Thursday, January 23, 2020

ಸಿಎಎ, ಎನ್‌ಪಿಆರ್: ಸುಪ್ರೀಂಕೋರ್ಟ್ ತಡೆಯಾಜ್ಞೆ ಇಲ್ಲ

ಸಿಎಎ, ಎನ್ಪಿಆರ್: ಸುಪ್ರೀಂಕೋರ್ಟ್ ತಡೆಯಾಜ್ಞೆ ಇಲ್ಲ
ಪ್ರಕರಣಗಳು ಪಂಚ ಸದಸ್ಯ ಪೀಠಕ್ಕೆ, ಕೇಂದ್ರಕ್ಕೆ ಉತ್ತರಿಸಲು ವಾರ ಗಡುವು, ಹೈಕೋರ್ಟ್ಗಳಿಗೆ ನಿರ್ಬಂಧ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ  ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿರುದ್ಧ ಸಲ್ಲಿಸಲಾದ ಸುಮಾರು ೧೪೪ ಅರ್ಜಿಗಳ ವಿಚಾರಣೆಯನ್ನು  2020 ಜನವರಿ 22ರ ಬುಧವಾರ ಆರಂಭಿಸಿದ ಸುಪ್ರೀಂಕೋರ್ಟ್ ಸಿಎಎ ಮತ್ತು ಎನ್ಪಿಆರ್ಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ವಾರಗಳ ಗಡುವು ನೀಡಿತು. ಅಲ್ಲದೆ ಪ್ರಕರಣಗಳ ವಿಚಾರಣೆಯನ್ನು ಪಂಚ ಸದಸ್ಯ ಪೀಠವು ನಡೆಸಲಿದೆ ಎಂದು ಪ್ರಕಟಿಸಿತು.

ಸುಪ್ರೀಂಕೋರ್ಟ್ ಪ್ರಕರಣಗಳನ್ನು ಇತ್ಯರ್ಥ ಪಡಿಸುವವರೆಗೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗಳನ್ನು ನಡೆಸದಂತೆ ಎಲ್ಲ ಹೈಕೋರ್ಟ್ಗಳಿಗೆ ನಿರ್ಬಂಧವನ್ನೂ ಸುಪ್ರೀಂಕೋರ್ಟ್ ವಿಧಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ, ನ್ಯಾಯಮೂರ್ತಿಗಳಾದ ಎಸ್. ಅಬ್ದಲ್ ನಜೀರ್ ಮತ್ತು ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ೧೪೪ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಆರಂಭಿಸಿ ಅರ್ಜಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವಂತೆ ನಿರ್ದೇಶಿಸಿತು. ಕೇಂದ್ರದ ಉತ್ತರವನ್ನು ಆಲಿಸದ ವಿನಃ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಥವಾ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್ಪಿಆರ್) ತಾನು ತಡೆ ನೀಡಲಾಗದು ಎಂದು ಪೀಠ ಸ್ಪಷ್ಟ ಪಡಿಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರುಸರ್ಕಾರಕ್ಕೆ ೧೪೩ ಅರ್ಜಿಗಳ ಪೈಕಿ ಸುಮಾರು ೬೦ ಅರ್ಜಿಗಳ ಪ್ರತಿಗಳನ್ನು ಮಾತ್ರ ನೀಡಲಾಗಿದೆಎಂದು ಹೇಳಿದರು. ಎಲ್ಲ ಅರ್ಜಿಗಳಿಗೆ ಉತ್ತರ ನೀಡಲು ಕಾಲಾವಕಾಶ ಬೇಕು ಎಂದು ವೇಣಗೋಪಾಲ್ ಅವರು ಮನವಿ ಮಾಡಿದರು.

ಹಲವಾರು ಅರ್ಜಿಗಳ ಸಮೂಹವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ತಡೆ ನೀಡುವಂತೆ ಮತ್ತು ರಾಷ್ಟೀಯ ಜನಸಂಖ್ಯಾ ನೋಂದಣಿಯನ್ನು ತತ್ಕಾಲಕ್ಕೆ ಮುಂದೂಡುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆಯು ಏಪ್ರಿಲ್ ತಿಂಗಳಿಗೆ ನಿಗದಿಯಾಗಿರುವುದರಿಂದ ಮಧ್ಯಂತರ ಆದೇಶದ ಮೂಲಕ ಆದನ್ನು ಮುಂದೂಡಬೇಕು ಎಂದು ಸಿಬಲ್ ಕೋರಿದರು. ಕೆಲವು ಅರ್ಜಿದಾರರನ್ನು ಪ್ರತಿನಿಧಿಸಿದ ಕಾಂಗ್ರೆಸ್ ನಾಯಕರಾದ ಅಭಿಷೇಕ್ ಮನು ಸಿಂಘ್ವಿ ಅವರುಪ್ರಕ್ರಿಯೆಗೆ ೭೦ ವರ್ಷ ಕಾಯಲಾಗಿದೆ, ಇನ್ನೆರಡು ತಿಂಗಳ ಕಾಲ ಕಾಯಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸಿದರು.

ಆದರೆ ಅದನ್ನು ವಿರೋಧಿಸಿದ ವೇಣುಗೋಪಾಲ್ ಅವರು ಕೇಂದ್ರವನ್ನು ಆಲಿಸದೆ ಮಧ್ಯಂತರ ಆದೇಶ ನೀಡಬಾರದು ಎಂದು ಹೇಳಿದರು. ಕಾಯ್ದೆಯ ಅನುಷ್ಠಾನವನ್ನು ಮುಂದೂಡುವಂತೆ ಕೋರುವುದು ಅದಕ್ಕೆ ತಡೆಯಾಜ್ಞೆ ನೀಡುವಂತೆ ಕೋರುವುದಕ್ಕೆ ಸಮ ಎಂದು ಅವರು ಹೇಳಿದರು.

ಅದನ್ನು
ಒಪ್ಪಿದ ಸಿಜೆಐ ಬೋಬ್ಡೆ ನ್ಯಾಯಾಲಯವು ಕೇಂದ್ರವನ್ನು ಆಲಿಸದೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠವು, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ತಾನು ನಿರ್ಧರಿಸುವವರೆಗೆ ಕಾಯ್ದೆಗೆ ಸಂಬಂಧಿಸಿದ ಯಾವುದೇ ಅರ್ಜಿಗಳ ವಿಚಾರಣೆ ನಡೆಸದಂತೆ ಎಲ್ಲ ಹೈಕೋರ್ಟ್ಗಳನ್ನೂ ಪೀಠ ನಿರ್ಬಂಧಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಸಮಸ್ಯೆ ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿರುವುದರಿಂದ ಎರಡು ರಾಜ್ಯಗಳ ಅರ್ಜಿಗಳನ್ನು ತಾನು ಪ್ರತ್ಯೇಕವಾಗಿ ಆಲಿಸುವುದಾಗಿಯೂ ತ್ರಿಸದಸ್ಯ ಪೀಠ ತಿಳಿಸಿತು.

ವಿಷಯವು ಪ್ರತಿಯೊಬ್ಬರ ಮನಸ್ಸಿನಲ್ಲೂ ಅತ್ಯಂತ ಪ್ರಮುಖ ವಿಷಯವಾಗಿದೆ. ನಾವು ಪಂಚ ಸದಸ್ಯ ಪೀಠವನ್ನು ರಚಿಸುತ್ತೇವೆ ಮತ್ತು ಪ್ರಕರಣವನ್ನು ಆಲಿಸಲು ಪಟ್ಟಿ ಮಾಡುತ್ತೇವೆಎಂದು ಪೀಠ ಹೇಳಿತು. 
ವಿಷಯದ ಬಗ್ಗೆ ಕೇಂದ್ರವನ್ನು ಆಲಿಸದೆ ನಾವು ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ದೃಢ ಪಡಿಸಿದ ಪೀಠ, ’ ಅರ್ಜಿದಾರರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ನಾವು ನಾಲ್ಕು ವಾರಗಳ ಬಳಿಕ ಆದೇಶ ನೀಡುತ್ತೇವೆಎಂದು ಹೇಳಿತು.  
ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಬಗ್ಗೆ ಕೇಂದ್ರವನ್ನು ಆಲಿಸದ ವಿನಃ ಯಾವುದೇ ಏಕಪಕ್ಷೀಯ ಆದೇಶವನ್ನು ತಾನು ನೀಡುವುದಿಲ್ಲ ಎಂಬುದಾಗಿ ಪೀಠ ಸ್ಪಷ್ಟವಾಗಿ ಹೇಳಿತು. 
ಅಸ್ಸಾಮಿನಲ್ಲಿ ಪೌರತ್ವಕ್ಕೆ ೧೯೭೧ರ ಮಾರ್ಚ್ ೨೪ನ್ನು ಅಂತಿಮ ದಿನ (ಕಟ್ ಆಫ್ ಡೇಟ್) ಎಂಬುದಾಗಿ ತೀರ್ಮಾನಿಸಲಾಗಿತ್ತು. ಈಗ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಅದನ್ನು ೨೦೧೪ ಡಿಸೆಂಬರ್ ೩೧ರವರೆಗೆ ವಿಸ್ತರಿಸಲಾಗಿದೆ ಎಂದು ಪೀಠ ಹೇಳಿತು.

ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ವಿಧಿ ವಿಧಾನಗಳನ್ನು ಕೊಠಡಿಯೊಳಗಿನ ಚರ್ಚೆಯಲ್ಲಿ ನಾವು ನಿರ್ಧರಿಸುತ್ತೇವೆ ಮತ್ತು ನಾಲ್ಕು ವಾರಗಳ ಬಳಿಕ ಪ್ರತಿದಿನದ ವಿಚಾರಣೆಯನ್ನು ನಿಗದಿ ಪಡಿಸಬಹುದು ಎಂದೂ ಪೀಠ ತಿಳಿಸಿತು.
ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ೨೦೧೪ರ ಡಿಸೆಂಬರ್ ೩೧ಕ್ಕೆ ಮುನ್ನ ಬಂದಿರುವ ಹಿಂದು, ಸಿಖ್, ಬೌದ್ಧ, ಕ್ರೈಸ್ಥ, ಜೈನ ಮತ್ತು ಪಾರ್ಸಿ ಸಮುದಾಯಗಳ ವಲಸೆಗಾರರಿಗೆ ಭಾರತದ ಪೌರತ್ವ ನೀಡಲು ಉದ್ದೇಶಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ, ೨೦೧೯ಕ್ಕೆ ಡಿಸೆಂಬರ್ ೧೨ರಂದು ಸಹಿ ಹಾಕಿದ್ದು, ಅಂದಿನಿಂದ ಮಸೂದೆಯು ಕಾನೂನು ಆಗಿ ಜಾರಿಯಾಗಿದೆ.

ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿಗಳನ್ನು ಸಲ್ಲಿಸಿರುವವರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್), ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆರ್ಜೆಡಿ ನಾಯಕ ಮನೋಜ್ ಝಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರ ಮತ್ತು ಎಐಎಂಐಎಂ ನಾಯಕ ಅಸಾದುದೀನ್ ಓವೈಸಿ ಸೇರಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅಕ್ರಮ ವಲಸೆಗಾರರ ಒಂದು ವರ್ಗಕ್ಕೆ ಧಾರ್ಮಿಕ ಆಧಾರದಲ್ಲಿ ಪ್ರತ್ಯೇಕಿಸಿ ಪೌರತ್ವ ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ತನ್ನ ಅರ್ಜಿಯಲ್ಲಿ ಹೇಳಿದೆ.

ಸರ್ಕಾರವು ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲಭೂತ ರಚನೆಗೆ ವಿರುದ್ಧವಾಗಿದೆ ಮತ್ತು ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಮಾತ್ರ ಕಾಯ್ದೆಯ ಸವಲತ್ತುಗಳನ್ನು ವಿಸ್ತರಿಸುವ ಮೂಲಕ ಮುಸ್ಲಿಮರ ವಿರುದ್ಧ ತಾರತಮ್ಯ ಎಸಗಿದೆ ಎಂದು ಅರ್ಜಿ ಆಪಾದಿಸಿದೆ.

ಜೈರಾಮ್ ರಮೇಶ್ ಅವರು ಸಲ್ಲಿಸಿರುವ ಅರ್ಜಿಯು ಕಾಯ್ದೆಯು ಸಂವಿಧಾನದಲ್ಲಿ ತಿಳಿಸಲಾಗಿರುವ ಮೂಲಭೂತ ಹಕ್ಕುಗಳ ಮೇಲಿನ ಲಜ್ಜೆಗೆಟ್ಟ ದಾಳಿಯಾಗಿದೆ ಮತ್ತುಸಮಾನರನ್ನು ಅಸಮಾನರನ್ನಾಗಿಪರಿಗಣಿಸುತ್ತದೆ ಎಂದು ಹೇಳಿದೆ.

ಇತರ ಅರ್ಜಿದಾರರಲ್ಲಿ ಜಮೀಯತ್ ಉಲೇಮಾ--ಹಿಂದ್, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ ಯು), ದಿ ಪೀಸ್ ಪಾರ್ಟಿ, ಸಿಪಿಐ, ಸರ್ಕಾರೇತರ ಸಂಸ್ಥೆಗಳಾದ (ಎನ್ಜಿಒ) ರಿಹಾಯ್ ಮಂಚ್ ಮತ್ತು ಸಿಟಿಜನ್ಸ್ ಅಗೆಯಿನ್ಸ್ಟ್ ಹೇಟ್ (ದ್ವೇಷ ವಿರೋಧಿ ನಾಗರಿಕರು), ವಕೀಲ ಎಂಎಲ್ ಶರ್ಮ ಮತ್ತು ಕಾನೂನು ವಿದ್ಯಾರ್ಥಿಗಳು ಸೇರಿದ್ದಾರೆ.

ಅರ್ಜಿಗಳ ಪೈಕಿ ಬಹುತೇಕ ಅರ್ಜಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿವೆ. ಕೆಲವು ಅರ್ಜಿಗಳು ಕಾಯ್ದೆಯು ಸಂವಿಧಾನಬದ್ಧ ಎಂಬುದಾಗಿ ಘೋಷಿಸುವಂತೆ ಕೋರಿವೆ.

ಅರ್ಜಿಗಳು ಮೊತ್ತ ಮೊದಲಿಗೆ ೨೦೧೯ರ ಡಿಸೆಂಬರ್ ೧೮ರಂದು ಸುಪ್ರೀಂಕೋರ್ಟ್ ಪೀಠದ ಮುಂದೆ ಬಂದಿದ್ದವು. ಆಗ ಪೀಠವು ಕೇಂದ್ರ ಸರ್ಕಾರ ಮತ್ತು ವೇಣುಗೋಪಾಲ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ವೇಳಗೆ ಅಂದಾಜು ೬೦ರಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದದವು.
ಕೇಂದ್ರವು ಬಳಿಕ ಸಿಎಎಗೆ ಸಂಬಂಧಿಸಿದಂತೆ ಹೈಕೋರ್ಟ್ಗಳಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

No comments:

Advertisement