Thursday, January 23, 2020

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಇಂಟರ್‌ಪೋಲ್ ನೋಟಿಸ್ ಜಾರಿ

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಇಂಟರ್ಪೋಲ್ ನೋಟಿಸ್ ಜಾರಿ
ನವದೆಹಲಿ: ಅತ್ಯಾಚಾರ ಆರೋಪಗಳು ಕೇಳಿಬಂದ ಬಳಿಕ ಪರಾರಿಯಾಗಿ ತಲೆತಪ್ಪಿಸಿಕೊಂಡಿರುವ ವಿವಾದಾತ್ಮಕ ಆಧ್ಯಾತ್ಮಿಕ ಗುರು ನಿತ್ಯಾನಂದ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸುದಿ ಮೂಲಗಳು 2020 ಜನವರಿ 22ರ ಬುಧವಾರ ತಿಳಿಸಿದವು.
ಗುಜರಾತ್ ಪೊಲೀಸರ ಕೋರಿಕೆ ಮೇರೆಗೆ ನೀಲ ಅಂಚಿನ (ಬ್ಲೂ ಕಾರ್ನರ್) ನೋಟಿಸ್ಜಾರಿಗೊಳಿಸಲಾಗಿದೆ.

ವಿದೇಶಕ್ಕೆ ಪರಾರಿಯಾಗಿರುವ ನಿತ್ಯಾನಂದನ ಬಂಧನಕ್ಕಾಗಿ ಇನ್ನು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ತಾವು ಕೋರುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ.

ರೆಡ್ ಕಾರ್ನರ್ ನೋಟಿಸಿನಂತೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದಾಗ ವಿದೇಶಗಳಲ್ಲಿನ ಪೊಲೀಸರು ಅಪರಾಧಿಯನ್ನು ಬಂದಿಸಬೇಕಾಗಿಲ್ಲ. ಇಂಟರ್ ಪೋಲ್ ವರ್ಗೀಕರಣದ ಪ್ರಕಾರ ವ್ಯಕ್ತಿಯ ಗುರುತು, ಸ್ಥಳ ಅಥವಾ ಅಪರಾಧಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಸಂಸ್ಥೆಯು ರೀತಿ ಸಂಗ್ರಹಿಸಿದ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ.

ಇಂಟರ್ ಪೋಲ್ ವಿವಾದಾತ್ಮಕ ದೇವಮಾನವನ ವಿರುದ್ಧ ತಿಂಗಳು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆಎಂದು ಡೆಪ್ಯೂಟಿ ಸೂಪರಿಂಟೆಡೆಂಟ್ ಆಫ್ ಪೊಲೀಸ್ ಕೆ.ಟಿ.ಕಮಾರಿಯಾ ಹೇಳಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.

ನಿತ್ಯಾನಂದ ಕಳೆದ ವರ್ಷ ಭಾರತದಿಂದ ಪರಾರಿಯಾಗಿದ್ದಾನೆ. ವಿದೇಶಾಂಗ ಸಚಿವಾಲಯವು ಒಂದು ವರ್ಷ ಮುನ್ನ ಪಾಸ್ ಪೋರ್ಟ್ನ್ನು ರದ್ದು ಪಡಿಸಿದ್ದರೂ, ನಿತ್ಯಾನಂದನಿಗೆ ವಿದೇಶಕ್ಕೆ ಪರಾರಿಯಾಗಲು ಯಾವುದೇ ತೊಂದರೆ ಆಗಿರಲಿಲ್ಲ. ಆತ ನೇಪಾಳಕ್ಕೆ ಪಯಣಿಸಿ ಬಳಿಕ ಅಲ್ಲಿಂದ ಅಪ್ರಕಟಿತ ಗುರಿಯತ್ತ ಪಯಣಸಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ.

ನಿತ್ಯಾನಂದನಿಗೆ ೨೦೦೮ರಲ್ಲಿ ಪಾಸ್ ಪೋರ್ಟ್ ನೀಡಲಾಗಿತ್ತು, ೨೦೧೮ರ ಸೆಪ್ಟೆಂಬರಿನಲ್ಲಿ ಅದರ ಅವಧಿ ಮುಗಿದಿತ್ತುಆತ ಹೊಸ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಕರ್ನಾಟಕ ಪೊಲೀಸರ ಒಪ್ಪಿಗೆ ಲಭಿಸದ ಕಾರಣ ಹೊಸ ಪಾಸ್ ಪೋರ್ಟ್ ನೀಡಲು ನಿರಾಕರಿಸಲಾಗಿತ್ತು.

ವಿವಾದ ಮೊದಲಲ್ಲ: ಕರ್ನಾಟಕದಲ್ಲಿ ಅತ್ಯಾಚಾರ ಆರೋಪದ ಪ್ರಕರಣ ಬಾಕಿ ಇದ್ದಾಗಲೇ ನಿತ್ಯಾನಂದನ ವಿರುದ್ಧ ಕಳೆದ ವರ್ಷ ಮಕ್ಕಳ ಅಪಹರಣ ಮತ್ತು ಅಕ್ರಮವಾಗಿ ಬಂಧನದಲ್ಲಿ ಇರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ಪ್ರಕರಣ ದಾಖಲಾಗಿತ್ತು. ಕಳೆದ ಎರಡು ದಶಕಗಳಲ್ಲಿ ವಿಶ್ವಾದ್ಯಂತ ಆಧ್ಯಾತ್ಮಿಕ ಸಾಮ್ರಾಜ್ಯ ನಿರ್ಮಿಸಿರುವನೆಂದು ಹೇಳಲಾಗಿರುವ ನಿತ್ಯಾನಂದ ದೇಣಿಗೆ ಸಂಗ್ರಹಿಸಲು ಮಕ್ಕಳನ್ನು ಬಳಸಿಕೊಳ್ಳುತಿದ್ದ ಆಪಾದನೆ ಇದೆ.

೨೦೧೦ರಲ್ಲಿ ಕಾರುಚಾಲಕ ಸೆರೆಹಿಡಿದಿದ್ದ ಅಶ್ಲೀಲ ವಿಡಿಯೋಗಳು ಬಹಿರಂಗಗೊಂಡ ಬಳಿಕ ನಿತ್ಯಾನಂದ ಬಗ್ಗೆ ಭಾರೀ ವಿವಾದ ಉಂಟಾಗಿತ್ತು. ವಿಡಿಯೋ ಪ್ರಕರಣ ದೊಡ್ಡ ಸಂಚು ಎಂಬುದಾಗಿ ನಿತ್ಯಾನಂದ ಅನುಯಾಯಿಗಳು ಬಣ್ಣಿಸಿದ್ದರು. ವಿಡಿಯೋದಲ್ಲಿ ಇದ್ದುದು ತಾನೇ ಎಂಬುದನ್ನು ನಿತ್ಯಾನಂದ ನಿರಾಕರಿಸಿರಲಿಲ್ಲ ಎಂದು ವರದಿಗಳು ಹೇಳಿದ್ದವು.

ಮಧ್ಯೆ, ನಿತ್ಯಾನಂದ ಕೆರಿಬಿಯನ್ನಲ್ಲಿ ಅವಿತುಕೊಂಡಿರುವುದಾಗಿ ವರದಿಗಳು ತಿಳಿಸಿವೆ.
ನಿತ್ಯಾನಂದ ಭಾರತದಿಂದ ನಾಟಕೀಯವಾಗಿ ಪಲಾಯನಗೈದ ಬಳಿಕ ಈಕ್ವೆಡಾರ್ನಲ್ಲಿ ಆಶ್ರಯ ಪಡೆಯಲು ಯತ್ನಿಸಿ, ಬಳಿಕ ಕ್ಯೂಬಾ ಮತ್ತು ಮೆಕ್ಸಿಕೊಗೆ ಹತ್ತಿರವಿರುವ ಪುಟ್ಟ ಕೆರಿಬಿಯನ್ ದೇಶದ ಪಾಸ್ಪೋರ್ಟ್ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ವಿವಾದಿತ ಸ್ವಯಂಘೋಷಿತ ದೇವಮಾನವ ಕೆಲವು ತಿಂಗಳುಗಳ ಹಿಂದೆ ಕೆರಿಬಿಯನ್ ಪಾಸ್ಪೋರ್ಟ್ ಪಡೆದಿರುವುದಾಗಿ ಹೇಳಲಾಗಿದೆ. ಆದರೆ, ಅದನ್ನು ಬಳಸಿ ಎಲ್ಲಿಯೂ ಪ್ರಯಾಣ ಬೆಳೆಸಿಲ್ಲ. ನಿತ್ಯಾನಂದ ಬಳಿ ಒಂದಕ್ಕಿಂತ ಹೆಚ್ಚು ರಾಷ್ಟ್ರಗಳ ಪಾಸ್ಪೋರ್ಟ್ ಇದೆಯೇ ಎಂಬುದನ್ನು ಪತ್ತೆ ಮಾಡಲು ಈವರೆಗೂ ಸಾಧ್ಯವಾಗಿಲ್ಲ.

"ಬಿಲೀಜ್ನಲ್ಲಿ ನಿತ್ಯಾನಂದ ಅಡಗಿಕೊಂಡಿದ್ದಾನೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಏಕೆಂದರೆ ಆತ ಹೊಸ ಪಾಸ್ಪೋರ್ಟ್ ಬಳಸಿಕೊಂಡು ಎಲ್ಲಿಯೂ ಪ್ರಯಾಣಿಸಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಆತ ತಾನು ಇರುವ ಜಾಗದಲ್ಲಿಯೇ ಅಡಗಿಕೊಂಡಿರುವ ಸಾಧ್ಯತೆ ಇದೆ. ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್  ಜಾರಿಯಾಗಿದ್ದು, ಜಗತ್ತಿನಾದ್ಯಂತ ಆತನ ಚಲನವಲನ ಗಮನಿಸಲಾಗುತ್ತದೆ," ಎಂದು ಮೂಲಗಳು ಹೇಳಿವೆ. ಸಿಬಿಐ ಮೂಲಗಳು ಸಹ ಇದನ್ನು ಸ್ಪಷ್ಟಪಡಿಸಿದವು.

ಈಕ್ವೆಡಾರ್ ಕರಾವಳಿಯಲ್ಲಿ ಜಗತ್ತಿನ ಮೊದಲ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಮತ್ತು ಹಿಂದೂ ರಾಷ್ಟ್ರಕ್ಕೆ ಕೈಲಾಸ’   ಎಂದು ಹೆಸರಿಡುವುದಾಗಿ ನಿತ್ಯಾನಂದ ನೀಡಿದ್ದ ಹೇಳಿಕೆ ಎರಡು ತಿಂಗಳ ಹಿಂದೆ ಪ್ರಕಟವಾಗಿತ್ತು.
ಈಕ್ವೆಡಾರ್ನಲ್ಲಿ ದ್ವೀಪವೊಂದನ್ನು ಖರೀದಿಸಿರುವುದಾಗಿ ನಿತ್ಯಾನಂದ ಹೇಳಿಕೆ ನೀಡಿದ್ದ. ಆದರೆ, ನಿತ್ಯಾನಂದನ ಹೇಳಿಕೆಯನ್ನು ಅಲ್ಲಗೆಳೆದ ಈಕ್ವೆಡಾರ್ ಸರ್ಕಾರ, ದೇಶದಲ್ಲಿ ನೆಲೆಯೂರಲು ಆತ ಕೇಳಿದ್ದ ಅನುಮತಿಯನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ನೆರೆಯ ಹೈಟಿ ದೇಶಕ್ಕೆ ನಿತ್ಯಾನಂದ ಪಲಾಯನಗೈದಿರಬಹುದು ಎಂದು  ಈಕ್ವೆಡಾರ ಸರ್ಕಾರ ಅನುಮಾನವನ್ನು ವ್ಯಕ್ತಪಡಿಸಿತ್ತು. ಇತ್ತೀಚಿನ ಎಲ್ಲ ಬೆಳವಣಿಗೆಗಳ ಕುರಿತು ಸ್ವಯಂಘೋಷಿತ ದೇವಮಾನವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಹೇಳಿವೆ.

No comments:

Advertisement