ಗ್ರಾಹಕರ ಸುಖ-ದುಃಖ

My Blog List

Thursday, March 12, 2020

ಈ ದೈತ್ಯ ಗ್ರಹದಲ್ಲಿ ಸುರಿಯತ್ತದೆಯಂತೆ ಕಬ್ಬಿಣದ ಮಳೆ...!

ಭೂಮಿಯಾಚೆ ೬೪೦ ಬೆಳಕಿನ ವರ್ಷ ದೂರದಲ್ಲಿ ಪತ್ತೆ
ಈ ದೈತ್ಯ ಗ್ರಹದಲ್ಲಿ ಸುರಿಯತ್ತದೆಯಂತೆ ಕಬ್ಬಿಣದ ಮಳೆ...!
ಲಂಡನ್: ಖಗೋಳಶಾಸ್ತ್ರಜ್ಞರು ’ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಅತಿ ಬಿಸಿಯಾದ (ಅಲ್ಟ್ರಾ-ಹಾಟ್) ದೈತ್ಯ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಗ್ರಹದಲ್ಲಿ ಕಬ್ಬಿಣದ ಮಳೆ ಸುರಿಯುತ್ತದೆ ಎಂದು ಅವರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಗ್ರಹದ ಪತ್ತೆಯು ಸೌರವ್ಯೂಹದ ಹೊರಗಿನ ಅತ್ಯಂತ ವಿಪರೀತ ಗ್ರಹಗಳ ಹವಾಮಾನವನ್ನು ಅಧ್ಯಯನ ಮಾಡುವ ಉತ್ತಮ ಮಾರ್ಗಗಳನ್ನು ತೋರಿಸಿಕೊಡಬಹುದು ಎಂದು ಖಗೋಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳನ್ನೂ ಒಳಗೊಂಡಿರುವ ಸಂಶೋಧಕರ ಪ್ರಕಾರ, ಪತ್ತೆ ಹಚ್ಚಲಾಗಿರುವ ಈ ದೈತ್ಯ ಸೌರಾತೀತ ಗ್ರಹ (ಎಕ್ಸೋಪ್ಲಾನೆಟ್) ’ಡಬ್ಲ್ಯುಎಎಸ್‌ಪಿ -೭೬ ಬಿ ಭೂಮಿಯಿಂದ ೬೪೦ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ. (ಅಂದರೆ ಅಲ್ಲಿಂದ ಬೆಳಕು ಭೂಮಿಗೆ ತಲುಪಲು ಬೇಕಾಗುವ ವೇಗದಷ್ಟು ದೂರ) ಮತ್ತು ಈ ಗ್ರಹದಲ್ಲಿ ಹಗಲಿನ ವೇಳೆಯಲ್ಲಿ ತಾಪಮಾನವು ೨೪೦೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿದೆ. ಈ ತಾಪಮಾನದಲ್ಲಿ ಲೋಹಗಳು ಕೂಡಾ ಆವಿಯಾಗಬಲ್ಲವು.

ಗ್ರಹದ ಮೇಲ್ಮೈಯಲ್ಲಿ ಬೀಸುವ ಬಲವಾದ ಗಾಳಿಯು ಕಬ್ಬಿಣದ ಆವಿಯನ್ನು ತಂಪಾದ ರಾತ್ರಿ ಇರುವ ಗ್ರಹದ ಭಾಗದ ಕಡೆಗೆ ಕೊಂಡೊಯ್ಯುತ್ತದೆ, ಅಲ್ಲಿ ಅದು ಕಬ್ಬಿಣದ ಹನಿಗಳಾಗಿ ಘನೀಕರಣಗೊಳ್ಳಬಹುದು ಖಗೋಳತಜ್ಞರು ’ನೇಚರ್ ಜರ್ನಲ್ನಲ್ಲಿ 2020 ಮಾರ್ಚ್ 13ರ ಗುರುವಾರ ಪ್ರಕಟಗೊಂಡಿರುವ ಲೇಖನದಲ್ಲಿ ತಿಳಿಸಿದ್ದಾರೆ.

ಪ್ರಬಲಗಾಳಿಯ ಕಾರಣ ’ಈ ಗ್ರಹದಲ್ಲಿ ಸಂಜೆ ಮಳೆಯಾಗುತ್ತದೆ ಎಂದು ಹೇಳಬಹುದು" ಎಂದು ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಧ್ಯಯನದ ಸಹ-ಲೇಖಕ ಡೇವಿಡ್ ಎಹ್ರೆನ್‌ರಿಚ್ ಹೇಳಿದ್ದಾರೆ.

ಈ ಗ್ರಹವು ತನ್ನ ’ಸೂರ್ಯ ಅಥವಾ ಮೂಲ ನಕ್ಷತ್ರಕ್ಕೆ ಸುತ್ತುಹಾಕಲು ತನ್ನ ಅಕ್ಷಾಂಶದಲ್ಲಿ ಚಲಿಸಲು ಸುದೀರ್ಘ ಸಮಯವನ್ನು ತೆಗೆದುಕೊಳ್ಳುವುದರಿಂದ ಹಗಲಿನ ಭಾಗವು ಯಾವಾಗಲೂ ಅದರ ’ಸೂರ್ಯ  ಕಡೆಗೆ ಮುಖ ಮಾಡಿರುತ್ತದೆ. ಪರಿಣಾಮವಾಗಿ ಅದರ ವಿರುದ್ಧ ಭಾಗವು ಯಾವಾಗಲೂ ಕತ್ತಲೆಯಲ್ಲೇ ಇರುತ್ತದೆ. ಹೀಗಾಗಿ ಇಲ್ಲಿ ’ಆವಿಯಾದ ಕಬ್ಬಿಣ ತಂಪಾದ ಕತ್ತಲ ಭಾಗದಲ್ಲಿ ಮಳೆಯಾಗಿ ಸುರಿಯುವುದು ಅತ್ಯಂತ ಸಂಭವನೀಯ ವಿದ್ಯಮಾನ ಎಂದು ಸಂಶೋಧಕರು ವಿವರಿಸಿದ್ದಾರೆ.

ಸೂರ್‍ಯನಿಂದ ಭೂಮಿ ಪಡೆಯುವ ವಿಕಿರಣಕ್ಕೆ ಹೋಲಿಸಿದರೆ, ಹಗಲಿನ ವೇಳೆಯಲ್ಲಿ ಈ ಗ್ರಹವು ಅದರ ಮೂಲ ನಕ್ಷತ್ರದಿಂದ ಸಾವಿರಾರು ಪಟ್ಟು ಹೆಚ್ಚು ವಿಕಿರಣವನ್ನು ಪಡೆಯುತ್ತದೆ. ಗ್ರಹವು ತನ್ನ ಮೂಲ ನಕ್ಷತ್ರಕ್ಕೆ ತುಂಬಾ ಹತ್ತಿರದಲಿದ್ದು, ಅದಕ್ಕೆ ಸುತ್ತು ಹಾಕುವ ಒಂದು ಪರಿಭ್ರಮಣವನ್ನು ಪೂರ್ಣಗೊಳಿಸಲು ಕೇವಲ ೪೩ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಅಧ್ಯಯನದಲ್ಲಿ ತಿಳಿಸಿದ್ದಾರೆ.

ಗ್ರಹದ ಹಗಲಿನ ಭಾಗವು ತುಂಬಾ ಬಿಸಿಯಾಗಿರುವುದರಿಂದ ಅಣುಗಳು ಪರಮಾಣುಗಳಾಗಿ ಬೇರ್ಪಡುತ್ತವೆ ಮತ್ತು ಕಬ್ಬಿಣದಂತಹ ಲೋಹಗಳು  ಬಿಸಿಯ ಪರಿಸರದಲ್ಲಿ ಆವಿಯಾಗುತ್ತವೆ. ಹಗಲು ಮತ್ತು ರಾತ್ರಿ ಬದಿಗಳ ನಡುವಿನ ಈ ವಿಪರೀತ ತಾಪಮಾನ ವ್ಯತ್ಯಾಸವು ತೀವ್ರವಾದ ಗಾಳಿಯಿಂದಾಗಿ ಕಬ್ಬಿಣದ ಆವಿ ’ಅತಿ ಬಿಸಿಯ (ಅಲ್ಟ್ರಾ-ಹಾಟ್) ಹಗಲಿನಿಂದ ತಂಪಾದ ರಾತ್ರಿ ಬದಿಗೆ ತಳ್ಳಲ್ಪಡುತ್ತದೆ, ಅಲ್ಲಿ ತಾಪಮಾನವು ಸುಮಾರು ೧೫೦೦ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಈ ತಂಪಿನಲ್ಲಿ ಅದು ಘನೀಭವಿಸಿ ಕೆಳಕ್ಕೆ ಬೀಳುವುದು ಸಹಜವಾಗಿರುತ್ತದೆ ಎಂದು ಅಧ್ಯಯನವು ತಿಳಿಸಿದೆ.

ವಿಜ್ಞಾನಿಗಳು ಹೇಳುವ ಪ್ರಕಾರ, ಗ್ರಹವು ವಿಭಿನ್ನ ಹಗಲು-ರಾತ್ರಿ ರಸಾಯನಶಾಸ್ತ್ರವನ್ನು ಹೊಂದಿದೆ. ಗ್ರಹದ ಹಗಲಿನ ಸಮಯ ಮತ್ತು ರಾತ್ರಿಯ ಸಮಯದ ನಡುವಿನ ವಿಭಾಗದಲ್ಲಿ ಕಬ್ಬಿಣದ ಆವಿಯ ಕುರುಹುಗಳನ್ನು ಪತ್ತೆ ಹಚ್ಚಿದರೂ, ಎಕ್ಸೋಪ್ಲಾನೆಟ್‌ನ ಕತ್ತಲಿನ ಭಾಗದ ಅಂಶಗಳ ಯಾವುದೇ ಕುರುಹುಗಳನ್ನು ಸಂಶೋಧಕರು ಕಾಣಲಿಲ್ಲ ಎಂದು ಅಧ್ಯಯನವು ತಿಳಿಸಿದೆ.

‘ಬೆಳಗಿನ ಟರ್ಮಿನೇಟರ್‌ಗೆ ಹತ್ತಿರವಿರುವ ಈ ಗ್ರಹದ ರಾತ್ರಿಯ ಭಾಗದಿಂದ ಯಾವುದೇ ಸಂಕೇತಗಳು (ಸಿಗ್ನಲ್) ಲಭಿಸಿಲ್ಲ. ಇದು ಪರಮಾಣು ಕಬ್ಬಿಣವು ಅಲ್ಲಿನ ನಕ್ಷತ್ರದ ಬೆಳಕನ್ನು ಅನ್ನು ಹೀರಿಕೊಳ್ಳುವುದಿಲ್ಲ ಎಂಬುದನ್ನು ತೋರಿಸುತ್ತದೆ. ಅಂದರೆ ರಾತ್ರಿಯ ಭಾಗದ ಕಡೆಯ ಪಯಣದಲ್ಲಿ ಕಬಿಣವೂ ಘನೀಕರಿಸಿರಲೇಬೇಕು ಎಂದು ಖಗೋಳತಜ್ಞರು ವಿಶ್ಲೇಷಿಸಿದ್ದಾರೆ.

ಅತಿ ಬಿಸಿಯ (ಅಲ್ಟ್ರಾ-ಹಾಟ್) ದೈತ್ಯ ಗ್ರಹದಲ್ಲಿ ಮೊದಲ ಬಾರಿಗೆ ರಾಸಾಯನಿಕ ವ್ಯತ್ಯಾಸಗಳು ಪತ್ತೆಯಾಗಿವೆ. ಆದಾಗ್ಯೂ, ಆಶ್ಚರ್ಯಕರವಾಗಿ ನಮಗೆ ಈ ಕಬ್ಬಿಣದ ಆವಿ ಮುಂಜಾನೆ ಕಾಣಿಸಿಲ್ಲ. ಈ ವಿದ್ಯಮಾನಕ್ಕೆ ಸಾಧ್ಯವಿರುವ ಏಕೈಕ ವಿವರಣೆಯೆಂದರೆ, ಈ ಎಕ್ಸೋಪ್ಲಾನೆಟ್‌ನ ಕತ್ತಲಿನ ಭಾಗದಲ್ಲಿ ವಿಪರೀತ ಪರಿಸ್ಥಿತಿಗಳೊಂದಿಗೆ ಕಬ್ಬಿಣದ ಮಳೆ ಸುರಿಯುತ್ತದೆ ಎಂದು ಎಹ್ರೆನ್‌ರಿಚ್ ಹೇಳಿದರು.

ಚಿಲಿಯ ಅಟಕಾಮಾ ಮರುಭೂಮಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್‌ಒ) ಹೈ ರೆಸಲ್ಯೂಷನ್ ಸ್ಪೆಕ್ಟ್ರೋಗ್ರಾಫ್, ಇಎಸ್ಪ್ರೆಸ್ಸೊ ಬಳಸಿ ಖಗೋಳಶಾಸ್ತ್ರಜ್ಞರು ಈ ರೀತಿಯ ಮೊದಲ ಆವಿಷ್ಕಾರವನ್ನು ಮಾಡಿದ್ದಾರೆ.

‘ಗ್ರಹದ ಹಗಲಿನ ವಾತಾವರಣದಲ್ಲಿ ಕಬ್ಬಿಣದ ಆವಿ ಹೇರಳವಾಗಿದೆ ಎಂದು ಪರಿಶೀಲನೆಗಳು ತೋರಿಸುತ್ತವೆ" ಎಂದು ಸ್ಪೇನಿನ ಖಗೋಳವಿಜ್ಞಾನ ಕೇಂದ್ರದ ಅಧ್ಯಯನದ ಸಹ ಲೇಖಕ ಮಾರಿಯಾ ರೋಸಾ ಜಪಾಟೆರೊ ಒಸೊರಿಯೊ ಹೇಳಿದರು.

‘ಗ್ರಹದ ತಿರುಗುವಿಕೆ ಮತ್ತು ವಾತಾವರಣದ ಗಾಳಿಯಿಂದಾಗಿ ವಾತಾವರಣಕ್ಕೆ ಆವಿಯ ರೂಪದಲ್ಲಿ ಸೇರುವ ಈ ಕಬ್ಬಿಣದ ಒಂದು ಭಾಗ ಅತ್ಯಂತ ಹೆಚ್ಚು ತಂಪಾದ ಪರಿಸರವನ್ನು ಸೇರಿದಾಗ ಘನೀಕರಿಸುತ್ತದೆ ಮತ್ತು ಮಳೆಯಾಗಿ ಸುರಿಯುತ್ತದೆ ಎಂದು ಒಸೊರಿಯೊ ವಿವರಿಸಿದರು.

ಬಾಹ್ಯಾಕಾಶದಲ್ಲಿನ ಸೂರ್‍ಯನಂತಹ ನಕ್ಷತ್ರಗಳ ಸುತ್ತ ಸುತ್ತುವ ಭೂಮಿ ಮಾದರಿ ಸೌರಾತೀತ ಶಿಲಾಮಯ ಗ್ರಹಗಳ ಅಧ್ಯಯನಕ್ಕಾಗಿ ಮೂಲತಃ  ಎಚೆಲ್ ಸ್ಪೆಕ್ಟ್ರೋಗ್ರಾಫ್‌ನ್ನು ವಿನ್ಯಾಸಗೊಳಿಸಲಾಗಿದೆ.

No comments:

Advertisement