Sunday, May 17, 2020

ವಿಶೇಷ ಕೊಡುಗೆ 5 ನೇ ಕಂತು: ಕೈಗಾರಿಕಾ ಕಾನೂನು ಸರಳೀಕರಣ

ವಿಶೇಷ ಕೊಡುಗೆ 5 ನೇ ಕಂತು: ಕೈಗಾರಿಕಾ ಕಾನೂನು ಸರಳೀಕರಣ,  ಆನ್ ಲೈನ್ ಶಿಕ್ಷಣಕ್ಕೆ ವಿಶೇಷ ಚಾನೆಲ್, ಎಂನರೇಗಾ ಯೋಜನೆಗೆ ಹೆಚ್ಚಿನ ಅನುದಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ೨೦ ಲಕ್ಷ ಕೋಟಿ  ರೂಪಾಯಿ ಮತ್ತದ ವಿಶೇಷ ಕೊಡುಗೆಯ ಕೊನೆಯ ಮತ್ತು ಐದನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮೇ 17 ಭಾನುವಾರ ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸಲು ಭೂಮಿ, ಕಾರ್ಮಿಕರು, ಹಣಕಾಸು ಲಭ್ಯತೆ ಮತ್ತು ಕಾನೂನುಗಳಲ್ಲಿ ಅಗತ್ಯ ಪರಿವರ್ತನೆ ತರಲಾಗುವುದು. ಇವೆಲ್ಲವೂ ಕೊಡುಗೆಯಲ್ಲಿ ಸೇರಿವೆಎಂದು ನಿರ್ಮಲಾ ಹೇಳಿದರು.

ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ), ನಫೇಡ್ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿವೆ ಎಂದು  ಸಚಿವರು ಶ್ಲಾಘಿಸಿದರು.

ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿ ಅನುದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು, ವ್ಯವಹಾರ ನಿರ್ವಹಿಸುವುದನ್ನು ಸುಲಭಗೊಳಿಸಲು ನೆರವು ಸೇರಿದಂತೆ ಹಲವು ವಿಚಾರಗಳನ್ನು ನಿರ್ಮಲಾ ಉಲ್ಲೇಖಿಸಿದರು.

ಉದ್ಯೋಗ ಖಾತ್ರಿ ಯೋಜನೆ
ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ ಅಂದಾಜಿನಲ್ಲಿ ಒದಗಿಸಿದ್ದ  ೬೧ ಸಾವಿರ ಕೋಟಿ  ರೂಪಾಯಿ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ೪೦ ಸಾವಿರ ಕೋಟಿ  ರೂಪಾಯಿ ಅನುದಾನ ಒದಗಿಸಲಾಗುವುದು. ಇದರಿಂದ ೩೦೦ ಕೋಟಿ ಹೆಚ್ಚುವರಿ ಮಾನವ ದಿನಗಳು ಸೃಷ್ಟಿಯಾಗಲಿವೆ. ನಗರಗಳಿಂದ ಹಳ್ಳಿಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗಗಳ ಆಸ್ಪತ್ರೆ
ಆರೋಗ್ಯ ಕ್ಷೇತ್ರದ ಮೇಲೆ ಮಾಡುತ್ತಿದ್ದ ಸರ್ಕಾರಿ ವೆಚ್ಚವನ್ನು ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ತಳಮಟ್ಟದಲ್ಲಿ (ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳು) ಆಸ್ಪತ್ರೆ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ವಿಶೇಷ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ವಲಯಗಳಲ್ಲಿಯೂ (ಬ್ಲಾಕ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.

ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನ
ದೀಕ್ಷಾಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡುವ ವಿಚಾರವನ್ನು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಶೀಘ್ರದಲ್ಲಿಯೇ ಬಹು ಆಯಾಮದ ಡಿಜಿಟಲ್ ಮತ್ತು ಆನ್ಲೈನ್ ಶಿಕ್ಷಣ ವ್ಯವಸ್ಥೆಯನ್ನುಪ್ರಧಾನ ಮಂತ್ರಿ ವಿದ್ಯಾಯೋಜನೆಯ ಹೆಸರಿನಲ್ಲಿ ಆರಂಭಿಸಲಾಗುವುದು. ೧ರಿಂದ ೧೨ನೇ ತರಗತಿಯವರೆಗೆ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸಲಾಗುವುದು ಎಂದು ಹೇಳಿದರು. ರೇಡಿಯೊ, ಕಮ್ಯುನಿಟಿ ರೇಡಿಯೊ, ಪೋಡ್ಕಾಸ್ಟ್ ಆರಂಭಿಸಲು ಯೋಜಿಸಲಾಗಿದೆ. ಅಂಧರು ಮತ್ತು ಶ್ರವಣ ದೋಷವುಳ್ಳವರ ನೆರವಿಗಾಗಿ ವಿಶೇಷ ಕಾರ್ಯಕ್ರಮಗಳನ್ನು  ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೇ ೩೦ರ ನಂತರ ದೇಶದ ಪ್ರಮುಖ ೧೦೦ ವಿಶ್ವವಿದ್ಯಾಲಯಗಳು ಆನ್ ಲೈನ್ ಕೋರ್ಸುಗಳನ್ನು  ಆರಂಭಿಸಲಿವೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ನೀಡಲುಮನೋದರ್ಪಣ್ಕಾರ್ಯಕ್ರಮ ಆರಂಭಿಸಲಾಗುವುದು ಎಂದು ನಿರ್ಮಲಾ ನುಡಿದರು.

ಸಾಲ ವಸೂಲಿ, ದಿವಾಳಿ ಪ್ರಕ್ರಿಯೆ
ಕೊರೋನಾದಿಂದಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಪ್ರಕರಣಗಳನ್ನು ಸಾಲ ವಸೂಲಾತಿ ಮತ್ತು ದಿವಾಳಿ ಘೋಷಣೆ ಪ್ರಕ್ರಿಯೆಯಿಂದ ಹೊರಗಿಡಲಾಗುವುದು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದೇ ಹೊಸ ವಿಚಾರಣೆ ಆರಂಭಿಸುವುದಿಲ್ಲ ಎಂದು ಸಚಿವೆ ಪ್ರಕಟಿಸಿದರು. ಹಿಂದೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಂಗಳ ಅವಧಿಗೆ ಹೊಸ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಹೇಳಿತ್ತು.

ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿ ಕೊಡಲಾಗುವುದು. ಅತಿ ಮುಖ್ಯ ಮತ್ತು ಸೂಕ್ಷ್ಮ ಕ್ಷೇತ್ರಗಳಲ್ಲಿ ಹಿಂದಿನಂತೆಯೇ ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅಂಥ ಕ್ಷೇತ್ರಗಳನ್ನು ಶೀಘ್ರ ಘೋಷಿಸಲಾಗುವುದು. ಅತಿಮುಖ್ಯ ಕ್ಷೇತ್ರಗಳಲ್ಲಿ ಒಂದು ಸರ್ಕಾರಿ ಸಂಸ್ಥೆ ಇರುತ್ತದೆ. ಉಳಿದಂತೆ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅವಕಾಶ ಇರುತ್ತದೆ ಎಂದು ಸಚಿವರು ನುಡಿದರು.

ರಾಜ್ಯಗಳು ಸಾಲ ಪಡೆಯುವ ನಿರ್ಬಂಧದಲ್ಲಿ ವಿನಾಯ್ತಿ
 ಜಿಎಸ್ಡಿಪಿ (ರಾಜ್ಯಗಳ ಆರ್ಥಿಕ ವೃದ್ಧಿ ದರ) ಮೊತ್ತದ ಶೇ ೫ರಷ್ಟು ಪ್ರಮಾಣದ ಸಾಲ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಂದರೆ ರಾಜ್ಯಗಳು  .೨೮ ಲಕ್ಷ ಕೋಟಿ  ರೂಪಾಯಿಗಳಷ್ಟು ಹಣವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲು ಅವಕಾಶ ನೀಡಿದಂತೆ ಆಗಿದೆ. ಹಿಂದೆ ರಾಜ್ಯಗಳ ಜಿಡಿಪಿಯ ಶೇ ೩ರಷ್ಟು ಮೊತ್ತವನ್ನು ಮಾತ್ರ ಸಾಲ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ರಾಜ್ಯಗಳು ಮೊತ್ತದಲ್ಲಿ ಈವರೆಗೆ ಕೇವಲ ಶೇ ೧೪ರಷ್ಟು ಪ್ರಮಾಣದ ಸಾಲ ಮಾತ್ರ ಪಡೆದುಕೊಂಡಿವೆ. ಶೇ ೮೬ರಷ್ಟು ಅನುಮೋದಿತ ಮೊತ್ತ ಹಾಗೆಯೇ ಉಳಿದಿದೆ ಎಂದು ವಿತ್ತ ಸಚಿವರು ಹೇಳಿದರು.

ಕೇಂದ್ರದಂತೆ ರಾಜ್ಯಗಳಿಗೂ ಸಂಪನ್ಮೂಲ ಸಂಗ್ರಹದಲ್ಲಿ ಸಮಸ್ಯೆಯಾಗಿದೆ. ವಿವಿಧ ರಾಜ್ಯಗಳಿಗೆ ತೆರಿಗೆ ಪಾಲು  ೪೬,೦೩೮ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.  ೧೨ ಸಾವಿರ ಕೋಟಿ ರೂಪಾಯಿಯನ್ನು ಸಮಯಕ್ಕೆ ಸರಿಯಾಗಿ ನೀಡಲಾಗಿದೆ. ವೈದ್ಯಕೀಯ ಸಚಿವಾಲಯವು ಹೆಚ್ಚುವರಿಯಾಗಿ? ೧೪ ಸಾವಿರ ಕೋಟಿ  ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯಗಳಿಗೆ ಹಣಕಾಸು ಪಡೆದುಕೊಳ್ಳಲು ವಿಧಿಸಲಾಗಿದ್ದ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೇ ೬೦ಕ್ಕೆ ಹೆಚ್ಚಿಸಿದೆ. ತ್ರೈಮಾಸಿಕವೊಂದರಲ್ಲಿ ರಾಜ್ಯವೊಂದು ಓವರ್ ಡ್ರಾಫ್  ವಿದ್ಯಮಾನದ ಮಾದರಿಯಲ್ಲಿ ಪರಿಸ್ಥಿತಿ ನಿರ್ವಹಿಸಲು ಇದ್ದ ಅವಕಾಶವನ್ನೂ ವಿಸ್ತರಿಸಲಾಗಿದೆ ಎಂದು ನಿರ್ಮಲಾ ವಿವರಿಸಿದರು.

No comments:

Advertisement