೈದ್ಯ ಹಾಗೂ ಬ್ಯಾಕ್ಟೀರಿಯಾ ತಜ್ಞನಾದ ಈತ ಟೈಫಾಯಿಡ್ ಜ್ವರಕ್ಕೆ ಚಿಕಿತ್ಸೆ ನೀಡುವ ತನ್ನದೇ ವಿಧಾನ ರೂಪಿಸಿದ. ಈ ವಿಧಾನ `ವೈಡಾಲ್ ರಿಯಾಕ್ಷನ್' ಎಂದು ಖ್ಯಾತಿ ಪಡೆದಿದೆ.

1846: ಸಿಖ್ ಸಮರ ಕೊನೆಗೊಂಡಿತು. ಸಿಖ್ ಸರ್ಕಾರವು ಲಾಹೋರ್ ಒಪ್ಪಂದ ಪ್ರಕಾರ ಜಲಂಧರ್ ದೋಆಬ್ ಮತ್ತು ಕಾಶ್ಮೀರವನ್ನು ಬ್ರಿಟಿಷರಿಗೆ ಒಪ್ಪಿಸಿತು.

1831: ದೊರೆ ಲೂಯಿ ಫಿಲಿಪ್ ಆಫ್ರಿಕಾದಲ್ಲಿನ ಫ್ರೆಂಚ್ ವಸಾಹತುಗಳ ನಿಯಂತ್ರಣಕ್ಕೆ ನೆರವಾಗುವ ಸಲುವಾಗಿ ವಿದೇಶೀ ಪಡೆ ಸ್ಥಾಪಿಸಿದ. ಅಲ್ಜೀರಿಯಾದ ಸಿಡಿ ಬೆಲ್ ಅಬ್ಬೆಸ ಈ ಪಡೆಯ ಕೇಂದ್ರಸ್ಥಾನವಾಗಿತ್ತು. ಪ್ರಾರಂಭದಲ್ಲಿ ಪ್ರಾನ್ಸಿನಿಂದ ವೇತನ ಪಡೆದು ಕೆಲಸ ಮಾಡುವ ವಿದೇಶೀ ಸ್ವಯಂಸೇವಕರು ಈ ಪಡೆಯಲ್ಲಿ ಇದ್ದರು. ಆದರೆ ಈಗ ಈ ಪಡೆಯಲ್ಲಿ ಫ್ರೆಂಚರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. 1962ರಲ್ಲಿ ಅಲ್ಜೀರಿಯಾ ಸ್ವತಂತ್ರವಾದ ಬಳಿಕ ಈ ಪಡೆಯ ಕೇಂದ್ರ ಕಚೇರಿಯನ್ನು ಮಾರ್ಸೆಲ್ ಸಮೀಪದ ಅಬನೆ (Aubagne) ಎಂಬಲ್ಲಿಗೆ ಸ್ಥಳಾಂತರಿಸಲಾಯಿತು.

1824: ಅಮೆರಿಕಾದ ಲೀಲ್ಯಾಂಡ್ ಸ್ಟಾನ್ ಫೋರ್ಡ್ (1824-1893) ಹುಟ್ಟಿದ ದಿನ. ಅಮೆರಿಕದ ಸೆನೆಟರ್ ಆಗಿದ್ದ ಈತ 1885ರಲ್ಲಿ ಸ್ಟಾನ್ ಫೋರ್ಡ್ ಯುನಿವರ್ಸಿಟಿಯನ್ನು ಸ್ಥಾಪಿಸಿ ಅದನ್ನು ತನ್ನ ಏಕೈಕ ಮೃತ ಪುತ್ರ ಲೀಲ್ಯಾಂಡ್ ಜ್ಯೂನಿಯರ್ ಸ್ಮರಣೆಗಾಗಿ ಅರ್ಪಿಸಿದ.

1796: ಫ್ರಾನ್ಸಿನ ಭಾವಿ ಚಕ್ರವರ್ತಿ ನೆಪೋಲಿಯನ್ ಬೋನಪಾರ್ಟೆ ಜೋಸೆಫಿನ್ ಡೆ ಬಿಯುಹರ್ನಯಿಸಳನ್ನು ಮದುವೆಯಾದ. 1809ರಲ್ಲಿ ಈ ದಂಪತಿ ವಿಚ್ಛೇದನ ಪಡೆಯಿತು.

No comments:

Advertisement