Thursday, December 12, 2019

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ
ರಾಜ್ಯಸಭೆಯಲ್ಲಿ 125 ಪರ, 105 ವಿರೋಧ ಮತಗಳೊಂದಿಗೆ ಒಪ್ಪಿಗೆ

ನವದೆಹಲಿ: ವಿರೋಧ ಪಕ್ಷಗಳ ಭಾರೀ ಪ್ರತಿಭಟನೆ, ಶಿವಸೇನೆಯ ಸಭಾತ್ಯಾಗದ ಬಳಿಕ ರಾಜ್ಯಸಭೆಯು 2019 ಡಿಸೆಂಬರ್ 11ರ ಬುಧವಾರ ಬೆಳಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಐತಿಹಾಸಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ರಾತ್ರಿ ತನ್ನ ಅಂಗೀಕಾರವನ್ನು ನೀಡಿತು. ಸದನದಲ್ಲಿ 125 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 105 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಶಿವಸೇನೆಯ ಮೂವರು ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವವನ್ನು ಸದನವು ತಿರಸ್ಕರಿಸಿತು. ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಲೋಕಸಭೆಯು ಕೋಲಾಹಲಕಾರಿ ಪ್ರತಿಭಟನೆಯ ಬಳಿಕ ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತ್ತು.

ಉಭಯ ಸದನಗಳ ಅನುಮೋದನೆಯೊಂದಿಗೆ ಪೌರತ್ವ ತಿದ್ದುಪಡಿಯು ಈಗ  ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ ಶಾಸನರೂಪ ಪಡೆಯಲಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ರಾಷ್ಟ್ರಗಳ ಸುಮಾರು ೧.೫ ಕೋಟಿಗೂ ಹೆಚ್ಚು ಮಂದಿ ವಲಸಿಗರಿಗೆ ಭಾರತದ ಪೌರತ್ವವವನ್ನು ಒದಗಿಸಲಿದೆ. ಇವರ ಪೈಕಿ ಶೇಕಡಾ ೫೦ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸೇರಿದವರು ಎಂದು ಹೇಳಲಾಯಿತು.

ಸುಮಾರು ೬ ಗಂಟೆಗಳಿಗೂ ಹೆಚ್ಚಿನ ಕೋಲಾಹಲಕಾರೀ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿದ ಬಳಿಕ ಸದನವು ಅಂಗೀಕರಿಸಿದ ಈ ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ದೇಶಗಳಿಂದ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರರಾಗುವ ಅವಕಾಶವನ್ನು ಒದಗಿಸಿದ್ದು, ಇದಕ್ಕಾಗಿ ಅವರ ೧೧ ವರ್ಷಗಳ ಕಾಯುವಿಕೆಯನ್ನು ಸಮಾಪ್ತಿಗೊಳಿಸಿತು.

ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ಚರ್ಚೆಗೆ ಉತ್ತರ ನೀಡಿದ ಅಮಿತ್ ಶಾ ಅವರು ’ಭಾರತವು ಎಂದಿಗೂ ಮುಸ್ಲಿಮ್ ಮುಕ್ತ ರಾಷ್ಟ್ರವಾಗದು, ಅವರು ಹಿಂದೆ, ಇಂದು ಮತ್ತು ಮುಂದೆ ಕೂಡಾ ಭಾರತೀಯರಾಗಿಯೇ ಇರುತ್ತಾರೆ ಎಂದು ರಾಜ್ಯಸಭೆಯಲ್ಲಿ ಘೋಷಿಸಿ,  ’ಪೌರತ್ವ (ತಿದ್ದುಪಡಿ) ಮಸೂದೆಯು ’ ಚಾರಿತ್ರಿಕ ತಪ್ಪನ್ನು ಸರಿಪಡಿಸುತ್ತಿದೆ ಎಂದು ಪ್ರತಿಪಾದಿಸಿದರು.

‘ಧಾರ್ಮಿಕ ನೆಲೆಯಲ್ಲಿ ಭಾರತವನ್ನು ವಿಭಜಿಸಲಾಗಿದೆ ಎಂದು ನಾನು ಸದನದಲ್ಲಿ ಬುಧವಾರ ಮಸೂದೆ ಮಂಡನೆ ಮಾಡುತ್ತಾ ಹೇಳಿದ್ದೇನೆ. ವಿಪಕ್ಷಗಳು ನನ್ನ ಈ ಹೇಳಿಕೆಯನ್ನು ಟೀಕಿಸಿವೆ. ಆದ್ದರಿಂದ ನಾನು ೧೯೫೦ರ ಏಪ್ರಿಲ್ ೮ರ ನೆಹರೂ-ಲಿಯಾಖತ್ ಒಪ್ಪಂದದ (ದೆಹಲಿ ಘೋಷಣೆ) ಸಾಲನ್ನು ಉಲ್ಲೇಖಿಸಬಯಸುವೆ ಎಂದು ಅಮಿತ್ ಶಾ ಹೇಳಿದರು.

‘ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಭಯ ದೇಶಗಳಲ್ಲೂ (ಭಾರತ ಮತ್ತು ಪಾಕಿಸ್ತಾನ) ಸರ್ಕಾರ ಮತ್ತು ತಮ್ಮ ಸ್ವಂತ ಧರ್ಮ ಆಚರಣೆಯಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗುವುದು ಎಂದು ಸದರಿ ಒಪ್ಪಂದ ಹೇಳಿದೆ. ಉಭಯ ದೇಶಗಳ ಪ್ರಧಾನಿಗಳು ತಮ್ಮ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಪ್ರತಿಪಾದನೆಗಳು ಇವು ಎಂದು ಶಾ ನುಡಿದರು.

’ಆದ್ದರಿಂದ ದೇಶವಿಭಜನೆಯನ್ನು ಧಾರ್ಮಿಕ ನೆಲೆಯಲ್ಲಿಯೇ ಮಾಡಲಾಗಿದೆ. ಇದೊಂದು ದೊಡ್ಡ ತಪ್ಪಾಗಿದ್ದು, ಈ ಕಾರಣದಿಂದಲೇ ನಾವು ಈ ಮಸೂದೆಯನ್ನು ರಚಿಸಬೇಕಾಯಿತು ಎಂದು ಶಾ ಹೇಳಿದರು.

‘ನನಗೆ ಪಾಕಿಸ್ತಾನದ ಕಾನೂನು ಗೊತ್ತಿದೆ, ಅಲ್ಲಿ ಹಲವಾರು ನಿರ್ಬಂಧಗಳಿವೆ. ಭಾರತವು ತನ್ನ ತತ್ವಗಳನ್ನು ಅನುಸರಿಸಿದೆ- ನಾವು ಅಲ್ಪಸಂಖ್ಯಾತ ಸಮುದಾಯದ ಜನರು ಭಾರತದ ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇತ್ಯಾದಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದನ್ನು ನೋಡಿದ್ದೇವೆ. ಆದರೆ ಇದು ನೆರೆಯ ರಾಷ್ಟ್ರಗಳಲ್ಲಿ ಸಂಭವಿಸಿದೆಯೇ? ಈ ಅಲ್ಪಸಂಖ್ಯಾತರು ತಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಮ್ಮ ದೇಶಕ್ಕೆ ಬಂದಿದ್ದಾರೆ. ನಾವು ಅವರಿಗೆ ಪೌರತ್ವ ಕೊಡಬಾರದೇ?’ ಎಂದು ಪ್ರಶ್ನಿಸಿದ ಗೃಹ ಸಚಿವರು ’ಹೀಗಾಗಿಯೇ ಈ ಕಾನೂನು ಅಗತ್ಯವಾಗಿದೆ ಎಂದು ನುಡಿದರು.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ಬಂದಿರುವ ವಲಸೆಗಾರರಿಗೆ ತ್ವರಿತಗತಿಯಲ್ಲಿ ಪೌರತ್ವವನ್ನು ನೀಡಲು ಮಸೂದೆ ಕೋರಿದೆ. ಈ ಅಲ್ಪಸಂಖ್ಯಾತರು ಗೌರವಾನ್ವಿತ ಬದುಕು ನೀಡುವುದು ಭಾರತದ ಕರ್ತವ್ಯ ಎಂದು ವಾದಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಮಸೂದೆಯನ್ನು ರೂಪಿಸಿತ್ತು.

ಸರ್ಕಾರವನ್ನು ಜಗ್ಗಾಡಿದ ಪ್ರತಿಪಕ್ಷಗಳು: ಕೋಲಾಹಲಕಾರೀ ಚರ್ಚೆಯ ವೇಳೆಯಲ್ಲಿ ವಿರೋಧ ಪಕ್ಷಗಳು ಸಂವಿಧಾನದ ಅಡಿಪಾಯದ ಮೇಲೆಯೇ ದಾಳಿ ನಡೆಸುತ್ತಿರುದಕ್ಕಾಗಿ ಸರ್ಕಾರವನ್ನು ಜಗ್ಗಾಡಿದವು. ಆದರೆ ಕೇಂದ್ರವು ಎಲ್ಲ ಆರೋಪಗಳನ್ನೂ ತಳ್ಳಿ ಹಾಕಿತು.

ಸಚಿವ ಅಮಿತ್ ಶಾ ಅವರು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದರೊಂದಿಗೆ ದಿನದ ಕಲಾಪ ಆರಂಭಗೊಂಡಿತ್ತು. ’ಈ ಮಸೂದೆಯು ಮೂರು ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಿದೆ ಶಾ ಹೇಳಿದರು.

‘ದೇಶ ವಿಭಜನೆಯಾದಾಗ, ಅಲ್ಪಸಂಖ್ಯಾತರಿಗೆನಾಗರಿಕ ಹಕ್ಕುಗಳನ್ನು ನೀಡಲಾಗುತ್ತದೆ ಮತ್ತು ಅವರು ಸಹಜ ಜೀವನ ನಡೆಸುವರು ಎಂದು ಭಾವಿಸಲಾಗಿತ್ತು. ಅವರಿಗೆ ತಮ್ಮ ಸ್ವಂತ ಧರ್ಮ ಅನುಸರಣೆಗೆ ಮತ್ತು ತಮ್ಮ ಮಹಿಳೆಯರ ರಕ್ಷಣೆಗೆ ಸಮರ್ಥರಾಗುವರು ಎಂದು ಯೋಚಿಸಲಾಗಿತ್ತು. ಆದರೆ ಹಿಂದಕ್ಕೆ ತಿರುಗಿ ನೋಡಿದಾಗ, ನಿಜವಾದ ಸತ್ಯ ಏನು ಎಂಬುದು ನಮಗೆ ಅರಿವಾಗುತ್ತದೆ. ಈ ಜನರಿಗೆ ತಮ್ಮ ಹಕ್ಕುಗಳು ಲಭಿಸಲಿಲ್ಲ. ಅವರನ್ನು ಕೊಲ್ಲಲಾಯಿತು, ಮತಾಂತರ ಮಾಡಲಾಯಿತು ಇಲ್ಲವೇ ಅವರು ಭಾರತಕ್ಕೆ ಬಂದರು ಎಂದು ಶಾ ವಿವರಿಸಿದರು.

ಮಸೂದೆಯು ಭಾರತದಲ್ಲಿನ ಮುಸ್ಲಿಮರ ವಿರುದ್ಧ ಎಂಬುದನ್ನು ಖಂಡತುಂಡವಾಗಿ ನಿರಾಕರಿಸಿದ ಗೃಹಸಚಿವರು, ’ಭಾರತದಲ್ಲಿನ ಮುಸ್ಲಿಮರು ನಮ್ಮ ಪ್ರಜೆಗಳು, ಅವರನ್ನು ಚಿತ್ರಹಿಂಸೆಗೆ ಪಡಿಸಲಾಗುವುದಿಲ್ಲ. ನೀವು ಏನು ಬಯಸುತ್ತಿದ್ದೀರಿ -ವಿಶ್ವಾದ್ಯಂತದಿಂದ ಬರುವ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಬೇಕೆ? ಇದು ಸಾಧ್ಯವಿಲ್ಲ. ಈ ಮೂರು ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗಿದ್ದಾರೆ,ಆದ್ದರಿಂದ ನಾವು ಈ ಮೂರು ರಾಷ್ಟ್ರಗಳನ್ನು ಮಾತ್ರ ಸೇರಿಸಿದ್ದೇವೆ ಎಂದು ಶಾ ಹೇಳಿದರು.

ಆದರೆ ಗೃಹಸಚಿವರು ತಮ್ಮ ಪ್ರಸ್ತಾವನಾ ಭಾಷಣ ಮುಗಿಸುತ್ತಿದ್ದಂತೆಯೇ, ವಿರೋಧ ಪಕ್ಷಗಳು ಮೊಹಮ್ಮದ್ ಅಲಿ ಜಿನ್ನಾ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಹೆಸರುಗಳನ್ನು ಉಲ್ಲೇಖಿಸುತ್ತಿರುವುದಕ್ಕಾಗಿ ಸರ್ಕಾರದ ವಿರುದ್ಧ ಟೀಕೆಯ ಮಳೆಗರೆದವು.

‘ಇದು ಭಾರತದ ಆತ್ಮಕ್ಕೆ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಇದು ನೈತಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತದೆ. ಇದು ಸಂವಿಧಾನಾತ್ಮಕ ಪರೀಕ್ಷೆಯಲ್ಲಿ ವಿಫಲವಾಗುತ್ತದೆ.  ಇದು ವಿಭಜನಕಾರಿಮತ್ತು ತಾರತಮ್ಯದ್ದು ಎಂದು ಕಾಂಗ್ರೆಸ್ ಪಕ್ಷದ ಆನಂದ ಶರ್ಮ ಹೇಳಿದರು.

ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಚರ್ಚೆಯಲ್ಲಿ ಸರ್ಕಾರದ ವಿರುದ್ಧದ ಟೀಕಾಪ್ರಹಾರಕ್ಕೆ ಇಳಿದವು. ’ಪ್ರಧಾನಿಯವರು ಇದನ್ನು ಸ್ವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂಬುದಾಗಿ ಹೇಳಿದ್ದನ್ನು ನಾನು ಓದಿದ್ದೇನೆ. ಇದನ್ನು ಎಲ್ಲಿ ಬರೆದಿಡಲಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ.: ಇದನ್ನು ರಾಷ್ಟ್ರ ಪಿತನ ಸಮಾಧಿಯ ಮೇಲೆ ಬರೆಯಲಾಗುತ್ತದೆ, ಆದರೆ ಯಾವ ದೇಶದ ರಾಷ್ಟ್ರಪಿತ? ಕರಾಚಿಯಲ್ಲಿ, ಜಿನ್ನಾ ಸಮಾಧಿಯಲ್ಲಿ ಎಂದು ತೃಣಮೂಲ ಕಾಂಗ್ರೆಸ್ಸಿನ ಡೆರೆಕ್ ಒಬ್ರಿಯನ್ ನುಡಿದರು.

ಸಮಾಜವಾದಿ ಪಕ್ಷದ ಜಾವೇದ್ ಅಲಿಖಾನ್  ಅವರು ’ನಮ್ಮ ಸಕಾರವು ಈ ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ಎನ್‌ಆರ್ ಸಿ ಮೂಲಕ ಜಿನ್ನಾ ಅವರ ಕನಸನ್ನು ನನಸಾಗಿಸಲು ಯತ್ನಿಸುತ್ತಿದೆ. ನೆನಪಿಡಿ, ೧೯೪೯ರಲ್ಲಿ ’ನಾವು ಭಾರತದಲ್ಲಿ ನೈಜ ಜಾತ್ಯತೀತ ಪ್ರಜಾಪ್ರಭುತ್ವದ ಅಡಿಗಲ್ಲು ಹಾಕುತ್ತಿದ್ದೇವೆ ಎಂದು ಸರ್ದಾರ್ ಪಟೇಲ್ ಹೇಳಿದ್ದರು.’ ದೇಶವನ್ನು ಧರ್ಮದ ನೆಲೆಯಲ್ಲಿ ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿರುಮಾತುಗಳ ವಿನಿಮಯದ ಮೂಲಕ ವಿವಿಧ ಪಕ್ಷಗಳ ನಾಯಕರು ಮಸೂದೆಯ ಪರ ಅಥವಾ ವಿರುದ್ಧವಾದ ತಮ್ಮ ನಿಲುವುಗಳನ್ನು  ಪ್ರಕಟಿಸಿದರು.

ಜನತಾದಳ (ಸಂಯುಕ್ತ) ಲೋಕಸಭೆಯಂತೆಯೇ ರಾಜ್ಯಸಭೆಯಲ್ಲೂ ತನ್ನ ಬೆಂಬಲ ಮುಂದುವರೆಸಿದರೆ, ಸರ್ಕಾರದ ಶಾಸನಕ್ಕೆ  ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜು ಜನತಾದಳ (ಬಿಜೆಡಿ)ಯ ಗಮನಾರ್ಹ ಬೆಂಬಲ ಲಭಿಸಿತು.

ಲೋಕಸಭೆಯಲ್ಲೂ ಮಸೂದೆ ಮಂಡನೆಯಾದಾಗ ವಿರೋಧ ಪಕ್ಷಗಳಿಂದ ಇದೇ ಮಾದರಿಯ ವಿರೋಧ ವ್ಯಕ್ತವಾಗಿತ್ತು. ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಸದನದಲ್ಲಿ ಹರಿದು ಹಾಕಿದ್ದರು. ಆದರೆ, ಮಸೂದೆಯನ್ನು ಮತಕ್ಕೆ ಹಾಕಿದಾಗ ಸರ್ಕಾರಕ್ಕೆ ಕೆಳಮನೆಯಲ್ಲಿ ಪ್ರಚಂಡ ಬಹುಮತ ಲಭಿಸಿತ್ತು.

No comments:

Advertisement